Friday, 10 August 2018

ಶೆಟ್ಟಿಹಳ್ಳಿಯ ಮರುಹುಟ್ಟು.......


ಪಾರ ಒಣಭೂಮಿಗೆ ನೀರೊದಗಿಸಿ ರೈತರ ಬದುಕನ್ನು ಹಸನಾಗಿಸಲೆಂದೇ ಕಟ್ಟಲಾಗುವ ಜಲಾಶಯಗಳ ಹಿಂದೆ ಕೆರೆಗೆ ಹಾರವಾಗುವಂತಹ ದುಗುಡದ ಕತೆಗಳಿರುತ್ತವೆ. ನಾಗರೀಕ ಸೌಕರ್ಯಗಳಿಗಾಗಿ ಹೆಮ್ಮೆಯಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಯೋಜನೆಗಳು ಕೆಲವೊಮ್ಮೆ ದೀಪದ ಕೆಳಗೇ ಕತ್ತಲು ಎಂಬಂತೆ ಅಭಿವೃದ್ಧಿಯ ನಿವೇಶನದಡಿಯಲ್ಲೇ ಕೆಲ ಹೇಳಲಾಗದ ನರಳುವಿಕೆಗೆ ಕಾರಣವಾಗುತ್ತವೆ. ಅದರಲ್ಲೂ ಹಿನ್ನೀರಿನಲ್ಲಿ ಮುಳುಗಡೆಯಾದ ಊರುಗಳು ಗುಳೇ ಏಳಬೇಕಾದ ಸಂಕಟದ ಸಮಯಗಳನ್ನು ವರ್ಣಿಸಲಸಾಧ್ಯ. ಅಂಥ ಒಂದು ಊರು ಹಾಸನದ ಗೊರೂರು ಅಣೆಕಟ್ಟೆಯ ಹಿನ್ನೀರಿಗೆ ಬಲಿಯಾದ ಶೆಟ್ಟಿಹಳ್ಳಿ.
ಶೆಟ್ಟಿಹಳ್ಳಿಯು ನೂರಕ್ಕೆ ನೂರು ಕೃಷಿಕ ಕ್ರೈಸ್ತರೇ ವಾಸಿಸುತ್ತಿದ್ದ ಹಳ್ಳಿ. ಸುಮಾರು ಇನ್ನೂರು ವರ್ಷಗಳ ಹಿಂದೆ ನಾಡಿಗೆ ಸಿಡುಬು ಲಸಿಕೆಯನ್ನು ಪರಿಚಯಿಸಿದ ಮೈಸೂರು ಮಹಾರಾಜರಿಂದ ದೊಡ್ಡಸ್ವಾಮಿಯವರು ಎಂದೇ ಕರೆಸಿಕೊಳ್ಳುತ್ತಿದ್ದ ಫ್ರೆಂಚ್ ಗುರು ಅಬ್ಬೆ ದ್ಯುಬುವಾನವರ ಕೆಲಕಾಲದ ಕರ್ಮಭೂಮಿ ಈ ಶೆಟ್ಟಿಹಳ್ಳಿ. ದ್ಯುಬುವಾನವರು ಈ ಹಳ್ಳಿಯಲ್ಲಿ ಸಹಕಾರ ಬೇಸಾಯ ಪದ್ದತಿಯನ್ನು ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದರು. ಅದಕ್ಕಾಗಿ ಅವರು ಅಂದಿನ ಬ್ರಿಟಿಷ್ ಸರಕಾರದಿಂದ ಶಹಬ್ಬಾಸ್ ಗಿರಿಯನ್ನೂ ಪಡೆದಿದ್ದರು. ಸಹಕಾರ ಬೇಸಾಯ ಪದ್ದತಿಯ ಪ್ರಕಾರ ರೈತರು ಮುಯ್ಯಿಗೂಲಿ ಮಾಡಬೇಕಾಗಿತ್ತು. ಯಾರ ಗದ್ದೆಯಲ್ಲಿ ಪೈರು