ಜಗುಲಿಯ ಮೇಲೆ ಮೂಡಿದ ಅಮ್ಮನ ನೆನಪು...
ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನನ್ನನ್ನು ಕಾಡಿದ ಪ್ರಶ್ನೆ "ಮುಂದೇನು?" ಯಾವುದೇ ಪೂರ್ವಾಪರ ಕನಸು, ಯೋಜನೆಗಳಿಲ್ಲದ ನಾನು ಗಾಳಿ ಬೀಸಿದತ್ತ ತೂರಿಕೊಳ್ಳಲು ರೆಡಿಯಾಗಿದ್ದೆ. ಆದರೆ ಎಲ್ಲೋ ಮನದಾಳದಲ್ಲಿ ಪಾದ್ರಿಯಾಗಬೇಕೆಂಬ ಇಂಗಿತ ನನ್ನನ್ನು ಎಡೆಬಿಡದೆ ಕಾಡುತ್ತಿತ್ತು. ನಮ್ಮದು ಮಧ್ಯಮ ವರ್ಗದ ಸಾಧಾರಣ ಕ್ರೈಸ್ತ ಕುಟುಂಬವಾದ ಕಾರಣ ಈ ಆಧ್ಯಾತ್ಮಿಕತೆ, ಪ್ರತಿನಿತ್ಯ ಚರ್ಚಿಗೆ ಹೋಗುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಅಮ್ಮನಿಗೆ ನಾನೆಂದರೆ ಪ್ರಾಣ. ಒಂದು ವೇಳೆ ನನ್ನ ತಮ್ಮನಿಲ್ಲದೆ ಬದುಕಿ ಬಿಟ್ಟಾಳು ಆದರೆ ನಾನಿಲ್ಲದೆ ಅವಳನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಅವಳ ಪ್ರೀತಿ ಅಷ್ಟರ ಮಟ್ಟಿಗೆ ಇಂಟೆನ್ಸ್. ಆದರೆ ಹುಡುಗು ಬುದ್ದಿಯ ನನಗೆ ಇದೆಲ್ಲಾ ತೀರಾ ಹಗುರವಾದ ವಿಷಯವೆನಿಸಿತ್ತು.
******************
ಬೆಂಗಳೂರಿನಲ್ಲಿಯೇ ಗುರುಮಠಕ್ಕೆ ಸೇರಿ ಪಾದ್ರಿಯಾಗುವ ಕನಸು ಕಂಡಿದ್ದ ನನಗೆ ಆಶ್ಚರ್ಯವನ್ನುಂಟು ಮಾಡಿದ್ದು ಫಾದರ್ ಫಿಲಿಪ್ ರವರ ಆಗಮನ. ಫಾದರ್ ಫಿಲಿಪ್ ಎಂಬ ಅದ್ಭುತ ಮನುಷ್ಯನ ಬಗ್ಗೆ ಹೇಳಲೇಬೇಕು. ಆಳವಾದ ಕಣ್ಣುಗಳು, ಉಬ್ಬಿದ ಹೊಟ್ಟೆ, ಅರೆಗುಂಗುರು ಕೂದಲು, ಕಂದು ಮೈಬಣ್ಣ ಹಾಗು ಕೊಂಚ ದಢೂತಿ ದೇಹದ ಈ ಆಸಾಮಿ ಪಕ್ಕಾ ಹಳ್ಳಿಯ ಸೊಗಡಿನ ಮನುಷ್ಯ. ನೋಡಿದ ಯಾರಾದರೂ, ಈತ ಒಬ್ಬ ಪಾದ್ರಿಯೆಂದು ಗುರುತಿಸಲು ಅಸಾದ್ಯವಾಗುವಷ್ಟು ಸರಳ ಜೀವಿ.
