ಆಧುನಿಕ ಭಾರತದ ಇತಿಹಾಸ ಮರುನಿರೂಪಣೆಯ ಪ್ರಕ್ರಿಯೆಯಲ್ಲಿ ದಲಿತ ಚಳವಳಿಗೆ ಇತಿಹಾಸಕಾರರಿಂದ ಸಿಗಬೇಕಾದ ಗೌರವ ದೊರೆಯದಿರುವುದು ವಿಷಾದನೀಯ. ದಲಿತರನ್ನು ತೀರ ಇತ್ತೀಚಿನವರೆಗೂ ತಮ್ಮದೇ ಇತಿಹಾಸವಿರದ ಸಮುದಾಯವೆಂದು ಗ್ರಹಿಸಲಾಗಿದೆ ಮತ್ತು ಅವರ ಹೋರಾಟವನ್ನು ಕಡೆಗಣಿಸಲಾಗಿದೆ. ಈ ದೇಶದ ಇತಿಹಾಸದಲ್ಲಿ ದಲಿತರನ್ನು ಕೇವಲ object ಗಳನ್ನಾಗಿ ಪರಿಗಣಿಸಲಾಗಿದೆ ವಿನಃ subject ಗಳನ್ನಾಗಿ ಅಲ್ಲ.
ಬ್ರಿಟಿಷ್ ಇತಿಹಾಸಕಾರರಾದ ಥಾಮ್ಸನ್ ಮತ್ತು ಗ್ಯಾರೆಟ್ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘‘ರೈಸ್ ಅಂಡ್ ಫುಲ್‌ಫಿಲ್ ಮೆಂಟ್ ಆಫ್ ಬ್ರಿಟಿಷ್ ರೂಲ್ ಇನ್ ಇಂಡಿಯಾ’’ ಎಂಬ ಗ್ರಂಥದಲ್ಲಿ ದಲಿತ ಚಳವಳಿಯ ಕುರಿತು ಕೆಲವು ಮಾಹಿತಿ ನೀಡುತ್ತಾರೆ.
ಆದರೂ ಅದನ್ನು ಅವರು ವಿಶ್ಲೇಷಿಸುವುದಿಲ್ಲ. ವಿನ್ಸೆಂಟ್ ಸ್ಮಿತ್ ಅವರ ‘‘ಆಕ್ಸ್‌ಫರ್ಡ್ ಹಿಸ್ಟರಿ ಆಫ್ ಇಂಡಿಯಾ’’ ಮತ್ತು ಪಿ. ಇ. ರಾಬರ್ಟ್ಸ್ ಅವರ ‘‘ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಅಂಡರ್ ದಿ ಕಂಪೆನಿ ಅಂಡ್ ದಿ ಕ್ರೌನ್’’ ಎಂಬ ಎರಡು ಪುಸ್ತಕಗಳನ್ನು ಪುನರ್‌ಪರಿಶೀಲನೆ ಮಾಡುವಾಗ ಪರ್ಸವಲ್ ಸ್ಪಿಯರ್‌ರವರು ಗಾಂಧೀಜಿಯವರ ಹೋರಾಟದ ಕುರಿತು ಚರ್ಚಿಸುತ್ತಾ, ಗಾಂಧಿ ದುರ್ಬಲ ವರ್ಗದವರ ಏಳಿಗೆಗಾಗಿ ನಡೆಸಿದ ಚಳವಳಿಯ ಮುಖಂಡರಾಗಿದ್ದರು ಎಂದು ಬಣ್ಣಿಸುತ್ತಾರೆ.
ಆದರೆ, ಅಂಬೇಡ್ಕರ್ ಒಬ್ಬರು ಅಸಾಮಾನ್ಯ, ಧೈರ್ಯವಂತ ದಲಿತ ಸಮುದಾಯದ ಮುಖಂಡನೆಂದು ಪರ್ಸಿವಲ್ ಸ್ಪಿಯರ್ ಒಪ್ಪಿಕೊಳ್ಳುವುದಿಲ್ಲ. ಆಧುನಿಕ ಭಾರತದ ಕುರಿತು ಬರೆದ ಆರಂಭಿಕ ಬ್ರಿಟಿಷ್ ಇತಿಹಾಸಕಾರರಲ್ಲಿ ಎಲ್. ಎಸ್. ಎಸ್. ಓಮಲ್ಲೆಯವರು ದಲಿತ ಚಳವಳಿಯ ಕುರಿತು ಪ್ರತ್ಯೇಕವಾಗಿ ಚರ್ಚಿಸುತ್ತಾರೆ.
