Sunday, 9 September 2018

ಪ್ರಭುವಿನ ಪ್ರೇಷಿತ ಸಂತ ಮತ್ತಾಯ

ಪ್ರಭು ಯೇಸುವಿನ ಹನ್ನೆರಡು ಮಂದಿ ಪ್ರೇಷಿತರಲ್ಲಿ ಸಂತ ಮತ್ತಾಯನೂ ಒಬ್ಬ (ಮತ್ತಾಯ೧೦:-; ಮಾರ್ಕ೩:೧೩-೧೯; ಲೂಕ೬:೧೨-೧೬). ಈತ ೧ನೇ ಶತಮಾನದಲ್ಲಿ ಗಲಿಲೇಯದ ಕಫೆರ್ನವುಮಿನ ಅಲ್ಫಾಯನ ಮಗನಾಗಿ ಜನಿಸಿದನು (ಮಾರ್ಕ೨:೧೪). ಈತನನ್ನು ಲೇವಿಯೆಂತಲೂ (ಮಾರ್ಕ೨:೧೪) ಕರೆಯುತ್ತಿದ್ದರು. ಮತ್ತಾಯ ಎಂದರೆ ’ಯಹೋವ ದೇವರ ಉಡುಗೊರೆ’ (ಗಿಪ್ಟ್ ಆಫ್ ಯಾವೆ) ಎಂದು ಅರ್ಥ. ಇವನನ್ನು ಕೈಸ್ತ ಧರ್ಮಪ್ರಚಾರಕ ಹಾಗೂ ಸುವಾರ್ತಾ ಬೋಧಕ ಎಂದು ಸಹ ಕರೆಯುತ್ತಾರೆ. ಆಗಿನ ಜುದೇಯದ ಗಲಿಲೇಯ ಪ್ರಾಂತ್ಯ ರೋಮನರ ಆಳ್ವಿಕೆಗೆ ಒಳಪಟ್ಟಿತ್ತು. ಅವರು ಎಲ್ಲರಿಂದಲೂ ಕಡ್ಡಾಯವಾಗಿ ಸುಂಕವಸೂಲಿ (ತೆರಿಗೆ) ಮಾಡುತ್ತಿದ್ದರು. ಯೆಹೂದ್ಯರು ಸುಂಕವಸೂಲಿ ಮಾಡುವವರನ್ನು ದ್ವೇಷಿಸುತ್ತಿದ್ದರು.
ಸುಂಕವಸೂಲಿ ಅತಿ ಲಾಭದಾಯಕ ವೃತ್ತಿಯಾಗಿತ್ತು. ರೋಮನರು ಪ್ರತಿ ವರ್ಷ ಸುಂಕವಸೂಲಿ ಮಾಡಲು ಮುಕ್ತವಾಗಿ ಹರಾಜು ಹಾಕುತ್ತಿದ್ದರು. ಹರಾಜಿನಲ್ಲಿ ಅಧಿಕಮೊತ್ತವನ್ನು ಕೊಡುವವರಿಗೆ ಸುಂಕವಸೂಲಿ ಮಾಡುವ ಕೆಲಸವನ್ನು ವಹಿಸಲಾಗುತ್ತಿತ್ತು. ಅಂಥವರು ತೆರಿಗೆ ವರ್ಷದ ಪ್ರಾರಂಭದಲ್ಲಿಯೇ ಪೂರ್ಣಮೊತ್ತವನ್ನು ರೋಮನರಿಗೆ ನೀಡಿ ನಂತರ ಜನರಿಂದ ಅಧಿಕವಾಗಿ ಸುಂಕವಸೂಲಿ ಮಾಡಬಹುದಿತ್ತು. ಇದು ಯೆಹೂದ್ಯರಿಗೆ ಕಡು ಕೋಪವನ್ನುಂಟು ಮಾಡುತ್ತಿತ್ತು ಏಕೆಂದರೆ ಸುಂಕದ ಭಾರ ಅಧಿಕವಾಗಿತ್ತು. ಇದು ಅವರಿಗೆ ನುಂಗಲಾರದ ತುತ್ತಾಗಿತ್ತು. ಆ ಕಾರಣ ಸುಂಕವಸೂಲಿ ಮಾಡುವವರನ್ನು ಅವರು "ಧರ್ಮಭ್ರಷ್ಟ" ಹಾಗೂ "ಪಾಪಿ" ಎಂದು ಅವರೊಡನೆ ವ್ಯವಹರಿಸುತ್ತಿರಲಿಲ್ಲ. ಅಂಥವರನ್ನು ಬಹಿಷ್ಕೃತರೆಂದು ಪರಿಗಣಿಸಲಾಗಿತ್ತು.
