Friday, 10 August 2018

ಕೊನೇ ಮಾತು


ದೇಕೆ ಹೀಗೆ? ಮಾಡಬೇಕಾದ್ದನ್ನು ಮಾಡಲಾಗುತ್ತಿಲ್ಲ, ಮಾಡಬೇಕಾದುದಲ್ಲಿ ಮನಸ್ಸಿಲ್ಲ. ಖಾಲಿ ಖಾಲಿಯಾಗಿಬಿಟ್ಟಿರುವ ಮನಸು. ವಾಡಿಕೆಯ ಕ್ರಮವಾಗಿಬಿಟ್ಟಿರುವ ಸಪ್ಪೆ ಬದುಕು. ಪಟ್ಟುಬಿಡದೆ ಗಟ್ಟಿಯಾಗಿ ಅಪ್ಪಿಗೊಂಡಿರುವ ಯಾಂತ್ರಿಕತೆ. ಡೆಡ್ ಲೈನು, ಟಾರ‍್ಗೆಟ್ಟುಗಳೆಂಬ ಒತ್ತಡಗಳಲ್ಲಿ ವಾರ ಪೂರ್ತಿ ಕತ್ತೆಯಂತೆ ದುಡಿದರೂ ಮರೀಚಿಕೆಯಾಗಿಬಿಟ್ಟಿರುವ ತೃಪ್ತಿ, ಸಂತೋಷ. ಇದೇಕೆ ಹೀಗೆ?
ಇನ್ನೊಂದು ಕಡೆ, ನಮ್ಮ ಮನೋರಂಜನೆಗೆಂದೇ ಡ್ಯಾನ್ಸ್ ಕ್ಲಬ್, ಥೀಮ್ ಪಾರ್ಕ್, ಕಂಪ್ಯೂಟರ್ ಗೇಮ್ಸ್. ನಮ್ಮನ್ನು ಕುಶಾಲು ಪಡಿಸುವ ಹತ್ತು ಹಲವಾರು ಮನೋರಂಜನೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಸಾಲದ್ದಕ್ಕೆ, ಒತ್ತಡ ಬದುಕಿನ ನಿರ್ವಹಣೆಗೆಂದು ಯೋಗ ಶಾಲೆಗಳು, ನಗೆಯ ಕ್ಲಬ್ಬುಗಳು, ಆರ್ಟ್ ಆಫ್ ಲಿವಿಂಗ್ ತರದ ಆಧ್ಯಾತ್ಮಿಕ ಕೇಂದ್ರಗಳು, ಆಪ್ತ ಸಲಹಾಕೇಂದ್ರಗಳು ಅಧಿಕವಾಗಿ ಬೆಳೆದು ನಿಂತಿವೆ. ಆದರೂ, ನಮ್ಮ ನಗರಗಳಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣ ಕೂಡಾ ಕಾಣುತ್ತಿಲ್ಲ. ಇದೇಕೆ ಹೀಗೆ?
ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳ ಫಲವಾಗಿ ಮೊಬೈಲುಗಳು ನಮ್ಮ ಕೈಸೇರಿವೆ. ಎಟಿಎಂಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ಕ್ಷಣ ಮಾತ್ರದಲ್ಲಿ ತಲುಪಿಸುವ ಇ-ಮೇಲುಗಳ ಸೌಲಭ್ಯವಿದೆ. ನಾನಾ ತರಹ ಟಾಪ್ ಗೇರುಗಳ ಭಾರಿ ವೇಗದ ವಾಹನಗಳು ರಸ್ತೆಗಿಳಿದಿವೆ. ದಾರಿ ಹೆದ್ದಾರಿಗಳ ಅಭಿವೃದ್ಧಿ ಹತ್ತಾರು ಪಟ್ಟು ಹೆಚ್ಚಿದೆ. ವಿಮಾನ ಪ್ರಯಾಣದ ಬೆಲೆ ಅಗ್ಗವಾಗಿ ಸಾಮಾನ್ಯನ ಕೈ ಹಿಡಿದಿದೆ. ಅಷ್ಟೇ ಅಲ್ಲದೆ, ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಪ್ರಪಂಚವೇ ಸಣ್ಣ ಹಳ್ಳಿಯಾಗಿ ’ಗಡಿಗೆರೆ’ಎಂಬುವುದು ಇತಿಹಾಸವಾಗಿಬಿಟ್ಟಿದೆ. ಆದರೂ ನಮ್ಮ ಸಂಬಂಧಗಳು ಇಮ್ಮಡಿಯಾಗುತ್ತಿಲ್ಲ. ’ನಾನು’ ’ನನ್ನ ಕುಟುಂಬ’ ಎಂಬ ಸ್ವಾರ್ಥದ ಗೆರೆ ದಾಟುತ್ತಿಲ್ಲ. ನಮ್ಮ ಮನೆಯ ಗೋಡೆಯನ್ನು ನಮ್ಮ ದೇಹವಿರಲಿ, ಸ್ಪರ್ಶಾತೀತ ಮನಸ್ಸಿಗೂ ಸಹ ದಾಟಲಾಗುತ್ತಿಲ್ಲ. ಅಷ್ಟೇ ಅಲ್ಲದೆ, ಒಬ್ಬಂಟಿಗನೆಂಬ ಕೊರಗು ನಮ್ಮನ್ನು ಬಿಡಲು ಸುತರಾಂ ಒಪ್ಪುತ್ತಿಲ್ಲ. ಇದೇಕೆ ಹೀಗೆ?