ಈ ಚಳವಳಿಯು ಅಸ್ಪೃಶ್ಯರ ಏಳಿಗೆಗಾಗಿ ದಲಿತೇತರ ಮುಖಂಡರು ನಡೆಸಿದ ಚಳವಳಿ ಎಂದೇ ಗುರುತಿಸುತ್ತಾರೆ. ಇತ್ತೀಚೆಗಿನ ಬರಹಗಾರ್ತಿ ಜೂಡಿತ್ ಬ್ರೌನ್ ಅವರು ದಲಿತರ ಸ್ಥಿತಿಗತಿಗಳನ್ನು ಕುರಿತು ಸ್ವಲ್ಪ ಮಟ್ಟಿಗೆ ಚರ್ಚಿಸುತ್ತಾರಾದರೂ ದಲಿತರೇ ತಮ್ಮ ಸಮಸ್ಯೆಗಳನ್ನು ನಿರ್ಮೂಲನಗೊಳಿಸಲು ನಡೆಸಿದ ಸಂಘಟಿತ ಹೋರಾಟವನ್ನು ಪರಿಗಣಿಸಲು ಅವರು ಯಶಸ್ವಿಯಾಗಿರಲಿಲ್ಲ.
ಭಾರತೀಯ ಇತಿಹಾಸಕಾರರೂ ಕೂಡ ದಲಿತ ಚಳವಳಿಯ ಬಗ್ಗೆ ಬೆಳಕು ಚೆಲ್ಲಲು ಹೆಚ್ಚಿನ ಪ್ರಯತ್ನವನ್ನು ಮಾಡಿರುವುದು ಕಂಡುಬರುವುದಿಲ್ಲ. ಅವರು ದಲಿತರ ಕುರಿತು ಬರೆದಿರುವುದು ಸಾಮಾಜಿಕ ಸುಧಾರಣೆಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಮಾತ್ರ. ಅದರಲ್ಲೂ ಅವರನ್ನು, ಅವರ ಸಂಘಟಿತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದನ್ನು ಗುರುತಿಸಲಿಲ್ಲ. ಬದಲಾಗಿ, ನಿಷ್ಕ್ರಿಯರಾಗಿ ಬಲಿಗೊಳಗಾದವರು, ಕೇವಲ ಸವಲತ್ತುಗಳ ಅನುಭೋಗಕ್ಕಾಗಿ ಮಾತ್ರ ಅವರು ಈ ಸಮಾಜದಲ್ಲಿ ಹುಟ್ಟಿದವರು ಎಂದು ಚಿತ್ರಿಸಲಾಗಿದೆ.
ರಾಷ್ಟ್ರವಾದಿ ಇತಿಹಾಸಕಾರ ಆರ್. ಸಿ. ಮಜುಂದಾರ್ ನವರು ದಲಿತ ಚಳವಳಿಯ ಕುರಿತು ಕೇವಲ ಒಂದೇ ಒಂದು ಪ್ಯಾರಾವನ್ನು ಮೀಸಲಿಟ್ಟಿದ್ದರು. ಅಲ್ಲದೆ, ಮೇಲ್ವರ್ಗದವರ ಅಡಿಯಲ್ಲಿ ಜೀತದಾಳಾಗಿ, ಅವರ ಚಾಕರಿ ಮಾಡಲು ಮಾತ್ರ ಅರ್ಹರೆಂಬ ಧಾಟಿಯಲ್ಲಿ ದಲಿತರನ್ನು ಗುರುತಿಸುತ್ತಾರೆ. ಆರ್. ಆರ್. ಸೇತಿಯವರು ದಲಿತರನ್ನು ಕುರಿತು ಪ್ರಸ್ತಾಪಿಸುವುದು 1932ರ ಕಮ್ಯೂನಲ್ ಅವಾರ್ಡ್ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಮತ್ತು ಸಾಮಾಜಿಕ ಉದ್ಧಾರಕ್ಕಾಗಿ ನಡೆಸಿದ ಯೋಜನೆಯಡಿಯಲ್ಲಿ ಸವಲತ್ತುಗಳನ್ನು ಪಡೆಯಲು ಅರ್ಹರಾದ object ಗಳೆಂದು ಬಣ್ಣಿಸುತ್ತಾರೆ.
