¨ ಫ್ರಾನ್ಸಿಸ್. ಎಂ. ನಂದಗಾವ
ಒಂದಾನೊಂದು ಕಾಲದಲ್ಲಿ ಅಂದರೆ ಅಷ್ಟು ದೂರವೇನಲ್ಲ, ಮೂರ್ನಾಲ್ಕು ದಶಕಗಳ ಹಿಂದೆ, ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ, ಕಾಯಿಲೆ ಕಸಾಲೆ ಕಾಣಿಸಿಕೊಂಡರೆ, ಅವರನ್ನು ಕಾಣಲು ಹೋಗುವವರು ಕೈಯಲ್ಲೊಂದು ಬ್ರೆಡ್ ಮತ್ತು ಮೊಸಂಬಿ ಹಣ್ಣುಗಳನ್ನುತೆಗೆದುಕೊಂಡು ಹೋಗುತ್ತಿದ್ದುದು ವಾಡಿಕೆಯಾಗಿತ್ತು. ಅಂತೆಯೇ ಎಲ್ಲಾ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಬ್ರೆಡ್ ಹಾಲು ಕೊಡುತ್ತಿದ್ದರು.
ಅದಕ್ಕೂ ಹಿಂದೆ ನಮ್ಮ ನಾಡಿನಲ್ಲಿ ಲಂಘನಂ ಪರಮೌಷಧ ಎಂದು ಹೇಳಲಾಗುತ್ತಿತ್ತು. ಲಂಘನ ಎಂದರೆ ಲಂಕೆಗೆ ಹಾರಿದ ಮಾರುತಿ, ಅಂದರೆ ಹನುಮಂತನ ಸೀಮೋಲ್ಲಂಘನವಲ್ಲ. ಇದು ಕೇವಲ ಲಂಘನ. ಸೀಮೆಯನ್ನು ಹಾರುವುದಲ್ಲ, ಮಹಾತ್ಮಗಾಂಧಿ ಅವರ ಸತ್ಯಾಗ್ರಹದ ಒಂದು ಭಾಗವಾಗಿದ್ದ ಉಪವಾಸ. ಇಂಗ್ಲಿಷ್ ಅಲೋಪತಿ ವೈದ್ಯಪದ್ಧತಿ ಮುನ್ನೆಲೆಗೆ ಬಂದು, ಸ್ಥಳೀಯ ಗಾಂವಟಿ ಔಷಧವೆಂದು ಗುರುತಿಸಲಾಗುತ್ತಿದ್ದ ಆಯುರ್ವೇದ ಪದ್ಧತಿ ಹಿಂದೆ ಸರಿದಾಗ, ಆಯುರ್ವೇದ ಪದ್ಧತಿಯ ಈ ಉಪವಾಸ ಹಿಂದೆ ಸರಿದು ಇಂಗ್ಲಿಷ್ ಔಷಧಿ ತಗೊಳ್ಳುವಾಗ ಹೊಟ್ಟೆಗೆ ಏನಾದರೂ ತೆಗೆದುಕೊಳ್ಳಬೇಕು, ಬ್ರೆಡ್ ಉತ್ತಮ ಆಹಾರ ಎಂಬ ಮಾತು ಚಲಾವಣೆಗೆ ಬಂದಿತ್ತು.
ಸಂಶೋಧನೆಗಳು ನಿರಂತರವಾಗಿ ನಡೆಯುತ್ತವಲ್ಲವೇ? ಅದರಂತೆ, ನೂತನ ಸಂಶೋಧನೆಯಲ್ಲಿ ಮೇಲ್ಮೈ ಹೊಟ್ಟು (ನಾರಿನಂಶ) ತೆಗೆದ ಜಿಗುಟು ಪದಾರ್ಥವಾದ ಗೋಧಿಹಿಟ್ಟು / ಮೈದಾ(?) ದೇಹಾರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ. ಗೋಧಿಕಾಳುಗಳ ಹಿಟ್ಟಿನಲ್ಲಿಯ ಪಿಷ್ಟಾಂಶವನ್ನು ತೊಳೆದುಬಿಟ್ಟ ಮೇಲೆ ಉಳಿಯುವ ಜಿಗುಟಾದ ಸಸಾರಜನಕ ಭಾಗವೆಂದು ಗುರುತಿಸುವ ಗ್ಲೂಟೆನ್ ಅಂಶವು ಸಿಲಿಯಾಕ್ ಹೆಸರಿನ ಸಣ್ಣಕರುಳಿನ ಉರಿಯೂತ ರೋಗಕ್ಕೆ ಕಾರಣವಾಗುವುದೆಂದು ಪತ್ತೆ ಮಾಡಲಾಗಿದೆ. ಕರುಳಿನಲ್ಲಿ ಆಹಾರವನ್ನು ತಳ್ಳುವ ಕ್ರಿಯೆಯಲ್ಲಿ ಅಡ್ಡಿಯುಂಟು ಮಾಡುವ ಆಹಾರದಲ್ಲಿನ ಗ್ಲೂಟೆನ್ ಅಂಶವು, ನೂರರಲ್ಲಿ ಒಬ್ಬರಿಗೆ ಈ ರೋಗಕ್ಕೆ ಕಾರಣವಾಗಬಲ್ಲುದು.
