ವರ್ಷಗಳ ಕಾಲ ಒರಿಸ್ಸಾ ರಾಜ್ಯಕ್ಕೆ ಉದ್ಯೋಗ ನಿಮಿತ್ತ ಪದೇ ಪದೇ ಭೇಟಿ ಕೊಡಬೇಕಾದ ಅನಿವಾರ್ಯತೆಯ ನಡುವೆ ಒರಿಯಾ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು, ನಾಗರಿಕತೆಯ ಸೋಂಕಿಲ್ಲದ ಆದಿವಾಸಿ ಬುಡಕಟ್ಟು ಜನರು, ಇವನ್ನೆಲ್ಲ ಗಮನಿಸುತ್ತಿದ್ದ ನನಗೆ ಪುರಿ ಜಗನ್ನಾಥ ಗುಡಿಯ ಬಗ್ಗೆ ಸಹಜ ಕುತೂಹಲವಿತ್ತು.
ಪುರಿಯ ಜಗನ್ನಾಥ ದೇವಸ್ಥಾನದ ದೇವರ ಮೂರ್ತಿಗಳ ಬಗ್ಗೆ ಹೇಳಲೇಬೇಕು. ಜಗನ್ನಾಥ ಸಂಪ್ರದಾಯದ ಪ್ರಕಾರ ಇಲ್ಲಿ ಬಲರಾಮ (ಬಲಭದ್ರ), ಸುಭದ್ರ ಹಾಗೂ ಕೃಷ್ಣ (ಜಗನ್ನಾಥ) ನ ಮೂರ್ತಿಗಳನ್ನು ಇಡಲಾಗಿದೆ. ಬೇವಿನ ಮರದಲ್ಲಿ ಕೆತ್ತಲಾದ ಈ ಮೂರ್ತಿಗಳು ಸಾಂಪ್ರದಾಯಿಕ ಶೈಲಿಯಲ್ಲಿರದೆ ಕಲಾವಿದನಲ್ಲದವನು ತನಗೆ ತೋಚಿದ ಹಾಗೆ ಮುಖ ಹಾಗೂ ಕಣ್ಣುಗಳೇ ಆಕೃತಿಯ ಪೂರ್ಣ ಜಾಗವನ್ನು ಆಕ್ರಮಿಸಿಕೊಂಡು ಲೆಕ್ಕಾಚಾರ ತಪ್ಪಿದಂತೆ ಕೆತ್ತಿದ ಕುರೂಪವಾಗಿ ತೋರುತ್ತದೆ. ಆ ಮೂರ್ತಿಗಳ ಮೇಲೆ ಬಣ್ಣದ ಗೆರೆಗಳನ್ನೆಳೆದು ಕಣ್ಣು ಮೂಗು ತುಟಿಗಳನ್ನು ತೋರಿಸಲಾಗಿದೆ. ಜಗನ್ನಾಥನ ಮುಖ ಕಪ್ಪಗಿದ್ದರೆ ಉಳಿದ ಎರಡೂ ಹಳದಿ ಕೇಸರಿ ಮಿಶ್ರಿತ ಬಣ್ಣದಲ್ಲಿವೆ. ಬುಡಕಟ್ಟು ಜನಾಂಗದ ಭಕ್ತನೊಬ್ಬ ಮರಳಿನಲ್ಲಿ ಗೊಂಬೆ ಮಾಡುವ ಪುಟ್ಟ ಮಕ್ಕಳ ಹಾಗೆ ತನ್ನ ಕಲ್ಪನೆಯಲ್ಲಿ ದೇವರನ್ನು ಮೂರ್ತಗೊಳಿಸಿದ ಪರಿಯನ್ನು ಇಲ್ಲಿ ಕಾಣಬಹುದು. ಹಾಗಾಗಿ ನಿಜ ಭಕ್ತನಾದವನಿಗೆ ದೇವರ ಈ ರೂಪ ನೋಡಿ ತಲ್ಲಣವಾಗದು.