ಜಾರ್ಖಂಡಿನಲ್ಲಿದ್ದ ಈತ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ "ನೀನು ಗೋವಾಕ್ಕೆ ಹೊರಡು" ಎಂದು ಬಿಡುವುದೇ? ತಿಳಿ ನೀರಿನಂತೆ ಪ್ರಶಾಂತವಾಗಿದ್ದ ಮನಸ್ಸಿನ ಮಾನಸ ಸರೋವರಕ್ಕೆ ದೊಪ್ಪೆಂದು ಕಲ್ಲು ಬಿದ್ದಂತಾಯಿತು. ಮತ್ತದೇ ಗೊಂದಲಗಳ ನಡುವೆ ಮನಸ್ಸು ಈಜಾಡಿ ಕೊನೆಗೂ ಒಂದು ನಿರ್ಧಾರ ಹೊರ ಬಿತ್ತು. ಹೇಗೋ ಒಂದು ಬಾರಿಯೂ ಗೋವಾ ನೋಡಿರದ ನನಗೆ, ಹೊಸದೊಂದು ಆಸೆ ಉದಯಿಸಿ ಅಲ್ಲಿಗೆ ಹೋಗ ಬೇಕೆಂಬ ಮನಸ್ಸಾಯಿತು. ಅಮ್ಮನ ಕಣ್ಣಹನಿಗಳ ನಡುವೆ, ಅಪ್ಪನ ಬೈಗುಳದ ಆರ್ಭಟದ ನಡುವೆಯೂ ಗೋವಾಕ್ಕೆ ಹೊರಡುವುದೆಂದು ಇತ್ಯರ್ಥವಾಯಿತು.
*******************
ಮರುದಿನ ಸಾಯಂಕಾಲವೇ ಹಿರಿಯ ಪಾದ್ರಿ ಫಾದರ್ ಬೆನೆಡಿಕ್ಟ್ ಮೊಂತೇರೊ ನನ್ನನ್ನು ಗೋವಾಕ್ಕೆ ಕರೆದೊಯ್ಯುವ ಸಲುವಾಗಿ ಮನೆಗೆ ಬಂದರು. ಎಲ್ಲಾ ಸಿಧ್ದತೆಗಳನ್ನು ಮಾಡಿಕೊಂಡಿದ್ದ ನಾನು ಇನ್ನು ಹೊರಡುವುದೊಂದೇ ಬಾಕಿ. ಆಗ ಅಮ್ಮ ಎದುರಾಗಿ ಮಮತೆ ತುಂಬಿದ ಭಾವದಿಂದ ಮೆಲ್ಲನೆ ತಲೆ ಸವರಿದಳು. ಅವಳ ಕಣ್ಣುಗಳಲ್ಲಿ ಕಂದನ ಅಗಲಿಕೆ, ಭವಿಷ್ಯದ ಭಯ ಹಾಗೂ ನಾನು ಆ ಹೊಸ ಜಾಗದಲ್ಲಿ ಹೇಗಿರುತ್ತೇನೊ ಎಂಬ ದುಗುಡವೇ ತುಂಬಿತ್ತು. ಹಿಂದಿನ ದಿನ ರಾತ್ರಿಯೇ ತನ್ನೆಲ್ಲಾ ಅಸಹನೆಗಳನ್ನು ಹೊರಹಾಕಿ, ನನ್ನ ಸುರಕ್ಷತೆಯ ಬಗ್ಗೆ ಸವಿವರವಾಗಿ ಮಾತನಾಡಿದ್ದ ಅವಳು ನನ್ನೆದುರೀಗ ಪದಗಳಲ್ಲಿದೆ ಮೂಕಳಾಗಿದ್ದಳು. ಮನದ ಅಸ್ಖಲಿತ ಭಾವನೆಗಳೆಲ್ಲಾ ಕಣ್ಣಂಚಿನಲಿ ಶೇಖರಗೊಂಡು ಸುಪ್ತ ಸಂಭಾಷಣೆಯೊಂದು ನಮ್ಮಿಬ್ಬರ ನಡುವೆ ಹಾದುಹೋಯಿತು. ಅಮ್ಮನ ತುಮುಲಗಳು ಎಳ್ಳಷ್ಟೂ ಅರ್ಥವಾಗದ, ಅರ್ಥವಾಗಿದ್ದರೂ ಅದಕ್ಕೆ ಪೂರಕವಾಗಿ ಸ್ಪಂದಿಸದ ನನ್ನನ್ನು ಕಾಣದೊಂದು ಅಪರಾಧಿ ಪ್ರಜ್ಞೆ ಪಯಣದುದ್ದಕೂ ಕಾಡುತ್ತಿತ್ತು.
