ಟೆನ್ ಕಮ್ಯಾಂಡ್‌ಮೆಂಟ್ಸ್, ಬೆನ್ ಹರ್ ನಂತಹ ಅದ್ಧೂರಿ ಬೈಬಲ್ ಆಧಾರಿತ ಚಿತ್ರಗಳನ್ನು ತಯಾರಿಸಿದ ಹಾಲಿವುಡ್‍ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ ಖ್ಯಾತ ಬೈಬಲ್ ಆಧಾರಿತ ಚಿತ್ರವೆಂದರೆ ಅದು ’ಪ್ಯಾಶನ್ ಆಫ್ ಕ್ರೈಸ್ಟ್’ ಚಿತ್ರ. ನಿಮಗೆಲ್ಲರಿಗೂ ತಿಳಿದಿರುವಂತೆ ಇದು ಯೇಸುಕ್ರಿಸ್ತನ ಜೀವನದ ಕೊನೆಯ ಹನ್ನೆರಡು ಗಂಟೆಗಳ ಕಾಲವನ್ನು ಮೂಲ ವಸ್ತುವಾಗಿಟ್ಟುಕೊಂಡ ಚಿತ್ರವಾಗಿದೆ. ಇಲ್ಲಿ ಕ್ರಿಸ್ತನ ನೋವು ಯಾತನೆ, ಶಿಲುಬೆಯ ಮರಣವೇ ಪ್ರಮುಖ ಕಥಾವಸ್ತು. ಅದೇ ಭಾಗವಾಗಿ ಶಿಲುಬೆಯನ್ನು ಹೊತ್ತು ನಡೆದ ಯೇಸುವಿನ ಆ ಹಾದಿಯ ಚಿತ್ರಣ ಹಾಗೂ ನಂತರದ ಮರಣದ ಚಿತ್ರಣವನ್ನು ದೀರ್ಘವಾಗಿಯೂ ವಿಸ್ತೃತವಾಗಿಯೂ ತೋರಿಸಲಾಗಿದೆ. ಜೊತೆ ಜೊತೆಗೆ ಯೇಸುವಿನ ಜೀವನ, ಬೋಧನೆಯ ಸಣ್ಣ ಸಣ್ಣ ದೃಶ್ಯಗಳು ಫ್ಲ್ಯಾಶ್ ಬ್ಯಾಕ್ ತಂತ್ರದಲ್ಲಿ ಮೂಡಿ ಬರುತ್ತದೆ.
ಪ್ರೇರಣೆ ಹಾಗೂ ಮೂಲ :
ಚಿತ್ರದ ಮೂಲ ಪ್ರೇರಣೆ ಶುಭ ಸಂದೇಶದಲ್ಲಿನ ಮತ್ತಾಯ, ಮಾರ್ಕ ಹಾಗೂ ಲೂಕನ ಪುಸ್ತಕಗಳೇ. ಈ ಪುಸ್ತಕಗಳಲ್ಲಿನ ಯೇಸುವಿನ ಕೊನೆಯ ದಿನದ ಆಗು ಹೋಗುಗಳನ್ನು ಚಿತ್ರಕತೆಯಲ್ಲಿ ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಅಲ್ಲಲ್ಲಿ ಕಂಡು ಬರುವ ಫ್ರೈಡೇ ಸಾರೋ, ಅಂದರೆ ಶುಭ ಶುಕ್ರವಾರದಂದು ಕೆಲವರ ದೇಹದಲ್ಲಿ ಕಾಣಿಸಿಕೊಳ್ಳುವ ಯೇಸುವಿನ ಗಾಯಗಳ ಗುರುತು ಹಾಗೂ ಅನುಭವಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಮುಖ್ಯವಾಗಿ ಹದಿನೇಳನೇ ಶತಮಾನದ ಆನಿ ಕ್ಯಾಥರಿನ್ ಎನ್ರಿಚ್ ಎಂಬವರ ಅನುಭವಗಳನ್ನು ಚಿತ್ರಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ಖ್ಯಾತ ನಟ ಮೆಲ್ ಗಿಬ್ಸನ್ ನಿರ್ದೇಶನ :
