Friday, 11 January 2019

ಕಣ್ಮರೆಯಾದ ಹಿರಿಯ ಚೇತನಗಳು 

ಕಳೆದ ಡಿಸೆಂಬರ್ ತಿಂಗಳಲ್ಲಿ ಕನ್ನಡ ಕಥೋಲಿಕರ ಕಣ್ಮಣಿಗಳಾಗಿದ್ದ ಡಾ. ಎಂ ಲೀಲಾವತಿ ದೇವದಾಸ್ ಮತ್ತು ಜೆ ಆರ್ ಪೆರೇರಾ ಎಂಬ ಎರಡು ಹಿರಿಯ ಚೇತನಗಳು ಕಣ್ಮರೆಯಾದರು.

ಡಾ. ಲೀಲಾವತಿ ದೇವದಾಸ್‌

ಪವಿತ್ರ ಬೈಬಲಿನಲ್ಲಿ ಬಂದುಹೋಗುವ ಮಹಿಳೆಯರ ಕುರಿತು 'ದನಿ' ಪತ್ರಿಕೆಯಲ್ಲಿ ಪ್ರತಿತಿಂಗಳೂ ಬರೆಯುತ್ತಿದ್ದ ಡಾ. ಲೀಲಾವತಿ ದೇವದಾಸ್‌ರವರು ತೀರಿಕೊಂಡಿದ್ದು ನಮ್ಮ ಪತ್ರಿಕೆಗೆ ಮಾತ್ರವಲ್ಲ ಕನ್ನಡ ಸಾಹಿತ್ಯ ಲೋಕಕ್ಕೇ ತುಂಬಲಾರದ ನಷ್ಟ. ವೈದ್ಯಕೀಯದಲ್ಲಿ ಸ್ನಾತಕೋತ್ತರ
ಪದವಿ ಪಡೆದಿದ್ದ ಇವರು ವೈದ್ಯಕೀಯ ಸಾಹಿತ್ಯದಲ್ಲೂ ಇತರ ಸೃಜನಶೀಲ ಸಾಹಿತ್ಯದಲ್ಲೂ ಪಳಗಿದ ಕೈ. ಜೊತೆಗೆ ಪವಿತ್ರ ಬೈಬಲಿನ ಸಂಯುಕ್ತ ಅನುವಾದ ಕಾರ್ಯದಲ್ಲೂ ತೊಡಿಗಿಸಿಕೊಂಡು ಕಥೋಲಿಕ ವಲಯದಲ್ಲೂ ಬಹು ಗೌರವಾನ್ವಿತ ಮಹಿಳೆಯಾಗಿದ್ದರು. ಆದರ್ಶ ಮತ್ತು ನಿಸ್ಪೃಹತೆಗಳನ್ನೇ ಮೈಗೂಡಿಸಿಕೊಂಡಿದ್ದ ಇವರು ತಾವು ಸಾಯುವವರೆಗೂ ಲವಲವಿಕೆಯಿಂದ ಮಾತಾಡುತ್ತಾ ಓಡಾಡುತ್ತಾ ಇದ್ದರು.

೧೯೩೦ ಮಾರ್ಚ್ ೩೦ ರಂದು ಬೆಂಗಳೂರಿನಲ್ಲಿ ಜನಿಸಿದ ಲೀಲಾವತಿಯವರು ತಮ್ಮ ಪ್ರಾಥಮಿಕ ಪ್ರೌಢ ಮತ್ತು ಇಂಟರ್ ಮೀಡಿಯಟ್ ವಿದ್ಯಾಭ್ಯಾಸಗಳನ್ನು ಮಹಾರಾಣಿಯವರ ವಿದ್ಯಾಸಂಸ್ಥೆಯಲ್ಲಿ ಪಡೆದರು. ಆಮೇಲೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಚಿನ್ನದ ಪದಕ ಪಡೆಯುವುದರೊಂದಿಗೆ ವೈದ್ಯಪದವಿ ಪಡೆದರು. ಲಕ್ನೋ ನಗರದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿಗೆ ತೆರಳುವ ಇವರು ಸ್ತ್ರೀರೋಗ ಮತ್ತು ಪ್ರಸೂತಿ ಶಸ್ತ್ರಚಿಕಿತ್ಸೆಯಲ್ಲಿ ಮೊದಲ ರ್‍ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.

ದೀನರ ಸೇವೆಮಾಡಿ ಎಂದ ಯೇಸುಕ್ರಿಸ್ತರ ಬೋಧನೆಗಳನ್ನು ಅಕ್ಷರಶಃ ಮನಸ್ಸಿಗೆ ಸ್ವೀಕರಿಸಿದ ಇವರು ಪದವಿಯ ನಂತರ ಮಹಾತ್ಮ ಗಾಂಧಿಯವರ ಸೇವಾಗ್ರಾಮದ ಕುಷ್ಠರೋಗ ನಿವಾರಣಾ ಕೇಂದ್ರದಲ್ಲಿ ವೈದ್ಯಸೇವೆ ಪ್ರಾರಂಭಿಸುತ್ತಾರೆ. ಮುಂದೆ ಟಿ. ನರಸೀಪುರದಲ್ಲಿ ಕುಷ್ಠರೋಗ ನಿವಾರಣಾ ಸಂಸ್ಥೆ ಪ್ರಾರಂಭಿಸಿ ವಿಶಿಷ್ಟ ಸೇವೆಗೆ ತೊಡಗುತ್ತಾರೆ.

