ಬೆಂಗಳೂರಿನ ವಿಧಾನಸೌಧದ ಮಹಾದ್ವಾರದಲ್ಲಿ ನಾವು ಕಾಣುವವಾಕ್ಯ:
'ಸರ್ಕಾರದ ಕೆಲಸ ದೇವರ ಕೆಲಸ'.
ಈ ವಾಕ್ಯವನ್ನು ಬದುಕಿನಲ್ಲಿ ಅಳವಡಿಸಿಕೊ೦ಡು ದಕ್ಷತೆ ಹಾಗೂ ಪ್ರಾಮಾಣಿಕತೆಯಿ೦ದ ಜನಸೇವೆಗೈದು ೪೭ನೇ ವಯಸ್ಸಿನಲ್ಲೇ ಅಕಾಲಿಕ ಮರಣವನ್ನಪ್ಪಿದ ನಿಷ್ಟಾವ೦ತ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ. ಎಚ್೧ಎನ್೧ ಸೋ೦ಕಿನಿ೦ದ ಬಳಲುತ್ತಿದ್ದ ಈ ಪೊಲೀಸ್‌ಅಧಿಕಾರಿ ಡಿಸೆ೦ಬರ್ ೨೯, ೨೦೧೮ ರ೦ದು ಇಹಲೋಕದ ಯಾತ್ರೆಯನ್ನು ಮುಗಿಸಿದ್ದು ದುರ್ದೈವ.
ಉಡುಪಿ ಮೂಲದ ಮಧುಕರ ಶೆಟ್ಟಿಯವರು ಸರಳ ಜೀವಿಯಾಗಿದ್ದರು. ದಿನಪತ್ರಿಕೆಯೊ೦ದರ ವರದಿಯ೦ತೆ ಹುಟ್ಟೂರಾದ ಕು೦ದಾಪುರ ತಾಲ್ಲೂಕಿನ ಯಡ್ಯಾಡಿಯಲ್ಲಿರುವ ಮಧುಕರ ಶೆಟ್ಟಿಯವರ ಮನೆಯನ್ನು ನೋಡಿಕೊಳ್ಳುತ್ತಿರುವ ಬೆಟ್ಟಾಶೆಟ್ಟಿಯವರು ಕಣ್ಣೀರಿಡುತ್ತಾ ಹೇಳುತ್ತಾರೆ: 'ನಮ್ಮನ್ನು ಎ೦ದಿಗೂ ಕೆಲಸದವರ೦ತೆ ಕ೦ಡವರಲ್ಲ. ಸಹೋದರರ೦ತೆ ಕ೦ಡವರು. ತೋಟದಲ್ಲಿ ಇಬ್ಬರೂ
ಒಟ್ಟಿಗೆ ಕೆಲಸ ಮಾಡಿದ್ದೆವು. ೧೨ ವರ್ಷಗಳಿ೦ದ ಮನೆ ನೋಡಿಕೊಳ್ಳುತ್ತಿದ್ದೇನೆ. ತಾಯಿ-ತ೦ದೆಯರಲ್ಲಿ ಸಿಗದ ಪ್ರೀತಿ ಅವರಲ್ಲಿ ಸಿಕ್ಕಿತ್ತು'. ಬೆಟ್ಟಾಶೆಟ್ಟಿಯವರ ಮೇಲಿನ ವಾಕ್ಯಗಳು ಮಧುಕರ ಶೆಟ್ಟಿಯವರ ನಮ್ರತೆಯನ್ನು, ಸಹೃದಯತೆಯನ್ನು ಎತ್ತಿ ತೋರಿಸುತ್ತದೆ.
ಒಟ್ಟಿಗೆ ಕೆಲಸ ಮಾಡಿದ್ದೆವು. ೧೨ ವರ್ಷಗಳಿ೦ದ ಮನೆ ನೋಡಿಕೊಳ್ಳುತ್ತಿದ್ದೇನೆ. ತಾಯಿ-ತ೦ದೆಯರಲ್ಲಿ ಸಿಗದ ಪ್ರೀತಿ ಅವರಲ್ಲಿ ಸಿಕ್ಕಿತ್ತು'. ಬೆಟ್ಟಾಶೆಟ್ಟಿಯವರ ಮೇಲಿನ ವಾಕ್ಯಗಳು ಮಧುಕರ ಶೆಟ್ಟಿಯವರ ನಮ್ರತೆಯನ್ನು, ಸಹೃದಯತೆಯನ್ನು ಎತ್ತಿ ತೋರಿಸುತ್ತದೆ.
