¨ ಲ್ಯಾನ್ಸಿ ಫೆರ್ನಾಂಡಿಸ್ ಯೇ. ಸ.
ನಾವೆಲ್ಲರೂ ಬೇರೆ ಬೇರೆ ಜೀವನ ಶೈಲಿಯನ್ನು ಆರಿಸಿ ಯೇಸುವನ್ನು ಹಿಂಬಾಲಿಸಲು ಹಾತೊರೆಯುತ್ತೇವೆ. ಕೆಲವರು ಸನ್ಯಾಸಿ ಜೀವನವನ್ನು ಅಪ್ಪಿಕೊಂಡರೆ, ಇನ್ನು ಕೆಲವರು ಕೌಟುಂಬಿಕ ಜೀವನವನ್ನು ಆರಿಸುತ್ತಾರೆ. ಇನ್ನು ಕೆಲವರು ಅವಿವಾಹಿತರಾಗಿ ಸೇವೆ ಮಾಡಲು ಇಚ್ಛಿಸುತ್ತಾರೆ. ಯಾವ ಹಾದಿಯೂ ಸುಲಭವಲ್ಲ. ಪ್ರತಿಯೊಂದರಲ್ಲೂ ಅದರದೇ ಆದ ಸುಖ ದುಃಖ ಕಷ್ಟ-ನೋವುಗಳಿವೆ. ಆದರೆ ನಾವು ಪ್ರತಿಯೊಬ್ಬರೂ ಒಂದು ಕುಟುಂಬದ ಸದಸ್ಯರಾಗಿ ಈ ಭೂಲೋಕದಲ್ಲಿ ಜನಿಸುತ್ತೇವೆ.
ಆದಿಕಾಂಡ (೨:೨೪) ಹೇಳುವ ಪ್ರಕಾರ ದೇವರು ಈ ಭೂಲೋಕವನ್ನು ಸೃಷ್ಟಿಸಿದ ಮೇಲೆ ಕೊನೆಗೆ ತನ್ನದೇ ಸ್ವರೂಪದಲ್ಲಿ ಮಾನವನನ್ನು ಆದಾಮ ಮತ್ತು ಏವಳಾಗಿ ಈ ಭೂಲೋಕದಲ್ಲಿ ಇರಿಸಿದರು. ಇಲ್ಲಿ ವರ್ಣಿಸಲಾಗಿರುವ ಸೃಷ್ಟಿಕಾರ್ಯವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ಏವಳನ್ನು ಸೃಷ್ಟಿಸುವುದರ ಮೂಲಕ ದೇವರು ಅಂದು ಒಂದು ಕುಟುಂಬವನ್ನು ವಿಶೇಷ ವರವಾಗಿ ಸೃಷ್ಟಿಸಿದರು. ಈ ವರದ ಮೂಲಕ ಇವತ್ತಿಗೂ ನಾವು ಒಂದು ಕುಟುಂಬದಲ್ಲಿ ಜನಿಸಿ ದೇವರನ್ನು ಅರಿಯಲು ಸಾಧ್ಯವಾಗುತ್ತದೆ.
ಕುಟುಂಬವು ಒಂದು ಕಿರು ಧರ್ಮಸಭೆ ಹೇಗೆ?
ಫೋಪ್ ಫ್ರಾನ್ಸಿಸ್ ನವರು ಈ ವರ್ಷ ಕುಟುಂಬದ ಬಗ್ಗೆ ಚರ್ಚಿಸಲು ಒಂದು ಸಭೆಯನ್ನು ಕರೆದಿದ್ದಾರೆ. ಧರ್ಮಸಭೆಯಲ್ಲಿ ಕುಟುಂಬದ ಬಗ್ಗೆ ಬೋಧನೆ ನೀಡುವ ಪರಿಪತ್ರಗಳೆಂದರೆ (Familiaris Consortio - ಕುಟುಂಬವು ಒಂದು ಸಮುದಾಯ) ಹಾಗೂ ವ್ಯಾಟಿಕನ್ ಮಹಾಸಭೆಯು Gaudium et Spes ನಲ್ಲಿ ಮೊತ್ತ ಮೊದಲನೆಯ ಬಾರಿ ಕುಟುಂಬವು ಒಂದು ಕಿರು ಧರ್ಮಸಭೆ ಎಂದು ಬಣ್ಣಿಸಿದೆ.