ಆರ್. ಸಿ. ಮಜುಂದಾರ್‌ರವರು ಇನ್ನೊಂದು ಕೃತಿಯಲ್ಲಿ ಅಂಬೇಡ್ಕರ್ ಮತ್ತು ದಲಿತರನ್ನು ಕುರಿತು ಪ್ರಸ್ತಾಪಿಸಿದರೂ ಕೂಡ, ದಲಿತರು 1930 ಮತ್ತು 40ರ ದಶಕಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆಸಿದ ಚಳವಳಿಯಲ್ಲಿ ತಮ್ಮ ಸ್ವಾರ್ಥ ರಾಜಕೀಯ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ರಾಜಕೀಯ ಮಾಡಲೋಸ್ಕರ ಭಾಗವಹಿಸಿದವರೆಂದು ತಿಳಿಸುತ್ತಾರೆ. ಇದೇ ಇತಿಹಾಸಕಾರ ಗಾಂಧೀಜಿಯವರನ್ನು ಈ ದೇಶ ಕಂಡ ಅಪರೂಪದ ಸಮಾಜ ಸುಧಾರಕರೆಂದು ವೈಭವೀಕರಿಸಿದ್ದು ಅಲ್ಲದೆ, ಕಾಂಗ್ರೆಸ್ ಪಕ್ಷವೇ ದಲಿತರ ಉದ್ಧಾರಕ್ಕಾಗಿ ನಿರಂತರ ಹೋರಾಟ ನಡೆಸಿದ ಸಂಘಟನೆ ಎಂದು ಅಭಿಪ್ರಾಯಪಡುತ್ತಾರೆ.
ಜೊತೆಗೆ, ಅಂಬೇಡ್ಕರ್ ನವರನ್ನು ಕೇವಲ ಭಾರತೀಯ ಜಾತಿ ವ್ಯವಸ್ಥೆಯ ವಿಮರ್ಶಕ, ಟೀಕಾಕಾರ ಎಂದು ಚಿತ್ರಿಸುತ್ತಾರೆ. ಈ ನಡುವೆ ಬಿಪಿನ್ ಚಂದ್ರರವರು ದಿ ಸ್ಟ್ರಗಲ್ ಎಗೇನ್ಸ್ಟ್ ಕಾಸ್ಟ್ ಎಂಬ ಅಧ್ಯಾಯದಲ್ಲಿ ದಲಿತ ಚಳವಳಿಯ ಕುರಿತು ಸ್ವಲ್ಪ ವಿವರಣೆ ನೀಡುತ್ತಾರೆ. ಹಿಂದಿನ ಇತಿಹಾಸಕಾರರಿಗಿಂತ ಬಿಪನ್ ಚಂದ್ರ ರವರು ಸ್ವಲ್ಪ ವಾಸಿ ಎನ್ನಬಹುದು, ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬುದನ್ನು ಅವರು ಗೌರವಿಸುತ್ತಾರೆ. ಆದಾಗ್ಯೂ, ಬಿಪಿನ್ ಅವರು ತಮ್ಮ ಇನ್ನೊಂದು ಪುಸ್ತಕದಲ್ಲಿ ಗಾಂಧೀಜಿಯವರ ‘‘ಹರಿಜನ್ ಅಪ್‌ಲಿಫ್ಟ್ ಮೂವ್ ಮೆಂಟ್’’ನ್ನು ಮಾತ್ರ ಚರ್ಚಿಸುತ್ತಾರೆ. ಕೊನೆಯದಾಗಿ, ಸುಮಿತ್ ಸರ್ಕಾರ್ ನವರು ಮಹಾರ್ ಚಳವಳಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರೂ ಕೂಡ, ಅದನ್ನು ಅವರು 1930ರ ದಶಕದಲ್ಲಿ ಗಾಂಧೀಜಿಯವರು ಹರಿಜನ್ ಪತ್ರಿಕೆಯ ಪ್ರಚಾರವನ್ನು ಉದ್ದೇಶಿಸಿ ಬರೆಯುವ ಸಂದರ್ಭದಲ್ಲಿ ಮಾತ್ರ.
