Friday, 7 June 2019

ಮೋದಿಯವರೇ all the best

¨ ಜೋವಿ

ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಅಘಾತಗೊಂಡ ಎಷ್ಟೋ ಜನರಲ್ಲಿ ನಾನು ಕೂಡ ಒಬ್ಬ. ಯಾವ ಅಧಾರದ ಮೇಲೆ ಜನರು ಓಟು ಮಾಡಿ ಒಂದು ಪಕ್ಷಕ್ಕೆ ಬಹುಮತಕೊಟ್ಟು ಗೆಲ್ಲಿಸಿದರೋ ಗೊತ್ತಿಲ್ಲ; ಗೆಲ್ಲಬೇಕಾದವರು ಗೆಲ್ಲಲಿಲ್ಲ, ಗೆಲ್ಲಬಾರದವರು ಗೆದಿದ್ದಾರೆ. ಸರ್ಕಾರದ ತಪ್ಪುಒಪ್ಪುಗಳನ್ನು ಪಶ್ನಿಸಿ ಬಡವರ ಪರ ಕಾಳಜಿಯನ್ನು ತೋರಿದವರನ್ನು ಸೋಲಿಸಿ, ಉಗ್ರವಾದವನ್ನು ಪೋಷಿಸಿ ಅಪ್ಪಿಕೊಂಡವರನ್ನು ಗೆಲ್ಲಿಸಿದ್ದಾರೆ; ಶಿಕ್ಷಣತಜ್ಞೆಯನ್ನು ಸೋಲಿಸಿ ಆಟಗಾರನಿಗೆ ಓಟ್ ಹಾಕಿ ಗೆಲ್ಲಿಸಿದ್ದಾರೆ. ಒಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಮಣೆ ಹಾಕದೆ, ಜನರಲ್ಲಿ ಒಡಕು ಮೂಡಿಸಿ ಬಲಹೀನರ ಮೇಲೆ ಬಲ ಪ್ರಯೋಗ ಮಾಡುವ ಒಂದು ಸಿದ್ಧಾಂತಕ್ಕೆ ಜನರು ಮಾರು ಹೋದಂತೆ ನಮಗೆ ಸ್ವಷ್ಟವಾಗಿ ಕಾಣುತ್ತಿದೆ. 

ಚುನಾವಣೆಯ ಅತಿರೇಕ ಫಲಿತಾಂಶವನ್ನು ವಿಶ್ಲೇಷಿಸಿ ಅನೇಕರು ಕಾರಣಗಳಿಗೆ ಹುಡುಕಾಡುತ್ತಿದ್ದಾರೆ. ಕೆಲವರಂತೂ ಇವಿಎಂ ರಿಗ್ ಆಗಿದೆ ಅಥವಾ ಇವಿಎಂ ಮಿಷಿನ್‍ಗಳಲ್ಲಿ ಮೋಸ ನಡೆದಿದೆ ಎಂದು ಚುನಾವಣಾ ಆಯೋಗವನ್ನು ದೂಷಿಸುತ್ತಿದ್ದಾರೆ. ಕೆಲವೊಂದು ಮಾಧ್ಯಮಗಳು ತಮ್ಮ ಸಂಶೋಧನೆಯಿಂದ ಹೊರ ಹಾಕಿರುವ ಕೆಲವೊಂದು ವರದಿಗಳು ಚುನಾವಣಾ ಅಯೋಗದ ಸ್ವಾಯತ್ತತೆ ಬಗ್ಗೆ ಮತ್ತು ಅದರ ಕಾರ್ಯವೈಖರಿಯ ಬಗ್ಗೆ ಸಂಶಯ ಕಣ್ಣುಗಳಿಂದ ನೋಡಲು ಅನು ಮಾಡಿಕೊಟ್ಟಿದೆ. ಎಷ್ಟೋ ಕಡೆ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳ ಲೆಕ್ಕಚಾರದಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಇವಿಎಂ ದುರುಪಯೋಗ ಮಾಡಿಕೊಂಡಿರುವುದು ಪಕ್ಕಾ ಎಂದು ಜನರು ಹೇಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವಿಎಂ ರಿಗ್ ಆಗಿರಲೀ ಆಗದೆಯೇ ಇರಲಿ ಒಂದು ವಿಷಯದ ಬಗ್ಗೆ ಯಾರಿಗೂ ಸಂಶಯ ಬರಲು ಸಾಧ್ಯವೇ ಇಲ್ಲ; ಅದೆಂದರೆ ಪರಿಣಾಮಕಾರಿಯಾಗಿ ರಿಗ್ ಆಗಿರುವುದು ಹಿಂದೂ ಮನಸ್ಸು ಎಂದು ಚಿಂತಕರು ಹೇಳುತ್ತಿದ್ದಾರೆ. 