ಈ ಚಿತ್ರವು ಬಿಡುಗಡೆಯ ಮುಂಚೆಯೇ ಸಾಕಷ್ಟು ಕುತೂಹಲವನ್ನೂ ನಿರೀಕ್ಷೆಯನ್ನೂ ಹುಟ್ಟಿಸಿತು. ಅದಕ್ಕೆ ದೊಡ್ಡ ಕಾರಣ, ಹಾಲಿವುಡ್ ಚಿತ್ರಗಳಲ್ಲಿ ನಾಯಕನಾಗಿ ಅತ್ಯಂತ ದೊಡ್ಡ ಯಶಸ್ಸು ಹಾಗೂ ಖ್ಯಾತಿಯನ್ನು ಪಡೆದಿದ್ದ ಮೆಲ್ ಗಿಬ್ಸನ್ ಈ ಚಿತ್ರವನ್ನು ನಿರ್ದೇಶಿಸಿದ್ದು. ಸಾಮಾನ್ಯವಾಗಿ ಸಾಹಸ ಚಿತ್ರಗಳಲ್ಲೇ ತನ್ನನ್ನು ತೊಡಗಿಸಿಕೊಂಡು ಬಂದು ಅಪಾರ ಜನಮನ್ನಣೆಯನ್ನು ಪಡೆದವನು ಮೆಲ್ ಗಿಬ್ಸನ್. ತನ್ನ ಸುಂದರ ಮುಖ ಹಾಗೂ ಅಂಗಸೌಷ್ಟವದಿಂದ ಚಿತ್ರ ರಸಿಕರ ಮನದಲ್ಲಿ ನೆಲಸಿದ್ದ ಮೆಲ್ ಗಿಬ್ಸನ್ ನ ಹೊಸ ಚಿತ್ರವೆಂದರೆ ಇಡೀ ಚಿತ್ರ ಜಗತ್ತೇ ಎದುರು ನೋಡುವಂತ ಸಂಗತಿಯಾಗಿತ್ತು
ತೊಂಬತ್ತರ ದಶಕದಲ್ಲಿ ಬ್ರೇವ್ ಹಾರ್ಟ್ ಎಂಬ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಚಿತ್ರವನ್ನು ಇದೇ ಗಿಬ್ಸನ್ ನಿರ್ಮಿಸಿ ನಿರ್ದೇಶಿದ್ದ. ಅದಕ್ಕಿಂತ ಮುಖ್ಯವಾಗಿ ಅದರಲ್ಲಿ ನಾಯಕನಾಗಿ ಮನೋಜ್ಞವಾದ ಅಭಿನಯವನ್ನೂ ಮಾಡಿದ್ದ. ಆ ಚಿತ್ರ ಅನೇಕ ರೀತಿಯ ಒಳ್ಳೆಯ ವಿಮರ್ಶೆ, ಪ್ರಶಸ್ತಿ ಗಳಿಸಿಕೊಂಡಿದ್ದಲ್ಲದೆ ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಹಣವನ್ನು ಸಹಾ ಬಾಚಿಕೊಂಡಿತು.
ಇಂತಹ ಮೆಲ್ ಗಿಬ್ಸನ್ ಈ ಚಿತ್ರದ ನಿರ್ಮಾಣವನ್ನು ಪ್ರಕಟಿಸಿದಾಗ ಆತನೇ ಯೇಸುಕ್ರಿಸ್ತನ ಪಾತ್ರವನ್ನು ಮಾಡಬಹುದೇ ಎಂಬ ಪ್ರಶ್ನೆಗಳು ಎದ್ದವು. ನೋಡಲು ತಕ್ಕ ಮಟ್ಟಿಗೆ ಯೇಸುವನ್ನು ಹೋಲಬಹುದಾದರೂ ಗಿಬ್ಸನ್ ಆ ಪಾತ್ರಕ್ಕೆ ಆರಿಸಿಕೊಂಡದ್ದು ಜಿಮ್ ಕೆವಜಲ್ ಎಂಬ ನಟನನ್ನು. ಕ್ಯಾಮರಾ ಹಿಂದೆ ನಿರ್ದೇಶಕ ಪಟ್ಟವನ್ನು ತಾನು ಹೊರುತ್ತಾನೆ ಮೆಲ್ ಗಿಬ್ಸನ್. ಆಶ್ಚರ್ಯವೆಂದರೆ ಯಾವುದೇ ನಿರ್ಮಾಣ ಸಂಸ್ಥೆಯೂ ಈ ಚಿತ್ರದ ನಿರ್ಮಾಣದಲ್ಲಿ ಆಸಕ್ತಿ ತೋರಲಿಲ್ಲ. ಆದರಿಂದ ಮೆಲ್ ಗಿಬ್ಸನ್ ತಾನೇ ಸ್ವತಃ ಮೂವತ್ತು ದಶ ಲಕ್ಷ ಡಾಲರುಗಳನ್ನು ಹೂಡಬೇಕಾಯಿತು.
