Friday, 10 August 2018

ಬೈಬಲ್ ದನಿ


ಹದಿನೆಂಟು ವರ್ಷಗಳಿಂದ ನಡುಬೊಗ್ಗಿದ್ದ ಸ್ತ್ರೀ


¨  ಡಾ. ಲೀಲಾವತಿ ದೇವದಾಸ್


ದೊಂದು ಸಬ್ಬತ್ ದಿನ (ಯೆಹೂದ್ಯರಿಗೆ ಶನಿವಾರ). ಅದರಲ್ಲೂ ಸಭಾಮಂದಿರದ ಪವಿತ್ರ ಪರಿಸರ. ಯೇಸುಕ್ರಿಸ್ತರು, ತಾವು ಎಲ್ಲಿದ್ದರೂ ಸಬ್ಬತ್ ದಿನವನ್ನು ಮಾತ್ರ ಸಭಾಮಂದಿರದಲ್ಲಿ ಅಥವಾ ದೇವಾಲಯದಲ್ಲಿ ಕಳೆಯುವುದನ್ನು ತಪ್ಪಿಸುತ್ತಿರಲಿಲ್ಲ! ಅಂದು, ಸಭಾಮಂದಿರದಲ್ಲಿ ಅವರ ಉಪದೇಶಾಮೃತವೂ ಜನರಿಗೆ ದೊರಕಿತ್ತು.
ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲೂ ಸ್ತ್ರೀಯರಿಗೆ ಹಾಗೂ ಯೆಹೂದ್ಯೇತರರಿಗೆ ಬೇರೆ ಬೇರೆ ವಲಯಗಳಿದ್ದು, ಅವರು ನೇರವಾಗಿ ಒಳವಲಯಗಳಿಗೆ ಕಾಲಿಡುವಂತಿರಲಿಲ್ಲ. ಹಾಗಾಗಿ, ಹದಿನೆಂಟು ವರ್ಷಗಳಿಂದ ರೋಗಿಷ್ಟಳಾಗಿ, ನಡು ಬೊಗ್ಗಿಹೋಗಿ, ?ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾಗದೆ ಇದ್ದ ಯೆಹೂದ್ಯ ಸ್ತ್ರೀಯೊಬ್ಬಳು ತನ್ನ ಸ್ಥಾನದಲ್ಲೇ ನಿಂತಿದ್ದು, ಭಯಭಕ್ತಿಯಿಂದ ಕ್ರಿಸ್ತರ ದಿವ್ಯಬೋಧನೆಯನ್ನು ತದೇಕಭಾವದಿಂದ ಕೇಳಿಸಿಕೊಳ್ಳುತ್ತಿದ್ದಳು. ಅವಳು ತಪ್ಪದೆ ಆರಾಧನೆಗೆ ಬರುತ್ತಿದ್ದರೂ, ಅವಳು, ತಾನು ವಾಸಿಯಾಗುತ್ತೇನೆಂಬ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ, ಈ ದಿನದಲ್ಲಿ ಮಾತ್ರ ಅವಳ ಹೃದಯದಲ್ಲಿ ಒಂದು ಅವ್ಯಕ್ತ ಆನಂದ ನೆಲೆಗೊಂಡಿತ್ತು!
ಯೆಹೂದ್ಯ ಗುರುಗಳು, ಸ್ತ್ರೀಯರನ್ನು ನೇರವಾಗಿ ನೋಡುತ್ತಿರಲಿಲ್ಲ. ದಾರಿಯಲ್ಲಿ ನಡೆಯುತ್ತಿರುವಾಗ ಯಾವ ಸ್ತ್ರೀಯನ್ನೂ ದೃಷ್ಟಿಸಬಾರದು ಎಂದು, ಕಣ್ಣುಗಳನ್ನು ಮುಚ್ಚಿಕೊಂಡು ನಡೆದು, ಅಲ್ಲಿನ ಗೋಡೆಗೆ ಹಣೆತಾಗಿಸಿಕೊಂಡು ಅಲ್ಲೆಲ್ಲಾ ಬುಗುಟುಗಳು ಏಳುತ್ತಿದ್ದವು! ಇನ್ನು, ಸ್ತ್ರೀಯರನ್ನು ಮಾತಾಡಿಸುವುದೂ ಮುಟ್ಟುವುದೂ ಅವರಿಗೆ ನಿಷಿದ್ಧವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ!
