Friday, 10 August 2018

ದನಿ ರೂಪಕ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲಿ ನನ್ನ ನಾಡು...
ವಾಲ್ಸ್ ಎಂಬ ಕಾದಂಬರಿಯಲ್ಲಿ ವೈಕೊಮ್ ಮುಹಮದ್ ಬಸೀರ್ ಎಂಬ ಲೇಖಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ:

೧. ನಾನು ಏಕೆ ಸ್ವತಂತ್ರನಾಗಿರಬೇಕು?

೨. ಯಾರಿಗೆ ಸ್ವಾತಂತ್ರ‍್ಯ ಬೇಕು?

ಕಾದಂಬರಿಕಾರ ಇಲ್ಲಿ ಸ್ವಾತಂತ್ರ್ಯದ ಅರ್ಥಹೀನತೆಯ ಬಗ್ಗೆ ಹೇಳುತ್ತಿದ್ದಾನೆ. ಪ್ರೀತಿ ರಹಿತ ಜಗತ್ತಿನಲ್ಲಿ ಅಥವಾ ದ್ವೇಷ ತುಂಬಿದ ಜಗತ್ತಿನಲ್ಲಿ ಸ್ವಾತಂತ್ರ್ಯದ ಬೆಲೆ ಏನು? ಒಂದು ಭ್ರಾತೃತ್ವದ ಸಮುದಾಯದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥವಿರುವುದು. ನಾವು ಪ್ರಂಚ್ ಕ್ರಾಂತ್ರಿಯ ಧ್ಯೇಯವಾಕ್ಯವನ್ನು ನೆನೆಸಿಕೊಳ್ಳುವುದು ಸೂಕ್ತ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ; ಇವುಗಳಲ್ಲಿ ಯಾವುದೂ ಪರಸ್ಪರ ಒಂದರಿಂದ ಬೇರ್ಪಡಿಸಲಾಗದು. 

ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳ್ಳೋಣ.

ಎಲ್ಲಿ ಮನಸ್ಸು ನಿರ್ಭಯವೋ, 

ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಜ್ಞಾನ ಸ್ವತಂತ್ರವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಜಗತ್ತು ಸಂಕುಚಿತವಾದ

ಮನೆಗೋಡೆಗಳಿಂದ ಒಡೆದು

ಚೂರುಚೂರಾಗಿಲ್ಲವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಮನಸ್ಸನ್ನು ನೀನು ಸತತ 

ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ ಮುನ್ನಡೆಸುತ್ತೀಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು



“ನಿನಗೆ ವಯಸ್ಸು ಎಷ್ಟು?” 


ಮೊನ್ನೆ ನನ್ನ ತಂಗಿ ಮಗ ಕನ್ನಡ ಪಠ್ಯ ಪುಸ್ತಕವನ್ನು ತೆರೆದು, ನಾನು ಪಠ್ಯವನ್ನು ಓದುತ್ತೇನೆ, ನಾನು ಓದುವುದರಲ್ಲಿ ಲೋಪವಿದ್ದರೆ ದಯವಿಟ್ಟು ನನ್ನನ್ನು ತಿದ್ದಿ ಎಂದು ಹೇಳಿ ಓದಲು ಪ್ರಾರಂಭಿಸಿದ. ಪಾಠದ ಹೆಸರು ಬುದ್ಧಿವಂತ ಮುದುಕ. ಕಥೆಯು ತುಂಬ ಆಸಕ್ತಿಕರ ಎಂದೆನಿಸಿ ಇಲ್ಲಿ ಆ ಕಥೆಯ ಒಂದು ಭಾಗವನ್ನು ಹೇಳುತ್ತಿದ್ದೇನೆ:


ಒಮ್ಮೆ ರಾಜನು ಬೇಟೆ ಮುಗಿಸಿ ಹಿಂದಿರುಗುವಾಗ ವಿಶ್ರಾಂತಿ ಬಯಸಿ ದಾರಿಯಲ್ಲಿ ಕಂಡ ಒಂದು ಮನೆಗೆ ಬಂದ. ಅಲ್ಲಿ ಒಬ್ಬ ಮುದುಕ ಮಾವಿನ ಗಿಡವನ್ನು ನೆಟ್ಟು ಪಾತಿ ಮಾಡಿ ನೀರು ಹಾಕುತ್ತಿದ್ದ. ತನ್ನ ಇಳಿ ವಯಸ್ಸಿನಲ್ಲಿಯೂ ಕೆಲಸ ಮಾಡುತ್ತಿರುವನಲ್ಲಾ ಆ ಮುದುಕ ಎಂದು ಆಶ್ಚರ್ಯದಿಂದ “ನಿನಗೆ ವಯಸ್ಸು ಎಷ್ಟು?” ಎಂದು ಕೇಳಿದ. ಮುದುಕ “ನನಗೆ ಮೂರು ವರ್ಷ” ಎಂದು ಉತ್ತರಿಸಿದ. ತಕ್ಷಣ ದಂಡನಾಯಕ “ಇವರು ಯಾರು ಗೊತ್ತಾ? ಇವರು ಈ ನಗರದ ಮಹಾರಾಜರು. ತಲೆ ಹರಟೆ ಉತ್ತರ ನೀಡಬೇಡ. ಮಹಾರಾಜರ ಮುಂದೆ ಅಪಹಾಸ್ಯವೇ” ಎಂದು ಗದರಿಸಿದ. “ಅಪ್ಪ ನಾನು ಅಪಹಾಸ್ಯ ಮಾಡುತ್ತಿಲ್ಲ. ನಾನು ಸರಿಯಾದ ಉತ್ತರವನ್ನೇ ನೀಡಿದೆ” ಎಂದು ಮುದುಕ ಉತ್ತರ ಕೊಡಲು, ರಾಜನಿಗೆ ಕುತೂಹಲವಾಗಿ “ಏನು ಹಾಗೆಂದೆರೆ?” ಎಂದು ಪ್ರಶ್ನಿಸಿದ. ಮುದುಕ “ನಾನು ಮೂರು ವರ್ಷಗಳ ಹಿಂದಿನವರೆಗೂ ನನಗಾಗಿ, ನನ್ನ ಸಂಸಾರಕ್ಕಾಗಿ ನನ್ನ ಮಕ್ಕಳಿಗಾಗಿ ಜೀವನ ಮಾಡಿದ್ದೆ. ಕಳೆದ ಮೂರು ವರ್ಷಗಳಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವೆ. ಯಾವತ್ತಿನಿಂದ ಒಬ್ಬ ಮನುಷ್ಯ ಪರೋಪಕಾರದಲ್ಲಿ, ಸಮಾಜ ಸೇವೆಯಲ್ಲಿ ತೊಡಗುತ್ತಾನೋ ಅಂದಿನಿಂದ ಅವನ ವಯಸ್ಸು ಆರಂಭವಾಗುತ್ತದೆ. ಆದ್ದರಿಂದ ಈ ರೀತಿಯ ಕೆಲಸದಲ್ಲಿ ತೊಡಗಿ ಮೂರು ವರ್ಷವಾಯಿತು. ಅದಕ್ಕೆ ನನಗೆ ಈಗ ಮೂರು ವರ್ಷ ಎಂದು ಹೇಳಿದೆ” ಎಂದ.

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...