ಮಕ್ಕಳು ಮತ್ತು ದೊಡ್ಡವರಲ್ಲೂ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಹೊಟ್ಟೆನೋವು, ತೀವ್ರ ಅತಿಭೇದಿ, ವಾಂತಿ, ಮಲಬದ್ಧತೆ, ವಾಸನಾಯುಕ್ತ ಮಲ, ಸುಸ್ತು, ನಡವಳಿಕೆಯಲ್ಲಿ ವ್ಯತ್ಯಾಸ, ಹಲ್ಲಿನ ಹೊರ ಕವಚಕ್ಕೆ ಘಾಸಿ, ಕುಂಠಿತ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ದೊಡ್ಡವರಲ್ಲಿ ಕಬ್ಬಿಣಾಂಶದ ಕೊರತೆ, ಮೂಳೆ ಮತ್ತು ಸಂದುನೋವು, ಮೂಳೆ ಸವೆತ, ಪಿತ್ತಕೋಶದ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು, ವ್ಯಾಕುಲ ಮನಸ್ಥಿತಿ, ಫಲವಂತಿಕೆಯಲ್ಲಿ ಕುಸಿತ, ನಿಲ್ಲದ ಗರ್ಭಪಾತಗಳು, ಅರೆತಲೆ ನೋವು, ಚರ್ಮ ಕೆಂಪಗಾಗಿಸುವ ಮೈ ತುರಿಕೆ, ಬಾಯಲ್ಲಿ ಹುಣ್ಣುಗಳಾಗುವವು.
ಈ ಗ್ಲೂಟೆನ್ ಅಂಶವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಜಿಗುಟಾಗಿರುವ ಗೋಧಿ ಕಾಳಿನ ಮಧ್ಯದ ಹಿಟ್ಟಿನಿಂದ ಸಿದ್ಧಪಡಿಸಿದ ಮೈದಾ ಹಿಟ್ಟು, ನಮ್ಮ ಅಡುಗೆ ಮನೆಯಲ್ಲಿ ಸಿದ್ಧಪಡಿಸುವ ವಿವಿಧ ಬಗೆಯ ತಿಂಡಿಗಳ ತಯಾರಿಕೆಯಲ್ಲಿ ಪ್ರಮುಖ ಮೂಲವಸ್ತು ಎಂಬುದು ನಮಗೆಲ್ಲರಿಗೂ ಗೊತ್ತೆ ಇದೆ. ಮಿಠಾಯಿ ಅಂಗಡಿಗಳ ತಿಂಡಿಗಳ ಮತ್ತು ಬೇಕರಿಗಳ ಸಕಲ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಮೈದಾ ಎಂಬ ಮೂಲ ವಸ್ತುವಿಲ್ಲದೇ ಕೈ ಮುಂದೆ ಸಾಗುವುದೇ ಇಲ್ಲ. ಬ್ರೆಡ್ಡಿಗೂ ಮೈದಾನೇ ಮೂಲ ವಸ್ತು. ಹೊಸ ಸಂಶೋಧನೆಯ ಹಿನ್ನೆಲೆಯಲ್ಲಿ ದೇಹಕ್ಕೆ ಮೈದಾ ಒಳ್ಳೆಯ ಆಹಾರವಲ್ಲ, ಸಂಪೂರ್ಣ ಗೋಧಿಯೇ ಆರೋಗ್ಯಕ್ಕೆ ಪೂರಕ ಎಂಬುದನ್ನು ಕಂಡುಕೊಳ್ಳಲಾಯಿತು. ಮನೆಯ ಅಡುಗೆ ಮನೆಗಳಿಂದ ಮೈದಾ ಕಾಲ್ಕಿತ್ತರೂ, ಮಿಠಾಯಿ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ, ಬೇಕರಿಗಳಲ್ಲಿ ಸಂಪೂರ್ಣ ಗೋಧಿ ಹಿಟ್ಟಿಗೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ಸಿಗುವ ಮೈದಾ ಇನ್ನೂ ತನ್ನ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂತಿದೆ.
ಇದೆಲ್ಲಾ ಯಾವುದಕ್ಕೆ ಪೀಠಿಕೆ ಅಂತೀರಾ? ಸ್ವಾಮಿ ನಾವು, ಕ್ರೈಸ್ತರು, ಅದರಲ್ಲೂ ಮುಖ್ಯವಾಗಿ ವಿಶ್ವವ್ಯಾಪಿ ಕಥೋಲಿಕ ವಿಶ್ವಾಸಿಕರು ಪ್ರತಿ ಪ್ರಭು ಬೋಜನದ ಆಚರಣೆಯ ಸಂದರ್ಭದಲ್ಲಿ ’ನಮ್ಮ ಸ್ವಾಮಿಯ ಶರೀರ’ವೆಂದು ಭಕ್ತಿ ಭಾವದಿಂದ ಸತ್ಪ್ರಸಾದ, ಪರಮಪ್ರಸಾದ,ಅಪ್ಪ, ಪವಿತ್ರ ರೊಟ್ಟಿ ಮುಂತಾದ ಹೆಸರುಗಳಲ್ಲಿ ಸ್ವೀಕರಿಸುವ ’ಕ್ರಿಸ್ತರ ಶರೀರ’ (ಸತ್ಪ್ರಸಾದ)ದ ತಯಾರಿಕೆಯಲ್ಲೂ ಈ ಗ್ಲೂಟೆನ್ ಅಂಶವಿರುವ ಗೋಧಿಹಿಟ್ಟನ್ನೇ (ಮೈದಾ) ಬಳಸಲಾಗುತ್ತಿದೆ!
