Thursday, 13 December 2018

ಕೇರಿಗೆ ಬಂದಳು ಮರಿಯಮ್ಮ

  
"ಮಗನೇ ಎಲ್ಲಿರುವೆ? ಎಲ್ಲವೂ ಕ್ಷೇಮ ತಾನೆ?"
ಹದಿನೈದು ದಿನಗಳ ಹಿಂದೆ ಮನೆಯಿಂದ ಹೊರಗೇ ಹೋಗಿದ್ದ ಮಗ ಇಂದು ಅಪ್ಪಾ ಹೇಗಿದ್ದೀರಿ?’ ಎಂದು ವಿಚಾರಿಸಿ ಫೋನ್ ಮಾಡಿದ್ದ.
ಮನೆಯ ಹಿರಿಯ ಮಗ, ಮನೆ ಬಿಟ್ಟು ಹೋದಾಗಿನಿಂದ, ಮನೆಯಲ್ಲಿದ್ದ ವಯಸ್ಸಾದ ತಂದೆ, ತಾಯಿ ಏನು ಮಾಡಬೇಕು?’ ಎಂಬುದು ತೋಚದೆ ಕಂಗಾಲಾಗಿ ಕುಳಿತಿದ್ದರು.
ಇನ್ನೊಬ್ಬ ಕಿರಿಯ ಮಗ ಆರೋಗ್ಯಪ್ಪನಿಗೂ ಆತಂಕ ಕಾಡತೊಡಗಿತ್ತು. ಎರಡು ತಿಂಗಳ ಹಿಂದೆ, ಕೇರಿಯ ಹತ್ತಿರ ಬಂದಿದ್ದ ಮಾತೆ ಮರಿಯಳ ಸ್ವರೂಪ ಕೇರಿಯೊಳಗೆ ಬಾರದೇ ಇದ್ದಾಗ, ಅದು ಕೇರಿಗೆ ಬರಲೇಬೇಕುಎಂದು ಪಟ್ಟು ಹಿಡಿದ ಕೇರಿಯ ಯುವಕರ ಮುಂದಾಳತ್ವವನ್ನು ಇವನೇ ವಹಿಸಿದ್ದ.
ಈಗ, ಊರಲ್ಲಿ ಅವರ ಕುರಿತಂತೆ ಮನೆಗೊಬ್ಬರಂತೆ ಒಂದೊಂದು ಮಾತನಾಡುತ್ತಿದ್ದುದು, ಅವರ ಕುಟುಂಬಕ್ಕೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಮೊನ್ನೆ ಫಾದರ್ ಫಾತಿರಾಜ್ ಮತ್ತು ಅವರ ತಂಗಿ, ತಂಗಿಯ ಗಂಡ ಮನೆಗೆ ಬಂದು ಹೋದಾಗಿನಿಂದ ಇವರ ಕೈಕಾಲು ಆಡುವುದೇ ನಿಂತು ಹೋಗಿತ್ತು.
***
ಫಾದರ್ ಫಾತಿರಾಜ್ ಧುಮಗುಡುತ್ತಾ ಮನೆಯ ಹತ್ತಿರ ಬಂದಿದ್ದರು. ಅವರ ಹಿಂದೆಯೇ ತಂಗಿ ಅಂತಮ್ಮ ಮತ್ತು ಅವಳ ಗಂಡ ಸೆಲ್ವರಾಜ್, ಸಿಟ್ಟಿನ ಭರದಲ್ಲಿ ಆಡಬಾರದ್ದನ್ನೆಲ್ಲಾ ಆಡಿದ್ದರು.
ಊರವರಿಗೆ ಬುದ್ಧಿಮಾತು ಹೇಳಬೇಕಾಗಿದ್ದ ಫಾದರ್ ಫಾತಿರಾಜ್ ಸಂಯಮ ಕಳೆದುಕೊಂಡು, ತಂಗಿ ಗಂಡ ಸೆಲ್ವರಾಜ್‌ನ ಕೈಯಲ್ಲಿದ್ದ ಕೋವಿಯನ್ನು ಹಿಡಿದು, ಅರುಳಪ್ಪನ ಎದೆಗೆ ಚುಚ್ಚಿ ಹಿಡಿದಾಗಲಂತೂ, ಜೀವ ಬಾಯಿಗೆ ಬಂದಂಗಾಗಿತ್ತು.
