ಮತ್ತೊಂದು ಹೊಸ ವರುಷ, ದೇವರ ವರದಾನವೇ ಸರಿ. ಈ ಹೊಸ ವರುಷ ೨೦೧೯ ಹೊಸ ಹೊಸ ಆಶೋತ್ತರಗಳನ್ನು ಹೊತ್ತು ಪ್ರಾರಂಭವಾಗಿದೆ. ಈ ನವ ವರುಷ ಎಲ್ಲರಿಗೂ ಶುಭದಾಯಕವಾಗಲಿ ಎಂಬುದು ನನ್ನ ಹಾರೈಕೆ. ಇಂದು ಸರ್ವರೂ ನೆಮ್ಮದಿಯ ಬದುಕನ್ನು ಬಯಸುತ್ತಿದ್ದಾರೆ. ಆದರೆ ಪ್ರತಿ ಕ್ಷಣವೂ ಗಡಿಬಿಡಿಯಲ್ಲೇ ಜೀವನ ಸಾಗುತ್ತಿದೆ. ಕೆಲವರು ಈ ಗಡಿಬಿಡಿಯ ಬದುಕಿಗೆ ಮಾರುಹೋಗಿದ್ದಾರೆ. ಆದರೆ ಹಲವರು ಈ ಬದುಕಿನಿಂದ ಬೇಸತ್ತಿದ್ದಾರೆ. ಎಲ್ಲಾ ಸ್ತರಗಳಲ್ಲಿಯೂ ಬದುಕು ದುಸ್ತರವಾಗುತ್ತಿದೆ. ಬದಲಾವಣೆ ಬಯಸುತ್ತಿದೆ.
ತ್ರೈಏಕ ದೇವರು ಮಾನವರು ನೆಮ್ಮದಿಯ ಹಾಗೂ ಸಂತೃಪ್ತಿಯ ಬದುಕನ್ನು ಬದುಕಲೆಂದು ಅವರನ್ನು ತಮ್ಮ ಪರಿಪೂರ್ಣ ಪ್ರೀತಿಯಿಂದ ತುಂಬಿದ್ದಾರೆ. ಆದರೆ ಮಾನವರು ತಮ್ಮ ಬದುಕನ್ನು ತಾವೇ ದುಸ್ತರವಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಮಾನವರ ಅಂತರಂಗದಲ್ಲಿ ನಿತ್ಯವೂ ದ್ವಿಗುಣಗೊಳ್ಳುತ್ತಿರುವ ದ್ವೇಷ, ಅಸೂಯೆ, ದುರಾಸೆ ಮತ್ತು ಸ್ವಾರ್ಥ. ಈ ದುಷ್ಟ ಗುಣಗಳಿಂದ ಮಾನವರು ಹೊರಬರಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ. ಆದರೆ ತ್ರೈಏಕ ದೇವರ ಅನುಗ್ರಹದಿಂದ ಇದು ಖಂಡಿತ ಸಾಧ್ಯ! “ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ” (ಲೂಕ ೧:೩೭). ಯಾರು ತ್ರೈಏಕ ದೇವರಲ್ಲಿ ದೃಢ ನಂಬಿಕೆ ಇಟ್ಟು ದುಷ್ಟ ಗುಣಗಳಿಂದ ದೂರ ಸರಿಯುವ ಪ್ರಕ್ರಿಯೆಯನ್ನು, ಸ್ಥಿರ ಮನಸ್ಸಿನಿಂದ ಪ್ರಾರಂಭಿಸುತ್ತಾರೋ ಅಂಥವರಿಗೆ ಭಗವಂತ, ಆ ತ್ರೈಏಕ ದೇವರು ಬದಲಾಗುವ ಸ್ಥಿರ ಮನಸ್ಸಿಗೆ ಸ್ಪೂರ್ತಿ ಮತ್ತು ಪವಿತ್ರಾತ್ಮರ ಚೈತನ್ಯವನ್ನು ತುಂಬಿ ಚಾಲನೆ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.
