Wednesday, 12 December 2018

ಕನಕಾಂಬರದ್ದೊಂದು ಹೂವಿನೆಳೆ ಬೈರತಿ


¨ ಸಮೀಶಾ

ಬೆಂಗಳೂರಿನ ಉತ್ತರದ ಏರುಹಾದಿಯ ತಿರುವಿನಲ್ಲಿ ಪ್ರಯಾಸಪಟ್ಟು ಒಳಹೊಕ್ಕು ಬಿಡುಗಣ್ಣು ಬಿಟ್ಟಲ್ಲದೆ, ನಿಮಗೆ ಬೈರತಿ ಕಾಣದು. ಈಗಿನ ಬೃಹತ್ ಬಹುಮಹಡಿ ಕಟ್ಟಡಗಳ, ಕಾಂಕ್ರೀಟು ಕಾಡುಗಳ ಅಂತಃಕರಣ ಕೆದಕಿದರೆ ಬೈರತಿಯ ವೈವಿಧ್ಯ ಫಸಲು ಬೆರಗಾಗಿಸುತ್ತದೆ. ಬೈರತಿಯ ಉದ್ದೋ ಉದ್ದಕ್ಕೆ ಹಸಿರು ತುಂಬಿತ್ತು. ಸೊಪ್ಪು, ಸೆದೆ, ತರಕಾರಿ, ಹೂ ಗಿಡಗಳು ಕಾಲಿಗೆ ತೊಡರಿಕೊಳ್ಳುತ್ತಿದ್ದುವು. ಕಾಕಡ, ಮಲ್ಲಿಗೆ, ಕನಕಾಂಬರಗಳ ಬಣ್ಣವಿತ್ತು. ಕೋಳಿ ಕುರಿಗಳ ಸಾಕಣೆಯೂ ಇತ್ತು. ಮೂಲತಃ ಮಾಂಸಹಾರಿಗಳಾದ ಇಲ್ಲಿನ ಮಂದಿ ಕುರಿ, ಮೇಕೆ, ಹಂದಿ, ಕೋಳಿ, ಮೀನು, ಏಡಿ ಇನ್ನಿತರೆ ಪ್ರಾಣಿಪಕ್ಷಿಗಳನ್ನು ಮನದಣಿಯೆ ತಿನ್ನುತ್ತಾರೆ. ಆಗಾಗ ಮೊಲದ ಬೇಟೆಗೂ ಹೊರಡುತ್ತಾರೆ. ಮುಂಜಾವು ಇಬ್ಬನಿ ಹೊದ್ದುಕೊಂಡು ಮಲಗಿರುವ ಸಮಯದಲ್ಲಿ ಬೇಟೆಯ ಸರಂಜಾಮುಗಳನ್ನು ಹಿಡಿದುಕೊಂಡು ಮೊಲ ಹುಡುಕುತ್ತಾ ಬೆಟ್ಟಗುಡ್ಡ ಹರಿದಾಡುವುದು ಸರ್ವೇ ಸಾಮಾನ್ಯ. ಜೀವನದಲ್ಲಿ ಒಂದೂ ಮೊಲ ಹಿಡಿದು ತಿಂದಿಲ್ಲವೆಂದರೆ ಆತ ಇಲ್ಲಿಗೆ ಸೇರಿದವನೇ ಅಲ್ಲ ಎನ್ನುವ ಮಾತೊಂದಿದೆ. ಮಾಂಸದೂಟ ಮಾಡಲು ಜಮೀನು ಅಡವಿಟ್ಟು ಕಳೆದುಕೊಂಡ ಪ್ರಮೇಯಗಳು ಇಲ್ಲಿನವರು ಎಷ್ಟು ಆಹಾರ ಪ್ರಿಯರಾಗಿದ್ದರೆಂಬುದನ್ನು ತಿಳಿಸುತ್ತದೆ.

ಯಾರು ತಿಗುಳರು?

