- ಫಾ. ಪಿ ವಿಜಯ ಕುಮಾರ್, ಬಳ್ಳಾರಿ
ನಿತ್ಯಜೀವ ಎಂದರೆ ಏನು? ಇದು ಯಾರಿಗೆ ಬೇಕು, ಯಾರಿಗೆ ಬೇಡ? ಯಾರಿಗೆ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ? ಯಾವಾಗ ಸಿಗುತ್ತದೆ? ಇವೆಲ್ಲ ಯಕ್ಷ ಪ್ರಶ್ನೆಗಳೇ ಸರಿ. ಹಾಗಾದರೆ ನಿತ್ಯಜೀವ ಎಂದರೆ ಏನು? ಇದು ಯಾರಿಗೆ ದೊರೆಯುತ್ತದೆ? ನಿತ್ಯಜೀವ ಎಂದರೆ ತ್ರೈಏಕ ದೇವನ ಸನ್ನಿಧಿಯಲ್ಲಿ ನಿರಂತರವಾಗಿ ಪರಿಪೂರ್ಣವಾದ ಆನಂದವನ್ನು ಆಸ್ವಾಧಿಸುವುದು. ಇದು ಯಾರಿಗೆ ಬೇಕಾದರೂ ಸಿಗಬಹುದು. ಇದಕ್ಕೆ ಬಡವ-ಬಲ್ಲಿದ, ಜ್ಞಾನಿ-ಅಜ್ಞಾನಿ, ಶ್ರೇಷ್ಠ-ಕನಿಷ್ಠ, ಬಲಹೀನ-ಬಲಿಷ್ಟ ಎಂಬ ಬೇಧವಲ್ಲ. ಇದು ತ್ರೈಏಕ ದೇವರು ಉಚಿತವಾಗಿ ನೀಡಿವ ಅನಂತ ಉಡುಗೊರೆ. ಅವರು ಇಚ್ಛಿಸಿದವರಿಗೆ ಅದನ್ನು ಉಚಿತವಾಗಿ ಯಥೇಚ್ಛವಾಗಿ ನೀಡುವರು. ಯಾರೂ ಸಹ ಇದನ್ನು ತಮ್ಮ ಪರಿಶ್ರಮದಿಂದಾಗಲೀ, ಬುದ್ದಿವಂತಿಕೆಯಿಂದಾಲೀ, ದಾನ-ಧರ್ಮದಿಂದಾಗಲೀ, ಭಕ್ತಿ-ಭಾವದಿಂದಾಗಲೀ ಗಳಿಸಲು ಸಾಧ್ಯವಿಲ್ಲ. ಇದು ದೇವರ ಉಚಿತ ವರದಾನ. ಇದನ್ನು ಸಂತ ಪೌಲನು ಹೀಗೆ ವಿವರಿಸುತ್ತಾನೆ
“ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ”
(ರೋಮನರಿಗೆ 6:23).
ನಿತ್ಯಜೀವ ಒಬ್ಬ ವ್ಯಕ್ತಿ ಸತ್ತ ನಂತರ ಅನುಭವಿಸುವುದಲ್ಲ. ಪ್ರಭುಯೇಸು ಅದನ್ನು ಹೀಗೆ ವಿವರಿಸುತ್ತಾರೆ :
ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾನೆ. ಅವನು ಖಂಡನೆಗೆ ಗುರಿ ಆಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ (ಯೊವಾನ5:24).