ನಾವು ಕ್ರೈಸ್ತ ಕುಟುಂಬದಲ್ಲಿ ಜನಿಸಿದರೆ ಮಾತ್ರ ಕ್ರೈಸ್ತರಾಗುವುದಿಲ್ಲ. ನಾವು ಜ್ಞಾನಸ್ನಾನ ಪಡೆದು ಧರ್ಮಸಭೆಯ ಸದಸ್ಯರಾಗುತ್ತೇವೆ ಅಷ್ಟೇ. ನಿಜವಾದ ಕ್ರೈಸ್ತನು ದೃಢೀಕರಣ ಸಂಸ್ಕಾರದ ಪ್ರಭಾವದಿಂದ ಯೇಸುವಿನ ಬೋಧನೆಯಂತೆ ಜೀವಿಸಲು ಪ್ರಯತ್ನಿಸಿ ಈ ಲೋಕದಲ್ಲಿ ಇನ್ನೊಬ್ಬ ಕ್ರಿಸ್ತನಾಗುವುದರಲ್ಲಿ ಕ್ರೈಸ್ತತ್ವ ಇದೆ.
ಕ್ರೈಸ್ತ ಧರ್ಮದ ಪರಿಪಾಲನೆಯನ್ನು ತಾಯಿಯ ಮುಖಾಂತರ ನಾವು ಕಲಿತುಕೊಳ್ಳುತ್ತೇವೆ. ಮನೆಯಲ್ಲಿ ಪ್ರಾರ್ಥನೆ, ಧಾರ್ಮಿಕತೆ ಇಲ್ಲದಲ್ಲಿ ನಾವು ಕ್ರೈಸ್ತ ವಿಶ್ವಾಸದಲ್ಲಿ ಬೆಳೆದು ಬರಲು ಸಾಧ್ಯವಿಲ್ಲ. ತಂದೆ ತಾಯಂದಿರು ಭಕ್ತಿ ಪ್ರಾರ್ಥನೆಗೆ ಮಹತ್ವ ಕೊಟ್ಟರೆ ಮಾತ್ರ ಮಕ್ಕಳು ಧಾರ್ಮಿಕತೆಯಲ್ಲಿ ಬೇರೂರುತ್ತಾರೆ. ಆದ್ದರಿಂದ ಕುಟುಂಬವು ಒಂದು ಕಿರು ಧರ್ಮಸಭೆಯಾಗಿದೆ. ಪೋಪ್ ಹನ್ನೆರಡನೆಯ ಪಿಯುಸ್ ನವರು - ಕುಟುಂಬದಲ್ಲಿ ತಾಯಿಯು ಹೃದಯ ಇದ್ದಂತೆ, ಆದರೆ ತಂದೆ ಶಿರವಿದ್ದಂತೆ ಎನ್ನುತ್ತಾರೆ.
ಎಷ್ಟು ಸಲ ದೇವಾಲಯಕ್ಕೆ ಬಂದರೂ ಮನೆಯಲ್ಲಿ ಪ್ರಾರ್ಥನೆಯ ರುಚಿ, ದೈವಭಕ್ತಿ ಇಲ್ಲದಿದ್ದರೆ, ಮಕ್ಕಳು ಕೂಡ ಅದೇ ಮಾರ್ಗವನ್ನು ಪಾಲಿಸುತ್ತಾರೆ. ಯಾವ ಕುಟುಂಬದಲ್ಲಿ ಪ್ರಾರ್ಥನೆ ಇಲ್ಲವೋ ಆ ಕುಟುಂಬದಲ್ಲಿ ದಂಪತಿ ಮಕ್ಕಳಲ್ಲಿ ಐಕ್ಯತೆ ಇರುವುದಿಲ್ಲ. ತಂದೆ ತಾಯಿಯು, ಮಕ್ಕಳಿಗೆ ದೇವರ ಸ್ವರೂಪವಾಗಿರುತ್ತಾರೆ. ತಂದೆ ತಾಯಿಯ ನಡವಳಿಕೆ ಮಗುವಿನಲ್ಲಿ ದೇವರ ಬಗೆಗಿನ ಕಲ್ಪನೆಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ (ದೈಹಿಕ, ಮಾನಸಿಕ, ಸಾಮಾಜಿಕ ಇತ್ಯಾದಿ) ಅಭಿವೃದ್ಧಿ ಆಗುವುದು ಕುಟುಂಬದಲ್ಲಿ. ಆ ಮೊದಲ ಹತ್ತು ವರ್ಷಗಳು ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹಾಗಾಗಿ ಕುಟುಂಬ ನಮಗೆಲ್ಲರಿಗೆ ಭರವಸೆ ಹಾಗೂ ಜವಾಬ್ದಾರಿಯನ್ನು ಕಲಿಸುವ ಸಾಧನ. ದೇವರೇ ಅದರ ಬುನಾದಿ. ಪರಮ ತ್ರಿತ್ವದ ಪ್ರೀತಿಯ ಸಹಬಾಳ್ವೆಯೇ ಕೌಟುಂಬಿಕ ಜೀವನಕ್ಕೆ ಮಾದರಿ.
