ಮೊನ್ನೆ ತಂಗಿ ಪೋನ್ ಮಾಡಿ, “ಅಪ್ಪನ ಬ್ಯಾಂಕ್ನವರು ಕರ್ದೋರೆ, ಸುಮಾರು ಎರಡು ಲಕ್ಷ ರೂಪಾಯಿ ಸಾಲಮನ್ನಾ ಮಾಡುತ್ತಾರಂತೆ” ಎಂದು ಹೇಳಿದಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಗಿತ್ತು. ಒಂದಾದ ಮೇಲೊಂದು, ನಿರಂತರ ಬೆಳೆಗಳ ವೈಫಲ್ಯದಿಂದ ಮತ್ತು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅನುಭವಿಸಿದ ನಷ್ಟದಿಂದ, ಕೃಷಿ ಮುಂದುವರಿಕೆಗೆ ಬ್ಯಾಂಕುಗಳಿಂದ ಮತ್ತು ಇತರರಿಂದ ಕೈಸಾಲ ಪಡೆಯುವ ಹೀನಾಯ ಸ್ಥಿತಿ ತಲುಪಿ, ಸಾಲದ ನಂತರ ಸಾಲ ಪಡೆದು ಕೊನೆಗೆ ಸಾಲದ ಮೊತ್ತ ದೊಡ್ಡದಾಗಿ, ತೀರಿಸಲು ಸಾಧ್ಯವಾಗದ ಪರಿಸ್ಥಿತಿಗೆ ತಲಪಿದಾಗ, ಅಪ್ಪ ಇದ್ದ ಜಮೀನಿನ ಸ್ವಲ್ಪ ಅಂದರೆ ಒಂದೂವರೆ ಎಕರೆ ಮಾರಲು ಸಿದ್ಧನಾಗಿದ್ದ. ಹೊಲ ಮಾರಿದರೂ ಸಂಪೂರ್ಣ ಸಾಲ ತೀರಿಸಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಬ್ಯಾಂಕಿನವರು ಕರೆದು ಸಾಲಮನ್ನಾವಾಗಿದೆ ಎಂದು ಅಪ್ಪನಿಗೆ ಹೇಳಿದ ವಿಷಯವನ್ನು ತಂಗಿಯಿಂದ ಕೇಳಿ ಹೊಟ್ಟೆಗೆ ಹಾಲು ಕುಡಿದಷ್ಟು ಖುಷಿಯಾಗಿತ್ತು.
●●●
ನಾಲ್ಕು ವರ್ಷಗಳ ಹಿಂದೆ, ನನ್ನ ವಿದ್ಯಾರ್ಥಿ ನೊಬಲ್ ರಾಜನ ತಂದೆ, ಮಗಳ ಮದುವೆ ಮತ್ತು ಕೃಷಿಗೆಂದು ಊರ ಗೌಡರಿಂದ ನಲವತ್ತು ಸಾವಿರ ಸಾಲ ಪಡೆದಿದ್ದ. ನಿರಂತರ ಬೆಳೆಯ ವೈಫಲ್ಯದಿಂದ ಬಡ್ಡಿಗೆ ಚಕ್ರಬಡ್ಡಿ ಸೇರಿ ಸಾಲದ ಮೊತ್ತ ಇಮ್ಮಡಿಯಾಗಿತ್ತು. ಈ ಬಾರಿ ಮಳೆ, ಬಿಸಿಲು, ಚಳಿ ಎನ್ನದೆ ಕೆಲಸ ಮಾಡಿ ಬೆಳೆದ ಹತ್ತಿ ಬೆಳೆ ಗೌಡನ ಸಾಲಕ್ಕೆ ಜಮವಾಗಿ, ಬರಿಕೈಯಲ್ಲಿರುವ ನೊಬಲ್ಲನ ತಂದೆ, ಮಗನ ಕಾಲೇಜ್ ಶುಲ್ಕವನ್ನು ಭರಿಸಲು ಹರಸಾಹಸ ಪಡುತ್ತಿದ್ದಾನೆ. ಅಷ್ಟೇ ಅಲ್ಲ ವಾಸಿಸುವುದಕ್ಕೆ ಒಂದು ಸೂರು ಕಟ್ಟಿಕೊಳ್ಳಲು ಹೆಣೆಗಾಡುತ್ತಿರುವ ಈ ಮನುಷ್ಯ ನೊಬಲ್ ರಾಜನ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಕಲು ನಿರ್ಧರಿಸಿದ್ದಾನೆ.