ನಾಟಬೇಕೋ, ಯಾರ ನೆಲದಲ್ಲಿ ಪೈರು ಕಟಾವಿಗೆ ಬಂತೋ ಅಲ್ಲೆಲ್ಲ ಇವರು ಹೋಗಿ ಕೆಲಸ ಗೇಯಬೇಕಿತ್ತು. ಅದೇ ರೀತಿ ಇವರ ಗದ್ದೆಗೆ ಅವರು ಬಂದು ಗೇಯುತ್ತಿದ್ದರು. ಹೀಗೆ ಶ್ರಮದ ಕೆಲಸವು ಸುಲಭವಾಗುತ್ತಿತ್ತು ಮಾತ್ರವಲ್ಲ ಹೆಚ್ಚು ಭೂಮಿ ಕೃಷಿಗೆ ಒಳಪಡುತ್ತಿತ್ತು. ಬೆಳೆಗಳ ಬೆಳೆಯುವಿಕೆಯಲ್ಲೂ ಸಾಮರಸ್ಯ ಮೂಡಿ ರೈತರ ಫಸಲಿಗೆ ಒಳ್ಳೆಯ ಬೆಲೆ ಬರುತ್ತಿತ್ತು.
ಹೀಗೆ ಸುಭಿಕ್ಷೆಯಿಂದ ಸಮೃದ್ಧವಾಗಿದ್ದ ಶೆಟ್ಟಿಹಳ್ಳಿ ಮತ್ತು ಸುತ್ತಮುತ್ತಲ ಮುದ್ದೇಗೌಡನ ಕೊಪ್ಪಲು, ನರಸಯ್ಯನ ಕೊಪ್ಪಲು, ದೊಡ್ಡಕೊಪ್ಪಲು, ಹೊಸಹಳ್ಳಿ, ಚೆಂಗರವಳ್ಳಿ, ಆರೂಬರೆ ಕೊಪ್ಪಲು, ಮಂದಿರ, ಸುಲಗೋಡು ಮುಂತಾದ ೬೨ ಹಳ್ಳಿಗಳ ಕೃಷಿಕ ಜನ ಲಾಗಾಯ್ತಿನಿಂದ ಒಕ್ಕಲನ್ನು ನೆಚ್ಚಿಕೊಂಡು ಭೂಮಿಯನ್ನು ಹದಮಾಡಿ ಬೆಳೆತೆಗೆದು ಹಸುಕುರಿಕೋಳಿ ತೆಂಗು ಮಾವು ಹಲಸುಗಳೊಂದಿಗೆ ಜಾಜಿ ಮೊಲ್ಲೆಗಳೊಂದಿಗೆ ಸಂತೋಷ ಸಂತೃಪ್ತಿಯಿಂದ ಬಾಳುವೆ ನಡೆಸುತ್ತಿದ್ದರು. ಸುತ್ತಲ ಹೊಲಗಳಲ್ಲಿ ರಾಗಿ ಭತ್ತ ಜೋಳದ ಫಲಭರಿತ ಪೈರುಗಳ ನಡುವೆ ಅಕ್ಕಡಿಯಾಗಿ ಅವರೆ ತಡುಗಣಿ ಮುಂತಾದ ಕಾಳುಗಳೂ ಎರಡನೇ ಬೆಳೆಯಾಗಿ ತರಕಾರಿಗಳೂ ಬೆಳೆದು ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದವು.
ಈ ಊರುಗಳ ನಡುವೆಯೇ ಯಗಚಿ ಹೊಳೆಯುಸ್ವಚ್ಛಂದವಾಗಿ ಹರಿದು ಊರವರಿಗೆಲ್ಲ ಸೋದರಿಯಂತೆ ಅಮ್ಮನಂತೆ ಸಲಹುತ್ತಿದ್ದಳು. ಹೊಳೆಯ ನೀರಲ್ಲಿ ಎತ್ತುಗಳೂ ಹಸುಕುರಿಗಳೂ ನೀರುಂಡು ಬದಿಯ ಹಸಿರು ಗರಿಕೆಯನ್ನು ಮೇಯುತ್ತಿದ್ದರೆ ಕಾಲವೇ ನಿಂತು ವಿರಮಿಸುವಂತೆ ತೋರುತ್ತಿತ್ತು.
