Wednesday, 12 December 2018

ಬೈಬಲ್ಲಿನ ವಿಶಿಷ್ಟ ವ್ಯಕ್ತಿಗಳು

ವೀರಮಹಿಳೆ ಜೂಡಿತಳು
¨ ಡಾ. ಲೀಲಾವತಿ ದೇವದಾಸ್

(ಮುಂದುವರಿದ ಭಾಗ)

ಲ್ಲರೂ ಅವರವರ ಮನೆಗಳಿಗೆ ತೆರಳಿದ ಬಳಿಕ , ಜೂಡಿತಳು, ತನ್ನ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು, ಗೋಣಿತಾಟನ್ನು ಧರಿಸಿ, ಕರ್ತರಿಗೆ ಅಡ್ಡಬಿದ್ದು, ”ನಾವು ನಿಮ್ಮನ್ನೇ ನಂಬಿದ್ದೇವೆ, ನೀವೇ ಸರ್ವಶಕ್ತರೆಂದು ಶತ್ರುಗಳು ಒಪ್ಪಿಕೊಳ್ಳುವಂತೆ ಮಾಡಿರಿ” ಎಂದು ಕೂಗಿಟ್ಟಳು.
ನಂತರ ಎದ್ದು, ಸ್ನಾನಮಾಡಿ, ಸಕಲ ಸುಗಂಧವಸ್ತುಗಳನ್ನು ಲೇಪಿಸಿಕೊಂಡು, ತನ್ನ ತಲೆಗೂದಲನ್ನು ಅಲಂಕಾರಿಕವಾಗಿ ಎತ್ತಿಕಟ್ಟಿ, ಆಕರ್ಷಕ ಒಡವೆಗಳನ್ನು ಧರಿಸಿ. ಉತ್ಕೃಷ್ಟ ವಸ್ತ್ರ ತೊಟ್ಟು, ಪಾದರಕ್ಷೆ ಹಾಕಿಕೊಂಡು, ತನ್ನ ದಾಸಿಗೆ ಅಂಜೂರದ ಹಣ್ಣು, ಹುರಿಗಾಳು, ದ್ರಾಕ್ಷಾರಸಗಳ ಬುತ್ತಿಯನ್ನು ತಯಾರಿಸಲು ಆದೇಶಿಸಿದಳು.
ಅಲ್ಲಿಂದ ಅವರಿಬ್ಬರೂ ಹೊರಟು, ಊರಿನ ಮುಖ್ಯದ್ವಾರವನ್ನು ದಾಟಿ, ಶತ್ರುಪಾಳೆಯವನ್ನು ತಲಪಿದರು. ಅಲ್ಲಿನ ಕಾವಲುಗಾರರಿಗೆ, “ನಾನು ಇಬ್ರಿಯ ಸ್ತ್ರೀ. ನೀವು ನನ್ನ ಜನಾಂಗವನ್ನು ಸೋಲಿಸುತ್ತೀರೆಂದು ನನಗೆ ಖಚಿತವಾಗಿದೆ. ಈಗ, ನಮ್ಮ ಪಟ್ಟಣವನ್ನು ಪ್ರವೇಶಿಸುವ ಬೆಟ್ಟಗುಡ್ಡದ ದಾರಿಯನ್ನು ನಾನು ನಿಮಗೆ ತೋರಿಸಿಕೊಡಲು ಬಂದಿದ್ದೇನೆ. ನಾನು ನಿಮ್ಮ ನಾಯಕ ಹೊಲೋಫರ್ನೀಸರನ್ನು ಭೇಟಿಯಾಗಬೇಕು”, ಎಂದು ಹೇಳಿದಳು. ಅವರು, ಜೂಡಿತಳ ಅಪೂರ್ವ ಸೌಂದರ್ಯವನ್ನು ಕಂಡು, ಬೆರಗಾಗಿ, ”ಒಳ್ಳೇ ಕೆಲಸ ಮಾಡಿದಿ. ನಮ್ಮ ನಾಯಕರ ಮುಂದೆ ನಿಲ್ಲುವಾಗ ಹೆದರಬೇಡ”ಎಂದು ಹೇಳಿ, ಅವಳ ರಕ್ಷಣೆಗಾಗಿ ಸೈನಿಕರನ್ನು ಜೊತೆಮಾಡಿ, ಹೋಲೋಫರ್ನಿಸನ ಗುಡಾರಕ್ಕೆ ಕರೆತಂದರು