ಮತ್ತಾಯ ಹಿಬ್ರೂ, ಅರಮಾಯಿಕ್ ಮತ್ತು ಗ್ರೀಕ್ ಭಾಷೆಗಳನ್ನು ಬಲ್ಲವನಾಗಿದ್ದ. ಚತುರನಾಗಿದ್ದ. ಸುಂಕ ವಸೂಲಿ ಮಾಡುವ ಕೆಲಸದಲ್ಲಿ ನಿಪುಣನಾಗಿದ್ದ. ಇವನು ಹರಾಜಿನಲ್ಲಿ ರೋಮನರಿಗೆ ಹೆಚ್ಚು ಹಣ ನೀಡಿ ವಾರ್ಷಿಕ ಸುಂಕ ವಸೂಲಿಯನ್ನು ತನ್ನದಾಗಿಸಿಕೊಂಡು ಕಪರ್ನಾವುಮಿನಲ್ಲಿ ಹೆರೋದ ಆಂಟಿಪಸ್ ಪ್ರದೇಶವನ್ನು ಪ್ರವೇಶಿಸುವ ರೈತರಿಂದಲೂ, ಸರಕು ಸಾಮಗ್ರಿಗಳನ್ನು ಮಾರುತ್ತಿದ್ದ ಹಾಗೂ ಕೊಳ್ಳುತ್ತಿದ್ದ ಎಲ್ಲಾ ವ್ಯಾಪಾರಿಗಳಿಂದಲೂ, ಸಾಮಾನ್ಯ ಜನರಿಂದಲೂ, ಮಾತ್ರವಲ್ಲ ಈಜಿಪ್ಟ್ ಮತ್ತು ಡಮಾಸ್ಕಸ್ಸಿಗೆ ಸರಕುಗಳನ್ನು ಸಾಗಿಸುವವರಿಂದಲೂ ವಿವಿಧ ರೀತಿಯ ಸುಂಕವನ್ನು ನಿಗದಿಗಿಂತಲೂ ಅಧಿಕವಾಗಿ ವಸೂಲಿ ಮಾಡಿ ಶ್ರೀಮಂತನಾಗಿದ್ದ.
ಇಂತಹ ಹೀನ ಕೃತ್ಯದಲ್ಲಿ ತೊಡಗಿದ್ದ ಕಾರಣ ಯೆಹೂದ್ಯರ ಕೆಂಗಣ್ಣಿಗೆ ಗುರಿಯಾಗಿದ್ದ. ಅವನು ಕಫೆರ್ನಾವುಮಿನ ಉಕ್ಕಡದಲ್ಲಿ ಕುಳಿತು ಸುಂಕ ವಸೂಲಿ ಮಾಡುತ್ತಿರುವಾಗ ಒಂದು ಘಟನೆ ನಡೆಯಿತು. "ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. ’ನನ್ನನ್ನು ಹಿಂಬಾಲಿಸು ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು" (ಮತ್ತಾಯ೯:-೧೩; ಮಾರ್ಕ ೨:೧೩-೧೭; ಲೂಕ ೫:೨೭-೨೮).
ಕ್ರಿಸ್ತನು ಮತ್ತಾಯನನ್ನು ಕರೆದ ಆ ಕ್ಷಣ ಅವನ ಜೀವನದ ಆದ್ಯತೆಯನ್ನು ಬದಲಾಯಿಸಿತು. ಆತ ಸುಂಕ ವಸೂಲಿ ಮಾಡುವುದರಲ್ಲಿ ಪರಿಣತನಾಗಿದ್ದ. ಶ್ರೀಮಂತನೂ ಆಗಿದ್ದ. ಆದರೆ ಆ ಕ್ಷಣದಿಂದ ಅವನು ಸುಂಕ ವಸೂಲಿ ಮಾಡುತ್ತಿದ್ದ ಮೇಜನ್ನು ಬಿಟ್ಟು ಪ್ರಭುವಿನ ಪ್ರೇಷಿತರಲ್ಲಿ ಒಬ್ಬನಾಗಿ ರಕ್ಷಣೆಯ ಸಂದೇಶ ಸಾರಲು ಟೊಂಕ ಕಟ್ಟಿ ನಿಂತ. ಅದರಿಂದ ಅವನೆಂದೂ ಹಿಂದಿರುಗಿ ನೋಡಲೇ ಇಲ್ಲ. ಪ್ರಭುವಿನ ದೃಷ್ಟಿ ಅವನ ಅಂತರಂಗವನ್ನು ಹೊಕ್ಕು ಬದಲಾವಣೆಯ ನವ ತರಂಗಗಳನ್ನು ಉಂಟುಮಾಡಿತ್ತು. ಪ್ರಭುವಿನ ದಿವ್ಯ ಶಕ್ತಿ ಅವನನ್ನು ಆವರಿಸಿತ್ತು.