ನಿರ್ಮಾಣ ಹಾಗೂ ಭಾಷೆ:
ಈ ಚಿತ್ರದ ಬಹುಭಾಗವನ್ನು ಇಟಲಿಯಲ್ಲೇ ಚಿತ್ರಿಸಲಾಯಿತು. ಅದಕ್ಕಿಂತ ವಿಶೇಷವೆಂದರೆ ಈ ಚಿತ್ರದ ತಯಾರಿಕೆಯಲ್ಲಿ ಬಹುತೇಕ ಹಾಲಿವುಡ್ ಜನರೇ ತೊಡಗಿಕೊಂಡರೂ ಈ ಚಿತ್ರದಲ್ಲಿ ಅರಾಮಯಿಕ್, ಹೀಬ್ರೂ ಹಾಗೂ ಲ್ಯಾಟಿನ್ ಭಾಷೆಯನ್ನೇ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಯೇಸುವಿನ ಕಾಲದ ಹಾಗೂ ಸ್ಥಳದ ಭಾಷೆಯನ್ನೇ ಬಳಸಿದರೆ ಚಿತ್ರ ಮತ್ತಷ್ಟು ನೈಜವಾಗಿಯೂ, ಆ ಕಾಲದ ಪರಿಸರಕ್ಕೆ ಹತ್ತಿರವಾಗಿಯೂ ಮೂಡಿ ಬರುತ್ತದೆ ಎಂಬುದು ನಿರ್ದೇಶಕ ಮೆಲ್ ಗಿಬ್ಸನ್ ಅಭಿಪ್ರಾಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಯೇಸುವಿನ ಕೊನೆಯ ದಿನದ ಘಟನೆಗಳು ಎಲ್ಲರಿಗೂ ಪರಿಚಿತವೇ ಆಗಿದ್ದೂ, ಯೇಸುವಿನ ಚಿಂತನೆ ಬೋಧನೆ ಮತ್ತು ಸುತ್ತಮುತ್ತಲಿನ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲು ಭಾಷೆಗಿಂತ ದೃಶ್ಯಗಳೇ ಪ್ರಧಾನ ಭೂಮಿಕೆ ಆಗಲಿ ಎಂಬುದು ಚಿತ್ರ ತಂಡದ ಅಭಿಪ್ರಾಯವಾಗಿತ್ತು.
ನಟರ ಪಾಡು :
ಕ್ರಿಸ್ತ ಪಾತ್ರಧಾರಿ ಜಿಮ್ ಕೆವಿಜೆಲ್ ಈ ಚಿತ್ರದ ಚಿತ್ರೀಕರಣದಲಿ ಪಟ್ಟ ಕಷ್ಟ ಒಂದೆರಡಲ್ಲ. ಒಮ್ಮೆ ಸಿಡಿಲು ಬಡಿದು ಬೆನ್ನ ಮೇಲೆ ದೊಡ್ಡ ಗಾಯ ಮೂಡಿದರೆ, ಮತ್ತೊಮ್ಮೆ ಭಾರವಾದ ಶಿಲುಬೆ ಬೆನ್ನ ಮೇಲೆ ಬಿದ್ದು ಭುಜದ ಮೂಳೆಗಳು ಮುರಿದಿದ್ದವು. ಶಿಲುಬೆ ಮೇಲೆ ತೂಗಾಡುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಬಳಲಿಕೆಯಾಗಿ ನ್ಯುಮೋನಿಯಕ್ಕೆ ತುತ್ತಾದರು. ಒತ್ತಡದ ಪರಿಣಾಮವಾಗಿ ಚಿತ್ರೀಕರಣದ ನಂತರ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಬೇಕಾಯಿತು. ಜಿಮ್ ಪ್ರತಿ ದಿನ ಎಂಟು ಗಂಟೆಗಳ ಕಾಲ ಮೇಕಪ್‍ಗಾಗಿ ಸಮಯ ಕಳೆಯಬೇಕಾಗುತಿತ್ತು.
