ಪೋಪ್ ಪ್ರಾನ್ಸಿಸ್ ನವರ ಪ್ರೇಷಿತ ಪತ್ರದ ಬಗ್ಗೆ ಕಿರು ಚಿಂತನೆ
ಭಾಗ ೧
"ಹರ್ಷಿಸಿರಿ ಹಾಗೂ ಆನಂದಿಸಿರಿ" ಎಂಬ ಸಂದೇಶದ ಮೇರೆಗೆ ವಿಶ್ವಗುರು ಪೋಪ್ ಫ್ರಾನ್ಸಿಸ್ ನವರು ಪಾವಿತ್ರ್ಯದ ಬಗೆಗಿನ ಸಂದೇಶವನ್ನು ಪ್ರೇಷಿತ ಪತ್ರದ ಮೂಲಕ ಸಾರಿದ್ದಾರೆ. ಪೂಜ್ಯರ ವಚನಗಳು ಪಾವಿತ್ರ್ಯದ ಬಗ್ಗೆ ವಿಭಿನ್ನ ಅರ್ಥವನ್ನೇ ಮೂಡಿಸಿದೆ. ಪಾವಿತ್ರ್ಯವು ನಾವು ತಿಳಿದಿರುವ ಹಾಗೆ ಜಪದಲ್ಲೋ ದೇವಸ್ಥಾನದಲ್ಲೋ ಕಾಣುವಂತದ್ದಲ್ಲ, ಬದಲಿಗೆ ನಮ್ಮ ದೈನಂದಿನ ಬದುಕಿನಲ್ಲಿ ಕಂಡುಕೊಳ್ಳುವಂತದ್ದು. ಪ್ರತೀ ವರ್ಷ ವಿಶ್ವಗುರುಗಳು ತಮ್ಮ ಪ್ರೇಷಿತ ಪತ್ರ ಸಾರುವಲ್ಲಿ ಮುಂದಾಗುತ್ತಾರೆ, ಈ ಪತ್ರವು ವಿಶೇಷವಾಗಿ ವಿಶ್ವ ಮಾನವಕೋಟಿಗೆ, ಶ್ರೀಸಾಮಾನ್ಯರಿಗೆ, ಧಾರ್ಮಿಕ ಸೇವಾಜೀವಿಗಳಿಗೆ ನೀಡುವ ವಿಶ್ವಸಂದೇಶವಾಗಿದೆ. ನಾವು ತಿಳಿದಿರುವಂತೆ ಈ (ಅಪೋಸ್ತೊಲಿಕ್ ಎಕ್ಸಾಲ್ಟೇಶನ್) ಪ್ರೇಷಿತ ಪತ್ರ ಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳಲು ಅಸಾಧ್ಯ, ಏಕೆಂದರೆ ಆಧ್ಯಾತ್ಮಿಕ ಚಿಂತನೆಗಳು ಬಹಳ ಆಳವಾಗಿರುವಂತದ್ದು. ಆದರೆ ಪೋಪ್ ಫ್ರಾನ್ಸಿಸ್ ನವರು ಬರೆದಿರುವಂತಹ ಈ ಬಾರಿಯ ಪತ್ರ ಸುಲಭ ಸರಳ ರೀತಿಯಲ್ಲಿದೆ. ನಾವು ಕ್ರೈಸ್ತರಾಗಿ ಯಾವ ರೀತಿಯಲ್ಲಿ ಪಾವಿತ್ರ್ಯದ ಜೀವನ ನಡೆಸಬೇಕು ಹಾಗೂ ಅದರ ಮೂಲಕ ಇನ್ನೊಬ್ಬರಿಗೆ ಹೇಗೆ ಉದಾಹರಣೆ ಆಗಬೇಕು ಎಂಬುದು ಈ ಪತ್ರದ ಮೂಲ ಆಶಯವಾಗಿದೆ. ಬದುಕು ಉದಾಹರಣೆಯಾಗಬೇಕು ಮಾತ್ರವಲ್ಲ ಪ್ರಭು ಕ್ರಿಸ್ತನಿಗೆ ಸಾಕ್ಷಿಯಾಗಬೇಕೆಂದು ಅವರ ಮಾತಾಗಿದೆ. ಈ ಪತ್ರದಲ್ಲಿ ಪೂಜ್ಯರು ನಮ್ಮ ಬದುಕಿನಲ್ಲಿ ನಡೆಯುವ ಅನೇಕ ಸನ್ನಿವೇಶಗಳನ್ನು ಉದಾಹರಣೆಯಾಗಿ ನೀಡುತ್ತಾ ಹೋಗುತ್ತಾರೆ. ಪೋಪ್ ಫ್ರಾನ್ಸಿಸ್ ನವರ ಮಾತುಗಳು, ಒಣಗಿದ ರೆಂಬೆಗಳಿಗೆ ಮಳೆರಾಯ ನೀರುಹರಿಸಿ ನವಚಿಗುರು ಮೂಡಿಸುವಂತೆ - ನಮ್ಮಂತಹ ವಿಶ್ವಾಸಹೀನ ಹೃದಯಿಗಳಿಗೆ ಸಾಂತ್ವನದ ಮಾತುಗಳಾಗಿವೆ, ಬದುಕಿಯೂ ಸತ್ತಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಅವರ ಮಾರ್ಗದರ್ಶನವು ಸಂಜೀವಿನಿಯಾಗಿದೆ.