ಆದರೆ, ನಮ್ಮ ಯೇಸುಕ್ರಿಸ್ತರು, ಯೆಹೂದ್ಯರ ಇಂಥಾ ಜಡ್ಡುಗಟ್ಟಿದ ಅಭ್ಯಾಸಗಳನ್ನು ಅಳಿಸಿಹಾಕಿ, ಸ್ತ್ರೀಯರಿಗೆ ಒಂದು ಸಮಾನಸ್ಥಾನ ಕೊಡುವ ಮಹಾಗುರುವಲ್ಲವೇ? ಅವರು, ಆ ರೋಗಿಷ್ಟ ಸ್ತ್ರೀಯನ್ನು ನೇರವಾಗಿ ನೋಡಿದರು. ಅಷ್ಟೇ ಅಲ್ಲ, ಅವಳನ್ನು ತಮ್ಮ ಹತ್ತಿರಕ್ಕೆ ಕರೆದರು. ಅವಳು, ಆ ಕರೆಗೆ ಓಗೊಡುವ ಮೊದಲು ಅನುಮಾನಿಸಿದಳು. ಯಾಕೆಂದರೆ, ಇದುವರೆಗೆ ಯಾವ ಸ್ತ್ರೀಯೂ ಗುರುಗಳು ಕೂಡುತ್ತಿದ್ದ ವಲಯಕ್ಕೆ ಕಾಲಿಟ್ಟಿದ್ದಿಲ್ಲ. ಕ್ರಿಸ್ತರ ದಿಟ್ಟ ಕರೆ ಮತ್ತೆ ಬಂದಾಗ, ಆ ಸ್ತ್ರೀ ಬಹಳ ಕಷ್ಟದಿಂದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಮೆಲ್ಲನೆ ಅವರ ಬಳಿಗೆ ಬಂದಳು.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಕ್ರಿಸ್ತಯೇಸುವು ಯೆಹೂದ್ಯರ ಮೂರು ನಿಬಂಧನೆಗಳನ್ನು ಮುರಿದಿದ್ದರು. ಈಗ, ಅವಳನ್ನು ಮಾತಾಡಿಸಿ, ಮತ್ತೊಂದು ನಿಯಮವನ್ನು ವಿರೋಧಿಸಿದ್ದರು. ಜೊತೆಗೆ, ಅವಳ ಮೇಲೆ ತಮ್ಮ ಕೈಗಳನ್ನಿಟ್ಟು, (ಐದು ನಿಬಂಧನೆಗಳು ಧೂಳೀಪಟವಾದವು!) “ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು?ಎಂದು ಅಧಿಕಾರಯುತವಾಗಿ ನುಡಿದರು. ಕೂಡಲೇ ಆ ಸ್ತ್ರೀ ನೆಟ್ಟಗಾದಳು, ತುಂಬು ಕೃತಜ್ಞತೆಯಿಂದ ಅವಳು ದೇವರನ್ನು ಕೊಂಡಾಡಿದಳು!