ಈ ಮೇಲಿನ ಇತಿಹಾಸ ಕಥನವನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಒಂದು ಮುಖ್ಯ ಅಂಶ ಬೆಳಕಿಗೆ ಬರುತ್ತದೆ. ಅದೇನೆಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ದಲಿತ ಚಳವಳಿ ಅಂತ ಒಂದು ಹೋರಾಟ ಸೈದ್ಧಾಂತಿಕ ನೆಲೆಯಲ್ಲಿ ನಡೆದೇ ಇರಲಿಲ್ಲ ಎಂದು ಮೇಲೆ ಪ್ರಸ್ತಾಪಿಸಿದ ಇತಿಹಾಸಕಾರರು ಮನಗಂಡಿದ್ದಾರೆ ಮತ್ತು ಅಂತಹ ಮನೋಭಾವನೆ ಬರುವಂತೆ ಆಧುನಿಕ ಭಾರತದ ಇತಿಹಾಸವನ್ನು ರಚಿಸಿದ್ದಾರೆ.
ಈ ಎಲ್ಲಾ ಇತಿಹಾಸಕಾರರು ದಲಿತರು ಉದ್ಧಾರ ಆಗುವ ಒಂದು ಸಮುದಾಯವೇ ಅಲ್ಲ ಎಂದು ತಿಳಿದಿದ್ದಾರೆ. ಒಂದು ವೇಳೆ ಅವರು ಸ್ವತಂತ್ರ ಬದುಕನ್ನು ನಡೆಸಲು ಶಕ್ತಿ ಪಡೆದುದು ಹೌದಾದರೆ, ಅದು ಸಾಮಾಜಿಕ ಕಳಕಳಿ ಹೊಂದಿದ್ದ ಮೇಲ್ಜಾತಿಯ ಮುಖಂಡರು ತೋರಿದ ಅನುಕಂಪ ಮತ್ತು ಅವರು ದಲಿತ ಪರ ನಡೆಸಿದ ಹೋರಾಟದ ಫಲಶ್ರುತಿಯೆಂದು ಸಮರ್ಥಿಸುತ್ತಾರೆ. ಇಂತಹ ದೃಷ್ಟಿಕೋನವು ಎಲಿಟಿಸ್ಟ್ ಆಗಿರುವುದಲ್ಲದೆ ಒಂದು ಮನೋಧರ್ಮದ ಅಡಿಯಲ್ಲಿ ಹುಟ್ಟಿಕೊಂಡ ಇತಿಹಾಸರಚನಾ ಮಾದರಿಯಾಗಿದೆ.
1969ರಲ್ಲಿ ಇಲಾನೀರ್ ಝೇಲಿಯಟ್ ಅವರ ಪಿ. ಎಚ್. ಡಿ. ಮಹಾಪ್ರಬಂಧದ ಚಿಂತನೆಯನ್ನೊಳಗೊಂಡ ಸಂಶೋಧನಾ ಕೃತಿಯ ಪ್ರಕಟಣೆಯೊಂದಿಗೆ ದಲಿತ ಚಳವಳಿಯನ್ನು ಉದ್ದೇಶಿಸಿ ಅನೇಕ ಗ್ರಂಥಗಳು ಪ್ರಕಟಣೆಯಾಗಲು ಆರಂಭವಾಯಿತು. ಈ ಗ್ರಂಥಗಳಿಂದ ದಲಿತ ಚಳವಳಿಯ ಕುರಿತು ಇರುವ ಪೂರ್ವಗ್ರಹ ಪೀಡಿತ ಗ್ರಹಿಕೆಗಳು ಬದಿಗೊತ್ತಲ್ಪಟ್ಟು ಪ್ರಮುಖವಾದ ಒಂದು ವಿಚಾರವನ್ನು ಸಾರ್ವತ್ರಿಕವಾಗಿ ಬಹಿರಂಗಪಡಿಸುತ್ತವೆ.
