ತುಸುಹೊತ್ತು ಯೋಚಿಸಿದ ನಂತರ ನನಗೆ ಹೊಳೆದದ್ದು ಫಾದರ್ ಆ್ಯಂಟನಿ ಕೊರೆಯ (ಸೆಮಿನೆರಿಯ ರೆಕ್ಟರ್ ಆಗಿದ್ದ ಇವರು ಇತ್ತೀಚೆಗಷ್ಟೆ ನಿಧನರಾದರು). ಸೀದಾ ಅವರ ಕೋಣೆಯತ್ತ ನಡೆದೆ. ವೆರಾಂಡದಲ್ಲಿ ಕುಳಿತು ಓದುವುದರಲ್ಲಿ ಮಗ್ನರಾಗಿದ್ದ ಅವರು, ನನ್ನನ್ನು ಕಂಡೊಡನೆಯೇ "ಯೆಸ್, ಅಜಯ್" ಎಂದಾಗ ನಾನು ಒಂದೇ ಉಸಿರಿನಲ್ಲಿ ನಡೆದ ಘಟನೆಯನ್ನು ವಿವರಿಸಿ, ನನಗೆ ಫಾದರ್ ಸೈಮನ್'ರ ಶಿಕ್ಷೆ ಸ್ವೀಕರಿಸಲಾಗುವುದಿಲ್ಲ ಎಂತಲೂ, ಅವರ ವರ್ತನೆ ತೀರಾ ಅತಿರೇಕದ್ದೆಂದು ಹೇಳಿದೆ. ಅದಾಗಲೇ ಪ್ಯಾರಾಲಿಸಿಸ್ ಅಟ್ಯಾಕ್ ಆಗಿ, ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದ್ದ ಅವರು ಸೌಮ್ಯಚಿತ್ತರಾಗಿ. . .
"ನೋಡು, ಅಜಯ್! ನಾನೀಗ ಯಾರ ಪರವೂ ನಿಲ್ಲಲಾಗುವುದಿಲ್ಲ. Because I'm Sick! ಸೆಮಿನರಿಯ ಆಡಳಿತವನ್ನೆಲ್ಲಾ ಸೈಮನ್ ನೋಡಿಕೊಳ್ಳುತ್ತಿದ್ದಾರೆ. ಯಾವುದೋ ಟೆನ್ಷನ್ನಿನಲ್ಲಿ ಅವರು ಹಾಗೆ ಹೇಳಿರಬಹುದು. Please listen to what he says" ಎಂದು ಬಿಟ್ಟರು. ಅಲ್ಲಿಗೆ ನನ್ನ ಪಾಲಿಗೆ ಉಳಿದಿದ್ದ ಕಟ್ಟಕಡೆಯ ಬಾಗಿಲೂ ಬಂದಾಯಿತು. ಮತ್ತೊಮ್ಮೆ ಮುಂದೇನು ಮಾಡುವುದು ಎಂಬ ಗೊಂದಲಮಯ ಸ್ಥಿತಿಗೆ ಬಿದ್ದೆ. ಆದದ್ದು ಆಗಲಿ ಎಂದು ನಿಶ್ಚಯಿಸಿ, ಸೀದಾ ಹೋಗಿ ಸ್ಟಡಿ ಹಾಲಿನ ನನ್ನ ಟೇಬಲಿನಲ್ಲಿ ಕುಳಿತುಕೊಂಡೆ. ನಂತರ ರಾತ್ರಿ ಎಂಟು ಘಂಟೆಗೆ ಊಟಕ್ಕೆ ಬಂದಾಗ ರೆಫೆಕ್ಟರಿಯಲ್ಲಿ ಫಾದರ್ ಸೈಮನ್ ಮತ್ತು ಫಾದರ್ ಕೊರೆಯಾರ ನಡುವೆ ಅದೇನು ಚರ್ಚೆಯಾಯಿತೋ ತಿಳಿದಿಲ್ಲ. ಆದರೆ ಫಾದರ್ ಸೈಮನ್ "ನನ್ನ ಜೀವನದಲ್ಲಿ ಒಬ್ಬ ವಿದ್ಯಾರ್ಥಿ ಒಬ್ಬ ಪಾದ್ರಿಯ ಬಗ್ಗೆ ರೆಕ್ಟರ್ ಬಳಿ ದೂರು ಹೇಳಿದ್ದು ಇದೇ ಮೊದಲು" ಎಂದರಂತೆ. ಆಗ ಶುರುವಾದದ್ದೇ ನನ್ನ ಮತ್ತು ಫಾದರ್ ಸೈಮನ್'ರ ನಡುವಿನ ಸಂಘರ್ಷ.