ಪ್ರಭು ಯೇಸುಕ್ರಿಸ್ತರ ಸಂಪೂರ್ಣ ಜೀವನವು, ಪಿತ ತಮ್ಮ ರಕ್ಷಣಾ ಯೋಜನೆಯನ್ನು ಕಾರ್ಯಗತ ಮಾಡುವಲ್ಲಿ ಸ್ವಅರ್ಪಣೆಯಾಗಿತ್ತು ಎಂದು ವಿಶ್ವವ್ಯಾಪಿಯಾಗಿರುವ ಕಥೋಲಿಕ ಧರ್ಮಸಭೆಯು ತನ್ನ ಧರ್ಮೋಪದೇಶದಲ್ಲಿ ಸಾರುತ್ತಿದೆ. ಅವರು ’ಸರ್ವರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನು ಈಡಾಗಿ ಕೊಡಲು ಬಂದವರು’ ಎಂದು ಪ್ರೇಷಿತ ಮಾರ್ಕನ ಶುಭಸಂದೇಶದಲ್ಲಿ ದಾಖಲಾಗಿದೆ (ಪ್ರೇಷಿತ ಮಾರ್ಕನ ಸುವಾರ್ತೆ-೧೪ನೇ ಅಧ್ಯಾಯ, ೨೨, ೨೩, ೨೩, ೨೪ ಮತ್ತು ೨೫ನೇ ಚರಣಗಳು). ಹೀಗೆ ಅವರು, ಇಡೀ ಮಾನವ ಕುಲವನ್ನು ದೇವರೊಡನೆ ಸಂಧಾನಗೊಳಿಸಿದರು ಎಂದು ವಿವರಿಸಲಾಗಿದೆ.
ತಮ್ಮನ್ನು ಶಿಲುಬೆಗೇರಿಸುವ ಮುಂಚಿನ ಯಾತನೆಯ ಹಿಂದಿನ ದಿನ ಅಂದರೆ ’ತಮ್ಮನ್ನು ಪರಾಧೀನ ಮಾಡಲಾದ ರಾತ್ರಿ’ (ಕೊರಿಂಥಿಯರಿಗೆ ಬರೆದ ಮೊದಲ ಪತ್ರ ೧೧ನೇ ಅಧ್ಯಾಯ ೨೩ನೇ ಚರಣ) ಅಂತಿಮ ಭೋಜನದ ಸಂದರ್ಭದಲ್ಲಿ ಪ್ರೇಷಿತ ಶಿಷ್ಯರೊಂದಿಗೆ ಯೇಸುಸ್ವಾಮಿ ತಮ್ಮ ಸ್ವ ಅರ್ಪಣೆಯ ಕುರಿತು ಮಾತಾಡಿದರು. ಅದನ್ನು ಸಾಂಕೇತಿಕವಾಗಿ ಮತ್ತು ನೈಜವಾಗಿ ಪ್ರತ್ಯಕ್ಷಗೊಳಿಸಿದರು. ’ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ’ (ಪ್ರೇಷಿತ ಲೂಕನಸುವಾರ್ತೆ ೨೨ ನೇ ಅಧ್ಯಾಯ೧೯ನೇ ಚರಣ) ’ಇದು ಸುರಿಸಲಾಗುವ ನನ್ನ ರಕ್ತ’ (ಪ್ರೇಷಿತ ಮತ್ತಾಯನ ಸುವಾರ್ತೆ ೨೬ನೇ ಅಧ್ಯಾಯ ೨೮ನೇ ಚರಣ). ಹೀಗೆ ಅವರು ಪರಮ ಪ್ರಸಾದವನ್ನು ತಮ್ಮ ಬಲಿಯ ’ಸ್ಮರಣೆ’ (ಕೊರಿಂಥಿಯರಿಗೆ ಬರೆದ ಮೊದಲ ಪತ್ರ ೧೧ನೇ ಅಧ್ಯಾಯ ಚರಣ ೨೫)ಯಾಗಿ ಮತ್ತು ತಮ್ಮ ಪ್ರೇಷಿತರನ್ನು ಹೊಸ ಒಡಂಬಡಿಕೆಯ ಯಾಜಕರನ್ನಾಗಿ ಪ್ರತಿಷ್ಠಾಪಿಸಿದರು ಎಂದೂ ಕಥೋಲಿಕ ಧರ್ಮಸಭೆಯ ಧರ್ಮೋಪದೇಶವು ಸ್ಪಷ್ಟಪಡಿಸುತ್ತದೆ.
ಕ್ರೈಸ್ತ ವಿಶ್ವಾಸಿಗಳು ಸ್ವಾಮಿ ಯೇಸುಕ್ರಿಸ್ತರ ಶರೀರವನ್ನು ಭುಜಿಸುವ, ಅವರ ರಕ್ತವನ್ನು ಕುಡಿಯುವ ಆಚರಣೆಯಲ್ಲಿ ನರಭಕ್ಷಣೆಯ ನಕಲನ್ನು ಕಾಣಬಯಸುವ ಪಾಷಂಡಿಗಳೂ ಇದ್ದಾರೆ. ಇಲ್ಲಿ, ಪ್ರಭು ಯೇಸುಸ್ವಾಮಿ ತಮ್ಮನ್ನು ತಾವೇ ಮಾನವ ಕುಲಕ್ಕಾಗಿ ಸಮರ್ಪಿಸಿಕೊಂಡವರು ಎಂಬುದನ್ನು ಗಮನಿಸಬೇಕು. ಒಬ್ಬ ವ್ಯಕ್ತಿ ಇನ್ನಿತರರಿಗೆ ತನ್ನಲ್ಲಿರುವುದನ್ನು ಕೊಡುತ್ತಾನೆ. ಆದರೆ, ಇಲ್ಲಿ ಪ್ರಭು ಯೇಸುಸ್ವಾಮಿ ತಮ್ಮನ್ನೇ ತಾವು ಬಲಿಯಾಗಿ ಅರ್ಪಿಸಿಕೊಂಡವರು. ವಸ್ತ್ರದಾನ, ಹಸುದಾನ, ಅನ್ನದಾನ, ಭೂದಾನ ಮೊದಲಾದವುಗಳ ಜೊತೆಗೆ ಜೀವಂತ ವ್ಯಕ್ತಿಗಳ ಅಂಗಾಂಗ ದಾನ, ಮೃತರಾದವರ ಅಂಗಾಂಗ ದಾನ, ದೇಹದಾನಗಳು ಇತ್ತೀಚೆಗೆ ಆರಂಭವಾಗಿದೆ.