ಹೋಲೋಫರ್ನಿಸನು, ಚಿನ್ನ, ರತ್ನಾಭರಣಗಳಿಂದ ಅಲಂಕೃತವಾಗಿದ್ದ ಹಾಸಿಗೆಯಲ್ಲಿ ವಿಶ್ರಾಂತಿಯಲ್ಲಿದ್ದನು. ತನ್ನ ಜನರು ಕರೆತಂದಿದ್ದ ಜೂಡಿತಳನ್ನು ನೋಡಲು, ತನ್ನ ಗುಡಾರದಿಂದ ಹೊರಬಂದನು. ಆಕೆಯ ಚೆಲುವು, ಲಾವಣ್ಯಗಳನ್ನು ಕಂಡು ಪರವಶನಾದನು. ಆಕೆಯು ಗೌರವಸೂಚಿತವಾಗಿ ಅವನಿಗೆ ಅಡ್ಡಬಿದ್ದಾಗ, ಸೇವಕರು ಆಕೆಯನ್ನು ಎತ್ತಿ ನಿಲ್ಲಿಸಿದರು. ಹೋಲೋಫರ್ನಿಸನು, “ ಸ್ತ್ರೀಯೇ, ಧೈರ್ಯವಾಗಿರು. ನನ್ನ ಒಡೆಯ ನೆಬುಕದ್ನೆಚ್ಚರರಿಗೆ ಸೇವೆಮಾಡಲು ಬಂದ ಯಾರಿಗೂ ನಾನು ಹಾನಿ ಮಾಡುವುದಿಲ್ಲ. ನಿಮ್ಮವರು ನನಗೆ ಮೊದಲೇ ಶರಣಾಗತರಾಗಿದ್ದರೆ, ಈಗ ನಾನು ಅವರನ್ನು ನಾಶಪಡಿಸಲು ಹೊರಡುತ್ತಿದ್ದಿಲ್ಲ” ಎಂದನು. ಮುಂದೆ, “ನಿನ್ನ ಜನರನ್ನು ಬಿಟ್ಟು ನೀನು ಇಲ್ಲಿಗೆ ಏಕೆ ಬಂದೆ?” ಎಂದು ಕೇಳಿದನು.
ಆಗ, ಜೂಡಿತಳು, ”ಒಡೆಯರೇ, ದಾಸಿಯಾದ ನನ್ನ ಮಾತುಗಳನ್ನು ಕೇಳಿರಿ. ನೆಬುಕದ್ನೆಚ್ಚರರೇ ಜಗತ್ತಿಗೆಲ್ಲಾ ಒಡೆಯರು. ಮನುಷ್ಯರು ಮಾತ್ರವಲ್ಲ, ಎಲ್ಲಾ ಪ್ರಾಣಿ ಪಕ್ಷಿಗಳೂ ಅವರ ಶಕ್ತಿಯಿಂದಲೇ ಬದುಕಿರುತ್ತವೆ. ಅವರ ಅಪಾರ ಜ್ಞಾನವನ್ನು ನಾನು ಆಕೀಯೋರನ ಮಾತುಗಳಿಂದ ತಿಳಿದಿದ್ದೇನೆ. ನನ್ನ ಜನಾಂಗವು ಪಾಪದಲ್ಲಿ ಬಿದ್ದಿದೆ. ಹಾಗಾಗಿ, ಅವರೆಲ್ಲರೂ ದೇವರ ಶಾಪಕ್ಕೆ ಒಳಗಾಗಿದ್ದಾರೆ. ಅದಕ್ಕಾಗಿಯೇ, ಈಗ ಅವರಲ್ಲಿ ತಿನ್ನಲು ಆಹಾರವಿಲ್ಲ, ಕುಡಿಯಲು ನೀರಿಲ್ಲ”, ಎಂದು ಹೇಳಿಕೊಂಡಳು. ಮುಂದೆ, “ಇದನ್ನೆಲ್ಲಾ ನೋಡಿ, ರೋಸಿಹೋಗಿ , ಅಲ್ಲಿಂದ ಓಡಿಬಂದಿದ್ದೇನೆ. ಒಡೆಯರೇ, ನಾನು ನಿಮ್ಮಲ್ಲೇ ಉಳಿಯುತ್ತೇನೆ. ರಾತ್ರಿ ಮಾತ್ರ ಕಣಿವೆಗೆ ಇಳಿದು, ದೇವರಿಗೆ ನನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ. ಆತನ ಉತ್ತರಕ್ಕಾಗಿ ಕಾಯುತ್ತೇನೆ. ನಾನು ನಿಮಗೆ ಪಟ್ಟಣವನ್ನು ಪ್ರವೇಶಿಸುವ ದಾರಿಯನ್ನು ತೋರಿಸುತ್ತೇನೆ. ನೀವು ನಿಮ್ಮ ಸೈನ್ಯದೊಡನೆ ಹೋಗಿ, ಯೆರೂಸಲೇಮನ್ನು ವಶಪಡಿಸಿಕೊಳ್ಳಿರಿ. ನಾನೇ ನಿಮ್ಮನ್ನು ಅಲ್ಲಿನ ಸಿಂಹಾಸನದಲ್ಲಿ ಕೂರಿಸುವೆನು” ಎಂದಳು.