ಕೆಲ ವರ್ಷಗಳ ಹಿಂದೆ ಪುರಿ ಕೊನಾರ್ಕ ಭುವನೇಶ್ವರಗಳ ಒಂದು ದಿನದ ಪ್ರವಾಸಕ್ಕಾಗಿ ನಾನು ಓಟಿಡಿಸಿ ಬಸ್ಸಿಗೆ ಹತ್ತಿದ್ದೆ. ಪುರಿ ಜಗನ್ನಾಥ ಗುಡಿಯ ಹೊರಗೆ ಇಳಿಸುವಾಗ ನಮ್ಮ ಗೈಡು, ಗುಡಿಯೊಳಗೆ ವಿದೇಶೀಯರಿಗೆ, ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ, (ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರಿಗೇ ಅಲ್ಲಿ ಪ್ರವೇಶ ನಿರಾಕರಿಸಿದ್ದರು), ಚರ್ಮದ ವಸ್ತುಗಳನ್ನು, ಕ್ಯಾಮೆರಾಗಳನ್ನು, ಬಂದೂಕು ಮುಂತಾದ ಆಯುಧಗಳನ್ನು ಒಳಬಿಡುವುದಿಲ್ಲ, ಅಲ್ಲಿ ಯಾರೊಬ್ಬರೊಂದಿಗೂ ವಾದ ಮಾಡಬೇಡಿ, ಮಂದಿರದ್ದೇ ಪೊಲೀಸಿಂಗ್ ಇರುತ್ತೆ, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ, ಪಾಂಡಾ ಎಂಬ ಬ್ರಾಹ್ಮಣರು ಅಲ್ಲಿ ಬರುವ ಭಕ್ತಾದಿಗಳ ಸುಲಿಗೆ ಮಾಡುತ್ತಾರೆ. . ಇತ್ಯಾದಿ ಒಂದಷ್ಟು ಎಚ್ಚರಿಕೆಗಳನ್ನು ಕೊಟ್ಟರು.
ನಮ್ಮೊಡನೆ ಪಯಣಿಗರಾಗಿದ್ದ ನಾಜೂಕು ಮನದ ವಿದೇಶೀಯರು ಜಾಣ್ಮೆಯಿಂದ ದೇವಸ್ಥಾನಕ್ಕೆ ವಿಮುಖರಾಗಿ ಕಡಲ ದಂಡೆಯತ್ತ ನಡೆದರು. ಕೆಲವರು ಗುಡಿಯ ಮುಂದಿನ ಕರಕುಶಲ ವಸ್ತುಗಳ ಮಳಿಗೆಗಳಲ್ಲಿ ಖರೀದಿಗೆ ತೊಡಗಿದರು.
ಪ್ರವಾಸಕ್ಕಾಗಿ ಎಲ್ಲಿಗೆ ಹೋದರೂ ಅಲ್ಲಿನ ಎಲ್ಲ ವಿಶೇಷಗಳನ್ನು ಗಮನಿಸುವುದು ನನ್ನ ಹವ್ಯಾಸ. ಹಾಗಾಗಿ ಕುತೂಹಲ ಹುಟ್ಟಿಸುವ ಜಗನ್ನಾಥ ದೇವಾಲಯವನ್ನು ನೋಡದೇ ಹಿಂದಿರುಗುವುದು ನನಗೆ ಇಷ್ಟವಾಗಲಿಲ್ಲ.