ಕ್ರೈಸ್ತರು ಪರಿಪಾಲಿಸುವ ಪ್ರಭುಭೋಜನ ಸಂಸ್ಕಾರ ’ಪರಮಪ್ರಸಾದ’ ಪ್ರಾತಿನಿಧಿಕವಾಗಿ ಪ್ರಭು ಯೇಸುಕ್ರಿಸ್ತರ ಶರೀರ ಮತ್ತು ರಕ್ತದ ಬಲಿಯಾಗಿದೆ. ಇದನ್ನು ಕರ್ತರ ಭೋಜನ, ರೊಟ್ಟಿಮುರಿ, ಪ್ರಭುವಿನ ಯಾತನೆ ಮರಣ ಪುನರುತ್ಥಾನಗಳ ಸ್ಮರಣೆ, ದಿವ್ಯ ಮತ್ತು ದೈವಿಕಆರಾಧನೆ, ಪುನೀತ ರಹಸ್ಯಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಪ್ರಭು ಯೇಸುಸ್ವಾಮಿ ಮಾನವ ಕೋಟಿಯ ಉದ್ಧಾರಕ್ಕಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡವರು. ತಮ್ಮ ಅಂತಿಮ ಭೋಜನದ ಸಂದರ್ಭದಲ್ಲಿ, ಗೋಧಿಕಾಳಿನಿಂದ ಮಾಡಿದ ರೊಟ್ಟಿ (ಬ್ರೆಡ್) ಮತ್ತು ದ್ರಾಕ್ಷಾರಸಗಳನ್ನು ತಮ್ಮ ದೇಹ ಮತ್ತು ರಕ್ತವೆಂದುಪರಿಗಣಿಸಬೇಕೆಂದು ಕೋರಿದ್ದರು. ಅದಕ್ಕೆಂದೇ ಅವರು ಪ್ರಭು ಭೋಜನದ ಸಂಸ್ಕಾರವನ್ನು ಸ್ಥಾಪಿಸಿದರು. ಶಿಲುಬೆಬಲಿ ಮತ್ತು ಪರಮಪ್ರಸಾದ ಬಲಿ ಇವೆರಡೂ ಏಕ ಮತ್ತು ತತ್ಸಮ ಬಲಿಯಾಗಿವೆ. ಹೀಗಾಗಿ ಕ್ರೈಸ್ತ ಪೂಜಾವಿಧಿ ಪ್ರಭು ಭೋಜನದಲ್ಲಿ (ಮಾಸ್), ರೊಟ್ಟಿ (ಬ್ರೆಡ್/ತೆಳುವಾದ ಬಿಲ್ಲೆ-ವೇಫರ್) ಮತ್ತು ದ್ರಾಕ್ಷಾರಸಗಳಿಗೆ ಒಂದು ಪರಮಪೂಜ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಕಥೋಲಿಕ ಧರ್ಮಸಭೆಯು, ಪ್ರಭು ಭೋಜನದಲ್ಲಿ ಬಳಸುವ ರೊಟ್ಟಿಯಲ್ಲಿ ಸ್ವಲ್ಪವಾದರೂ ಗ್ಲೂಟೆನ್ ಪ್ರಮಾಣ ಇರಲೇಬೇಕೆಂದು ಅಪೇಕ್ಷಿಸುತ್ತದೆ.
ಸಂಫೂರ್ಣ ಗ್ಲೂಟೆನ್ ಮುಕ್ತ ರೊಟ್ಟಿಯನ್ನು ಪ್ರಭು ಭೋಜನಕ್ಕೆ ಬಳಸಲಾಗದೆಂದು, ಕಾಲಕಾಲಕ್ಕೆ ಕಥೋಲಿಕ ಧರ್ಮಸಭೆ ತಿಳುವಳಿಕೆ ನೀಡುತ್ತಾ ಬಂದಿದೆ. ಜೊತೆಗೆ, ಪ್ರಭುಭೋಜನದ ರೊಟ್ಟಿಯ ತಯಾರಿಕೆಯಲ್ಲಿ ರೊಟ್ಟಿಯ ಸ್ವರೂಪಕ್ಕೆ ಧಕ್ಕೆ ತರದೇ, ಇತರೇಪದಾರ್ಥಗಳನ್ನು ಸೇರಿಸದ, ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ರೊಟ್ಟಿ / ತೆಳುವಾದ ಬಿಲ್ಲೆ (ವೆಫರ್) ಬಳಸಲು ಅನುಮತಿ ಇದೆ ಎಂದೂ ಅದು ಸ್ಪಷ್ಟವಾಗಿ ತಿಳಿಸುತ್ತಾ ಬಂದಿದೆ.
ಹುಳಿ ಹಿಡಿಯದ, ಹುದುಗದ ಗೋಧಿಯ ಹಿಟ್ಟಿನಿಂದಲೇ ಪ್ರಭು ಭೋಜನದ ರೊಟ್ಟಿಯನ್ನು ಸಿದ್ಧಪಡಿಸಬೇಕು. ಮತ್ತು ಅದನ್ನು ಹಾಳಾಗುವ ಮೊದಲೇ ತಕ್ಷಣದಲ್ಲಿ ಬಳಸಬೇಕು ಎಂದು ಕಥೋಲಿಕ ಸಭೆ ನಿರ್ಬಂಧಗಳನ್ನು ಹಾಕಿದೆ. ಹೀಗಾಗಿ ಗೋಧಿಯಲ್ಲದೇ ಬೇರಾವುದೇ ಕಾಳಿನಿಂದ, ಬೇರೆ ಕಾಳುಗಳನ್ನು ಬೆರೆಸಿ ಸಿದ್ಧಪಡಿಸಿದ ರೊಟ್ಟಿಯನ್ನು ಪ್ರಭು ಭೋಜನದಲ್ಲಿ ಬಳಸಲಾಗದು.
