ಬರಿ ರೊಟ್ಟಿ ನಾನು
ಅವನ ಕೈಯೊಳಗೆ,
ಹುಳಿ ರಸವು ನಾನು
ಅವನ ತುಟಿಗಳಿಗೆ,
ಮಾಡಿಹನು ಎನ್ನ
ತನ್ನ ರಕ್ತ ದೇಹ.
ಸೃಷ್ಟಿಯೊಳು ಒಂದಾಗಿಸಿ
ಕರಗಳಲ್ಲಿ ಲೀನವಾಗಿಸಿ
ಜಗತ್ತಿಗೆ ನನ್ನ ತೋರಿಸಿ
ಕೂಗಿಹನು ಪ್ರಾಣ ಹರಸಿ
ಇದು ನನ್ನ ದೇಹ
ಇದು ನನ್ನ ರಕ್ತ. . .
ನನ್ನ ದೇಹವನ್ನು
ತನ್ನ ದೇಹವಾಗಿಸಿ,
ಇದನ್ನು ಭುಜಿಸಿರಿ ಎಂದು
ನೀಡಿಹನೆನ್ನ, ತಂದೆತಾಯಿಗೆ,
ಬಂಧುಬಳಗಕ್ಕೆ,
ಸ್ನೇಹಿತ, ಹಿತೈಷಿಗಳಿಗೆ
ನನ್ನ ರಕ್ತವನ್ನು
ತನ್ನ ರಕ್ತವಾಗಿಸಿ,
ಇದನ್ನು ಪಾನ ಮಾಡಿರಿ ಎಂದು
ನೀಡಿಹನೆನ್ನ, ಶತ್ರುಗಳಿಗೆ,
ಕ್ರೂರ ಸಮಾಜಕ್ಕೆ
ಮತಿಹೀನ ಪೀಳಿಗೆಗೆ.
ನಾನಾದೆನು ಅವನ ದೇಹ
ಅವನಾದನು ನನ್ನ ರಕ್ತ
ನಮ್ಮಿಬ್ಬರ ಉಸಿರು ಒಂದೇ
ಭಾವನೆಯೊಳು ಅಧ್ಯಾತ್ಮ ಪ್ರೇಮ
ಇದುವೇ ಸತ್ಯ ಸೃಷ್ಟಿ
ಇದುವೆ ನಂಬಿಕೆಯ ಮುಷ್ಟಿ
¨ ನವೀನ್ ಮಿತ್ರ, ಬೆಂಗಳೂರು
No comments:
Post a Comment