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಡಿಯಲ್ಲಿ ಅಸಿಸ್ಟೆಂಟ್ ಸರ್ಜನರಾಗಿ ವೃತ್ತಿ ನಡೆಸುವ ಇವರು ಜಂಟಿ ನಿರ್ದೇಶಕಿ ಹುದ್ದೆಯವರೆಗೆ ಏರಿ ನಿವೃತ್ತರಾಗುತ್ತಾರೆ. ತಮ್ಮ ಸೇವಾವಧಿಯಲ್ಲಿ ಇವರು ದಾಖಲೆಯೆಂಬಂತೆ ಸುಮಾರು ೮೦,೦೦೦ ಕುಟುಂಬಯೋಜನಾ ಶಸ್ತ್ರಚಿಕಿತ್ಸೆ ನಡೆಸಿದರು.

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವಾಗಲೇ ಸ್ವಯಿಚ್ಛೆಯಿಂದ ಬೀದರಿಗೆ ವರ್ಗ ಮಾಡಿಸಿಕೊಂಡು ಹದಿನೈದು ವರ್ಷಗಳ ದೀರ್ಘಕಾಲ ಅಲ್ಲಿನ ಬಡಜನರ ಸೇವೆ ಮಾಡಿದರು. ಬಳ್ಳಾರಿ ಕಲಬುರ್ಗಿಗಳಲ್ಲೂ ಇವರ ಸೇವೆ ಸಂದಿದೆ.

ಇವರು ನಿವೃತ್ತರಾದ ಮೇಲೆ ಸಾಹಿತ್ಯ ಕೃಷಿಯಲ್ಲಿ ತೊಡಗಿದರು. ತಮ್ಮ ವೃತ್ತಿಜೀವನದ ನೆನಪುಗಳೇ ಅವರ ಬರಹಗಳ ಜೀವದ್ರವ್ಯವಾಯಿತು. ವೈದ್ಯಕೀಯ ಲೇಖನಗಳನ್ನು ಮನೋಜ್ಞವಾಗಿ ಬರೆದು ಜನಸಾಮಾನ್ಯರ ಮನಗೆಲ್ಲುವ ಡಾ. ಲೀಲಾವತಿ ದೇವದಾಸ್‌ರವರ ಬರಹಗಾರಿಕೆ ಶುರುವಾಗುವುದೇ ಕವಿತಾ ರಚನೆಯ ಮೂಲಕ,

ಪ್ರಖ್ಯಾತ ವೈದ್ಯೆಯಾಗಿ, ಅನುಪಮ ಬರಹಗಾರ್ತಿಯಾಗಿ ಮಾತ್ರವಲ್ಲ ಪವಿತ್ರ ಬೈಬಲ್ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲವರಾಗಿದ್ದ ಡಾ. ಲೀಲಾವತಿ ದೇವದಾಸರಿಗೆ ಕರ್ನಾಟಕ ಸರಕಾರವು ವೈದ್ಯಕೀಯ ಸಾಧನೆಗಾಗಿ ೨೦೧೭ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆಯೂ ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು, ತುಮಕೂರಿನ ಸಿದ್ದಗಂಗಾ ಮೆಡಿಕಲ್ ಕಾಲೇಜುಗಳಲ್ಲಿ ದುಡಿದು ಬೀದರ್, ಚೆನ್ನಪಟ್ಟಣ, ಚಿಕ್ಕಬಳ್ಳಾಪುರ ಮಿಷನ್ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ನಡೆಸಿದರು.

ಆರೋಗ್ಯದ ಕುರಿತಾದ ಜಟಿಲ ವಿಷಯಗಳನ್ನು ಗ್ರಾಮೀಣ ಜನರಿಗೆ ಸುಲಭಸರಳವಾಗಿ ತೆರೆದಿಡುತ್ತಾ, ಆಕಾಶವಾಣಿಯ ರೇಡಿಯೋ ಡಾಕ್ಟರ್ ಕಾರ್ಯಕ್ರಮ, ದೂರದರ್ಶನದ ಆರೋಗ್ಯ ಸಂವಾದ, ನಿಯತಕಾಲಿಕಗಳಲ್ಲಿ ಬರಹಗಳು ಹಾಗೂ ಸ್ವರಚಿತ ಪುಸ್ತಕಗಳ ಮೂಲಕ ಅವರು ಆರೋಗ್ಯದ ಕುರಿತಂತೆ ಜನರಲ್ಲಿ ತಿಳುವಳಿಕೆ ಮೂಡಿಸಿದ್ದಾರೆ.

ಡಾ. ಲೀಲಾವತಿ ದೇವದಾಸ್ ಅವರು ಪಡೆದ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ’ಸುವರ್ಣಗೌರವ’ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಸದೋದಿತಾ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ, ದಾವಣಗೆರೆ ’ಅಕ್ಕ’ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಪ್ರಶಸ್ತಿ, ವೈದ್ಯಸಾಹಿತ್ಯರತ್ನ ಪ್ರಶಸ್ತಿ, ನವರತ್ನ ಪ್ರಶಸ್ತಿ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಚಸರ ಸಾಹಿತ್ಯ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಸಮಾಜಸಾರಥಿ ಪ್ರಶಸ್ತಿ, ಡಾ. ಸುಶೀಲಾ ಜಯರಾಮ್ ಪ್ರಶಸ್ತಿ, ಆರೋಗ್ಯ ಪುಸ್ತಕಗಳ ಅನುವಾದಕ್ಕಾಗಿ ಆರೋಗ್ಯ ಇಲಾಖೆಯ ಪ್ರಶಸ್ತಿ, ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ, ಡಾ. ಪಿ ಎಸ್ ಶಂಕರ್ ಟ್ರಸ್ಟ್ ಪ್ರಶಸ್ತಿ ಇವು ಪ್ರಮುಖವಾದವು. ತಮ್ಮ ಸೇವಾವಧಿಯಲ್ಲಿ ಮೈಸೂರು ವಿಭಾಗದ ಆರು ಜಿಲ್ಲೆಗಳಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಸತತವಾಗಿ ಮೂರು ವರ್ಷ ಆರೋಗ್ಯ ಇಲಾಖೆಯ ಪ್ರಶಸ್ತಿಗಳನ್ನು ಪಡೆದರು.

ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಫರ್ಡಿನೆಂಡ್ ಕಿಟೆಲರ ಪ್ರತಿಮೆ ಸ್ಥಾಪನೆಯ ಹಿಂದಿನ ಪ್ರಮುಖ ರೂವಾರಿಯಾಗಿದ್ದ ಇವರು ಇತರ ಜನಪರ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದರು.

ಕಳೆದ ಡಿಸೆಂಬರ್ ೧೭ರಂದು ಮುಂಜಾವದಲ್ಲಿ ಇವರು ತೀವ್ರ ಹೃದಯಾಘಾತದಿಂದ ನಿಧನರಾದರು. ಅದೇ ದಿನ ಸಂಜೆ ಸಂತ ಮಾರ್ಕನ ಕಥೀಡ್ರಲ್ ನಡೆದ ಅಂತಿಮ ಪೂಜಾರ್ಪಣೆಯ ವೇಳೆ ಸಮುದಾಯದ ಪರವಾಗಿ ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್ ನವರು ಮಾತನಾಡಿ ಅಶ್ರುತರ್ಪಣೆ ಸಲ್ಲಿಸಿದರು.

ಶ್ರೀಜೆ.ಆರ್.ಪೆರೇರಾ

ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆ ಪೂಜೆಗೆ ಅವಕಾಶವಿರಬೇಕೆಂದು ಒತ್ತಾಯಿಸಿ ನಡೆದ ಚಳವಳಿಯಲ್ಲಿ ಕಂಡುಬರುವ ಪ್ರಮುಖ ಹೆಸರು ಜೆ ಆರ್ ಪೆರೇರಾ ಎಂದೇ ಖ್ಯಾತನಾಮರಾದ ಜಾನ್ ರೇಮಂಡ್ ಪೆರೇರಾ. ಇವರು ಕಳೆದ ಡಿಸೆಂಬರ್ ೧೮ರಂದು ಯಶವಂತಪುರದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮರುದಿನ ಸಂಜೆ ಕ್ರಿಸ್ತರಾಜರ ದೇವಾಲಯದಲ್ಲಿ ನಡೆದ ಅಂತಿಮ ಪೂಜೆಯಲ್ಲಿ ಸುಮಾರು ಇಪ್ಪತ್ತು ಗುರುಗಳು ಭಾಗವಹಿಸಿದ್ದರು. ಅದೇ ಮೇರೆಗೆ ಡಾ. ಎಂ ಚಿದಾನಂದಮೂರ್ತಿ, ವಾಟಾಳು ನಾಗರಾಜ್, ಸಾರಾ ಗೋವಿಂದು, ವಚ ಚನ್ನೇಗೌಡ, ರಾನಂ ಚಂದ್ರಶೇಖರ ಮುಂತಾದ ಮಹನೀಯರು ಬಂದು ಇವರ ಅಂತಿಮದರ್ಶನ ಪಡೆದರು.

ಜೆ.ಆರ್.ಪೆರೇರಾರವರ ಹುಟ್ಟೂರು ಹೊನ್ನಾವರ ಬಳಿಯ ಹೊಸಾಡ್ ಎಂಬ ಗ್ರಾಮ. ೧೯೪೧ ಡಿಸೆಂಬರ್ ೨೭ರಂದು ಜನಿಸಿದ ಇವರು ಲಿಂಗನಮಕ್ಕಿಯಲ್ಲಿ ಉದ್ಯೋಗ ನಡೆಸಿದ್ದ ಸಂದರ್ಭದಲ್ಲಿ
ಬೆಂಗಳೂರು ತಾಳಗುಪ್ಪ ಮಾರ್ಗದ ರೈಲುಚಾಲಕರಾಗಿದ್ದ ಮಾನ್ಯ ಬಿ ಅರುಳಪ್ಪನವರ ಪರಿಚಯವಾಗುತ್ತದೆ. ಪೆರೇರಾನವರ ರೂಮಿನಲ್ಲೇ ಉಳಿದುಕೊಳ್ಳುತ್ತಿದ್ದ ಅರುಳಪ್ಪನವರು ಪೆರೇರಾನವರನ್ನು ೧೯೬೭ರಲ್ಲಿ ಬೆಂಗಳೂರಿಗೆ ಕರೆತರುತ್ತಾರೆ. ಯಶವಂತಪುರದ ರೇಲ್ವೆ ಕಾರ್ಟರ್ಸಿನಲ್ಲಿ ಅರುಳಪ್ಪನವರೊಂದಿಗೆ ನೆಲೆ ನಿಲ್ಲುವ ಪೆರೇರಾ ಬೆಂಗಳೂರಿನಲ್ಲಿ ಉದ್ಯೋಗ ಅರಸುವ ಜೊತೆಗೆ ಬೆಂಗಳೂರು ನಗರದ ಭಾಷಾವೈವಿಧ್ಯತೆಗಳನ್ನು ಕಂಡು ಬೆರಗಾಗುತ್ತಾರೆ. ಅದೇ ವೇಳೆಯಲ್ಲಿ ಬೆಳಗಾವಿ ಗಡಿಭಾಗದಲ್ಲಿ ಮಹಾರಾಷ್ಟ್ರವಾದಿಗಳ ಪುಂಡಾಟಿಕೆಯನ್ನು ಖಂಡಿಸಿ ಮಾನ್ಯ ವಾಟಾಳು ನಾಗರಾಜರ ಮುಂದಾಳತ್ವದಲ್ಲಿ ನಡೆಯುವ ಉಗ್ರ ಹೋರಾಟಗಳು ಅವರಲ್ಲಿ ಕನ್ನಡಾಭಿಮಾನದ ಕಿಚ್ಚು ಹೊತ್ತಿಸುತ್ತವೆ.

ಅಂದು ದೂರದ ಬೆಳಗಾವಿ ಬಿಡಿ, ರಾಜಧಾನಿ ಬೆಂಗಳೂರಿನಲ್ಲೇ ತಮಿಳು ಭಾಷಿಕರ ಅಟಾಟೋಪ ಮೇರೆ ಮೀರಿತ್ತು. ಯಶವಂತಪುರ ಮತ್ತು ನಗರ ರೈಲುನಿಲ್ದಾಣಗಳ ರೇಲ್ವೆ ಕಾಲನಿಗಳಲ್ಲಿ ರೇಲ್ವೆ ಊಳಿಗದಲ್ಲಿ ತುಂಬಿಹೋಗಿದ್ದ ತಮಿಳು ಕಾರ್ಮಿಕರು ಕನ್ನಡಿಗರ ಮೇಲೆ ಪುಂಡಾಟಿಕೆ ನಡೆಸುತ್ತಾ ಅಟ್ಟಹಾಸಗೈಯುತ್ತಿದ್ದರು.

ಯಶವಂತಪುರದ ಸಂತೆಬೀದಿಯ ಬೃಹತ್ ಮರಗಳ ಮೇಲೆ ತಮಿಳುತನ ಸೂಸುವ ಡಿಎಂಕೆ ಬಾವುಟಗಳು ರಾರಾಜಿಸುತ್ತಿದ್ದವು. ಯಶವಂತಪುರಕ್ಕೆ ಸನಿಹದಲ್ಲೇ ಇದ್ದ ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದಲ್ಲೂ ಈ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

೧೯೭೩ ಅಕ್ಟೋಬರ್ ಮೂರನೇ ತಾರೀಕು. ಹದಿನಾಲ್ಕು ವರ್ಷಗಳಿಂದ ಈ ದೇವಾಲಯದ ಹೊಣೆ ಹೊತ್ತಿದ್ದ ಫಾದರ್ ಅಂತೋಣಿ ಸಿಕ್ವೆರಾ ನವರು ವರ್ಗವಾಗಿ ಅವರ ಸ್ಥಾನಕ್ಕೆ ಬಂದಿದ್ದ ಥಾಮಸ್ ಫೆರ್ನಾಂಡೊ ಎಂಬ ಪಾದ್ರಿ ಜನರ ಭಾವನೆಗಳನ್ನು ಪ್ರೀತಿಗೌರವಗಳಿಂದ ಕಾಣದ ಅಂಧನಾಗಿ ತಮಿಳು ದುರಭಿಮಾನವನ್ನು ಪ್ರದರ್ಶಿಸುತ್ತಿದ್ದ. ಕನ್ನಡಿಗ ಮಕ್ಕಳಿಗೆ ಬಲವಂತವಾಗಿ ತಮಿಳು ಹಾಡುಗಳನ್ನು ಕಲಿಸಿ ದೇವಾಲಯವನ್ನು ಸಂಪೂರ್ಣ ತಮಿಳುಮಯ ಮಾಡಿದ್ದ. ಕನ್ನಡಿಗರಿಗೆ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಯಾವುದೇ ಅವಕಾಶವನ್ನು ನಿರಾಕರಿಸಲಾಗಿತ್ತು. ನಿಜ ಹೇಳಬೇಕೆಂದರೆ ಈ ಚರ್ಚಿನಲ್ಲಿ ಕ್ರಿಸ್ತನಿರಲಿಲ್ಲ, ತಮಿಳೊಂದೇ ಇದ್ದದ್ದು.

