Thursday, 13 December 2018

ಸಂತ ಯೊವಾನ್ನರ ಶುಭಸಂದೇಶ - 3





¨ ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
ಈ ಶುಭಸಂದೇಶದ ವೈಶಿಷ್ಟ್ಯತೆ ಮಹತ್ತರವಾದದ್ದು. ಬಹಳಷ್ಟು ಮಂದಿ ಕ್ರೈಸ್ತರಿಗೆ ಈ ಶುಭಸಂದೇಶ ಹೊಸ ಒಡಂಬಡಿಕೆಯಲ್ಲಿ ಇರುವಂತಹ ಪ್ರಮುಖ ಮತ್ತು ಅತ್ಯಮೂಲ್ಯವಾದ ಪುಸ್ತಕವಾಗಿದೆ. ಈ ಪುಸ್ತಕವು ಮಸ್ತಕ, ಹೃದಯಕ್ಕೇ ಮತ್ತು ಆತ್ಮಕ್ಕೆ ಮುಟ್ಟುವಂತದ್ದಾಗಿದೆ. ಈ ಶುಭಸಂದೇಶವು ಮಸ್ತಕಕ್ಕೆ ಜ್ಞಾನಾರ್ಜನೆ, ಹೃದಯಕ್ಕೆ ತಂಪು ಮತ್ತು ಆತ್ಮಕ್ಕೆ ತೃಪ್ತಿ ನೀಡುತ್ತದೆ. ಅದಕ್ಕೆ ಇದನ್ನು ವಿಮರ್ಶಕರ ಶುಭಸಂದೇಶ, ಜ್ಞಾನಿಗಳ ಶುಭಸಂದೇಶ, ಬುದ್ಧಿವಂತರ ಶುಭಸಂದೇಶವೆಂದು ಕರೆಯಲಾಗುತ್ತದೆ. ಒಟ್ಟಿನಲ್ಲಿ ಇದು ಎಲ್ಲರಿಗೂ ಮನಮುಟ್ಟುವಂತೆ ಬರೆಯಲಾಗಿದೆ. ಬೈಬಲ್ ಶ್ರೀಗ್ರಂಥದಲ್ಲಿ ನಾಲ್ಕು ಶುಭಸಂದೇಶಗಳನ್ನು ನಾಲ್ಕು ಸಂಕೇತಗಳನ್ನಾಗಿ ಬೈಬಲ್ ವಿದ್ವಾಂಸರು ತಿಳಿಸುತ್ತಾರೆ. ಈ ಚಿಹ್ನೆಗಳನ್ನು ಅಥವಾ ಸಂಕೇತಗಳನ್ನು ಪ್ರಕಟಣೆ ಗ್ರಂಥ 4:7ರಲ್ಲಿ ಕಾಣುತ್ತೇವೆ. ಮಾರ್ಕನ ಶುಭಸಂದೇಶಕ್ಕೆ ಮನುಷ್ಯನ ಚಿಹ್ನೆ. ಏಕೆಂದರೆ ಮಾರ್ಕನು ತನ್ನ ಶುಭಸಂದೇಶದಲ್ಲಿ ಸಾಧಾರಣತೆಯನ್ನು, ನೇರನುಡಿ ಮತ್ತು ಮಾನವೀಯ ಗುಣವನ್ನು ಎತ್ತಿ ಹಿಡಿದಿದ್ದಾನೆ. ಮತ್ತಾಯನು ಬರೆದ ಶುಭಸಂದೇಶಕ್ಕೆ ಸಿಂಹದ ಚಿಹ್ನೆ. ಯೇಸು ಸ್ವಾಮಿಯನ್ನು ಮೆಸ್ಸಾಯ ಎಂದು ಪರಿಗಣಿಸಿ ಆತನನ್ನು ಯೆಹೂದ್ಯ ಜನಾಂಗದ ಸಿಂಹ ಎಂದು ಬಿಂಬಿಸುತ್ತಾನೆ. ಲೂಕನ ಶುಭಸಂದೇಶಕ್ಕೆ ಎತ್ತಿನ ಚಿಹ್ನೆ. ಕಾರಣ - ಎತ್ತು ಸಾಮಾನ್ಯವಾಗಿ ಶ್ರಮಜೀವಿ, ಅದು ಸೇವೆ ಮತ್ತು ತ್ಯಾಗದ ಗುರುತಾಗಿದೆ. ಲೂಕನ ಶುಭಸಂದೇಶದಲ್ಲಿ ಯೇಸು ಸ್ವಾಮಿಯನ್ನ ಪುರುಷರ ಮತ್ತು ಸ್ತ್ರೀಯರ ಸೇವಕನಾಗಿ ಮತ್ತು ಸಾರ್ವರ್ತ್ರಿಕ ರಕ್ಷಕನಾಗಿ ಬಿಂಬಿಸಲಾಗಿದೆ. ಇನ್ನೂ ಸಂತ ಯೊವಾನ್ನರು ಬರೆದ ಶುಭಸಂದೇಶಕ್ಕೆ ಹದ್ದಿನ ಚಿಹ್ನೆ. ಇದಕ್ಕೆ ಮೂರು ಕಾರಣಗಳು:
1. ಇದೊಂದೇ ಜೀವಿ ಸೂರ್ಯನನ್ನು ನೇರವಾಗಿ ನೋಡುತ್ತದೆ. ಅದೇ ರೀತಿ ಯೊವಾನ್ನರ ಶುಭಸಂದೇಶವನ್ನು ಓದಿದ ಓದುಗರು ಕ್ರಿಸ್ತರನ್ನು ನೇರವಾಗಿ ತಮ್ಮ ಕಣ್ಣುಗಳಿಂದ ನೋಡುತ್ತಾರೆ ಮತ್ತು ಆತನನ್ನು ಅನುಭವಿಸುವಂತದಾಗಿದೆ.
