ತಸ್ಮೈ ಶ್ರೀ ಗುರುವೇ ನಮಃ
¨ ದೀಪ್ತಿ ಫ್ರಾನ್ಸಿಸ್ಕಾ
ಗುರುವನ್ನು ದೇವರಿಗೆ ಸಮಾನವಾಗಿ ನೋಡುತ್ತ ’ಗುರು ದೇವೋಭವ’ ಎನ್ನುವುದು ಭಾರತೀಯ ಸಂಪ್ರದಾಯ. ಶಿಕ್ಷಕರನ್ನು ಗೌರವಿಸುವುದಕ್ಕಾಗಿ ಪ್ರಪಂಚದ ಹಲವೆಡೆ ಪ್ರತ್ಯೇಕವಾದ ದಿನಗಳಲ್ಲಿ ಆಚರಣೆಗಳನ್ನು ಆಯೋಜಿಸುತ್ತಾರೆ. ಆ ದಿನದಂದು ಕೆಲವು ಕಡೆಗಳಲ್ಲಿ ರಜೆಗಳನ್ನು ಸಹ ಘೋಷಿಸುತ್ತಾರೆ. ಅಂತೆಯೇ ನಮ್ಮ ದೇಶವಾದ ಭಾರತದಲ್ಲಿ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆಯನ್ನು ಉತ್ಸುಕತೆಯಿಂದ ಆಚರಿಸುತ್ತೇವೆ. ಶಿಕ್ಷಕರನ್ನು ಮನಪೂರ್ವಕವಾಗಿ ಗೌರವಿಸಿ ಅವರ ಶ್ರಮಗಳನ್ನು ಶ್ಲಾಘಿಸುವ ದಿನವಿದು.
ಈ ದಿನ ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ನವರ ಬಳಿಗೆ ಒಮ್ಮೆ ಮಕ್ಕಳು, ವಿದ್ಯಾರ್ಥಿಗಳು, ಸ್ನೇಹಿತರು ಹೋಗಿ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಸಂಘಟಿಸಲು ಅನುಮತಿ ನೀಡಬೇಕೆಂದು ಕೋರಿಕೊಂಡರು. ಅದಕ್ಕೆ ಪ್ರತ್ಯುತ್ತರವಾಗಿ ಅವರು ಸೆಪ್ಟೆಂಬರ್ ೫ ರಂದು ತಮ್ಮ ಹುಟ್ಟುಹಬ್ಬದ ಆಚರಣೆಗೆ ಬದಲು ಆ ದಿನವನ್ನು ಶಿಕ್ಷಕರ ದಿವನ್ನಾಗಿ ಆಚರಿಸಿದರೆ ಒಳಿತೆಂದು ಸಲಹೆ ನೀಡಿದರು.
ಹೀಗೆ ಸೆಪ್ಟೆಂಬರ್ ೫, ಸಂಭ್ರಮ ತುಂಬಿದ ಶಿಕ್ಷಕರ ದಿನವೆಂದು ಮೆರಗು ಪಡೆದಿದೆ. ಆ ದಿನದಂದು ಮಕ್ಕಳು, ಶಿಕ್ಷಕರು ಉತ್ಸಾಹ ವಿಸ್ಮಯಗಳೊಂದಿಗೆ ಶಾಲೆಗೆ ಹೋಗಿ, ಎಂದಿನಂತೆ ಕಲಿಕೆ ಬೋಧನೆಗಳಲ್ಲದೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ವಿಧ ವಿಧವಾದ ವಿಸ್ಮಯಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸಿ ಅವರನ್ನು ಖುಷಿಪಡಿಸುತ್ತಾರೆ. ಹೆಮ್ಮೆ ಪಡುವಂತೆ ಮಾಡುತ್ತಾರೆ. ಬಹುತೇಕ ಹೆಚ್ಚು ಶಾಲೆಗಳಲ್ಲಿ ಮಕ್ಕಳು ಖುಷಿಗಾಗಿ ಶಿಕ್ಷಕರ ವೇಷ ಧರಿಸಿ ನಟಿಸುತ್ತಾರೆ. ತಮಾಷೆಗಾಗಿ ಮಾಡಿದ ವೇಷಧಾರಿಯ ನಟನೆ ಉಪಾಧ್ಯಾಯರನ್ನು ಖುಷಿಪಡಿಸುತ್ತದೆ ಅಷ್ಟೇ ಅಲ್ಲದೆ ಅವರ ಶಕ್ತಿ ಸಾಮರ್ಥ್ಯ ಬಲಹೀನತೆಗಳನ್ನು ಅರಿಯಲು ನೆರವಾಗುತ್ತದೆ. ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಮಕ್ಕಳು ಪ್ರಶಂಸೆಗಳಿಗೆ ಭಾಜನರಾಗುತ್ತಾರೆ.