ಇಂದಿನ ಕುಟುಂಬಗಳ ಪರಿಸ್ಥಿತಿ:
ಕುಟುಂಬ ಸಮಾಜದ ಅಂಗ. ಏವಳನ್ನು ದೇವರು ಅದಾಮನ ಪಕ್ಕೆಯ ಎಲುಬಿನಿಂದ ಸೃಷ್ಟಿಸಿದರು. ಒಬ್ಬ ಚಿಂತಕ ಹೇಳುತ್ತಾನೆ, ಇದರ ಅರ್ಥ ಆದಾಮನಲ್ಲಿ ಒಂದು ಎಲುಬು ಕಮ್ಮಿ ಇದೆ, ಏವಳಲ್ಲಿ ಒಂದು ಎಲುಬು ಆದಾಮನದಿದೆ. ಆದ್ದರಿಂದ ಇಬ್ಬರಲ್ಲೂ ನ್ಯೂನತೆ ಇದೆ. ದೇವರು ಇದನ್ನು ಬೇಕೆಂತಲೇ ಮಾಡಿರಬಹುದೇ? ದೇವರ ಒಲವು ಇಷ್ಟೇ - ಇಬ್ಬರೂ ಸಮಾನರು. ದೇವರೇ ದಂಪತಿಗೆ ಒಡೆಯ.
ಇವತ್ತು ಕೌಟುಂಬಿಕ ಜೀವನಕ್ಕೆ ಹಲವಾರು ಸವಾಲುಗಳು ಎದುರಾಗಿವೆ.
೧. ಹೆಚ್ಚುತ್ತಿರುವ ವಿವಾಹ ವಿಚ್ಛೇದನೆಗಳು
೨. ಅಂತರ್-ಧರ್ಮೀಯ ವಿವಾಹಗಳು
೩. ಮಕ್ಕಳ ಪಾಲನೆ ಪೋಷಣೆಯ ಶೈಲಿ (ತಪ್ಪು ದಾರಿ ಹಿಡಿದು ದೂರ ಹೋಗುತ್ತಿರುವ ಮಕ್ಕಳು)
೪. ಮದುವೆ ಮುಂಚಿನ ಶಾರೀರಿಕ ಸಂಬಂಧ
೫. ಪ್ರೌಢಾವಸ್ಥೆಯಲ್ಲಿ ತಾಯ್ತನ
೬. ಮರುವಿವಾಹಗಳು
೭. ಸಲಿಂಗಕಾಮ
೮. ತಾಂತ್ರಿಕ ಜಗತ್ತಿನಲ್ಲಿ ತಾಯಿತನಕ್ಕೆ ಕಡಿಮೆಯಾಗುತ್ತಿರುವ ಬೇಡಿಕೆ
ಇಂದಿನ ಕುಟುಂಬಗಳ ಪರಿಸ್ಥಿತಿಗೆ ಕಾರಣಗಳು:
ಈ ಮೇಲಿನ ಸವಾಲುಗಳು ಇಂದು ಫ್ಯಾಶನ್ ಆಗಿವೆ. ಏಕೆ? ಪ್ರೇಷಿತರ ಕಾರ್ಯಕಲಾಪದಲ್ಲಿ ನಾವು ನೋಡುವಂತೆ, ಆದಿ ಧರ್ಮಸಭೆಯಲ್ಲಿ ಇತರ ಧರ್ಮದವರು ಯೇಸುವಿನ ಹಿಂಬಾಲಕರನ್ನು ಕ್ರೈಸ್ತರೆಂದು ಕರೆದಾಗ ಅವರ ಪ್ರಕಾರ ಕ್ರೈಸ್ತ ಕುಟುಂಬಗಳ ಜೀವನ ಶೈಲಿ ಎಷ್ಟು ಮೆಚ್ಚುವಂತದ್ದು ಆಗಿರಬೇಕಲ್ಲವೇ?
