Sunday, 9 September 2018

ಬೈಬಲಿನ ವಿಶಿಷ್ಟ ವ್ಯಕ್ತಿಗಳು: ನೆಹೆಮೀಯನ ಕತೆ




-  ಡಾ. ಲೀಲಾವತಿ ದೇವದಾಸ್
ಪ್ಪತ್ತು ವರ್ಷಕಾಲ ಇಸ್ರಾಯೇಲ್ಯರು ದೇಶಭ್ರಷ್ಟರಾಗಿದ್ದು, ಕೊನೆಗೆ, ಪರ್ಷಿಯಾದ ಅರಸ ಕೊರೇಷನ ಆಳ್ವಿಕೆಯಲ್ಲಿ ತಮ್ಮ ದೇಶಕ್ಕೆ ಹಿಂತಿರುಗಿದರು. ಆದರೆ, ಎಲ್ಲರೂ ಪರ್ಷಿಯಾ ದೇಶವನ್ನು ಬಿಟ್ಟು ಬರಲಿಲ್ಲ. ಅಲ್ಲಿಯೇ ಉಳಿದವರಲ್ಲಿ, ನೆಹೆಮೀಯನು ನಮಗೆ ಎದ್ದು ಕಾಣುತ್ತಾನೆ.
ಈತನಿದ್ದದ್ದು, ಪ್ಲೇಟೊ, ಡಯೋಜಿನಿಸ್ ನಂಥಾ ತತ್ವಜ್ಞಾನಿಗಳಿದ್ದ ಕಾಲ. ನೆಹಮೀಯನು ಪ್ರವಾದಿಯೇನೂ ಅಲ್ಲ. ಪರ್ಷಿಯಾದ ಮುಖ್ಯ ಪಟ್ಟಣವಾದ ಶೂಷನ್ ನಲ್ಲಿ ಉದಾರ ಹೃದಯೀ ಅರಸ ಆರ್ತಷಸ್ತನಿಗೆ ಪಾನಸೇವಕನಾಗಿದ್ದನು. ಒಂದು ದಿನ, ಯೆಹೂದದಿಂದ ಕೆಲವರು ಬಂದು, ನೆಹೆಮೀಯನಿಗೆ "ಯೆರುಸಲೇಮಿನ ಪೌಳೀ ಗೋಡೆಯನ್ನು ಶತ್ರುಗಳು ಕೆಡವಿಹಾಕಿದ್ದಾರೆ. ಅಲ್ಲಿನ ನಮ್ಮವರು ತುಂಬಾ ಕಷ್ಟ, ನಿಂದೆಗಳಿಗೆ ಒಳಗಾಗಿದ್ದಾರೆ" ಎಂಬ ಆಘಾತಕಾರೀ ಸುದ್ದಿಯನ್ನು ಮುಟ್ಟಿಸಿದರು.
ಅದನ್ನು ಕೇಳಿ ನೆಹೆಮೀಯನು ತೀರಾ ವಿಷಣ್ಣನಾಗಿದ್ದ. ಅರಸನಿಗೆ ದ್ರಾಕ್ಷಾರಸ ನೀಡುವಾಗಲೂ ಆತನ ಮುಖ ಕುಂದಿಹೋಗಿತ್ತು. ಅರಸನು ಅದನ್ನು ಗಮನಿಸಿ, ಕಾರಣ ಕೇಳಿದಾಗ, ಆತನಿಗೆ ನೆಹೆಮೀಯನು ಎಲ್ಲವನ್ನೂ ತಿಳಿಸಿದನು, ಮತ್ತು ತಾನು ಯೆರೂಸಲೇಮಿಗೆ ಹೋಗಿಬರಲು ಅನುಮತಿ ಬೇಡಿದನು. ಅರಸನು ಒಪ್ಪಿಕೊಂಡು, ಪೌಳಿಗೋಡೆ ಕಟ್ಟಲು ಅಗತ್ಯವಾದ ಸಕಲ ವಸ್ತುಗಳನ್ನು ನೆಹೆಮೀಯನಿಗೆ ನೀಡಿದ್ದಲ್ಲದೆ, ಜೊತೆಗೆ ಪ್ರಯಾಣಿಸಲು ಸೇನಾಧಿಪತಿಗಳನ್ನೂ ರಾಹುತರನ್ನೂ ಕೊಟ್ಟು, ಬೇಕಾಗುವ ಪತ್ರಗಳನ್ನೂ ಅನುಗ್ರಹಿಸಿದನು.