ಜೂಡಿತಳ ಈ ಮಾತುಗಳು ಹೋಲೋಫರ್ನಿಸನಿಗೆ ತುಂಬಾ ಮೆಚ್ಚಿಕೆಯಾದವು. ಅವನು ಆಕೆಯ ಸೌಂದರ್ಯ, ಜ್ಞಾನ, ವಿವೇಕಗಳನ್ನು ಪ್ರಶಂಸಿಸಿದನು. ಆಕೆಗೆ ಎಲ್ಲಾ ಅನುಕೂಲಗಳನ್ನೂ ಮಾಡಿಕೊಡಬೇಕೆಂದು ಆಜ್ಞೆಯಿತ್ತನು. ಜೂಡಿತಳು ಮಾತ್ರ “ನಾನು ತಂದ ಆಹಾರವನ್ನೇ ನಾನು ಸೇವಿಸುತ್ತೇನೆ” ಎಂದು ಕೇಳಿಕೊಂಡಳು.
ಮೊದಲ ಮೂರು ದಿನಗಳು, ಹೋಲೋಫರ್ನಿಸನ ಅಪ್ಪಣೆ ಪಡೆದು, ನಡುರಾತ್ರಿಯಲ್ಲಿ ಪ್ರಾರ್ಥನೆಗೆ ಹೋಗಿ ಬರುತ್ತಿದ್ದಳು. ಬಿಡಾರದಾಚೆ ಇದ್ದ ಬುಗ್ಗೆಯಲ್ಲಿ ಸ್ನಾನಮಾಡುತ್ತಿದ್ದಳು.
ನಾಲ್ಕನೇ ದಿನ ಹೋಲೋಫರ್ನಿಸನು ದೊಡ್ಡ ಔತಣವನ್ನು ಏರ್ಪಡಿಸಿದನು. ಅದರಲ್ಲಿ, ತನ್ನ ಕಂಚುಕಿಯನ್ನು ಹೊರತುಪಡಿಸಿ, ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಜೂಡಿತಳಿಗೆ ಕರೆ ಹೋಯಿತು. ಆಕೆಯು ತನ್ನನ್ನು ಅಲಂಕರಿಸಿಕೊಂಡು, ಆಕರ್ಷಕ ಉಡುಪುಗಳನ್ನು ಧರಿಸಿ, ಹೋಲೋಫರ್ನಿಸನ ಬಳಿಯೇ ನೆಲದ ಮೇಲೆ ಕುಳಿತಳು. ಅವನ ಹೃದಯವಂತೂ ಆಕೆಗಾಗಿ ಬಹು ಕಾತರಿಸುತ್ತಿತ್ತು. ತಾನೂ ಕುಡಿದು, ಜೂಡಿತಳಿಗೂ ಕುಡಿಯಲು, ತಿನ್ನಲು ಹೇಳಿದಾಗ, ಆಕೆ, ಅವನು ಹೇಳಿದಂತೆಯೇ ಮಾಡುವ ಹಾಗೆ ತೋರ್ಪಡಿಸಿಕೊಂಡಳು. ಸೇನಾಧಿಪತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿ, ಅವನ ಮದ್ಯಪಾನ ಮಿತಿಮೀರಿತು! ಸೇವಕರೆಲ್ಲರೂ ಗುಡಾರದ ಬಾಗಿಲನ್ನು ಮುಚ್ಚಿ, ಹೊರಟುಹೋದರು. ಜೂಡಿತಳು ಅಲ್ಲೇ ಉಳಿದಳು. ಹೋಲೋಫರ್ನಿಸನು, ಮದ್ಯಪಾನದಿಂದ ಮತ್ತನಾಗಿ ಎಚ್ಚರವಿಲ್ಲದೆ ಮಲಗಿದ್ದನು.
