ಗವುದೆತೆ ಎತ್ ಎಕ್ಸುಲ್ತಾತೆ
ಪೋಪ್ ಪ್ರಾನ್ಸಿಸ್ ನವರ ಪ್ರೇಷಿತ ಪತ್ರದ ಬಗ್ಗೆ ಕಿರು ಚಿಂತನೆ
ಭಾಗ 2
¨ ನವೀನ್ ಮಿತ್ರ, ಬೆಂಗಳೂರು
ಪಾವಿತ್ರ್ಯದ ದ್ವಿ-ಶತ್ರುಗಳು
ಪೋಪ್ ಫ್ರಾನ್ಸಿಸ್ ನವರು ಅವರ ಪ್ರೇಷಿತ ಪತ್ರ - ಗವುದೆತೆ ಎತ್ ಎಕ್ಸುಲ್ತಾತೆಯ ಎರಡನೆಯ ಭಾಗದಲ್ಲಿ ವಿಭಿನ್ನ ರೀತಿಯಲ್ಲಿ ಎರಡು ಮುಖ್ಯ ಆಧ್ಯಾತ್ಮಿಕ ತೊಡಕುಗಳನ್ನು ನಮ್ಮ ಮುಂದೆ ಇಡುತ್ತಾರೆ. ಈ ಎರಡೂ ಪ್ರಕ್ರಿಯೆಗಳು ತತ್ವಶಾಸ್ತ್ರಕ್ಕೆ ಹೊಂದಿರುವಂತದ್ದು. ಇದರ ಸಲುವಾಗಿ ನಾವು ಕ್ರೈಸ್ತ ಜೀವಿಗಳಾಗಿ ಹೇಗೆ ನಮ್ಮ ಜೀವನದಲ್ಲಿ ಈ ತೊಡುಕುಗಳನ್ನು ಎದುರಿಸಬಹುದು ಎಂಬುದನ್ನು ಇಲ್ಲಿ ವಿವರಣಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಅಧ್ಯಾತ್ಮ ಜೀವನಕ್ಕೆ ಮೂಲ ಪಾವಿತ್ರ್ಯ, ಇದರ ಮೂಲ ದ್ವಿ-ಶತ್ರುಗಳು ಎಂದರೆ ನಾಸ್ಟಿಸಿಸಮ್ ಮತ್ತು ಪೆಲಾಜಿಯನಿಸಮ್. ನಾಸ್ಟಿಸಿಸಮ್ ಎಂದರೆ ಕ್ಷುದ್ರದೇವತಾ ಪೂಜೆ ಅಥವಾ ಸಿದ್ಧಾಂತ, ಪೆಲಾಜಿಯನಿಸಮ್ ಎಂದರೆ ಜನ್ಮಪಾಪ ಇಲ್ಲವೆಂಬ ತತ್ವ. ಈ ಎರಡು ಸಿದ್ಧಾಂತಗಳನ್ನು ಆದಿ ಧರ್ಮಸಭೆಯ ಕಾಲದಿಂದಲೂ ಧರ್ಮಸಭೆಗೆ ವಿರುದ್ಧವಾದ ಅಭಿಪ್ರಾಯಗಳು ಎಂದು ಪರಿಗಣಿಸಲಾಗಿದೆ. ಆದರೂ ಇಂದಿನ ವರ್ತಮಾನ ಧರ್ಮಸಭೆಗೆ ಇವುಗಳೇ ವಿಷದ ಕೊಂಡಿಗಳಾಗಿವೆ.
ಕ್ರೈಸ್ತರನ್ನು ಯಾರು ಬೇಕಾದರೂ ಹೇಗಾದರೂ ತಲೆಕೆಡಿಸಬಹುದು. ಏಕೆಂದರೇ ಕೆಲವರು ದೃಢ ವಿಶ್ವಾಸದಲ್ಲಿ ಜೀವಿಸುತ್ತಿರುವುದಿಲ್ಲ, ಇಂತಹ ಸಿದ್ಧಾಂತಗಳು ಅವರ ಕಿವಿಗೆ ಬಿದ್ದೊಡನೆಯೇ ಅದನ್ನು ನಂಬಿ ವಿಶ್ವಾಸರಹಿತರಾಗುತ್ತಾರೆ. ಇಂದಿನ ಪೀಳಿಗೆ ವಿದ್ಯಾಜ್ಞಾನವುಳ್ಳ ಪೀಳಿಗೆಯಾಗಿದೆ. ಜ್ಞಾನವನ್ನು ತಿಳಿದಿದ್ದವರು ದೇವರ ಅಸ್ತಿತ್ವವನ್ನೇ ಪ್ರಶ್ನಿಸುವಂತವರಾಗುತ್ತಾರೆ. ಉದಾಹರಣೆಗೆ ಕೇರಳದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದ ಹಾಗೂ ಪ್ರವಾಹ ಅವಘಡಗಳಿಂದ ಪರಿಸ್ಥಿತಿ ಹದಗೆಟ್ಟದೆ.