ನೆಹೆಮೀಯನು ಯೆರೂಸಲೇಮನ್ನು ತಲಪಿ, ಸಮಯವನ್ನು ವ್ಯರ್ಥ ಮಾಡದೆ ರಾತ್ರಿ ವೇಳೆಯಲ್ಲೇ ಕೆಲವರ ಜೊತೆಯಲ್ಲಿ ಪೌಳಿಗೋಡೆಯ ಹತ್ತಿರ ಹೋಗಿ ಅದರ ದುರವಸ್ಥೆಯನ್ನು ಕಂಡನು. ಪಾಳುಬಿದ್ದಿದ್ದ ಗೋಡೆಯನ್ನು ಕಟ್ಟಲು ಜೊತೆ ಯೆಹೂದ್ಯರನ್ನು ಪ್ರೇರೇಪಿಸಿದನು. ಆತನು ವಿಶೇಷವಾಗಿ ಒತ್ತಿ ಹೇಳಿದ ಬನ್ನಿ, ಕಟ್ಟೋಣ ಎಂಬ ಪ್ರಸಿದ್ಧ ವಾಕ್ಯವು ಎಲ್ಲರನ್ನೂ ಬಡಿದೆಬ್ಬಿಸಿತು. ಶತ್ರುಗಳು ಎದುರಿಸಿದರೆ ಸಿದ್ಧವಾಗಿರಲು ಆಯುಧಗಳನ್ನು ಧರಿಸಿದ ಕಾವಲನ್ನೂ ಏರ್ಪಡಿಸಿದನು.
ಸುದ್ದಿ ಕೇಳಿದ ವೈರಿಗಳು ಇವರನ್ನು ಗೇಲಿ ಮಾಡುತ್ತಿದ್ದರೂ, ಅಲ್ಲಿ ಕಟ್ಟುತ್ತಿದ್ದ ಯೆಹೂದ್ಯರ ಮನಸ್ಸು ಇನ್ನಷ್ಟು ದೃಢವಾಯಿತು. ಕಟ್ಟೋಣದ ಕಾರ್ಯವನ್ನು ಎಲ್ಲಾ ಕುಟುಂಬದವರಲ್ಲಿ ಹಂಚಲಾಯಿತು. ಸಮಸ್ತ ಕೋಟೆ ಬಾಗಿಲುಗಳೂ ಜೀರ್ಣೋದ್ಧಾರವನ್ನು ಕಂಡವು.