2. ಹದ್ದು ಆಕಾಶದ ಅತಿ ಎತ್ತರದಲ್ಲಿ ಹಾರಾಡುತ್ತದೆ. ಹಾಗೆ ಯೊವಾನ್ನರ ಶುಭಸಂದೇಶವನ್ನು ಓದಿದವರು ಶುಭಸಂದೇಶದಲ್ಲಿ ಇರುವ ಅತಿ ಎತ್ತರವಾದ ದೈವ ಶಾಸ್ತ್ರವನ್ನು ಮತ್ತು ಪ್ರಭುಕ್ರಿಸ್ತರ ದೈವತ್ವವನ್ನು ಕಾಣುತ್ತಾರೆ.
3. ಹದ್ದು ಎಷ್ಟು ಮೇಲೆ ಹಾರಾಡಿದರೂ ಕೆಳಗಿರುವ ಸಣ್ಣ ಪ್ರಾಣಿ ಪಕ್ಷಿಗಳನ್ನು  ನೋಡಬಲ್ಲದು. ಅದೇ ರೀತಿ ಈ ಶುಭಸಂದೇಶದ ದೈವಶಾಸ್ತ್ರವು ಎತ್ತರದಲ್ಲಿದ್ದರೂ ಸಹ ಸಣ್ಣ ಸಣ್ಣ ವಿಷಯಗಳನ್ನು ಅಲ್ಲಗಳೆಯದೆ ಅದನ್ನು ಶುಭಸಂದೇಶದಲ್ಲಿ ತನ್ನದೇ ಆದ ರೀತಿಯಲ್ಲಿ ದೃಢೀಕರಿಸುತ್ತದೆ. 
ಈ ಶುಭಸಂದೇಶಕ್ಕೆ ಭೂಶೋಧನೆಯ ಸ್ಥಳವೆಂದು ಸಹ ಕರೆಯಲಾಗುತ್ತದೆ. ಕಾರಣ ನಾವು ಭೂಶೋಧನೆಯ ಜಾಗವನ್ನು ಬಗೆದಷ್ಟೂ ಆಳವಾಗಿ ಹೋಗುತ್ತದೆ. ಹಾಗೆ ಈ ಶುಭಸಂದೇಶವನ್ನು ಬಗೆದಂತೆ ಅದು ಪುಟಿಯುತ್ತದೆ, ಆಳವಾಗಿ ಹೋಗುತ್ತದೆ, ಪ್ರಭು ಕ್ರಿಸ್ತನ ದೈವತ್ವದ ಆಳಕ್ಕೆ ಇಳಿಯುವಂತೆ ಮಾಡುತ್ತದೆ. ಇದು ಹಂತಹಂತವಾಗಿ ಆಳಕ್ಕೆ ಇಳಿಯುವಂತಹ ಪ್ರಕ್ರಿಯೆಯಾಗಿದೆ. ಬೈಬಲ್ ವಿದ್ವಾಂಸರ ಪ್ರಕಾರ ಈ ಶುಭಸಂದೇಶವನ್ನು ಈಜುಕೊಳಕ್ಕೆ ಹೋಲಿಸಲಾಗಿದೆ. ಕಾರಣ ಇದೊಂದು ವಿಶಿಷ್ಟವಾದ ಈಜುಕೊಳವಾಗಿದೆ ಇಲ್ಲಿ ಒಂದು ಸಣ್ಣ ಮಗು ಮತ್ತು ದೊಡ್ಡ ವ್ಯಕ್ತಿ ಇಬ್ಬರೂ ಸಹ ಅವರವರ ಸಾಮರ್ಥ್ಯಕ್ಕೆ ಅವರ ಸಂಪತ್ತನ್ನು ಪಡೆಯಬಹುದಾಗಿದೆ.