ವಾಸ್ತವದಲ್ಲಿ ಆಧ್ಯಾತ್ಮಿಕ ಬೋಧಕನಿಗೂ, ಬೌತಿಕ ವಿಷಯಗಳನ್ನು ಬೋಧಿಸುವವನಿಗೂ ಬಹಳಷ್ಟು ವ್ಯತ್ಯಾಸವಿದೆ. ಆಧ್ಯಾತ್ಮಿಕ ಗುರುವು ತನ್ನ ಶಿಷ್ಯನಿಗೆ ಆಲೋಚನೆಯ ಭ್ರಮೆಗಳನ್ನು ತೆಗೆದುಹಾಕಿ ಅವುಗಳನ್ನು ಆಧ್ಯಾತ್ಮಿಕವಾಗಿ ನಿರ್ದೇಶಿಸುತ್ತಾನೆ. ಕಣ್ಣಿಗೆ ಕಾಣದ ದೇವರು ಹಲವು ಬಾರಿ ಶಿಕ್ಷಕರಲ್ಲಿ ಕಾಣುತ್ತಾನೆ. ಇದು ಜನಮನದಲ್ಲಿನ ಸಮಾನ ಭಾವನೆ. ಶಿಕ್ಷಕರನ್ನು ಸರ್ವರೂ ಗೌರವಿಸುತ್ತಾರೆ. ಶಿಕ್ಷಕರಲ್ಲಿ ಪ್ರಪಂಚಜ್ಞಾನ ಅಧಿಕವಾಗಿರುತ್ತದೆ ಎಂಬುದು ಸರ್ವರ ಭಾವನೆ. ಪೋಷಕರು ಅವರ ಮೇಲೆ ಅತಿಯಾದ ನಂಬಿಕೆಯಿಟ್ಟು ತಮ್ಮ ಮಕ್ಕಳನ್ನು ಉತ್ತಮ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾರೆ. ಇವೆಲ್ಲವನ್ನು ಶಿಕ್ಷಕರು ಸಹ ಗಮನದಲ್ಲಿಟ್ಟು ಮಕ್ಕಳಿಗೆ ಉತ್ತಮ ಮಾರ್ಗದರ್ಶಕರಾಗಿ ಇರುವುದು ಒಳಿತು. ಇದರಿಂದಾಗಿಯೇ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ಎಂದಿದ್ದಾರೆ.
ಗುರುವನ್ನು ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುವ ಪ್ರತಿಯೊಬ್ಬ ನಾಗರೀಕನು ಇವರು ಪರಬ್ರಹ್ಮನ ಸ್ವರೂಪವೆನ್ನುತ್ತಾರೆ. ತಂದೆ ತಾಯಿ ಮಗುವಿಗೆ ಜನ್ಮ ನೀಡಿದರೆ, ಶಿಕ್ಷಕರು ಆ ಮಗುವಿನ ಭವಿಷ್ಯವನ್ನು ತಿದ್ದಿ ರೂಪಿಸಲು ವಿಶೇಷವಾಗಿ ನೆರವಾಗುತ್ತಾರೆ. ಮಕ್ಕಳಲ್ಲಿ ಗುರಿಗಳನ್ನು ಹುಟ್ಟು ಹಾಕಿ ಅವುಗಳಿಗೆ ಸೂಕ್ತ ಲಾಲನೆ ಪಾಲನೆ, ಸಲಹೆಗಳನ್ನು ಸಹ ನೀಡುತ್ತಾರೆ. ಜೀವನದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬನ ಹಿಂದೆ ಒಬ್ಬ ಶಿಕ್ಷಕನಿರುತ್ತಾನೆ. ಆದ್ದರಿಂದಲೇ ಶಿಕ್ಷಕರನ್ನು ಗೌರವಿಸಿ ಸತ್ಕರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಶಿಕ್ಷಕರೆಲ್ಲರನ್ನು ಅಭಿನಂದಿಸಿ ಶುಭ ಕೋರೋಣ.
No comments:
Post a Comment