ಕಾರಣಾಂತರಗಳಿಂದ ಇಷ್ಟವಿಲ್ಲದ ವಿಷಯಗಳನ್ನು ಆರಿಸಿಕೊಳ್ಳುತ್ತೇವೆ. ಮನಸ್ಸಿಲ್ಲದೆ ಅದನ್ನು ಓದುತ್ತೇವೆ. ಕೊನೆಗೆ ಅದು ದಾರ್ಶನಿಕ ಮತ್ತು ಪರಿವರ್ತಕ ಅನುಭವವಾಗದೆ ಕೇವಲ ಬಾಯಿಪಾಠವಾಗಿ ಹೊಟ್ಟೆಪಾಡಿಗಾಗಿ ಗಳಿಸುವ ಸರ್ಟಿಫಿಕೇಟ್ ಕೋರ್ಸಾಗಿಬಿಟ್ಟಿವೆ. ಇನ್ನೊಂದು ಕಡೆ, ಅಕ್ಷರಸ್ಥರ ಸಂಖ್ಯೆ ಗಗನಕೇರಿದೆ. ವಿಶ್ವವಿದ್ಯಾಲಯಗಳು ಮತ್ತು ಶಾಲಾಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಿ ಹೊರಬರುತ್ತಿರುವ ವಿದ್ಯಾರ್ಥಿಗಳ ಅಂಕಿಯು ಏರುಮುಖದಲ್ಲಿ ಗೆರೆನಕ್ಷೆಯೆಂಬ ಬೆಟ್ಟವನ್ನು ಏರುತ್ತಿದೆ. ಆದರೂ ನಮ್ಮ ಸಂಕುಚಿತ ಬುದ್ಧಿ ಕಡಿಮೆಯಾಗಿಲ್ಲ. ಅಮಾನವೀಯ ಕೃತ್ಯಗಳು ಕೊನೆ ಕಂಡಿಲ್ಲ. ಇದೇಕೆ ಹೀಗೆ?
ಆಧುನಿಕತೆಯಲ್ಲಿ, ಅಭಿವೃದ್ಧಿಯ ನೆಪದಲ್ಲಿ, ಸಕ್ಸೆಸ್ ಎಂಬ ನಾಮಜಪದಲ್ಲಿ ನಮ್ಮನ್ನೇ ನಾವು ಕಳಕೊಂಡು ಬಿಟ್ಟಿದ್ದೇವಾ? ಯಾವುದೋ ಒಂದು ಮೂಲೆಯಲ್ಲಿ ಹೌದು ಎನ್ನುತ್ತಿರುವ ವಾಸ್ತವಿಕತೆ. ಕಳೆದು ಹೋಗಿರುವ ನಮ್ಮನ್ನು ’ಹುಡುಕಿಕೊಡಿ’ ಎಂದು ಯಾವ ದೇವರಲ್ಲಿ ಹರಕೆ ಕಟ್ಟಿಕೊಳ್ಳೋಣ? ಯಾವ ಪೋಲಿಸ್ ಠಾಣೆಗೆ ಹೋಗಿ ದೂರು ಕೊಡೋಣ? ಬೆಳಿಗ್ಗೆ ಆಕಾಶದಲ್ಲಿ ಹುಟ್ಟಿ ನವಚೈತನ್ಯವನ್ನು ನೀಡುವ ಸೂರ್ಯ ನಮಗೆ ತುಂಬ ಅಪರಿಚಿತವಾಗಿ ಬಿಟ್ಟಿದ್ದಾನೆ. ಸೂರ್ಯೋದಯ ಎಂಬ ಅದ್ಭುತ ನಮಗೆ ಮಾಮೂಲಿನ ಸಂಗತಿಯಾಗಿ ಬಿಟ್ಟಿದೆ. ಆಫೀಸಿಗೆ ತಯಾರಾಗುವ ತತ್ಪರತೆಯಲ್ಲಿ ಹಕ್ಕಿಗಳ ಇಂಚರ ಅಪ್ಪಿತಪ್ಪಿಯೂ ನಮಗೆ ಕೇಳಿಸುವುದೇ ಇಲ್ಲ. ಹೆಂಡತಿಯ ತುಂಟ ನಗು ನಮಗೆ ಕಾಣುವುದೇ ಇಲ್ಲ. ಮಕ್ಕಳ ಚೇಷ್ಟೆಗೆ ಸಮಯವೇ ಇಲ್ಲ. ಇದೇಕೆ ಹೀಗೆ? ಮಟ ಮಟ ಮಧ್ಯಾಹ್ನದಲ್ಲಿ ಟಾರ್ಚ್ ಹಿಡಿದುಕೊಂಡು "ನಾನು ಕಳೆದುಹೋಗಿದ್ದೇನೆ ನನ್ನನ್ನೇ ಹುಡುಕಿಕೊಳ್ಳುತ್ತಿದ್ದೇನೆ ದಯವಿಟ್ಟು ನನ್ನನ್ನು ಹುಡುಕಿ ಕೊಡಿ" ಎಂದು ಕೂಗಿಕೊಂಡು ಅಲೆಯುವ ನಾಸಿರುದ್ದೀನ್ ಆಗಿಬಿಟ್ಟಿದ್ದೇವಾ?
