ನಿನ್ನ ಪ್ರೀತಿಯಲ್ಲಿ
ನಾನು ಸುಟ್ಟುಕೊಂಡ ಮೇಲಷ್ಟೆ
ಪ್ರೀತಿ
ರುಜುವಾತಾಗುವುದು
ಕಳವಳಕ್ಕೆ ಕಾರಣಗಳಿಲ್ಲ
ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು
—————
ಕನಸು ಅರಳಿಸುವ ಶಕ್ತಿ
ಮಾತಿಗಿರುವ ಹಾಗೆ
ಮೌನಕ್ಕೂ ಇದೆ..
ಸುಮ್ಮನೆ ಸುಡುವ ತಾಕತ್ತು
ಮಾತಿಗಿರುವ ಹಾಗೆ ಮೌನಕ್ಕೂ ಇದೆ..
ಮಾತಿಗೆ ಮೌನವನ್ನು ತೂಕಕ್ಕೆ ಹಚ್ಚಲಾರೆ
ನೀನಲ್ಲ, ಯಾರಾದರೂ ಸರಿಯೆ
ಮಾತನ್ನು ಕಸಿಯಬಹುದು
ಮೌನವನ್ನಲ್ಲ...
----
ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ
ಉರಿವ ಹಣತೆ
ಹೇಳುವುದು ಇದನ್ನೇ
ಸುಟ್ಟುಕೊಂಡರಷ್ಟೇ ಬೆಳಕು..
——-
ಮೂರು ದಿನ
ಒಂದು ಕತ್ತಲು ಒಂದು ಬೆಳಕು
ಇನ್ನೊಂದು ?
ಸುಮ್ಮನೆ ಹುಡುಕು
ಅಲೆವ ಗಾಳಿಯಲಿ
ಎಲೆ ಬೀಳುವ ಸದ್ದು
——
ಅಕ್ಷರಕ್ಕಾಗಿ ಚಾಚುವ ಬೊಗಸೆಯೇ
ನನ್ನಲ್ಲೇನಿದೆ?
ನನ್ನೆಲ್ಲಾ ಅಕ್ಷರಗಳು
ಹುಟ್ಟುವುದೇ ನಿನ್ನೊಡಲಿನಿಂದ
ಏನೂ ಬರೆಯಲಿಲ್ಲವೆಂದು
ದೂರಬೇಡ
ಹೇಳು
ಬೇರಿಗೆ ನೀರಾಗದೆ
ಯಾವ ಮರ ಹೂ ಬಿಟ್ಟೀತು?
——-
ಸಸಿ ಕಾಯಲು
ಬೇಲಿ ಕಟ್ಟಬಹುದು
ಸಸಿ ಚಿಗುರದ ಹಾಗೆ ಕಟ್ಟಲಾಗದು
ನಿನ್ನ ಪ್ರೇಮಿಸಿದ ಮೇಲಷ್ಟೇ ಅರಿವಾಯಿತು
ಪಂಜರವೆಂಬುದು ಹಾರುವ ರೆಕ್ಕೆಗೇ
ಹೊರತು ಹಾಡುವ ಕೊರಳಿಗಲ್ಲ
————
ಬಣ್ಣದ ಚಿಟ್ಟೆ
ಕನಸಿನ ರೆಪ್ಪೆ ಪಿಳುಕಿಸುವುದು
ಹಗಲಿನಲ್ಲಲ್ಲ
———
- ಬಸೂ
No comments:
Post a Comment