Thursday, 27 December 2018

ಮೂರ್ಛಾವಸ್ಥೆಯಲ್ಲಿ ಕಾರುಣ್ಯ


ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ.
ಇತ್ತೀಚೆಗೆ ಶಿವಮೊಗ್ಗದ ಡಾ. ಅಶೋಕ ಪೈ ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ- ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಾಡುತ್ತಲೊ ಅಲ್ಲಿ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ. ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ. ಈ ಅನುಕಂಪನ ನಿಜವು ಇಡೀ ಜೀವಸಂಕುಲವನ್ನೆ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು. ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು- ಅದು ಘಾಸಿಗೊಳಿಸುವುದು- ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ. ನಾವು ಮನುಷ್ಯರು ಗುಣವಾಗಬೇಕಾಗಿದೆ. ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ. ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.

ದೇವನೂರ ಮಹಾದೇವ/ ಎದೆಗೆ ಬಿದ್ದ ಅಕ್ಷರ / ೧೦


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...