ಈ ಊರುಗಳಿಗೆಲ್ಲ ಕಲಶಪ್ರಾಯವೆಂಬಂತೆ ಶೆಟ್ಟಿಹಳ್ಳಿಯ ದಿಬ್ಬದ ಮೇಲೆ ಫ್ರೆಂಚ್ ಮಿಷನರಿಗಳು ಕಟ್ಟಿದ ಭಾರೀ ಗಾತ್ರದ ಕೆಂಪುಕಲ್ಲಿನ ಗಾರೆಗಚ್ಚಿನ ದಿವ್ಯ ಭವ್ಯ ಚರ್ಚಿನ ಸುಂದರ ನೋಟ ಬಹುದೂರಕ್ಕೂ ತನ್ನ ಆಧ್ಯಾತ್ಮಿಕ ಸೌಂದರ್ಯವನ್ನು ತೋರುತ್ತಿತ್ತು. ದೇವಾಲಯದ ಬೃಹತ್ ಕಂಚಿನ ಗಂಟೆ ಸುಮಧುರ ನಿನಾದಗೈದು ಎಲ್ಲರಲ್ಲಿ ಶಾಂತಿಯ ದೈವತ್ವವನ್ನು ಬೀರುತ್ತಿತ್ತು.
ಹೀಗೆ ಸುಂದರ ಗಂಭೀರ ನಡೆ ಹೊಂದಿದ್ದ ಚರ್ಚು ಮತ್ತು ಅದಕ್ಕೆ ನಡೆದುಕೊಳ್ಳುತ್ತಿದ್ದ ಆಸುಪಾಸಿನ ಹಳ್ಳಿಗಳ ಜನರ ಮೇಲೆ ಸುಮಾರು ೧೯೬೮ರಲ್ಲಿ ಗೊರೂರು ಡ್ಯಾಮ್ ಎಂಬ ಯೋಜನೆ ಮಂಜೂರಾದ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಯಗಚಿ ಮತ್ತು ಹೇಮಾವತಿಯರು ಸಂಗಮವಾಗುವ ಗೊರೂರು ಬಳಿ ಕಟ್ಟೆ ಹಾಕಿ ತಡೆದು ನೀರಾವರಿಗೆ ಅನುವಾಗಲು ಕರ್ನಾಟಕ ಸರ್ಕಾರ ಭಾರೀ ಯೋಜನೆಯೊಂದನ್ನು ಕೈಗೆತ್ತಿಕೊಂಡಿತು. ಯೋಜನೆಯ ಅನುಷ್ಠಾನಕ್ಕಾಗಿ ಹಿನ್ನೀರಿನಲ್ಲಿ ಮುಳಗಡೆಯಾಗಲಿದ್ದ ಹಲವಾರು ಹಳ್ಳಿಗಳನ್ನು ಗುರುತಿಸಿ ಅಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿ ಬೇರೆಡೆ ಪುನರ್ವಸತಿ ಕಲ್ಪಿಸಲಾಯಿತು. ಶಾಲೆಯಲ್ಲಿ ಕಲಿಯುತ್ತಾ ನಲಿಯುತ್ತಾ ಇದ್ದ ಈ ಕ್ರೈಸ್ತ ಜನಪದರು ತಮ್ಮ ಪಾರಂಪರಿಕ ಆಸ್ತಿಗಳನ್ನು ಬಿಡಲಾಗದೆ ಕೊರಗಿದರೂ ಸರ್ಕಾರದ ಆದೇಶವನ್ನು ಮೀರಲಾಗುವುದೇ ಎಂದುಕೊಂಡು ಸರ್ಕಾರದ ಅಧಿಕಾರಿಗಳು ತೋರಿದೆಡೆಗೆ ಸಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕಾಯಿತು.