"ಹರ್ಷಿಸಿರಿ ಹಾಗೂ ಆನಂದಿಸಿರಿ" (ಮತ್ತಾಯ ೫:೧೨), ಯೇಸುಸ್ವಾಮಿ ದೇವರ ಸಾಮ್ರಾಜ್ಯಕ್ಕಾಗಿ ರಕ್ತಸಾಕ್ಷಿಗಳಾದ ಅನೇಕರನ್ನು ಉದ್ದೇಶಿಸಿ ಈ ಮಾತುಗಳನ್ನು ಆಡುತ್ತಾರೆ. ದೇವರು ನಮ್ಮಿಂದ ಎನನ್ನು ತಾನೇ ಬಯಸಬಹುದು? ಆತ ನಮಗೆ ಎಲ್ಲವನ್ನೂ ಉದಾರವಾಗಿ ನೀಡಿದ್ದಾನಲ್ಲವೇ? ಅವನ ಪ್ರೀತಿ, ತ್ಯಾಗ, ದೀನತೆ ಇವೆಲ್ಲವನ್ನು ನಾವು ಅಳೆಯಲು ಅಸಾಧ್ಯ. ಆತ ನಮಗೆ ದೈವ ಹಾಗೂ ಮಾನವ ಸತ್ಸಂಬಂಧದ ಸಾಕ್ಷಿಯಾಗಿ ತನ್ನ ರಕ್ತವನ್ನು ಹರಿಸಿ ಪ್ರಾಣತ್ಯಾಗ ಮಾಡಿದ್ದಾನೆ. ಆತ ನಮಗೆ ಸಂತರ ಬದುಕನ್ನು ಬದುಕಲು ಕರೆ ನೀಡುತ್ತಾನೆ ನಾವು ಸಹ ಲೌಕಿಕತನವನ್ನು ತ್ಯಜಿಸಿ ವಿಧೇಯರಾಗಿ ಆ ಸಂತರ ಬಾಳನ್ನು ಬದುಕಲು ಮುಂದಾಗಬೇಕು. ಪಾವಿತ್ರ್ಯದ ಬದುಕು ಬದುಕಲು ದೇವರು ಬೈಬಲ್ ಪ್ರಾರಂಭದಿಂದಲೂ ಕರೆ ನೀಡಿದ್ದಾರೆ. ಆ ಪಾವಿತ್ರ್ಯದ ಜೀವನವನ್ನು ನಮ್ಮ ಕ್ರೈಸ್ತ ಬದುಕಿನಲ್ಲಿ ಅಳವಡಿಸಿಕೊಂಡು ದೇವರಿಗೆ ಅಭಿಮುಖರಾಗೋಣ. ಅಬ್ರಹಾಮನಿಗೆ ದೇವರು ಪಾವಿತ್ರ್ಯದ ಬದುಕ ಬದುಕಲು ಕರೆ ನೀಡುತ್ತಾರೆ, "ನೀನು ನನ್ನ ಸಮ್ಜುಖದಲ್ಲಿ ನಿರ್ದೋಷಿಯಾಗಿ ನಡೆದುಕೊಳ್ಳಬೇಕು" (ಆದಿಕಾಂಡ ೧೭:೧). ಪೋಪ್ ಫ್ರಾನ್ಸಿಸ್ ನವರು ವಿಭಿನ್ನ ರೀತಿಯಲ್ಲಿ ಪಾವಿತ್ರ್ಯವನ್ನು ಅಭ್ಯಾಸಿಸುವುದರ ಬಗ್ಗೆ ಹೇಳಿಲ್ಲ ಬದಲಿಗೆ ಅವರ ಪತ್ರದಲ್ಲಿ ಐದು ಮುಖ್ಯ ಅಂಶಗಳು, ಪಾವಿತ್ರ್ಯದ ಹಾಗೂ ಆಧ್ಯಾತ್ಮಿಕತೆಯ ಕುರಿತಾಗಿ ಚರ್ಚೆಯಾಗಿವೆ. ಈ ಚರ್ಚೆಗಳು ಸಾಧಾರಣ ಕ್ರೈಸ್ತವಿಶ್ವಾಸಿಗಳು ತಮ್ಮ ದಿನನಿತ್ಯ ಜೀವನದಲ್ಲಿ ಪ್ರಾಯೋಗಿಕವಾಗಿ ಅಭ್ಯಸಿಸುವಂತದ್ದಾಗಿದೆ. ಸಂತ ಪೌಲರ ನುಡಿಯಂತೆ, ". . . ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡಿದ್ದಾರೆ" (ಎಫೆಸದವರಿಗೆ ೧:೪).
********
ಸಂತರುಗಳ ಮಾರ್ಗದರ್ಶನ ನಮಗೆ ಪಾವಿತ್ರ್ಯದ ಬದುಕ ಬದುಕಲು ಅನುವು ಮಾಡಿಕೊಡುತ್ತದೆ, "ಮೇಘದಂತೆ ನಮ್ಮ ಸುತ್ತಲೂ ಸಾಕ್ಷಿಗಳು ಆವರಿಸಿರುವಾಗ, ನಾವು ಅಂಜದೆ ನಮ್ಮ ಪಾಪಗಳ ಹೊರೆಯನ್ನು ತೆಗೆದು ಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ಸ್ಥಿರಚಿತ್ತದಿಂದ ಭಾಗವಹಿಸೋಣ" (ಹಿಬ್ರಿಯರಿಗೆ ೧೨:೧). ಹೌದು, ಸಂತರುಗಳು ನಮ್ಮ ಬದುಕಿನಂತೆ ಜೀವಿಸಿ ನಮ್ಮಂತೆಯೇ ಹಲವಾರು ಲೌಕಿಕ ಅವಘಡಗಳನ್ನು ಎದುರಿಸಿದ್ದಾರೆ. ಹಿಬ್ರಿಯರಿಗೆ ಬರೆದ ಪತ್ರವು ಸಾಂಕೇತಿಕವಾಗಿ ಅಬ್ರಹಾಮ, ಸಾರಾ, ಮೋಶೆ, ಗಿಡಿಯೋನ ಮತ್ತು ಇನ್ನಿತರ ಶ್ರೇಷ್ಠ ಜೀವಿಗಳನ್ನು ಸೂಚಿಸುತ್ತದೆ. . . (ಹಿಬ್ರಿಯರಿಗೆ ೧೧: ೧-೧೨:೩). ಈ ಮಾತುಗಳ ಮೂಲವೇನೆಂದರೆ ನಮ್ಮ ಜೀವನದಲ್ಲಿ ನಾವು ಈ ಶ್ರೇಷ್ಠ ಜೀವಿಗಳನ್ನು ಮನವರಿಕೆ ಮಾಡಿಕೊಳ್ಳಬೇಕಿದೆ. ಈ ಸಾಕ್ಷಿ ಆಧಾರಿತ ಬದುಕು ನಮಗೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು, ಆದರೆ ನಮ್ಮ ಕುಟುಂಬಗಳಲ್ಲೆ ಇರುವಂತಹ ನಮ್ಮ ಹಿರಿಯರು, ಅಜ್ಜ ಅಜ್ಜಿಯರು, ತಂದೆ ತಾಯಂದಿರು ಹಾಗೂ ಮತ್ತಿತರರ ಜೀವನವನ್ನು ಮನವರಿಕೆ ಮಾಡಿಕೊಳ್ಳೋಣ. ಅವರೆಲ್ಲರ ಬದುಕು ನಮಗೆ ಕ್ರಿಸ್ತನನ್ನು ತೋರಿಸಿದ್ದಕ್ಕಾಗಿಯೇ ನಾವು ಇಂದು ಕ್ರೈಸ್ತ ವಿಶ್ವಾಸಿಗಳಾಗಿರಲು ಸಾಧ್ಯವಾಗಿದೆ. ಅವರ ಜೀವನ ಸಂತರಂತೆ ಪಾವಿತ್ರ್ಯ ತುಂಬಿದ್ದಾಗಿರದಿದ್ದರೂ, ಅವರ ತಪ್ಪು ಒಪ್ಪುಗಳ ನಡುವೆ ದೇವರಿಗೆ ಅಭಿಮುಖರಾಗಿ ನಡೆದಿದ್ದಾರೆ. ಅಂತಹವರ ಬದುಕಿನಲ್ಲಿ ದೈವವಿಶ್ವಾಸವಿದ್ದರೂ, ಅನೇಕ ಬಾರಿ ಪಾಪ ಮಾಡಿದ್ದರೂ, ದೇವರ ಮನವೊಲಿಸಲು ಪ್ರಾಯಶ್ಚಿತ್ತ ಪಡುತ್ತಾ ಮುಂದೆ ಸಾಗಿದ್ದಾರೆ, ನಮಗೆ ಇವು ಉದಾಹರಣೆಯಾಗಬೇಕಿದೆ. ಈ ಸಾಕ್ಷಿಗಳಿಗಿಂತ ಬೇರೊಂದು ಬೇಕೆ? ಸಂತರು ನಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ನಾನು ನನ್ನ ಜೀವನವನ್ನು ಒಬ್ಬನೇ ಸಾಗಿಸಲು ಸಾಧ್ಯವಿಲ್ಲ ಅದಕ್ಕೆ ತಕ್ಕಂತೆ ಸಂತರುಗಳ ಮಾರ್ಗದರ್ಶನ ನನಗೆ ದೊರಕಬೇಕು ಎಂಬ ಪರಿಕಲ್ಪನೆ ಪ್ರತಿ ಕ್ರೈಸ್ತನದ್ದಾಗಬೇಕು. ಧರ್ಮಸಭೆಯು ಪುನೀತರನ್ನಾಗಿ ಸಂತರನ್ನಾಗಿ ಕೆಲವರನ್ನು ಉನ್ನತೀಕರಿಸುತ್ತದೆ, ಈ ಪ್ರಕ್ರಿಯೆ ಅವರುಗಳ ವೀರೋಚಿತ ಸದ್ಗುಣಗಳನ್ನು ಹೊಗಳಿ ಗೌರವಿಸುವಂತದ್ದು. ಕ್ರಿಸ್ತನ ನಡೆ ನುಡಿಯನ್ನು ಅನುಕರಿಸಿ ಜೀವನ ಪರಿಯಂತರ ಅವನ ಧ್ಯಾನದಲ್ಲಿ ಮಗ್ನರಾಗಿ ಸ್ವರ್ಗೀಯ ಜೀವನ ಸ್ವೀಕರಿಸುತ್ತಾರೆ. ಪ್ರಭು ಕ್ರಿಸ್ತನ ಸ್ವರ್ಗೀಯ ಔತಣದಲ್ಲಿ ಪಾಲುಗಾರರಾಗುತ್ತಾರೆ.
ಪೋಪ್ ಫ್ರಾನ್ಸಿಸ್ ನವರು ಹೇಳುತ್ತಾರೆ: ಈ ಪಾವಿತ್ರ್ಯವನ್ನು ಕುಟುಂಬಗಳಲ್ಲಿ ನಾವು ಕಾಣಬಹುದೆಂದು. ಅನೇಕ ಬಾರಿ ಕಷ್ಟಗಳನ್ನು ಎದುರಿಸಲು ಒಟ್ಟಾಗಿ ಸೇರುವ ಗಂಡ-ಹೆಂಡತಿಯರು, ಮನೆಯ ಮಕ್ಕಳನ್ನು ಶಾಲೆಗೆ ಸೇರಿಸಲು ಶ್ರಮಿಸುವವರು, ಕಾಯಿಲೆಯಿಂದ ನರಳುವವರನ್ನು ಅಸ್ವಸ್ಥರನ್ನು ನೋಡಿಕೊಳ್ಳುವ ಆತ್ಮೀಯರು, ಕುಟುಂಬದಲ್ಲಿ ಸದಾ ಆ ನಗುವನ್ನು ತರಲು ಶ್ರಮಿಸವ ಹಲವರು, ಮಕ್ಕಳಿಗೆ ತಮ್ಮ ಕಷ್ಟಗಳನ್ನು ತಿಳಿಸದೆ ಬಚ್ಚಿಡುವ ತಂದೆತಾಯಿಯರು ಇಂತವರಲ್ಲಿ ಪಾವಿತ್ರ್ಯ ಅತಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇವರುಗಳೇ ನಮ್ಮ ಪಕ್ಕದಲ್ಲೆ ಇರುವಂತಹ ನಮ್ಮ ಜೊತೆಗೇ ಓಡಾಡುವ ಸಂತರುಗಳು ಎಂದು ಫ್ರಾನ್ಸಿಸ್ ನವರು ಹೇಳಿದ್ದಾರೆ.