ಅಂದರೆ ಒಬ್ಬ ವ್ಯಕ್ತಿ ಪ್ರಭುಯೇಸುವಿನಲ್ಲಿ ವಿಶ್ವಾಸವಿಟ್ಟು ಸ್ನಾನದೀಕ್ಷೆ ಪಡೆದ ಕ್ಷಣದಿಂದಲೇ ನಿತ್ಯಜೀವ ಪ್ರಾರಂಭವಾಗುತ್ತದೆ. ಅದು ವ್ಯಕ್ತಿಯ ಸ್ವಾಭಾವಿಕ ಬೆಳವಣಿಗೆಯೊಂದಿಗೆ ಆಧ್ಯಾತ್ಮಿಕವಾಗಿ ಅವನಿಗರಿವಿಲ್ಲದಂತೆ ಆಂತರಿಕವಾಗಿ ಬೆಳೆಯುತ್ತಿರುತ್ತದೆ. ಅದೇ ಸಮಯದಲ್ಲಿ ಈ ಸುಂದರ ಲೋಕದ ಆಶಾಪಾಶಗಳು ಆ ವ್ಯಕ್ತಿಯನ್ನು ಅಕರ್ಷಿಸುತ್ತವೆ. ಆದರೆ ಅವುಗಳಿಗೆ ಬಲಿಯಾಗದೆ ತ್ರೈಏಕನಲ್ಲಿ ತನ್ನ ದೃಷ್ಟಿಯನ್ನು ನೆಟ್ಟಾಗ ತ್ರೈಏಕ ದೇವ ಅವರನ್ನು ಕೈಹಿಡಿದು ಮುನ್ನೆಡೆಸುತ್ತಾರೆ. ಅವರ ಕರಗಳಲ್ಲಿ ನಮ್ಮ ಕರಗಳನ್ನು ಇರಿಸಿದಾಗ ಲೋಕದ ಆಶಾಪಾಶಗಳೆಲ್ಲ ಕ್ಷಣಿಕವೆಂಬ ಅರಿವು ಮೂಡಿ ಅವು ಮಂಜಿನಂತೆ ಕರಗಿಹೋಗಿ ಭ್ರಾತೃಪ್ರೇಮ ಅಂತರಾಳದಲ್ಲಿ ಅಂಕುರಿಸುತ್ತದೆ. ಅದು ಹಂತ ಹಂತವಾಗಿ ಬೆಳೆದು ಹೆಮ್ಮರವಾಗಿ ’ತನಗಾಗಿ ಬಾಳುವುದು ಬಾಳಲ್ಲ ಪರರಿಗಾಗಿ ಬಾಳುವುದೇ ನಿಜವಾದ ಬಾಳು’ ಎಂಬ ಆಧ್ಯಾತ್ಮಿಕ ಒಳ ಅರಿವು ತೆರೆದುಕೊಳ್ಳುತ್ತದೆ. ಅಲ್ಲಿ ನಿತ್ಯಜೀವದ ಬುನಾದಿ ಭದ್ರವಾಗಿ ಆಳವಾಗಿ ಬೇರು ಬಿಟ್ಟು ನೆಲೆಯೂರುತ್ತದೆ. ಪರರಿಗಾಗಿ ಯಾರು ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೋ ಅವರು ನಿತ್ಯಜೀವದೆಡೆಗೆ ನಿರಂತರ ದಾಪುಗಾಲು ಹಾಕುತ್ತಾರೆ.
ನಿತ್ಯಜೀವ ಈ ಲೋಕದಲ್ಲಿರುವಾಗಲೇ ಅನುಭವಿಸಲು ಸಾಧ್ಯವಿರುವ ದೈವಾನುಭಾವ. ಅದು ಈ ಲೋಕದ ಜೀವನ ಯಾತ್ರೆಯಲ್ಲಿ ಸದೃಢವಾಗಿ ಬೆಳೆಯುತ್ತ ಹೆಮ್ಮರವಾಗುತ್ತ ಸಾಗಿ ಒಂದು ದಿನ ಎಲ್ಲರ ಹಾಗೆ ಇಹಲೋಕ ತ್ಯಜಿಸಿ ತ್ರೈಏಕ ದೇವನ ಸನ್ನಿಧಿ ಸೇರಿದಾಗ ಪರಿಪೂರ್ಣವಾಗುವುದು.