ಆಗ, ಜೂಡಿತಳು , ಹೊರಗೆ ನಿಂತಿದ್ದ ತನ್ನ ದಾಸಿಯನ್ನು ಒಳಗೆ ಕರೆದು, ತನ್ನ ಹೃದಯದಲ್ಲಿ, “ಸರ್ವಶಕ್ತ ದೇವರೇ, ನಾನು ಯೆರೂಸಲೇಮಿನ ಏಳಿಗೆಗಾಗಿ , ಶತ್ರುಗಳ ನಾಶಕ್ಕಾಗಿ ಮಾಡುತ್ತಿರುವ ಈ ಕಾರ್ಯದಲ್ಲಿ ನಿಮ್ಮ ಸಹಾಯವಿರಲಿ” ಎಂದು ಪ್ರಾರ್ಥಿಸಿದಳು. ಮುಂದೆ, ಹೋಲೋಫರ್ನಿಸನ ತಲೆಯ ಬಳಿ ಇದ್ದ ಖಡ್ಗವನ್ನು ಕೈಯಲ್ಲಿ ಹಿಡಿದು, ”ಇಸ್ರಾಯೆಲ್ಯರ ದೇವರೇ, ಇಂದು ನನ್ನನ್ನು ಬಲಪಡಿಸಿರಿ ” ಎಂದು ಹೇಳುತ್ತಾ ತನ್ನ ಎಲ್ಲಾ ಶಕ್ತಿಯಿಂದ ಅವನ ಶಿರವನ್ನು ಎರಡು ಬಲವಾದ ಪೆಟ್ಟುಗಳಲ್ಲಿ ಛೇದಿಸಿ, ದೇಹವನ್ನು ಕೆಳಗೆ ಉರುಳಿಸಿ , ತಲೆಯನ್ನು ದಾಸಿಗೆ ಕೊಟ್ಟಾಗ, ಅವಳು ಅದನ್ನು ಚೀಲದಲ್ಲಿರಿಸಿದಳು. ಏನೂ ತಿಳಿಯದ ಕಾವಲುಗಾರರು, ಆಕೆಗೆ ದಾರಿಬಿಟ್ಟರು. ಜೂಡಿತಳು, ತನ್ನ ಊರಿನ ಮುಖ್ಯದ್ವಾರಕ್ಕೆ ಬಂದು, ಅಲ್ಲಿದ್ದವರಿಗೆ, “ನಮ್ಮ ದೇವರು ನಮ್ಮನ್ನು ಕಾಪಾಡಿದ್ದಾರೆ, ತನ್ನ ಬಲವನ್ನು ಪ್ರಕಟಪಡಿಸಿದ್ದಾರೆ! ಬಾಗಿಲು ತೆಗೆಯಿರಿ!” ಎಂದು ಕೂಗಿದಳು.