ಮೊನ್ನೆ ’ಟ್ಯೂಸ್ ಡೇಸ್ ವಿತ್ ಮೋರೀ’ ಎಂಬ ಸಿನಿಮಾ ನೋಡಿದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವ ಒಂದು ಅದ್ಭುತ ಚಿತ್ರ. ಆಧುನಿಕತೆ, ಸ್ವರ್ಧೆ, ಸಕ್ಸೆಸ್ಸುಗಳ ಮಾಯೆಯಲ್ಲಿ ಕಳೆದುಹೋಗಿರುವ ನಾವು ಕೂತು ನೋಡಲೇ ಬೇಕಾದ ಚಲನಚಿತ್ರ. ಸಮಾಜಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ, ಆಧುನಿಕತೆ ಮತ್ತು ಸಕ್ಸೆಸ್ ಎಂಬ ಮಾಯೆಯಲ್ಲಿ ಕಳೆದೇ ಹೋಗಿರುವ ತನ್ನ ಹಳೆಯ ವಿದ್ಯಾರ್ಥಿಗೆ ನೀಡುವ ಬದುಕಿನ ಪಾಠದ ಸಂಚಿಕೆಗಳೇ ಈ ಚಲನಚಿತ್ರದ ಕಥಾವಸ್ತು. ಪ್ರತಿ ಮಂಗಳವಾರದಲ್ಲಿ ನಡೆಯುವ ತರಗತಿಗೆ ಪ್ರಾಧ್ಯಾಪಕರ ಮನೆಯೇ ಪಾಠಶಾಲೆ. ಬದುಕಿನ ಅರ್ಥವೆಂಬುವುದು ತರಗತಿಗಳ ವಿಷಯ. ಪ್ರಾಧ್ಯಾಪಕರ ಸ್ವಂತ ಅನುಭವಗಳೇ ಬೋಧನೆಯ ತಳಹದಿ. ವಿದ್ಯಾರ್ಥಿಯ ಸಾಧನೆ ಮಟ್ಟವನ್ನು ಸೂಚಿಸುವ ಗುಣಾಂಕ/ವರ್ಗಾಂಕವೆಂಬ ತಲೆನೋವಿಲ್ಲ. ಮೌಖಿಕ ಪರೀಕ್ಷೆಮಾತ್ರ: ಗುರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸ್ವಂತ ಪ್ರಶ್ನೆಗಳನ್ನು ಗುರುಗಳ ಮುಂದಿಡುವುದು. ಯಾವುದೇ ಪಠ್ಯಪುಸ್ತಕಗಳ ಅಗತ್ಯವಿಲ್ಲದಿದ್ದರೂ ಪ್ರೀತಿ, ಕೆಲಸ, ಸಮುದಾಯ, ಕುಟುಂಬ, ಮುಪ್ಪು, ಸಾವು ಹೀಗೆ ಅನೇಕ ವಿಷಯಗಳ ಸುತ್ತ ಗಿರಕಿ ಹೊಡೆಯುವ ಬೋಧನೆಗಳು. ಪರೀಕ್ಷೆಗಳ ಹಂಗಿಲ್ಲ ಆದರೆ ಕೊನೆಗೆ ಕಲಿತ ಪಾಠಗಳ ಪ್ರಬಂಧದ ಮಂಡನೆ ಮಾತ್ರ ಅತ್ಯಗತ್ಯ. ಹೀಗೆ ವಿದ್ಯಾರ್ಥಿ ತನ್ನ ಪ್ರಾಧ್ಯಾಪಕರಿಂದ ಕಲಿತ ಬದುಕಿನ ಪಾಠಗಳ ಮಂಡನೆಯೇ ಈ ಚಲನಚಿತ್ರ. ಒಂದು ತರಗತಿಯಲ್ಲಿ ಬದುಕಿನ ಬಗ್ಗೆ ಹೇಳುವ ಮೋರಿಯವರ ಮಾತುಗಳು, ಆಧುನಿಕತೆಯಲ್ಲಿ ರೋಗಪೀಡಿತರಾಗಿರುವ ನಮಗೆ ಸೂಕ್ತವೆನ್ನಿಸುತ್ತವೆ. "ಈ ಪ್ರಪಂಚದ ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಬಗ್ಗೆ ಸಕರಾತ್ಮಕವಾಗಿ ಯೋಚಿಸಲು ಬಿಡುವುದಿಲ್ಲ. ಆದುದರಿಂದ ನಮಗೆ ಒಗ್ಗದ ಇಂತಹ ಸಂಸ್ಕೃತಿಯನ್ನು ಒಪ್ಪಿಕೊಳ್ಳಲೇಬಾರದು. ನಮ್ಮದೇ ಸಂಸ್ಕೃತಿಯನ್ನು ನಾವೇ ಕಟ್ಟಿಕೊಳ್ಳಬೇಕು".
ಇಲ್ಲಿ ಮೋರಿ ನಮಗೆ ನೈಜ ಉದಾಹರಣೆಯಾಗಿ ನಿಲ್ಲುತ್ತಾನೆ. ವಾಸ್ತವ ಪ್ರಪಂಚದ ತೀವ್ರತೆಗೆ, ವೇಗಕ್ಕೆ ಗುಲಾಮನಾಗದೆ, ಪ್ರಾಪಂಚಿಕ ಮೌಲ್ಯಗಳಿಗೆ ಬೆಲೆಕೊಡದೆ. . . ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತಾನೆ. ಚರ್ಚಿಸಲು ಸಹವರ್ತಿಗಳ ಸಂಘ ಮಾಡುತ್ತಾನೆ. ಬೆಳಗ್ಗಿನ ನಡಿಗೆಗೆಳೆಯರ ಕೂಟ ಕಟ್ಟಿಕೊಳ್ಳುತ್ತಾನೆ. ಗ್ರೀನ್ ಹೌಸೆಂಬ ಒಂದು ಯೋಜನೆಯನ್ನು ಪ್ರಾರಂಭಿಸಿ ಮಾನಸಿಕ ಆರೋಗ್ಯವನ್ನು ರೂಢಿಸಿಕೊಳ್ಳಲು ಬಡವರಿಗೆ ಸಹಾಯ ಮಾಡುತ್ತಾನೆ. ಹೊಸ ಹೊಸ ಪುಸ್ತಕಗಳ ಸಹವಾಸ ಮಾಡಿ ತನ್ನ ತರಗತಿಗಳಿಗೆಅತ್ಯಗತ್ಯವಾಗಿ ಬೇಕಾಗಿರುವ ಹೊಸ ಹೊಸ ಆಲೋಚನೆ, ಅಭಿಪ್ರಾಯಗಳನ್ನ, ಕಲ್ಪನೆಗಳನ್ನು ಶೇಖರಿಸುತ್ತಾನೆ. ದೂರವಿರುವಗೆಳೆಯರಿಗೆ ಪತ್ರಗಳನ್ನು ಬರೆಯುತ್ತಾನೆ. ಮನೆಯ ಹತ್ತಿರವೇ ಇರುವ "ನೃತ್ಯಮನೆ"ಗೆ ಹೋಗಿ ತನ್ನಷ್ಟಕ್ಕೆ ನೃತ್ಯ ಮಾಡಿ ಮೈಮರೆಯುತ್ತಾನೆ. ಪಕೃತಿ ದೇವಿಯ ಸೌಂದರ್ಯವನ್ನು ಸವಿಯುತ್ತಾನೆ. . . ಹೀಗೆ ತನ್ನ ಪ್ರಪಂಚವನ್ನು ಪರಸ್ಪರ ಸಂಗ ಸಲ್ಲಾಪ ಸಹವಾಸ ಮತ್ತು ಸ್ನೇಹ ವಿಶ್ವಾಸಗಳಿಂದ ಹೆಣೆದುಕೊಳ್ಳುತ್ತಾನೆ. ಆದ್ದರಿಂದ ಸಾವಿನ ದವಡೆಯಲ್ಲೂ ಒಂಟಿತನವೆಂಬ ಭೂತ ಅವನನ್ನು ಕಾಡುವುದಿಲ್ಲ. ಅಂಟಿಕೊಂಡಿರುವ ಭಯಾನಕ ರೋಗದಿಂದ ಒಂದು ವರ್ಷದಲ್ಲಿ ತನಗೆ ಸಾವು ಖಚಿತವೆಂದು ಗೊತ್ತಿದ್ದರೂ ತನ್ನ ವಿದ್ಯಾರ್ಥಿಗೆ ಸಾವಿನ ಬಗ್ಗೆ ಪಾಠ ಮಾಡುತ್ತಾನೆ. ಸಾವಿಗೆ ಹೆದರಬೇಡ ಎಂದು ಹೇಳುತ್ತಲೇ ಅಂಜದೆ ಸಾಯುತ್ತಾನೆ. ಒಟ್ಟಾರೆ, ಮೋರಿಯ ಮಾತುಗಳು ಪುಸ್ತಕದ ಬದನೆಕಾಯಿ ಆಗದೆ, ಬದುಕ ಪಾಠಗಳಾಗಿ ನಮ್ಮನ್ನು, ನಮ್ಮ ಟೊಳ್ಳುತನವನ್ನು ಪ್ರಶ್ನಿಸುತ್ತವೆ. ಹೊಸ ಬದುಕಿಗೆ, ಬದುಕಿನ ರೀತಿಗೆ ಮೂಹರ್ತ ಹಾಕಿಕೊಡುತ್ತವೆ. "The way you get meaning into your life is to devote yourself to loving others, devote yourself to your community around you, and devote yourself to creating something that gives you purpose and meaning" ಎಂದು ಹೇಳುತ್ತಲೇ “ಪ್ರೀತಿಸು ಇಲ್ಲವಾದರೆ ಹಾಳಾಗುವೆ" ಎಂದು ಎಚ್ಚರಿಸುತ್ತಾನೆ ನಮ್ಮ ಮೋರೀ.
ಹೌದು,ನಮ್ಮದೇ ಪ್ರಪಂಚದಲ್ಲಿ ಪರಕೀಯರಾಗಿ ಬಾಳುತ್ತಿರುವ ನಮಗೆ ’ಟ್ಯೂಸ್ ಡೇಸ್ ವಿತ್ ಮೋರೀ’ ಎಂಬ ಕೋರ್ಸು/ವ್ಯಾಸಂಗಅನಿವಾರ್ಯವೆನ್ನಿಸುತ್ತದೆ. ಈ ಒಂದು ಕೋರ್ಸ್ಗೆ ಬೇಕಾದ ಪಠ್ಯವೆಂದರೆ ಅಂತರ್ಜಾಲದಲ್ಲಿ ಸುಲಭವಾಗಿ ಉಚಿತವಾಗಿ ಸಿಗುವ ’ಟ್ಯೂಸ್ ಡೇಸ್ ವಿತ್ ಮೋರೀ’ ಎಂಬ ಕಾದಂಬರಿಯನ್ನು ಡೌನ್ ಲೋಡ್ ಮಾಡಿ ಓದಿ, ಬದುಕನ್ನು ಮತ್ತು ಬದುಕುವುದನ್ನು ಎಂಜಾಯ್ ಮಾಡಿ.



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...