ಆದರೆ ಇಂದು ದಂಪತಿಗಳಲ್ಲಿ ಐಕ್ಯತೆ ಇಲ್ಲದಾಗಿದೆ. ಮಕ್ಕಳು ತಮ್ಮದೇ ಲೋಕದಲ್ಲಿ ಇದ್ದಾರೆ. ಮದುವೆ ದಿನ ದಂಪತಿಗಳು ಮಾಡಿದ ಪ್ರತಿಜ್ಞೆಯನ್ನು ಪಾಲಿಸುವವರೇ ಕಮ್ಮಿಯಾಗಿದ್ದಾರೆ. ದೇವರ ಮುಂದೆ ಮತ್ತು ಸಭಿಕರ ಮುಂದೆ ಮಾಡಿದ ಒಪ್ಪಂದ “ಕಷ್ಟದಲ್ಲಿಯೂ ಸುಖದಲ್ಲಿಯೂ ನಿನ್ನೊಡನೆ ಇರುವೆ. . . “ ಇವತ್ತು ಅರ್ಥ ಕಳೆದುಕೊಂಡಿದೆ. ಪ್ರೀತಿ ಮತ್ತು ಕಾಮುಕತೆಯ ವ್ಯತ್ಯಾಸ ಇಲ್ಲದಾಗಿದೆ. ತಂದೆ ತಾಯಿ ಮಕ್ಕಳಿಗೆ ಸಮಯ ಕೊಡಲು ವಿಫಲರಾಗುತ್ತಿದ್ದಾರೆ.
ಆಧುನಿಕತೆಯು ಕೆಟ್ಟದ್ದಲ್ಲ. ಆದರೆ ಆಧುನಿಕತೆಯಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಹೊಸ ಮೌಲ್ಯಗಳು ಕುಟುಂಬವನ್ನು ನಾಶದೆಡೆಗೆ ಸಾಗಿಸುತ್ತಿವೆ. ಸಂಶಯ, ಸ್ವಾರ್ಥವನ್ನು ತಂದುಕೊಟ್ಟಿದೆ. ಇವತ್ತು ಕುಟುಂಬಗಳು ಅರ್ಥಿಕವಾಗಿ ಸುಭದ್ರವಾಗಿವೆ, ಆಧ್ಯಾತ್ಮಿಕವಾಗಿ ಕುಂದುತ್ತಿವೆ. ಟಿ.ವಿ., ಕಂಪ್ಯೂಟರ್, ಮೊಬೈಲ್, ಫೇಸ್ ಬುಕ್ ನಮ್ಮ ಶಾಂತಿಯನ್ನು ನಾಶ ಮಾಡುತ್ತಿವೆ. ಅವುಗಳು ಒಳ್ಳೆಯವು. ಆದರೆ ಅವುಗಳೇ ನಮ್ಮ ಜೀವನದಲ್ಲಿ ದೇವರಿಗಿಂತ ಮುಖ್ಯವಾಗಿ ಮತ್ತು ದೇವರಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದಾಗ ಅವುಗಳು ಕೆಡುಕನ್ನು ತರುತ್ತವೆ.