ಲೇಖಕರೂ, ಸಂಶೋಧಕರೂ ಆಗಿರುವ ಸಿ. ಮರಿಜೋಸೇಫರು ಹೇಳುವಂತೆ, " ತಿಗುಳ ಜನಾಂಗವನ್ನು ಭಾಷೆಯನ್ವಯ ವರ್ಗೀಕರಿಸಬೇಕೋ, ಜನಾಂಗದಡಿಯಲ್ಲಿ ವರ್ಗೀಕರಿಸಬೇಕೋ ಎಂಬ ಗೊಂದಲವಿದೆ ಏಕೆಂದರೆ ಕೆಲ ಸಂದರ್ಭಗಳಲ್ಲಿ ತಿಗುಳ ಎಂಬ ಪದವಾಚಿಯನ್ನು ತಮಿಳು ದೇಶಿಕ ಅಥವ ತಮಿಳು ಭಾಷಿಕ ಎಂಬರ್ಥದಲ್ಲಿಯೂ ಪ್ರಯೋಗಿಸಲಾಗಿದೆ.ಕನ್ನಡ ಮಾಧ್ವ ಬ್ರಾಹ್ಮಣರು ತಮಿಳು ಸ್ಮಾರ್ತ ಬ್ರಾಹ್ಮಣರನ್ನು ತಿಗುಳರೆಂದು ಕರೆಯುವ ವಾಡಿಕೆಯೂ ಇದೆ.ಇನ್ನು ತಿಗುಳ ಪದದ ವ್ಯುತ್ಪತ್ತಿಯನ್ನು ಹೇಗೆ ಪರಾಂಬರಿಸ ಬೇಕು ಎನ್ನುವ ಜಿಜ್ಞಾಸೆಯೂ ಇದೆ.ಕೆಲವರು ತ್ರಿಗಣ>ತಿಗಣ>ತಿಗುಳ ಎಂಬುದಾಗಿಯೂ,ಮತ್ತೆ ಕೆಲವರು ತ್ರಿಕುಲ>ತಿಗುಲ>ತಿಗುಳ ಎಂಬುದಾಗಿಯೂ ಹೇಳಿರುವರು.ಆದರೆ ಮೂರು ಗಣಗಳಿಗೆ ಅಥವ ಮೂರು ಕುಲಗಳಿಗೆ ಅರ್ಥವ್ಯಾಪ್ತಿಯನ್ನು ಒದಗಿಸಿಲ್ಲ.ಇನ್ನೊಂದು ದಿಕ್ಕಿನಲ್ಲಿ ನೋಡಿದರೆ ತೀಕುಲ (ಬೆಂಕಿಕುಲ/ವಹ್ನಿಕುಲ)ವು ಸ್ವಲ್ಪ ಮಟ್ಟಿಗೆ ಸರಿಹೊಂದುವಂತೆ ತೋರುತ್ತದೆ.ತೀಕುಲವೇ ಆಡುಮಾತಿನಲ್ಲಿ ತಿಗುಳ ಆಗಿರುವ ಸಂಭವ ಸ್ವೀಕಾರಾರ್ಹ.ಏಕೆಂದರೆ ತಿಗಳರು ತಮ್ಮನ್ನು ಅಗ್ನಿಸಂಭೂತರೆಂದು,ಅಥವ ವಹ್ನಿಯ ಕುಲದವರೆಂದೂ ಕರೆದುಕೊಳ್ಳುವುದನ್ನು ನೋಡಿದ್ದೇನೆ.