ಮತ್ತಾಯ ಪ್ರಭುವಿನ ಕರೆಯ ನಂತರ ಪ್ರಪ್ರಥಮವಾಗಿ ತನ್ನನ್ನು ಶುದ್ದೀಕರಿಸಿಕೊಳ್ಳಲು ಹಾಗೂ ತನ್ನ ಇತರ ಸಹಪಾಠಿಗಳಿಗೆ ಸಹಾನುಭೂತಿಯ ಕ್ರಿಸ್ತನನ್ನು ಪರಿಚಯಿಸಲು ತನ್ನ ಮನೆಯಲ್ಲಿ ಒಂದು ಔತಣಕೂಟವನ್ನು ಏರ್ಪಡಿಸಿ ಅಂದಿನ ಸಮಾಜದಲ್ಲಿ ಬಹಿಷ್ಕೃತರೆಂದು ಪರಗಣಿತರಾದವರನ್ನು ಅಂದರೆ ಸುಂಕದವರು ಮತ್ತು ಪಾಪಿಷ್ಟರನ್ನು ಆಹ್ವಾನಿಸಿದ. ಅಲ್ಲಿ ಪ್ರಭು ಯೇಸು ಹಾಗೂ ಅವರ ಶಿಷ್ಯರು ಪಾಪಿಷ್ಟರ ಜೊತೆಯಲ್ಲೇ, ಒಂದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದರು ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು (ಲೂಕ೫:೨೯). ಇದು ಯೆಹೂದ್ಯರ ಆಚಾರ ವಿಚಾರಗಳಿಗೆ ತದ್ವಿರುದ್ದವಾಗಿತ್ತು. ಆ ಕಾರಣ ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, ’ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟ ಮಾಡುವುದೇ ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ, ನೀವು ಹೋಗಿ, ’ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಟರನ್ನಲ್ಲ, ಪಾಪಿಷ್ಟರನ್ನು," ಎಂದರು (ಮತ್ತಾಯ ೯:-೧೩).
ಹೀಗೆ ಹೇಳುವ ಮೂಲಕ ಪ್ರಭು ಯೇಸು ತಮ್ಮ ಸುವಾರ್ತಾಸೇವೆಯ ಸ್ಪಷ್ಟ ಸಂದೇಶವನ್ನು ನೀಡಿದರು. ಇದು ಮತ್ತಾಯ ಮತ್ತು ಅವನ ಸಹಪಾಠಿಗಳಿಗೆ ಹೊಸ ಬೆಳಕನ್ನು ಚೆಲ್ಲಿತು. ಮತ್ತಾಯನ ವಿಶ್ವಾಸ ಸದೃಢವಾಯಿತು ಹಾಗೂ ಈ ಘಟನೆ ಅವನ ಜೀವನದ ಮುಂದಿನ ಸ್ಪಷ್ಟ ದಾರಿಯನ್ನು ತೆರೆದಿಟ್ಟಿತು. ಮತ್ತಾಯ ಬಾಹ್ಯವಾಗಿ ಮಾತ್ರವಲ್ಲ ಆಂತರಿಕವಾಗಿಯೂ ಬದಲಾವಣೆಯತ್ತ ಸ್ಥಿರವಾಗಿ ಸಾಗತೊಡಗಿದ. ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ ಎನ್ನುತ್ತಾನೆ ಸಂತ ಪೌಲ (೨ನೇ ಕೊರಿಂಥಿ ೫:೧೭).
ಮತ್ತಾಯ ಯೇಸುವಿನ ಶಿಷ್ಯನಾಗಿ ಪುನರುತ್ಥಾನ ಹಾಗೂ ಸ್ವರ್ಗಾರೋಹಣಕ್ಕೆ ಜೆರುಸಲೇಮಿನಲ್ಲಿ ಸಾಕ್ಷಿಯಾಗಿದ್ದನು. ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತಿರಕ್ಕೆ ಬಂದು ಮಾತನಾಡಿದರು: ಭುವಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಹೋಗಿ ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮರ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ ಎಂದರು (ಮತ್ತಾಯ ೨೮:೧೬-೨೦; ಮಾರ್ಕ ೧೬:೧೪-೧೮; ಲೂಕ೨೪:೩೬-೪೯; ಯೊವಾನ್ನ ೨೦:೧೯-೨೩; ಪ್ರೇ. ಕಾ. :೧೦-೧೪). ಆ ಕ್ಷಣದಿಂದ ಪ್ರೇಷಿತರು ಸುವಾರ್ತೆ ಸಾರಲು ಸನ್ನದ್ದರಾದರು.