ಎಲ್ಲರೂ ಅಲ್ಲಿಗೆ ಓಡಿಬಂದಾಗ, “ದೇವರಿಗೆ ಸ್ತೋತ್ರಮಾಡಿರಿ. ಅವರು, ನಮ್ಮ ಶತ್ರುಗಳನ್ನು ನಾಶಪಡಿಸಿದ್ದಾರೆ!” ಎಂದು ದೊಡ್ಡ ಸ್ವರದಲ್ಲಿ ಹೇಳಿ ಶತ್ರುವಿನ ತಲೆಯನ್ನು ತೋರಿಸಿದಳು. ಎಲ್ಲರೂ ಬೆರಗಾಗಿ, ದೇವರಿಗೆ ಅಡ್ಡಬಿದ್ದು ಆರಾಧಿಸಿದರು, ಜೂಡಿತಳನ್ನು ಶ್ಲಾಘಿಸಿದರು. ”ನಿನ್ನ ಜೀವವನ್ನು ಒತ್ತೆಯಿಟ್ಟು, ಈ ಮಹತ್ತಾದ ಕೆಲಸವನ್ನು ಮಾಡಿದಿ” ಎಂದರು.
ಜೂಡಿತಳು ಹೇಳಿದಂತೆ, ಅವರು, ಬೆಳಗಾಗುತ್ತಿದ್ದಂತೆ, ಹೊಲೋಫರ್ನಿಸನ ತಲೆಯನ್ನು ಕೋಟೆಬಾಗಿಲಿನ ಮೇಲೆ ತೂಗುಹಾಕಿದರು. ಎಲ್ಲರೂ ತಮ್ಮ ಆಯುಧಗಳೊಡನೆ ಶತ್ರುಪಾಳೆಯವನ್ನು ಪ್ರವೇಶಿಸಿದರು.
ಅಷ್ಟರಲ್ಲಿಯೇ, ಕಾವಲುಗಾರರು, ತಮ್ಮ ಒಡೆಯನು, ಎಬ್ಬಿಸಿದರೂ ಏಳದೆ ಹೋದಾಗ, ಬಾಗಿಲನ್ನು ತೆರೆದು, ನೋಡಿ, ದಂಗಾದರು! ಜೋರಾಗಿ ಕೂಗಿ, ಅಳುತ್ತಾ ತಮ್ಮ ಬಟ್ಟೆಗಳನ್ನು ಹರಿದುಕೊಂಡರು. ಜೂಡಿತಳು ಪರಾರಿಯಾಗಿದ್ದೂ ಗೊತ್ತಾಯಿತು.
ಆಗ, ಇಸ್ರಾಯೇಲ್ ಸೈನ್ಯವು , ಅವರ ಮೇಲೆ ಬಿದ್ದು, ಅವರನ್ನು ಸುಲಭವಾಗಿ ಸೋಲಿಸಿತು. ಬದುಕಿದವರು ಓಡಿಹೋದರು. ಅನೇಕರನ್ನು ಸೆರೆಹಿಡಿಯಲಾಯಿತು. ೩೦ ದಿನಗಳವರೆಗೂ ಲೂಟಿ ನಡೆಯಿತು.
ಯಾಜಕರು, ಜೂಡಿತಳನ್ನು ಆಶೀರ್ವದಿಸಿದರು. ಸ್ತ್ರೀಯರು, ಆನಂದದಿಂದ ಆಕೆಯ ಸುತ್ತಲೂ ಕುಣಿದಾಡಿದರು. ಆಕೆಯ ತಲೆಗೆ ಆಲೀವ್ ಎಲೆಗಳ ಕಿರೀಟವನ್ನು ಸಿಕ್ಕಿಸಿದರು. ಜೂಡಿತಳೂ ಅವರೊಡನೆ ಸೇರಿ, ಹಾಡಿದಳು, ಸ್ತೋತ್ರಿಸಿದಳು. ಎಲ್ಲರೂ ಸರ್ವೇಶ್ವರರನ್ನು ಆರಾಧಿಸಿದರು. ಜೂಡಿತಳು , ತನಗೆ ದೊರೆತದ್ದನ್ನೆಲ್ಲಾ ಕರ್ತರಿಗೇ ಸಮರ್ಪಿಸಿದಳು. ಎಲ್ಲೆಲ್ಲೂ ಔತಣ, ಸಂಭ್ರಮಗಳು ತುಂಬಿದವು.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...