ಕಥೋಲಿಕರೂ ಸೇರಿದಂತೆ ವಿವಿಧ ಪಂಗಡದ ಬಹುತೇಕ ಕ್ರೈಸ್ತರು ಪ್ರಭು ಭೋಜನದಲ್ಲಿ ಬಳಸುವ ಪ್ರಭುಭೋಜನದ ರೊಟ್ಟಿಯು ವೃತ್ತಾಕಾರದ ಹಗುರವೂ ಗರುಗೂ ಬಲು ತೆಳುವೂ ಆದ ಹುದುಗು (ಹುಳಿ)ಹಾಕದ ಗೋಧಿ ಹಿಟ್ಟಿನ ಬಿಲ್ಲೆ (ಬಿಸ್ಕತ್ತು ಮಾದರಿ) ಯ ಆಕಾರಹೊಂದಿರುತ್ತದೆ. ಈ ಪ್ರಭು ಭೋಜನದ ರೊಟ್ಟಿ (ವೆಫರ್) ಯನ್ನು ಮೈದಾ ಹಿಟ್ಟು (ಹೊಟ್ಟುತೆಗೆದ ಬರಿ ಬಿಳಿ ಬಣ್ಣದ ತುಂಬಾ ಸಣ್ಣಗೆ ಬೀಸಿದಹಿಟ್ಟು), ಶುದ್ಧವಾದ ನೀರು ಮತ್ತು ಉಪ್ಪುಗಳನ್ನು ಸೇರಿಸಿ ನಾದಿದ ಹಿಟ್ಟನ್ನು ತೆಳುವಾಗಿ ಅಚ್ಚಿನಲ್ಲಿ ಹಾಕಿ ಭಟ್ಟಿಯಲ್ಲಿ ಕಾವು ಕೊಟ್ಟು (ಬೇಕ್ ಮಾಡಿ) ಸಿದ್ಧಪಡಿಸಲಾಗುತ್ತದೆ. ಈ ಬಗೆಯಲ್ಲಿ ಸಿದ್ಧವಾದ ತೆಳುವಾದ ಬಿಲ್ಲೆ(ವೆಫರ್)ಗಳು ತೆಳ್ಳಗೆ, ಬೆಳ್ಳಗೆ ಶುಭ್ರವಾಗಿ ಕಾಣುತ್ತವೆ. ಸಾಮಾನ್ಯವಾಗಿ ಇವನ್ನು ಕನ್ಯಾಸ್ತ್ರೀ ಮಠಗಳಲ್ಲಿ ಸಿದ್ಧಗೊಳಿಸಲಾಗುತ್ತದೆ. ಅದೇ ಮೇರೆಗೆ ’ಧಾರ್ಮಿಕ ಸಂಸ್ಕಾರದ ವೈನು’ ಎಂದು ಕರೆಯಲಾಗುವಪ್ರಭು ಬೋಜನಕ್ಕೆ ಬಳಸುವ ದ್ರಾಕ್ಷಾರಸವನ್ನೂ ಸಿದ್ಧಪಡಿಸಲಾಗುತ್ತದೆ.
ಸಿಲಿಯಾಕ್ ಹೆಸರಿನ ಸಣ್ಣಕರುಳಿನ ಉರಿಯೂತ ರೋಗಕ್ಕೆ ಗ್ಲೂಟೆನ್ ಕಾರಣವಾಗುತ್ತದೆಂಬ ಸಂಗತಿ ಪತ್ತೆಯಾದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಈಚೆಗೆ ಅಂದರೆ ೨೦೦೦ದ ನಂತರದಲ್ಲಿ ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ಪ್ರಭುಭೋಜನದ ರೊಟ್ಟಿಗಳನ್ನುಸಿದ್ಧಪಡಿಸಲಾಗುತ್ತಿದೆ. ಶಿಸ್ತಿನಿಂದ ಗ್ಲೂಟೆನ್ ಮುಕ್ತ ಆಹಾರ ಸೇವಿಸುವ, ಸಣ್ಣ ಕರುಳಿನ ಉರಿಯೂತದ ಕಾಯಿಲೆಯಿಂದ ನರಳುವವರಿಗೆ ಇದರಿಂದ ಅನುಕೂಲವಾದಂತಿದೆ.
ಕಳೆದ ಸಾಲಿನ ಮಧ್ಯಭಾಗದಲ್ಲಿ, ಕಥೋಲಿಕ ಧರ್ಮಸಭೆಯ ಜಗದ್ಗುರುಗಳ ನೆಲೆಯಾದ ರೋಮ್ ನಿಂದ ಅಂದರೆ ವ್ಯಾಟಿಕನ್ ನಿಂದ ಕಥೋಲಿಕ ಮೇತ್ರಾಣಿ (ಬಿಷಪ್)ಗಳಿಗೆ ಕಳುಹಿಸಿದ ಪರಿಪತ್ರವೊಂದರಲ್ಲಿ, ಗ್ಲೂಟೆನ್ ಮುಕ್ತ ಪ್ರಭುಭೋಜನದ ರೊಟ್ಟಿಯ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇದೇನೂ ಹೊಸ ವಿಷಯವಾಗಿರಲಿಲ್ಲ. ಕಥೋಲಿಕ
ಧರ್ಮಸಭೆಯು, ತನ್ನ ಹಳೆಯ ನಿಲುವನ್ನೇ ಮಗದೊಮ್ಮೆ ಸ್ಪಷ್ಟಪಡಿಸಿದ್ದರೂ, ಈ ಗ್ಲೂಟೆನ್ ವಿಷಯ ಮಾಧ್ಯಮಗಳ ಗಮನಕ್ಕೆ ಬಂದಾಗ ಬಗೆಬಗೆಯ ಚರ್ಚೆಗಳಿಗೆ ಗ್ರಾಸವೊದಗಿಸಿತ್ತು.ವಿಶ್ವದಾದ್ಯಂತ ಪರ ವಿರೋಧದ ಚರ್ಚೆಗಳು ನಡೆದವು. ಈ ನಿಟ್ಟಿನ ಹತ್ತಾರು ಬಗೆಯ ವ್ಯಾಖ್ಯಾನಗಳೂ ಕೇಳಿ ಬಂದವು,
ಆನ್ ಲೈನ್ ವಹಿವಾಟಿನ ಇಂದಿನ ಕಾಲದಲ್ಲಿ ಧರ್ಮಸಭೆಯಲ್ಲದ ಖಾಸಗಿಯವರೂ ಸಿದ್ಧಪಡಿಸಿದ ಪ್ರಭು ಭೋಜನದ ರೊಟ್ಟಿ (ವೆಫರ್) ಮತ್ತು ಪವಿತ್ರ ವೈನ್ (ದ್ರಾಕ್ಷಾರಸ) ಗಳನ್ನು ಮಾರಾಟಕ್ಕೆ ಒದಗಿಸುತ್ತಿರುವ ಹಿನ್ನೆಲೆಯಲ್ಲಿ, ತಿಳುವಳಿಕೆ ನೀಡುವ ಕ್ರಮವಾಗಿ ವ್ಯಾಟಿಕನ್ನಿನಿಂದ ಈ ಪರಿಪತ್ರ ಹೊರಡಿಸಲಾಗಿತ್ತು.
