Saturday, 12 January 2019

ಕೊನೆ ಮಾತು

ಲೀಲಾವತಿ ದೇವದಾಸ್‌ರವರ ಮತ್ತು ನನ್ನ ಒಡನಾಟ ಕೇವಲ ಒಂದು ವರ್ಷದ್ದು. ನಾವಿಬ್ಬರೂ ಮುಖಾಮುಖಿಯಾಗಿದ್ದೇ ಇಲ್ಲ. ಇಬ್ಬರೂ ಮಾತನಾಡಿದ್ದು ಪೋನ್ ಮೂಲಕ ಮಾತ್ರ. ಹಂಚಿಕೊಂಡಿದ್ದು ಹತ್ತಾರು ಮೆಸೇಜ್‌ಗಳನ್ನು. ಅದೂ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ. ಆದರೂ ಅವರು ನನ್ನ ಬದುಕಿನ ಮೇಲೆ ಅಚ್ಚೊತ್ತಿ ಹೋಗಿರುವ ಪ್ರೇರಣೆ ಮಾತ್ರ ಅಸಾಧಾರಣವಾದುದ್ದು.

’ದನಿ’ ಪ್ರಾರಂಭಿಸಿ ಲೇಖಕರ ಬೇಟೆಯಲ್ಲಿದ್ದ ನನಗೆ ಲೀಲಾವತಿ ದೇವದಾಸ್‌ರವರ ಪರಿಚಯವಾದುದ್ದು ಆತ್ಮೀಯರಾದ ಮರಿಜೋಸೆಫ್‌ರವರ ಮೂಲಕ. ಲೀಲಾವತಿ ದೇವದಾಸ್‌ರವರ ದೂರವಾಣಿಯ ಸಂಖ್ಯೆಯನ್ನು ನನಗೆ ಮೆಸೇಜ್ ಮಾಡಿ, “ಫಾದರ್ ಲೀಲಾವತಿ ದೇವದಾಸ್‌ರವರ ಹತ್ತಿರ ಮಾತಾಡಿ, ಅವರನ್ನು ಕೂಡ ದನಿಗೆ ಬರೆಯಲು ಕೇಳಿಕೊಳ್ಳಿ" ಎಂದು ಸಲಹೆ ಮಾಡಿದರು.

ಲೀಲಾವತಿ ದೇವದಾಸ್‌ರವರಿಗೆ ಪೋನ್ ಮಾಡೋದೋ ಬೇಡ್ವೋ? ಎಂಬ ಗೊಂದಲದಲ್ಲಿ ನಾನಿದ್ದಾಗ, ನನಗೆ ಸಹಾಯ ಮಾಡಿದ್ದು ಒಂದು ಲೇಖನ. ಆ ಲೇಖನದಲ್ಲಿ ಈ ರೀತಿ ಇತ್ತು: “ಉತ್ತಮ ಬರಹಗಾರರನ್ನು ಸಂಪರ್ಕಿಸಲು ಭಯಪಡಬೇಡಿ, ನಿಮ್ಮ ಪತ್ರಿಕೆಗೆ ಅವರನ್ನು ಅತ್ಮೀಯವಾಗಿ ಆಹ್ವಾನಿಸಿ”, ಈ ಒಂದು ಮಾತಿನಿಂದ ಸ್ಫೂರ್ತಿಗೊಂಡು ಲೀಲಾವತಿ  ದೇವದಾಸ್‌ರವರನ್ನು ಅರೆ ಮನಸ್ಸಿನಿಂದಲೇ ಸಂಪರ್ಕಿಸಿದೆ.

