Friday, 10 August 2018

ಸ್ವರ್ಗಸ್ವೀಕೃತ ಮಾತೆ ಮರಿಯ



ಮಾನವ ಕುಲದ ಏಕೈಕ ರಕ್ಷಕ ಪ್ರಭು ಯೇಸುವಿನ ತಾಯಿ ಮರಿಯ. ಈಕೆಯನ್ನು ತ್ರೈಏಕ ದೇವರು ಆದಿಯಿಂದಲೇ ತಮ್ಮ ನಿಗೂಢ ರಕ್ಷಣಾ ಯೋಜನೆಯನ್ನು ಸಿದ್ಧಿಗೆ ತರಲು ವಿಶೇಷವಾಗಿ ಆಯ್ಕೆ ಮಾಡಿದ್ದರು. ಆ ಕಾರಣದಿಂದ ಆಕೆಗೆ ಜನ್ಮಪಾಪರಹಿತಳಾಗಿ ಜನ್ಮತಾಳುವ ಸೌಭಾಗ್ಯವನ್ನಿತ್ತರು. ಆಕೆಯು ದೈವಾನುಗ್ರಹದಿಂದ ತುಂಬಿದವಳಾಗಿ ತನಗಿತ್ತ ಆ ಆನಂತ ಸೌಭಾಗ್ಯವನ್ನು ದೇವರ ಅನುಗ್ರಹದಿಂದ ಅಂತಿಮ ಕ್ಷಣಗಳವರೆಗೂ ಕಾಪಾಡಿಕೊಂಡು ಪರಿಶುದ್ಧಳಾಗಿ ಜೀವಿಸಿದಳು ಹಾಗೂ ಮಾನವ ಕುಲಕ್ಕೆ ರಕ್ಷಣೆಯ ಬಾಗಿಲನ್ನು ತೆರೆಯಲು ದೇವರ ರಕ್ಷಣಾ ಯೋಜನಗೆ "ತಥಾಸ್ತು" ಎಂದಳು. 

ಅದಕ್ಕಾಗಿ ಆಕೆಯು ತನ್ನ ಲೌಕಿಕ ಆಸೆ ಆಕಾಂಕ್ಷೆಗಳೆಲ್ಲವನ್ನೂ ಬಿಟ್ಟು ಆ ಪವಿತ್ರ ಯೋಜನೆಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ದೇವರ ಅಪಾರ ಮೆಚ್ಚಿಗೆಗೆ ಪಾತ್ರಳಾದ ದೀನ ಹಾಗೂ ಧೀರ ಮಹಿಳೆ. ಆಕೆಯು ತನ್ನ ಯೆಹೂದ್ಯ ಧರ್ಮದ ಸತ್ಯಗಳನ್ನು ಅರಿತು ಧ್ಯಾನಿಸಿ ದೇವರ ಚಿತ್ತಕ್ಕೆ ಅನುಗುಣವಾಗಿ ಜೀವಿಸುತ್ತ ಸದ್ಗುಣಗಳ ಆಗರವಾಗಿದ್ದಳು. ನಿತ್ಯವೂ ಸದ್ಗುಣ ಸಂಪನ್ನಳಾಗಿ, ದೀನತೆಯ ಶಿಖರವಾಗಿ ಬೆಳೆಯುತ್ತಿದ್ದಳು. ದೇವರಲ್ಲಿ ಅಪಾರ ವಿಶ್ವಾಸವುಳ್ಳವಳಾಗಿ, ಸದೃಢವಾಗಿ ನೆಲೆನಿಂತಿದ್ದಳು. ಧಾರ್ಮಿಕ ವಿಷಯಗಳಲ್ಲಿ ನುರಿತವಳಾಗಿದ್ದಳು ಹಾಗೂ ಧಾರ್ಮಿಕತೆಯನ್ನು ರೂಢಿಸಿಕೊಳ್ಳುವುದರಲ್ಲಿ ಅಪಾರ ಆಸಕ್ತಿಯುಳ್ಳವಳಾಗಿದ್ದಳು. ಹಾಗೆಯೇ ತನ್ನ ಪ್ರೀತಿಯ ತಂದೆ ತಾಯಿಯರಾದ ಅನ್ನ ಮತ್ತು ಜೋವಾಕಿಮರಿಗೆ ವಿಧೇಯಳಾಗಿ ತನ್ನ ಸುತ್ತಮುತ್ತಲಿನವರಿಗೂ ಅಚ್ಚುಮೆಚ್ಚಿನ ಹಿತೈಷಿಯಾಗಿದ್ದಳು. 



ತ್ರೈಏಕ ದೇವರ ರಕ್ಷಣಾ ಯೋಜನೆಯಲ್ಲಿ ಮರಿಯಳ ಪಾತ್ರ ಅಪಾರವಾದುದು. ಹೆಜ್ಜೆಹೆಜ್ಜೆಗೂ ಕಷ್ಟದುಃಖಗಳ ಸುರಿಮಳೆಯೇ ಎದುರಾದರೂ ಕೆಚ್ಚೆದೆಯಿಂದ ಹಿಂದೆ ನೋಡದೆ ಮುಂದೆ ಸಾಗಿದ ವೀರ ವನಿತೆಯವಳು. ಹದಿವಯಸ್ಸಿನಲ್ಲಿಯೇ ಸಂಕಷ್ಟದ ಸುಳಿಯಲ್ಲಿ ಸಿಲುಕಿ ನಲುಗಿದರೂ ವಿಶ್ವಾಸದ ದೀವಿಗೆಯನ್ನು ಪ್ರಜ್ವಲಿಸುತ್ತಲೇ ಸಾಗಿದ ಧೀಮಂತ ಮಹಿಳೆ. ಈಕೆಯು ಮಾನವ ಸಂಸರ್ಗವಿಲ್ಲದೆ ಪವಿತ್ರಾತ್ಮರ ವರದಾನದಿಂದ ಮಾನವ ಕುಲದ ರಕ್ಷಕ ಪ್ರಭು ಯೇಸುವನ್ನು ಉದರದಲ್ಲಿ ಧರಿಸಿದವರು (ಲೂಕ೧:೨೬-೩೮). ಅಂದಿನ ಯೆಹೂದ್ಯ ಧರ್ಮದ ಧಾರ್ಮಿಕ ಪದ್ದತಿಯಂತೆ ಮದುವೆಗೆ ಮುನ್ನ ಗರ್ಭದರಿಸಿದರೆ ಅಂತಹ ಮಹಿಳೆಯನ್ನು ಅಕೆಯ ಮನೆಯ ಮುಂದೆ ತಂದೆಯ ಎದುರಲ್ಲಿ ಕಲ್ಲುಗಳಿಂದ ಹೊಡೆದು ಕೊಲ್ಲುತ್ತಿದ್ದರು. ಇದರ ಅರಿವು ಮರಿಯಳಿಗಿತ್ತು (ಧರ್ಮೋ ೨೨:೨೦). ಆದರೂ ದೇವರ ಮೇಲೆ ಅಪಾರ ಭರವಸೆ ಇಟ್ಟು ದೈವ ಯೋಜನೆಗೆ ದಿಟ್ಟತನದಿಂದ ಶಿರಬಾಗುತ್ತಾಳೆ. ಇದು ಆಕೆಯ ಪರಿಪೂರ್ಣ ವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. 