ಇಲ್ಲೆಲ್ಲಾ ವಾಸವಿದ್ದ ವಯಸ್ಕರನ್ನು ಗುರುತಿಸಿ ’ಯೋಜನಾ ನಿರ್ವಸಿತರು’ ಎಂಬ ಹಣೆಪಟ್ಟಿ ಹಚ್ಚಿ ತಲಾ ಒಂದು ಸರ್ಟಿಫಿಕೇಟ್ ಕೊಡಲಾಯಿತು. ಆ ಸರ್ಟಿಫಿಕೇಟ್ ಹೊಂದಿದ್ದವರು ಸರ್ಕಾರ ಗುರುತಿಸಿದ್ದ ಹೇಮಾವತಿ ನಿರ್ವಸಿತರ ಕಾಲೋನಿಗಳಲ್ಲಿ ತಲಾ ನಾಲ್ಕು ಎಕರೆ ಜಮೀನು ಪಡೆದುಕೊಂಡು ನೆಲೆಗೊಳ್ಳಬೇಕಾಯಿತು.
ಸುಮಾರು ಎಂಟುನೂರು ಕುಟುಂಬಗಳನ್ನು ಹೊಂದಿದ್ದ ಶೆಟ್ಟಿಹಳ್ಳಿಯ ಕೆಲ ಜನ ಅನತಿದೂರದಲ್ಲಿದ್ದ ಬೋರೆ ಪ್ರದೇಶದಲ್ಲಿ ಜ್ಯೋತಿನಗರ ಎಂಬ ಹೆಸರಿನಲ್ಲಿ ಊರು ಕಟ್ಟಿಕೊಂಡರು. ಸುಮಾರು ಐವತ್ತು ಕುಟುಂಬಗಳು ಹಾಸನ ಪಟ್ಟಣದಲ್ಲೂ ನಲ್ವತ್ತು ಕುಟುಂಬಗಳು ಶೀಮೊಗ್ಗೆಯಲ್ಲೂ ನೆಲೆ ಕಂಡುಕೊಂಡರು. ಕೆಲವರು ಹೆಗ್ಗಡದೇವನಕೋಟೆ ಬಳಿಯ ನಾಗನಹಳ್ಳಿಗೂ ಕೆಲವರು ಬೆಂಗಳೂರು ನಗರಕ್ಕೂ ಹೋದರು.
ಆದರೆ ಕೆಲವರು ತಮ್ಮ ಮನೆ ಮಠ ತೋಟ ಗುಡ್ಡ ಹಿತ್ತಿಲುಗಳೆಲ್ಲ ಜಲಸಮಾಧಿಯಾಗುವುದನ್ನು ನೆನೆದು ಹಲುಬಿದರು. ಏನೇ ಆಗಲಿ ತಮ್ಮ ಊರ ನೆಲವನ್ನು ಅಪ್ಪ ಕಟ್ಟಿದ ಮನೆಯನ್ನು ಬಿಟ್ಟು ಕದಲಲಾರೆವೆಂದು ಪಟ್ಟು ಹಿಡಿದು ಕೂತರು. ಸುಮಾರು ೧೯೭೬ನೇ ಇಸವಿ, ಡ್ಯಾಮಿನ ಕೆಲಸಗಳೆಲ್ಲ ಪೂರ್ಣಗೊಂಡು ಮುಖ್ಯವಾದ ಅಡ್ಡಬಾಗಿಲನ್ನೂ ಮುಚ್ಚುವುದಕ್ಕೆ ಅಣಿಯಾಯಿತು. ಆದರೂ ಮೇಲ್ಕಂಡ ಊರುಗಳಲ್ಲಿ ಸರಿಸುಮಾರು ಇನ್ನೂರು ಕುಟುಂಬಗಳು ಉಳಿದೇ ಇದ್ದವು. ನೀರಾವರಿ ಅಧಿಕಾರಿಗಳಿಗೆ ಚಿಂತೆ ಶುರುವಾಯಿತು. ಈ ಜನರ ಎತ್ತಂಗಡಿಯಾಗದೆ ಅಣೆಕಟ್ಟೆಯ ಗೇಟು ಮುಚ್ಚುವಂತಿಲ್ಲ. ಅವರು ಪೊಲೀಸರ ದಂಡಿನೊಂದಿಗೆ ಬಂದು ಹಳ್ಳಿಗರೆಲ್ಲರನ್ನೂ ಬಲವಂತವಾಗಿ ಲಾರಿಗಳಲ್ಲಿ ಹತ್ತಿಸಿ ಮುಳುಗಡೆ ಸಂತ್ರಸ್ತರು ಎಂಬ ಹಣೆಪಟ್ಟಿ ಹಚ್ಚಿ ಸರಕಾರ ಮೊದಲೇ ಗುರುತಿಸಿದ್ದ ತಾಣಗಳಿಗೆ ಒಯ್ದು ಬಿಟ್ಟುಬಂದರು.