ಧರ್ಮಸಭೆಯ ಪಿತಾಮಹರಾದ ಈರೇನಿಯುಸ್ ಹಾಗೂ ಅಲೆಗ್ಸಾಂಡ್ರಿಯಾದ ಕ್ಲೆಮೆಂಟ್ ನವರು, ಪ್ರಭುವಿನ ಪ್ರೇಷಿತ ಮತ್ತಾಯ ಪ್ರಥಮವಾಗಿ ಜುದೇಯದಲ್ಲಿ ಶುಭಸಂದೇಶವನ್ನು ಸಾರಿದರು. ನಂತರ ಪಾರ್ಥಿಯ, ಪರ್ಷಿಯ, ಇಥಿಯೋಪಿಯಾ, ಸಿರಿಯ ಮತ್ತು ಗ್ರೀಸ್ ಪ್ರದೇಶಗಳಲ್ಲಿಯೂ ಇವರು ಸುವಾರ್ತೆಯನ್ನು ಸಾರಿದರೆಂದು ಪರಂಪರಾಗತವಾಗಿ ನಂಬಲಾಗಿದೆ. ಈತನು ಪ್ರಭವಿನ ಶುಭಸಂದೇಶವನ್ನು ಬಹಳ ಸ್ವಾರಸ್ಯಕರವಾಗಿ ಅರಮಾಯಿಕ್ ಬಾಷೆಯಲ್ಲಿ ಬರೆದಿದ್ದಾನೆ. ಇದು ಪ್ರಮುಖವಾಗಿ ಯೆಹೂದ್ಯ ಓದುಗರನ್ನು ಮುಂದಿಟ್ಟಕೊಂಡು ಬರೆದಂತಿದೆ.
ದೇವರು ಆದಿಯಲ್ಲಿ ಲೋಕೋದ್ಧಾರಕನನ್ನು ಕಳುಹಿಸುವುದಾಗಿ ವಾಗ್ದಾನ ಮಾಡಿದ್ದರು. ಪ್ರಭು ಯೇಸುವೇ ಆ ಉದ್ದಾರಕ ಎಂದು ತನ್ನ ಬರವಣಿಗೆಯ ಉದ್ದಕ್ಕೂ ಮತ್ತಾಯ ಪ್ರತಿಪಾದಿಸುತ್ತಾನೆ. ಹಾಗೆಯೇ ಹಳೆಯ ಒಡಂಬಡಿಕೆಯ ಎಲ್ಲಾ ವಾಗ್ದಾನಗಳು ಪ್ರಭುವಿನಲ್ಲಿ ನೆರವೇರಿವೆ ಎಂದೂ ಸ್ಪಷ್ಟಪಡಿಸುತ್ತಾನೆ. ಈತನು ದೇವದೂತನನ್ನು ತನ್ನ ಬರವಣಿಗೆಯ ಸ್ಫೂರ್ತಿಯ ಚಿಹ್ನೆಯಾಗಿಟ್ಟುಕೊಂಡಿದ್ದನು.
ಕಿ. ಶ ೭೪ರಲ್ಲಿ ಹಿರಾಪೋಲಿಶ್ ಅಥವಾ ಇತಿಯೋಪಿದಲ್ಲಿ ಈತನು ರಕ್ತಸಾಕ್ಷಿಯಾದನೆಂದು ಪರಂಪರೆಯಾಗಿ ನಂಬಲಾಗುತ್ತಿದೆ. ಈತನ ಪಳೆಯುಳಿಕೆಯನ್ನು (ರಿಲಿಕ್ಸ್) ಇಟಲಿಯ ಸಲೆರ್ನೋದಲ್ಲಿ ನೋಡಬಹುದು. ಪ್ರಭುವಿನ ಸುವಾರ್ತೆಯನ್ನು ಬೋಧಿಸಿ ಪುನೀತರಾದ ಇವರ ಹಬ್ಬವನ್ನು ಸೆಪ್ಟೆಂಬರ್ ೨೧ರಂದು ಸಾರ್ವತ್ರಿಕ ಧರ್ಮಸಭೆಯು ಆಚರಿಸುತ್ತದೆ.
¨ ಫಾದರ್ ವಿಜಯ್ ಕುಮಾರ್, ಬಳ್ಳಾರಿ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...