ಇಷ್ಟು ದೂರ ನಡೆದು ಬಂದಿದ್ದೇನೆ
ಹಾದಿಯಲ್ಲಿ ಮೂಡಿದ ಹೆಜ್ಜೆಗಳಷ್ಟೇ ನನ್ನ ಪರಿಚಯ
ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರು ಸಾಲು ಬರೆದರೂ ಕವಿತೆ ಹುಟ್ಟದು
ಗುಡುಗಿನ ಮೊದಲೂ ಮೌನ ನಂತರವೂ...
ಲೋಕದ ಕಿವಿಯಲಿ ಕೊನೆತನಕ ಗುಡುಗಿನ ಸದ್ದಷ್ಟೇ ಉಳಿಯಿತು
ಈಜಲು ವಿಶಾಲ ಸಮುದ್ರವಿದೆಯೆಂದು ಮೀನು ತುಸು ಮೇಲೆದ್ದಿತು
ನೂರಾರು ಗಾವುದ ದೂರದ ಹದ್ದಿನ ಕಣ್ಣಿಗೆ ಅಷ್ಟು ಸಾಕಿತ್ತು
ಮನ್ನಿಸು, ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಬರಿ ಅಕ್ಷರಗಳನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು
ಹಗಲೇ ಇರುಳಿಗೆ ಜಾರಿ ಬಂದಂತಿದೆ
ಕತ್ತಲೆಯಲ್ಲಿ ಸಣ್ಣ ದೀಪಕ್ಕೂ ಉರಿವ ಸೂರ್ಯನಷ್ಟೇ ಜಂಬ
ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು ಈಗಲಾದರೂ ಹುಡುಕು
- ಬಸೂ
No comments:
Post a Comment