ಇದರೊಂದಿಗೆ ಇನ್ನೊಂದು ಅಭಿಪ್ರಾಯವೂ ಇದೆ.”ತಿಗಳಎಂಬ ಪದಕ್ಕೆ ಚಂದ್ರ,ಹುಣ್ಣಿಮೆ ಎಂಬ ಅರ್ಥಗಳಿರುವುದರಿಂದ,ಚಂದ್ರ ವಂಶದವರನ್ನುತಿಂಗಳರೆಂದೂ ಕರೆಯಲಾಗುತ್ತದೆ.ತಿಂಗಳರೇ ತಿಗಳರಾಗಿರುವ ಸಾಧ್ಯತೆಗಳನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ.ಜನಾಂಗೀಯ ಮೂಲದ ಬಗ್ಗೆ ತಮ್ಮನ್ನು ಬ್ರಾಹ್ಮಣರಿಗಿಂತ ಶ್ರೇಷ್ಠರೆಂದು ತೋರಿಸಿಕೊಳ್ಳುವುದಕ್ಕಾಗಿ,ತಾವು ಕ್ಷತ್ರಿಯ ಕುಲದವರು ಎಂಬುದನ್ನು ಸ್ಥಾಪಿಸುವುದಕ್ಕೆ ಒಂದಷ್ಟು ಪುರಾಣ ಕತೆಗಳು ಒಂದಷ್ಟು ಸೇರಿಕೊಂಡಿರುವುದನ್ನು ಇವರ ಇತಿಹಾಸದಲ್ಲಿ ಕಾಣಬಹುದು. ಇತ್ತೀಚೆಗೆ ತಮ್ಮನ್ನು ತಿಗಳರೆಂದು ಗುರುತಿಸಿಕೊಳ್ಳಲು ಇಚ್ಛಿಸದ ಒಂದು ಭಾಗ ತಮ್ಮನ್ನುವಹ್ನಿಕುಲ ಕ್ಷತ್ರಿಯಅಥವವನ್ನಿಕುಲ ಕ್ಷತ್ರಿಯಎಂದೂ ಕರೆದುಕೊಳ್ಳುತ್ತಾರೆ." (ಸಿ. ಮರಿಜೋಸೆಫ್, ಸಂಸ್ಮರಣೆ)
ಇದಕ್ಕೆ ಪೂರಕವಾಗಿ ಫಾ. ಚಸರಾ ಹೇಳುತ್ತಾರೆ, "ಪ್ರಸ್ತುತ, ಭಾಷಿಕವಾಗಿ ತಿಗಳರನ್ನುಕನ್ನಡದ ತಿಗಳರು” “ತೆಲುಗು ತಿಗಳರು” “ತಮಿಳು ತಿಗಳರುಎಂದು ಕರೆದು ಕೊಳ್ಳುವ ಪ್ರವೃತ್ತಿ ಬೆಳೆದಿದೆ. ಇಂತಹ ತಳಸಮುದಾಯಗಳ ಬಗ್ಗೆ ವಿಶೇಷ ಅಧ್ಯಯನ ಕೈಗೊಂಡಿದ್ದ ತರ್ಸ್ಟನ್ ಎಡ್ಗರ್ (Thurston Edgar) ಮತ್ತು . ರಂಗಾಚಾರ್ (Rangachaar) ತಮ್ಮಕ್ಯಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸದರ್ನ್ ಇಂಡಿಯಾ” ( Castes and Tribes of Southern India ) ಪುಸ್ತಕದಲ್ಲಿ ಹೇಳಿರುವ ಮಾತು ಉಲ್ಲೇಖಾರ್ಹ.

“Some of the Tiglas who have settled in Mysore have forgotten their mother tongue and speak only Canarese while others those live around Bangalore still speak Tamil”(ಫಾದರ್ ಚಸರಾ, ಸಂಸ್ಮರಣೆ)