ಜೋಸೆಫ ಮರಿಯಳಿಗೆ ದೇವರಿಂದ ಆಯ್ಕೆಯಾದ ಪತಿ. ಅವನ ಪ್ರಾಮಾಣಿಕ ಬದುಕು, ಪಾರದರ್ಶಕ ಜೀವನ ಮತ್ತು ಸರಳ ಸಜ್ಜನಿಕೆ ಮಾನವಕುಲಕ್ಕೆ ವರದಾನ. ಅವನಆದರ್ಶ ಬದುಕು ಮಾನವಕುಲಕ್ಕೆ ದಿಕ್ಸೂಚಿ. ಜೋಸೆಫ ಮತ್ತು ಮರಿಯಳ ಕೌಟುಂಬಿಕ ಜೀವನ ಯುಗಯುಗಕ್ಕೂ ಮೆಚ್ಚುವಂತದ್ದೇ. ಲೋಕರಕ್ಷಕ ಪ್ರಭು ಯೇಸು ಜನಿಸಲು ಒಂದು ವ್ಯವಸ್ಥಿತವಾದ ಸ್ಥಳ ಸಿಗದಿದ್ದಾಗಲೂ ಅವರು ದೇವರನ್ನು ದೂರಲಿಲ್ಲ. ಜೆರುಸಲೇಮಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವ ಬೆತ್ಲಹೇಮಿನ ಪುಟ್ಟ ಗವಿಯಲ್ಲಿದ್ದ ದನಗಳ ಕೊಟ್ಟಿಗೆಯಲ್ಲಿಲೋಕರಕ್ಷಕ ಜನಿಸಿದರು (ಲೂಕ ೨:೧-೭). ಆಗ ಅವರು ಧೃತಿಗೆಡಲಿಲ್ಲ ಗೊಣಗಲೂ ಇಲ್ಲ ಹಾಗೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ, ಯಾರ ಮೇಲೂ ತಪ್ಪು ಹೊರಿಸಲಿಲ್ಲ. ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸ್ಥಿರಚಿತ್ತದಿಂದಿದ್ದು ದೇವರಲ್ಲಿ ತಮಗಿದ್ದ ಅಪಾರ ಭರವಸೆ ಮತ್ತು ವಿಶ್ವಾಸವನ್ನು ತಮ್ಮ ಜೀವನ ಶೈಲಿಯಲ್ಲಿ ವ್ಯಕ್ತಪಡಿಸಿದರು. 

"ಏಳು, ಹೆರೋದರಸನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ, ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃಹೇಳುವ ತನಕ ಅಲ್ಲೇ ಇರು" (ಮತ್ತಾಯ ೨:೧೩) ಎಂದಾಗ ದೈವಯೋಜನೆಗೆ ತಲೆಬಾಗಿ ರಾತ್ರೋರಾತ್ರಿ ಪುಟ್ಟಕಂದನನ್ನು ಹೊತ್ತು ಹಗಲುರಾತ್ರಿ ಎನ್ನದೆ ಆ ಗುಡ್ಡಗಾಡಿಲ್ಲಿ ಪಯಣಿಸುವಾಗಲೂ ಅವರ ವಿಶ್ವಾಸ ಕುಂದಲಿಲ್ಲ ಹಾಗೂ ಅವರು ದೇವರ ಸನ್ನಿಧಿಯಿಂದ ಕದಲಲಿಲ್ಲ. ಪ್ರತಿಯೊಂದು ಕಷ್ಟವೂ ಅವರ ವಿಶ್ವಾಸದ ಪ್ರಗತಿಗೆ ಭರವಸೆಯ ಮೆಟ್ಟಲುಗಳಾಗಿದ್ದವು. ಯಾವಾಗಲೂ ಅವರ ಹೃದಯದಲ್ಲಿ ದೈವೀ ಪ್ರಸನ್ನತೆ ಮನೆಮಾಡಿತ್ತು. ನಜರೇತಿನಲ್ಲಿ ಬೆಳೆಯುತ್ತಿದ್ದ ಪ್ರಭು ಯೇಸುಕ್ರಿಸ್ತ ಹನ್ನೆರಡು ವರ್ಷದವನಿರುವಾಗಲೇ ತಂದೆಯ ಕಾರ್ಯದಲ್ಲಿ ನಿರತನಾಗಲು ಪ್ರಾರಂಭಿಸಿದ (ಲೂಕ ೨:೪೬) ಅವನ ನಡೆನುಡಿ ಹಾಗೂ ವಿಚಾರಲಹರಿಗಳು ತಂದೆ-ತಾಯಿಯರಿಗೆ ಸೋಜಿಗವನ್ನು ತಂದಿತ್ತು. ಜನರಲ್ಲಿ ಹಲವರು ಆಶ್ಚರ್ಯವನ್ನು ವ್ಯಕ್ತಪಡಿಸಿದರೆ ಹಲವರು ಕುಹಕವನ್ನಾಡಲು ಪ್ರಾರಂಭಿಸಿದರು. ಆದರೆ ಜೋಸೆಫ ಮತ್ತು ಮರಿಯ ಮಾತ್ರ ಮೌನವಾಗಿ ದೈವ ಯೋಜನೆಗೆ ಸಂಪೂರ್ಣವಾಗಿ ತಲೆ ಬಾಗಿದ್ದರು. ಪ್ರಭು ಯೇಸುಕ್ರಿಸ್ತನ ರಕ್ಷಣಾ ಯೋಜನೆಯ ಪ್ರತಿ ಹಂತದಲ್ಲೂ ಮಾತೆಯು ಅವರಿಗೆ ಆಸರೆಯಾಗಿ, ವಿಶ್ವಾಸದ ಗಣಿಯಾಗಿ, ಆದರ್ಶಮಾತೆಯಾಗಿ ಜೊತೆಜೊತೆಯಲ್ಲೇ ಇದ್ದರು. 