ಇದನ್ನು ನೋಡಿದ ಸಾಮಾನ್ಯ ಜನರು ತುಂಬಾ ಸಂತೋಷಪಟ್ಟರು. ಆದರೆ, ಕ್ರಿಸ್ತರ ಮೇಲೆ ಕತ್ತಿ ಮಸೆಯುತ್ತಿದ್ದ ಹಾಗೂ, ಇವರ ಬಗ್ಗೆ ಕೇಳಿಸಿಕೊಂಡು, ಅಸೂಯೆಯಿಂದ ಕುದಿಯುತ್ತಿದ್ದ, ಸಭಾಮಂದಿರದ ಅಧಿಕಾರಿಗಳಿಗೆ ಈ ಅದ್ಭುತ ಕಾರ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ! ಒಬ್ಬ ಅಧಿಕಾರಿ, ಕೊಂಕು ತೆಗೆಯುತ್ತಾ ’ಇಂದು ಸಬ್ಬತ್ ದಿನ. ಈ ದಿನದಲ್ಲಿ ಯೇಸುವು ಒಬ್ಬ ಸ್ತ್ರೀಗೆ ಆರೋಗ್ಯ ತಂದನಲ್ಲಾ’ ಎಂದು ರೋಷಗೊಂಡರು. ಅವರನ್ನು ನೇರವಾಗಿ ಖಂಡಿಸಲು ಧೈರ್ಯಸಾಲದೆ, ಜನರಿಗೆ, ’ನಿಮಗೆ ಕೆಲಸಮಾಡಲು ಆರು ದಿನಗಳು ಇವೆಯಷ್ಟೆ, ಆ ದಿವಸಗಳಲ್ಲಿ ಬಂದು ವಾಸಿಮಾಡಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ’ ಎಂದು ಗದರಿಸಿದರು.
ಯೇಸುಸ್ವಾಮಿಯವರು ಸುಮ್ಮನಿರಲಿಲ್ಲ. ವಿರೋಧಿಗಳನ್ನು ಉದ್ದೇಶಿಸಿ, ’ನಿಮ್ಮ ಎತ್ತಿಗಾಗಲಿ ಕತ್ತೆಗಾಗಲಿ ನೀವು ಸಬ್ಬತ್ ದಿನದಂದು ಕೊಟ್ಟಿಗೆಯಿಂದ ಬಿಚ್ಚಿ, ನೀರುಕುಡಿಸಲು ಹಿಡಿದುಕೊಂಡು ಹೋಗುವುದಿಲ್ಲವೇ? ಹಾಗಾದರೆ, ಹದಿನೆಂಟು ವರ್ಷಗಳ ಕಾಲ ಸೈತಾನನು ಕಟ್ಟಿಹಾಕಿದ್ದ ಈ ಯೆಹೂದ್ಯ ಸ್ತ್ರೀಯನ್ನು ನಾನು ಸಬ್ಬತ್ ದಿನದಂದು ಆ ಕಟ್ಟಿನಿಂದ ಬಿಡಿಸಬಾರದೋ?’ ಎಂದು ಕಟುವಾಗಿ ಉತ್ತರನೀಡಿದಾಗ ಅವರೆಲ್ಲಾ ತಲೆ ತಗ್ಗಿಸಬೇಕಾಯಿತು!
ಈ ಅನನ್ಯ ಪ್ರಕರಣದಿಂದ ನಾವು ಕಲಿಯಬೇಕಾದ ಅಂಶಗಳೇನು?
ಅಷ್ಟು ವರ್ಷಗಳಿಂದ ರೋಗಿಷ್ಟೆಯಾಗಿ, ನಡು ಬೊಗ್ಗಿಹೋಗಿದ್ದ ಸ್ತ್ರೀಯೇ ಕ್ರಮವಾಗಿ ಆರಾಧನೆಗೆ ಬರುತ್ತಿರುವಾಗ, ನಾವೇಕೆ ಸಬ್ಬತ್ ದಿನದಲ್ಲಿ (ಭಾನುವಾರ) ದೇವಾಲಯಕ್ಕೆ ಕ್ರಮವಾಗಿ ಹೋಗಬಾರದು?