ನಾವು ನಿಯಮಿತ ಅಡಚಣೆಗಳನ್ನು ಒಡ್ಡುವುದರಿಂದ, ನಮ್ಮದೇ ಅಜ್ಞಾನದಿಂದ ಇನ್ನೊಬ್ಬರನ್ನು ನಿಂದಿಸುವುದರಿಂದ, ತಾಳ್ಮೆ ಸಹನೆ ಮೀರುವುದರಿಂದ ಕ್ರೈಸ್ತ ಸಮುದಾಯವನ್ನು ಹಾಳುಮಾಡುತ್ತಿದ್ದೇವೆ. ಶ್ರೀಧರ್ಮಸಭೆಯ ಸುಭದ್ರ ಸ್ಥಾವರ ಕ್ರೈಸ್ತ ಸಮುದಾಯಗಳು, ಅದರಲ್ಲೂ ಕ್ರೈಸ್ತ ಕುಟುಂಬಗಳು ಧರ್ಮಸಭೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದುತ್ತವೆ. ನಮ್ಮ ದೈನಂದಿನ ಸಣ್ಣಪುಟ್ಟ ವ್ಯವಹಾರಗಳಲ್ಲಿ, ಬಂದಂತಹ ಸಂಬಳದಲ್ಲಿ ಪರರ ಸೇವೆ ಮಾಡಿ ತೃಪ್ತಿಪಟ್ಟರೆ ಅಲ್ಲಿ ಪಾವಿತ್ರ್ಯ ಉದ್ಬವವಾಗುತ್ತದೆ. ಇಂತಹ ಸನ್ನಿವೇಶಗಳನ್ನು ಯಾವ ಪುಸ್ತಕಗಳಲ್ಲಾಗಲಿ ಉಲ್ಲೇಖಿಸುವುದಿಲ್ಲ, ಇವು ಯಾವ ಚರಿತ್ರೆಗೂ ಸೇರುವುದಿಲ್ಲ, ಬದಲಿಗೆ ನಮ್ಮ ಮತ್ತು ಕ್ರಿಸ್ತನ ಬಂಧನ ಸ್ಥಿರವಾಗುವುದು, ನಮ್ಮ ಮಕ್ಕಳ ಹಾಗೂ ನಮ್ಮ ಮನೆಯವರ ಭವಿಷ್ಯ ಸದೃಢವಾಗುವುದು.
ಪಾವಿತ್ರ್ಯವೆಂಬುದು ಧರ್ಮಸಭೆಯ ಮತ್ತೊಂದು ಮನೋಹರ ಮುಖವಾಗಿದೆ. ಇದು ಕ್ರಿಸ್ತನನ್ನೇ ಹೋಲುವಂತದ್ದು. "ನಾನು ಪರಿಶುದ್ಧವಾಗಿರುವಂತೆ ನೀವು ಸಹ ಪರಿಶುದ್ಧರಾಗಿ ಜೀವಿಸಿರಿ" (೧ ಪೇತ್ರ ೧:೧೬). ದೇವರೊಬ್ಬನೇ ಉತ್ತಮನು ಹಾಗೂ ಪಾರಂಗತನು, ಮಾನವರಾದ ನಾವ್ಯಾರೂ ಅವನ ಹೋಲಿಕೆಯಾಗಲು ಅಸಾಧ್ಯ. ಈ ಸಂತರುಗಳ ಹಾಗೂ ಹಿರಿಯರ ಮಾರ್ಗದರ್ಶನ ನಮಗೆ ಬೇಕು ನಿಜ, ಆದರೆ ಆ ಬದುಕು ಅನುಕರಣೆಗಾಗಿ ಅಲ್ಲ ಅನುಸರಿಸುವುದಕ್ಕಾಗಿ. ಅವರನ್ನು ಅನುಕರಣೆ ಮಾಡಿದಲ್ಲಿ ನಾವು ನಾವಾಗದೆ ಅವರಾಗುತ್ತೇವೆ, ಪರ್ಯಾಯವಾಗಿ ನಾವು ಅವರನ್ನು ಅನುಸರಿಸುವ ಮೂಲಕ ತಿಳುವಳಿಕೆ ಪಡೆದು ನಮ್ಮದೇ ನಿಟ್ಟನಲ್ಲಿ ಬದುಕಬೇಕು (೧ ಕೊರಿಂಥ ೧೨:೭). ನಾವು ನಿಯಮಗಳನ್ನು ಮಾಡಿಕೊಳ್ಳಬೇಕು ಆದರೆ ಬೇರೆಯವರ ಬದುಕಿನ ನಿಯಮಗಳನ್ನು ನಾವು ಪಾಲಿಸಬಾರದು, ಆ ರೀತಿಯಾದರೆ ನಮ್ಮನ್ನೇ ನಾವು ಇಕ್ಕಟ್ಟಿಗೆ ಸಿಲುಕಿಸಿಕೊಂಡಂತೆ. "ದೇವರನ್ನು ಕಾಣುವುದಾದರೆ ತನ್ನದೇ ಆದ ರೀತಿಯಲ್ಲಿ ಕಾಣಬೇಕು" - ಶಿಲುಬೆಯ ಸಂತ ಜಾನ್.
