Friday, 11 January 2019

ಬೈಬಲ್‌ ದನಿ: ಸಂತ ಯೊವಾನ್ನರ ಶುಭಸಂದೇಶ-೫


ಕಳೆದ ಸಂಚಿಕೆಯಲ್ಲಿ ಬರೆದಂತಹ ಶುಭಸಂದೇಶದ ಚಿಂತನೆಯಲ್ಲಿ ಸಾಂಕೇತಿಕ ಶುಭಸಂದೇಶವೆಂದು ಬರೆಯಲಾಗಿತ್ತು. ಸಂತ ಯೊವಾನ್ನರ ಶುಭಸಂದೇಶವನ್ನು ಏಕೆ ಹೀಗೆ ಕರೆಯುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ.

ಸಂತ ಯೊವಾನ್ನರ ಶುಭಸಂದೇಶದಲ್ಲಿ ಎಲ್ಲವನ್ನೂ ಸಾಂಕೇತಿಕವಾಗಿ ಬಿಂಬಿಸಲಾಗಿದೆ. ಪ್ರತಿಯೊಂದು ವಸ್ತು, ವ್ಯಕ್ತಿ, ಘಟನೆ, ಹೇಳಿಕೆ ಮತ್ತು ಮಾತುಗಳು ಎಲ್ಲವೂ ಸಾಂಕೇತಿಕವಾಗಿ ಸೂಚಿಸಲಾಗಿರುತ್ತದೆ. ಉದಾಹರಣೆಗೆ

1. ಕೆಲವು ವ್ಯಕ್ತಿಗಳನ್ನು ಇಲ್ಲಿ ಸಾಂಕೇತಿಕವಾಗಿ ಕಾಣಬಹುದು: ಸಮಾರಿಯದ ಸ್ತ್ರೀ, ಹುಟ್ಟು ಕುರುಡ, ನಿಕೋದೆಮ ಮತ್ತು ಆಪ್ತ ಶಿಷ್ಯನನ್ನು ಇಲ್ಲಿ ಸಾಂಕೇತಿಕವಾಗಿ ಕಾಣಬಹುದಾಗಿದೆ. ದೇವರ ತಾಯಿಯನ್ನು ಸಾಂಕೇತಿಕವಾಗಿ ಧರ್ಮಸಭೆ ಅಥವಾ ಒಂದು ಸಮುದಾಯವಾಗಿ ಬಿಂಬಿಸಲಾಗಿದೆ. ಯೇಸುಸ್ವಾಮಿ ಮಾತೆ ಮರಿಯಳನ್ನು ಆಪ್ತ ಶಿಷ್ಯನಿಗೆ ಒಪ್ಪಿಸುತ್ತಾರೆ.

2. ಶುಭಸಂದೇಶದಲ್ಲಿ ಅನೇಕ ವಸ್ತುಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ ಉದಾಹರಣೆಗೆ ರೊಟ್ಟಿ, ನೀರು, ಬೆಳಕು, ದೇವಾಲಯ ಮತ್ತು ದ್ರಾಕ್ಷಾರಸ ಇವೆಲ್ಲವೂ ಯೇಸುಸ್ವಾಮಿಯ ಸಂಕೇತವಾಗಿದೆ. ವಿಷಯಗಳ ಕುರಿತು ಮುಂದಿನ ಸಂಚಿಕೆಗಳಲ್ಲಿ ಯೊವಾನ್ನರ ಸಾಂಕೇತಿಕವಾದ ಎಂಬ ವಿಷಯದಲ್ಲಿ ಕಾಣಬಹುದಾಗಿದೆ.

