ಬೈಬಲ್ ದನಿ
ಸಂತ ಯೊವಾನ್ನರ ಶುಭಸಂದೇಶ - 1
¨ ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
ನಾನು ಬಬ್ಬರಿಗೆ ಕ್ರಿಸ್ತದನಿಯ ದಿನನಿತ್ಯದ ಶುಭಸಂದೇಶ ಚಿಂತನೆಯ ವಾಟ್ಸಾಪ್ ಸಂದೇಶ ಕಳುಹಿಸಿದೆ. ಅವರು ನನಗೆ ಆಶ್ಚರ್ಯಕರ ಚಿಹ್ನೆಯ ಒಂದು ಸಂದೇಶವನ್ನು ಮರು ಕಳುಹಿಸಿದರು. ಅವರು ನನಗೆ ತುಂಬಾ ಪರಿಚಯವಿದ್ದರಿಂದ ಅವರಿಗೆ ಮತ್ತೊಂದು ಸಂದೇಶ ಕಳುಹಿಸಿದೆ. ಏನಾಯ್ತು ಎಂದು ಅವರು ನನಗೆ ಪ್ರತಿಕ್ರಿಯೆಯ ಬದಲು ಕರೆ ಮಾಡಿದರು. ಅವರು ನಾನು ಬರೆದ ಚಿಂತನೆಯ ಬಗ್ಗೆ ಮತ್ತು ನಮ್ಮ ಕ್ರಿಸ್ತದನಿಯ ಕೊಡುಗೆಯ ಬಗ್ಗೆ ಶ್ಲಾಘಿಸಿ ಕಥೊಲಿಕ ಕ್ರೈಸ್ತರು ಯಾವಾಗ ದೇವರ ವಾಕ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದರು? ಎಂದು ತಮ್ಮಆಶ್ಚರ್ಯ ವ್ಯಕ್ತ ಪಡಿಸಿದರು. ಅವರು ನನಗೊಂದು ಪ್ರಶ್ನೆ ಕೇಳಿದರು, ದೈವಶಾಸ್ತ್ರ ಕಲಿತ ಎಷ್ಟು ಮಂದಿ ಗುರುಗಳಿಗೆ ಬೈಬಲನ ಜ್ಞಾನವಿದೆ? ಹೋಗಲಿ ಅದರಲ್ಲಿ ಎಷ್ಟು ಪುಸ್ತಕವಿದೆ ಗೊತ್ತಾ? ಎಂದರು ಇದು ಸ್ವಲ್ಪ. . ಆಳವಾಗಿಯೇ ಚಿಂತಿಸುವಂತೆ ಮಾಡಿತು.
ನಾನು ಕೂಡ ಬಬ್ಬ ದೈವಶಾಸ್ತ್ರದ ವಿದ್ಯಾರ್ಥಿ, ನನಗೆ ಬೈಬಲ್ ಬಗ್ಗೆ ಎಷ್ಟು ಗೊತ್ತು ಎಂದು ಅವಲೋಕಿಸುವಾಗ ಜೋವಿಯವರ ಕರೆ ಬಂತು. ಅವರು ನೀವು ಎನಾದರೂ ಮಾಡಿ ಬೈಬಲ್ ಬಗ್ಗೆ ಸರಣಿ ಲೇಖನ ಬರೀಲೇಬೇಕು ಎಂದು ಕೇಳಿಕೊಂಡರು. ಇದೆಲ್ಲದರ ನಡುವೆ ನನ್ನ ತುಡಿತ, ತೊಳಲಾಟದ ಜೊತೆಗೆ ದೇವರ ವಾಕ್ಯದ ಬಗ್ಗೆ ಬರೆಯಲೇ ಬೇಕು ಎಂದು ಹೊರಟಿದ್ದೇನೆ. ನಾನು ಸಂತ ಯೊವಾನ್ನರ (ಅರುಳಪ್ಪ) ಶುಭಸಂದೇಶದ ಕುರಿತಾಗಿ ಸರಣಿ ಲೇಖನವನ್ನ ಪ್ರಾರಂಭಿಸುತ್ತಿದ್ದೇನೆ. ಈ ಶುಭಸಂದೇಶವನ್ನೇ ಆಯ್ಕೆ ಮಾಡಲು ಅನೇಕ ಕಾರಣಗಳಿವೆ. ಆ ಕಾರಣಗಳನ್ನು ಕೊನೆಯಲ್ಲಿ ತಿಳಿಸುತ್ತೇನೆ.