’”ನನ್ನನ್ನು ವಾಸಿಮಾಡು” ಎಂದು ಯಾಚಿಸದ ಸ್ತ್ರೀಗೆ ಕ್ರಿಸ್ತರ ಕೃಪೆ, ಕರುಣೆಗಳು ತಾವಾಗಿಯೇ ದೊರಕಿದವು! ಅವಳನ್ನು ಸ್ವಾಮಿಯವರು ತಮ್ಮ ಸಮೀಪಕ್ಕೆ ಕರೆಗಾಗ, ತನ್ನ ಆತ್ಮಕ್ಕೆ ಬೇಕಾದ ಬೋಧನೆ ಸಿಗುತ್ತದೆ ಎಂದು ಅವರ ಹತ್ತಿರ ಬಂದ ಸ್ತ್ರೀಗೆ ದೈಹಿಕ ಆರೋಗ್ಯವೂ ದಕ್ಕಿತು! ಹಾಗಾಗಿ, ಕ್ರಿಸ್ತರ ಕರೆಗೆ ನಾವೂ ಸ್ಪಂದಿಸಿ, ಅವರ ಸಾನ್ನಿಧ್ಯಕ್ಕೆ ಓಡೋಡಿ ಬರಬೇಕು.
ಅಂಥಾ ನೀಳಿತ ಕಾಯಿಲೆಯನ್ನು ನಿಮಿಷದಲ್ಲೇ ಗುಣಪಡಿಸಿದ ಯೇಸುಕರ್ತರ ಅಗಾಧಶಕ್ತಿಯನ್ನು ನಾವು ಕಂಡು ಬೆರಗಾಗುತ್ತೇವೆ. ನೇರವಾಗಿ ನಿಲ್ಲಲೂ ಆಗದಿದ್ದ ಅವಳನ್ನು ಅವರು ಹಿಡಿದೆತ್ತಿ ನೆಟ್ಟಗೆ ನಿಲ್ಲ್ಸಿದರು! ಹಾಗೆಯೇ, ನಮ್ಮ ಅಂಕುಡೊಂಕುಗಳನ್ನೂ ಅವರು ಸರಿಪಡಿಸುತ್ತಾರಲ್ಲವೇ?
ನಮಗೆ ದಕ್ಕಿದ ಕೃಪೆ, ಕರುಣೆಗಳಿಗಾಗಿ ನಾವು ದೇವರಿಗೆ ಕೃತಜ್ಞರಾಗಿದ್ದು ಅವರನ್ನು ಸ್ತುತಿಸಬೇಕು, ಕೊಂಡಾಡಬೇಕು. ಅವರ ಮಹಾಮಹಿಮೆಯನ್ನು ಸ್ತುತಿಸಬೇಕು.
ಇಲ್ಲಿ, ಮುಖ್ಯವಾಗಿ, ಯೇಸುಸ್ವಾಮಿಯವರು, ಇಡೀ ಸ್ತ್ರೀಸಮೂಹಕ್ಕೇ ತಮ್ಮ ದಿವ್ಯಸಂದೇಶವನ್ನು ನೀಡಿದ್ದಾರೆ! ನಾನಾ ದಮನಗಳಿಗೆ ಒಳಗಾಗಿ, ನಿಲ್ಲಲೂ ಆಗದ ಸ್ತ್ರೀಯರಿಗೆ ’ಏಳಮ್ಮಾ, ನೆಟ್ಟಗಾಗು’, ಎಂದು ಹೇಳುತ್ತಿದ್ದಾರೆ. ಸ್ತ್ರೀಯರ ಎಲ್ಲಾ ಬಂಧನಗಳಿಗೂ ಯೇಸುಕ್ರಿಸ್ತರ ಬಳಿ, ಬಿಡುಗಡೆ ದೊರಕುತ್ತದೆ! ಇದಕ್ಕೆ ಎಷ್ಟೇ ಕಪಟ ವಿರೋಧಿಗಳಿದ್ದರೂ, ಅವರ ಒಡಕು ಮಾತುಗಳಿಗೆ ಸೊಪ್ಪು ಹಾಕುವವರಲ್ಲ ನಮ್ಮ ಸ್ವಾಮಿ! ಆ ಜನರ ಎತ್ತು, ಕತ್ತೆಗಳಿಗಿಂತ ಸ್ತ್ರೀಯರು ಕೀಳಲ್ಲವಲ್ಲಾ!



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...