ಅಂಗುಲಿಮಾಲಾ ಒಬ್ಬ ಕುಖ್ಯಾತ ದರೋಡೆಕೋರ. ಆತ ಬುದ್ದನ ಸ್ಪರ್ಶದಿಂದ ಬದಲಾದ. ಜಕ್ಕಾಯ ನಿಗದಿತ ಸುಂಕಕ್ಕಿಂತ ಅಧಿಕ ವಸೂಲಿ ಮಾಡಿ ಧನಾಡ್ಯನಾಗಿದ್ದ. ಆದರೆ ಪ್ರಭು ಕ್ರಿಸ್ತನ ದರ್ಶನದಿಂದ ಪುಳಕಿತನಾಗಿ ನೆರೆದ ಜನರ ಮುಂದೆ ಎದ್ದು ನಿಂತು, “ಪ್ರಭುವೇ, ನನ್ನ ಆಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದು ಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” (ಲೂಕ೧೯:೧-೧೦) ಎಂದು ಬದಲಾವಣೆಯ ಕಹಳೆ ಊದಿದ, ರಕ್ಷಣೆಗೆ ಪಾತ್ರನಾದ. ಉಕ್ಕಡದಲ್ಲಿ ಕುಳಿತು ಯಹೂದ್ಯರ ಆಶೋತ್ತರಗಳಿಗೆ ವಿರುದ್ಧವಾಗಿ ಸುಂಕ ವಸೂಲಿ ಮಾಡುತ್ತಿದ್ದ ಮತ್ತಾಯ (ಲೇವಿ) ಪ್ರಭು ಕ್ರಿಸ್ತನ ಕರೆಯಿಂದ ಪರಿವರ್ತನೆಗೊಂಡ (ಮಾರ್ಕ೨:೧೪). ಲೌಕಿಕ ಸುಖಬೋಗಗಳಲ್ಲಿ ಮೈಮರೆತಿದ್ದ ಅಗಸ್ಟೀನ್, ಅವರ ತಾಯಿ ಮೋನಿಕರವರ ನಿರಂತರ ಪ್ರಾರ್ಥನೆಯಿಂದ ಸಂತರಾದರು. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಾರು ತ್ರೈಏಕ ದೇವನಲ್ಲಿ ಅಪಾರ ವಿಶ್ವಾಸವಿಟ್ಟು ಸ್ಥಿರ ಮನಸ್ಸಿನಿಂದ ಬದಲಾವಣೆ ಬಯಸುತ್ತಾರೋ, ಅವರಲ್ಲಿ ಹೊಸ ಬದುಕು ಚಿಗುರಿಕೊಳ್ಳುತ್ತದೆ. ತ್ರೈಏಕ ದೇವನ ಸ್ಪರ್ಶವಾದಾಗ ಕೊರಡು ಸಹ ಕೊನರುತ್ತದೆ.
ಕಳೆದ ವರುಷ ೨೦೧೮ರಲ್ಲಿ ವಿವಿಧ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟಕ್ಕಿಂತ ಮಾನವನ ಧನದಾಹಿ ಸ್ವಾರ್ಥದಿಂದ ಉಂಟಾದ ನಷ್ಟವೇ ಅಧಿಕ. ಕೆಲವರ ಸ್ವಾರ್ಥದ ದುರಾಸೆಯಿಂದ ಹಲವು ಅಮಾಯಕರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಎಂದು ಹೇಳಲು ಬಹು ಸಂಕಟವಾಗುತ್ತದೆ. ಈ ಲೌಕಿಕ ಬದುಕು ಸ್ಥಿರವಲ್ಲ, ಇಲ್ಲಿ ಎಷ್ಟೇ ಆಸ್ತಿ, ಅಂತಸ್ತು ಮತ್ತು ಅಧಿಕಾರವಿದ್ದರೂ ಅದು ನೀರ ಮೇಲಿನ ಗುಳ್ಳೆಯಂತೆ. ನಮ್ಮ ಸ್ಥಿರವಾದ ನೆಲೆ ಇದಲ್ಲ! ಎಂಬ ಅರಿವೂ ಮೂಡಿ ಅಳಿಯದ ಆಸ್ತಿಯಾದ ನಿಷ್ಕಪಟ, ನಿಸ್ವಾರ್ಥ ಹಾಗೂ ನಿಷ್ಕಳಂಕ ಪ್ರೀತಿಯ ಸಂಪಾದನೆಯಲ್ಲಿ ಮಾನವರು ನಿರಂತರವಾಗಿ, ನಿರಾಸೆಗೊಳ್ಳದೆ ತೊಡಗಿಸಿಕೊಳ್ಳಬೇಕು. ಅದಕ್ಕೆ ಬೇಕು ನಿಷ್ಠೆ ಹಾಗೂ ನಿಸ್ವಾರ್ಥತೆ, ಪರಪ್ರೀತಿ ಹಾಗೂ ಸಹಿಷ್ಣುತೆ. ಈ ಸದ್ಗುಣಗಳನ್ನು ರೂಡಿಸಿಕೊಂಡು ಹಲವರು ಮಹಾತ್ಮರಾಗಿದ್ದಾರೆ. ಅಂಥ ಮಹಾನುಭಾವರಲ್ಲಿ ಸರ್ವಶ್ರೇಷ್ಠ ಮಾನವ ಜೀವಿ, ಅನ್ನ ಮತ್ತು ಜೋಕಿಂರವರ ಒಬ್ಬಳೇ ಸುಪುತ್ರಿ ಮರಿಯಾ! ಇವರು ತ್ರೈಏಕ ದೇವರ ಅನುಗ್ರಹದಿಂದ ಪಾಪರಹಿತರಾಗಿ ಜನಿಸಿದವರು. ಇವರು ಮಾನವ ಜನಾಂಗಕ್ಕೆ ಸಂಪೂರ್ಣ ರಕ್ಷಣೆಯನ್ನು ತರಲು ತಮ್ಮ ಒಬ್ಬನೇ ಮಗನಾದ ಪ್ರಭು ಯೇಸು ಕ್ರಿಸ್ತರನ್ನು ಜಗಕ್ಕೆ ಹೊತ್ತು ತರಲು ಗಬ್ರಿಯೇಲ್ ದೂತನ ಸಂದೇಶಕ್ಕೆ, “ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ” (ಲೂಕ ೧:೩೮) ಎಂದು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಮಹಾ ಮಹಿಳೆ, ಪವಿತ್ರ ಕಥೋಲಿಕ ಧರ್ಮಸಭೆಯ ನಿಷ್ಠಾವಂತ ಪಾಲಕಿ, ಸರ್ವ ಸದ್ಗುಣ ಸಂಪನ್ನೆ, ವರಪೂರ್ಣಳು ಹಾಗೂ ಪರಿಪೂರ್ಣಳು ಆಗಿರುವವಳು. ಈ ಕಾರಣ ಪವಿತ್ರ ಕಥೋಲಿಕ ಧರ್ಮಸಭೆ ಈಕೆಯನ್ನು ಮಾನವ ಕುಲಕ್ಕೆ ಆದರ್ಶ ಮಾತೆಯನ್ನಾಗಿ ನೀಡುತ್ತಾ, ಈಕೆಯನ್ನು ಅನುಕರಿಸುವಂತೆ ಹೊಸ ವರ್ಷದ ಪ್ರಥಮ ಕ್ಷಣದಿಂದಲೇ ಕರೆ ನೀಡುತ್ತಿದೆ. ಯಾರು ಈಕೆಯಂತೆ ತ್ರೈಏಕ ದೇವರಿಗೆ ವಿಧೇಯರಾಗಿ, ವಿನಯತೆಯಿಂದ, ಹಿಗ್ಗದೆ-ಕುಗ್ಗದೆ ಹಾಗೂ ವಿಶ್ವಾಸಭರಿತರಾಗಿ ನಡೆದುಕೊಳ್ಳುತ್ತಾರೋ ಅವರು ಸ್ವಾರ್ಥದ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಹಾಕಲು ಪ್ರೇರೇಪಿತರಾಗುತ್ತಾರೆ. ಅಂಥವರ ಜೀವನ ಪ್ರೀತಿ, ಸಹನೆ, ಸಹಬಾಳ್ವೆಯಿಂದ ಕೂಡಿರುತ್ತದೆ.
ಈ ವರುಷವಾದರೂ ಇಂತಹ ಬದುಕಿನೆಡೆಗೆ ಅಭಿಮುಖರಾಗಲು, ಸ್ವಾರ್ಥದ ಬದುಕಿಗೆ ವಿಮುಖರಾಗಲು, ಮಾನವರೆಲ್ಲರ ಅಂತರಾಳದಲ್ಲಿ ಬದಲಾವಣೆಯ ಕಹಳೆ ಮೊಳಗಬೇಕು. ನೈಜ ಬದಲಾವಣೆ ಬಯಸುವ ಮಾನವರೆಲ್ಲರೂ ನಿಸ್ವಾರ್ಥಿ, ತ್ಯಾಗಮಯಿ ಹಾಗೂ ಮಾನವ ಕುಲದ ನಿಷ್ಠಾವಂತ ಪಾಲಕಿ ಮಾತೆ ಮರಿಯಳ ಕೈಹಿಡಿದು ಸರ್ವರ ನೈಜ ಸಂಪತ್ತು ಹಾಗೂ ಶಾಶ್ವತ ಸಂತೋಷದ ಅರಸರಾದ, ಪ್ರಭು ಕ್ರಿಸ್ತರೆಡೆ ಸಾಗಲೇಬೇಕು. ಆಗ ಮಾತ್ರ ನೈಜ ಬದಲಾಣೆ ಸಾಧ್ಯ!!! ಬನ್ನಿ, ಹಾಗಾದರೆ ನಮ್ಮ ಕ್ಷಣಿಕ ಸಂತೋಷಕ್ಕೆ ಕಾರಣವಾಗಿ, ನಮ್ಮ ಶಾಶ್ವತ ಸಂತೋಷವನ್ನು ಕಸಿದುಕೊಳ್ಳುತ್ತಿರುವ ದ್ವೇಷ, ಅಸೂಯೆ, ದುರಾಸೆ ಮತ್ತು ಸ್ವಾರ್ಥಕ್ಕೆ ಹೇಳೋಣ ಗುಡ್ ಬೈ. ●●●
ಫಾ.ವಿಜಯ್‌ಕುಮಾರ್.ಪಿ., ಬಳ್ಳಾರಿ
No comments:
Post a Comment