ಸುಮಾರು ಇನ್ನೂರು ಕುಟುಂಬಗಳನ್ನು ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಬೆಳಮೆ ಎಂಬ ಕೊಡಗಿನಂಚಿನ ಕಾಡಿನಲ್ಲಿ ದಬ್ಬಿದರು. ಆ ಕಾಲೋನಿ ಈಗ ಮರಿಯಾನಗರ ಆಗಿದೆ.
ಮುದ್ದೇಗೌಡನ ಕೊಪ್ಪಲಿನ ಸುಮಾರು ಐವತ್ತು ಕುಟುಂಬಗಳು ಹೇಮಾವತಿ ಹೋಜನೆಗೆ ಮುನ್ನವೇ ಯಗಚಿ ಹೊಳೆ ನೀರನ್ನು ಆಶ್ರಯಿಸಿ ಒಕ್ಕಲುತನ ಮಾಡುತ್ತಿದ್ದುದರಿಂದ ಅವರಿಗೆ ಚೆನ್ನರಾಯಪಟ್ಟಣದ ಬಳಿಯ ಹಾಸುಗಲ್ಲುಬಾರೆ ಎಂಬಲ್ಲಿ ಹೇಮಾವತಿ ನಾಲೆ ಹರಿಯಲಿದೆ ಎಂಬ ಆಶ್ವಾಸನೆ ನೀಡಿ ಬಂಜರು ಭೂಮಿಯನ್ನು ತೋರಿಸಲಾಯಿತು. ಬಾಂದಿನವರು ಬಂದು ಬರೇ ಕಲ್ಲು ಕಾರೇಮುಳ್ಳುಗಳಿಂದ ತುಂಬಿದ್ದ ಭೂಮಿಯಲ್ಲಿ ರಂಗೋಲಿಯ ಗೆರೆ ಬಳಿದು ಒಬ್ಬೊಬ್ಬರಿಗೂ ಇಂತಿಷ್ಟು ಭೂಮಿ ಎಂದು ಅಳೆದುಕೊಟ್ಟರು. ಅಲ್ಲಿ ಜಾಗ ಸಾಲದಾದಾಗ ದೊಡ್ಡಕುಂಚೇವು, ಹೊಸೂರು ಮುಂತಾದೆಡೆಗಳಲ್ಲೂ ಜಮೀನು ಕೊಡಲಾಯಿತು.