ಅನೇಕ ಬಾರಿ ಪಾವಿತ್ರ್ಯ ನಮಗಲ್ಲ ಅದು ಬಿಷಪ್ಪರು, ಗುರುಗಳು, ಕನ್ಯಾಸ್ತ್ರೀಯರಿಗೆ ಎಂದುಕೊಳ್ಳುತ್ತೇವೆ. ಕ್ರೈಸ್ತಧರ್ಮ ಪಾವಿತ್ರ್ಯವನ್ನು ಅವರಿಗೆ ಮಾತ್ರ ಸೀಮಿತವಾಗಿಸಿಲ್ಲ, ಅದನ್ನು ನಾವೆಲ್ಲರೂ ಪಾಲಿಸಬೇಕು. ಒರ್ವ ಮದುವೆಯಾಗಿದ್ದರೆ ತನ್ನ ಸಂಗಾತಿಯನ್ನು ಮಕ್ಕಳನ್ನು ಜವಾಬ್ದಾರಿಯುತನಾಗಿ ಕಾಣುವುದು ಅವನ ಆದ್ಯ ಕರ್ತವ್ಯವಾಗಿದೆ. ಕುಟುಂಬವೆಂಬಲ್ಲಿ ಪ್ರಾಮಾಣಿಕತೆ ಅತಿ ಮುಖ್ಯವಾಗಿದೆ. ಪ್ರೀತಿ, ಸ್ನೇಹ ಹಾಗೂ ತ್ಯಾಗ ಇವುಗಳನ್ನು ಸದಾ ತನ್ನದಾಗಿಸುವಲ್ಲಿ ಪಾವಿತ್ರ್ಯವನ್ನು ಕಾಣಬಹುದು. ಪ್ರಾಮಾಣಿಕತೆ ಎಂಬುದು ಪರಸ್ಪರ ಗೌರವಿಸುವುದು. ಈ ಗೌರವಿಸುವಿಕೆ ಪ್ರೀತಿಯ ಬಾಂಧವ್ಯವನ್ನು ಉಂಟುಮಾಡುತ್ತದೆ. ಯೇಸುಸ್ವಾಮಿ ಹೇಗೆ ಧರ್ಮಸಭೆಯ ಮೇಲೆ ಅಗಾಧ ಪ್ರೀತಿಯನ್ನು ಇರಿಸಿದ್ದಾರೋ ಅಂತೆಯೇ ಸತಿ ಪತಿ ಪರಸ್ಪರ ಪ್ರೀತಿಸಬೇಕು. ಸಮಾಜದಲ್ಲಿ ತಾಯಿಯಾಗಿರಲಿ, ತಂದೆಯಾಗಿರಲಿ, ಅಜ್ಜ, ಅಜ್ಜಿ, ಸೋದರ, ಸೋದರಿಯಾಗಿರಲಿ ಆ ಸ್ಥಾನವು ನಮಗೆ ಸಿಕ್ಕಿರುವಂತಹ ಜವಾಬ್ದಾರಿ, ಅದನ್ನು ಶೇಖರಿಸುವುದು ಹಾಗೂ ಒಳ್ಳೆಯ ರೀತಿಯಲ್ಲಿ ಸಹನಾ ಬಾಳ್ವೆಯಿಂದ ಜೀವನ ನಡೆಸುವ ಕರೆ ಇಲ್ಲಿದೆ.
ನಮ್ಮ ದೀಕ್ಷಾಸ್ನಾನವನ್ನು ಪ್ರತೀದಿನ ಪದೇ ಪದೇ ನೆನಪಿಗೆ ತಂದುಕೊಳ್ಳಬೇಕು, ಹೇಗೆ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳುತ್ತೇವೋ ಆ ರೀತಿ ದೀಕ್ಷಾಸ್ನಾನವನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ ನಮ್ಮನ್ನು ಪರಿಶುದ್ಧವಾಗಿಸಿರುವುದು ದೀಕ್ಷಾಸ್ನಾನವೇ. "ಗಾಬರಿಯಾಗದಿರಿ, ಪವಿತ್ರಾತ್ಮರು ನಿಮಗೆ ಸಹಾಯ ನೀಡುವರು, ನಿಮ್ಮ ಪರಿಶುದ್ಧತೆಗೆ ಸಹಕರಿಸುವರು, ನಿಮ್ಮ ಜೀವನದ ಅಂತ್ಯದಲ್ಲಿ ಪವಿತ್ರಾತ್ಮನೇ ಎಲ್ಲವೂ" (ಗಲಾತ್ಯರಿಗೆ ೫:೨೨-೨೩). ನೀವು ಪಾಪದ ದಾಹದಲ್ಲಿ ಬಳಲುವಾಗ ಅಥವಾ ಪ್ರಚೋದನೆಗೆ ಒಳಗಾದಾಗ, ಮನೆಯಲ್ಲಿರುವ ಶಿಲುಬೆಯನ್ನು ನೋಡಿ ಹೀಗೆಂದು ಪ್ರಾರ್ಥಿಸಿರಿ, "ತಂದೆಯೇ ನಾನು ಪಾಪಿ, ನೀನು ಮನಸ್ಸು ಮಾಡಿದರೆ ನನ್ನ ಕೈಯಲ್ಲಿ ಕಿಂಚಿತ್ತಾದರೂ ಈ ಪಾಪದಿಂದ ಬಿಡುಗಡೆ ಹೊಂದಲು ಸಾಧ್ಯ, ಹೇಗಾದರೂ ನನಗೆ ಸಹಾಯ ಮಾಡು."