ಆ ಸಂದರ್ಭದಲ್ಲಿ ಭಕ್ತಾದಿಯೊಬ್ಬರ ಸಾವೊಂದು ಸಂಭವಿಸಿತು. ಅಂತ್ಯಕ್ರಿಯೆಯ ಪೂಜಾರಾಧನೆಗಾಗಿ ಪಾದ್ರಿಯವರಲ್ಲಿ ವಿನಂತಿಸಿದಾಗ ತಮಿಳು ಭಾಷೆಯ ಸೇವೆಯಷ್ಟೇ ಲಭ್ಯ ತನಗೆ ಕನ್ನಡ ಬರುವುದಿಲ್ಲ ಎಂಬ ಉದ್ಧಟತನದ ಮಾತು. ಸಂತ್ರಸ್ತ ಕುಟುಂಬದವರು ತಮ್ಮ ಪರಿಚಯದ ಗುರುವನ್ನು ಕರೆತಂದಾಗಲೂ ಅನುಮತಿ ದೊರೆಯಲಿಲ್ಲ. ಸಾವಿನ ನೋವಿನೊಂದಿಗೆ ಈ ಪ್ರಾರ್ಥನೆಗೆ ಆಗಿಬರದ ಕರಿಗಡುಬನ್ನೂ ಗಂಟಲಲ್ಲಿ ತುರುಕಿದಂತಾಯ್ತು.

ಈ ಎಲ್ಲ ಘಟನೆಗಳು ಪೆರೇರಾರವರಲ್ಲಿನ ಅಸಹನೆಯನ್ನು ಪುಟಿದೆಬ್ಬಿಸಿದವು. ಅವರು ಜನರನ್ನು ಸಂಘಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದರು. ಅಂದು ಕಸಾಪ ಅಧ್ಯಕ್ಷರಾಗಿದ್ದ ಮಾನ್ಯ ಜಿ ನಾರಾಯಣರು ಬಿಷಪರಿಗೆ ಪತ್ರ ಬರೆದು ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲು ವಿನಂತಿಸಿದರು. ಆದರೆ ಆ ಪತ್ರಕ್ಕೆ ಯಾವ ಮನ್ನಣೆಯೂ ಸಿಗಲಿಲ್ಲ. ಪೆರೇರಾನವರು ಕ್ರಾಂತಿಕಾರಿ ನಾಯಕ ಮಾನ್ಯ ವಾಟಾಳು ನಾಗರಾಜರಲ್ಲಿಗೆ ತೆರಳಿದರು.

೧೯೭೭ ನವೆಂಬರ್ ಒಂದು. ಕನ್ನಡ ರಾಜ್ಯೋತ್ಸವದ ದಿನ. ಕ್ರೈಸ್ತರಿಗೆ ಸಕಲ ಸಂತರ ಹಬ್ಬ. ದೇವಾಲಯದ ಮುಂಭಾಗದಲ್ಲಿ ಒಂದು ಲಾರಿ ಬಂದು ನಿಂತಿತು. ಲಾರಿಯಿಂದಿಳಿದ ಜನರ ಜೊತೆಗೆ ಎಲ್ಲೆಲ್ಲಿಂದಲೋ ಬಂದ ಕನ್ನಡದ ಜನ ಸೇರಿ ಜಂಗುಳಿಯಾದರು. ಲಾರಿಯ ಮೇಲೆ ನಿಂತು ವಾಟಾಳು ನಾಗರಾಜರು ಧ್ವನಿವರ್ಧಕದಲ್ಲಿ ಗುಟುರು ಹಾಕಿದರು. ಕನ್ನಡದ ಆ ದನಿ ಎಲ್ಲಾ ದಿಕ್ಕುಗಳಲ್ಲಿ ಮಾರ್ದನಿಸುತ್ತಿದ್ದಂತೆಯೇ ದೇವಾಲಯದೊಳಗೆ ಪಾದ್ರಿಯವರೊಂದಿಗೆ ಸರಸಸಲ್ಲಾಪದಲ್ಲಿ ತೊಡಗಿದ್ದ ತಮಿಳು ಭಾಷಿಕರು ಬೆಚ್ಚಿಬಿದ್ದರು. ಎಲ್ಲೆಲ್ಲಿದ್ದರೋ ಅಲ್ಲಲ್ಲೇ ಅವರು ಅವಿತು ಕುಳಿತರು. ಪಾದ್ರಿಯವರು ತಂತಿ ಬೇಲಿ ಹಾರಿ ಸಂತ ರಾಯಪ್ಪರ ಗುರುಮಠದ ಕಡೆಗೆ ಓಡಿಹೋದರು. ಶತಾಯಗತಾಯ ಕನ್ನಡದಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವವರೆಗೆ ತಾವು ಜಾಗ ಖಾಲಿ ಮಾಡುವುದಿಲ್ಲವೆಂದು ವಾಟಾಳರು ಪಟ್ಟು ಹಿಡಿದು ಕುಳಿತರು. ಕೊನೆಗೆ ಪೊಲೀಸ್ ಅಧಿಕಾರಿಗಳು ಮಧ್ಯಸ್ತಿಕೆ ವಹಿಸಿ ಬಿಷಪರ ಮನೆಯಿಂದ ಅನುಮತಿ ತಂದು ಮಧ್ಯಾಹ್ನ ಒಂದು ಗಂಟೆಗೆ ಕನ್ನಡದ ಪೂಜಾರಾಧನೆಗೆ ಅವಕಾಶ ಕಲ್ಪಿಸಿದರು. ಅದೊಂದು ಅಭೂತಪೂರ್ವ ಜಯ. ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ ಸ್ಥಾನವಿಲ್ಲವೆಂಬುದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?