ಏನೇ ಇರಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆರಿಸಿ ಬರಲು ಅವರ ಕಳೆದ ಐದು ವರ್ಷಗಳಲ್ಲಿ ನೀಡಿದ ಆಡಳಿತದ ವೈಖರಿ ಅಂತೂ ಅಲ್ಲವೇ ಅಲ್ಲ. ಅವರ ಅನೇಕ ಯೋಜನೆಗಳು ಪ್ರಚಾರದ ಗಿಮಿಕ್ಕು‍ಗಳಾದವೇ ವಿನಃ ಗುರಿ ಸಾಧಿಸುವಲ್ಲಿ ವಿಫಲವಾಗಿರುವುದು ನಮಗೆ ಗೊತ್ತೇ ಇದೆ. ಅವರ ನೋಟ್ ಬ್ಯಾನ್, ಡಿಜಿಟಲೀಕರಣ, ಆರೋಗ್ಯವಿಮೆ, ಸ್ವಚ್ಛ ಭಾರತ್, ಬ್ಯಾಂಕ್‍ಗಳ ಕೇಂದ್ರೀಕರಣ ಇವೆಲ್ಲವೂ ಹೀಗೆ ಗಾತ್ರದಲ್ಲಿ ದೊಡ್ಡದಾಗಿ ಮೋದಿಯ ಜನಪ್ರಿಯತೆಯನ್ನು ಹೆಚ್ಚಿಸಿದವೇ ವಿನಹ ಕಾರ್ಯಸಾಧನೆಯಲ್ಲಿ ಎಳ್ಳಷ್ಟೂ ಪ್ರಯೋಜನವಾಗಲಿಲ್ಲ. ಇನ್ನೊಂದು ಕಡೆ ಮೋದಿಯವರ ಪ್ರತಿಯೊಂದು ನಡೆ ನುಡಿಗೆ ರಾಷ್ತ್ರೀಯತೆ ಅಥವಾ ರಾಷ್ಟ್ರಪ್ರೇಮದ ಬಣ್ಣ ಹಚ್ಚಿ ವರ್ಣರಂಜಿತವಾಗಿ ವಿತರಿಸಿದ ಕಲುಷಿತ ಕಾರ್ಪೊರೇಟ್ ಮಾಧ್ಯಮಗಳು ಕೂಡ ಮೋದಿಯವರ ಗೆಲುವಿಗೆ ತುಂಬಾ ಶ್ರಮ ವಹಿಸಿದ್ದಂತೂ ನಿಜ. ಮೋದಿಯೊಬ್ಬ ಅತ್ಯುತ್ಸಾಹಿ, ದಣಿವರಿಯದ ಸರಳ ನಿಸ್ವಾರ್ಥ, ಶುದ್ಧರಾಜಕಾರಣಿ, ದಿಟ್ಟ ನಾಯಕ ಎಂದು ಏಕಪಕ್ಷೀಯವಾಗಿ ಅವರನ್ನು ಗಳಿಗೆಗೊಮ್ಮೆ ತೋರಿಸಿ ಅವರ ನ್ಯೂನತೆಗಳನ್ನು ಮುಚ್ಚಿ ಹಾಕಿ ಅತ್ಮವಂಚನೆ ಮಾಡಿಕೊಂಡ ನಮ್ಮ ಮಾಧ್ಯಮಗಳು, ಸೋಷಿಯಲ್ ಮೀಡಿಯಗಳು ಮೋದಿಯವರ ಗೆಲುವಿಗೆ ಕೈ ಜೋಡಿಸಿರುವುದು ವಾಸ್ತವ. ಮತ್ತೊಂದೆಡೆ ಹಿಂದುತ್ವದ ಅಜೆಂಡಾ ಹಿಡಿದುಕೊಂಡು ಅದರ ಅನುಷ್ಠಾನಕ್ಕೆ ತಂತ್ರಗಾರಿಕೆಯಿಂದ ಕೆಲಸಮಾಡುತ್ತಿರುವ ಕೆಲವೊಂದು ಸಂಘಟನೆಗಳ ಸಂಘಟನಾ ಶಕ್ತಿಯೂ ಕೂಡ ಮೋದಿಯವರ ಗೆಲುವಿಗೆ ವಂತಿಕೆ ಸಲ್ಲಿಸಿದಂತಿದೆ. 

