Sunday, 9 September 2018

ಕೊನೇ ಮಾತು


ಸರ್ವಾಧಿಕಾರಿಯ ಪಳೆಯುಳಿಕೆಗಳು

¨ ಜ್ಯೂಯಿಶ್ ಕಾರ್ಪೆಂಟರ್


ತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ನಮಗೆ ನೆನಪಾಗುವುದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್. ಅತ್ಯಂತ ಕ್ರೂರಿಯಾಗಿದ್ದ ಆತ ಯಾರಿಗೂ ಹೆದರುತ್ತಿರಲಿಲ್ಲ, ಆದರೆ ಅಂಥವನ ಎದೆಯಲ್ಲೂ ಸಣ್ಣದೊಂದು ನಡುಕ ಹುಟ್ಟಿಸಿದ್ದು ಅಂದಿನ ಲೇಖಕ ಬೆರ್ಟೋಲ್ಟ್ ಬ್ರೆಕ್ಟ್. ಆತನ ಕವಿತೆ ಮತ್ತು ನಾಟಕಗಳಿಗೆ ಅಂಜಿದ ಹಿಟ್ಲರ್ ತನ್ನ ಸರ್ಕಾರದ ವಿರುದ್ಧ ಬರೆಯುವ ಲೇಖಕರನ್ನು ಕವಿಗಳನ್ನು ಬಂಧಿಸಲು ಆಜ್ಞಾಪಿಸುತ್ತಾನೆ. ಅದಷ್ಟೇ ಅಲ್ಲದೆ ಸರ್ಕಾರದ ವಿರುದ್ಧವಾಗಿ ಬರೆಯಲಾಗಿರುವ ಎಲ್ಲ ಸಾಹಿತ್ಯವನ್ನು ಹಾಗೂ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕು ಎಂದು ಆಜ್ಞಾಪಿಸುತ್ತಾನೆ.
ಈಗಿನ ನಮ್ಮ ಭಾರತದ ಪ್ರಸಕ್ತ ಪರಿಸ್ಥಿತಿಯೂ ಹಿಟ್ಲರ್ ಯುಗದ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಹಲವಾರು ಚುನಾವಣಾ ಘೋಷಣೆಗಳೊಂದಿಗೆ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಪ್ರಧಾನಿಯೊಬ್ಬರು ತಾವು ಮಾಡಿದ ಚುನಾವಣಾ ಭರವಸೆಗಳಲ್ಲಿ ಒಂದನ್ನೂ ಈಡೇರಿಸದೆ, ತಮ್ಮ ಅಧಿಕಾರದ ನಾಲ್ಕು ವರ್ಷಗಳನ್ನು ವಿದೇಶ ಪ್ರವಾಸಕ್ಕೆ ಮತ್ತು ಕೇವಲ ಚುನಾವಣಾ ಭಾಷಣಕ್ಕೆ ಸೀಮಿತಗೊಳಿಸಿ, ಅಧಿಕಾರದ ಅಂತ್ಯ ಸಮೀಪಿಸುವಾಗ, ಮತ್ತೊಮ್ಮೆ ಅಧಿಕಾರಕ್ಕೆ ಬರಲು, ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆದುಕೊಳ್ಳಲು ಯಾರೋ ಎಡಪಂಥೀಯರು ತಮ್ಮ ಕೊಲೆಗೆ ಸಂಚು ಹೂಡಿದ್ದಾರೆಂಬ ಕಟ್ಟುಕತೆಯನ್ನು ದೇಶದಾದ್ಯಂತ ಪಸರಿಸಿ, ಅದರ ಮೂಲಕ ತಮ್ಮ ವಿರುದ್ಧ ಬರೆಯುವವರನ್ನು, ಪ್ರಜಾಪ್ರಭುತ್ವದ ಪರ ಇರುವವರನ್ನು ಹಾಗೂ ಭಾರತದ ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇಟ್ಟಿರುವವರನ್ನು ತಮ್ಮ ಅಧಿಕಾರ ಬಳಸಿಕೊಂಡು, ಅವರನ್ನು ಬಂಧಿಸಿ, ಅವರ ಧ್ವನಿಗಳನ್ನು ಹತ್ತಿಕ್ಕಲು ಹವಣಿಸುತ್ತಿದ್ದಾರೆ. ಅದಾಗಲೇ ಹಲವು ಎಡಪಂಥೀಯ ಲೇಖಕರು ಮತ್ತು ಚಿಂತಕರನ್ನು ಬಂಧಿಸಲಾಗಿದೆ. ಆ ಮೂಲಕ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸದ ಸಂಗತಿಯೆಂದರೆ ಪ್ರಸಕ್ತ ಸನ್ನಿವೇಶವನ್ನು ಗಟ್ಟಿಯಾಗಿ ವಿರೋಧಿಸ ಬಹುದಾದ ಧ್ವನಿಗಳ ಸಂಖ್ಯೆ ಬಹಳ ಕಡಿಮೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನರ ಪರವಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳು ಹಾಗೂ ವಾರ್ತಾವಾಹಿನಿಗಳು ಸರ್ಕಾರದ ಪರವಾಗಿರುವುದು ಪತ್ರಿಕೋದ್ಯಮದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವಾಗಿದೆ.
ದೇಶದ ಪ್ರಧಾನಿ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ತನ್ನ ಅಧಿಕಾರ ಬಳಸಿ ಸ್ವತಂತ್ರ ಧ್ವನಿಗಳನ್ನು ತಕ್ಷಣಕ್ಕೆ ಹತ್ತಿಕ್ಕಬಹುದೇ ಹೊರತು ಅವರನ್ನು ಅವರ ಚಿಂತನೆಗಳನ್ನುಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಅಧಿಕಾರ ಎಂದಿಗೂ ಶಾಶ್ವತವಲ್ಲ. ಒಮ್ಮೆ ಅಧಿಕಾರ ಹೋದರೆ ತಾನು ಏನೇನೂ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಪ್ರಜಾಪ್ರಭುತ್ವದಿಂದ ಆಯ್ಕೆಯಾಗಿ, ಸಂವಿಧಾನಾತ್ಮಕವಾಗಿ ಪ್ರಧಾನಮಂತ್ರಿ ಪದವಿಗೇರಿದವರು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಉಳಿಸಬೇಕೇ ಹೊರತು ಅಸಾಂವಿಧಾನಿಕವಾಗಿ ನಡೆದುಕೊಳ್ಳುವುದು ಶೋಭೆ ತರುವುದಿಲ್ಲ. ಸಂಚು ಆರೋಪಿಸಿಕೊಂಡು, ಸ್ವರತಿಯಲ್ಲಿ ನರಳುವವರಿಗಾಗಿ ಜಗತ್ತಿನ ಅದ್ಭುತ ಕವಿಗಳಲ್ಲಿ ಒಬ್ಬನಾದ ಬ್ರೆಕ್ಟನ ಒಂದು ಸಾಂದರ್ಭಿಕ ಪದ್ಯ, “ದಿ ಬರ್ನಿಂಗ್ ಆಫ್ ದ ಬುಕ್ಸ್” ಅನ್ನು ಇಲ್ಲಿ ಅನುವಾದಿಸಿದ್ದೇನೆ:
ಹಾನಿಕಾರಕ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದು
ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು
ಎಲ್ಲೆಲ್ಲೂ ಪುಸ್ತಕಗಳನ್ನು ಎತ್ತಿನಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು.

ಆಗ ಒಬ್ಬ ಬಹಿಷ್ಕೃತ ಸಾಹಿತಿ, ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ.

ತಕ್ಷಣ ಕೋಪಾವಿಷ್ಟನಾಗಿ ಮೇಜಿಗೆ ಧಾವಿಸಿ,
ಅಧಿಕಾರದ ಮುಟ್ಠಾಳರಿಗೆ ಬೆಂಕಿಯ ಸಾಲು ಗೀಚಿದ:
’ಸುಡಿ ನನ್ನನ್ನು’
ಲೇಖನಿ ಬೆಂಕಿಯುಗುಳುತ್ತಿತ್ತು!
ಸುಡಿ ನನ್ನನ್ನು!
ನಾನು ಬರೆದದ್ದು ಯಾವಾಗಲೂ ಸತ್ಯವನ್ನೇ ಅಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನೆನಿಸಿಕೊಳ್ಳಬೇಕೇನು?
ಸುಡಿ ನನ್ನನ್ನು


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...