ಮನೆಯಲ್ಲಿದ್ದ ಎಲ್ಲರೂ ಭಯದಿಂದ ತತ್ತರಿಸಿಹೋಗಿದ್ದರು. ಅರುಳಪ್ಪನ ಹೆಂಡತಿ ಸುಶೀಲವ್ವ ಫಾದರ್ ಫಾತಿರಾಜ್‌ರ ಕಾಲಿಗೆ ಬಿದ್ದು ನಮಗೇಕೆ ಈ ಶಿಕ್ಷೆ ಕೊಡ್ತೀರಿ ಸ್ವಾಮಿ? ನಮ್ಮ ಹಿರೀ ಮಗ ತಪ್ಪ ಮಾಡಿದ್ದರೆ, ಅವನ್ನ ಹಿಡಿದು ಶಿಕ್ಷಿಸಿಎಂದು ಗೋಳಾಡುತ್ತಿದ್ದಳು.
ಎರಡನೇ ಮಗ ಏನು ಮಾಡಬೇಕೆಂಬುದು ತೋರದೇ ಗರಬಡಿದವನಂತೆ ನಿಂತಿದ್ದ. ಕಾವಬೇಕಾದವರೆ, ತಂದೆಯ ಎದೆಗೆ ಕೋವಿ ಹಿಡಿದು ನಿಂತಿದ್ದನ್ನು ಕಂಡು, ಅವನ ಝಂಗಾಬಲವೇ ಉಡುಗಿಹೋಗಿತ್ತು.
"ನಿಮ್ಮನ್ನೆಲ್ಲಾ ಸುಟ್ಟ ಬಿಡ್ತೀನಿ. ನಮ್ಮನ್ನ ಏನ್ ಅಂತ ತಿಳಿದೀರಿ? ಊರಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ ನಿಮಗ?"
"ಅಣ್ಣಾ, ಇವರು ತೆಪ್ಪಗಿದ್ದು, ಮಗನಿಗೆ ಸರಿಯಾಗಿ ಬುದ್ಧಿ ಹೇಳಿದ್ದರೆ, ಮಗನೇಕೆ ನಮ್ಮ ಹೊಟ್ಟೆ ಉರಿಸೋ ಕೆಲಸ ಮಾಡ್ಲಿಕ್ಕೆ ಮುಂದಾಗ್ತಿದ್ದ?’ ಎನ್ನುತ್ತಾ ಅಣ್ಣ ಫಾದರ್ ಫಾತಿರಾಜ್‌ರ ಸಿಟ್ಟಿನ ಕಿಚ್ಚಿಗೆ ತಂಗಿ ಮತ್ತು ತಂಗಿ ಗಂಡ ಮತ್ತಷ್ಟು ತುಪ್ಪ ಸುರುವತೊಡಗಿದ್ದರು.
"ಫಾದರ್, ನಾವು ಸುಮ್ಮನಿದ್ದಷ್ಟು ಇವರು ಚಿಗುರತೊಡಗಿದ್ದಾರೆ. ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು."
"ಕಳೆದ ಸೆಪ್ಟಂಬರ್ ತಿಂಗಳಲ್ಲೇ, ಇವರಿಗೆ ಊರವರು ಸರಿಯಾಗಿ ಬುದ್ಧಿ ಕಲಿಸಬೇಕಿತ್ತು. ನೀವೆಲ್ಲಾ ಸೇರಿ ಪಂಚಾಯತಿ ಮಾಡಿದಿರಿ. ಈಗ ನೋಡಿ, ಇವರು ಈಗ ನಮ್ಮ ಮನೆ ಅಂಗಳಕ್ಕೆ ನುಗ್ಗುತ್ತಿದ್ದಾರೆ."