ಪ್ರಭು ಯೇಸುಕ್ರಿಸ್ತರು ವಯಸ್ಕರಾದ ಮೇಲೆ ವಿಭಿನ್ನವಾಗಿ ಬೋಧಿಸಲು ಪ್ರಾರಂಭಿಸಿದರು. ಅವರ ಬೋಧನೆ ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಕಿರಿಕಿರಿ ಉಂಟುಮಾಡಿತು.ಅವರು ಪ್ರಭುವನ್ನು ಮುಗಿಸಿಬಿಡಲು ಯೋಜನೆ ರೂಪಿಸಿ ಸಫಲರಾದರು. ಶಿಲುಬೆಯ ಘೋರ ಮರಣದ ವೇಳೆಯಲ್ಲಿಯೂ ಶಿಲುಬೆಯ ಬುಡದಲ್ಲಿ ಮೌನವಾಗಿ ನಿಂತು ದೇವರ ಯೋಜನೆ ಪೂರ್ಣಗೊಳ್ಳಲು ಸಕ್ರಿಯವಾಗಿ ಸಹಕರಿದ ಮಹಾ ಮಹಿಳೆ ಮರಿಯ. ಪ್ರಭುವಿನ ಶಿಲುಬೆಯ ಮರಣದ ನಂತರ ಪ್ರಭುವಿನ ಜೀವನಕ್ಕೆ ಸಾಕ್ಷಿಗಳಾಗಿದ್ದ ಪ್ರೇಷಿತರು ದಿಕ್ಕುತೋಚದೆ ಚದುರಿ ಹೋಗುವುದರಲ್ಲಿದ್ದಾಗ ಮರಿಯಾ ಮಾತ್ರ ತನ್ನ ನಂಬಿಕೆಗೆ ಕುಂದು ಬರದಂತೆ ಬಂಡೆಯಂತೆ ಸ್ಥಿರವಾಗಿದ್ದು ಪ್ರಭುವಿನ ಪ್ರೇಷಿತರನ್ನು ಒಟ್ಟುಗೂಡಿಸಿ ಸಾಂತ್ವನ ನೀಡಿ ಅವರ ಮುದುಡಿದ ಮನಗಳು ಚೇತರಿಸಿಕೊಳ್ಳುವಂತೆ ಹುರಿದುಂಬಿಸಿದಳು. ಅವರು ವಿಶ್ವಾಸವನ್ನು ಕಳೆದುಕೊಳ್ಳದಂತೆ ಅವರೊಡನೆ ವಿನಯದಿಂದ ಪ್ರಾರ್ಥಿಸಿದಳು. 