ದೇವರ ಪ್ರೀತಿ ಅಮೋಘವಾದದ್ದು, ಅವನ ಮಮತೆ ತಾಯಿಯ ವಾತ್ಸಲ್ಯವನ್ನು ಹೋಲುವಂತದ್ದು. ನಿಮ್ಮ ಒಂಟಿತನದಲ್ಲಿ ಆತನ ಕೂಗು ನಿಮ್ಮ ಹೃದಯ ಸ್ಪರ್ಶಿಸುವುದು, ಆಗ ಅವನ ಕೈ ಹಿಡಿದು ಅವನಲ್ಲಿ ಕೊಂಚಕಾಲವಾದರೂ ಒಂದಾಗಿರಿ, ಈ ಭಾವನೆಗಳು ನಿಮಗೆ ಪಾವಿತ್ರ್ಯಕ್ಕೆ ಎಡೆಮಾಡಿಕೊಡುವುವು. ಪೋಪ್ ಫ್ರಾನ್ಸಿಸ್ ನವರು ಇಬ್ಬರು ಮಹಿಳೆಯರ ಉದಾಹರಣೆ ನೀಡುತ್ತಾರೆ. ನೆರೆಯವರಾಗಿದ್ದಇಬ್ಬರು ಮಹಿಳೆಯರು ಶಾಪಿಂಗ್ ಮಾಲ್‌ನಲ್ಲಿ ಬೇಟಿಯಾಗುತ್ತಾರೆ, ಒಬ್ಬರಿಗೊಬ್ಬರು ನಗುವನ್ನು ಹಂಚುತ್ತಾ ಶಾಪಿಂಗ್ ಮಾಡಲು ಪ್ರಯತ್ನಿಸುತ್ತಾರೆ, ಹಾಗೆ ಸಾಗುತ್ತಾ ಇಬ್ಬರು ಬೇರೆಯವರ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಾರೆ. ಈ ಚರ್ಚೆ ಚುಚ್ಚು ಮಾತುಗಳಾಗಿ ಚಾಡಿಮಾತುಗಳಾಗಿ ಬದಲಾಗುತ್ತವೆ. ಇಂತಹದನ್ನು ಕೇಳಲಾರದೆ ಒಬ್ಬಾಕೆ ’ಇಲ್ಲ ನನಗೆ ಕೆಲಸವಿದೆ ಮತ್ತೆ ಸಿಗೋಣ’ ಎಂದು ಹೇಳಿ ಇನ್ನೊಬ್ಬರ ಬಗ್ಗೆ ಹೀನಾಯವಾಗಿ ಮಾತಾಡುವುದನ್ನು ತಪ್ಪಿಸುತ್ತಾಳೆ.
ಹೌದು ಈ ರೀತಿ ಪಾಪ ಮಾಡುವುದನ್ನು ಅರಿವಿಗೆ ತಂದುಕೊಂಡು ಅದನ್ನು ತಪ್ಪಿಸುವ ಪ್ರಯತ್ನವೇ ಪಾವಿತ್ರ್ಯದ ಗುಣಗಳು. ತದನಂತರ ಆ ಮಹಿಳೆ ತನ್ನ ಮನೆಗೆ ತೆರಳಿ ತನ್ನ ಮಗುವನ್ನು ಉಪಚರಿಸುತ್ತಾಳೆ, ಆ ಮಗು ತನ್ನ ಕನಸುಗಳನ್ನು ಆಸೆಗಳನ್ನು ಅಮ್ಮನ ಹತ್ತಿರ ತೋಡಿಕೊಳ್ಳಲು ಇಚ್ಛಿಸುತ್ತಿರುತ್ತದೆ. ಆಕೆ ಸಹನೆಯಿಂದ ಆ ಮಗುವಿನ ಮಾತುಗಳನ್ನು ಕೇಳುತ್ತಾಳೆ. ಇದಾದ ಬಳಿಕ ಮನೆಯಲ್ಲಿ ಒಬ್ಬಳೇ ಇರುವುದರಿಂದ ಮನಸಿಗೆ ಬೇಸರ ಉಂಟಾಗುತ್ತದೆ ಜಪಸರವಿಡಿದು ಪ್ರಾರ್ಥಿಸಲು ಮುಂದಾಗುತ್ತಾಳೆ. ಹಾಗೇ ರಸ್ತೆ ಸುತ್ತಾಡಲು ಹೋಗಿ ಅಲ್ಲಿ ಯಾರೋ ಬಿಕ್ಷುಕನನ್ನು ಕಂಡು ಮಾತನಾಡಿಸಿ ಆತನಿಗೆ ಸಹಾಯ ಮಾಡುತ್ತಾಳೆ. ಈ ರೀತಿ ಅನೇಕ ಸಕ್ರಿಯೆಗಳಲ್ಲಿ ಆ ಮಹಿಳೆ ದಿನವನ್ನು ಕಳೆಯುತ್ತಾಳೆ. ಇದೇ ಪಾವಿತ್ರ್ಯದ ಮೊದಲನೆಯ ಹೆಜ್ಜೆ. ಪಾವಿತ್ರ್ಯ ಹುಟ್ಟುವುದು ಇಡೀ ಬೈಬಲ್ ಓದುವುದರಿಂದಲ್ಲ, ಇಂತಹ ಸಣ್ಣಪುಟ್ಟ ಸದ್ಗುಣಗಳಿಂದ (೧ ಪೇತ್ರ ೪:೧೦). ನಮ್ಮ ಬಲಹೀನತೆಗಳಲ್ಲೂ ಕ್ರಿಸ್ತನನ್ನು ಪ್ರೀತಿಸುವುದು ಆಗಾಗ ಅವನನ್ನು ನೆನಪಿಗೆ ತಂದುಕೊಳ್ಳುವುದು ಬಹಳ ಒಳ್ಳೆಯದು.