ಅದಾಗಿ ಮೂರು ವಾರಗಳಲ್ಲಿ ದೇವಾಲಯದ ಹಬ್ಬ ನಡೆಯಿತು. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಬಂದ ಕನ್ನಡಿಗರ ಉತ್ಸಾಹಕ್ಕೆ ಮತ್ತೆ ತಣ್ಣೀರೆರಚಲಾಯಿತು. ಅಂದು ಕೇವಲ ತಮಿಳು ಪೂಜೆಪ್ರಾರ್ಥನೆಗಷ್ಟೆ ಅವಕಾಶವಿತ್ತು. ಇದಕ್ಕೆ ಪ್ರತಿತಂತ್ರ ಹೂಡಿದ ಪೆರೇರಾರವರು ಕನ್ನಡದಲ್ಲೇ ಪ್ರಾರ್ಥನೆ ಮಾಡಲು ಹಾಡುಗಳನ್ನು ಹಾಡಲು ಕನ್ನಡಿಗರನ್ನು ಪ್ರೇರೇಪಿಸಿ ಬಿಳಿಯ ಕಾಗದಗಳಲ್ಲಿ ಹಾಡುಗಳನ್ನು ಬರೆದು ತಂದು ಹಂಚಿದರು. ಆದರೆ ಕನ್ನಡದಲ್ಲಿ ಪ್ರಾರ್ಥನೆ ಮಾಡುವುದೇ ಒಂದು ದೇವದೂಷಣೆ ಎಂಬಂತೆ ತಮಿಳರು ಕನ್ನಡಿಗರ ಮೇಲೆ ಹಲ್ಲುಕಡಿದರು. ದೇವಾಲಯದೊಳಗೆ ಗೊಣಗಾಟ ಕೂಗಾಟ ಪ್ರಾರಂಭವಾಯಿತು. ಪಾದ್ರಿಯವರು ಶಾಂತಿಗಾಗಿ ಮನವಿ ಮಾಡುವ ಬದಲು ಧ್ವನಿವರ್ಧಕದ ಮೂಲಕ ಕನ್ನಡಿಗರ ಬಾಯಿ ಮುಚ್ಚಿಸುವಂತೆ ತಮಿಳು ಭಕ್ತಾದಿಗಳಿಗೆ ಆದೇಶ ನೀಡಿದ ಫಲವಾಗಿ ತಮಿಳರೆಲ್ಲ ಕನ್ನಡಿಗರ ಮೇಲೆ ಬಿದ್ದರು. ದೇವಾಲಯದ ಶಾಂತ ಪರಿಸರ ಕದಡಿಹೋಯಿತು.

ಈ ಸಂಗತಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ವರದಿಯಾದವು. ಕುವೆಂಪು, ಜಿಎಸ್ ಶಿವರುದ್ರಪ್ಪ, ಪಾಟೀಲ ಪುಟ್ಟಪ್ಪ, ವಿ ಕೃ ಗೋಕಾಕ, ದೇಜಗೌ, ಹಾಮಾನಾಯಕ, ಜಿಎಸ್ ವೆಂಕಟಸುಬ್ಬಯ್ಯ, ಸುಮತೀಂದ್ರನಾಡಿಗ, ಜಿ ರಾಮಕೃಷ್ಣ, ನಾ ಡಿಸೋಜ, ಪುತಿನ, ಎಚ್ ಎಂ ಮರುಳಸಿದ್ಧಯ್ಯ ಮುಂತಾದ ನಾಡಿನ ಪ್ರಮುಖ ಸಾಹಿತಿವರೇಣ್ಯರು ಕನ್ನಡ ಕ್ರೈಸ್ತರ ಸಾತ್ವಿಕ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಈ ಮಹನೀಯರೆಲ್ಲ ಪೆರೇರಾರವರ ಪತ್ರವ್ಯವಹಾರಗಳ ಮೂಲಕ ನಮ್ಮ ಚಳವಳಿಗೆ ಒತ್ತಾಸೆಯಾದವರು.

ಇವರಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿ ನಾರಾಯಣ, ಹಂಪ ನಾಗರಾಜಯ್ಯ, ಸಾಶಿ ಮರುಳಯ್ಯ, ಜ್ವಾಲನಯ್ಯ, ಸಿದ್ಧಲಿಂಗಯ್ಯ, ಪುಂಡರೀಕ ಹಾಲಂಬಿ, ಚಂದ್ರಶೇಖರ ಪಾಟೀಲ, ಕನ್ನಡ ಸಂಘರ್ಷ ಸಮಿತಿಯ ರೆಹಮಾನ್ ಖಾನ್, ರಾಮಣ್ಣ ಕೋಡಿಹೊಸಳ್ಳಿ, ಗೇಬ್ರಿಯಲ್ ಅಗೇರಾ, ಕನ್ನಡ ಚಳವಳಿಯ ಜಿ ನಾರಾಯಣಕುಮಾರ್, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ  ಸಾರಾ ಗೋವಿಂದು, ಟಿ ವೆಂಕಟೇಶ್, ಸಾಹಿತಿಗಳ ಕಲಾವಿದರ ಬಳಗದ ಡಾ ಎಂ ಚಿದಾನಂದಮೂರ್ತಿ, ಜಿಕೆ ಸತ್ಯ, ಪಿವಿ ನಾರಾಯಣ, ಬಿಟಿ ಲಲಿತಾನಾಯಕ್, ಎಲ್ ಎಸ್ ಶೇಷಗಿರಿರಾವ್, ಕನ್ನಡ ಗೆಳೆಯರ ಬಳಗದ ರಾನಂ ಚಂದ್ರಶೇಖರ, ಬಾಹ ಉಪೇಂದ್ರ, ವಕೀಲರಾದ ಸಿಎಚ್ ಹನುಮಂತರಾಯ, ಕೋ ಚೆನ್ನಬಸಪ್ಪ, ಬಸವಾರ್ಯ, ಎನ್ ವೈ ಹನುಮಂತಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ, ಪತ್ರಕರ್ತರಾದ ಖಾದ್ರಿ ಶಾಮಣ್ಣ, ಶರತ್ ಕಲ್ಕೋಡ್, ಆರ್ ಪಿ ಜಗದೀಶ, ಪದ್ಮರಾಜ ದಂಡಾವತಿ ಮುಂತಾದವರೆಲ್ಲ ಹೆಗಲಿಗೆ ಹೆಗಲಾದರು ಎಂಬುದನ್ನು ಮರೆಯುವಂತೆಯೇ ಇಲ್ಲ.