ನಾನು ನನ್ನ ಲೇಖನದಲ್ಲಿ ಯೇಸು ಸ್ವಾಮಿಯನ್ನು ಕ್ರಿಸ್ತ ಎಂದು ಬರೆಯುತ್ತೇನೆ. ಓದುಗರು, ಯೇಸು ಸ್ವಾಮಿಯನ್ನು ಏಕವಚನದಲ್ಲಿ ಕರೆಯಬಹುದೇ? ಇದನ್ನು ನಾವು ಕಥೊಲಿಕರು ಒಪ್ಪಬಹುದೇ ಎಂದು ಕೇಳಬಹುದು? ಈ ಪದ ಎನೋ ಒಂದು ರೀತಿ ನನನ್ನ ಆಕರ್ಷಿಸಿದೆ. ಒಂದು ಇದಕ್ಕೆ ನನ್ನ ಬೌಗೋಳಿಕ ಹಿನ್ನಲೆಯ ಕಾರಣಗಳಿವೆ. ನಾನು ಮೂಲತಃ ಬಯಲು ಸೀಮೆಯವನು, ನಮ್ಮಲ್ಲಿ ಯಾರಾದರೂ ಹತ್ತಿರವಾದರೆ ಅಥವಾ ನಮ್ಮ ಗೆಳಯರಾದರೆ ಅವರನ್ನು ನಾವು ತುಂಬಾ ಆಪ್ತತೆಯಿಂದ ಕರೆಯುತ್ತೇವೆ. ತುಂಬಾ ಗೌರವ ಕೊಟ್ಟು ಕರೆಯುವವರು ನಮಗೆ ಅಪ್ತರಾಗುವುದಿಲ್ಲ. ಕ್ರಿಸ್ತ ನನ್ನ ಬಾಳಲ್ಲಿ. ಜೀವನದುದ್ದಕ್ಕೂ ಆಪ್ತನಾಗಿರುವುದರಿಂದ ನಾನು ಇಲ್ಲಿ ಕ್ರಿಸ್ತ ಎಂದೇ ಬರೆಯಲು ಇಚ್ಚಿಸುತ್ತೇನೆ. ಇದು ಆರಾಧನಾ ವಿಧಿ ಅಲ್ಲದೇ ಇರುವುದರಿಂದ ನಾನು ನನ್ನನ್ನೇ ಸ್ವತಂತ್ರಗೊಳಿಸಿ ಕೆಲ ಪದಗಳನ್ನ ಮುಕ್ತವಾಗಿ ಬರೆಯುತ್ತಿದ್ದೇನೆ. ಬರೆಯುವ ಆಸೆ, ಒತ್ತಡ, ಆತಂಕ, ತುಡಿತ, ಅಭಿಮಾನ ಎಲ್ಲದರ ಜೊತೆಗೆ ಈ ನನ್ನ ಪುಟ್ಟ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ.
ಇಲ್ಲಿ ನಾನು ಐದು ವಿಭಿನ್ನ ದೇವ ವಾಕ್ಯ ಶಾಸ್ತ್ರಜ್ಞರ ಅಭಿಪ್ರಾಯವನ್ನ ಪರಿಗಣಿಸಿ ನನ್ನದೇ ಆದಂತಹ ಶೈಲಿಯಲ್ಲಿ ಅದನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ‘ಕ್ರಿಸ್ತದನಿ’ಯ ಆಳವನ್ನು ತಿಳಿಯುವ ಜೊತೆಜೊತೆಗೆ ಆತನನ್ನ ಅರಿಯುವ ಸಂದರ್ಭ ಇದಾಗಿದೆ. ಇಲ್ಲಿ ಕ್ರಿಸ್ತದನಿ ಇದೆ, ಬೈಬಲ್ ವಿದ್ವಾಂಸರ ದನಿ ಇದೆ ನಡು ನಡುವೆ ನನ್ನ ಮೆಲುದನಿಯೂ ಇದೆ.
ಸಂತ ಯೊವಾನ್ನರ ಶುಭಸಂದೇಶ
ಪವಿತ್ರ ಬೈಬಲಿನಲ್ಲಿ ನಾವು ನಾಲ್ಕು ಶುಭಸಂದೇಶಗಳನ್ನು ಕಾಣುತ್ತೇವೆ. ನಾಲ್ಕೂ ಕೂಡ ವಿಭಿನ್ನವಾದದ್ದು. ನಮ್ಮಲ್ಲಿ ಕೆಲವರಿಗೆ ಶುಭಸಂದೇಶ ಓದುವಾಗ ಅನಿಸಬಹುದು ಯಾಕೆ ಈ ನಾಲ್ಕು ರೀತಿಯ ಶುಭಸಂದೇಶ? ಯೇಸುಸ್ವಾಮಿ ಒಬ್ಬರೇ ಆದರೂ, ಅವರ ಜೀವನ, ಮರಣ, ಪುನರುತ್ಧಾನದ ಬಗ್ಗೆ ಬರೆಯುವವರು ಕಂಡಿತವಾಗಿಯೂ ಬೇರೆ ಬೇರೆ ರೀತಿ ಬರೆಯುತ್ತಾರೆ ಅಥವಾ ವಿವರಿಸುತ್ತಾರೆ. ಅದರಲ್ಲಿ ಒಬ್ಬರಿಗೆ ವಾಹನ ಕೇಂದ್ರವಾದರೆ ಅವನು ವಾಹನ ಬಿತ್ತು, ಅದಕ್ಕೆ ನಷ್ಟವಾಯಿತು ಎಂದು ಅದರ ಬಗ್ಗೆ ಹೆಚ್ಚು ಬರೆಯಬಹುದು. ಇನ್ನೊಬ್ಬನಿಗೆ ವ್ಯಕ್ತಿ ಕೇಂದ್ರವಾದರೇ ಅವನ ಸುತ್ತ ನಡೆವಂತಹ ಘಟನೆಯನ್ನ ಬಣ್ಣಿಸುತ್ತಾನೆ.