ಇವತ್ತು ಈ ಸೌಲಭ್ಯಗಳು ಇದ್ದರೂ ಒಂಟಿತನ ಜನರನ್ನು ಕಾಡುತ್ತಿದೆ. ಸಂಜೆ ಸೀರಿಯಲ್, ಐ.ಪಿ.ಎಲ್. ನಿಂದಾಗಿ ಮನೆಯಲ್ಲಿ ಪ್ರಾರ್ಥನೆಗೆ ಸಮಯ ಇಲ್ಲದಾಗಿದೆ. ಮನೆಯಲ್ಲಿ ಪ್ರತಿಯೊಬ್ಬರಿಗೆ ತಮ್ಮದೇ ಆದ ಕೋಣೆ. ಎಲ್ಲಾ ಕೊಠಡಿಗಳಲ್ಲಿ ಟಿ.ವಿ. ಮನೆಯಲ್ಲಿ ಎಲ್ಲಾ ಸದಸ್ಯರು ಒಟ್ಟಾಗಿ ಬಂದು ಊಟಮಾಡುವ ಸನ್ನಿವೇಶಗಳೂ ಕಡಿಮೆಯಾಗಿವೆ. ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಅವರ ಕಲಿಕೆಯ ಬಗ್ಗೆ ಒತ್ತು ಕೊಡಲು, ಆತ್ಮೀಯವಾಗಿ ಮಾತನಾಡಲು ತಂದೆ ತಾಯಿಯರಿಗೆ ಸಮಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಲೋಕದಲ್ಲಿ ಬಿಜಿಯಾಗಿದ್ದಾರೆ. ಮಕ್ಕಳು ವಿಡಿಯೋ ಗೇಮ್ಸ್ ಆಡುವುದರಲ್ಲಿ ತಲ್ಲೀನರಾಗಿದ್ದಾರೆ.
ಇವತ್ತು ಹೃದಯಗಳು ಕಲ್ಲಾಗಿವೆ. ಭಾವನೆಗಳೇ ಇಲ್ಲದಾಗಿವೆ. ಎಲ್ಲರೂ ಒಂಟಿತನವನ್ನು ಆಶಿಸುವವರಾಗಿದ್ದಾರೆ. ಮಕ್ಕಳು ತಂದೆತಾಯಿಯರ ಸಂಬಂಧದಿಂದ ಪ್ರಭಾವಿತರಾಗಿ ಕೆಟ್ಟಮಾರ್ಗಗಳನ್ನು, ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡುತ್ತಾರೆ. ಇದಕ್ಕೆ ಕಾರಣ ಮಕ್ಕಳಲ್ಲ, ತಂದೆ ತಾಯಿಗಳೇ. ತಂದೆ ತಾಯಂದಿರು ಮಕ್ಕಳ ಮುಂದೆ ಮಾದರಿಯ ಜೀವನ ನಡೆಸಿದರೆ ಅವರು ಕೂಡ ತಂದೆ ತಾಯಿಯರಂತೆ ಆಗುತ್ತಾರೆ. ಮಗ ತಂದೆಯನ್ನು ಅನುಸರಿಸುತ್ತಾನೆ, ಮಗಳು ತಾಯಿಯಂತೆ ಆಗುತ್ತಾಳೆ ಎಂಬುದು ಸತ್ಯವೇ ಸರಿ.
ಒಂದು ಧರ್ಮಕೇಂದ್ರಕ್ಕೆ ಭೇಟಿನೀಡಿದಾಗ ಕಂಡ ಪರಿಸ್ಥಿತಿ ಹೀಗಿತ್ತು. ಒಂದು ದಂಪತಿ, ಮದುವೆಯಾಗಿ ಒಂದು ತಿಂಗಳಲ್ಲೇ ಬೇರೆಯಾಗಿ ಜೀವಿಸುತ್ತಿದ್ದಾರೆ. ಒಂದು ಮನೆ, ಎರಡು ಬಾಗಿಲುಗಳು. ಕ್ಷಮೆ ಮತ್ತು ಹೊಸಬಾಳ್ವೆ ತಿಳಿಯದ ಹಾಗೆ ಜೀವಿಸುತ್ತಿದ್ದಾರೆ. ಹೌದು, ಎಷ್ಟೋ ಮಕ್ಕಳು ತಂದೆ ತಾಯಿಯ ತಪ್ಪಿನಿಂದ ಕ್ರೈಸ್ತ ವಿಶ್ವಾಸವನ್ನು ಬಿಟ್ಟುಬಿಡುತ್ತಿದ್ದಾರೆ. ಅಂತರ್-ಧರ್ಮೀಯ ಮದುವೆಗಳಾಗಿ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಅದೆಷ್ಟು ದಂಪತಿಗಳು ಮಕ್ಕಳ ಜೀವನವನ್ನು ಹಾಳುಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸವಾಲುಗಳನ್ನು ನಾವು ಆಳವಾಗಿ ಯೋಚಿಸಿ ಎದುರಿಸಬೇಕಾಗಿದೆ.