ಈ ಪ್ರಕೃತಿ ವಿಕೋಪ ಜನರ ಮನಸ್ಸಿನಲ್ಲಿ ದೇವರ ಅಸ್ತಿತ್ವವನ್ನೇ ಪ್ರಶ್ನೆ ಮಾಡುವ ಹಾಗೆ ಮಾಡಬಹುದು, ಅಥವಾ ದೇವರೇ ಈ ಪ್ರಕೃತಿ ವಿಕೋಪಕ್ಕೆ ಕಾರಣವೆಂದು ನಿರ್ಧರಿಸಬಹುದು. ಇಂತಹ ಮತಿಹೀನ ತತ್ವಗಳು ಒರ್ವ ಶುದ್ಧ ಕ್ರೈಸ್ತ ವಿಶ್ವಾಸಿಗೆ ವಂಚನೆಯ ಚಿಹ್ನೆಯಾಗುತ್ತಲೇ ಬರುತ್ತದೆ. ಈ ಎರಡು ಸೈದ್ಧಾಂತಿಕ ವಿಷಯಗಳು ಹಾಗೂ ಶಿಸ್ತುಗಳು ಆತ್ಮರತಿಯ ಹಾಗೂ ಸ್ವಾರಾಧನಾ ಪ್ರವೃತ್ತಿಯ ಏರಿಕೆಗೆ ಎಡೆ ಮಾಡಿಕೊಡುತ್ತದೆ. ಈ ವಿರುದ್ಧ ತತ್ವಗಳ ಮೇರೆಗೆ ನಡೆದರೆ ಅದು ವಿಶೇಷವಾಗಿ ನಮ್ಮ ಧಾರ್ಮಿಕ ವ್ಯಕ್ತಿಗಳ ಧರ್ಮಪ್ರಚಾರದ ಕೆಲಸ ಕಾರ್ಯಗಳು, ಕ್ರಿಸ್ತನ ನಾಮದಲ್ಲಿ ಮಾಡಬೇಕಾದ ಕಾರ್ಯಗಳು ಎಲ್ಲವನ್ನೂ ವಿಫಲಗೊಳಿಸುತ್ತದೆ ಎಂಬುದು ಪೋಪ್ ಫ್ರಾನ್ಸಿಸ್ ನವರ ನಂಬಿಕೆ
ಈ ನಾಸ್ಟಿಕ್ ತತ್ವವು ತಿಳಿಯದೆಯೇ ಅಭ್ಯಾಸಕ್ಕೆ ಒಳಗಾಗುವಂತದ್ದು. ಇದನ್ನು ಅರಿತುಕೊಳ್ಳುವುದು ಬಹಳ ಕಷ್ಟ. ನಾಸ್ಟಿಕ್ ಜೀವನ ಹೇಗಿರುತ್ತದೆ ಎಂದರೆ, ಕೇವಲ ಅಲ್ಪ ಮಾಹಿತಿಗಳಿಂದ, ಅಲ್ಪ ತಿಳುವಳಿಕೆಗಳಿಂದ, ಅಲ್ಪ ವಿಶ್ವಾಸವನ್ನು ಹುಟ್ಟಿಸಿಕೊಂಡು ನಾನು ಕ್ರೈಸ್ತನೆಂದು ಅರ್ಥ ಮಾಡಿಕೊಳ್ಳುವುದು. ಇನ್ನೊಂದು ರೀತಿಯಲ್ಲಿ ಈ ಕ್ರೈಸ್ತ ವಿಶ್ವಾಸಿ ಭಾನುವಾರ ಕ್ರೈಸ್ತನಾಗಲು ಮುಂದಾಗುತ್ತಾನೆ. ಬೇರೆ ದಿನಗಳಲ್ಲಿ ಆತನಿಗೆ ಏನೂ ತಿಳಿದಿರದು, ಕೆಲವರು ದೀಕ್ಷಾಸ್ನಾನಕ್ಕೆ, ಪ್ರಥಮ ಪರಮಪ್ರಸಾದಕ್ಕೆ, ಮದುವೆಗೆ ಬಿಟ್ಟರೆ ಮತ್ತೆ ಚರ್ಚನ್ನು ಹುಡುಕಿ ಬರೋದು ಸಾವು ಬಂದಾಗ ಮಾತ್ರ. ಇದೇ ಹಲವು ಕ್ರೈಸ್ತ ವಿಶ್ವಾಸಿಗಳ ಬದುಕುವ ರೀತಿಯಾಗಿದೆ. ಇಂತಹ ಮನೋಭಾವ ನಮ್ಮನ್ನು ನಾಸ್ತಿಕರಂತೆ ಮಾಡಿಬಿಡುತ್ತದೆ. ಈ ರೀತಿಯ ಅನುಭವಗಳು, ಮಾಹಿತಿಗಳು ನಮ್ಮ ವಿಶ್ವಾಸವನ್ನು ಹೆಚ್ಚಿಸಬಹುದು ಆದರೆ ಎಲ್ಲೋ ಒಂದು ಕಡೆ ಒರ್ವ ವಿಶ್ವಾಸಿ ತನ್ನ ಜೀವನದ ಚೌಕಟ್ಟಿನಲ್ಲಿ ತನ್ನನ್ನು ತಾನೇ ಬಂಧಿಸಿ ಕೊಳ್ಳುತ್ತಾ ಹೋಗುತ್ತಾನೆ. ಅವನ ಚಿಂತನೆಗಳೇ ಅವನ ಕೈ ಬೇಡಿಗಳಾಗುತ್ತಲಿರುತ್ತವೆ.
ಚರ್ಚ್ ಇತಿಹಾಸದಲ್ಲೇ ಹೇಳಿರುವಂತೆ, ಒರ್ವ ಜ್ಞಾನಿಯ ಪರಿಪೂರ್ಣತೆ ಕಾಣಿಸುವುದು ಆತ ಸೃಷ್ಟಿಸಿ ಸ್ವಾಧೀನ ಪಡಿಸಿಕೊಂಡಿರುವ ಮಾಹಿತಿಯಿಂದಲ್ಲ ಬದಲಿಗೆ ಆತ ಮಾಡಿರುವ ತ್ಯಾಗಗಳಿಂದ ಹಾಗೂ ದಾನಧರ್ಮಗಳಿಂದ. ನಾಸ್ಟಿಕ್ ಮನೋಭಾವವುಳವರು ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಅವರಿಗೆ ದಾನ ಮಾಡುವುದರ ಬಗ್ಗೆ ಅರಿವೇ ಇರುವುದಿಲ್ಲ. ಅವರ ವಿವೇಚನೆಗಳು ಅವರು ಅರ್ಥ ಮಾಡಿಕೊಳ್ಳಲು ಇರುವ ಸಾಮರ್ಥ್ಯದ ಮೇಲೆ ಇರುತ್ತದೆ. ಕೆಲವು ಚರ್ಚ್ ಸಿದ್ಧಾಂತಗಳನ್ನು ಸಂಕೀರ್ಣವಾಗಿ ಕಾಣುವುದಲ್ಲದೆ ಅದನ್ನು ವಿಶ್ವಾಸಿಸಲು ಬಹಳ ಕಠಿಣವಾಗಿಸಿಕೊಳ್ಳುತ್ತಾರೆ. ಅವರ ಅರಿವಿನಂತೆ ಜ್ಞಾನಿಯು ದೇಹದಿಂದ ಪ್ರತ್ಯೇಕತೆ ಇರಿಸಿಕೊಂಡಿರುತ್ತಾನೆ ಎಂದು ವಾದಿಸುತ್ತಾರೆ.