ಸಂತ ಯೊವಾನ್ನರು ಬರೆದ ಶುಭಸಂದೇಶದ ವೈಶಿಷ್ಟ್ಯ ಓದುಗನಲ್ಲಿ ಕುತೂಹಲ ಹೆಚ್ಚಿಸುವುದಾಗಿದೆ. ಇದು ಬೇರೆ ಮೂರು ಶುಭಸಂದೇಶಗಳಿಗಿಂತ ವಿಭಿನ್ನವಾಗಿದೆ. ಇದು ಅನೇಕ ವಿಷಯಗಳನ್ನು ಬಿಟ್ಟು ತನ್ನದೇ ಆದಂತಹ ಪ್ರತ್ಯೇಕಭಾವವನ್ನು ಶುಭಸಂದೇಶದಲ್ಲಿ ಪ್ರಸ್ತುತಪಡಿಸಿದೆ. ಶುಭಸಂದೇಶದಲ್ಲಿ ಯೇಸುವಿನ ಜನನದ ಬಗ್ಗೆ, ಅವರ ದೀಕ್ಷಾಸ್ನಾನದ ಬಗ್ಗೆ ಮತ್ತು ಪ್ರಲೋಭನೆಗಳ ಬಗ್ಗೆ, ಕಡೆಯ ರಾತ್ರಿ ಭೋಜನದ ಬಗ್ಗೆ, ಗೆತ್ಸೆಮನೆ ಮತ್ತು ಸ್ವರ್ಗಾರೋಹಣದ ಬಗ್ಗೆ ಹೇಳುವುದಿಲ್ಲ. ಇವುಗಳ ಯಾವುದೇ ಮಾಹಿತಿ ಶುಭಸಂದೇಶದಲ್ಲಿ ಇಲ್ಲ. ಯೇಸುಸ್ವಾಮಿಯ ಜೀವನದಲ್ಲಿನ ಅತ್ಯಂತ ಪ್ರಮುಖವಾದ ಘಟನೆಗಳನ್ನು ಶುಭಸಂದೇಶ ನಿರ್ಲಕ್ಷಿಸಿದೆ ಎಂದು ಓದುಗರಿಗೆ ಅನ್ನಿಸಬಹುದು. ಆದರೆ ಇದಕ್ಕೆ ಬೇರೆಯದೇ ಕಾರಣಗಳಿವೆ.

ಶುಭಸಂದೇಶದಲ್ಲಿ ಅಸ್ವಸ್ಥತೆ, ದೆವ್ವಗಳ ಉಚ್ಚಾಟನೆ, ದೆವ್ವಗಳು, ಆತ್ಮಗಳ ಬಗ್ಗೆ ಉಲ್ಲೇಖ ಇರುವುದಿಲ್ಲ. ಯೇಸುಸ್ವಾಮಿಯ ಮಹತ್ತರವಾದ ಬೋಧನೆಗಳಲ್ಲಿ ಒಂದಾದ ಸಾಮತಿಗಳು ಸಹ ಶುಭಸಂದೇಶದಲ್ಲಿ ನಾವು ಕಾಣುವುದಿಲ್ಲ. ಸಾಮತಿಗಳು ಬೇರೆ ಮೂರು ಶುಭಸಂದೇಶಗಳ ಆಸ್ತಿಯಾಗಿದೆ ಮತ್ತು ಯೇಸುಸ್ವಾಮಿಯ ಪರಿಣಾಮಕಾರಿ ಬೋಧನೆಯ ಮೂಲತತ್ವವಾಗಿದೆ.

ಯೊವಾನ್ನರ ಶುಭಸಂದೇಶದಲ್ಲಿ ಯೇಸುಸ್ವಾಮಿ ಸದಾ ಒಬ್ಬ ವ್ಯಕ್ತಿಯೊಡನೆ ದೀರ್ಘವಾದ ಸಂಭಾಷಣೆಯಲ್ಲಿ ಇರುತ್ತಾರೆ, ಅಥವಾ ಘೋಷಣೆಗಳನ್ನು ಮಾಡುತ್ತಾರೆ. ಇಲ್ಲಿ ಯೇಸುಸ್ವಾಮಿ ಮಾತ್ರವೇ ಕೇಂದ್ರವಾಗಿರದೆ ಓದುಗನು ಅಥವಾ ಯೇಸುಸ್ವಾಮಿಯ ಜೊತೆ ಇರುವ ವ್ಯಕ್ತಿಯು ಕೇಂದ್ರವಾಗಿರುತ್ತಾನೆ. ಓದುಗನನ್ನು ಮತ್ತು ಬೇರೆ ವ್ಯಕ್ತಿಯನ್ನು ಕೇಂದ್ರೀಕೃತ ಮಾಡುವುದು ಶುಭಸಂದೇಶದ ಒಂದು ವೈಶಿಷ್ಟ್ಯವಾಗಿದೆ.●●●

-ಸಹೋ. ವಿನಯ್‌ಕುಮಾರ್‌

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...