ಬಿಡುಗಡೆ ಹಾಗೂ ಯಶಸ್ಸು:
ಈ ಚಿತ್ರ ೨೦೦೪ರ ಬೂದಿ ಬುಧವಾರದಂದು ಬಿಡುಗಡೆಗೊಂಡಿತು. ಸುಮಾರು ಮೂವತ್ತು ದಶಲಕ್ಷ ಡಾಲರ್ ನೊಂದಿಗೆ ನಿರ್ಮಾಣವಾದ ಈ ಚಿತ್ರ ಅದೆಷ್ಟು ಅಪಾರವಾದ ಯಶಸ್ಸನ್ನು ಪಡೆಯಿತೆಂದರೆ, ಕೊನೆಗೆ ಈ ಚಿತ್ರ ಅರು ನೂರು ದಶಲಕ್ಷ ಡಾಲರ್ ಗಳಷ್ಟು ಬಾಚಿಕೊಂಡಿತು ಅಂದರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಸುಮಾರು ನಾಲ್ಕುಸಾವಿರ ಕೋಟಿ ರೂಪಾಯಿ. ಚಿತ್ರ ವಿಮರ್ಶಕರ ಮೆಚ್ಚುಗೆ ಹಾಗೂ ಜನಪ್ರಿಯತೆಯನ್ನೂ ಪಡೆಯಿತು. ಮೂರು ಅಕಾಡೆಮಿ ಪ್ರಶಸ್ತಿಗಳೂ ಚಿತ್ರದ ಪಾಲಾಯಿತು. ಚಿತ್ರದ ನಾಯಕ ಕ್ರಿಸ್ತನ ಪಾತ್ರಧಾರಿ ಜಿಮ್ ಕೆವಜಲ್ ರಾತ್ರೋರಾತ್ರಿ ಮನೆಮಾತಾದ.
ವಿವಾದಗಳು :
ಹಾಗಾದರೆ ಚಿತ್ರದಲ್ಲಿ ಏನೂ ನ್ಯೂನತೆಗಳಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ೨೦೦೬ರ ಎಂಟರ್‍ಟೈನ್‍ಮೆಂಟ್ ಪತ್ರಿಕೆಯ ಪ್ರಕಾರ ಈ ಚಿತ್ರ ಅತ್ಯಂತ ವಿವಾದಾತ್ಮಕ ಚಿತ್ರ. ಚಿತ್ರ ಅನೇಕ ರೀತಿಯ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿತು. ಚಿತ್ರದ ಉದ್ದಕ್ಕೂ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬ ದೊಡ್ಡ ಕೂಗು ಎದ್ದಿತು. ಸೈನಿಕರು, ಸಿಪಾಯಿಗಳು ಚಿತ್ರದಲ್ಲಿ ಯೇಸುವನ್ನು ನಡೆಸಿಕೊಂಡ ರೀತಿ ಬರ್ಬರವಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ಅಷ್ಟೊಂದು ಪ್ರಮಾಣದ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲವೆಂಬ ಮಾತುಗಳೂ ಕೇಳಿ ಬಂದವು. ಚಿತ್ರವನ್ನು ನೋಡಿದಾಗ ಆ ಮಾತಿನಲ್ಲಿ ಸತ್ಯವಿದೆ ಎನಿಸುತ್ತದೆ. ಯೇಸುವನ್ನು ಕೊರಡೆಗಳಿಂದ ಹೊಡೆಯುವ ದೃಶ್ಯದಲ್ಲಿ ಯೇಸುವಿನಿಂದ ಸುರಿಯುವ ರಕ್ತದ ಪ್ರಮಾಣ ನಿಜವಾಗಿ ಸುರಿದರೆ ಯಾವುದೇ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ ಎಂದು ನಮಗೇ ಅನಿಸುತ್ತದೆ. ಅದೇ ರೀತಿ ಅನೇಕ ದೃಶ್ಯಗಳಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬದು ದೊಡ್ಡ ವಿವಾದಕ್ಕೆ ವೇದಿಕೆಯಾಯಿತು. ಸೌದಿ, ಬಹ್ರೈನ್, ಕುವೇಟ್ ಮುಂತಾದ ದೇಶಗಳಲ್ಲಿ ಚಿತ್ರವನ್ನು ಬಹಿಷ್ಕರಿಸಲಾಯಿತು.