ಪ್ರತೀ ಜೀವಿಯ ಬದುಕು ಮುಂದಿನ ಪೀಳಿಗೆಗೆ ಉದಾಹರಣೆಯ ಬದುಕು. ತಂದೆ ದೇವರು ಈ ಬದುಕನ್ನು ನವೀಕರಿಸಿ, ಪರಿಶುದ್ಧವಾಗಿ ನಿರೂಪಿಸಿ ಚರಿತ್ರೆಯಲ್ಲಿ ಒಂದಾಗಿಸುತ್ತಾರೆ (೧ ಥೆಸೆಲೋನಿಯರಿಗೆ ೪:೩). ನಮ್ಮ ನವೀಕೃತ ಜೀವನ ನಮ್ಮ ಗುರಿಯನ್ನು ಹೋಲುತ್ತದೆ. ನಾವು ಧರ್ಮಪ್ರಚಾರ ಮಾಡಬೇಕೆಂದು ಬೀದಿಯಲ್ಲಿ ಶುಭಸಂದೇಶ ಬೋಧಿಸುವುದರಿಂದ ಪ್ರಯೋಜನವಿಲ್ಲ, ನಮ್ಮ ಬದುಕು ಪಾವಿತ್ರ್ಯದಿಂದ ಸಫಲಗೊಳ್ಳಬೇಕು. ನಮ್ಮ ಪ್ರತೀ ಹೆಜ್ಜೆ ಪ್ರಭು ಕ್ರಿಸ್ತನನ್ನು ಸೂಚಿಸಬೇಕು, ಪ್ರೇಷಿತರನ್ನು ಜನರು ಯೇಸುಕ್ರಿಸ್ತನ ಶಿಷ್ಯರು ಎಂದು ಕಂಡುಹಿಡಿದಿದ್ದಾದರೂ ಹೇಗೆ? ಏಕೆಂದರೇ ಅವರೆಲ್ಲರ ಮಾತು ನಡೆ ನುಡಿ ವೇಷ ಉಡುಪು ಎಲ್ಲವೂ ಯೇಸುಕ್ರಿಸ್ತನನ್ನು ಪ್ರತಿಧ್ವನಿಸುತ್ತಿತ್ತು. ನೀವು ಯಾವುದಾದರೂ ಒಳ್ಳೆಯ ಕಾರ್ಯ ಕೈಗೊಂಡರೆ ಅದರಲ್ಲಿ ಪವಿತ್ರಾತ್ಮರ ಪ್ರೇರಣೆ ಇದೆ ಎಂಬ ವಿಶ್ವಾಸವಿಡಿ. ನಿಶಬ್ದತೆ ನಮಗೆ ಬೇಕು ಆದರೆ ಅದೇ ನಮ್ಮ ಜೀವನವಾಗಬಾರದು, ಪರರು ನಿಮ್ಮ ಸಾಂತ್ವನ, ನಿಮ್ಮ ಸಹಾಯ, ನಿಮ್ಮೊಡನೆ ಮಾತು ಬಯಸಿದಾಗ ನೀವು ನಿಮ್ಮನ್ನೇ ಪರರೊಂದಿಗೆ ಸಮೀಕರಿಸಿಕೊಳ್ಳದಿದ್ದಲ್ಲಿ ನಿಮ್ಮ ಕ್ರಿಸ್ತೀಯ ಜೀವನ ವ್ಯರ್ಥ. ಜೀವನಕ್ಕೆ ಒಂದು ಗುರಿಯಿಲ್ಲ ಬದಲಿಗೆ ಅದೇ ಗುರಿಯಾಗಿದೆ. ಈ ಗುರಿ ಪ್ರಭುಕ್ರಿಸ್ತನಾಗಬೇಕು, ದೇವರ ಪ್ರೀತಿಯನ್ನು ಸಂಪಾದಿಸುವುದಾಗಬೇಕು.
ಅಜ್ಞಾನದಿಂದ, ಆತಂಕದಿಂದ, ಅಹಂಕಾರದಿಂದ ಹಾಗೂ ಇನ್ನೊಬ್ಬರ ಮೆಚ್ಚುಗೆಗೆ ಪಾತ್ರವಾಗಲೆಂದು ಜೀವನ ನಡೆಸುವವರ ಹೃದಯ ಪರಿಶುದ್ದವಾಗಿರಲು ಸಾಧ್ಯವಿಲ್ಲ. ಈ ಲೌಕಿಕ ಬಾಧೆ ನಮಗೆ ಸವಾಲನ್ನು ಒಡ್ಡುತ್ತದೆ, ಅದನ್ನು ಎದುರಿಸುವುದೋ? ಅಥವಾ ಅದರಲ್ಲೇ ಮುಳುಗಿಹೋಗುವುದೊ? ಇದರ ಸರಿ ಉತ್ತರ ಕಂಡುಕೊಂಡಲ್ಲಿ ನಾವು ಪ್ರಭು ಕ್ರಿಸ್ತನನ್ನು ಕಂಡುಕೊಳುತ್ತೇವೆ. ಪೋಪ್ ಫ್ರಾನ್ಸಿಸ್ ನವರು ತಮ್ಮ ಪ್ರೇಷಿತ ಪತ್ರ "ಇವಾಂಜೆಲೀ ಗವುದಿಯುಮ್" (evangelii gaudium) ನಲ್ಲಿ ಧರ್ಮಪ್ರಚಾರದ ಅಧ್ಯಾತ್ಮದ ಬಗ್ಗೆ ಸಂದೇಶ ಸಾರಿದರು. ತಮ್ಮ ಎರಡನೆಯ ಪತ್ರ "ಲವುದಾತೋ ಸಿ" (laudato si) ಯಲ್ಲಿ ಪರಿಸರದ ಅಧ್ಯಾತ್ಮದ ಬಗ್ಗೆ ಮಾತನಾಡಿದರು. ತಮ್ಮ ಮೂರನೆಯ ಪತ್ರ "ಆಮೋರಿಸ್ ಲೆತಿತ್ಸಿಯೋ" ದಲ್ಲಿ ಕೌಟುಂಬಿಕ ಅಧ್ಯಾತ್ಮದ ಬಗ್ಗೆ ಸಂದೇಶ ಸಾರಿದರು.