ಹೀಗೆ ಒಂದೇ ಮನೆಯ ಮಕ್ಕಳಲ್ಲೇ ಇಂತಹ ವ್ಯತ್ಯಾಸ ಕಂಡರೆ ಇನ್ನು ನಾಲ್ಕು ಶುಭಸಂದೇಶವು ಕೂಡ ವಿಭಿನ್ನವಾಗಿದೆ. ಅವರು ಬರೆದಂತಹ ಸಾಲುಗಳಲ್ಲಿ ಅವರ ವ್ಯಕ್ತಿತ್ವ, ಸಮಾಜ, ಸಂಸ್ಕ್ರತಿ, ಸಿದ್ಧಾಂತಗಳ ಅನಾವರಣವಾಗುವುದನ್ನು ನಾವು ಕಾಣಬಹುದಾಗಿದೆ. ಇನ್ನೊಂದು ಗಮನದಲ್ಲಿಡಬೇಕು ಇವರಿಗೆಲ್ಲಾ ಪ್ರೇರಣೆ ಆ ಕ್ರಿಸ್ತನೇ. ದೇವರು ಯಾವಾಗಲೂ ಮಾನವನ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದಿಲ್ಲ. ಮಾನವನ ಸ್ವಂತಿಕೆಯನ್ನು ದೇವರು ಇಚ್ಚಿಸುತ್ತಾರೆ. ಈ ಕಾರಣದಿಂದಲೇ ದೇವರು ನಾಲ್ಕು ಶುಭಸಂದೇಶವನ್ನ ಬರೆಯುವಂತೆ ಮಾಡಿದರು. ಈ ನಾಲ್ಕು ಶುಭಸಂದೇಶಗಳು ಯೇಸು ಸ್ವಾಮಿಯ ಆತ್ಮಕಥನವಾಗಿರದೇ ಇದು ಯೇಸು ಸ್ವಾಮಿಯ ಜನನ, ಜೀವನ, ಮರಣ, ಪುನರುತ್ಧಾನವನ್ನು ಕೇಂದ್ರವಾಗಿ ಇದರ ಹೊರತಾಗಿ ತುಂಬಾ ಬೇರೆ ಬೇರೆ ಶುಭಸಂದೇಶಗಳಿವೆ, ಆದರೆ ಅವು ಯಾವವೂ ಧರ್ಮಸಭೆಯ ಮತ್ತು ಕ್ರಿಸ್ತ ಬೋಧನೆಗೆ ಅನುಗುಣವಾಗಿ ಇರದ ಕಾರಣ ಅದನ್ನು ಧರ್ಮಸಭೆಯು ಅನಧಿಕೃತ ಶುಭಸಂದೇಶಗಳೆಂದು ಹೇಳಿ ಅವನ್ನು ಪವಿತ್ರ ಬೈಬಲಿಗೆ ಸೇರಿಸದೆ ಬಿಟ್ಟಿದ್ದಾರೆ
ಈ ನಾಲ್ಕು ಶುಭಸಂದೇಶಗಳನ್ನು ಅಧಿಕೃತಗೊಳಿಸಲು ಎರಡು ಕಾರಣಗಳಿವೆ. ಒಂದು ಇದು ರಚಿತವಾದ ಕಾಲಘಟ್ಟದ ಆಧಾರದ ಅನುಗುಣವಾಗಿ, ಇನ್ನೊಂದು ಇದನ್ನು ಆದಿ ಧರ್ಮಸಭೆಯು ಪೂಜಾವಿಧಿಗಳಲ್ಲಿ ಬಳಸುತ್ತಿದ್ದದ್ದು. ಇದರ ಆಧಾರದ ಮೇರೆಗೆ ಈ ಶುಭಸಂದೇಶಗಳನ್ನು ಅಧಿಕೃತವೆಂದು ಪರಿಗಣಿಸಲಾಗಿದೆ. ಮೊದಲ ಮೂರು ಶುಭಸಂದೇಶಗಳಿಗಿಂತ ನಾಲ್ಕನೇ ಶುಭಸಂದೇಶ ಅಂದರೆ ಸಂತ ಯೊವಾನ್ನರ ಶುಭಸಂದೇಶ ತುಂಬಾ ವಿಭಿನ್ನವಾಗಿದ್ದರಿಂದ ಇದನ್ನು ಸೇರಿಸಬಾರದು ಎಂದು ಕೆಲವರ ಅಭಿಪ್ರಾಯವಿತ್ತು.
No comments:
Post a Comment