ದೇವಸ್ಥಾನ ಸಮುಚ್ಛಯವು ಎತ್ತರದ ನೆಲದ ಮೇಲೆ ವಿರಾಜಮಾನವಾಗಿದೆ. ಕಲ್ಲಿನಿಂದ ನಿರ್ಮಿತವಾದ ಕಳಿಂಗ ಶೈಲಿಯ ಕಲಾಪ್ರಕಾರದ ಗುಡಿಯದು. ವಿಶಾಲವಾದ ಆಯುತಾಕಾರದ ಪ್ರಾಂಗಣದಲ್ಲಿ ಪುಟ್ಟವೆರಡು ಕಳಿಂಗ ವಿಮಾನ (ಗರ್ಭಗುಡಿಯ ಮೇಲೆ ಆಕಾಶಕ್ಕೆ ಚೂಪಾಗಿ ಮೇಲೆದ್ದಿರುವ ಗೋಪುರಗಳನ್ನು ವಿಮಾನ ಎನ್ನುತ್ತಾರೆ) ಗಳೂ ಮತ್ತೊಂದು ಬೃಹತ್ ವಿಮಾನವೂ ಇದೆ. ನಾಲ್ಕು ಗೋಡೆಗಳು ಉನ್ನತಿಗೇರಿ ತುದಿಯಲ್ಲಿ ವಕ್ರೀಭವಿಸಿ ಒಂದುಗೂಡುತ್ತವೆ. ಹಾಗೂ ಅದರ ಉಬ್ಬು ಮೈಯ ಮೇಲೆ ಕಲಾಮಯ ಚಿತ್ತಾರದ ಹಾಗೂ ಮೈಥುನದಲ್ಲಿ ತೊಡಗಿದ ಶಿಲ್ಪಗಳನ್ನು ಕೆತ್ತಲಾಗಿದೆ. ಹಾಗೆ ನಾಲ್ಕು ಗೋಡೆಗಳು ಮೇಲೇರಿ ಒಂದುಗೂಡಿದ ತಾಣದಲ್ಲಿ ಕಲ್ಲಿನ ಚಕ್ರಾಕಾರದ ಚಪ್ಪಡಿಯನ್ನು ಹಾಸಿದ್ದಾರೆ. ಚಕ್ರದ ಉರುಟು ಬದಿಯು ನಯವಾಗಿರದೇ ಒಂದರ ಪಕ್ಕ ಒಂದು ಬಾಳೆಹಣ್ಣನ್ನು ಜೋಡಿಸಿದ ಹಾಗೆ ಉಬ್ಬುತಗ್ಗುಗಳ ವಿನ್ಯಾಸ ಹೊಂದಿದೆ. (ಇದೇ ಶೈಲಿಯ ಒಂದು ಗುಡಿಯನ್ನು ನಮ್ಮ ಪಟ್ಟದಕಲ್ಲು ದೇವಾಲಯ ಪ್ರಾಂಗಣದಲ್ಲಿ ಕಾಣಬಹುದು). ಜಗನ್ನಾಥ ಗುಡಿಯ ಮೇಲ್ತುದಿಯಲ್ಲಿ ಶಿಖರಪ್ರಾಯವಾಗಿ ಕಳಶವಿದ್ದು ಅದರ ಮೇಲೆ ವಿಷ್ಣುಚಕ್ರವನ್ನು ಲಂಬವಾಗಿ ಸಿಕ್ಕಿಸಿರುತ್ತಾರೆ. ಆ ಚಕ್ರಕ್ಕೆ ಹಳದಿ ಮತ್ತು ಕೆಂಪು ಧ್ವಜಗಳನ್ನು ಕಟ್ಟಿರುತ್ತಾರೆ. ಎಲ್ಲಕ್ಕೂ ಮೇಲ್ಗಡೆ ತ್ರಿಕೋನಾಕಾರದ ಕೆಂಪು ಬಾವುಟವು ಪಟಪಟ ಹಾರುತ್ತಿರುತ್ತದೆ. ದೇವಾಲಯ ಸಮುಚ್ಛಯದಲ್ಲಿ ನಾಟ್ಯಮಂಟಪ, ದೇವರ ಅಡುಗೆಮನೆ ಹಾಗೂ ಇತರ ದೇವತೆಗಳ ಪುಟ್ಟಪುಟ್ಟ ಗುಡಿಗಳೂ ಇವೆ.