ಈ ಬಾರಿಯ ಪತ್ರ ’ಗವುದೆತೆ ಎತ್ ಎಕ್ಸುಲ್ತಾತೆ’ (gaudete et exsultate) ಯಲ್ಲಿ ನಮ್ಮ ವೈಯಕ್ತಿಕ ಅಧ್ಯಾತ್ಮದ ಬಗ್ಗೆ ಗಮನ ಹರಿಸಿದ್ದಾರೆ. ಪರರಿಗಾಗಿ ಸ್ವ-ತ್ಯಾಗ, ಸ್ವ-ಅರ್ಪಣೆ ಮಾಡುವುದರಿಂದ ನಾವು ಮಾನವಧರ್ಮ ಕಟ್ಟಲು ಸಾಧ್ಯ, ಪ್ರಭುಕ್ರಿಸ್ತ ತನ್ನ ಜೀವನದ ಪರಿಯಂತರ ಸಾರಿದ್ದು ಮಾನವ ಧರ್ಮವನ್ನು, ಮನುಕುಲದ ಐಕ್ಯತೆಯನ್ನು. ಆತನಂತೆ ನಾವು ಸಹ ಸತ್ಯಕ್ಕೆ ಆದ್ಯತೆ ನೀಡೋಣ. ನಮ್ಮಲ್ಲಿ ಏಕಾಂತವಿದ್ದಾಗ, ಪರಸೇವೆಯಿದ್ದಾಗ, ವೈಯಕ್ತಿಕ ಜೀವನದಲ್ಲಿ ಆದ್ಯಾತ್ಮಿಕ ಗ್ರಹಿಕೆ ಇರುವಾಗ, ಮತಾಂತರ ಚಿಂತನೆ ಉದ್ಬವಿಸುವಾಗ ಪಾವಿತ್ರ್ಯದ ಸ್ಪೂರ್ತಿ ನವೀಕೃತಗೊಳ್ಳುತ್ತದೆ. ನಾವು ಮಾಡುವ ಸೇವೆ ಇನ್ನೊಬ್ಬರಿಗೆ ಸಾಂತ್ವನ ಮೂಡಿಸಬೇಕು ಅದನ್ನು ಲೋಕ ನೋಡಲಿ ಎಂಬ ಭಾವನೆ ಇಟ್ಟುಕೊಳ್ಳದೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ನಾವು ಎಷ್ಟು ಹೆಚ್ಚಾಗಿ ಬದುಕಲು ಇಚ್ಛಿಸುತ್ತೇವೋ ಅಷ್ಟೇ ಮನುಷ್ಯರಾಗಲು ಪ್ರಯತ್ನಿಸುತ್ತಿದ್ದೇವೆ. ಪಾವಿತ್ರ್ಯದ ಬಗ್ಗೆ ಕೇಳಿ ದಿಗಿಲು ಮೂಡಿಸಿಕೋಳ್ಳದಿರಿ, ಇದೇನೂ ಭಯ ಪಡುವಂತಹ ವಿಷಯವಲ್ಲ, ನಿಮ್ಮಿಂದ ಯಾವ ಶಕ್ತಿಯನ್ನು ಕುಂದಿಸುವುದಿಲ್ಲ, ನಿಮ್ಮಿಂದ ಯಾವ ಸಂತಸ ಆನಂದವನ್ನು ಕಡಿಮೆ ಮಾಡುವುದಿಲ್ಲ, ದೇವರು ನಿಮ್ಮನ್ನು ಸೃಷ್ಟಿ ಮಾಡಿದ ಕಾರಣ ನಿಮ್ಮನ್ನು ತೃಪ್ತಿಗೊಳಿಸುವನು. ದೇವರಿಗೆ ಅಭಿಮುಖರಾಗುವುದರಲ್ಲಿ ನಾವು ಎಲ್ಲಾ ರೀತಿಯ ದಾಸ್ಯದಿಂದ ಬಿಡುಗಡೆಹೊಂದುತ್ತೇವೆ. ಜೋಸೆಫ್ ಭಕಿತಾ ಎಂಬ ಆಫ್ರಿಕಾದ ಸಂತಳು ಏಳನೇ ವಯಸ್ಸಿನಲ್ಲಿ ತನ್ನ ಯಜಮಾನನ ಸೆರೆಯಲ್ಲಿ ಚಿತ್ರಹಿಂಸೆ ಅನುಭವಿಸಬೇಕಾಗಿತ್ತು. ಆದರೇ ಆ ಎಳೇ ವಯಸ್ಸಿನಲ್ಲೇ ಆಕೆ, "ನಮ್ಮ ಮೇಲೆ ಸರ್ವ ಅಧಿಕಾರವಿರುವುದು ದೇವರಾದ ಸವೇಶ್ವರನಿಗೆ ಮಾತ್ರ ಮಾನುಷ್ಯರಿಗಲ್ಲಾ" ಎಂದು ಅರಿತಳು. ಈಕೆ ಇಂದು ಆಫ್ರಿಕಾದ ಮಹಾ ಸಂತಳು. ಪ್ರತೀ ಕ್ರೈಸ್ತೇತರರು ತಮ್ಮ ಜೀವನದ ಒಂದು ಕಾಲಘಟ್ಟದವರೆಗೆ ಪಾವಿತ್ರ್ಯವನ್ನು ಅನುಸರಿಸುತ್ತಾರೆ, ತದನಂತರ ಅದನ್ನು ಪಾಲಿಸುವುದಿಲ್ಲ, ಅತಿಯಾದ ಪಾವಿತ್ರ್ಯವು ಸಹ ಅಪಾಯ. ತಮ್ಮನ್ನು ಮೂಢರನ್ನಾಗಿಸಿ ಬಿಡುತ್ತದೆ. ಇಂತಹುದರ ಕಡೆಗೆ ಗಮನ ಹರಿಸಿ ಜೀವನ ಸಮತೋಲನ ಕಂಡುಕೊಳ್ಳಬೇಕಾಗಿದೆ. ನಿಮ್ಮ ಜೀವನದ ದೃಷ್ಠಿಕೋನಗಳನ್ನು ಎತ್ತರದಲ್ಲಿ ಕಾಣಲು ಹೆದರದಿರಿ. ಈ ದೃಷ್ಟಿಕೋನಗಳು ನಿಮ್ಮನ್ನು ಪಾವಿತ್ರ್ಯಕ್ಕೆ ಕರೆದೊಯ್ಯುತ್ತವೆ. ಲಿಯೋನ್ ಬ್ಲಾಯ್‌ರವರು ಹೇಳಿದಹಾಗೆ, "ನಮ್ಮ ಜೀವನದಲ್ಲಿ ದೊಡ್ಡ ದುರಂತವೆಂದರೆ ನಾವು ಸಂತರಾಗಲು ಬಯಸದಿರುವುದು."
¨ ನವೀನ್ ಮಿತ್ರ, ಬೆಂಗಳೂರು
No comments:
Post a Comment