ಪೋನ್‌ನಲ್ಲಿ ನನ್ನ ಕಿರು ಪರಿಚಯ ಹೇಳಿ ಲೀಲಾವತಿ ದೇವದಾಸ್‌ರವರೊಂದಿಗೆ ಮಾತನಾಡಲು ಆರಂಭಿಸಿದೆ. ಅವರ ಮಾತುಗಳು ತುಂಬ ಆತ್ಮೀಯವಾಗಿತ್ತು. ಎಷ್ಟೋ ವರ್ಷಗಳಿಂದ ಗೊತ್ತಿದ್ದ ಗೆಳಯನೊಟ್ಟಿಗೆ ಮಾತನಾಡುವ ಧಾಟಿಯಲ್ಲಿ ಬಾಯಿತುಂಬ ಮಾತನಾಡಿದರು. ನನ್ನಲ್ಲಿದ್ದ ಅಳುಕು ಮಾಯವಾಯಿತು. ನಾನು, “ನೀವು ನಮ್ಮ ಪತ್ರಿಕೆಗೆ ಬರೆಯಬೇಕು” ಎಂದು ಕೇಳಿಗೊಂಡಾಗ, “ತುಂಬಾ ಸಂತೋಷ, ಬರಿತೀನಿ ಫಾದರ್” ಎಂದು ಹೇಳಿದರು. ಅವರ ಧನಾತ್ಮಕ ಉತ್ತರದಿಂದ ಖುಷಿಯಾದರೂ, ಅವರು ಬರೀತಾರಾ? ಅವರಿಗೆ ಬರೆದಿದ್ದನ್ನು ಟೈಪು  ಮಾಡಿ ಇಮೇಲ್ ಮಾಡಲಿಕ್ಕೆ ಆಗುತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ನನ್ನ ಮನಸ್ಸಿನ ಸುಳಿಯಲ್ಲಿ ಹುಟ್ಟಿಕೊಂಡವು. 

ಮಾರನೆಯ ದಿನ ನನ್ನ ಇಮೇಲ್ ಬಾಕ್ಸ್‌ನಲ್ಲಿ ಲೀಲಾವತಿ ದೇವದಾಸ್‌ರವರಿಂದ ಒಂದು ಲೇಖನ ಬಂದಿತ್ತು. ನನಗೆ ಒಮ್ಮೆಲೇ ಅಶ್ಚರ್ಯವಾಯಿತು. ಅವರ promptness ಮತ್ತು commitment ಕಂಡು ಬೆರಗಾದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳ ಬಗ್ಗೆ ಕಂಪ್ಯೂಟರುಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಎಷ್ಟೋ  ಜನರು ನಮ್ಮಲ್ಲಿರುವಾಗ, ತನ್ನ ಹಿರಿ ವಯಸ್ಸಿನಲ್ಲೂ ಕಂಪ್ಯೂಟರುಗಳ ಜತೆ ಸಲೀಸಾಗಿ ಕೆಲಸ ಮಾಡಿಕೊಳ್ಳುತ್ತಿದ್ದ ಅವರ ಜಾಣ್ಮೆಯನ್ನು ಕಂಡು ಮೂಕವಿಸ್ಮಿತನಾದೆ.

ನಮ್ಮ ಪತ್ರಿಕೆಯು ಪ್ರತಿ ತಿಂಗಳು ೫ನೇ ತಾರೀಖಿಗೆ ಬಿಡುಗಡೆಗೊಂಡರೆ, ಮರುದಿನವೇ ಲೀಲಾವತಿ ದೇವದಾಸ್‌ರವರ ಮುಂದಿನ ಲೇಖನ ನನ್ನ ಮಿನ್ನಂಚೆಯ ಪೆಟ್ಟಿಗೆಯಲ್ಲಿ ಬಂದು ಬೀಳುತ್ತಿತ್ತು. ಲೇಖನವನ್ನು ಕಳುಹಿಸಿ, ”ಫಾದರ್ ಲೇಖನವನ್ನು ಕಳುಹಿಸಿದ್ದೀನಿ… ನಿಮಗೆ ಸಿಕ್ಕಿತೇ? ತಿಳಿಸಿ” ಎಂದು ಒಡನೆ ಮೆಸೇಜ್ ಮಾಡುತ್ತಿದ್ದರು. ಅವರ ಮೆಸ್ಸೇಜ್‌ಗೆ ಪ್ರತ್ಯುತ್ತರ ನೀಡಲು ತಡ ಮಾಡಿದರೆ ಪುನಃ ಸಂದೇಶದ ಮೂಲಕ ನನಗೆ ನೆನಪಿಸುತ್ತಿದ್ದರು.