***
ಕಳೆದ ಸೆಪ್ಟೆಂಬರ್ ಎಂಟರಂದು, ಆರೋಗ್ಯ ಮಾತೆ ಮರಿಯಳ ಜನನೋತ್ಸವದ ಹಬ್ಬದ ಕೊನೆಯ ದಿನದಂದು, ಊರ ಮಧ್ಯದಲ್ಲಿನ ಮಾತೆ ಮರಿಯಳ ದೇವಾಲಯದಿಂದ ಹೊರಟ ಮಾತೆ ಮರಿಯಳ ಪಲ್ಲಕ್ಕಿ ಮೆರವಣಿಗೆ ಎಂದಿನಂತೆ ಕೇರಿಯ ಬಾಗಿಲಿಗೆ ಬಂದು, ಒಳಗೆ ಹಜ್ಜೆ ಇಡದೇ ಹಿಂದಿರುಗಲು ಮುಖ ತಿರುಗಿಸುತ್ತಿದ್ದಾಗ, ಕೇರಿಯ ಕೆಲವು ಹುಡುಗರು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇಲ್ಲಿತಂಕ ಬರುವ ಮಾತೆಮರಿಯಳ ಅಲಂಕೃತ ಉತ್ಸವದ ಸ್ವರೂಪ ಹೊತ್ತ ಪಲ್ಲಕ್ಕಿ, ಇನ್ನು ಮುಂದೆ, ನಮ್ಮ ಕೇರಿಯ ಎಲ್ಲಾ ಬೀದಿಯಲ್ಲಿ ಸಾಗಬೇಕುಎಂದು ಪಟ್ಟು ಹಿಡಿದಾಗ ಸ್ವಲ್ಪ ಗಲಿಬಿಲಿಯ ವಾತಾವರಣ ಉಂಟಾಗಿತ್ತು.
ಆಗ, ಊರ ಅಂಚಿನಲ್ಲಿ ಕೇರಿಯ ಹತ್ತಿರದಲ್ಲಿದ್ದ ಕಾನ್ವೆಂಟಿನ- ಕನ್ಯಾಸ್ತ್ರೀ ಮಠದ ಹಿರಿಯ ಸದಸ್ಯೆ, ಮಾರ್ಗರೇಟ್ ಅಮ್ಮನವರು ಧಾವಿಸಿ ಹೊರಗೆ ಬಂದವರೇ, "ಸ್ವಾಮಿ, ಮಾತೆ ಮರಿಯಮ್ಮ ಎಲ್ಲರಿಗೂ ಆಶ್ರಯದಾತೆ. ಅವಳ ಉತ್ಸವದ ಪಲ್ಲಕ್ಕಿ, ನಮ್ಮ ಮಠದ ಹತ್ತಿರದ ಈ ಕೇರಿಯ ಮನೆಗಳ ಮುಂದೆಯೂ ನಡೆದು ಸಾಗಲಿ" ಎಂದಾಗ, ಸ್ಥಳೀಯ ಚರ್ಚಿನ ವಿಚಾರಣಾ ಗುರು ಫಾದರ್ ಬಾಲರಾಜ್ ಸುಮ್ಮನೆ ತಲೆ ಅಲ್ಲಾಡಿ?????, ಪರಿಸ್ಥಿತಿ ತಿಳಿಯಾಗಿತ್ತು.
ಮೆರವಣಿಗೆಯ ಬಂದೋಬಸ್ತಿಗೆ ಅಂತ ಪಟ್ಟಣದಿಂದ ನಾಲ್ಕಾರು ಜನ ಪೋಲಿಸರೂ ಊರಿಗೆ ಬಂದಿದ್ದರು. ಅವರ ಮುಂದೆ, ಊರ ರಂಪಾಟ ಏಕೆ?’ ಎಂದುಕೊಂಡ ಫಾದರ್ ಬಾಲರಾಜ್, ಸುಮ್ಮನೆ ಸಿಸ್ಟರ್ ಮಾರ್ಗರೇಟ್ ಅವರು ಹೇಳಿದಂತೆ ಕೇಳಬೇಕಾಯಿತು.
