ಮೂರು ರಾಯರ ಹಬ್ಬಕ್ಕೆ ತಾಯಿ ಧರ್ಮಸಭೆ ವಿಶೇಷವಾದ ಮಹತ್ವ ನೀಡುತ್ತದೆ. ಕಂದ ಯೇಸುವನ್ನು ನೋಡಿ ನಮಿಸಲು ಬಂದ ಮೂರು ಜ್ಞಾನಿಗಳು ಬಾಲಯೇಸುವಿಗೆ ಚಿನ್ನ ಧೂಪ ಹಾಗೂ ಪರಿಮಳದ್ರವ್ಯಗಳನ್ನು ಅರ್ಪಿಸುತ್ತಾರೆ. ಇದರ ಪ್ರತೀಕವಾಗಿ ಪ್ರತಿವರ್ಷ ಕ್ರಿಸ್ಮಸ್ ಹಬ್ಬದ ನಂತರ ಪ್ರಪಂಚದಾದ್ಯಂತ ಮೂರು ರಾಯರ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇನ್ನು ನಮ್ಮ ಊರಿನಲ್ಲಿ ಆಚರಿಸುವ ಮೂರು ರಾಯರ ಹಬ್ಬ ನನ್ನ ಮಟ್ಟಿಗೆ ವಿಭಿನ್ನವೂ ವಿಶಿಷ್ಟವೂ ಆಗಿದೆ.
ನಮ್ಮ ಊರಿನ ಮೂರು ರಾಯರ ಹಬ್ಬ ಮುಂಜಾನೆಯ ಬಲಿಪೂಜೆಯಿಂದ ಪ್ರಾರಂಭವಾಗಿ ಮಧ್ಯಾಹ್ನದ ಸಾಂಗ್ಯಗಳಲ್ಲಿ ಕೊನೆಗೊಳ್ಳುತ್ತದೆ. ಈ ಸಾಂಗ್ಯಗಳು ಕರ್ನಾಟಕದಲ್ಲಿ ಮಾತ್ರವೇ ಕಾಣಸಿಗುತ್ತವೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಈ ರೀತಿಯ ಸಾಂಗ್ಯಗಳನ್ನು ಕ್ರೈಸ್ತರು ಆಚರಿಸುವುದು ನಾನು ಬೇರೆಲ್ಲೂ ನೋಡಿಲ್ಲ. ಈ ಸಾ೦ಗ್ಯಗಳ ವೈಶಿಷ್ಟ್ಯ ಎಂದರೆ ಇವು ದೇಸೀ ರಂಗು ತುಂಬಿಕೊಂಡಿರುವುದು. ಉದಾಹರಣೆಗೆ, ನಮ್ಮ ಹಿಂದೂ ಬಾಂಧವರು ಸಂಕ್ರಾಂತಿ ಆಚರಿಸುವುದನ್ನು ಗಮನಿಸಿದರೆ ಅಲ್ಲಿ ಅವರು ಎತ್ತುಗಳನ್ನು ಹಾಗು ಇನ್ನಿತರ ಜಾನುವಾರುಗಳನ್ನು ಸಿಂಗರಿಸುವುದು ಕಾಣಸಿಗುತ್ತದೆ. ಹಾಗೆಯೇ, ನಮ್ಮೂರಿನಲ್ಲೂ, ಮೂರು ರಾಯರ ಹಬ್ಬದ ದಿನ ಮನೆಯಲ್ಲಿ ಸಾಕಿರುವ ಜಾನುವಾರುಗಳನ್ನು ಸಿಂಗರಿಸಿ ಚರ್ಚಿನ ಮೈದಾನಕ್ಕೆ ಮಂತ್ರಿಸಲು ಕರೆದೊಯ್ಯುತ್ತಾರೆ. ಇದಲ್ಲದೆ, ಜಾನುವಾರುಗಳ ಜೊತೆ ಜೊತೆಗೆ, ನಮ್ಮೂರಿನ ಜನ ಅವರವರ ವಾಹನಗಳನ್ನೂ ಸಹ ಮಂತ್ರಿಸಲೆಂದು ಚರ್ಚಿನ ಮೈದಾನಕ್ಕೆ ಒಯ್ಯುತ್ತಾರೆ. ಇದೊಂದು ರೀತಿ ದಸರ ಹಾಗು ಸಂಕ್ರಾಂತಿ ಹಬ್ಬದ ಜುಗಲ್ ಬಂದಿ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಆಚರಣೆಯೆಂದರೆ, ಗುರುಗಳು ವಾಹನಗಳನ್ನು ಹಾಗು ಜಾನುವಾರುಗಳನ್ನು ಮಂತ್ರಿಸಿ ಹೋದ ನಂತರ ಊರಿನ ಮಕ್ಕಳು, ಯುವಕರು ಸೇರಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ನನ್ನ ಬಾಲ್ಯದಲ್ಲಿ ಬಹಳಷ್ಟು ವಿಜೃಂಭಣೆಯಿಂದ ಆಚರಿಸುತ್ತಿದ್ದ ಈ ಹೋಳಿ ಹಬ್ಬ ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಈ ಹೋಳಿ ಆಚರಣೆಯ ಹಾಸ್ಯಾತ್ಮಕ ಅಂಶವೆಂದರೆ ನಾವು ಬಾಲ್ಯದಲ್ಲಿ ಒಬ್ಬರ ಮೇಲೊಬ್ಬರು ಹೋಳಿ ಎರಚುವಾಗ ಸೇಡು ತೀರಿಸಿಕೊಳ್ಳುತ್ತಿದ್ದ ರೀತಿಯಲ್ಲಿ ಇದನ್ನು ಆಚರಿಸಲಾಗುತ್ತಿತ್ತು.
ಇಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದ ರೀತಿಯೇ ವಿಭಿನ್ನವಾಗಿತ್ತು. ನಮಗೆ ಕೋಪವಿದ್ದವರ ಮೇಲೆ ನಾವು ಹೋಳಿ ನೀರಿನ ಜೊತೆ ಸಗಣಿಯೋ ಅಥವಾ ಗಂಜಲವನ್ನೋ ಕಲಸಿ, ಅವರ ಮೇಲೆ ಎರಚುತಿದ್ದೆವು. ಈ ಕೆಲಸ ನಮ್ಮ ಕೇರಿಯ ಎಲ್ಲಾ ಮಕ್ಕಳು ಮಾಡುತಿದ್ದುದು ಸರ್ವೇಸಾಮಾನ್ಯವಾಗಿತ್ತು. ಈ ಸೇಡು ತೀರಿಸಿಕೊಳ್ಳುವ ಭರದಲ್ಲಿ ನನ್ನ ಮೇಲೂ ಸಾಕಷ್ಟು ಬಾರಿ ಸಗಣಿ ನೀರು ಬಿದ್ದಿದ್ದಿದೆ. ಇದೆಲ್ಲಾ ಎಂದೂ ಮರೆಯದ ಅಚ್ಚಳಿಯದ ನೆನಪುಗಳು.
ಮತ್ತೊಂದು ಆಚರಣೆ ಎಂದರೆ, ತಮಟೆ ಬಾರಿಸುವವರನ್ನು ಕರೆತಂದು ಊರೆಲ್ಲಾ ಸುತ್ತಿಸಿ, ಮನೆಮನೆಗೂ ತಮಟೆ ಬಾರಿಸಿಕೊಂಡು ಹೋಗಿ, ಹಿರೀಕರು ಮನೆಯಲ್ಲಿನ ಪಾತ್ರೆ ತಣಿಗೆಗಳಲ್ಲಿ ಹಾಕಿರುವ ರಾಗಿ ಗೋಧಿಯ ಮಿರಮಿರ ಮಿಂಚುವ ಹಳದಿ ಬಣ್ಣದ ಮೊಳಕೆಪೈರುಗಳನ್ನು ತೆಗೆದು ನೀರಿನಲ್ಲಿ ಬಿಡಲು ಹೇಳಿ, ತಮಟೆ ಬಾರಿಸುವವರಿಗೆ ಐದೋ ಹತ್ತೋ ಕೊಡುತ್ತಿದ್ದ ವಾಡಿಕೆ.
ಈ ಎಲ್ಲಾ ಆಚರಣೆಗಳನ್ನು ನೋಡಿಕೊಂಡು, ಆಚರಿಸಿಕೊಂಡು ಬೆಳೆದ ನನಗೆ, ಇತ್ತೀಚಿನ ಬೆಳವಣಿಗೆಗಳು ಕಳವಳವನ್ನುಂಟು ಮಾಡುತ್ತಿವೆ. ಆಗ ಇದ್ದಷ್ಟು ಸಂಭ್ರಮ ಸಡಗರ ಕ್ರಮೇಣ ಕಡಿಮೆಯಾಗಿರುವುದು ಈಗಿನ ಆಚರಣೆಗಳನ್ನು ಗಮನಿಸಿದರೆ ಮೆಲ್ನೋಟಕ್ಕೆ ಸಾಬೀತಾಗುತ್ತದೆ. ಮು೦ದಿನ ದಿನಗಳಲ್ಲಿ ಕೇವಲ ಮೂರುರಾಯರ ಹಬ್ಬ ಮಾತ್ರ ಉಳಿದುಕೊಂಡು, ನಮ್ಮ ಸಾಂಸ್ಕೃತಿಕ ಆಚರಣೆಗಳು ನಶಿಸಿಹೋಗುವುದಂತೂ ಸತ್ಯ. ●●●
-ಅಜಯ್ ಫ್ರಾನ್ಸಿಸ್
No comments:
Post a Comment