ಪ್ರೇಷಿತರು ಪವಿತ್ರಾತ್ಮರ ಆಗಮನದಿಂದ ಭೂಷಿತರಾಗಿ ಸ್ವರ್ಗಸಾಮ್ರಾಜ್ಯದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ (ಪ್ರೇ. ಕಾ. ೨: ೧-೧೩) ಅವರೊಡನಿದ್ದು ಅವರ ಕಷ್ಟ-ದುಃಖದಲ್ಲಿ ನೆರವಾಗಿ ಧರ್ಮಸಭೆಯ ಪ್ರಗತಿಗೆ ನಾಂದಿಯಾದರು. ಆ ಕಾರಣ ಧರ್ಮಸಭೆಯು ಫಲಭರಿತವಾಗಿ ಬೆಳೆಯತೊಡಗಿತು. ಅದನ್ನು ಪ್ರೇಷಿತರ ಕಾರ್ಯಕಲಾಪವು ಹೀಗೆ ವಿವರಿಸುತ್ತದೆ. "ಅಂದಿನಿಂದ ಅವರು (ಧರ್ಮಸಭೆ) ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೋಟ್ಟಿ ಮುರಿಯುವ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುತ್ತಿದ್ದರು" (೧೪:೪೨). 

ಮಾತೆ ಮರಿಯಳ ಜೀವನದುದ್ದಕ್ಕೂ ಕಷ್ಟಗಳ ಸುರಿಮಳೆಯೇ ಹಾಸುಹೊಕ್ಕಾಗಿತ್ತು ಆದರೂ ಆಕೆ ದೈವ ಯೋಜನೆಗೆ ಶರಣಾಗಿ ತನ್ನ ವಿಶ್ವಾವನ್ನು ಬಂಡೆಯಂತೆ ಸಶಕ್ತಗೊಳಿಸಿ, ಆ ವಿಶ್ವಾಸದ ದೀವಿಗೆಯ ಪ್ರಖರವಾಗಿ ಪ್ರಜ್ವಲಿಸುವಂತೆ ತನ್ನನ್ನೇ ಸಮರ್ಪಿಸಿಕೊಂಡಿದ್ದಳು. ಅಂತಹ ಧೀರ ಮಹಿಳೆ ಸಂತೃಪ್ತಿಯ ಜೀವನವನ್ನು ಮುಗಿಸಿ ಪರಂಪರೆಯ ನಂಬಿಕೆಯಂತೆ ಸುಮಾರು ಕ್ರಿಸ್ತಶಕ ೪೧ರಲ್ಲಿ ಪ್ರೇಷಿತರ ಸಮ್ಮುಖದಲ್ಲಿ ಮರಣವನ್ನು ಹೊಂದಿದ ನಂತರ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ದೇವರ ಅನಂತ ನಿವಾಸವನ್ನು ಸೇರಿದಳು. (The immaculate Mother of God, the ever Virgin Mary, having completed the course of her earthly life, was assumed body and soul into heavenly glory - Pius XII Munificentissimus Deus 44). ಅಲ್ಲಿ ಅವರು ತ್ರೈಏಕದೇವರ ಸಮ್ಮುಖದಲ್ಲಿ ನಿರಂತರವೂ ಪರಿಪೂರ್ಣ ಸಂತೋಷದ ಹೊನಲಿನಲ್ಲಿ ಮಿಂದು, ತೇಲುತ್ತಾ ಆ ಸವಿಯನ್ನು ನಾವೂ ಸಹ ಅನುಭವಿಸಲು ಅನುವಾಗುವಂತೆ ನಮಗಾಗಿ ಪ್ರಾರ್ಥಿಸುತ್ತಿದ್ದಾಳೆ. 