***
ಹಬ್ಬ ಕಳೆದು ಆರು ದಿನಗಳು ಮುಗಿದು, ಭಾನುವಾರ ಬರುತ್ತಿದ್ದಂತೆಯೇ, ಊರ ಹಿರಿಯ ಸದಸ್ಯರು, ಕಿರೀಟಪ್ಪನ ನೇತೃತ್ವದಲ್ಲಿ ಫಾದರ್ ಬಾಲರಾಜ್ ಅವರನ್ನು ಕಂಡು, ‘ಹಿಂದಿನಿಂದ ನಡೆದು ಬಂದ ಪದ್ಧತಿ. ಮಾತೆ ಮರಿಯಳ ಸ್ವರೂಪ ನಮಗೆ ತಿಳಿದಾಗಿನಿಂದ ಕೇರಿಯ ಓಣಿಯೊಳಗೆ ಸಾಗಿದ್ದೇ ಇಲ್ಲ. ಊರಿಗೆ ಏನು ಎಡವಟ್ಟು ಕಾದಿದೆಯೋ ಏನೋ?’ ಎಂದು ಆತಂಕ ವ್ಕಕ್ತಪಡಿಸಿದ್ದರು
ಮೂವತ್ತು ವರ್ಷಗಳ ಹಿಂದೆ ಹೀಗೆಯೇ ಒಂದು ಸಾರಿ, ಊರ ಅಂಚಿಗಿನ ಕಾನ್ವೆಂಟ್ ಕಟ್ಟಡದ ಗಡಿ ದಾಟಿ ಕೇರಿಯೊಳಗಡೆ ಮಾತೆ ಮರಿಯಳ ಸ್ವರೂಪದ ಪಲ್ಲಕ್ಕಿ ಮೆರವಣಿಗೆ ಸಾಗಿಬಂದ ಮರುದಿನವೇ, ಕೇರಿಯಲ್ಲಿದ್ದ ಬಾಲಕರಿಬ್ಬರು ಹೊಳೆಯ ನೀರಿಗೆ ಬಿದ್ದು ಸತ್ತಿದ್ದರು.
ಇದು ಮಾತೆ ಮರಿಯಳ ಸಿಟ್ಟಿನ ಪ್ರತಾಪ ಎಂದು ಊರ ಜನ ಆಡಿಕೊಂಡಿದ್ದರೆ, ಆ ಇಬ್ಬರು ಮಕ್ಕಳ ಸಾವು ಕೇರಿಯಲ್ಲಿ ಒಂದು ಬಗೆಯ ವಿಷಣ್ಣಮಯ ವಾತಾವರಣವನ್ನು ನಿರ್ಮಿಸಿತ್ತು.
ನಾವು ಮೊದಲೇ, ಬೇಡ... ಕೇರಿಯೊಳಗಡೆ ಮಾತೆ ಮರಿಯಳ ಸ್ವರೂಪದ ಪಲ್ಲಕ್ಕಿಯ ಮೆರವಣಿಗೆ ಬೇಡವೇ ಬೇಡ ಎಂದು ಹೇಳಿದರೂ, ಯಾರೂ ಕೇಳಲಿಲ್ಲ. ಕೇರಿಯ ಹರೆಯದ ಹುಡುಗರ ಪುಂಡಾಟಿಕೆಗೆ ಹೆದರಿ ಪಲ್ಲಕ್ಕಿಯನ್ನು ಸಾಗಿಸಿದ್ದರ ಪರಿಣಾಮವನ್ನು ಒಂದೆರಡು ಕುಟುಂಬಗಳು ಹೀಗೆ ಅನುಭವಿಸಬೇಕಾಯಿತುಎಂಬ ಮಾತುಗಳು ಆಗ ಕೇಳಿ ಬಂದಿದ್ದವು.                                                                                                                      
***
ಅರುಳಪ್ಪ ಸುಶೀಲವ್ವ ದಂಪತಿಗಳು ತಮ್ಮವರೊಂದಿಗೆ ಊರ ಹೊರಗಿನ ಕೇರಿಯಲ್ಲಿ ವಾಸವಾಗಿದ್ದರು. ಊರವರ ಹೊಲಗದ್ದೆಗಳಲ್ಲಿ ಕೂಲಿನಾಲಿ ಕೆಲಸ ಮಾಡಿ ಜೀವನದ ಬಂಡಿಯನ್ನು ನಡೆಸಿಕೊಂಡು ಸಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯವ ಮಿಖೇಲಪ್ಪ ಮತ್ತು ಕಿರಿಯವ ಆರೋಗ್ಯಪ್ಪ. ಮೂವತ್ತು ವರ್ಷಗಳ ಹಿಂದೆ ಕೇರಿ ಮತ್ತು ಊರ ನಡುವಿನ ದಿನ್ನೆಯ ಮೇಲೆಯೇ ಅಮ್ನೋರ ಕಾನ್ವೆಂಟ್ ಬಂದಿತ್ತು. ಒಂದು ಪುಟಾಣಿ ಶಾಲೆಯೂ ಆರಂಭವಾಗಿ ಕೇರಿಯ ಹುಡುಗರು ನಾಲ್ಕಕ್ಷರ ಕಲಿಯುವಂತಾಗಿತ್ತು.
ಹಿರಿಯವ ಮಗ ಮಿಖೇಲಪ್ಪ ಓದಿನಲ್ಲಿ ಜಾಣ. ಕೇರಿಯಲ್ಲಿನ ಪ್ರಾಥಮಿಕ ಶಾಲೆಯ ಓದು ಮುಗಿದ ನಂತರ ಊರಲ್ಲಿ ಸಂತ ಜೋಸೆಫರ್ ಗುಡಿಯ ಪಕ್ಕದಲ್ಲಿ ಆರಂಭವಾದ ಹೈಸ್ಕೂಲ್ ಕಟ್ಟೆ ಏರಿದ್ದ. ಅವನೇ ಹೈಸ್ಕೂಲ್ ಕಟ್ಟೆ ಹತ್ತಿದ ಕೇರಿಯ ಮೊಟ್ಟಮೊದಲ ಹುಡುಗನಾಗಿದ್ದ. ಆಗಲೂ, ಊರವರು ಅವನು ಚರ್ಚು ನಡೆಸುತ್ತಿರುವ ಶಾಲೆಗೆ ದಾಖಲಾಗಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ವಿಚಾರಣಾ ಗುರು ತೋಮಾಸಪ್ಪ ಅವರು, ‘ಯೇಸು ಸ್ವಾಮಿ ಮಕ್ಕಳನ್ನು ನನ್ನ ಬಳಿ ಬಿಡಿ ಎಂದಿದ್ದಾರಲ್ಲ? ಜೊತೆಗೆ, ನಾ ಕಂಡಂತೆ ಈ ಹುಡುಗ ಓದಿನಲ್ಲಿ ಜಾಣ, ಈತ ನಮ್ಮ ಶಾಲೆಗೆ, ಈ ಊರಿಗೆ ಹೆಸರು ತಂದಾನುಎಂದು ಸಮಾಧಾನ ಮಾಡಿ ಊರವರ ಆಕ್ಷೇಪಗಳನ್ನು ದೂರ ತಳ್ಳಿದ್ದರು.
***
ಗುರು ತೋಮಾಸಪ್ಪ ಅವರ ಆಶಯದಂತೆಯೇ, ಮಿಖೇಲಪ್ಪ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು, ತಾಲ್ಲೂಕಿಗೆ ಪ್ರಥಮ ಸ್ಥಾನಗಳಿಸಿ ಊರಿಗೆ ಹೆಮ್ಮೆ ತಂದಿದ್ದ. ಮುಂದೆ ಕಾಲೇಜಿಗೆ ಸೇರಲು ಪಟ್ಟಣಕ್ಕೆ ಹೋಗಿದ್ದ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶಪಡೆದು, ಅಲ್ಲೂ ತನ್ನ ಓದಿನಿಂದ ಒಳ್ಳೆಯ ವಿದ್ಯಾರ್ಥಿ ಎಂಬ ಹೆಸರು ಮಾಡಿದ್ದ. ಕವನ, ಪ್ರಬಂಧ ಬರಹಗಳಲ್ಲೂ ಆಸ್ಥೆ ತಾಳಿದ್ದ ಆತ, ಒಂದು ಬಾರಿ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ, ಅವನ ಊರಿನವಳೇ ಆದ ಫಿಲೋಮಿನಾಳ ಪರಿಚಯವಾಗಿತ್ತು. ಇವನು ಪದವಿ ಅಂತಿಮ ವರ್ಷದಲ್ಲಿದ್ದರೆ, ಅವಳು ಪಟ್ಟಣದ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಮೊದಲಿನ ತರಗತಿಯಲ್ಲಿ ಓದುತ್ತಿದ್ದಳು.