ಹೌದು, ಪ್ರಜಾಪ್ರಭುತ್ವವನ್ನು ಗೌರವಿಸುವವರಿಗೆ, ಸಮಾನತೆಯ ಸಮಾಜವನ್ನು ಬಯಸುವವರಿಗೆ, ದೇಶದ ಸಂವಿಧಾನವನ್ನು ಗೌರವಿಸುವವರಿಗೆ ಈ ಲೋಕಸಭಾ ಫಲಿತಾಂಶದಿಂದ ಹತಾಶೆಯಾಗಿರಬಹು, ಪ್ರಯತ್ನದಲ್ಲಿ ಅಲ್ಪಸ್ವಲ್ಪ ಹಿನ್ನಡೆಯಾಗಿರಬಹುದು. ಆದರೆ ಬಹುಮತವೇ ಅಂತಿಮ. ಅದನ್ನು ನಾವು ಒಪ್ಪಿಕೊಳ್ಳುವುದು ಅನಿವಾರ್ಯ ಮತ್ತು ಕರ್ತವ್ಯ ಕೂಡ. ಈ ಹಿನ್ನಲೆಯಲ್ಲಿ ಸಮಾನತೆಯ ಸಮಾಜ ಸೃಷ್ಟಿಗೆ ನಮ್ಮ ಸಾತ್ವಿಕ ಹೋರಾಟ ಮುಂದುವರಿಯಲಿ. 

ಈ ಸಂದರ್ಭದಲ್ಲಿ ನಾವು ಕೂಡ ಬುದ್ಧಿವಂತಿಕೆಯಿಂದ ತಂತ್ರಗಾರಿಕೆಯಿಂದ ಕೆಲಸ ಮಾಡಬೇಕಿದೆ. ಅಂತಹ ಶಕ್ತಿ ಆ ಭಗವಂತ ನಮಗೆ ಕರುಣಿಸಲಿ. 

ಈಗಷ್ಟೇ facebook ಪೋಸ್ಟ್‍ಗಳನ್ನು ಗಮನಿಸುತ್ತಿದ್ದ ನನಗೆ "ಪದವೀಧರ ಮತದಾರರಿಗೆ ಪುಸ್ತಕಗಳ ಕೊಡುಗೆ" ಎಂಬ ಒಂದು ಪತ್ರಿಕಾವರದಿಯನ್ನು ಬಸೂರವರು ಹಂಚಿಕೊಂಡಿರುವುದನ್ನು ಕಂಡು, ವರದಿಯ ಚಿತ್ರವನ್ನು ಅನ್ನು ದೊಡ್ಡದು ಮಾಡಿ ಓದಿಕೊಂಡೆ. ಈಶಾನ್ಯ ಪದವೀಧರ ಕ್ಷೇತ್ರದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಕೂಡ್ಲಿಯ ಕಾನಾಮಡುಗು ಉಪನ್ಯಾಸಕ ಎಲ್ ಪಿ ಸುಭಾಷ್ ಚಂದ್ರರವರು ಆಯ್ದ ಮತದಾರರಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರಂತೆ. ಜಾತ್ಯತೀತ ನಿಲುವು, ಸಮ ಸಮಾಜದ ನಿರ್ಮಾಣ, ದಮನಿತರ ಪರವಾದ ನಡೆಯನ್ನು ಉತ್ತೇಜಿಸುವಂಥ ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ, ನಾನು ಸಾಯಲು ಸಿದ್ಧ, ಭಗತ್ ಸಿಂಗ್, ಸುಭಾಷ್‍ಚಂದ್ರ ಬೋಸ್, ಚೆಗುವಾರ, ಬಸವ ಪ್ರಜ್ಞೆ, ಬಸವಣ್ಣ ಮತ್ತು ಅಂಬೇಡ್ಕರ್, ಗಾಂಧಿ ಮತ್ತು ಅಸ್ಪೃಶ್ಯತಾ ವಿಮೋಚನೆ ಸೇರಿದಂತೆ ಹಲವು ಕೃತಿಗಳ ವಿತರಣೆ ಕಾರ್ಯಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ವಿತರಿಸುವ ಕಾರ್ಯ ಭರದಿಂದ ನಡೆದಿದೆಯಂತೆ. ಪುಸ್ತಕಗಳನ್ನು ಶೇ 50 ರಿಯಾಯಿತಿ ದರಕ್ಕೆ ನೀಡಿ ಈ ಕಾರ್ಯದಲ್ಲಿ ಲಡಾಯಿ ಪ್ರಕಾಶನ ಕೂಡ ಕೈಜೋಡಿಸಿದೆಯಂತೆ. 