ಜಗನ್ನಾಥ ದೇವಸ್ಥಾನದ ಆ ಹೊರಸೌಂದರ್ಯವನ್ನು ಆಸ್ವಾದಿಸುತ್ತಾ ನಾನು ಗುಡಿಯ ಗೇಟಿನ ಬಳಿ ಬರುತ್ತಿದ್ದಂತೆಯೇ ಅಲ್ಲೊಬ್ಬ ಹಳದಿ ಕಚ್ಚೆಪಂಚೆ, ರೇಷಿಮೆಯ ಜುಬ್ಬಾ ತೊಟ್ಟು, ಕೆಂಪು ಕೈವಸ್ತ್ರವನ್ನು ಕೊರಳಿಗೆ ಸುತ್ತಿಕೊಂಡು, ಹಣೆಯ ಮೇಲೆ ಗಂಧ ಹಚ್ಚಿಕೊಂಡವನೊಬ್ಬ ಎದುರಾಗಿ ಗಡುಸು ದನಿಯಲ್ಲಿ ’ಏಯ್ ಬಾ ಇಲ್ಲಿ, ನಿನ್ನ ಪರ್ಸು ಬೆಲ್ಟುಗಳನ್ನು ಕಳಚಿ ಇಲ್ಲಿಡು’ ಎಂದು ಗದರಿಸಿದ. ಅಲ್ಲಿದ್ದ ಕೌಂಟರಿನಲ್ಲಿ ಅವನ್ನು ಜಮಾ ಮಾಡಿದೆ. ನನ್ನನ್ನೇ ಗಮನಿಸುತ್ತಿದ್ದ ಆತ ಮತ್ತೊಮ್ಮೆ ಅದೇ ಗಡುಸು ದನಿಯಲ್ಲಿ ’ನಿನಗೆ ದೇವರ ದರ್ಶನ ಮಾಡಿಸುತ್ತೇನೆ, ನನ್ನನ್ನು ಹಿಂಬಾಲಿಸು’ ಎಂದ. ಅವನಂತೆ ಹಲವರು ಆ ಗುಡಿಯ ಪ್ರಾಂಗಣದಲ್ಲಿ ಇತರ ಪ್ರವಾಸಿಗಳನ್ನು ದಾರ್ಷ್ಟ್ಯದಿಂದ ಮಾತಾಡಿಸುತ್ತಿದ್ದರು. ಅವರನ್ನು ಪಾಂಡಾಗಳು ಅಥವಾ ದೇವಸ್ಥಾನದ ’ಸೇವಕರು’ ಎನ್ನುತ್ತಾರೆ. ವಿಚಿತ್ರವೆಂದರೆ ಅವರನ್ನು ದೇವಸ್ಥಾನದ ಆಡಳಿತವೇ ನೇಮಿಸಿರುತ್ತದೆ.
ಅವರ ಬಗ್ಗೆ ಬಸ್ಸಿನ ಗೈಡು ಮೊದಲೇ ಹೇಳಿದ್ದರಿಂದ ನಾನು ಅವನ ಬಗ್ಗೆ ಉದಾಸೀನ ಮಾಡಿದೆ. ನನ್ನ ಪಾಡಿಗೆ ನಾನು ಗುಡಿಯತ್ತ ನಡೆದೆ. ಅವನು ನನ್ನನ್ನೇ ಹಿಂಬಾಲಿಸಿ ’ನನ್ನ ಸಹಾಯವಿಲ್ಲದೆ ನಿನಗೆ ದೇವರನ್ನು ನೋಡುವುದು ಸಾಧ್ಯವಿಲ್ಲ, ನಿನಗಾಗಿ ಆ ಅರ್ಚನೆ ಈ ಅರ್ಚನೆ ಮಾಡಿಸುತ್ತೇನೆ, ನಿನ್ನ ಪಿತೃಗಳಿಗೆ ತರ್ಪಣ ಬಿಡುತ್ತೇನೆ, ದೇವರಿಗೆ ತುಪ್ಪದ ಸ್ನಾನ ಮಾಡಿಸುತ್ತೇನೆ, ಇದೆಲ್ಲ ಮಾಡದೇ ಹೋದರೆ ನಿನಗೆ ಒಳ್ಳೆಯದಾಗುವುದಿಲ್ಲ. . . ಅನ್ತ ಇನ್ನೂ ಏನೇನೋ ವದರುತ್ತಾ ಬಂದ. ಕೊನೆಗೆ ಅವನ ಸಹನೆ ಮೀರಿ ನನ್ನ ಎದುರು ನಿಂತು ’ನೀನೇಕೆ ನನ್ನ ಮಾತು ಕೇಳುತ್ತಿಲ್ಲ’ ಎಂದ. ನಾನು ನಗುತ್ತಾ ’ದೇವರನ್ನು ನೋಡಲು ನಿನ್ನ ಅವಶ್ಯಕತೆ ನನಗಿಲ್ಲ’ ಎಂದು ನಗುತ್ತಾ ಹೇಳಿದೆ. ಹೋಗಲಿ ’ನಿನ್ನ ಜೊತೆ ಇಷ್ಟು ದೂರ ಬಂದಿದ್ದಕ್ಕಾದರೂ ನನಗೆ ಒಂದು ನೂರು ರೂಪಾಯಿ ಕೊಡು’ ಎಂದ. ನಾನು ಏನೂ ಮಾತಾಡದೆ ಸುಮ್ಮನೇ ದೇವಾಲಯದ ಬಾಗಿಲ ಬಳಿ ಹೋದೆ. ’ಬ್ರಾಹ್ಮಣನಿಗೆ ಏನೂ ಕೊಡದೇ ಹೋದರೆ ನೀನು ದೇವರ ದರ್ಶನ ಮಾಡಿಯೂ ಲಾಭವಿಲ್ಲ, ಬ್ರಾಹ್ಮಣನ ಶಾಪ ನಿನ್ನನ್ನು ಸದಾ ಕಾಡುತ್ತದೆ. . . ’ ಎಂದು ಇನ್ನೂ ಏನೇನೋ ಹೇಳುತ್ತಾ ಅವನು ನಿಷ್ಕ್ರಮಿಸಿದ. ಬಹುಶಃ ಆ ಸ್ಥಳ ಅವನ ಗಡಿರೇಖೆ ಇದ್ದಿರಬಹುದು.
ದೇವಾಲಯದ ಬಾಗಿಲಿನಲ್ಲಿ ಮತ್ತೊಬ್ಬ ಅದೇ ರೀತಿಯವ ವಕ್ರಿಸಿಕೊಂಡ. ಅವನು ದರ್ಶನಾರ್ಥಿಗಳನ್ನು ಬಾಗಿಲಲ್ಲೇ ನಿಲ್ಲಿಸಿ ’ದೇವರು ನಿದ್ರೆ ಮಾಡುತ್ತಿದ್ದಾನೆ, ಈಗ ದರ್ಶನ ಸಾಧ್ಯವಿಲ್ಲ’ ಎನ್ನುತ್ತಾ ಐನೂರು ರೂಪಾಯಿ ಬಿಚ್ಚಿದವರಿಗೆ ಬಾಗಿಲು ಓರೆ ಮಾಡಿ ಒಳಬಿಡುತ್ತಿದ್ದ. ಅದನ್ನೇ ಸ್ವಲ್ಪಹೊತ್ತು ಗಮನಿಸಿದ ನಾನು ಯಾವುದೋ ಒಂದು ಕುಟುಂಬದ ಜನರೊಂದಿಗೆ ಸೇರಿಕೊಂಡು ಅವರ ಜೊತೆಯಲ್ಲೇ ಒಳಹೊಕ್ಕೆ. ಒಳಗೆ ನಮ್ಮಂತೆಯೇ ನೂರಾರು ಮಂದಿ ಸೇರಿದ್ದರು. ದೇವರ ಮುಂದುಗಡೆ ಮತ್ತೊಂದು ಬಾಗಿಲು ಮುಚ್ಚಿದ್ದರು. ಎಲ್ಲರೂ ಯಾವಾಗ ಆ ಬಾಗಿಲು ತೆರೆಯುವುದೋ ಎಂದು ಧಾವಂತದಿಂದ ಎದುರು ನೋಡುತ್ತಿದ್ದರು.