ತಿಗುಳ ಕ್ರೈಸ್ತರ ಮೂಲ ಕಸುಬು ವ್ಯವಸಾಯ ಹಾಗೂ ತೋಟಗಾರಿಕೆ. ಇವರು ಮೂಲತಃ ಭೂಮಾಲೀಕರಾಗಿದ್ದು, ತೋಟಗಾರಿಕೆ ಮಾಡುವುದರಲ್ಲಿ ತೀರಾ ಪರಿಣಿತರಾಗಿದ್ದರಿಂದ, ಟಿಪ್ಪುವಿನ ಕಾಲದಲ್ಲಿ ಬೆಂಗಳೂರಿನ ತೋಟಗಾರಿಕೆಯ ಅಭಿವೃದ್ಧಿಗಾಗಿ ತಿರುಚಿನಾಪಳ್ಳಿ ಹಾಗೂ ಅರ್ಕಾಟ್ ಪ್ರಾಂತ್ಯಗಳಿಂದ ಇವರನ್ನು ಕರೆತರಲಾಯಿತು ಎಂಬ ಉಲ್ಲೇಖಗಳಿವೆ. ಇದಕ್ಕೆ ಉದಾಹರಣೆ ಕೊಡುವುದಾದರೆ ಇಂದಿಗೂ ಬೆಂಗಳೂರಿನ ಪ್ರಮುಖ ಆಸ್ವತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಗಾರ್ಡೆನಿಂಗ್ ಎನ್ನುವ ಅಲ್ಪಾವಧಿ ಪೂರ್ಣಾವಧಿ ಕೆಲಸಗಳಲ್ಲಿ ತಿಗುಳರೇ ಇದ್ದಾರೆ. “ಅವರಷ್ಟು ಅಚ್ಚುಕಟ್ಟಾಗಿ ತೋಟಗಾರಿಕೆ ಮಾಡುವವರನ್ನು ನಾನು ನೋಡಿಲ್ಲಎಂಬುದಾಗಿ ಲೇಖಕರಾದ ಎಲ್ಸಿ (ಎಲ್. ಸಿ. ನಾಗರಾಜ್) ಅಭಿಪ್ರಾಯಪಡುತ್ತಾರೆ.
ಮೂಲತ: ತೋಟಗಾರಿಕೆಯಲ್ಲಿ ಯಶಸ್ವಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರ ತೋಟಕ್ಕೆ ಹಂದಿಗಳ ಹಿಂಡು ನುಗ್ಗಿ ಬೆಳೆ ಹಾಳುಗೆಡವಿ ಹಿಂಸೆ ಕೊಡುತ್ತಿದ್ದವು. ಮೊದಲೇ ಬೇಟೆಯಾಡಿ ತಿನ್ನುವವರು. ಇನ್ನು ತೋಟಕ್ಕೆ ಬಂದರೆ ಬಿಟ್ಟಾರೆಯೇ? ಮೊನಚಾದ ಕತ್ತಿ ಹಿಡಿದು ನಾಲ್ಕೂ ಕಡೆಯಿಂದ ನುಗ್ಗಿ, ಪಕ್ಕೆಗೆ ತಿವಿದು ತೆಗೆದರೆಂದರೆ ತ್ರಾಣವಿದ್ದಷ್ಟೂ ಹೊತ್ತು ಓಡಿ ಕೊನೆಗೆಲ್ಲೋ ಹೂಂಕರಿಸಿ ಬೀಳುತ್ತಿತ್ತು. ಬೈರತಿಯಿಂದ ಚೂರು ಮೇಲಕ್ಕೆ ಹಾಯ್ದರೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಈಗಲೂ ಹಂದಿಗಳ ಮರಣ ಮೃದಂಗ ಕೇಳಿಸುತ್ತದೆ. ತುಂಬಾ ನೋವಿನಿಂದ ಚೀರುವ ಹೃದಯವಿದ್ರಾವಕ ದನಿ ಅದರದು. ಯಾರೋ ವಯಸ್ಸಾದ ವ್ಯಕ್ತಿಯೊಬ್ಬ ನರಳಿ ನರಳಿ ಕೂಗಿದಂತೆ ಕೇಳುತ್ತದೆ.