ಇವರ ಸಾಹಸಕಾರ್ಯವನ್ನು ಕಂಡು, ಅಸೂಯೆ, ದ್ವೇಷಗಳಿಂದ ಕಂಗಾಲಾದ ಶತ್ರು ಸನ್ಬಲ್ಲಟನು ಯೆಹೂದ್ಯರನ್ನು ಹಂಗಿಸಿ, ಸುಟ್ಟುಹೋದ ಪಟ್ಟಣದ ದೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸುವಿರೋ?” ಎಂಬ ನಿಂದನೆಯ ಮಾತುಗಳನ್ನು ಆಡಿದನು. ಅವನ ಜೊತೆಗೇ ಟೋಬೀಯನು, ”ಅವರು ಕಟ್ಟುವ ಕಲ್ಲುಗೋಡೆಯ.ಮೇಲೆ ನರಿ ಹಾರಿದರೆ, ಅದು ಬಿದ್ದುಹೋಗುವದು ಎಂದು ಗೇಲಿಮಾಡಿದನು. (ನೆಹೆ ೪:೩ (
ಬೇರೆ ಬೇರೆಯವರು ಬೇರೆ ಬೇರೆ ಭಾಗಗಳನ್ನು ಕಟ್ಟಿದ್ದರಿಂದ ನಡುನಡುವೆ ಸಂದುಗಳೂ ಇದ್ದವು. ಅವುಗಳನ್ನೆಲ್ಲಾ ಮುಚ್ಚಿ, ಗೋಡೆಗಳನ್ನು ಬಲಪಡಿಸಿದಾಗ, ಶತ್ರುಗಳು ಪೆಚ್ಚಾದರು! ಅವರು ಪರ್ಷಿಯಾದ ಅರಸನಿಗೆ ದೂರನ್ನು ಬರೆದು, ಯೆಹೂದ್ಯರು ಆತನಿಗೆ ವಿರುದ್ಧವಾಗಿ ಪಿತೂರಿ ಮಾಡುತ್ತಿದ್ದಾರೆಂದು ಆಪಾದಿಸಿದರು. ಜನರಿಗೆ ಲಂಚಕೊಟ್ಟು, ಪೌಳಿಯನ್ನು ಕಟ್ಟುತ್ತಿದ್ದವರ ಮೇಲೆ ಇಲ್ಲದ ಸಲ್ಲದ ಸುಳ್ಳುಸುದ್ದಿಗಳನ್ನು ಹಬ್ಬಿಸಿದರು.
ಅವರೇನೇ ಹೇಳಿದರೂ ಗೋಡೆಯಂತೂ ಕೇವಲ52  ದಿನಗಳಲ್ಲಿ ಪೂರ್ತಿಯಾಯಿತು. ಯೆರೂಸಲೇಮಿನಾಚೆ ವಾಸವಾಗಿದ್ದ ಯೆಹೂದ್ಯರು ದೇವನಗರಿಯಲ್ಲಿ ಬಂದು ನೆಲೆಸಲು ನೆಹೆಮೀಯನು ಆದೇಶಿಸಿದನು.  ಪೌಳಿಗೋಡೆ ಹಾಗೂ ಬಾಗಿಲುಗಳ ಪ್ರತಿಷ್ಠೆ ಸಂಭ್ರಮದಿಂದ ಜರುಗಿತು. ಧರ್ಮಾಧಿಕಾರಿ ಎಜ್ರನಿಂದ ಧರ್ಮಶಾಸ್ತ್ರ ಪಾರಾಯಣವೂ ನಡೆಯಿತು.
ಈ ಮಧ್ಯೆ, ನೆಹೆಮೀಯನು ಒಮ್ಮೆ ಶೂಷನ್ನಿಗೆ ಹೋಗಿ ಮತ್ತೆ ಯೆರೂಸಲೆಮಿಗೆ ವಾಪಸಾಗಿದ್ದನು. ಎರಡು ಬಾರಿ ಯೂದಾಯದ ದೇಶಾಧಿಪತಿಯಾಗಿದ್ದ ಮಹಾನ್ ನಾಯಕನು ಪ್ರಕಟಿಸಿದ ನಿಷ್ಠೆ, ದೇವಾಲಯದ ಮೇಲೆ ಅಗಾಧ ಪ್ರೀತಿ, ಭಕ್ತಿ, ಕಳಕಳಿಗಳು, ಪೌಳಿಗೋಡೆಯನ್ನು ಬಲಪಡಿಸಲು ಎಲ್ಲರನ್ನೂ ಕೂಡಿಸಿದ್ದು - ಇವೆಲ್ಲವೂ ಅತ್ಯಂತ ಅನುಕರಣೀಯ, ನಮ್ಮಲ್ಲಿರಬೇಕಾದ ಗುಣಗಳಿವು, !

ಯೋಚಿಸಿ -ನಮ್ಮ ದೇವಸಭೆಯಲ್ಲಿ ಸಂದುಗಳಿವೆಯೋ? ಇದ್ದರೆ, ಅವುಗಳನ್ನು ಮುಚ್ಚಿ, ದೇವಾಲಯವನ್ನು ಭದ್ರಪಡಿಸೋಣವೆ?




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...