ಇತ್ತೀಚೆಗೆ ದನಿ ಮಾಧ್ಯಮ ಮನೆಯಿಂದ ಬೈಬಲ್ ಆಪ್ ಮಾಡ ಬೇಕೆಂದು ಯೋಚಿಸಿ, ಲೀಲಾವತಿ ದೇವದಾಸ್‌ರವರನ್ನು, “ನೀವು ಸಂತರ ಮತ್ತು ಬೈಬಲ್‌ನಲ್ಲಿರುವ ಕೆಲ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸುವಂತಹ ಲೇಖನಗಳನ್ನು ಬರದುಕೊಡುವಿರಾ?” ಎಂದು ನಾನು ಕೇಳಿಕೊಂಡಾಗ, ಮನಪೂರ್ತಿಯಾಗಿ ಒಪ್ಪಿಕೊಂಡು, ಸುಮಾರು ಐದು ಸಂತರ ಮತ್ತು ಬೈಬಲಿನಲ್ಲಿ ಕಂಡು ಬರುವ ವಿಶಿಷ್ಟ ವ್ಯಕ್ತಿಗಳ ಪರಿಚಯದ ಲೇಖನಗಳನ್ನು ಬರೆದುಕೊಟ್ಟಿದ್ದರು. ಅದರೆ ದೇವರ ಚಿತ್ತ ಏನಿತ್ತೋ ನಮ್ಮ ಬೈಬಲ್ ಆಪ್ ಬಿಡುಗಡೆಗೊಳ್ಳುವ ಮುಂಚೆಯೇ ಅವರು ನಮ್ಮಿಂದ ದೂರ ಹೋಗಿಬಿಟ್ಟರು.

ಕೊನೆಗೆ ಇಷ್ಟು ಮಾತ್ರ ಹೇಳಬಲ್ಲೆ: ಸಮಾಧಿಯ ಬಳಿ ಹೋಗಿ ಯೇಸುವನ್ನು ಹುಡುಕುತ್ತಿರಬೇಕಾದರೆ, ದೇವದೂತರು ಹೇಳುತ್ತಾರೆ- ಸತ್ತವರ ಮಧ್ಯೆ ಜೀವಿಸುವವರನ್ನು ಹುಡುಕುವುದೇಕೆ? ಹೌದು, ನಮ್ಮ ಅತ್ಮೀಯರು ಸಮಾಧಿಯಲ್ಲಿ ಸಿಗುವುದಿಲ್ಲ. ಅವರು ಜೀವಿಸುತ್ತಿದ್ದಾರೆ. ಅವರು ಎಲ್ಲಿ ಬದುಕಿದ್ದರೋ ಅಲ್ಲಿಯೇ ಸಿಗುತ್ತಾರೆ. ಅವರು ಜೀವಕಾಳಜಿಯಲ್ಲಿ, ಸೇವೆಯಲ್ಲಿ, ಸಾಹಿತ್ಯದಲ್ಲಿ ಬದುಕಿದವರು. ಅಲ್ಲಿ ನಮ್ಮ ಲೀಲಾವತಿಯವರನ್ನು ಹುಡುಕೋಣ. ಖಂಡಿತ ಅಲ್ಲಿ ನಮಗೆ ಅವರು ಸಿಗುವರು. ಅಷ್ಟೇ ಮಾತ್ರವಲ್ಲ ಅವರು ಬದುಕಿದ ಬದುಕನ್ನು ನಮ್ಮದಾಗಿಸಿಕೊಳ್ಳುತ್ತಾ ಅವರನ್ನು ಅಮರರಾಗಿಸೋಣ.

ಲೀಲಾವತಿ ದೇವದಾಸ್‌ರವರೇ, ಮರೆಯದೆ ನಿಮ್ಮ ಲೇಖನಗಳನ್ನು ನನ್ನ ಇಮೇಲ್ ಬಾಕ್ಸಿಗೆ ಕಳುಹಿಸಿ, “ಫಾದರ್ ಲೇಖನವನ್ನು ಕಳುಹಿಸಿದ್ದೀನಿ… ನಿಮಗೆ ಸಿಕ್ಕಿತೇ? ತಿಳಿಸಿ” ಎಂದು ಮೆಸ್ಸೇಜ್ ಮಾಡುವುದನ್ನು ಮಾತ್ರ ಮರೆಯಬೇಡಿ.

-ಜೋವಿ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...