ಗ್ಲೂಟೆನ್ ಅಂಶ ಬರಿ ಗೋಧಿಯಲ್ಲಷ್ಟೇ ಅಲ್ಲ ಬಾರ್ಲಿ ಮೊದಲಾದ ಕಾಳುಗಳಲ್ಲೂ ಇದ್ದೇ ಇರುತ್ತದೆ. ಈಚೆಗೆ ಅಮೆರಿಕದಲ್ಲಿ ಗ್ಲೂಟೆನ್ ಮುಕ್ತ ಆಹಾರ ಪದಾರ್ಥಗಳ ಮಾರಾಟದ ಭರಾಟೆ ಜೋರಾಗಿದೆ. ಸಣ್ಣ ಕರುಳಿನ ಬಾಧೆಯಿಂದ ನರಳುವವರಷ್ಟೇ ಅಲ್ಲ ಉಳಿದವರೂ ಗ್ಲೂಟೆನ್ ಮುಕ್ತ ಆಹಾರಕ್ಕೆ ಮುಗಿಬೀಳ ತೊಡಗಿದ್ದಾರೆ. ಅಮೆರಿಕದಲ್ಲಿನ ಬಹುತೇಕ ಪ್ರೊಟೆಸ್ಟೆಂಟ್ ಕ್ರೈಸ್ತ ಪಂಥದ ಚರ್ಚುಗಳಲ್ಲಿ ಗ್ಲೂಟೆನ್ ಮುಕ್ತ ಪ್ರಭು ಭೋಜನದ ರೊಟ್ಟಿಗಳ ಬಳಕೆ ಆರಂಭವಾಗಿದೆ. ಇಷ್ಟಲ್ಲದೇ, ಕೆಲವು ಕ್ರಾಂತಿಕಾರಿ ಮನೋಭಾವದ ಕಥೋಲಿಕರಲ್ಲಿ, ಪ್ರಭುಭೋಜನದ ರೊಟ್ಟಿಯನ್ನು ಗೋಧಿಯನ್ನು ಬಿಟ್ಟು ಅಕ್ಕಿ ಮುಂತಾದ ಧಾನ್ಯಗಳಲ್ಲಿ ಸಿದ್ಧಪಡಿಸಲು ತಮ್ಮ ಚರ್ಚು (ಕಥೋಲಿಕ ಧರ್ಮಸಭೆ) ಮುಂದಾದರೆ ಒಳ್ಳೆಯದೇನೋ ಎಂಬ ಚಿಂತನೆ ಆರಂಭವಾಗಿದೆ. ದ್ರಾಕ್ಷಾರಸದ ಬದಲು ತಾಳೆಮರದ ಹಣ್ಣುಗಳನ್ನು ಬಳಸಿ ಸಿದ್ಧಪಡಿಸಿದ ರಸವನ್ನು ಪ್ರಭು ಭೋಜನದ ಸಂದರ್ಭದಲ್ಲಿ ಬಳಸಬಾರದೇಕೆ? ಎಂಬ ಚಿಂತನೆಯನ್ನು ಅವರು ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಥೋಲಿಕ ಧರ್ಮಸಭೆ (ಚರ್ಚು) ಈ ಸ್ಪಷ್ಟನೆ ನೀಡಿದೆ.
ಪ್ರಭು ಯೇಸುಸ್ವಾಮಿ ತಮ್ಮ ಅಂತಿಮ ಭೋಜನದ ಸಂದರ್ಭದಲ್ಲಿ, ಗೋಧಿ ಕಾಳಿನಿಂದ ಮಾಡಿದ ರೊಟ್ಟಿ (ಬ್ರೆಡ್) ಮತ್ತು ದ್ರಾಕ್ಷಾರಸಗಳನ್ನು ತಮ್ಮ ದೇಹ ಮತ್ತು ರಕ್ತವೆಂದು ಪರಿಗಣಿಸಬೇಕೆಂದು ಕೋರಿ ಪ್ರತಿಷ್ಠಾಪಿಸಿದ್ದ ’ಸ್ಮರಣ ಬಲಿ ಪರಮಪ್ರಸಾದ ಸಂಸ್ಕಾರದಲ್ಲಿ, ಅವರು ಗೋಧಿಯ ರೊಟ್ಟಿಯನ್ನು ಮತ್ತು ವೈನ್ (ದ್ರಾಕ್ಷಾರಸ)ವನ್ನು ಬಳಸಿದ್ದರು. ಅದೇ ಬಗೆಯ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿರುವ ಕಥೋಲಿಕ ಧರ್ಮಸಭೆಯು, ಸ್ಮರಣ ಬಲಿಯ ಪರಮಪ್ರಸಾದದ ಸಂಸ್ಕಾರದ ಆಚರಣೆಯಲ್ಲಿ ಗೋಧಿಯಿಂದ ಸಿದ್ಧಪಡಿಸಿದ ರೊಟ್ಟಿ ಮತ್ತು ವೈನ್ (ದ್ರಾಕ್ಷಾರಸ) ಗಳನ್ನು ಮಾತ್ರ ಬಳಸುತ್ತಾ ಬಂದಿದೆ.