ಹಾಗಾದರೆ ಒಬ್ಬ ವ್ಯಕ್ತಿ ನಿತ್ಯಜೀವದೆಡೆಗೆ ಪಯಣಿಸುತ್ತಿರುವನೆಂದು ತಿಳಿಯುವುದು ಹೇಗೆ? ಅಂತಹ ವ್ಯಕ್ತಿ ನಿಸ್ವಾರ್ಥಿಯಾಗಿರುತ್ತಾನೆ. ಆ ವ್ಯಕ್ತಿಗೆ ’ಅಲ್ಪ ಸುಖಕ್ಕಿಂತ ಪರರ ಸುಖವೇ’ ಶ್ರೇಷ್ಠವೆಂಬ ಅರಿವು ಉದಯವಾಗುತ್ತದೆ. ಆಗ ಆ ವ್ಯಕ್ತಿಯಲ್ಲಿ ಈ ಲೋಕದ ಅಳಿದು ಹೋಗುವ ಆಸ್ತಿ-ಅಂತಸ್ತಿನ ವ್ಯಾಮೋಹವಿರುವುದಿಲ್ಲ. ಸದಾ ಪರೋಪಕಾರಿಯಾಗಿರಲು ಬಯಸುತ್ತಾನೆ. ನುಸಿ ಹಿಡಿಯುವ ಆಸ್ತಿಯನ್ನು ಸಂಪಾದಿಸುವುದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ. ಬದಲಾಗಿ ಸಮಾಜದಿಂದ ತಿರಸ್ಕೃತರಾದವರ, ದೀನರ, ಬಡವರ, ರೋಗಿಗಳ ಫಲಾಪೇಕ್ಷೆ ಇಲ್ಲದ ಸೇವೆಯೇ ಅವನ/ಳ ಪರಮ ಗುರಿಯಾಗಿರುತ್ತದೆ. ಅವರ ಹೃದಯ ಸದಾ ಪರಹಿತವನ್ನು ಬಯಸುತ್ತದೆ. ನೊಂದ ಮನಗಳಿಗೆ ಸಾಂತ್ವನ ನೀಡಿ ಅವರ ಕಣ್ಗಳಲ್ಲಿ ಸಂತೋಷವನ್ನು ಕಾಣಲು ಅವರು ತವಕಿಸುತ್ತಾರೆ. ನಿಷ್ಕಪಟ ಹೃದಯ, ನಿರ್ಮಲ ಮನಸ್ಸು, ಸೇವಾ ಮನೋಭಾವ ಅವರ ಆಸ್ತಿ. ಕ್ರಿಸ್ತನ ತ್ಯಾಗ ಅವರಿಗೆ ಸ್ಫೂರ್ತಿ, ಕ್ರಿಸ್ತನ ಬೋಧನೆ ಅವರಿಗೆ ಪ್ರೇರಣೆ, ಕ್ರಿಸ್ತನ ಪುನರುತ್ಥಾನ ಅವರಿಗೆ ಭರವಸೆಯ ಚಿಲುಮೆ. ಒಟ್ಟಾರೆ ಪ್ರಭು ಕ್ರಿಸ್ತನೇ ಅವರಿಗೆ ನಿತ್ಯಜೀವ (ಯೊವಾನ್ನ 17:3).
ಪರಮ ತ್ಯಾಗಿ ಪ್ರಭು ಕ್ರಿಸ್ತನನ್ನು ಅಂಗೀಕರಿಸಿ ಅವರ ಆಜ್ಞೆಯನ್ನು ಪಾಲಿಸುತ್ತ ಮುಕ್ತ ಮನದಿಂದ ಕ್ರಿಸ್ತನನ್ನು ಹಿಂಬಾಲಿಸುತ್ತ ಸರಳತೆಯನ್ನು ಮೈಗೂಡಿಸಿಕೊಂಡು ನಿಸ್ವಾರ್ಥತೆಯಿಂದ ಮಾನವರ ಸೇವೆಮಾಡುವವನಿಗೆ ನಿತ್ಯಜೀವ ಲಭಿಸುವುದರಲ್ಲಿ ಸಂಶಯವೇ?
*********
No comments:
Post a Comment