ಕಟ್ಟದಿರಿ ಗೋದಲಿಗಳ
ಹಾಡದಿರಿ ಭಜನೆಗಳ,
ತುತ್ತೂರಿ, ವಿಜೃಂಭಣೆಗಳ,
ಬಡಗಿಯ ಬಡಕೂಸಿಗೆ
ಒಡವೆ ಕಾಸಿನ ಗೊಡವೆಯೇಕೆ?
ಊರದಿರಿ ಮಂಡಿಗಳ,
ಉರಿಸದಿರಿ ಧೂಪಗಳ,
ಆಚಾರವಿಲ್ಲದ ಭಕುತಿ
’ಹಿಡಿಕೆ’ ಇಲ್ಲದ ’ಸುತ್ತಿಗೆ’ಯಂತೆ
ನಗುತಲಿಹನು ನನ್ನಪ್ಪ ಬಡಗಿ !
ಮರಳುಗಾಡಿನ ಕ್ರಾಂತಿ ನಾನು
ಗುಡಿಕಟ್ಟಿ ಬಚ್ಚಿಡಬೇಡಿ
ಬೀದಿ ಬದಿಯ ಬಂಡಾಯ ನಾನು
ಬಂಧಿಸಬೇಡಿ ಪೀಠ, ಪೆಟ್ಟಿಗೆಯಲಿ
ದೈವೀಕರಿಸಿ ದೂರವಿರಿಸದಿರಿ !
ಹೆರೋದ, ಪಿಲಾತ
ಫರಿಸಾಯ, ಸದ್ದುಕಾಯರ
ಸದ್ದಡಗಿಸಿ ತೊಡೆತಟ್ಟಿ
ಸತ್ಯವನು ಸಾರಲೆನಗೆ
ಶಿಲುಬೆಯಲಿ ಸಾವಿನ ಪಾಠ
’ವೇಶ್ಯೆ, ಪಾಪಿ’ ಹಣೆಪಟ್ಟಿಯವರ
ರೊಟ್ಟಿಕಾಣದ ಕೇರಿ ಮಕ್ಕಳ
ಬಸವಳಿದು, ದಣಿವುಗೊಂಡವರ
ತನುವು ತಣಿಯುವತನಕ
ಕಟ್ಟದಿರಿ ಗೋದಲಿಗಳ !
¨ ಡೇವಿಡ್ ಕುಮಾರ್. ಎ
No comments:
Post a Comment