ಹಂದಿ ಎಂದರೆ ಈಗಿರುವ ಸೊರಗಿದ ಕಪ್ಪು ಬಣ್ಣದ್ದಲ್ಲ. ಮಿರಮಿರ ಬಂಗಾರ ಬಣ್ಣದ, ತುಪ್ಪದಂತೆ ಕೊಬ್ಬಿರುವ ತಾಜಾ ಹಂದಿ ಅದು. ನನಗೆ ನೆನಪಿರುವಂತೆ ಭಾನುವಾರ ಬೆಳಗ್ಗಿನ ಬಲಿಪೂಜೆ ಮುಗಿಸಿ ಬರುವಾಗ, ದಾರಿಯುದ್ದಕ್ಕೂ ಆಂಗಡಿ ಇರುತ್ತಿತ್ತು. ನನ್ನ ಸಂಬಂಧಿಕಳೊಬ್ಬಳಿಗೆ ಹಂದಿಯ ಹಸಿ ಬಾಡೆಂದರೆ ಪರಮ ಪ್ರೀತಿ. ಅಂಗಡಿಯೊಂದರಲ್ಲಿ ಆಕೆಯ ತಂದೆ ಹಂದಿ ಕೊಯ್ದು ಮಾರುತ್ತಿದ್ದರು. ಕೊಯ್ಯುವುದನ್ನೇ ಕಾಯುತ್ತಾ ಕುಳಿತವಳು ಹಸಿ ಹಸಿ ಬಾಡನ್ನು ಕಸಿದುಕೊಂಡು ಗಬಗಬನೆ ತಿನ್ನುವುದನ್ನು ಆಶ್ಚರ್ಯಚಕಿತನಾಗಿ ನೋಡುತ್ತಾ ಕೂರುತ್ತಿದ್ದೆ. ಅದೇನು ಅಂಥ ರಸಗವಳವೋ! ನಾನೂ ಒಮ್ಮೆ ಅವಳ ಹಾಗೆ ಮಾಡಲು ಹೋಗಿ ವಾಂತಿಯಾಗಿತ್ತಾ ಅಂತಾ!!
ಬೈರತಿಗೂ, ನನ್ನೂರು ಬೇಗೂರಿಗೂ ಬಿಟ್ಟಿರಲಾಗದ ನಂಟಿದೆ. ಉತ್ತರ ಧೃವಕ್ಕೂ ದಕ್ಷಿಣ ಧೃವಕ್ಕೂ ಅಂತರಂಗದ ಒಳನಂಟಿದೆ. ಬೈರತಿ ಎಂದೊಡನೆ ರತಿ ಮನ್ಮಥರಿದ್ದ ಊರೆಂದು ವೃಥಾ ಭಾವಿಸಬೇಕಿಲ್ಲ. ನನ್ನೂರಿನ ಜನಗಳೇ ಇಲ್ಲೂ ಕೋಲೂರಿರುವುದರಿಂದ ಅಂಥ ಸಾಧ್ಯತೆಗಳನ್ನು ಸಾರಾ ಸಗಟಾಗಿ ತಳ್ಳಿಹಾಕಿಬಿಡಬಹುದು. ಆದರೆ ಅವರು ವೀರಾವೇಷದ ಸ್ವಾಭಿಮಾನಿಗಳು. ಹೆಂಗಸರು ಗಟ್ಟಿಗಿತ್ತಿಯರು, ಹಠಮಾರಿಗಳಾದರೂ ಪ್ರೇಮಾನುರಾಗಿಗಳು. ಗಂಡನ ತಿಕ್ಕಲುತನಗಳನ್ನು ಸಹಿಸಿಕೊಳ್ಳುವವರು. ದೇವರೆಂದರೆ ನಂಬುವವರು, ಗುರುಗಳನ್ನೇ ದೇವರೆನ್ನುವವರು.