ಈ ದೇಹದಿಂದ ಆತ್ಮವನ್ನು ನಾವು ಪ್ರತ್ಯೇಕವೆಂದು ಗ್ರಹಿಸಿದಾಗ ಅರಿವು ಅಥವಾ ಜ್ಞಾನ ಮೂಡಲು ಹೇಗೆ ತಾನೆ ಸಾಧ್ಯ? ಇಂತಹ ಅಜ್ಞಾನವು ಕ್ರಿಸ್ತನಿಂದ ನಮ್ಮನ್ನು ದೂರವಿಡಲು ಮುಂದಾಗುತ್ತವೆ. ನಾವು ಪರರ ನೋವನ್ನುಅರ್ಥ ಮಾಡಿಕೊಳ್ಳದಿರುವಂತೆ ಮಾಡುತ್ತದೆ. ಪರರ ನೋವಿನಲ್ಲಿ ಕ್ರಿಸ್ತನ ನೋವು ಸಹ ಇದೆ ಆತನ ಯಾತನೆ ಪರರ ಕಣೀರಲ್ಲಿ ನನಗೆ ಕಾಣಿಸುವುದು ಎಂದು ತಿಳಿದು ಪರರ ಒಳಿತಿಗಾಗಿ ಸೇವೆ ಸಲ್ಲಿಸುವವನು ನಾಸ್ಟಿಕ್ ತತ್ವಕ್ಕೆ ಸೀಮಿತನಲ್ಲ.
ಅವರ ಈ ಚಿಂತನೆಗಳು ಕ್ರಿಸ್ತನ ದೇಗುಲವನ್ನೆ ಬಿರುಕು ಮಾಡುವಂತದ್ದು, ದೇವರಲ್ಲಿ ಕ್ರಿಸ್ತನಿಲ್ಲದಂತೆ, ಕ್ರಿಸ್ತನಲ್ಲಿ ದೇವಾಲಯ ಇಲ್ಲದಂತೆ, ದೇವಾಲಯದಲ್ಲಿ ಶ್ರೀಸಾಮಾನ್ಯರು ಇಲ್ಲದಂತೆ. ಅವರ ಆಚಾರ ವಿಚಾರಗಳಲ್ಲಿ ಖಂಡಿತವಾಗಿಯೂ ಬಾಹ್ಯ ಕಲ್ಪನೆಗಳು ಅತಿ ಹೆಚ್ಚು ಎದ್ದು ಕಾಣಿಸುತ್ತವೆ, ಅವಿಶ್ವಾಸಕ್ಕೆ ಎಡೆ ಮಾಡಿಕೊಡುವ ಚಲನವಲನಗಳು ನಡೆಯತ್ತವೆ, ಮಾನವನ ಮನಸ್ಸಿನ ಮೇಲೆ ಬಾರಿ ಪ್ರಮಾಣದ ಖಿನ್ನತೆ ಕಾಣಿಸುತ್ತದೆ. ಅದು ಇಲ್ಲ ಇದು ಇಲ್ಲ ಎಂಬ ಮನೋಭಾವ ಯಾವಾಗಲೂ ಪ್ರತಿದ್ವನಿಸುತ್ತದೆ. ಕೆಲವರಿಗೆ ಅವಿಶ್ವಾಸ ನಾಸ್ಟಿಕ್ ಜೀವನ ಬಹಳ ಆಕರ್ಷಕವಾಗಿ ಕಾಣುತ್ತದೆ.
ಶತ್ರು ಭಾವದ ತರ್ಕ ಜ್ಞಾನಚಿಂತನೆಯೆಂದು ನಾನು ಕರೆಯುತ್ತಿಲ್ಲ, ಬದಲಿಗೆ ಧರ್ಮಸಭೆಯ ಒಳಗೆ ಇಂತಹದೊಂದು ಅನಿವಾರ್ಯತೆಯು ಸಹ ಸುಳಿಯಬಹುದು ಎಂದು ಹೇಳುತ್ತಿದ್ದೇನೆ. ಯಾಜಕವರ್ಗದವರನ್ನು ಮಾತ್ರ ಏಕೆ ಎಲ್ಲದಕ್ಕೂ ಗುರಿ ಮಾಡುವಿರಿ, ಕ್ರೈಸ್ತರಾಗಿ ದೀಕ್ಷಾಸ್ನಾನಾರ್ಥಿಗಳಾಗಿ ನಾವೇನು ಮಾಡಿದ್ದೇವೆ? ಕೆಲವೊಮ್ಮೆ ನಮ್ಮ ಜೀವನವು ಇಂತಹ ಸುಳಿಗೆ ಸಿಕ್ಕಿಕೊಳ್ಳಬಹುದು, ಯಾಜಕವರ್ಗವೇ ಆಗಲಿ, ಶ್ರೀಸಾಮಾನ್ಯ ವರ್ಗವೇ ಆಗಲಿ, ಗುರುಮಠದಲ್ಲಿ ತತ್ವ ಸಿದ್ಧಾಂತಗಳನ್ನು, ದೈವಶಾಸ್ತ್ರವನ್ನು ಬೋಧಿಸುವ ಗುರುಗಳೇ ಆಗಿರಲಿ, ಗುರು ಅಭ್ಯರ್ಥಿಗಳೇ ಆಗಿರಲಿ... ಎಲ್ಲರೂ ಒಂದೊಮ್ಮೆ ಇಂತಹ ನಿಲುವಿಗೆ ಸೇರುತ್ತಾರೆ.