ಊರಲ್ಲಿನ ಚರ್ಚ ಮುಂದಿನ ಬಯಲಿನ ಓಣಿಯಲ್ಲಿ ವಾಸವಾಗಿದ್ದ ಸೆಲ್ವರಾಜ್ ಮತ್ತು ಅಂತಪ್ಪ ದಂಪತಿಗಳ ಮುದ್ದಿನ ಮಗಳಾಗಿದ್ದ ಫಿಲೋಮಿನಾ ಮೂರು ವರ್ಷಗಳಿಂದ ಕಾಲೇಜಿನ ಹಾಸ್ಟೇಲಿನಲ್ಲಿದ್ದುಕೊಂಡು ಓದುತ್ತಿದ್ದಳು. ರಜೆಯಲ್ಲಿ ಊರಿಗೆ ಹೋಗುತ್ತಿದ್ದರೂ, ತನ್ನ ಮನೆಯಲ್ಲಿಯೇ ಏನಾದರೂ ಓದುಬರಹಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದಳು. ಊರಲ್ಲಿನ ಆಗುಹೋಗುಗಳ ಬಗೆಗೆ ಅವಳಿಗೆ ಅಷ್ಟಾಗಿ ತಿಳುವಳಿಕೆಯೂ ಇರಲಿಲ್ಲ. ಕಾಲೇಜಿನಲ್ಲಿ ಅದಾರೋ ಉಪನ್ಯಾಸಕರು ಹೇಳಿದರೆಂದು ಕಾರ್ಲಮಾರ್ಕ್ಸ, ಗಾಂಧೀಜಿ, ಅಂಬೇಡಕರ್, ಲೋಹಿಯಾ ಮೊದಲಾದವರ ಬರಹಗಳಿಗೆ ತೆರೆದುಕೊಂಡ ಆಕೆ ಜೀವನದ ಬಗ್ಗೆ ತನ್ನದೇ ಆದ ನಿಲುವುಗಳನ್ನು ರೂಪಿಸಿಕೊಳ್ಳತೊಡಗಿದ್ದಳು.
ಜಾಣ ಮಿಖೇಲಪ್ಪ ಸಂಪೂರ್ಣವಾಗಿ ಓದಿನಲ್ಲಿ ತೊಡಗಿಸಿಕೊಂಡು, ಪದವಿ ಮುಗಿದ ಮೇಲೆ ವಿಶ್ವವಿದ್ಯಾಲಯ ಸೇರಿದ್ದ. ಅಲ್ಲೂ ಉತ್ತಮ ಗಳಿಸಿ ಸ್ನಾತಕ ಪದವಿ ಪೂರೈಸಿ ಮನೆಗೆ ಹಿಂದಿರುಗಿದ್ದ ಸಂದರ್ಭದಲ್ಲಿ, ಮಾತೆ ಮರಿಯಳ ಕೇರಿಯ ಪ್ರವೇಶ ಪ್ರಸಂಗ ನಡೆದಿತ್ತು. ಅಣ್ಣನ ಪ್ರಭಾವಳಿಯಲ್ಲಿ ಸಿಲುಕಿದ್ದ ತಮ್ಮ ಆರೋಗ್ಯಪ್ಪ, ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದ ಆರೋಗ್ಯಪ್ಪ, ಅಲ್ಲಿ ಎಸ್‌ಎಫ್‌ಐ ಸಂಘಟನೆ ಸೇರಿದ್ದ. ಪಟ್ಟಭದ್ರ ಹಿತಾಸಕ್ತಿಯ ನಡವಳಿಕೆಯನ್ನು ಪ್ರಶ್ನಿಸುವುದನ್ನು ಬೆಳೆಸಿಕೊಂಡಿದ್ದ. ಕೇರಿಗೆ ಮಾತೆಮರಿಯಳು ಬರಬೇಕೆಂದು ಪಟ್ಟು ಹಿಡಿದ ಕೇರಿಯ ಹುಡುಗರ ಮುಂದಾಳತ್ವವನ್ನು ಈತನೇ ವಹಿಸಿದ್ದ.