ಬೈರತಿಯ ಜನ ನನ್ನವರು ಎನ್ನುವ ಒಂದಂಶದ ಎಳೆಯೇ ಆತ್ಮೀಯತೆ ಅನುಗೊಳ್ಳಲು ನೆರವಾಗುತ್ತದೆ. ಮೊದಲೇ ಹೇಳಿದಂತೆ, ಎಕರೆಗಟ್ಟಲೆ ಭೂಮಿ ಇಟ್ಟುಕೊಂಡಿದ್ದ ನನ್ನ ಜನರು ಈಗ ರೇಟಿಗೆ ಮಾರಿಕೊಂಡಿದ್ದಾರೆ. ಅಪಾರ್ಟು ಮೆಂಟುಗಳನ್ನು ಕಟ್ಟಲು ಕೊಟ್ಟುಬಿಟ್ಟಿದ್ದಾರೆ. ಕೇಸು, ಲಾಯರು ಎಂದು ಬೆಳಿಗ್ಗೆ ಎದ್ದು ಓಡುತ್ತಾರೆ. ತಮ್ಮೂರಿನ ಸುತ್ತಾ ಲೇ ಔಟುಗಳೇಳುತ್ತಿರುವುದನ್ನು ಎಲೆ ಅಡಿಕೆ ಜಗಿಯುತ್ತಾ ಅಚ್ಚರಿಯಿಂದ ನೋಡುತ್ತಾರೆ. ತಾವು ಬೆಳೆದ ಭೂಮಿಯ ಮಣ್ಣಿನೊಳಗಿಂದ ಏಳುವ ಪಿಲ್ಲರುಗಳು ಬೃಹತ್ ಕಟ್ಟಡಗಳಾಗಿ, ಅದರ ುಂದೆ ತಮ್ಮ ಪುಟ್ಟ ಮನೆಗಳು ಇನ್ನೂ ಪುಟ್ಟದಾಗುತ್ತಿರುವುದನ್ನು ಕಂಡು ಗುಬ್ಬಿಯಂತಾಗುತ್ತಾರೆ. ಅದೇ ಅಪಾರ್ಟ್ ಮೆಂಟು ಕೊಂಡ ಸುಶಿಕ್ಷಿತೆ ಎಂದುಕೊಂಡ ಹಿಂದಿ ಹೆಣ್ಣುಮಗಳು ಘಮಘಮಿಸೊ ಸೆಂಟು ತೊಟ್ಟು ಶೇರ್ ಆಟೋ ಹತ್ತಿದರೆ, ತಮ್ಮಗಳ ಮುದುಡಿದ ಸೀರೆಯಂತೆ ಇನ್ನಷ್ಟು ಮುದುಡಿ ಕೂಡುತ್ತಾರೆ. ಅಪಾರ್ಟ್ ಮೆಂಟು ಗೇಟು ಮುಚ್ಚಿ, ಮಹಡಿಯೇರುವ ಹಿಂದಿಯವಳು ಬಾಲ್ಕನಿಗೆ ಬಂದು ಗಂಡನ ಒಗೆದಜಾಕಿನಿಕ್ಕರನ್ನು ಜಾಡಿಸಿ ಹರವಿ ಹಾಕಿ, ಊರ ಕಡೆ ಅಸಹ್ಯವಾಗಿ ನೋಡಿ ಒಳಹೋಗುತ್ತಾಳೆ. ದಪ್ಪಗಾಜಿನೊಳಗಿಂದ ಇದೆಲ್ಲವನ್ನೂ ನೋಡುವ ಊರಿನ ಅಜ್ಜ ಕಿರುನಗೆ ನಕ್ಕು, ಊರುಗೋಲಿಡಿದು ಪಾಪನಿವೇದನೆ ಮಾಡಲು ಹೋಗುತ್ತಾನೆ.

ಇದೆಲ್ಲದರ ನಡುವೆ ಬೈರತಿ ತನ್ನ ಅನನ್ಯತೆಯನ್ನು ತಕ್ಕಮಟ್ಟಿಗೆ ಉಳಿಸಿಕೊಂಡಿದೆ ಎನ್ನುವುದು ಗಮನಿಸಬೇಕಾದ ಅಂಶ.




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...