ನಮ್ಮ ಮುಕ್ತಿಗಾಗಿ ತನ್ನನ್ನು ಸಮರ್ಪಿಸಿಕೊಂಡು ಲೋಕ ರಕ್ಷಕರನ್ನು ನೀಡಿದ ಆ ವೀರ ವನಿತೆ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗದಲ್ಲಿ ರಾರಾಜಿಸುತ್ತಿದ್ದಾಳೆ. ಇದು ನಮ್ಮ ವಿಶ್ವಾಸದ ಪರಮ ಸತ್ಯಗಳಲ್ಲಿ ಒಂದು. ಮಾತೆಯು ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗ ಸ್ವೀಕೃತಳಾದುದರ ಬಗ್ಗೆ ಪ್ರಾಯಶಃ ಎರಡನೇ ಅಥವ ಮೂರನೇ ಶತಮಾನದಲ್ಲಿ ರಚಿತವಾಗಿರುವ "Transitus Mariae" (The Crossing Over of Mary) ಮತ್ತು ನಾಲ್ಕನೇ ಶತಮಾನದಲ್ಲಿ ರಚಿಸಲಾದ Deus Liber Requiel Maria (The Book of Mary's Repose) ಎಂಬ ಪುಸ್ತಕಗಳಲ್ಲಿ ವಿವರಣೆಯನ್ನು ಕಾಣಬಹುದು. ಆದರೆ ಈ ಪರಮ ಸತ್ಯವು ಪೂರ್ವದ ಧರ್ಮಸಭೆಯಲ್ಲಿ ಹಿಂದಿನಿಂದಲೇ ಪ್ರಚಲಿತದಲ್ಲಿತ್ತು. ಪಶ್ಚಿಮದ ಧರ್ಮಸಭೆ ಅದನ್ನು ಮುಕ್ತವಾಗಿ ಅಂಗಿಕರಿಸಿರಲಿಲ್ಲ. ೧೩ನೇ ಶತಮಾನದಲ್ಲಿ ಆ ಸತ್ಯ ಎಲ್ಲೆಡೆ ಹರಡಿತು. ಅಂದಿನಿಂದ ಈ ಹಬ್ಬವನ್ನು The Feast of Saint Mary the Virgin, Mother of our Lord Jesus Christ and the Falling Asleep of the Blessed Virgin Mary-the Dormition ಎಂಬ ವಿವಿಧ ಹೆಸರುಗಳಿಂದ ಆಚರಿಸುತ್ತಿದ್ದರು. 