ಸಂತ ಯೊವಾನ್ನರ ಶುಭಸಂದೇಶದ ಇತರೆ ಹೆಸರುಗಳಿಂದಲೂ ಗುರುತಿಸಲಾಗುತ್ತದೆ: 1. ಸಾಂಕೇತಿಕ ಶುಭಸಂದೇಶ. 2. ಅನುಭವಿ ಶುಭಸಂದೇಶ. 3. ಧ್ಯಾನಾಸಕ್ತ ಶುಭಸಂದೇಶ. ಈ ಮೂರು ಶುಭಸಂದೇಶಗಳನ್ನು ಭಾರತೀಯ ತತ್ವಶಾಸ್ತ್ರದ ಅನುಗುಣವಾಗಿ ಶ್ರವಣ, ಮನನ, ನಿಧಿಧ್ಯಾಸನವೆಂದು ಕರೆಯಬಹುದು. 1. ಸಾಂಕೇತಿಕ ಶುಭಸಂದೇಶ - ಹೀಗೆ ಕರೆಯಲು ಕಾರಣ ಬೇರೆ ಶುಭಸಂದೇಶಕ್ಕಿಂತ ಇದು ವಿಭಿನ್ನವಾಗಿದೆ, ಇಲ್ಲಿ ಎಲ್ಲವೂ ಸಾಂಕೇತಿಕವಾಗಿದೆ ನಾವು ಅವುಗಳನ್ನು ಇದ್ದಹಾಗೆ ಕಾಣದೆ ನಮ್ಮ ಅಂತರಂಗದ ಕಣ್ಣುಗಳನ್ನು ತೆರೆದು ಸಂಕೇತ ಮತ್ತು ಸೂಚನೆಗಳನ್ನು ಓದಬೇಕಾಗಿದೆ. ಇಲ್ಲಿ ಓದುಗರ ಕೊಳ್ಳುವಿಕೆ ಅಥವಾ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. 
2. ಅನುಭವಿ ಶುಭಸಂದೇಶ - ಕಾರಣ ಈ ಶುಭಸಂದೇಶವನ್ನು ಓದಿದವನು ಬೇರೆಯ ಪರಿಯಲ್ಲಿ ಬೇರೆಯ ದೃಷ್ಟಿಯಲ್ಲಿ ಪ್ರಭುಕ್ರಿಸ್ತರನ್ನು ನೋಡುವಂತಾಗುತ್ತಾನೆ. ಈ ಶುಭಸಂದೇಶವು ಮನೋನೇತ್ರಗಳನ್ನ ತೆರೆಸಿ ಪ್ರಭುವನ್ನು ಇದ್ದ ಹಾಗೆ ಕಂಡು ಅವರ ಮಾತುಗಳ ಒಳ ಅರ್ಥವನ್ನು ಅನುಭವಿಸುವ ಹಾಗೆ ಮಾಡುತ್ತದೆ. ಇದೊಂದು ವಿಭಿನ್ನವಾದ ಅಂತಹ ಭಾವನೆಗಳನ್ನ ಮೂಡಿಸುತ್ತದೆ. 3. ಧ್ಯಾನ ಕೇಂದ್ರಿತ ಶುಭಸಂದೇಶ - ಮಾನವನ ಅಂತರಂಗದ ನಡೆಗೆ ಅಥವಾ ಸ್ವಮೌಲ್ಯಮಾಪನಕ್ಕೆ ಧ್ಯಾನ ಅತ್ಯಗತ್ಯ. ಆತ್ಮ ಪರಮಾತ್ಮನಲ್ಲಿ ಒಂದಾಗುವಂತೆ ಮಾಡುವುದು ಈ ಧ್ಯಾನ. ಈ ಶುಭಸಂದೇಶವನ್ನು ಓದಿದ ಓದುಗ ಇದರಲ್ಲಿರುವ ಸಂಪತ್ತನ್ನು ಅರ್ಥೈಸಿಕೊಂಡು ಕ್ರಿಸ್ತನ ಮತ್ತು ತನ್ನ ಬಗ್ಗೆ ಧ್ಯಾನಿಸಲು ಹೋಗುವಂತೆ ಮಾಡುತ್ತದೆ. 


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...