●●●
ಹೌದು , ರೈತರ ಸಾಲಮನ್ನಾದ ಬಗ್ಗೆ ಈ ದಿನಗಳಲ್ಲಿ ಬಹಳಷ್ಟು ಕೇಳುತ್ತಿದ್ದೇವೆ. ಮೂರು ರಾಜ್ಯಗಳಲ್ಲಿ ಈಗಷ್ಟೇ ರಚನೆಗೊಂಡ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆ. ಕರ್ನಾಟಕದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ರೈತರ ಸಾಲಮನ್ನಾ ಒಂದು ಪ್ರಮುಖ ಚುನಾವಣಾ ಆಶ್ವಾಸನೆಯಾಗಿತ್ತು. ಆಶ್ವಾಸನೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸುಮಾರು ೩೪೦೦ ಕೋಟಿ ಅಂದರೆ ಒಂದು ಕುಟುಂಬಕ್ಕೆ ೨ ಲಕ್ಷ ಮಿತಿಯಂತೆ ರೈತ ಸಾಲಮನ್ನಾ ಘೋಷಿಸಿದರು. ರಾಜ್ಯದ ಹಲವು ಕಡೆ ಈಗಾಗಲೇ ಅನೇಕ ರೈತರಿಗೆ ಋಣಮುಕ್ತ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ. ೨೦೧೭ ರಿಂದ ಸಾಲಮನ್ನಾ ಘೋಷಿಸಿದ ರಾಜ್ಯಗಳಲ್ಲಿ ಕರ್ನಾಟಕವು ಐದನೆಯ ರಾಜ್ಯವಾಗಿದೆ. ಇದಕ್ಕೆ ಮುಂಚೆ ಉತ್ತರಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವು ರೈತರ ಸಾಲಮನ್ನಾ ಮಾಡಿದ್ದವು. ಮೊನ್ನೆ ನಮ್ಮ ದೇಶದ ಪ್ರಧಾನಮಂತ್ರಿಯವರು ಕರ್ನಾಟಕದ ರೈತಸಾಲಮನ್ನಾದ ಬಗ್ಗೆ ಪ್ರಸ್ತಾಪಿಸುತ್ತಾ ’ಕ್ರಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರೈತರಿಗೆ ಲಾಲಿಪಪ್ ಕೊಡುತ್ತಿವೆ ಅಷ್ಟೇ.. ಅವು ಲಾಲಿಪಪ್ ಕಂಪನಿಗಳು’ ಎಂದು ಟೀಕಿಸಿದ್ದಾರೆ. ರೈತರ ಬಗ್ಗೆ ಸ್ವಲ್ಪವೂ ಕನಿಕರ ತೋರದ ಈ ಮನುಷ್ಯನ ಮಾತುಗಳು ಬರೀ ಟೀಕೆಟಿಪ್ಪಣಿಗಳಿಗೆ ಸೀಮಿತವಾಗಿಬಿಟ್ಟಿರುವುದು ದೇಶದ ದುರಂತವೇ ಸರಿ.