ಹಾಗೆ ನೋಡಿದರೆ ಜೆ ಆರ್ ಪೆರೇರಾರವರು ಭಾಷಣಕಾರರೇ ಅಲ್ಲ. ದೊಡ್ಡ ದೊಡ್ಡ ಸತ್ಯಾಗ್ರಹ, ಸಮಾರಂಭಗಳನ್ನು ಆಯೋಜಿಸಿದರೂ ಅವರೆಂದೂ ದನಿಯೆತ್ತಿ ಮಾತನಾಡಲಿಲ್ಲ. ಮೆಲುದನಿಯ ಮಿತಭಾಷಿಯ ಇವರು ಸದಾ ವಿದ್ಯಮಾನಗಳನ್ನು ಮೌನದಿಂದ ಗಮನಿಸುತ್ತಾ ಅಧ್ಯಯನ ಮಾಡುತ್ತಾ ಮನದೊಳಗೇ ಪ್ರತಿತಂತ್ರ ಹೆಣೆಯುತ್ತಿದ್ದ ಮುತ್ಸದ್ದಿ. ಬಿಡುವಿನ ವೇಳೆಯಲ್ಲಿ ನಾನು ಅವರ ಜೊತೆ ಕುಳಿತು ಹಲವಾರು ಪತ್ರಗಳನ್ನು ಬರೆದಿದ್ದಿದೆ. ಕರಪತ್ರಗಳು, ಹಕ್ಕೊತ್ತಾಯಗಳು, ಪತ್ರಿಕಾ ಹೇಳಿಕೆಗಳು, ಮನವಿಪತ್ರಗಳು, ಅನುಮತಿ ಕೋರಿಕೆಗಳು ಮುಂತಾದವುಗಳನ್ನು ಯಾರಿಗೆ ಬರೆಯಬೇಕು ಏನು ಬರೆಯಬೇಕೆಂದು ನನಗೆ ಹೇಳುತ್ತಿದ್ದರು. ನಾನು ಸ್ಫುಟವಾಗಿ ಬರೆದಿದ್ದನ್ನು ಮತ್ತೊಮ್ಮೆ ಓದಿ ಕೇಳಿ ತಿದ್ದುಪಾಟುಗಳನ್ನು ಸೂಚಿಸಿ ಕೊನೆಗೆ ಅವನ್ನು ಇಬ್ಬರೂ ಜೊತೆಗೂಡಿ ಸಂಬಂಧಪಟ್ಟವರಿಗೆ ಅಂಚೆಯ ಮೂಲಕ ಅಥವಾ ಕೈಯಾರೆ ತಲಪಿಸುತ್ತಿದ್ದೆವು.

ಕಮಿಷನರ್ ಗರುಡಾಚಾರ್, ಡಿಸಿಪಿ ರಾಮಾನುಜಂ, ಡಿಸಿಪಿ ಸೋಮಶೇಖರ್, ಡಿಸಿಪಿ ಕೆ ಸಿ ರಾಮಮೂರ್ತಿ, ಐಎಎಸ್ ವಿಠಲಮೂರ್ತಿ, ಎಸಿಪಿ ಎಸ್ಎಂಆರ್ ಅಡಿಗ, ಸಿಐ ವಸಂತ್, ಇನ್ಸ್ಪೆಕ್ಟರ್ ಪ್ರತಾಪ್ ಸಿಂಗ್ ಮುಂತಾದವರನ್ನೆಲ್ಲ ಪೆರೇರಾರೊಂದಿಗೆ ನಾವು ಭೇಟಿಯಾದಾಗಲೆಲ್ಲ ನಮಗೆ ಒಳ್ಳೆ ಗೌರವವೇ ಸಿಗುತ್ತಿತ್ತು. ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಎನ್ನುವ ಹಾಗೆ ಪೆರೇರಾರವರ ವ್ಯಕ್ತಿತ್ವದೊಂದಿಗೆ ನನ್ನ ಮಾತುಗಾರಿಕೆಯೂ ಸೇರಿ ಅಲ್ಲೊಂದು ಕ್ರಿಸ್ತಪ್ರೀತಿಯ ಮನುಷ್ಯಬಾಂಧವ್ಯ ನೆಲೆಗೊಳ್ಳುತ್ತಿತ್ತು.