ನಾವು ಇಂದು ಉತ್ತರಿಸಬೇಕಾದ ಪ್ರಶ್ನೆಗಳು:
೧) ನಮ್ಮ ಕುಟುಂಬಗಳಲ್ಲಿ ಪ್ರಾರ್ಥನೆಗೆ ಪ್ರಾಮುಖ್ಯತೆ ಇದೆಯೇ?
೨)ತಂದೆ ತಾಯಿ ಮಕ್ಕಳ ಮುಂದೆ ಒಳ್ಳೆಯ ಮಾತುಗಳನ್ನು ಆಡುತ್ತಾರೆಯೇ, ಒಳ್ಳೆಯ ಮಾದರಿಯ ಜೀವನ ನಡೆಸುತ್ತಾರೆಯೇ?
೩) ಕಷ್ಟಗಳು ಬಂದಾಗ ದಾಂಪತ್ಯ ಜೀವನವನ್ನು ಮುಂದುವರಿಸಲು ಪ್ರಯತ್ನಿಸುತ್ತಾರೆಯೇ ಅಥವಾ ತಮ್ಮ ನಡುವೆ ಅಗೌರವದ ವಾತಾವರಣವನ್ನು ಅನುಸರಿಸುತ್ತಾರೆಯೇ?
೪) ತಂದೆ ತಾಯಂದಿರು ವಿಚ್ಛೇದನೆಯ ಹಾದಿ ಹಿಡಿಯುವ ಮೊದಲು ಕುಟುಂಬದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮಾಡುತ್ತಾರೆಯೇ?
ಕೌಟುಂಬಿಕ ಜೀವನಕ್ಕೆ ಪವಿತ್ರ ಕುಟುಂಬ ಮತ್ತು ಪರಮ ತ್ರಿತ್ವವು ಮಾದರಿಗಳು:
ಕುಟುಂಬ ಪರಮ ತ್ರಿತ್ವದ ಪ್ರತಿರೂಪ. ಪ್ರತಿಯೊಬ್ಬರಿಗೆ ತಮ್ಮದೇ ಆದ ಪಾತ್ರವಿದೆ. ತಮ್ಮ ತಮ್ಮ ಕರ್ತವ್ಯವನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಆ ಕುಟುಂಬದಲ್ಲಿ ಶಾಂತಿ, ಪ್ರೀತಿ ನೆಲೆಸುತ್ತದೆ. ದೇವರು ಆ ಕುಟುಂಬವನ್ನು ಮುನ್ನಡೆಸುತ್ತಾರೆ. ತಂದೆ ಅಥವಾ ತಾಯಿ ಮನೆಯ ಬಾಸ್ ಅಲ್ಲ. ಅವರು ಬರೀ ವಾರಸುದಾರರು. ದೇವರು ಕೊಟ್ಟ ಕೆಲಸವನ್ನು ಮಾಡುವವರು. ಎಲ್ಲರೂ ಕುಟುಂಬದ ಏಳಿಗೆಯಲ್ಲಿ ತಮ್ಮ ಪಾತ್ರವನ್ನು ಅರಿತಾಗ ಅಲ್ಲಿ ಐಕ್ಯತೆ ನೆಲೆಸುತ್ತದೆ. ಕಷ್ಟಗಳು ಬಂದರೂ ಅವುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.
ಹಾಗಾದರೆ ಕುಟುಂಬಗಳಲ್ಲಿ ಇರಬೇಕಾದ ನಾಲ್ಕು ಅಂಶಗಳು ಯಾವುವು?