ಈ ವರದಿಯನ್ನು ಓದಿ ಹೀಗಾದರೂ ವಿದ್ಯಾವಂತರು ಪ್ರಜ್ಞಾವಂತರಾಗಲಿ ಹಣ ಹೆಂಡಕ್ಕೆ ಮಾರಿಕೊಳ್ಳದೆ ಜ್ಞಾನಕ್ಕೆ ಶರಣಾಗಲಿ ಎಂದು ಕೆಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆಯ ಮುಂಚೆ ನಾವು ಕೂಡ ನಮ್ಮ ಮತದಾರರಿಗೆ ಇಂತಹ ಪುಸ್ತಕಗಳನ್ನು ವಿತರಿಸಿ ಮತದಾರರನ್ನು ವಿಚಾರವಂತರಾಗಿ ಮಾಡಬಹುದಿತ್ತಲ್ಲ ಎಂದು ನನ್ನನ್ನು ನಾನು ಪ್ರಶ್ನೆ ಮಾಡಿಕೊಂಡಾಗ, ಅನಕ್ಷರಸ್ಥರೆ ನಮ್ಮ ದೇಶದಲ್ಲಿ ತುಂಬಿರುವಾಗ ಪುಸ್ತಕಗಳನ್ನು ಹಂಚುವುದರಲ್ಲಿ ಏನು ಉಪಯೋಗವಿಲ್ಲ. ಬದಲಾಗಿ ನಿಜವಾದ ಶಿಕ್ಷಣವನ್ನು ಅಕ್ಷರಸ್ಥರಿಗೆ ಹಾಗು ಅನಕ್ಷರಸ್ಥರಿಗೆ ಕೊಡಬೇಕಾಗಿದೆ. ಎಲ್ಲವನ್ನು ಪ್ರಶ್ನಿಸುವ ವಿಮರ್ಶಿಸುವ ಗುಣವನ್ನು ಬೆಳಸಬೇಕಾಗಿದೆ. ಯಾವುದು ಸತ್ಯ ಯಾವುದು ಮಿಥ್ಯ ಎಂದು ಅರಿಯುವ ಶಕ್ತಿ ಕೂಡ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಶಿಕ್ಷಿತರಾಗಬೇಕಿದೆ ಎಂಬ ನನ್ನಲ್ಲಿ ಮೂಡಿದ ಉತ್ತರ ನಿಜವೆನ್ನಿಸುತ್ತಿದೆ. !!! 

ಕೊನೆಗೆ ಎನ್ ರವಿಕುಮಾರ್ ತಮ್ಮದೊಂದು ಲೇಖನದಲ್ಲಿ ಹೇಳುವಂತೆ “…ಮೋದಿ ಅವರ ನಡೆಯನ್ನು ಅಷ್ಟು ಸುಲಭವಾಗಿ ನಂಬುವಂತಿಲ್ಲ. ಅವರದ್ದು ಮಾರ್ಜಾಲ ನಡೆ. ಇನ್ನೂ ಈ ದೇಶದ ಸ್ಥಿತಿ ಮುಗಿದೇ ಹೋಯಿತು, ಬಹುತ್ವದ ದೇಶವೊಂದು ಕೋಮುವಾದದತ್ತ ಧ್ರುವೀಕರಣಗೊಂಡಂತಾಗಿಬಿಟ್ಟಿತು ಎಂಬ ಮಾತುಗಳು ಕೇಳಿಬಂದರೂ ನಾವಿನ್ನೂ ಕಾದು ನೋಡುವ ಸ್ಥಿತಿಯ ಕಾಲಕ್ಕೆ ಒಗ್ಗಿಕೊಳ್ಳಬೇಕಿದೆ. ಅದಕ್ಕೆ ಕಾರಣ ಈ ದೇಶದ ಪರಂಪರೆಯೊಂದು ನಮ್ಮ ಕಣ್ಣ ಮುಂದೆ ಇದೆ. ರಣ ಹಂತಕ ಅಂಗುಲಿಮಾಲ ಬುದ್ಧನೆದುರು ಬಿಕ್ಕುವಾಗಿ ನಿಂತದ್ದು, ದರೋಡೆಕೋರ ವಾಲ್ಮೀಕಿ ಶ್ರೇಷ್ಠ ಮಹರ್ಷಿಯಾಗಿದ್ದು, ಸಾಮ್ರಾಟನಾದ ಅಶೋಕ ಚಕ್ರವರ್ತಿ ಯುದ್ಧಕಣದಲ್ಲೇ ಹಿಂಸೆಯನ್ನು ತೊರೆದು ನಡೆದದ್ದು ನಮ್ಮೊಳಗೆ ಒಂದು ದಾರ್ಶನಿಕ ಹಾದಿಯನ್ನು ಬಿಟ್ಟುಹೋಗಿರುವಾಗ ನರೇಂದ್ರ ಮೋದಿ ಅವರಲ್ಲಿನ ಈ ಬದಲಾವಣೆ ಆಶ್ಚರ್ಯ ತಂದರೂ ಸದ್ಯಕ್ಕೆ ಅನುಮಾನಿಸುವುದು ಬೇಡ…” 
ಈ ಒಂದು ಧನಾತ್ಮಕ ಭಾವನೆಯಲ್ಲಿ ಮೋದಿಯವರೇ all the best ಎನ್ನುತ್ತೇನೆ. 

********* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...