ಅದೊಂದು ಕಣ್ಣುಮುಚ್ಚಾಲೆಯ ಆಟ. ಅಲ್ಲಿ ಜಮಾಯಿಸಿದ್ದ ’ಸೇವಕ’ರು ತಟ್ಟೆ ಹಿಡಿದು ಸಾವಿರಗಟ್ಟಲೆ ದುಡ್ಡು ಪೀಕುತ್ತಾ ಇದ್ದರು. ಭಕ್ತರಲ್ಲಿ ವೃದ್ಧರು, ಗಂಡಸರು ಹೆಂಗಸರು, ಪ್ರಾಯದ ಹುಡುಗಿಯರು ಬೆವರಲ್ಲಿ ತೊಯ್ದುಹೋಗಿ ಯಾವುದೇ ಎಗ್ಗುಸಿಗ್ಗಿಲ್ಲದೆ ಒತ್ತಾಗಿ ನಿಂತು ದೇವರ ಬಾಗಿಲ ಕಡೆ ತದೇಕಚಿತ್ತದಿಂದ ನೋಡುತ್ತಾ ತುದಿಗಾಲಲ್ಲಿ ನಿಂತಿದ್ದರು. ಅವರೆಲ್ಲ ತಲೆಗಿಷ್ಟು ಎಂದು ಹಣ ಕೊಟ್ಟ ಮೇಲೆ ದೇವರ ಮುಂದಿನ ಬಾಗಿಲನ್ನು ತುಸುವೇ ತೆರೆಯಲಾಗುತ್ತಿತ್ತು. ಭಕ್ತಾದಿಗಳು ಹೋ ಬಾಗಿಲು ತೆರೆದರು ಎಂದು ಉದ್ಗರಿಸುತ್ತಾ ನಾ ಮುಂದು ತಾ ಮುಂದು ದೇವರ ರೂಹನ್ನು ಕಣ್ ತುಂಬಿಕೊಳ್ಳುವಷ್ಟರಲ್ಲಿ ಬಾಗಿಲನ್ನು ಮುಚ್ಚಲಾಗುತ್ತಿತ್ತು. ಮತ್ತೆ ತೆರೆಯುವುದು ಎಷ್ಟು ಹೊತ್ತಿಗೋ!
ಯಾರೋ ಒಬ್ಬಾತ ನನ್ನ ಬಳಿ ಬಂದು ಎರಡು ಸಾವಿರ ರೂಪಾಯಿ ಕೊಡು, ದೇವರ ಪಕ್ಕದ ಬಾಗಿಲು ತೆರೆದು ನಿನಗೆ ಧಾರಾಳ ದರ್ಶನ ಮಾಡಿಸುತ್ತೇನೆ ಎಂದ. ನಾನು ಮನದಲ್ಲೇ ನಕ್ಕೆ. ಸೇವಕರ ಈ ಕುಟಿಲ ಕಾರ್ಯತಂತ್ರಗಳು ಇನ್ನೂ ಬಹಳಷ್ಟು ಇವೆ. ದರ್ಶನಕ್ಕಾಗಿ ಬರುವ ಯಾತ್ರಿಗಳು ದೇವಸ್ಥಾನದ ಸೇವಕರೆನಿಸಿ ಕೊಂಡವರಿಂದ ಎದುರಿಸುತ್ತಿರುವ ದಬ್ಬಾಳಿಕೆ, ಶೋಷಣೆ, ಹಲ್ಲೆಗಳಿಗೆ ಒಳಗಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಯಾತ್ರಿಯೊಬ್ಬರು ದರ್ಶನ ಪಡೆದು ಭಾರೀ ಮೊತ್ತದ ಹಣದ ಬೇಡಿಕೆಯನ್ನು ಪೂರೈಸಲಿಲ್ಲವಾಗಿ ಸೇವಕರು ಅವರನ್ನು ಯದ್ವಾ ತದ್ವಾ ಥಳಿಸಿದ್ದರು ಮಾತ್ರವಲ್ಲ ಅವರ ಕೊರಳಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣವನ್ನು ಕಿತ್ತುಕೊಂಡಿದ್ದರು. ಈ ಕುರಿತ ಪೊಲಿಸ್ ದೂರಿನನ್ವಯ ಇಬ್ಬರು ಸೇವಕರನ್ನು ಸಸ್ಪೆಂಡ್ ಮಾಡಲಾಗಿತ್ತು.
ಈ ಘಟನೆಯ ನಂತರ ಮೃಣಾಲಿನಿ ಪಾಢಿ ಎಂಬ ಸಾಮಾಜಿಕ ಕಾರ್ಯಕರ್ತೆಯೊಬ್ಬರು ದೇವಾಲಯದ ಅವ್ಯವಸ್ಥೆಯ ಕುರಿತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿದ್ದರು. ಈ ರಿಟ್ ಅರ್ಜಿಯನ್ನು ವಿಚಾರಣೆ ಮಾಡುತ್ತಾ, ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯವು ’ತೀರ್ಥಸ್ಥಳಗಳ ಸರಿಯಾದ ನಿರ್ವಹಣೆಯು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಇವು ಧಾರ್ಮಿಕ ಸ್ಥಳಗಳೆಂಬುದು ನಿಸ್ಸಂದೇಹವೇ ಆದರೂ ಸಾಮಾಜಿಕ ಇತಿಹಾಸ, ಪ್ರಾಚೀನ ವಾಸ್ತುಕಲೆಯ ದೃಷ್ಟಿಯಿಂದಲೂ ಮುಖ್ಯವೆನಿಸಿ, ನಮ್ಮ ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತವೆ. ಲಕ್ಷಾಂತರ ಜನರು ಇಂಥಾ ಸ್ಥಳಗಳಿಗೆ ಧಾರ್ಮಿಕ ಕಾರಣದಿಂದ ಮಾತ್ರವಲ್ಲ, ಪ್ರವಾಸಿಗರಾಗಿ, ತಮ್ಮ ನೈತಿಕ ಮೌಲ್ಯಗಳನ್ನು ಉದ್ದೀಪಿಸಿಕೊಂಡು ಸುಖಜೀವನಕ್ಕೆ ಸ್ಫೂರ್ತಿ ಪಡೆಯಲು ಬರುತ್ತಾರೆ. ಅಂಥಾ ಮೌಲ್ಯಗಳು ವೃದ್ಧಿಗೊಂಡು ಮುಂದುವರಿಯುತ್ತಾ ಪ್ರಪಂಚವನ್ನು ಬೆಳಗಲಿ ಎಂಬ ಸದುದ್ದೇಶದಿಂದ ತಮ್ಮಿಂದಾದ ದೇಣಿಗೆಗಳನ್ನು ಕೊಡುಗೆಗಳನ್ನು ಸಮರ್ಪಿಸುತ್ತಾರೆ. ದೇವಾಲಯದ ಸೇವಕರು ಅಂತಹ ಸಮರ್ಪಣೆಗಳ ಮೇಲೆ ಹಕ್ಕು ಸಾಧಿಸಲಾಗದು. ದೇವಾಲಯದ ಆಡಳಿತವರ್ಗವು ದೇವಾಲಯವನ್ನು ಸಂದರ್ಶಿಸುವ ಎಲ್ಲರನ್ನೂ ಅವರ ಧರ್ಮ, ನಂಬಿಕೆ, ಉಡುಪುಗಳನ್ನು ಲೆಕ್ಕಿಸದೆ ಅನುಮತಿ ನೀಡಿ ಅವರು ಗೌರವ ಸಲ್ಲಿಸಲು, ಕಾಣಿಕೆ ಸಮರ್ಪಿಸಲು ಅನುವು ಮಾಡಿಕೊಡಬೇಕು.
ಯಾವುದೇ ಧರ್ಮದ ಧಾರ್ಮಿಕ ಸ್ಥಳಗಳಲ್ಲಿ ಸಂದರ್ಶಕರಿಗಾಗುವ ತೊಂದರೆ, ಆಡಳಿತ ವೈಫಲ್ಯ, ಪ್ರಸಾದದಲ್ಲಿ ಅಶುಚಿ, ಕಾಣಿಕೆಗಳ ಅಸಮರ್ಪಕ ನಿರ್ವಹಣೆ, ಪುಣ್ಯಕ್ಷೇತ್ರದ ಆಸ್ತಿಗಳ ನಿರ್ವಹಣೆಯನ್ನು ಗಮನಿಸುವ ಹೊಣೆ ರಾಜ್ಯಸರ್ಕಾರ, ಕೇಂದ್ರಸರ್ಕಾರದ್ದು ಮಾತ್ರವಲ್ಲ ನ್ಯಾಯಾಲಯದ್ದೂ ಆಗಿದೆ’ ಎಂದು ಅಭಿಪ್ರಾಯಪಟ್ಟಿದೆ.