*******************
ಅಂದು ಸಂಜೆ ಬೆಂಗಳೂರಿನಿಂದ ಹೊರಟ ನಾನು ತಿಪಟೂರಿನ ಫಾದರ್ ಬೆನೆಡಿಕ್ಟರ ನಿವಾಸ ತಲುಪುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಅಲ್ಲಿ ಎರಡು ದಿನ ತಂಗಿದ್ದು, ಮೂರನೆಯ ದಿನ ಹೊರಡುವುದೆಂದು ನಿರ್ಧಾರವಾಯಿತು. ರೈಲಿನಲ್ಲಿ ಹೋಗುವ ಪ್ರಯಾಣಕ್ಕೆಲ್ಲಾ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಸ್ಲೀಪರ್ ಕೋಚಿನಲ್ಲಿ ಹಾಯಾಗಿ ಪಯಣಿಸುವ ಹವ್ಯಾಸವಿದ್ದ ನನಗೆ ಮೊದಲ ಬಾರಿ ಜನರಲ್ ಕಂಪಾರ್ಟ್ಮೆಂಟಿನಲ್ಲಿ ಪ್ರಯಾಣಿಸುವ "ಅದೃಷ್ಟ"ವೊಂದು ತಾನಾಗಿ ಒದಗಿ ಬಂದಿತ್ತು. ರೈಲು ಹೋದಂತೆಲ್ಲಾ ಹೊಸ ಹೊಸ ಪ್ರಯಾಣಿಕರು ಸಾಗರೋಪಾದಿಯಲ್ಲಿ ಬರುತ್ತಿದ್ದರು. ಕಿಕ್ಕಿರಿದ ಬೋಗಿಯಲ್ಲಿ ಮನುಷ್ಯರ ಬೆವರ ಗಬ್ಬು ವಾಸನೆ ನನ್ನ ಘ್ರಾಣೇಂದ್ರಿಯವನ್ನು ಮಂಕಾಗಿಸಿತ್ತು. ಮತ್ತೊಂದು ಕಡೆ ದುರ್ಗಂಧದಿಂದ ನಾರುತ್ತಿರುವ ಶೌಚಾಲಯಗಳು ಶತಮಾನಗಳಿಂದ ನೀರನ್ನು ಕಾಣದಂತಿದ್ದವು.
ಕೆಳಗೆ ಕಾಲಿಡಲೂ ಆಗದಂತೆ ರೈಲಿನಲ್ಲಿ ಮಲಗಿದ್ದ ಜನರನ್ನು ಕಂಡು ಕೋಪ, ಅಸಹನೆ ಒಂದೆಡೆಯಾದರೆ, ಅವರ ಹೊಟ್ಟೆಪಾಡಿನ ಅನಿವಾರ್ಯತೆಯನ್ನು ಕಂಡು ಮರುಗುವುದು ಮತ್ತೊಂದೆಡೆ. ಈ ಶೋಚನೀಯ ಸ್ಥಿತಿಯಲ್ಲಿಯೂ ಸಹ ಶಾಂತಮೂರ್ತಿಯಂತೆ ಕುಳಿತಿದ್ದರು ಫಾದರ್ ಬೆನೆಡಿಕ್ಟ್. "ಈ ಮುದುಕನಿಗೆ ಟಿಕೆಟ್ ಬುಕ್ ಮಾಡಿಸೋಕೆ ಏನು ರೋಗ" ಎಂದು ಮನದಲ್ಲೆ ಫಾದರ್ ಬೆನೆಡಿಕ್ಟರನ್ನು ಶಪಿಸುತ್ತಾ ಕಾಲ ಕಳೆಯುವಷ್ಟರಲ್ಲಿ ಮುಂಜಾನೆ ಆರು ಗಂಟೆಗೆ ಗೋವಾದ ವಾಸ್ಕೋ-ಡ-ಗಾಮ ಸ್ಟೇಷನ್ ತಲುಪಿದೆವು. ಅಬ್ಬಾ! ಅಂತೂ ಇಂತೂ ಈ ದುರ್ವಾಸನೆಯ ಕೂಪದಿಂದ ಮುಕ್ತಿ!
*******************
ಮೊದಲ ಬಾರಿ ಗೋವಾದಲ್ಲಿ ಕಾಲಿಟ್ಟ ನನಗೆ ಅದರ ಬಗ್ಗೆ ಹಿಂದಿದ್ದ ಆಲೋಚನೆಗಳೆಲ್ಲಾ ಬದಲಾಯ್ತು. ಗೋವಾ ಎಂದರೆ ಯೂರೋಪ್ ದೇಶಗಳಂತಿರುತ್ತದೆ ಎಂದೆಣಿಸಿದ್ದ ನನಗೆ ವಾಸ್ತವತೆ ಕಂಡು ನಿರಾಸೆಯಾಯ್ತು. ಅಲ್ಲಿನ ಬಸ್ಸುಗಳು ನಮ್ಮ ಬಸ್ಸುಗಳಿಗಿಂತ ಐವತ್ತು ವರ್ಷಗಳಷ್ಟು ಹಿಂದಿವೆ. ಆ್ಯಂಬುಲೆನ್ಸುಗಳಂತಿರುವ ಆ ಮಿನಿ ಬಸ್ಸುಗಳೇ ಅಲ್ಲಿನ ಜನರಿಗೆ ವೋಲ್ವೋ, ರಾಜಹಂಸ ಇತ್ಯಾದಿ ಸೂಪರ್ ಬಸ್ಸುಗಳು.
ಮತ್ತೇನು ಮಾಡುವುದು? ಬಂದದ್ದಾಗಿದೆ. ಮುಂದೇನಾಗುತ್ತದೋ ನೋಡೋಣ ಎಂದು ಮುಂದಡಿಯಿಟ್ಟೆ. ವಾಸ್ಕೋದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಚಿಕಾಲಿಮ್ ಎಂಬ ಹಳ್ಳಿಗೆ ಬಂದು "ಪಲೋಟಿ ಹೋಂ" ಎಂಬ "ವನವಾಸದ ಅರಮನೆ"ಗೆ ಕಾಲಿಡುವಷ್ಟರಲ್ಲಿ ಸಮಯ ಬೆಳಗಿನ ಏಳು ಗಂಟೆ. ಸ್ನಾನ, ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ ಉಪಹಾರಕ್ಕೆಂದು ಊಟದ ಕೋಣೆಗೆ ಬರುವಷ್ಟರಲ್ಲಿ ಏಳೂವರೆಯಾಗಿತ್ತು.
ನನ್ನಂತೆಯೇ ಹಲವಾರು ವಿದ್ಯಾರ್ಥಿಗಳು ಡೈನಿಂಗ್ ಟೇಬಲಿನಲ್ಲಿ ಕುಳಿತು "ಪಾವ್ ಬಾಜಿ" ಸವಿಯುತ್ತಿದ್ದರು. ನನಗೆ ಅಲ್ಲಿನ ಆಹಾರ ಪದ್ಧತಿ, ಭಾಷೆ ಮುಂತಾದ ಆಚಾರ ವಿಚಾರಗಳೆಲ್ಲಾ ತೀರಾ ಹೊಸತು. ಹೇಗಪ್ಪಾ ಇವರೊಂದಿಗೆ ಹೊಂದಿಕೊಳ್ಳುವುದು ಎನ್ನುವಷ್ಟರಲ್ಲಿ ಅವರಲ್ಲಿ ಬಹುತೇಕರು ಕನ್ನಡಿಗರೆಂದು ತಿಳಿದ ನನ್ನ ಖುಷಿಗೆ ಪಾರವೇ ಇರಲಿಲ್ಲ. ಅವರೊಂದಿಗಿನ ಸುಮಧುರ ನೆನಪುಗಳ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಉಪಾಹಾರ ಮುಗಿಸಿ, ಕೊಂಚ ವಿರಾಮಕ್ಕಾಗಿ ಮಲಗುವ ಕೋಣೆಗೆ ಹೋಗಿ, ಸಾಲಾಗಿದ್ದ ಮಂಚಗಳಲ್ಲಿ ನನಗೆ ತೋರಿಸಿದ ಮಂಚದ ಮೇಲೆ ಹೋಗಿ ಅಂಗಾತ ಬಿದ್ದುಕೊಂಡೆ.