ಕೆಲವು ಧರ್ಮ ಪಂಡಿತರು ರೊಟ್ಟಿ ಮತ್ತು ರಸಗಳು ಕೇವಲ ಸಂಕೇತ ಮಾತ್ರ ಎಂದು ವಾದಿಸಿ, ಆಯಾ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಬೇರೆ ಬಗೆಯ ಧಾನ್ಯಗಳಿಂದ ರೊಟ್ಟಿಯನ್ನು ಮತ್ತು ಬೇರೆ ಬಗೆಯ ಹಣ್ಣುಗಳ ರಸವನ್ನು ಪ್ರಭು ಭೋಜನದಲ್ಲಿ ಬಳಸಿದರೆತಪ್ಪಾಗದು ಎಂದು ಪ್ರತಿಪಾದಿಸುತ್ತಿರುವರು. ಆದರೆ, ಆ ವಾದಗಳನ್ನು ಕಥೋಲಿಕ ಧರ್ಮಸಭೆ ಒಪ್ಪಿಕೊಂಡಿಲ್ಲ. ಪ್ರಭು ಯೇಸುಸ್ವಾಮಿ ಸ್ವತಃ ಸ್ಥಾಪಿಸಿದ ಪವಿತ್ರ ಪ್ರಭು ಭೋಜನದ ಸಂಸ್ಕಾರದ ಸಂದರ್ಭದಲ್ಲಿ ಬಳಿಸಿದ್ದು, ಗೋಧಿಯಿಂದ ಸಿದ್ಧಪಡಿಸಿದ ರೊಟ್ಟಿ ಮತ್ತು ವೈನ್ (ದ್ರಾಕ್ಷಿಹಣ್ಣಿನ ರಸ). ಯೇಸುಸ್ವಾಮಿ ಮಾಡಿದ ಕ್ರಮವನ್ನೇ ಬಳಸುವುದು ಸರಿಯಾದ ಕ್ರಮ ಎನ್ನುವ ಕಥೋಲಿಕ ಧರ್ಮಸಭೆ ಅದನ್ನು ಶಿರಸಾವಹಿಸಿ ಪಾಲಿಸಿಕೊಂಡು ಬರುತ್ತಿದೆ.
ಕೆಲವು ಪ್ರಗತಿಪರ ಧೋರಣೆಯ ಜನರಿಗೆ, ಕಥೋಲಿಕ ಧರ್ಮಸಭೆಯ ಕ್ರಮ ಬದಲಾವಣೆಗೆ ಅತೀತವಾದುದೇನಲ್ಲ ಎಂದು ಅನ್ನಿಸಬಹುದು. ಆದರೆ, ಕಳೆದು ಎರಡು ಸಾವಿರ ವರ್ಷಗಳಿಂದ ಪ್ರಭು ಯೇಸುಕ್ರಿಸ್ತರನ್ನು ಅನುಸರಿಸಿಕೊಂಡು ಬರುತ್ತಿರುವ ಕಥೋಲಿಕಧರ್ಮಸಭೆಯು ಪ್ರತಿಯೊಂದು ಚಿಕ್ಕ ವಿಷಯದಲ್ಲೂ ಪ್ರಭು ಯೇಸುಕ್ರಿಸ್ತರನ್ನು ಅನುಕರಿಸುತ್ತಾ ಬಂದಿದೆ.
ಪ್ರಭು ಭೋಜನದಲ್ಲಿ ಬಳಸಲಾಗುವ ಬ್ರೆಡ್ ಮತ್ತು ತೆಳುವಾದ ಬಿಲ್ಲೆ (ವೆಫರ್) ಗಳನ್ನು ಕಡ್ಡಾಯವಾಗಿ ಹುಳಿ ಹಾಕದೇ, ಅಪ್ಪಟ ಗೋಧಿ ಹಿಟ್ಟಿನಿಂದ ಸಿದ್ಧಪಡಿಸಬೇಕು. ಮತ್ತು ಬಹುಬೇಗ ಹಾಳಾಗುವಷ್ಟು ಅದು ಹಳತಾಗಿರಬಾರದು. ಪ್ರಭು ಭೋಜನದ ಗೋಧಿಯ ಹಿಟ್ಟಿನ ತೆಳುವಾದ ಬಿಲ್ಲೆಗಳು (ವೆಫರ್) ಗ್ಲೂಟೆನ್ ಮುಕ್ತವಾಗಿದ್ದರೆ ಅವನ್ನು ಪ್ರಭು ಭೋಜನಕ್ಕೆ ಬಳಸಬಾರದು. ಆದಾಗ್ಯೂ ಕಡಿಮೆ ಪ್ರಮಾಣದ ಗ್ಲೂಟೆನ್ ಹೊಂದಿರುವ ಗೋಧಿ ಹಿಟ್ಟಿನ ಬ್ರೆಡ್ ಮತ್ತು ತೆಳುವಾದ ಬಿಲ್ಲೆಗಳನ್ನು ಮತ್ತು ಕಲಬೆರಕೆಯಾಗದ ನೈಸರ್ಗಿಕ ಸ್ವಚ್ಛ ದ್ರಾಕ್ಷಿ ಹಣ್ಣಿನ ರಸವನ್ನು ಮಾತ್ರ ಪ್ರಭು ಭೋಜನದಲ್ಲಿ ಬಳಸಬಹುದೆಂದು ಕಥೋಲಿಕ ಧರ್ಮಸಭೆಯ ಹೊರಡಿಸಿದ್ದ ಪರಿಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪ್ರಭು ಭೋಜನದಲ್ಲಿ ಬಳಸುವ ಹುಳಿ ಹಿಡಿಯಲು ಆರಂಭಿಸಿದ ದ್ರಾಕ್ಷಾರಸ (ಪವಿತ್ರ ವೈನ್)ದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಮದ್ಯ ಎಂದು ಹಣೆಪಟ್ಟಿ ಹೊಂದಿರುವ ವೈನ್ ನಲ್ಲಿರುವ ಆಲ್ಕೋಹಾಲ್ ಪ್ರಮಾಣದ ಶೇಕಡಾ ೧ರಷ್ಟೂ ಇರುವುದಿಲ್ಲ. ಕೆಲವು ವಿಶ್ವಾಸಿಗಳಿಗೆ ಪವಿತ್ರ ವೈನ್ ನಲ್ಲಿನ ಆಲ್ಕೋಹಾಲ್ ಪ್ರಮಾಣ ಕಿರಿಕಿರಿ ಎನಿಸಿದರೆ, ಅವರಿಗಾಗಿ ವೈನ್ ಬದಲು ಕೇವಲ ದ್ರಾಕ್ಷಿ ಹಣ್ಣಿನ ತಾಜಾರಸವನ್ನು ಪ್ರಭು ಭೋಜನದಲ್ಲಿ ಬಳಸಬಹುದೆಂದು ಪರಿಪತ್ರದಲ್ಲಿ ತಿಳಿಸಲಾಗಿದೆ. ಮತ್ತೆ, ಮತ್ತೇರಿಸುವ ಮದ್ಯಪಾನ - ಆಲ್ಕೊಹಾಲ್ ಕುಡಿತ ಕೆಟ್ಟ ಚಟ ಎಂಬುದು ಸಾಮಾನ್ಯ ನಂಬುಗೆ. ಈ ಭಾವನೆಯ ಹಿನ್ನೆಲೆಯಲ್ಲಿ ಕ್ರೈಸ್ತರ ಧಾರ್ಮಿಕ ಆಚರಣೆಯಲ್ಲಿ ವೈನ್ (ಹುಳಿ ಏರಿಸಿದ ದ್ರಾಕ್ಷಾರಸ) ವನ್ನು ಬಳಸಲಾಗುತ್ತದೆ ಎಂದು ಭಾವಿಸಿರುವ ಭಾರತದಲ್ಲಿನ ಕೆಲವು ಕಟ್ಟಾ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು, ಈಚೆಗೆ ಮದ್ಯಪಾನ ನಿಷೇಧ ಜಾರಿಯಲ್ಲಿರುವ ಕೆಲವು ರಾಜ್ಯಗಳಲ್ಲಿ ಕ್ರೈಸ್ತರ ಪೂಜಾವಿಧಿಗಳಲ್ಲಿನ ವೈನ್ ಬಳಕೆಯನ್ನ ತಡೆಯಬೇಕು ಎಂದು ಆಗ್ರಹಿಸಿದ ಪ್ರಕರಣಗಳು ವರದಿಯಾಗಿದ್ದವು.
ಗೋಧಿಯ (ಮೈದಾ) ಹಿಟ್ಟಿನ ತೆಳುವಾದ ಪ್ರಭು ಭೋಜನದ ಬಿಲ್ಲೆಗಳಲ್ಲಿ, ಪ್ರತಿಯೊಂದರಲ್ಲೂ ಸಾಮಾನ್ಯವಾಗಿ ೨೨ ಮಿಲಿ ಗ್ರಾಮ್ ಗ್ಲೂಟೆನ್ ಇದ್ದೇ ಇರುತ್ತದೆ ಎನ್ನಲಾಗುತ್ತದೆ. ಈ ಪ್ರಮಾಣ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಗ್ಲೂಟೆನ್ ಪ್ರಮಾಣ ೧೦ಮಿಲಿ ಗ್ರಾಮಿಗಿಂತ ಕಡಿಮೆ ಇರುವ ಪ್ರಭು ಭೋಜನದ ಬಿಲ್ಲೆಗಳನ್ನು, ಕಡಿಮೆ ಗ್ಲೂಟೆನ್ ಹೊಂದಿದ ಪ್ರಭು ಭೋಜನದ ಬಿಲ್ಲೆಗಳೆಂದು ಗುರುತಿಸಲಾಗುತ್ತಿದೆ. ಇಷ್ಟು ಕಡಿಮೆ ಪ್ರಮಾಣದ ಗ್ಲೂಟೆನ್ ಇರುವ ಪ್ರಭುಭೋಜನದ ರೊಟ್ಟಿಗಳನ್ನು ಪ್ರತಿದಿನವೂ ಸತತವಾಗಿ ಸೇವಿಸುವುದರಿಂದ ಗ್ಲೂಟೆನ್ ಮುಕ್ತ ಆಹಾರ ಸೇವಿಸುವ ರೂಢಿ ಹೊಂದಿರುವವರಿಗೆ ಮತ್ತು ಸಣ್ಣ ಕರುಳಿನ ಉರಿಯೂತದ ಕಾಯಿಲೆಯಿಂದ ನರಳುವವರಿಗೆ ಅಷ್ಟೇನೂ ತೊಂದರೆಯಾಗದು ಎಂದು ತಜ್ಞ ವೈದ್ಯರು ಅಭಿಪ್ರಾಯಪಡುತ್ತಿದ್ದಾರೆ.
No comments:
Post a Comment