ಇವರೆಲ್ಲರೂ ಸಾಗುವಳಿಗಾಗಿ ತಮ್ಮ ಜಮೀನಿನಲ್ಲಿದ್ದ ಕಲ್ಲುಗಳನ್ನು ಆಯ್ದು ಹೊರಹಾಕಿ, ಕಾರೇಗಿಡ ಕುರುಚಲು ಪೊದೆಗಳನ್ನೆಲ್ಲ ಬೇರುಸಮೇತ ಅಗೆದು ತೆಗೆದು ಬೆಂಕಿಯಲ್ಲಿ ಸುಟ್ಟು, ನೆಲವನ್ನು ಹರಗಿ ಹೊಸದಾಗಿ ಬೆಳೆ ತೆಗೆಯಬೇಕಾಯಿತು. ಈ ನಡುವೆ ತಮ್ಮ ವಾಸಕ್ಕೂ ದನಕರುಕುರಿಗಳ ವಾಸಕ್ಕೂ ಕಟ್ಟೋಣದ ಕೆಲಸದಲ್ಲಿ ತೊಡಗಬೇಕಾಗಿತ್ತು.  ತಮಗೊಂದು ಭದ್ರವಾದ ಸೂರು ಕಟ್ಟಿಕೊಳ್ಳುವ ಮುನ್ನವೇ ಇವರು ದಿಬ್ಬದ ಮೇಲೆ ದೇವಾಲಯ ಕಟ್ಟಿದರು.
ಅಂದು ಹಾಸನದಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಇಮ್ಯಾನ್ಯುವೆಲ್ ಸಿ ಮಣಿಯವರು ಈ ಜನರ ದೈವಭಕ್ತಿಯನ್ನು ಕಂಡು ಇವರ ಜೊತೆಗೆ ನಿಂತು ನೈತಿಕ ಸ್ಥೈರ್ಯ ತುಂಬಿದರು. ಸಂಜೆಯ ಬಿಡುವಿನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜನರನ್ನು ಒಟ್ಟುಗೂಡಿಸಿ ಸೌಹಾರ್ದ ವಾತಾವರಣ ಮೂಡಿಸಿದರು. ಹೊಸ ಸಮಾಜವು ಯಾವುದೇ ತಕರಾರು ಜಗಳಗಳಿಲ್ಲದೆ ಸಾಮರಸ್ಯದ ಜೀವನ ನಡೆಸುವಂತೆ ನೋಡಿಕೊಂಡರು. ಪಾದ್ರಿಗಳ ನಿವಾಸವೇ ಈ ಜನರಿಗೆ ಗುಡಿಯಾಯಿತು, ಶಾಲೆಯಾಯಿತು, ಮಕ್ಕಳ ಬೇಸಿಗೆ ಶಿಬಿರವಾಯಿತು, ಊರವರಿಗೆ ಪ್ರಾಥಮಿಕ ಚಿಕಿತ್ಸಾಕೇಂದ್ರವೂ ಆಯಿತು. ಊರವರ ಆಸಕ್ತಿಪೂರ್ಣ ಪಾಲುಗೊಳ್ಳುವಿಕೆಯನ್ನು ತಮ್ಮ ಬಿಷಪರಿಗೆ ಅರುಹಿದ ಫಾದರ್ ಮಣಿಯವರು ಶಾಲೆಯ ಚಟುವಟಿಕೆಗಳನ್ನು ಸುಸೂತ್ರವಾಗಿ ಮುಂದುವರಿಸಲು ನೆರವು ನೀಡುವಂತೆ ಕೋರಿದ್ದರ ಫಲವಾಗಿ ಮಂಗಳೂರಿನಿಂದ ಕೆಲ ಕನ್ಯಾಸ್ತ್ರೀಯರು ಬಂದು ಶಾಲೆಯ ಉಸ್ತುವಾರಿ ವಹಿಸಿಕೊಂಡರು. ಹೀಗೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಿರಾಶ್ರಿತರ ತಾಣವಾಗಿದ್ದ ಒಂದು ನೆಲೆ ಇಂದು ’ಅಲ್ಫೋನ್ಸ್ ನಗರ’ ಎಂಬ ವ್ಯವಸ್ಥಿತ ಹಾಗೂ ಚೊಕ್ಕ ಗ್ರಾಮವಾಗಿ ಬೆಳೆದು ಸುತ್ತಮುತ್ತಲ ಗ್ರಾಮಗಳಿಗೆ ಮಾದರಿಯಾಗಿದೆ.

¨ ಸಿ ಮರಿಜೋಸೆಫ್



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...