ಸರ್ವೋಚ್ಚ ನ್ಯಾಯಾಲಯವು ಅಷ್ಟಕ್ಕೇ ನಿಲ್ಲದೆ, ದೇಶದಲ್ಲಿರುವ ಎಲ್ಲ ಗುಡಿ, ಮಸೀದಿ, ಚರ್ಚುಗಳ ಸೇವಾವ್ಯವಸ್ಥೆ, ಆಹಾರ ಪ್ರಸಾದಗಳ ಶುದ್ಧತೆ, ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರುಗಳಿಗೆ ಆದೇಶ ನೀಡುವ ಮೂಲಕ ತನ್ನ ಸ್ವಯಂ ಅಧಿಕಾರದ ಚಾಟಿ ಬೀಸಿದೆ. ಅಂಥಾ ವರದಿಗಳನ್ನು ಆಯಾ ರಾಜ್ಯ ಉಚ್ಚ ನ್ಯಾಯಾಲಯಗಳು ಸಾರ್ವಜನಿಕ ಹಿತಾಸಕ್ತಿಯ ರಿಟ್ ಎಂದು ಪರಿಗಣಿಸಲೂ ಅದು ಸೂಚಿಸಿದೆ.
ನಮ್ಮ ಇಂಡಿಯಾ ದೇಶದಲ್ಲಿ ಸುಮಾರು ಇಪ್ಪತ್ತು ಲಕ್ಷ ಮಂದಿರಗಳೂ, ಮೂರು ಲಕ್ಷ ಮಸೀದಿಗಳೂ, ಸಾವಿರಾರು ಚರ್ಚುಗಳೂ ಇದ್ದು ಆರಾಧನಾ ಸ್ಥಳಗಳಂತಹ ಸೂಕ್ಷ್ಮ ವಲಯಗಳಿಗೆ ಸರಕಾರೀ ಅಧಿಕಾರಿಗಳನ್ನು ಬಿಟ್ಟುಕೊಂಡು ತಪಾಸಣೆಗೆ ಸಹಕರಿಸುವ ಮನೋಭಾವವನ್ನು ಎಲ್ಲರಿಂದ ನಿರೀಕ್ಷಿಸಲಾದೀತೇ ಎಂಬುದು ಯಕ್ಷಪ್ರಶ್ನೆ.
ನಮ್ಮ ಚರ್ಚುಗಳಲ್ಲಿ ದೇವರ ಸೇವಕರೆನಿಸಿಕೊಂಡವರು ಪಾಪ ನಿವೇದನೆ ಮಾಡಲು ಬಂದ ಹೆಂಗಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿಬರುತ್ತಿದೆ, ಚರ್ಚಿನಲ್ಲಿ ಸೇವಾಸಕ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಉದಾಹರಣೆಗಳಿವೆ, ಸಂಸ್ಕಾರಗಳಿಗಾಗಿ ಹಣದ ಬೇಡಿಕೆಯಿಟ್ಟು ಪೀಡಿಸಿದ ಘಟನೆಗಳೂ ಇವೆ. ಚರ್ಚ್ ನೇತಾರರ ನಡವಳಿಕೆಯ ಬಗ್ಗೆ ಚರ್ಚಿನೊಳಗಿನ ಜನರಿಗೇ ಅಸಹನೆ ಇದೆ. ಈ ಅಸಹನೆಗಳೆಲ್ಲ ಭುಗಿಲೆದ್ದಾಗ ಕೋರ್ಟು, ಸರಕಾರ ಅಥವಾ ಸರಕಾರದ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ಚರ್ಚುಗಳ ಆಂತರಿಕ ಸಂಗತಿಗಳಲ್ಲಿ ಮೂಗುತೂರಿಸಿ ವಿನಾಕಾರಣ ಬೆದರಿಸುವ, ಹಣಕ್ಕಾಗಿ ಪೀಡಿಸುವ, ಹೆಸರು ಹಾಳು ಮಾಡುವ, ರಾಜಕೀಯ ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
¨ ಸಿ ಮರಿಜೋಸೆಫ್
No comments:
Post a Comment