***
ಸಮಾನ ಚಿಂತನೆಯ ಮನಸ್ಸುಗಳನ್ನು ಹೊಂದಿದ್ದ ಮಿಖೇಲಪ್ಪ ಮತ್ತು ಫಿಲೋಮಿನಾರ ನಡುವಿನ ಒಡನಾಟ ಪ್ರೀತಿಯ ಸ್ವರೂಪ ಪಡೆಯಲು ನಾಲ್ಕಾರು ವರ್ಷಗಳು ಕಳೆದವು. ಪರಸ್ಪರ ಅರ್ಥ ಮಾಡಿಕೊಂಡ ಅವರಿಗೆ, ತಾವು ಪರಸ್ಪರ ಒಪ್ಪಿಕೊಂಡರೂ ತಮ್ಮ ಕುಟುಂಬದ ಸದಸ್ಯರು ತಮ್ಮ ಮದುವೆಗೆ ಒಪ್ಪಲಿಕ್ಕಿಲ್ಲ ಎಂಬುದೂ ಗೊತ್ತಿತ್ತು. ಕೊನೆಗೆ ಮೀಸಲಾತಿಯ ಫಲವೋ, ನೆಟ್ ಪಾಸಾಗಿದ್ದ ಮಿಖೇಲಪ್ಪನ ಅದೃಷ್ಟವೋ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಹೆಚಿನ ಅಂಕ ಗಳಿಸಿದ ಅವನಿಗೆ ಉಪನ್ಯಾಸಕ ಹುದ್ದೆ ಸಿಕ್ಕಿತು. ಜೀವನಕ್ಕೊಂದು ಆರ್ಥಿಕ ಬಲ ಸಿಕ್ಕೊಡನೆಯೇ, ಮಿಖೇಲಪ್ಪ ಮತ್ತು ಫಿಲೋಮಿನಾ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಮನೆಯಲ್ಲಿ ಅದರ ಬಗ್ಗೆ ಯಾರಿಗೂ ಸುಳಿವು ನೀಡಿರಲಿಲ್ಲ.
ಮಿಖೇಲಪ್ಪ ಬಯಸಿದಂತೆಯೇ ದೂರದ ಜಿಲ್ಲಾ ಕೇಂದ್ರದ ಕಾಲೇಜೊಂದಕ್ಕೆ ಅವನನ್ನು ನಿಯೋಜನೆ ಮಾಡಲಾಗಿತ್ತು. ನೇಮಕಾತಿ ಆದೇಶ ಕೈಗೆ ಸಿಗುತ್ತಿದ್ದಂತೆಯೇ, ಚರ್ಚ್ ಮದುವೆ ಕಷ್ಟಸಾಧ್ಯ ಎಂಬುದನ್ನು ಅರಿತುಕೊಂಡಿದ್ದ ಮಿಖೇಲಪ್ಪ ಮತ್ತು ಫಿಲೋಮಿನಾ, ಮನೆಯವರ ಗಮನಕ್ಕೆ ತಾರದೇ ರಿಜಿಸ್ಟರ್ ಮದುವೆಯಾಗಿ ಮನೆ ಬಿಟ್ಟು ಹೋಗಿದ್ದರು.