ಹಾಗೆಯೇ ಯಹೂದ್ಯರನ್ನು ಚಿತ್ರದಲ್ಲಿ ಅತ್ಯಂತ ಕೀಳಾಗಿ ಹಾಗೂ ಕ್ರೂರವಾಗಿ ಚಿತ್ರಿಸಲಾಗಿದೆ ಎಂಬುದೂ ಸಹಾ ವಿಮರ್ಶಕರ ಅಭಿಪ್ರಾಯವಾಯಿತು. ಇತಿಹಾಸದ ಉದ್ದಕ್ಕೂ ಬೈಬಲ್ ಬಗೆಗಿನ ಅಪಸ್ವರದಲ್ಲಿ ಯಹೂದ್ಯರನ್ನು ಕ್ರೂರ ಜನರಾಗಿ ಚಿತ್ರಿಸಿಲಾಗಿದೆ ಎಂಬುದು ಸಾಮಾನ್ಯ ದೂರು. ಅದಕ್ಕೆ ತಕ್ಕಂತೆ ಇಲ್ಲೂ ಅದು ಮುಂದುವರಿದಿದೆ ಎಂಬ ಮಾತುಗಳು ಕೇಳಿ ಬಂದವು.
ಇನ್ನು ಚಿತ್ರೀಕರಣವೆಲ್ಲ ಮುಗಿದು ಚಿತ್ರವನ್ನು ಅಂದಿನ ಪೋಪ್ ಜಾನ್ ಪಾಲ್ ರವರಿಗೆ ತೋರಿಸಲಾಯಿತು. ಜಾನ್ ಪಾಲ್‍ರವರು ಚಿತ್ರ ’ಉತ್ತಮವಾಗಿದೆ, ಹೇಗಿದೆಯೋ ಹಾಗೆ ಮೂಡಿ ಬಂದಿದೆ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು ಎಂದು ಚಿತ್ರ ತಂಡ ಹೇಳಿತು. ಆದರೆ ಜಾನ್ ಪಾಲ್‍ರವರು ಹಾಗೇ ಹೇಳಿಯೇ ಇಲ್ಲ, ಚಿತ್ರ ತಂಡ ಅವರ ಹೆಸರನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಮತ್ತೊಂದು ವಿವಾದವೂ ಸೃಷ್ಟಿಯಾಯಿತು. ಚಿತ್ರ ಹಾಗೂ ಚಿತ್ರ ತಂಡ ಈ ವಿವಾದಗಳ ಅಡೆತಡೆಗಳನ್ನೆಲ್ಲಾ ದಾಟಿಕೊಂಡು ಮುಂದೆ ಹೋಗಲು ಯಶಸ್ವಿಯಾಯಿತು.
ಚಿತ್ರದ ಬಗೆಗಿನ ವಿವಾದಗಳು ಏನೇ ಇದ್ದರೂ ಚಿತ್ರವು ಅತ್ಯಂತ ಜನಪ್ರಿಯ ಹಾಗೂ ಯಶಸ್ವೀ ಚಿತ್ರಗಳಲ್ಲಿ ಒಂದಾಗಿ ತನ್ನ ಸ್ಥಾನ ಪಡೆದಿದೆ. ಒಮ್ಮೆ ನೋಡಲೇಬೇಕಾದ ಚಿತ್ರ.
¨ ಪ್ರಶಾಂತ್ ಇಗ್ನೇಷಿಯಸ್
No comments:
Post a Comment