ಅಂದರೆ, ಭಾರತದಲ್ಲಿ 1919ರ ಸಂವಿಧಾನ ಅನುಷ್ಠಾನಕ್ಕೆ ಬರುವ ಮೊದಲೇ ದಲಿತ ಚಳವಳಿ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಬೆಳೆದಿದೆ ಎಂಬುದಕ್ಕೆ ಅನೇಕ ಪುರಾವೆಗಳನ್ನು ಮತ್ತು ಸಮರ್ಥನೆಗಳನ್ನು 1969ರ ನಂತರ ಪ್ರಕಟವಾದ ಕೃತಿಗಳು ನೀಡುತ್ತವೆ. ಈ ಚಳವಳಿ ಆ ಕಾಲಕ್ಕೆ ಬಲಿಷ್ಠವಾಗಿ ಬೆಳೆದಿರುವುದಲ್ಲದೆ, 1920ರ ಮತ್ತು 30ರ ದಶಕಗಳಲ್ಲಿ ದೇಶದ ಇತಿಹಾಸದಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು ಎಂಬುದನ್ನು ಸಾದರಪಡಿಸುತ್ತವೆ.
ಮುಸ್ಲಿಂ ಲೀಗ್ ಅಥವಾ ಹಿಂದೂ ಮಹಾಸಭಾದಂತಹ ಸಂಘಟನೆಗಳನ್ನು ಗಮನಿಸಿದರೆ ದಲಿತರಿಗೆ ಅಷ್ಟೊಂದು ಪ್ರಬಲ ಸಂಘಟನೆಗಳು ಸ್ವತಂತ್ರವಾಗಿ ಬೆಳೆಯದೇ ಇದ್ದಿರಬಹುದು. ಆದರೆ, ಗ್ರಾಮೀಣ ಮಟ್ಟದಲ್ಲಿ ಬಹಳಷ್ಟು ಸಂಘಟನೆಗಳು ದಲಿತರ ಪರವಾಗಿ ಕೆಲಸ ಮಾಡಲು ಕಾರ್ಯಪ್ರವೃತ್ತವಾಗಿದ್ದವು. ಅವರಲ್ಲೂ ಗೌರವಾನ್ವಿತ ಮುಖಂಡರೂ ಇದ್ದರು ಎಂಬುದಕ್ಕೆ ಬಿ. ಆರ್. ಅಂಬೇಡ್ಕರ್‌ರವರೇ ಸಾಕ್ಷಿ.
ಇವರೂ ಕೂಡ ದಲಿತರಿಗೋಸ್ಕರ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವ ಆಶಯದೊಂದಿಗೆ ಕಾನೂನುಬದ್ಧವಾದ ಬೇಡಿಕೆಗಳನ್ನು ರೂಪಿಸಿಕೊಂಡಿದ್ದರು. ಈ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದು ಸಮಾನತೆ, ನ್ಯಾಯಕ್ಕಾಗಿ ಮತ್ತು ಸ್ವಾವಲಂಬನೆಗಾಗಿ ಹೋರಾಟ ನಡೆಸಲು ತಯಾರಿ ನಡೆಸಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಎಲ್ಲಾ ಬೇಡಿಕೆಗಳು 1950ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಅಳವಡಿಸಲಾಗಿರುವುದು ಮಹತ್ತರವಾಗಿದೆ.
¨ ಅಜಯ್ ರಾಜ್
No comments:
Post a Comment