***
ಮಗನೇ, ನೀನು ಹೇಗಿದ್ದಿ?’ ಕಿರಿಯ ಮಗನ ಮೋಬೈಲ್ ಫೋನ್‌ನಿಂದ ಸಂಪರ್ಕ ಸಾಧಿಸಿದ್ದ ಹಿರಿಯ ಮಗ ಮಿಖೇಲಪ್ಪನೊಂದಿಗೆ ಮಾತನಾಡುತ್ತಿದ್ದ ಅರುಳಪ್ಪನ ಕೈ ನಡುಗುತ್ತಿತ್ತು.
ಅಪ್ಪಾ, ನೀವು ಸ್ವಲ್ಪ ಹುಷಾರಾಗಿರಿ. ನಾನು ಫಿಲೋಮಿನಾ ಮದುವೆಯಾಗಿದ್ದೇವೆ’.
ಏನಪ್ಪ ಹಂಗದ್ರೆ? ಮೊನ್ನೆ ಮೊನ್ನೆಯೇ, ಮೇಗಳಕೇರಿ ಮನೆಯ ಸೆಲ್ವರಾಜ್ ಬಂದಿದ್ದ, ಅವರೊಂದಿಗೆ ಬಂದಿದ್ದ ಅವರ ಭಾವ ಮೈದ ಫಾದರ್ ಫಾತಿರಾಜ್ ಕೋವಿ ಹಿಡಿದುಕೊಂಡು ಸಾಯಿಸಿ ಬಡ್ತೀವಿ ಅಂತಿದ್ರಪ್ಪಾ.
ಅಪ್ಪಾ, ಹೆದರಬೇಡಿ. ಒಂದು ಹದಿನೈದು ದಿನ ತಾಳಿಕೊಳ್ಳಿ. ಅಷ್ಟರಲ್ಲಿ ನಾನಿರುವ ಊರಿಗೆ ನೀವು ಬಂದು ಬಿಡಿ. ಆ ಊರಿನ ಸಹವಾಸವೇ ಬೇಡ.
ಹಂಗಂದ್ರೆ ಹೆಂಗಪ್ಪ? ಹುಟ್ಟಿ ಬೆಳದ ಊರನ್ನು ಬಿಟ್ಟು ಹೆಂಗಪ್ಪ ಬರುವುದು?’
ಅಷ್ಟರಲ್ಲಿ, ಮನೆಯ ಮುಂದೆ, ಸೆಲ್ವರಾಜನೊಂದಿಗೆ ಊರಿನ ಕೆಲವು ಹಿರಿಯರು ಮನೆಯತ್ತ ಬರುತ್ತಿರುವುದು ಕಾಣಿಸಿತು. ಅದನ್ನು ಗಮನಿಸಿದ, ಕಿರಿಯ ಮಗ ಆರೋಗ್ಯಪ್ಪ, ‘ಅಪ್ಪಾ, ನಿಧಾನ.. ಸೆಲ್ವರಾಜ್ ಮತ್ತು ಊರವರು ಬರುತ್ತಿದ್ದಾರೆಎನ್ನುತ್ತಿದ್ದಂತೆಯೇ ಅರುಳಪ್ಪನ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದು ಒಡೆದುಹೋಯಿತು. ಆತ ಗರಬಡಿದವರಂತೆ ನಿಂತ.
ಕಿರಿಯ ಮಗ ಆರೋಗ್ಯಪ್ಪ ಸ್ವಲ್ಪ ಧೈರ್ಯವನ್ನು ತಂದುಕೊಂಡು ನಿಂತಿದ್ದರೆ, ಕಂಗಾಲಾದ ತಾಯಿ ಸುಶೀಲವ್ವ ಪೀಠದಲ್ಲಿರಿಸಿದ್ದ ಮಾತೆ ಮರಿಯಳ ಜಪಸರದ ಮಣಿಗಳನ್ನು ಹಿಡಿದುಕೊಂಡು ಶಿಲುಬೆ ಗುರುತು ಹಾಕಿ, ಪರಲೋಕದೇವ ಮತ್ತು ನಮೋ ಮರಿಯ ಮಂತ್ರಗಳನ್ನು ಜಪಿಸತೊಡಗಿದಳು.
- ಎಫ್.ಎಂ.ನಂದಗಾವ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...