ಕೃಷಿ ಸಾಲಮನ್ನಾ ಎನ್ನುವುದು ಚುನಾವಣೆಯ ಗಿಮಿಕ್ ಅಥವಾ ಮತಬೇಟೆಯ ಅಸ್ತ್ರ ಆಗಿಬಿಟ್ಟಿದೆ. ಈ ಮಾತಿಗೆ ಯಾವ ಪಕ್ಷಗಳು ಹೊರತಲ್ಲ. ಎಲ್ಲ ಪಕ್ಷಗಳೂ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ. ಯಾವ ಪಕ್ಷವೂ ರೈತರ ಮೂಲ ಸಮಸ್ಯೆಗಳ ಆಳಕ್ಕೆ ಇಳಿದು ನೋಡದೆ, ಸಾಲಮನ್ನಾವೆಂಬ ತೋರಿಕೆಯ ಯೋಜನೆಗಳಲ್ಲೇ ಮಗ್ನವಾಗಿಬಿಟ್ಟಿವೆ. ಹೌದು ಅತಂತ್ರ ಸ್ಥಿತಿಯಲ್ಲಿರುವ ಲಕ್ಷಾಂತರ ಬಡ ರೈತರಿಗೆ ಸಾಲಮನ್ನವು ಕನಿಷ್ಥ ಮಟ್ಟದಲ್ಲಾದರೂ ಒಂದು ರೀತಿಯ ಪರಿಹಾರ ಕೊಡಬಹುದು. ಅದು ರೈತರ ಸಮಸ್ಯೆಗಳಿಗೆ ಇದೊಂದು ರೀತಿಯ ಪ್ರಥಮಚಿಕಿತ್ಸೆ ಮಾತ್ರ. ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಾಲಮನ್ನಾ ಎಂಬ ಜನಪ್ರಿಯ ಘೋಷಣೆಗಳು ಕಿಂಚಿತ್ತೂ ಸಹಾಯಕವಾಗುವುದಿಲ್ಲ ಎನ್ನುವುದು ಪ್ರಜ್ಞಾವಂತರ ಗ್ರಹಿಕೆ. ಸಾಲಮನ್ನಾ ರೈತರ ಮೂಲ ಸಮಸ್ಯೆಗಳ ಪರಿಹಾರವಂತೂ ಖಂಡಿತ ಅಲ್ಲ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ರೈತರ ಸಾಲಮನ್ನಾ ಎಂಬ ಸಂಕುಚಿತ ಚೌಕಟ್ಟಿನಿಂದ ಹೊರ ಬಂದು ಸಮಸ್ಯೆಗಳ ವಿಸ್ತಾರ ಮತ್ತು ಆಳಗಳನ್ನು ಅಳೆದು ಸಮಸ್ಯೆಗಳ ಪರಿಹಾರಕ್ಕೆ ಸಂಕಲ್ಪ ಹೊತ್ತು ದುಡಿಯಬೇಕು.
●●●
ಸಾಲಮನ್ನಾದಿಂದ ಯಾರಿಗೆ ಉಪಯೋಗ?
ಮೊದಲನೆಯದಾಗಿ ಸಾಲಮನ್ನಾ ಪಡೆದವರಿಗೆ ಬ್ಯಾಂಕುಗಳು ಮುಂದಿನ ಬೆಳೆಗಾಗಿ ಹೊಸ ಸಾಲ ನೀಡಲು ಹಿಂಜರಿಯುತ್ತವೆ. ಹೊಸ ಸಾಲ ಪಡೆಯಲಾಗದೆ ರೈತರು ಹತಾಶರಾಗಿ ಪುನಃ ಕೃಷಿ ಮತ್ತು ಇತರ ಅಗತ್ಯಗಳಿಗೆ ಬಡ್ಡಿ ವ್ಯವಹಾರ ಮಾಡುವವರನ್ನು ಹುಡುಕುತ್ತಾರೆ. ಇನ್ನೊಂದೆಡೆ ಸಾಲಮನ್ನಾ ಯೋಜನೆಗಳು ಸಾಲ ಮರುಪಾವತಿಗೆ ಶಕ್ತರಾದ ರೈತರಿಗೆ ಕೂಡ ಸಾಲ ಮರುಪಾವತಿಯ ಕಂತು ಕಟ್ಟದಂತೆ ಪ್ರಚೋದಿಸುತ್ತವೆ. ಮತ್ತೊಂದೆಡೆ, ಸಾಲಮನ್ನಾ ಯೋಜನೆಗಳು ಪದೇ ಪದೆ ಜಾರಿಯಾಗುವುದರಿಂದ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿದ್ದವರು ಕ್ಲುಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡದಿದ್ದಿದ್ದರೆ ಸಾಲಮನ್ನಾದ ಪ್ರಯೋಜನವನ್ನು ತಾವೂ ಪಡೆಯಬಹುದಿತ್ತು ಎನ್ನುವ ಅತೃಪ್ತಿ ಸ್ವಾಭಾವಿಕವಾಗಿಯೇ ರೈತರಲ್ಲಿ ಉದ್ಭವಿಸುತ್ತದೆ.
