ಇದೇ ಸಭಾಂಗಣದಲ್ಲೆ, ಇಲ್ಲೆ ಬಹುಶಃ ದಸಂಸದ ಒಡಕಿನ ಸಂದರ್ಭದಲ್ಲಿ ಕೆಲವು ಮಾತುಗಳನ್ನಾಡಿದ್ದೆ. ಇಲ್ಲಿ ಒಂದು ಸಭೆ ನಡೆಯುತ್ತಿದ್ದರೆ ಇನ್ನೆಲ್ಲೊ ಇನ್ನೊಂದು ಬಣದ ಸಭೆ ನಡೆಯುತ್ತಿತ್ತು. ಅಂದು ಮಾತಾಡಿದ್ದು ಈಗ ನೆನಪಿಗೆ ಸಿಗುತ್ತಿರುವುದು ಇಷ್ಟು: ಗೆಳೆಯರೇ, ಒಂದು ಸಿನಿಮಾ ಹಾಡು ಇದೆ. ನಾಳೈ ನಮದೈ ಅಂತ. ತಮಿಳು ಹಾಡು ಇದು. ಅಶೋಕಪುರಂನಲ್ಲಿ ನಮ್ಮ ಮನೆಯಿದ್ದಾಗ ಸಿದ್ಧಾರ್ಥ ಹಾಸ್ಟಲ್ ಮುಂದೆ ಬಂದಾಗ, ಒಂದು ಹುಡುಗ ನಾಳೈ ನಮದೈ ಹಾಡನ್ನು ಉತ್ಕಂಠಿತನಾಗಿ ಹಾಡುತ್ತಿದ್ದ. ಹಾಡು ಮುಗಿಯುವವರೆಗೂ ನಿಂತು ಕೇಳಿದ್ದೆ. ಅಷ್ಟು ತುಂಬಿಕೊಂಡು ಹಾಡುತ್ತಿದ್ದ. ಆ ಹುಡುಗನ ಹೆಸರು ಕೇಳಿದಾಗ ಮಲ್ಲಿಕಾರ್ಜುನಸ್ವಾಮಿ ಅಂತ ತಿಳೀತು. ಇದೂ ನೆನಪಿದೆ. ಈ ಹಾಡು ಎಷ್ಟೋ ಕಾಲ ನನ್ನನ್ನು ಹಿಂಬಾಲಿಸುತ್ತಿತ್ತು. ಹೋರಾಟಗಾರರು ಆದರ್ಶವಾದಿಗಳು ಇನ್ನೂ ಹುಟ್ಟದ ನಾಳೆಗಳಲ್ಲಿ ಹೆಚ್ಚಾಗಿ ಜೀವಿಸುತ್ತಿರುತ್ತಾರೆ. ಅವರು ಇಂದು ಹೆಚ್ಚಾಗಿ ಬದುಕುತ್ತಿರುವುದಿಲ್ಲ.
ಈ ನಾಳೆಗಳವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ನಾಳೆಗಳಿದ್ದು ಅವೂ ಜಗಳ ಆಡುತ್ತಿರುತ್ತವೆ. ಆದ್ದರಿಂದ ದಯವಿಟ್ಟು ಇಂದು ಜೀವಿಸಿ. ಮುಖಾಮುಖಿಯಾದರೆ ನಮ್ಮ ಎಷ್ಟೋ ಸಮಸ್ಯೆಗಳು ಜಗಳಗಳು ತಂತಾನೆ ಕರಗಬಹುದು ಎಂದಿದ್ದೆ. ಯಾಕೆಂದರೆ ನಾಳೆಗಳಲ್ಲಿ ಜೀವಿಸುವವರು ಪಾದವಿಲ್ಲದೆ ಚಲಿಸಿದಂತೆ- ಎಂದೂ ಅಂದಿದ್ದೆ. ಇಂದು ಏನಾಗಿದೆ? ನಿನ್ನೆ ಅಂದರೆ ಗತಕಾಲದಲ್ಲಿ ಜೀವಿಸುವವರ ಕಾಟ ಹೆಚ್ಚಾಗಿದೆ. ನಾಳೆ ಜೀವಿಸುತ್ತಿರುವವರಂತೆಯೇ ನೆನ್ನೆ ಅಂದರೆ ಗತಕಾಲದಲ್ಲಿ ಜೀವಿಸುತ್ತಿರುವವರೂ ಇದ್ದಾರೆ. ಇವರೂ ಹೆಚ್ಚಾಗಿ ಇಂದು ಬದುಕುತ್ತಿರುವುದಿಲ್ಲ. ನೆನ್ನೆ ಬದುಕುತ್ತಿರುವವರ ಪಾದ ಹಿಂದಕ್ಕಿರುತ್ತದೆ. ಹಾಗಾಗಿ ಇವರ ಕಾಟ ಜಾಸ್ತಿ. ಇದು ಭೂತ ಪ್ರೇತ ಕಾಟ. ಈಗಿನ ಉದಾಹರಣೆ ನೋಡಿ. ಕನ್ನಡ ಸಂಸ್ಕೃತಿಯನ್ನು ಚಿಗುರಿಸುತ್ತಿರುವ ಹಂಪಿ ವಿಶ್ವವಿದ್ಯಾನಿಲಯದ ಜಾಗವನ್ನು ಕಿತ್ತು ಗತ ಕೃಷ್ಣದೇವರಾಯನ ಸ್ಮಾರಕ ಮಾಡಲು ಖಾಸಗಿಯವರಿಗೆ ಕೊಡಲಾಗುತ್ತಿದೆಯಂತೆ. ಇದು ಸ್ಮಶಾನ ವೈಭವೀಕರಿಸಿದಂತೆ ಅಲ್ಲವೆ? ಸಂಸ್ಕೃತಿ ಹೆಸರಲ್ಲಿ ಮಾಡುತ್ತಿರುವ ಈ ಕೃತ್ಯ ಸಂಸ್ಕೃತಿ ಹೀನ ಕೆಲಸ ಅಲ್ಲವೆ?
ಈ ಜಾಗ ಪಡೆಯಲು, ಬಿಜೆಪಿ ಅನಂತಕುಮಾರ್ ನವರ ಪತ್ನಿ ಇರಬೇಕು, ವೀರಗಚ್ಚೆ ಹಾಕಿಕೊಂಡು ದಾಳಿ ಮಾಡುತ್ತಿದ್ದಾರೆ. ನನಗೆ ಒಂದೊಂದು ಸಲ ಅನ್ನಿಸುತ್ತೆ- ಹಿಂದೆ ಭಾರತದ ಮೇಲೆ ದಾಳಿ ಮಾಡಿ ದೋಚುತ್ತಿದ್ದ ದಾಳಿಕೋರರು ದೋಚಿಕೊಂಡು ಹೋಗುವಾಗ ಏನೋ ಹೆಚ್ಚುಕಮ್ಮಿ ಮಾಡಿ ಹುಟ್ಟಿದ ಸಂತಾನವೇನೋ ಇವರು! ಅದಕ್ಕಾಗಿ ಭೂಮಿಯ ಹೊರಮೈ ಒಳಮೈ ಎಲ್ಲವನ್ನೂ ಧ್ವಂಸ ಮಾಡಿ ದೋಚುತ್ತಿದ್ದಾರೆ ಅನ್ನಿಸುತ್ತದೆ. ಈ ನೆನ್ನೆ ಬದುಕುವರಲ್ಲೂ ನನ್ನ ಪ್ರಾರ್ಥನೆ: ದಯವಿಟ್ಟು ವರ್ತಮಾನದಲ್ಲಿ ಬದುಕಿರಿ.
ನಿನ್ನೆ ನಾಳೆಗಳು ಬೇಡ. ಇಂದು ಜೀವಿಸೋಣ.
ದೇವನೂರ ಮಹಾದೇವ /ಎದೆಗೆ ಬಿದ್ದ ಅಕ್ಷರ / ೭೪
No comments:
Post a Comment