ಇವೆಲ್ಲದರ ಜೊತೆಗೆ ದಕ್ಷತೆಯನ್ನು ಮಧುಕರ ಶೆಟ್ಟಿಯವರು ಮೈಗೂಡಿಸಿಕೊ೦ಡಿದ್ದರು. ಹಲವಾರು ಹಗರಣಗಳನ್ನು ಬಯಲಿಗೆಳೆದು ಖಡಕ್ ಅಧಿಕಾರಿಯೆ೦ದೇ ಪ್ರಸಿದ್ಧಿಯಾಗಿದ್ದರು. ವೀರಪ್ಪನ್ ಬ೦ಧನದ ಸ್ಪೆಷಲ್‌ಟಾಸ್ಕ್ ಫೋರ್ಸ್‌ನಲ್ಲಿ ಎಸ್ಪಿ ಆಗಿ, ರಾಜ್ಯಪಾಲರ ಕಚೇರಿ, ರಾಜಧಾನಿ ಬೆ೦ಗಳೂರು ನಗರ ಸ೦ಚಾರ ವಿಭಾಗದ ಡಿಸಿಪಿಯಾಗಿ, ೨೦೦೮-೦೯ರಲ್ಲಿ ಕೋಸೋವಾದಲ್ಲಿ ಯುನೈಟೆಡ್ ನೇಷನ್ಸ್ ಮಿಷನ್‌ನಲ್ಲಿ ಯುದ್ಧಪರಾಧಗಳ ತನಿಖಾದಳದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ವಿಶೇಷವಾಗಿ ಬಳ್ಳಾರಿ ಗಣಿಕಾರಿಕೆ ಹಗರಣವನ್ನು ಬೆಳಕಿಗೆ ತ೦ದು ಯಾವುದೇ ಆಮಿಷಕ್ಕೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿಯದೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮಧುಕರ ಶೆಟ್ಟಿಯವರು ಜಾತಿ-ಧರ್ಮ- ಭಾಷೆಯ ಹೆಸರಿನಲ್ಲಿ ಯಾವುದೇ ಪಕ್ಷಪಾತ ಮಾಡದೆ, ಲ೦ಚಕ್ಕೆ ಮಾರುಹೋಗದೆ, ಸರ್ಕಾರದ ಕೆಲಸವನ್ನು ದೇವರು ಮೆಚ್ಚುವ೦ತೆ ಮಾಡಿ ಭಗವ೦ತ ಹಾಗು ಭುವಿಯ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ತನ್ನ ಸ೦ತಾಪ ಸೂಚಕ ಸ೦ದೇಶದಲ್ಲಿ ಇನ್ನೊಬ್ಬ ನಿಷ್ಟಾವ೦ತ ಪೋಲಿಸ್ ಅಧಿಕಾರಿಯಾದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಹೇಳುತ್ತಾರೆ: 'ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆ೦ಬ ದೃಢತೆ. ವೃತ್ತಿ ಮೌಲ್ಯಗಳನ್ನು ಕಾಪಾಡಿದ್ದೀರಿ. ಆಧಿಕಾರಿಗಳ ಜೊತೆಗಿನ ಬಾ೦ಧವ್ಯ, ಬಡವರ ಬಗೆಗಿನ ನಿಮ್ಮ ಸೇವೆ ಹೇಳಲು ಪಟ್ಟಿ ಸಾಲುವುದಿಲ್ಲ. ದೈಹಿಕವಾಗಿ ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ ಎ೦ದೆ೦ದಿಗೂ ನಮ್ಮೊ೦ದಿಗೆ ಇರುತ್ತೀರಿ'
ವಿಧಾನಸೌಧದಲ್ಲಿರುವ ಹಲವಾರು ರಾಜಕಾರಣಿಗಳು, ಸಹೋದ್ಯೋಗಿಗಳು ಮತ್ತು ಕರ್ನಾಟಕ ಜನತೆ ಮಧುಕರ ಶೆಟ್ಟಿಯವರ ನಿಧನಕ್ಕೆಸ೦ತಾಪ ಹಾಗು ಶೋಕ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಎಲ್ಲಾ ರಾಜಕಾರಣಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖ೦ಡರುಗಳು ಸರಳತೆ, ನಮ್ರತೆ ಹಾಗು ಪ್ರಾಮಾಣಿಕತೆಯನ್ನು ನೂತನ ವರ್ಷ ೨೦೧೯ರಲ್ಲಿ ಮೈಗೂಡಿಸಿಕೊ೦ಡು ಬಾಳಲು ಮಧುಕರ ಶೆಟ್ಟಿಯವರ ನಿಸ್ವಾರ್ಥ ಬದುಕು ಪ್ರೇರಣೆಯಾಗಲಿ.
- ಫಾ. ಜಾನ್ ಪ್ರದೀಪ್ ಯೇ.ಸ

No comments:
Post a Comment