ಇನ್ನೊಂದಡೆ, ಸರ್ಕಾರಗಳು ರಾಷ್ಟ್ರೀಕೃತ ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ ಸಾಲವನ್ನು ಮನ್ನಾ ಮಾಡುತ್ತಿವೆ, ವಾಸ್ತವದಲ್ಲಿ ರೈತರು ಹೆಚ್ಚು ಸಾಲ ಪಡೆಯುವುದು ಕೈಸಾಲದಾತರಿಂದ. ಕೈಸಾಲ ಮತ್ತು ಚಿನ್ನವನ್ನು ಅಡವಿಟ್ಟು ಮಾಡಿರುವ ಸಾಲಗಳು, ಸಾಲಮನ್ನಾ ಯೋಜನೆಗೆ ಒಳಪಡುವುದಿಲ್ಲ. ಅನೇಕ ಅಧ್ಯಯನಗಳ ಪ್ರಕಾರ ಸುಮಾರು ೮೫% ಸಣ್ಣ ರೈತರು ಸಾಲ ಪಡೆಯುವುದು ಅನಧಿಕೃತ ಮೂಲಗಳಿಂದಾದುದರಿಂದ ಸಾಲಮನ್ನಾದಿಂದ ಸಣ್ಣ ರೈತರಿಗೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಸಾಲಮನ್ನಾದಿಂದ ಪ್ರಯೋಜನಕ್ಕೆ ಒಳಪಟ್ಟವರು ಕೇವಲ ಸ್ಥಿತಿವಂತ ರೈತರೇ ವಿನಃ ಬಡ ರೈತರಲ್ಲ ಎಂಬುವುದು ಸಾಬೀತಾಗಿದೆ. ಕೆಲವು ಅಧ್ಯಯನಗಳು, ಸಾಲಮನ್ನಾದಿಂದ ರೈತರಲ್ಲಿ ದುಂದು ವೆಚ್ಚ ಹೆಚ್ಚಾಗಿ ಹೇಗೆ ಉತ್ಪನ್ನತೆ ಇಳಿಕೆಯಾಗಿದೆ ಎಂಬುದು ನೈಜ ಅಂಕಿಅಂಶಗಳ ಮೂಲಕ ದೃಢಪಡಿಸಿವೆ. ಸಾಲಮನ್ನಾವೆಂಬ ಯೋಜನೆಗಳು ದೇಶದ ಅರ್ಥಿಕಸ್ಥಿತಿಯನ್ನು ಹದಗೆಡಿಸುತ್ತಿವೆ. ಸಾಲಮರುಪಾವತಿಯ ಶಿಸ್ತನ್ನೇ ಹಾಳುಮಾಡುತ್ತಿದೆ. ಸರ್ಕಾರದ ಇತರ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಹಣದ ಕೊರತೆಯನ್ನು ಹೆಚ್ಚಿಸುತ್ತಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾದ ಬ್ಯಾಂಕಿಂಗ್ ರಂಗ ದಿನೇ ದಿನೆ ಹೆಚ್ಚುತ್ತಿರುವ ವಸೂಲಾಗದ ಸಾಲ ಭಾರದಿಂದ ಸೊರಗುತ್ತಿವೆ.
ಸಾಲಮನ್ನಾದಿಂದ ರೈತನಿಗೆ ಆಗುವ ಅನುಕೂಲಗಳೇನು ಎಂಬ ಪ್ರಶ್ನೆ ಕೇಳಿಕೊಂಡರೆ: ಕೆಲ ರೈತರ ಸಾಲದ ಹೊರೆ ಸ್ಪಲ್ಪ ಕಡಿಮೆಯಾಗಿರಬಹುದು, ರೈತರ ಆತ್ಮಹತ್ಯೆಗಳು ಇಳಿಕೆ ಆಗಬಹುದು, ಅನಧಿಕೃತ ಲೇವಾದೇವಿಯವನಿಂದ ಅಧಿಕ ಬಡ್ಡಿ ದರಗಳಿಗೆ ಸಾಲವನ್ನು ಪಡೆದು ವಿಷಚಕ್ರದಲ್ಲಿ ಸಿಕ್ಕಿಬೀಳುವುದನ್ನು ತಪ್ಪಿಸಿ ರೈತರನ್ನು ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಉತ್ತೇಜಿಸಬಹುದು. ಕೃಷಿಯಲ್ಲಿ ನಷ್ಟ ಅನುಭವಿಸಿ ಕೃಷಿವೃತ್ತಿಯನ್ನು ತ್ಯಜಿಸುವುದರಿಂದ ಉಂಟಾಗುವ ಅಹಾರ ಕೊರತೆಯ ಗಂಡಾಂತರದಿಂದ ಪಾರಾಗಲು ರೈತರನ್ನು ಕೃಷಿಯಲ್ಲೇ ಮುಂದುವರಿಸಲು ಪ್ರೇರೇಪಿಸಬಹುದು. ಇಷ್ಟೆಲ್ಲಾ ಅನುಕೂಲಗಳಿದ್ದರೂ ಸಾಲಮನ್ನಾ ಎನ್ನುವುದು ಕ್ಷಣಿಕ ಪರಿಹಾರ ಮಾತ್ರ.
ರೈತರನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿಸುವತ್ತ ...
ಈ ಕಾರಣಗಳಿಂದ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ದಲ್ಲಾಳಿಗಳ ಹಾವಳಿಯಿಂದ ರೈತರನ್ನು ರಕ್ಷಿಸಿ, ರೈತರು ನೇರವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಿ ಇ-ಮಂಡಿಗಳ ಉಪಯೋಗಗಳನ್ನು ವಿಸ್ತರಿಸಬೇಕು.
ಬೇಗನೆ ಕ್ಷಯಿಸುವ ಬೆಳೆಗಳ ಶೇಖರಣೆಗೆ ಗೋದಾಮು ಮತ್ತು ಸಂಸ್ಕರಣ ಘಟಗಳನ್ನು ಹೆಚ್ಚಿಸಬೇಕು. ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕು. ವಿದ್ಯುತ್ ಒದಗಿಸಲು ಸರ್ವ ಪ್ರಯತ್ನ ಮಾಡಬೇಕು. ರೈತರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ನೀಡಿ ಸುಧಾರಿತ ಕೃಷಿಗೆ ಒತ್ತು ನೀಡಬೇಕು. ರೈತರ ಪ್ರತಿಯೊಂದು ಬೆಳೆಗೆ ವಿಮೆ ಒದಗಿಸುವ ಸರ್ವ ಪ್ರಯತ್ನ ಮಾಡಬೇಕು. ಸರ್ಕಾರಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಶಿಕ್ಷಣ ರೈತರಿಗೆ ಪರಿಣಾಮಕಾರಿಯಾಗಿ ನೀಡಬೇಕು. ಹೀಗೆ, ನಮ್ಮ ಸರ್ಕಾರಗಳು ರೈತರನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿಸುವತ್ತ ಯೋಚಿಸಿದರೆ ಮಾತ್ರವೇ ರೈತರ ಉದ್ಧಾರ ಸಾಧ್ಯವಾದೀತು.
●●●
ಬೇಗನೆ ಕ್ಷಯಿಸುವ ಬೆಳೆಗಳ ಶೇಖರಣೆಗೆ ಗೋದಾಮು ಮತ್ತು ಸಂಸ್ಕರಣ ಘಟಗಳನ್ನು ಹೆಚ್ಚಿಸಬೇಕು. ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕು. ವಿದ್ಯುತ್ ಒದಗಿಸಲು ಸರ್ವ ಪ್ರಯತ್ನ ಮಾಡಬೇಕು. ರೈತರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ನೀಡಿ ಸುಧಾರಿತ ಕೃಷಿಗೆ ಒತ್ತು ನೀಡಬೇಕು. ರೈತರ ಪ್ರತಿಯೊಂದು ಬೆಳೆಗೆ ವಿಮೆ ಒದಗಿಸುವ ಸರ್ವ ಪ್ರಯತ್ನ ಮಾಡಬೇಕು. ಸರ್ಕಾರಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಶಿಕ್ಷಣ ರೈತರಿಗೆ ಪರಿಣಾಮಕಾರಿಯಾಗಿ ನೀಡಬೇಕು. ಹೀಗೆ, ನಮ್ಮ ಸರ್ಕಾರಗಳು ರೈತರನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿಸುವತ್ತ ಯೋಚಿಸಿದರೆ ಮಾತ್ರವೇ ರೈತರ ಉದ್ಧಾರ ಸಾಧ್ಯವಾದೀತು.
●●●
No comments:
Post a Comment