ನಾಸ್ಟಿಕ್ ಮನೋಭಾವ ಉಳ್ಳವರು ಶುಭಸಂದೇಶವನ್ನು ಸಮಗ್ರವಾಗಿ ಅರಿತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ವಿಫಲವಾಗಿರುತ್ತದೆ. ಅವರ ಚಿಂತನೆಗಳನ್ನು ಹೂಡಿ ಪರರಿಗೆ ಆ ಚಿಂತನೆಗಳು ಸತ್ಯವೆಂದು ಬೋಧಿಸುತ್ತಾರೆ. ಬಲವಂತವಾಗಿ ಅವರಿಗೆ ನಂಬಿಕೆಯನ್ನು ಮೂಡಿಸಿ ತಮ್ಮ ಅಜ್ಞಾನ ಅನುಭವವನ್ನು ಮುಂದಿಡುತ್ತಾರೆ. ನಾಸ್ಟಿಕ್ ಭಾವನೆಯನ್ನು ಹೇಗೆ ಎದುರಿಸುವುದೆಂದರೇ ಶುಭಸಂದೇಶ ಬೋಧನೆಯನ್ನು ಮಾಡುವಾಗ ಕ್ರಿಸ್ತನ ಬೋಧನೆಗಳನ್ನು ಕಠಿಣ ತರ್ಕಕ್ಕೆ ಒಳಪಡಿಸದೆ ಹಾಗೂ ಕ್ರಿಸ್ತನ ಬಗ್ಗೆ ಎಲ್ಲದರ ಮೇಲೆ ಪ್ರಾಬಲ್ಯ ಹೂಡದಿರುವಂತೆ ನಮ್ಮ ಬೋಧನೆಗಳಾಗಬೇಕು. ನಾಸ್ಟಿಕ್ ಮನೋಭಾವ ತನ್ನದೇ ಅನಿವಾರ್ಯ ನಿರ್ಧಾರಗಳನ್ನು ದೃಷ್ಟಿಕೋನಗಳನ್ನು ಸತ್ಯವೆಂದು ಪರಿಗಣಿಸುತ್ತಾ ಹೋಗುತ್ತದೆ.
ಯಾರಾದರೂ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಟ್ಟುಕೊಂಡಿದ್ದರೆ ಅವರು ಸರಿದಾರಿಯಲ್ಲಿ ಹೋಗುತ್ತಿಲ್ಲವೆಂಬುದು ನಿಶ್ಚಿತ. ಎಲ್ಲದಕ್ಕೂ ಉತ್ತರಿಸುವವನು ಸುಳ್ಳಿನ ಪ್ರವಾದಿಯೂ ಆಗಿರಬಹುದು. ಕೆಲವರು ಧರ್ಮವನ್ನು ಅಧಿಕೃತವಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ. ದೇವರು ನಮ್ಮನ್ನು ಮೇಲೆತ್ತುತ್ತಾರೆ ನಮಗೆ ನವಜೀವನ ದೊರಕಿಸಿ ಕೊಡುತ್ತಾರೆ. ಅತನ ಸಾನ್ನಿಧ್ಯವು ಅನಿರಿಕ್ಷಿತವಾದದು. ಆತನ ಸಂಭವ ಹೇಗೆ ಆತನ ಭೇಟಿ ಎಲ್ಲಿ ಯಾರಿಗೂ ತಿಳಿಯದು. ಎಲ್ಲವೂ ನಿಗೂಢದೊಳಗೆ ನಿಗೂಢ. ಯಾರಾದರೂ ದೇವರ ಬಗ್ಗೆ ಅತಿ ವಿಶ್ವಾಸವಿರುವವನು ಆತನ ಅಸ್ತಿತ್ವವನ್ನು ಪ್ರಶ್ನಿಸದೆ ಆತನ ಬರುವಿಕೆಗಾಗಿ ದೀನತೆಯಿಂದ ಕಾದಿರುತ್ತಾನೆ. ನಮ್ಮ ಬಲಹೀನತೆಗಳಲ್ಲಿ ದೇವರಿದ್ದಾನೆ, ಕಷ್ಟ ತೊಂದರೆಗಳಲ್ಲಿ ದೇವರಿದ್ದಾನೆ, ಅದರಿಂದ ನಮ್ಮನ್ನು ರಕ್ಷಿಸುತ್ತಾನೆ ಎಂಬ ಮನೋಭಾವವು ನಮ್ಮನ್ನ ವಿಶ್ವಾಸಾರ್ಹ ಸದೃಢತೆಗೆ ಕರೆದೊಯ್ಯುತ್ತದೆ. ಪ್ರತಿಯೊಬ್ಬರಲ್ಲೂ ದೇವರು ನೆಲೆಸಿದ್ದಾನೆ. ಈ ಪರಿಯನ್ನು ಆಯ್ಕೆ ಮಾಡಿರುವುದು ದೇವರೇ ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡದೆ ಆತ ದೇವರೆಂದು ನಂಬಿ ವಿಶ್ವಾಸಿಸಿರಿ. ಅನಿವಾರ್ಯತೆಯಿಂದ ನಂಬಿದರೆ ನೀವು ನಾಸ್ತಿಕ ವ್ಯಕ್ತಿಗಳಾಗುತ್ತೀರಿ. ಅನುಭವಗಳಿಂದ ನೀವು ನಂಬಿದರೆ ನೀವು ಕ್ರೈಸ್ತ ವಿಶ್ವಾಸಿಗಳಾಗುತ್ತೀರಿ. ಪರರಲ್ಲಿ ಕ್ರಿಸ್ತನನ್ನು ಕಾಣುವುದಾದರೆ ಅವರಿಗೆ ಸೇವೆ ಸಲ್ಲಿಸುವುದಾದರೆ ಅದುವೇ ಕ್ರೈಸ್ತಧರ್ಮ. ನಾಸ್ಟಿಕ್ ಮನೋಭಾವದವರು ಇದೆಲ್ಲವನ್ನು ಒಪ್ಪದೆ, ಪರರಲ್ಲಿ ಕ್ರಿಸ್ತನನ್ನು ಕಾಣುವುದಕ್ಕೆ ಹಿಂಜರಿಯುತ್ತಾರೆ. ದೇವರನ್ನು ಅರ್ಥ ಮಾಡಿಕೊಳ್ಳಲು, ಆತನ ಸತ್ಯ ತಿಳಿಯಲು ನಮ್ಮ ಮೆದುಳು ಅಲ್ಪವಾಗಿದೆ, ದೈವತ್ವದ ಪರಿಕಲ್ಪನೆಯೇ ನಿಗೂಢ. ನಾಸ್ಟಿಕ್ ಮನೋಭಾವ ಧರ್ಮಸಭೆಯನ್ನು ಇಬ್ಬಾಗಿಸುತ್ತದೆ. ಅದು ಬಹಳ ಅಪಘಾತಕ್ಕೆ ಈಡಾಗುತ್ತದೆ. ನಾಸ್ಟಿಕ್ ತತ್ವ ದೇವರು ಮಾನವರಾಗಿದ್ದನ್ನು, ಹಾಗೂ ತ್ರಯೇಕ ದೇವರ ಪರಿಕಲ್ಪನೆಗಳನ್ನು ಬದಲಾಯಿಸಲು ಹೊರಟಿದೆ. ನಾವು ಇದರ ಬಗ್ಗೆ ಎಚ್ಚರವಾಗಿರಬೇಕು, ತ್ರಯೇಕ ದೇವರಿಗಿಂತ ಉನ್ನತ ಒಮ್ಮತ ಬೇರೊಂದಿಲ್ಲ. ಅದನ್ನು ಪ್ರಶ್ನಿಸಿ ಮತಿಹೀನರಾಗುತ್ತಾರೆ. ನಮ್ಮ ಧರ್ಮಸಭೆಯ ಮೂಲ ಅಡಿಪಾಯವೇ ಈ ತ್ರಯೇಕ ದೇವರ ಮೇಲಿನ ವಿಶ್ವಾಸ ಮತ್ತು ನಂಬಿಕೆ.
ಧರ್ಮಪ್ರಚಾರ ಮಾಡುವವರು, ಮಕ್ಕಳಿಗೆ ಬೋಧಿಸುವವರು, ಶಿಕ್ಷಕರು ಎಲ್ಲರು ಸಿದ್ಧಾಂತಗಳನ್ನು ಅವರಿಗೆಲ್ಲಾ ಅರ್ಥೈಸುವುದನ್ನು ಬಿಟ್ಟು ಬೈಬಲ್ ಸುಸಂದೇಶವನ್ನು ಅವರಿಗೆ ಮನಗಾಣಿಸಬೇಕಿದೆ. ನಾವು ಕೆಲವು ಸಿದ್ಧಾಂತಗಳನ್ನು ಅರಿತು, ಸ್ವಲ್ಪ ಧರ್ಮಸಭೆಯ ಬಗ್ಗೆ ಜ್ಞಾನವನ್ನು ಪಡೆದು ಎಲ್ಲವನ್ನು ಬಲ್ಲೆ ದೇವರನ್ನ ಬಲ್ಲೆ ಎಂಬ ಮನೋಭಾವ ಹುಟ್ಟಬಹುದು, ಇದು ಒಳ್ಳಯದಲ್ಲ. ಇವರನ್ನ "ಅರಿವಿಲ್ಲದ ಜನಸಾಮಾನ್ಯರು" ಎಂದು ಸಂತ ಪೋಪ್ ದ್ವಿತೀಯ ಜಾನ್ ಪಾಲ್ ರವರು ಕರೆಯುತ್ತಾರೆ. ನಾವು ದೈವ ಶಾಸ್ತ್ರವನ್ನು ಕಲಿಯುವುದು ಮಾತ್ರವಲ್ಲ ಅದನ್ನು ಅಭ್ಯಾಸಿಸಬೇಕು. ದೈವಶಾಸ್ತ್ರ ಪಾವಿತ್ರ್ಯ ಒಟ್ಟೊಟ್ಟಿಗೆ ಸಮತೋಲನವಾಗಿ ಸಾಗಬೇಕು. ನಾವು ಏನು ಯೋಚಿಸುತ್ತೇವೆ ಅದು ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡದೆ ದೇವರ ಪ್ರೀತಿಗೆ ಆಧಾರವಾಗುವಂತಿರಬೇಕು.
ಅಸಿಸಿಯಾದ ಸಂತ ಫ್ರಾನ್ಸಿಸ್ ನವರು ತಮ್ಮ ಸಭೆಯನ್ನು ಸ್ಥಾಪಿಸಿದ ನಂತರ ಕೆಲವು ದಿನಗಳಲ್ಲಿ ಅವರ ಸಭೆಯ ಸದಸ್ಯರು ನಾಸ್ಟಿಕ್ ವ್ಯಕ್ತಿಗಳಾಗಿ ಬದಲಾಗುತ್ತಿದ್ದುದ್ದನ್ನು ಗಮನಿಸಿದರು. ತಟ್ಟನೆ ಅವರು ಹೇಗೆ ಈ ನಾಸ್ಟಿಕ್ ಶೋಧನೆಯನ್ನು ಹೋಗಲಾಡಿಸುವುದೆಂದು ಪತ್ರ ಬರೆಯತ್ತಾರೆ. ಸಂತ ಬೊನವೆಂಚರ್ ನವರು ಹೇಳುತ್ತಾರೆ, ನಿಜ ಕ್ರೈಸ್ತನು ಹಾಗೂ ಜ್ಞಾನಿಯಾಗಿರುವವನು ಪರರಿಗೆ ಹಿಂಜರಿಯದೆ ದಾನ ಮಾಡುತ್ತಾನೆ. ಪರರಿಗೆ ದಯೆ ತೋರುವುದು ಜ್ಞಾನಿಯ ಬದುಕು, ಹಣದಾಹದಿಂದ ಪರರನ್ನು ಹೀನಾಯವಾಗಿ ಕಾಣುವುದು ಶತ್ರುವಿನ ಬದುಕು. ಶತ್ರುಗಳಾಗಿ ವರ್ತಿಸದೆ ಭಕ್ತಿ ಮತ್ತು ದಯೆಯನ್ನು ಪರರಿಗೆ ಹಂಚಿ ಬದುಕಿರಿ.