ದೈವಶಾಸ್ತ್ರಜ್ಞರು ಈ ಪರಮ ಸತ್ಯವನ್ನು ವಿವಿಧ ಆಯಾಮಗಳಲ್ಲಿ ಚರ್ಚಿಸಿದರು. ಮೇ ೧೯೪೬ರಲ್ಲಿ ಈ ಪರಮ ಸತ್ಯವನ್ನು ವ್ಯಾಖ್ಯಾನಿಸಲು ವಿಶ್ವಗುರು ೧೨ನೇ ಪಯಸ್‌(೧೨ನೇ ಭಕ್ತಿನಾಥರು) ನವರು Deiparae Virginis Mariae ಎಂಬ ವಿಶ್ವಪರಿಪತ್ರವನ್ನು ಹೊರಡಿಸಿ ವಿಶ್ವದ ಎಲ್ಲಾ ಧರ್ಮಾಧ್ಯಕ್ಷರುಗಳನ್ನು ದೈವಶಾಸ್ತ್ರಜ್ಞರುಗಳನ್ನು ಮತ್ತು ಶ್ರೀಸಾಮಾನ್ಯರನ್ನು ಚರ್ಚೆಗೆ ಅಹ್ವಾನಿಸಿದರು. ಇದರಲ್ಲಿ ೧,೧೮೧ ಮಂದಿ ಭಾಗವಹಿಸಿದ್ದರು. ಅದರಲ್ಲಿ ೬ ಜನರು ಮಾತ್ರ ತಮ್ಮ ಬೆಂಬಲವನ್ನು ನೀಡಲು ಹಿಂಜರಿದರು. ಅಂತಿಮವಾಗಿ ನವಂಬರ್ ೧, ೧೯೫೦ರಲ್ಲಿ ವಿಶ್ವಗುರು ೧೨ನೇ ಪಯಸ್‌ರವರು ತಮ್ಮ ಪ್ರೇಷಿತ ಸಂವಿಧಾನ "Munificentissimus Deus" (Most Bountiful God =ಕೊಡುಗೈದಾನಿ ದೇವರು In the Apostolic constitution) ನಲ್ಲಿ “ಮಾತೆ ಮರಿಯಮ್ಮ ದೈವಾನುಗ್ರಹದಿಂದ ತನ್ನ ಲೌಕಿಕ ಜೀವನವನ್ನು ಸಂಪೂರ್ಣಗೊಳಿಸಿ ನಿಧನಳಾದಳು,ನಂತರ "ಶರೀರಾತ್ಮಗಳೊಡನೆ ಸ್ವರ್ಗಸ್ವೀಕೃತಳಾದಳು" ಎಂದು ಘೋಷಿಸಿ ಇದು ವಿಶ್ವಾಸದ ಪರಮ ಸತ್ಯಗಳೊಂದು” ಎಂದು ಘೋಷಿಸಿದರು. 

ಅಂದಿನಿಂದ ಧರ್ಮಸಭೆಯು ಆಗಸ್ಟ್ ೧೫ ಅನ್ನು ಸಾರ್ವತ್ರಿಕ ಮಹೋತ್ಸವವಾಗಿ ಆಚರಿಸುತ್ತಿದೆ. ಈ ಮಹೋತ್ಸವವನ್ನು ಕಥೋಲಿಕರು ಮಾತ್ರವಲ್ಲದೆ ಆಂಗ್ಲಿಕನರು, ಈಸ್ಟರ್ನ್ ಆರ್ಥೋಡಾಕ್ಸರು, ಒರಿಯಂಟಲ್ ಆರ್ಥೋಡಾಕ್ಸರು ಸಹ ಆಚರಿಸುತ್ತಾರೆ. ಮಾತೆ ಮರಿಯ ಸದಾ ದೈವಾನುಗ್ರಹಭರಿತಳಾಗಿದ್ದಳು ಹಾಗೂ ಸರ್ವೇಶ್ವರ ಆಕೆಯೊಡನಿದ್ದರು (ಲೂಕ ೧:೨೮). ಇದಕ್ಕೆ ಅನುಗಣವಾಗಿ ಮಾತೆಯು ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ, ಪರಿಶುದ್ಧತೆ, ಪರ ಪ್ರೀತಿಯಿಂದ ಬಾಳಿದರು. ಎಲ್ಲಕ್ಕಿಂತ ಮಿಗಿಲಾಗಿ ಆಕೆಯ ಆಳವಾದ ವಿಶ್ವಾಸ ಹಾಗೂ ವಿಧೇಯತೆಯು ತ್ರೈಏಕನಿಗೆ ಮೆಚ್ಚಿಗೆಯಾಗಿ ಅವರು ಮಾತೆಗಿತ್ತ ಉದಾರ ಹಾಗೂ ಉಚಿತ ಬಹುಮಾನವೇ ಈ ಅನಂತ ಸೌಭಾಗ್ಯ. "Assumpta est Maria in coelum: gaudent angeli! God has taken Mary - body and soul - to Heaven and the Angels rejoice!



¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...