೧) ದೇವರಿಗೆ ಮೊದಲ ಆದ್ಯತೆ ನೀಡುವುದು - ಶ್ರೀಮಂತ ಕುಟುಂಬವಾಗಿರಲಿ, ಬಡವನಾಗಿರಲಿ, ದೇವರಿಗೆ ಮೊದಲ ಸ್ಥಾನ ನೀಡುವ ಕುಟುಂಬದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಯೇಸುವೇ ಹೇಳಿರುವಂತೆ ಎಲ್ಲಿ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಸೇರುತ್ತಾರೋ ಅಲ್ಲಿ ನಾನು ಇರುವೆ. ಇಲ್ಲಿ ಒಮ್ಮನಸ್ಸು ಅಗತ್ಯ. ದೇವರ ವಾಕ್ಯದ ಸ್ತುತಿ ಇರುವ ಕುಟುಂಬ ಹಣವು ಕೊಡಲಾಗದ ಮನಶಾಂತಿ, ಹೊಂದಾಣಿಕೆ ನೀಡುತ್ತದೆ. ಕುಟುಂಬವು ಸುಭದ್ರವಾಗಿರುತ್ತದೆ. ಮಕ್ಕಳು ಕೂಡ ವಿಶ್ವಾಸದ ಜೀವನದಲ್ಲಿ ಬೆಳೆದು ಧರ್ಮಸಭೆಯ ಸಕ್ರಿಯ ಸದಸ್ಯರಾಗುತ್ತಾರೆ.
೨) ಪ್ರತಿ ಸದಸ್ಯನು ತನ್ನ ಕರ್ತವ್ಯವನ್ನು ಅರಿತು ಮಾಡುವುದು - ಸೇವೆ ಪ್ರೀತಿಯ ಸಂಕೇತ. ಅಲ್ಲಿ ಶಿಸ್ತು, ಮೌಲ್ಯಗಳು, ಒಳ್ಳೆಯ ಗುಣಗಳು ಬೇರೂರುತ್ತವೆ. ಪ್ರತೀ ಸದಸ್ಯನು ಚಿಕ್ಕ ಪುಟ್ಟ ಸೇವೆ ಮಾಡಿದರೆ ಕುಟುಂಬಕ್ಕೆ ಹಿತ. ಯೊವಾನ್ನ ೧೩: ೩೪-೩೫ ’ಒಬ್ಬರನೊಬ್ಬರು ಪ್ರೀತಿಸುವುದರ ಮುಖಾಂತರ ನೀವು ನನ್ನ ಶಿಷ್ಯರೆನಿಸಿಕೊಳ್ಳುವಿರಿ’.
ಹೆಣ್ಣು - ಒಂದು ಕುಟುಂಬದಲ್ಲಿ ಹೆಣ್ಣು ತಾಯಿಯ, ಹೆಂಡತಿಯ ಮತ್ತು ಶಿಕ್ಷಕಿಯ ಪಾತ್ರಗಳನ್ನು ಹೊಂದಿದ್ದಾಳೆ. ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸುವ ಕರ್ತವ್ಯ ಅವಳದು. ಮಕ್ಕಳನ್ನು ತಿದ್ದಿ ಸರಿದಾರಿಯನ್ನು ತೋರಿಸುವವಳು ಅವಳು.
ಗಂಡು - ಒಬ್ಬ ಗಂಡನಾಗಿ ಮತ್ತು ತಂದೆಯಾಗಿ ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕು. ಅವನು ಕುಟುಂಬವನ್ನು ಪ್ರಾರ್ಥನೆಗೆ, ಊಟಕ್ಕೆ ಮನೋರಂಜನೆಗೆ ಸೇರಿಸುವ ಕರ್ತವ್ಯ ಹೊಂದಿದ್ದಾನೆ. ಮಕ್ಕಳಿಗೆ ಸರಿದಾರಿ ತೋರಿಸಿ, ಬುದ್ದಿ ಮಾತು ಹೇಳುವುದು, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಿಕೊಳ್ಳುವುದು ಅವನ ಕರ್ತವ್ಯ.