ಕಾಲ ಕಳೆದಂತೆ ಎಲ್ಲರಿಗೂ ತಿಳಿದು ಬರಲಿ, ಜ್ಞಾನದಿಂದ ಒರ್ವ ಸಂತನಾಗಲು ಸಾಧ್ಯವಿಲ್ಲ, ಬದುಕಿದ ಬದುಕು ಆತನನ್ನು ಸಂತನಾಗಿಸುತ್ತದೆ. ನಾಸ್ಟಿಕ್ ಮನೋಭಾವದಂತೆ ಇನ್ನೊಂದು ಅಪಸಿದ್ಧಾಂತ ಪೆಲಾಜಿಯನಿಸ್ಟಿಕ್ ಸಿದ್ಧಾಂತ. ದೀನತೆ ಇಲ್ಲದ ಮನಸ್ಸು ಈ ಪೆಲಾಜಿಯನಿಸ್ಟಿಕ್ ಮನೋಭಾವಕ್ಕೆ ಒಳಗಾಗಿಸುತ್ತದೆ. ಪೆಲಾಜಿಯನಿಸ್ಟಿಕ್ ಮನೊಭಾವವುಳ್ಳವರು ದೇವರನ್ನು ನಂಬುತ್ತಾರೆ, ಆದರೆ ಗರ್ವದಿಂದ ಅಧಿಕಾರದದರ್ಪ ಅವರಲ್ಲಿ ಎದ್ದು ಕಾಣುತ್ತಿರುತ್ತದೆ. ಅವರು ಶುಭಸಂದೇಶವನ್ನು ಬೋಧಿಸುತ್ತಾರಾದರೂ ಅವರ ಜೀವನದಲ್ಲಿ ಸ್ವ-ಪ್ರಾಧಾನ್ಯತೆ ತೋರಿಸುತ್ತಿರುತ್ತಾರೆ. ಯಾರಾದರೂ ಅವರ ಬಳಿ ಬಂದು ಎಲ್ಲವೂ ದೇವರಿಂದಲೇ ಸಾಧ್ಯವೆಂದು ಹೇಳಿದರೆ, ಒಳಗೊಳಗೆ ಅಂತರಾಳದಲ್ಲಿ "ಇಲ್ಲ, ಎಲ್ಲವೂ ಮಾನವನಿಂದ ಸಾಧ್ಯವೆಂಬ" ಧ್ವನಿ ಅವರಲ್ಲಿ ಮಾರ್ದನಿಸುತ್ತಿರುತ್ತದೆ. ಸಂತ ಅಗಸ್ತೀನರು ಹೇಳುತ್ತಾರೆ, " ದೇವರು ನಿಮ್ಮಲ್ಲಿ ಯಾವುದನ್ನು ಮಾಡಲು ಸಾಧ್ಯವಿರುತ್ತದೋ ಅದನ್ನೇ ಮಾಡಿಸುತ್ತಾನೆ, ಯಾವುದನ್ನು ಮಾಡಲು ಅಸಾಧ್ಯವಾಗುತ್ತದೋ ಅದನ್ನು ಅವನಲ್ಲಿ ಕೇಳಿರಿ." ಎಂದು. ನಮ್ಮ ಪ್ರಾರ್ಥನೆಯಿಂದ ನಾವು ದೇವರಲ್ಲಿ ಏನನ್ನಾದರೂ ಪಡೆಯಬಹುದು. ಏನೇ ಆದರೂ ನಮ್ಮ ಪ್ರಾರ್ಥನೆಯೇ ನಮಗೆ ದೇವರೊಡನೆ ನಿಜ ಸತ್ಸಂಬಂಧ ಬೇಳೆಸುವುದು. ಆದ್ದರಿಂದ ಪ್ರಾರ್ಥನೆ ನಮ್ಮ ಜೀವನದ ಮೂಲವಾಗಬೇಕು.
ನಮಗೆ ದೊರಕಿರುವ ಅನುಗ್ರಹ ನಮ್ಮನ್ನು ತಕ್ಷಣವೇ ಮನುಷ್ಯಾತೀತ ಆಗಿಸುವುದಿಲ್ಲ, ಬದಲಿಗೆ ಆ ರೀತಿಯ ಚಿಂತನೆಗಳು ನಮ್ಮ ದೇವರೊಡನೆಯ ಸತ್ಸಂಬಂಧದ ಬೆಳವಣಿಗೆಗೆ ಆಧಾರವಾಗಬೇಕು. ನಮ್ಮ ಸಂಪ್ರದಾಯ, ನಮ್ಮ ಮನೋಭಾವಗಳು, ಆಚಾರ ವಿಚಾರಗಳು ನಮ್ಮ ನಡೆಗೆ ನುಡಿಗೆ ಹೋಲದೆ ಇರಬಹುದು. ಅದನ್ನು ನಾವು ಗಹಿಕೆಗೆ ತಂದುಕೊಂಡು ನಾವು ಹೇಗೆ ನಮ್ರರಾಗಬೇಕು ಎಂಬುದು ಬಹಳ ಮುಖ್ಯವಾಗಿದೆ. ದೇವರ ಅನುಗ್ರಹಗಳು ಇತಿಹಾಸದ ಪುಟ ಸೇರಿದ್ದುಂಟು, ಹಾಗೂ ಅವು ನಮ್ಮ ಜೀವನದ ಮೇಲೆ ಬಹಳವಾಗಿ ಪ್ರಾಬಲ್ಯ ಹೊಂದಿರುವುದು ನಿಜ, ನಾವು ಇಂತಹ ಪ್ರಾಬಲ್ಯತೆಯಿಂದ ಉತ್ತಮ ಕ್ರೈಸ್ತರಾಗಿ ಬೆಳೆಯುತ್ತಿರುವುದೂ ನಿಜ.