********************
ಯಾಕೋ ಅದೆಷ್ಟೇ ಆಯಾಸವಾಗಿದ್ದರೂ ನಿದ್ದೆಯೇ ಹತ್ತಲಿಲ್ಲ.ನಾನು ಯಾರನ್ನೋ ಕಳೆದುಕೊಂಡೆನೆಂಬ ಹತಾಶೆಯ ಭಾವ ಪದೇ ಪದೇ ಕಾಡುತ್ತಿತ್ತು. ಆ ನಿಶ್ಯಬ್ದದ ಕೋಣೆಯಲ್ಲಿ ಒಬ್ಬನೇ ಇದ್ದು ಇರಲಾರದೆ ಕೆಳಗಿಳಿದು ಬಂದೆ. ಅಲ್ಲೊಂದು ಜಗುಲಿಯಿತ್ತು. ಅಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಆ ಜಗುಲಿಯೆಂದರೆ ಅಚ್ಚುಮೆಚ್ಚು. ಕಾಡುಹರಟೆ, ಮೋಜು ಮಸ್ತಿಗೆ ಹೆಸರುವಾಸಿಯಾಗಿದ್ದ ಆ ಜಗುಲಿಯ ಮೇಲೆ ಈಗ ನೀರವ ಮೌನ. ಉಳಿದೆಲ್ಲಾ ವಿದ್ಯಾರ್ಥಿಗಳೆಲ್ಲಾ ಆಟ ಆಡಲು ಹೋಗಿದ್ದರು. ನಾನು ಮಾತ್ರ ಅಲ್ಲಿ ಒಬ್ಬಂಟಿಯಾಗಿ ಕುಳಿತಾಗ ನೆನಪಾದಳು ಅಮ್ಮ.
ಅವಳು ನೆನಪಾದೊಡನೆಯೇ ನನಗರಿವಿಲ್ಲದಂತೆಯೇ ಕಣ್ಣಿನಿಂದ ಹನಿಗಳು ಹರಿದು ಭೂಮಿಯ ಅಪ್ಪಿಕೊಂಡವು. ಆಗ ಕಾಡಿತು ನೋಡಿ ಪಾಪಪ್ರಜ್ಞೆ. ನಾನು ಅವಳಿಗೆ ಬಹಳ ನೋವು ಮಾಡಿದ್ದೆ. ಬಹುಶಃ ಅವಳು ಆಗಲೂ ಅಳುತ್ತಿದ್ದಳು. ನನಗೇಕೋ ಈಗಿಂದೀಗಲೇ ಹೊರಟು ಬಿಡಬೇಕೆನ್ನಿಸಿತು. ದುಃಖ ಉಮ್ಮಳಿಸಿ ಬರುತ್ತಿತ್ತು. ಕಳೆದು ಹೋದ ಮಗುವಿನಂತೆ ಜೋರಾಗಿ ಅತ್ತು ಬಿಟ್ಟೆ. ಆಗ ನಾನು "ಹೋಂ ಸಿಕ್" ಆಗಿದ್ದೆ. ಮೊದಲ ಬಾರಿ ಅಮ್ಮನ ನೆನಪು ತೀವ್ರವಾಗಿ ಕಾಡಲಾರಂಭಿಸಿತು. ತಕ್ಷಣವೇ ಫೋನೆತ್ತಿಕೊಂಡು ಅಮ್ಮನಿಗೆ ಕರೆ ಮಾಡಿದಾಗ ಆಗಲೂ ಅಳುತ್ತಿದ್ದಳು. ಅದೇ ಮೊದಲ ಬಾರಿಗೆ ಅವಳನ್ನು ಸಂತೈಸುತ್ತಾ ಹೃದಯ ತುಂಬಿ ಮಾತನಾಡಿದ್ದೆ. ಇನ್ನೆಂದೂ ಅವಳನ್ನು ಹಗುರವಾಗಿ ಪರಿಗಣಿಸುವುದಿಲ್ಲವೆಂದು ಪ್ರಮಾಣ ಮಾಡಿ ಇಂದಿಗೆ ಏಳು ವರ್ಷಗಳು.
****************
ಗೋವಾ ಬಿಟ್ಟು ಬಂದು ಮೂರು ವರ್ಷಗಳಾಯಿತು. ನನ್ನಮ್ಮ ಜೊತೆಯಲ್ಲಿಯೇ ಇದ್ದಾಳೆ ಅದೇ ಪ್ರೀತಿ ವಾತ್ಸಲ್ಯದೊಂದಿಗೆ, ಅನವರತ ಮಮತೆಯೊಂದಿಗೆ. ಹೀಗೆ ಮೂಡಿತ್ತು ಜಗುಲಿಯ ಮೇಲೆ ಅಮ್ಮನ ನೆನಪು.
****************
No comments:
Post a Comment