ರಾಜಕಾರಣಿಗಳಾದ ಜೀವರಾಜ ಆಳ್ವ, ಜಿ ನಾರಾಯಣಕುಮಾರ್, ಅನಂತಕುಮಾರ್‌ರವರೊಂದಿಗೂ ಪೆರೇರಾರವರ ನಿಕಟ ಬಾಂಧವ್ಯ ಸ್ನೇಹಪರವಾಗಿತ್ತು. ನಾರಾಯಣಕುಮಾರ್‌ರವರು ಮಂಗಳೂರಿನಲ್ಲಿ ಪೋಪರ ಭೇಟಿ ಮಾಡಿಸಿ ಮನವಿಪತ್ರ ಸಲ್ಲಿಸಲು ಅನುವುಮಾಡಿಕೊಟ್ಟರು. ಅದೇ ರೀತಿ ಅನಂತಕುಮಾರ್‌ರವರು ಪ್ರಧಾನಮಂತ್ರಿ ವಾಜಪೇಯಿಯವರ ಮೂಲಕ ಪೋಪರಿಗೆ ಪತ್ರ ಬರೆಸಿದರು.

ಪೆರೇರಾರವರು ಮೊದಲಿಗೆ ಕನ್ನಡ ಭಾಷಾ ಅನುಷ್ಠಾನಕ್ಕಾಗಿ ಧಾರ್ಮಿಕ ವರಿಷ್ಠರಲ್ಲಿ ಅಂಗಲಾಚಿ ಛೀ ಎನ್ನಿಸಿಕೊಂಡು ಆಮೇಲೆಯೇ ಧರ್ಮದ ಹೊರಗಿನವರ ಸಹಾಯಕ್ಕಾಗಿ ಕೈಚಾಚಿ ಹಕ್ಕುಗಳನ್ನು ಪಡೆದುಕೊಂಡಿದ್ದು. ಸರ್ವರನ್ನೂ ಪ್ರೀತಿಯಿಂದ ಕಾಣು, ಸರ್ಕಾರಕ್ಕೆ ಸಲ್ಲಬೇಕಾದುದನ್ನು ಸರ್ಕಾರಕ್ಕೆ ಸಲ್ಲಿಸು ಎಂದ ಯೇಸುಕ್ರಿಸ್ತನ ಮಾತುಗಳನ್ನು ಕಡೆಗಣಿಸಿ ವೈಯಕ್ತಿಕ ಸ್ವಾರ್ಥಕ್ಕಾಗಿ ಹೀನವಾಗಿ ವರ್ತಿಸಿದ ಧಾರ್ಮಿಕ ನೇತಾರರ ಕಣ್ಣು ತೆರೆಸುವಲ್ಲಿ ಪೆರೇರಾ ಯಶಸ್ವಿಯಾದರು. ಆದರೂ ಬೆಂಗಳೂರಿನ ಕಥೋಲಿಕ ಧರ್ಮಸಭೆಯ ಮುಖಂಡರು ತಮ್ಮದೇ ಆದ ಸ್ವಾರ್ಥ ಸಿದ್ಧಾಂತಗಳಿಗೆ ಜೋತುಬಿದ್ದರೆಂಬುದು ವಿಪರ್ಯಾಸ. ಕನ್ನಡ ಕ್ರೈಸ್ತರೊಂದಿಗೆ ಪ್ರೀತಿಯಿಂದ ವರ್ತಿಸಿ ಕ್ರೈಸ್ತಧರ್ಮಕ್ಕೊಂದು ಮರ್ಯಾದೆ ದೊರಕಿಸಿಕೊಡುವ ಬದಲಿಗೆ ಇತರ ಭಾಷಿಕರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟುವ ಮೂಲಕ ಅವರು ಸೈತಾನನ ಹಾದಿ ತುಳಿದರು. ಕ್ರಿಸ್ತ ಹೇಳಿದ ಸರ್ವಜನಾಂಗಕ್ಕೂ ನನ್ನ ಶುಭಸಂದೇಶವನ್ನು ಬೋಧಿಸಿರಿ ಎಂಬ ಮಾತುಗಳನ್ನು ಮರೆತು ಇರುವಷ್ಟೇ ಜನಕ್ಕೆ ಧಾರ್ಮಿಕ ಅಗತ್ಯಗಳನ್ನು ಪೂರೈಸಿ ತಾವು ಐಷಾರಾಮದಲ್ಲಿ ಬದುಕುವುದೇ ಸುಲಭ ಎಂದುಕೊಂಡರು. ಅದು ಇಂದಿಗೂ ಮುಂದುವರಿದಿದೆ, ಅದು ನಮ್ಮ ಧರ್ಮದ ದೌರ್ಭಾಗ್ಯ.

ಈ ಪಿಡುಗನ್ನು ನಿವಾರಿಸಲು ಹಲವು ಪೆರೇರಾರವರು ಹುಟ್ಟಿಬರಲಿ ಎಂದು ಆಶಿಸುತ್ತಾ ದಿವಂಗತರಿಗೆ ಕಂಬನಿ ಮಿಡಿಯೋಣ. 

-ಸಿ ಮರಿಜೋಸೆಫ್‌

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...