ಹಿರಿಯರು - ಹಿರಿಯರು ಮನೆಯ ನಿಧಿ ಇದ್ದಂತೆ. ಅವರ ಜೀವನ ಶೈಲಿಯಿಂದ ಮಕ್ಕಳು ಕಲಿಯುತ್ತಾರೆ. ಅವರ ಮಾದರಿ ಇಡೀ ಕುಟುಂಬಕ್ಕೆ ದಾರಿದೀಪ. ನಾಲ್ಕನೆ ಕಟ್ಟೆಳೆಯನ್ನು ಪಾಲಿಸುವುದೆಂದರೆ - ಬರೀ ತಂದೆ ತಾಯಿಗೆ ಗೌರವ ಕೊಡುವುದಲ್ಲ, ಅವರನ್ನು ಮುದಿ ಪ್ರಾಯದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಕೂಡ ಅದರಲ್ಲಿ ಅಡಗಿದೆ.
೩) ತಾಳ್ಮೆ ಮತ್ತು ಕ್ಷಮೆ ಎಂಬ ಎರಡು ಮಾತ್ರೆಗಳು: ಸಮಸ್ಯೆಗಳು ಬಂದಾಗ, ಸಹನೆ ಬೇಕಾದಾಗ ತಾಳ್ಮೆ ಮತ್ತು ಕ್ಷಮೆ ಇದ್ದಲ್ಲಿ ಯಾವುದೇ ಸಮಸ್ಯೆಯನ್ನು, ಗೊಂದಲವನ್ನು ಪರಿಹರಿಸಲು ಸಾಧ್ಯವಾಗುತ್ತದೆ. ದುಃಖ, ಕಷ್ಟ, ನೋವು, ನಲಿವು, ಜಗಳವನ್ನು ಪರಿಹರಿಸಲು ಸಾಧ್ಯಮಾಡುತ್ತದೆ. ಒಳ್ಳೆಯ ಮಾತುಗಳು ಕ್ಷಮೆಗೆ ದಾರಿ ಮಾಡಿಕೊಡುತ್ತವೆ.
೪) ತ್ಯಾಗ ಎಂಬ ಅಪ್ಲಿಕೇಷನ್ - ಮೊಬೈಲ್ ಬಳಸುವ ನಮಗೆ ’ಅಪ್ಲಿಕೇಷನ್’ (App) ಏನೆಂದು ತಿಳಿದಿರುತ್ತದೆ. ತ್ಯಾಗವು ಎಲ್ಲವನ್ನು ಸಹಿಸಿ ಪರರ ಹಿತವನ್ನು ಬಯಸುತ್ತಾ ತನ್ನನ್ನೇ ಬರಿದು ಮಾಡಲು ಸಹಕರಿಸುತ್ತದೆ. ತ್ಯಾಗದ ಮೂಲಕ ಒಂದು ಕುಟುಂಬವು ದೇವರ ಸಂದೇಶವನ್ನು ಸಾರುತ್ತದೆ.
ಜಗದ್ಗುರು ಸಂತ ಎರಡನೇ ಜಾನ್ ಪೌಲ್ ಹೀಗೆ ಹೇಳಿದ್ದರು - ಪ್ರತಿ ಕ್ರೈಸ್ತ ಕುಟುಂಬವು ಲೋಕದಲ್ಲಿ ದೇವರ ಪ್ರೀತಿಯ ಮತ್ತು ಪರಮತ್ರಿತ್ವದ ಬೆಳಕು ಆಗಬೇಕು. ಮತ್ತಾಯನ ಶುಭಸಂದೇಶದಲ್ಲಿ ಹೇಳಿದಂತೆ ಪ್ರತೀ ಕುಟುಂಬವು ಜಗತ್ತಿಗೆ ಉಪ್ಪು ಅಥವಾ ಬೆಳಕಿನಂತೆಯಾದರೆ ಧರ್ಮಸಭೆ ಚೆನ್ನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದರ ಜವಾಬ್ದಾರಿ ತಂದೆ ತಾಯಿಯ ಮೇಲೆ ಇದೆ. ನಾವೆಲ್ಲರೂ ಒಳ್ಳೆಯ ಜೀವನವನ್ನು ನಡೆಸಿ ದೇವರ ಪ್ರೀತಿ ನೆಲೆಸುವ ಕುಟುಂಬದ ಸದಸ್ಯರಾಗೋಣ. ನಮ್ಮ ನಮ್ಮ ಜವಾಬ್ದಾರಿಯನ್ನು ನಾವು ಮಾಡೋಣ.
No comments:
Post a Comment