ಪಲೋಟಿ ಹೋಂನಲ್ಲಿದ್ದ ಆ ಮೂರು ವರ್ಷಗಳಲ್ಲೂ ನಮ್ಮ ಮದ್ಯೆ ಆಗಿಂದಾಗ್ಗೆ ಶೀತಲ ಸಮರಗಳಾಗುತ್ತಿದ್ದವು. ಆ ಮೂರನೇ ವರ್ಷದ ಕೊನೆಕೊನೆಗೇ ನನಗೆ ಫಾದರ್ ಸೈಮನ್ ಎಂತಹ ಧೀಮಂತ ವ್ಯಕ್ತಿ ಎಂದು ತಿಳಿದದ್ದು. ಅದೆಷ್ಟೇ ವಾಗ್ವಾದಗಳಾದರೂ ಪ್ರೊಮೊಷನ್ ವಿಚಾರ ಬಂದಾಗ ನನ್ನ ಪರವಾಗಿ ನಿಂತವರು ಇದೇ ಫಾದರ್ ಸೈಮನ್ ವಿನಃ ನನ್ನ ಜೊತೆಯೇ ನಗುನಗುತಲಿದ್ದು ನಂತರ ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿಗಳಲ್ಲ. ನಾನು ಮೂರು ವರ್ಷ ಮುಗಿಸಿ, ನನ್ನ ನಾಲ್ಕನೇ ವರ್ಷದ ವ್ಯಾಸಾಂಗಕ್ಕೆ (ನೋವಿಶಿಯೇಟ್) ಕಾಲಿಟ್ಟಾಗ ತಿಳಿದಿದ್ದು ನಾನಿಷ್ಟು ಜನ ಮಿತ್ರೆಂದು ತಿಳಿದ ವ್ಯಕ್ತಿಗಳು (ಹೆಸರು ಹೇಳ ಬಯಸುವುದಿಲ್ಲ) ನನ್ನ ಹಿತಶತ್ರುಗಳಾಗಿ ನನ್ನ ಬೆನ್ನಿಗೇ ಚೂರಿ ಹಾಕಿದ್ದು ಹಾಗೂ ನಾನು ಯಾರನ್ನು ನನ್ನ ವೈರಿಗಳೆಂದು ತಿಳಿದು, ಅವರನ್ನು ಕಂಡಾಗ ಮುಖ ಸಿಂಡರಿಸುತ್ತಿದ್ದೆನೋ ಅವರೇ ನನ್ನ ನಿಜವಾದ ಮಿತ್ರರೆಂದು.
ನಾನು ಸೆಮಿನರಿಯಿಂದ ಹೊರಬಂದು ಮೂರು ವರ್ಷಗಳೇ ಕಳೆದಿವೆ. ಫಾದರ್ ಸೈಮನ್ ಕುಮಟಾದಲ್ಲಿದ್ದಾರೆ. ಅಲ್ಲಿಗೆ ಹೋದಾಗಲೆಲ್ಲ ಸ್ವಂತ ಅಣ್ಣನಂತೆ ಉಪಚರಿಸುತ್ತಾರೆ. ಕಿರಿಯರು ಮಾಡುವ ತಪ್ಪುಗಳನ್ನೆಲ್ಲಾ ಮನಪೂರ್ವಕವಾಗಿ ಕ್ಷಮಿಸಿ, ಆ ಘಟನೆಗಳು ನಡೆದೇ ಇಲ್ಲವೇನೊ ಎಂಬಷ್ಟರ ಮಟ್ಟಿಗೆ ಆಪ್ತರಾಗಿ ಬಿಡುತ್ತಾರೆ. ಇದು ಫಾದರ್ ಸೈಮನ್'ರ ವ್ಯಕ್ತಿತ್ವ. ಉಳಿದಂತೆ ನನ್ನ ಬಗ್ಗೆ ಹೇಳುವುದಾದರೇ, ಈಗಲೂ ನಾನು ರೆಬೆಲ್ಲೇ. ಆದರೆ ಸಿಲ್ಲಿ ವಿಷಯಗಳಲ್ಲಲ್ಲ. ಅರ್ಥಾಥ್ ಸಿಲ್ಲಿ ವಿಚಾರಗಳ ಗೋಜಿಗೆ ಹೋಗುವುದನ್ನೂ ಮರೆತಿದ್ದೇನೆ. ಧನಾತ್ಮಕವಾದುದನ್ನು ಒಪ್ಪಿಕೊಂಡು ಜೀವನ ಸಾಗಿಸುವ ಪಾಠವನ್ನು ಬದುಕು ಕಲಿಸಿದೆ, ಕಲಿಸುತ್ತಿದೆ, ಕಲಿಸುತ್ತಲೇ ಇರುತ್ತದೆ. ಬದುಕ ಅನುಭವಗಳನ್ನು ಕೊಂಡುಕೊಳ್ಳಲು ಮುಗಿಬೀಳುವವರ ನಡುವೆ, ಆ ರಸಾನುಭವಗಳೇ ನಮಗೆ ಉಚಿತವಾಗಿ ದೊರೆಯುತ್ತಿರುವ ಈ ವಿಷಮ ಕಾಲಘಟ್ಟದಲ್ಲಿ ನಾವೆಷ್ಟು ಧನ್ಯರು! ಅಲ್ಲವೇ?
¨ ಅಜಯ್ ರಾಜ್
No comments:
Post a Comment