ದೇವರು ಅಬ್ರಹಾಮನಿಗೆ ಹೇಳಿದಂತೆ, "ನಾನು ನಿನ್ನ ದೇವರಾದ ಸರ್ವೇಶ್ವರ ನನ್ನ ಮುಂದೆ ನಿರ್ದೋಷಿಯಾಗಿ ನಡೆದು ಬದುಕು" (ಆದಿ ೧೭:೧). ನಿರ್ದೋಷಿಯಾಗಿ ಬದುಕ ಬೇಕಾದರೆ ನಾವು ವಿನಮ್ರರಾಗಿ ದೇವರ ಮಂದೆ ಬದುಕಬೇಕು, ವಿನಮ್ರತೆಯು ದಯೆ, ದೀನತೆ ಹಾಗೂ ಮಾನವೀಯ ಸದ್ಗುಣಗಳನ್ನು ಹೊಂದಿರುವಂತದ್ದು. ದೇವರೊಡನೆ ಆತನಂತೆ ನಿರ್ದೋಷಿಗಳಾಗಿ ಬದುಕಿ, ಆತನ ಘನತೆಯೊಂದಿಗೆ ಜೀವಿಸಿ, ಆತನ ಐಕ್ಯತೆಯಲ್ಲಿ ಪಾಲುಗಾರರಾಗಿ ನಮ್ಮ ಹೆಜ್ಜೆಗಳು ಸಾಗಬೇಕು. ನಾವು ಆತನ ಸಾನ್ನಿಧ್ಯದ ಮುಂದೆ ಭಯವನ್ನು ಬಿಟ್ಟು ಒಳಿತನ್ನ ಕಂಡುಕೊಳ್ಳಬೇಕು.
ದೇವರು ನಮ್ಮ ತಂದೆ ಆತ ನಮ್ಮನ್ನು ಸೃಷ್ಟಿಸಿ ನಮ್ಮನ್ನು ಪ್ರೀತಿಸಿದ್ದಾನೆ. ಒಮ್ಮೆ ಅವನನ್ನು ನಾವು ಅಂತರಾಳದಿಂದ ಒಪ್ಪಿದಲ್ಲಿ ನಮ್ಮ ಜೀವನ ಸಾಫಲ್ಯವನ್ನು ಕಂಡುಕೊಳ್ಳುತ್ತದೆ. ನಾವು ಅವನಿಂದ ದೂರ ಆದ ಕೂಡಲೇ ನಾವು ಕೋಪಕ್ಕೆ ಆಕ್ರೋಶಕ್ಕೆ ಬಲಿಯಾಗಿ ನೆಮ್ಮದಿ ಹದಗೆಟ್ಟು ಒಂಟಿತನದಲ್ಲಿ ಕಣ್ಮರೆಯಾಗುತ್ತೇವೆ. (ಕೀರ್ತನೆ ೧೩೯:೨೩,೨೪). ನಾವು ಈ ರೀತಿ ನಡೆದುಕೊಂಡಾಗ ದೇವರ ಮನಸ್ಸುಆತನ ನಿರ್ಣಯಗಳು ನಮಗೆ ಸೂಕ್ತ ರೀತಿಯಲ್ಲಿ ತಿಳಿಯುವುವು (ರೋಮ ೧೨:೧,೨) ದೇವರು ಕುಂಬಾರನಂತೆ, ಆತ ನಮ್ಮನ್ನು ಹದವಾಗಿಸಿ ಸಿದ್ಧಪಡಿಸುವನು (ಯೆಶಾ ೨೯:೧೬). ದೇವರು ನಮ್ಮ ದೇವಾಲಯ, ನಮ್ಮ ಜೀವನ ಪರಿಯಂತರವು ಆತನ ಮಂದಿರದಲ್ಲಿ ನಾವು ವಾಸಿಸಬೇಕೆಂಬುದೇ ನಮ್ಮ ಪ್ರಾರ್ಥನೆಯಾಗಬೇಕು (ಪಸ ೨೭:೪). ದುರುಳರ ಬಿಡಾರದಲ್ಲಿ ನಾನು ವಾಸ ಮಾಡುವುದರ ಬದಲು ನಿನ್ನ ಆಲಯದಲ್ಲಿ ನಾ ದ್ವಾರ ಪಾಲಕನಾಗಿರುವುದೇ ಲೇಸು (ಕೀರ್ತನೆ ೮೪:೧೦).
ಸಂತ ಜಾನ್ ಕ್ರಿಸಾಸ್ಟಮ್ ಹೇಳುತ್ತಾರೆ, "ದೇವರು ನೀನು ಯುದ್ದಕ್ಕೆ ಇಳಿಯುವುದರ ಮೊದಲೇ ನಿನಗೆ ಬೇಕಾಗಿರುವ ರಕ್ಷಣಾಕವಚವನ್ನು ನೀಡಿರುವನು" ಎಂದು. ಪವಿತ್ರಾತ್ಮರ ಮೂಲಕ ನಮ್ಮ ಮೇಲೆ ಅನೇಕ ವರಗಳು ಸುರಿಮಳೆಯಾಗಿ ಹರಿಯುವುದು. ಅದು ದೇವರ ಅನುಗ್ರಹದಿಂದ ಆಯ್ಕೆಯಾದದ್ದು ನಮ್ಮ ಸತ್ಕಾರ‍್ಯಗಳಿಂದ ಅಲ್ಲ (ರೋಮ ೧೧:೬). ಕಥೋಲಿಕ ಧರ್ಮಸಭೆಯ ಧರ್ಮೋಪದೇಶದ ಮೇರೆಗೆ ಅನುಗ್ರಹವೆಂದರೆ ಅದು ಮಾನವನ ಬುದ್ಧಿಶಕ್ತಿಯನ್ನು ಹಾಗೂ ಆತನ ಕೈಚಳಕವನ್ನು ಮೀರಿದ್ದಾಗಿದೆ. ದೇವರ ಹಾಗೂ ಮಾನವನ ನಡುವೆ ಭೇದವಿಲ್ಲ, ಅವರ ನಡುವೆ ಐಕ್ಯತೆ ಇರುವುದರಿಂದಲೇ ಅವರಿಬ್ಬರೂ ಪ್ರೀತಿಯಲ್ಲಿ ಒಂದಾಗುತ್ತಾರೆ. ದೇವರ ಪ್ರೀತಿ ಎಲ್ಲದಕ್ಕಿಂತಲೂ ಮಿಗಿಲಾದದ್ದು. ಆತನ ಸ್ನೇಹ ಪಡೆಯುವವನು ನವಜೀವಿಯಾಗಿ ಬದುಕುತ್ತಾನೆ. ಆತನ ನಡೆ ನುಡಿ ಯಾವುದೂ ಧೃತಿಗೆಡದು. ನಮ್ಮ ಕೆಲಸದಿಂದ ನಮ್ಮ ಹಣದಿಂದ ನಾವು ಈ ಸಂಬಂಧವನ್ನು ಪಡೆಯಲು ಸಾಧ್ಯವಿಲ್ಲ ಬದಲಿಗೆ ಅವನ ಪ್ರೀತಿಯಲ್ಲಿ ನಾವು ಮರು ಹುಟ್ಟಬೇಕು ಆಗ ಮಾತ್ರ ಆ ಸಂಬಂಧ ನಾವು ಪಡೆಯಲು ಸಾಧ್ಯ. ಸಂತರುಗಳು ತಮ್ಮ ಕೆಲಸದಲ್ಲಿ ನಂಬಿಕೆ ಇಡುತ್ತಿರಲಿಲ್ಲ ಬದಲಿಗೆ ದೇವರ ಕೆಲಸದಲ್ಲಿ ನಂಬಿಕೆ ಇಡುತ್ತಿದ್ದರು. ಯೇಸುಸ್ವಾಮಿ ಹೇಳಿದಂತೆ ಪ್ರೀತಿ ಏಕೈಕ ಆದೇಶ. ನಾವು ದೇವರ ಸ್ನೇಹವನ್ನು ಅನುಭವಿಸಲು ಸಾಧ್ಯವಾಗಬೇಕಾದರೆ ನಾವು ನಮ್ಮ ಬದುಕು ದೇವರ ಕೊಡುಗೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಪೆಲಾಜಿಯನಿಸ್ಟಿಕ್ ಚಿಂತಕರು ಇದನ್ನು ನಂಬುವುದಿಲ್ಲ, ಇದರ ಮೇಲೆ ವಾದಿಸುತ್ತಾರೆ.
ಇಂತಹ ವಾದಗಳು ಕ್ರಿಸ್ತನ ಪರಿಕಲ್ಪನೆಯ ಸತ್ವತೆಯನ್ನು ಅಳಿಸುತ್ತಿರುತ್ತವೆ. ಹಲವರು ಕ್ರೈಸ್ತ ವಿಶ್ವಾಸಿಗಳು ದೇವಸ್ಥಾನಕ್ಕೆ ಬರುತ್ತಾರೆ, ಆದರೆ ಅವರ ಮೇಲೆ ಅವರೇ ಅವಲಂಬಿಗಳಾಗಿರುತ್ತಾರೆ ಪೋಪ್ ಫ್ರಾನ್ಸಿಸ್ ನವರ ಮೂಲಕ ಅವರೆಲ್ಲರೂ ಪವಿತ್ರಾತ್ಮರ ಮೇಲೆ ಅವಲಂಬಿಗಳಾಗಬೇಕು. ನಮ್ಮ ಪ್ರತಿ ಕೆಲಸಕಾರ್ಯಗಳು, ನಿರ್ದಿಷ್ಟ ನಿರ್ಧಾರಗಳು ಎಲ್ಲವೂ ಪವಿತ್ರಾತ್ಮರ ಮೇಲೆ ಅವಲಂಬಿಸಬೇಕು ಆಗಲೇ ನಮ್ಮ ಜೀವನದಲ್ಲಿ ನಾವು ಸಾಫಲ್ಯವನ್ನು ಕಂಡುಕೊಳ್ಳಲು ಸಾಧ್ಯ. ವಿಶ್ವಾಸವು ಬೆಳೆಯುವುದು ಪ್ರೀತಿಯಿಂದ...(ಗಲಾ ೫:೬). ನಾವು ಪರರಿಗೆ ಸೇವೆ ದಯೆ ಧಾರಾಳತ್ವವನ್ನು ತೋರಿಸಲು ಪ್ರಭುಯೇಸು ನಮಗೆ ಕರೆ ನೀಡಿದ್ದಾರೆ (ರೋಮ ೧೩:೮-೧೦). ನಿನ್ನಂತೆಯೇ ಪರರನ್ನು ಪ್ರೀತಿಸು... ಇದುವೇ ವಿಶ್ವದ ಏಕೈಕ ಸಂದೇಶ (ಗಲಾ ೫:೧೪).
ನಮ್ಮ ಜೀವನದಲ್ಲಿ ಒಡನಾಡಿಯಾಗಿ ಬರುವುದಾದರೆ ಅದು ದೇವರು ಹಾಗೂ ನಮ್ಮ ಸುತ್ತಮುತ್ತಲಿನವರು. ಆದ್ದರಿಂದಲೇ ಪ್ರಭುಯೇಸು ಈ ಪ್ರೀತಿಯನ್ನು ವಿಶ್ವಸಂದೇಶವಾಗಿಸಿದ್ದಾರೆ. ಜೀವನದಲ್ಲಿ ಎಷ್ಟೋ ಪ್ರಶ್ನೆಗಳಿಗೆ ಅರ್ಥವಿಲ್ಲದೆ ಹೋಗುತ್ತದೆ, ಆದರೆ ಅವುಗಳಿಗೆ ಅರ್ಥ ಕಲ್ಪಿಸ ಬೇಕಾದರೆ ನಾವು ಪ್ರೀತಿಸುವವರಾಗಬೇಕು. ಈ ಪ್ರೀತಿಯಲ್ಲಿ ಪಾವಿತ್ರ್ಯ ಮರು ಕಾಣಿಸಿಕೊಳ್ಳುತ್ತದೆ. ನಾವು ದೇವರ ಒಡನಾಡಿಗಳಾಗುತ್ತೇವೆ.
No comments:
Post a Comment