.......ಸರ್ವಮತಗಳಿಗಿಂತಲೂ ಶುದ್ಧಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಆ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ. ಮತಿಯನ್ನು ತಿರಸ್ಕರಿಸಿದರೆ ಈಶ್ವರನ ಜ್ಯೋತಿಯನ್ನು ತಿರಸ್ಕರಿಸಿದಂತಾಗುತ್ತದೆ. ಹಾಗೆ ಮಾಡುವವನೇ ನಿಜವಾಗಿಯೂ ನಾಸ್ತಿಕನು. ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ.
ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಾಸಿಸಿದನು ಎಂದು ಹೇಳಿದರೆ, ಕಣ್ಣು, ಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ. ಆಗಿನ ಮನು ಪವಿತ್ರನಾದರೆ ಈಗಿನ ಮಹಾತ್ಮಗಾಂಧಿ ಪವಿತ್ರನಲ್ಲವೆ? ನಂಬುಗೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ. ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ. ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡು ಹಿಡಿದ ಸತ್ಯಗಳು ಹಳೆಯ ಅರ್ಧಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ ಧರ್ಮ ಪ್ರಪಂಚದಲ್ಲೇಕೆ ಹಾಗಾಗಬಾರದು? ವೇದ ಅನಾದಿಯಾದರೆ ಅನಂತವೂ ಆಗಿರುವುದಿಲ್ಲವೆ? ವೇದ ಪೂರೈಸಿದ ಗ್ರಂಥವಲ್ಲ; ವೇದದ ಕಟ್ಟಕಡೆಯ ಅಧ್ಯಾಯ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತದೆ. ಹಾಗೆಯೇ ಋಷಿಗಳೂ ಆಚಾರ್‍ಯರೂ ಅಂದಿಗೇ ಪೂರೈಸಿಲ್ಲ, ಕೊನೆಗಂಡಿಲ್ಲ; ಇಂದಿಗೂ ನಾಳೆಗೂ ಬರುತ್ತಲೇ ಇರುತ್ತಾರೆ. ಆದ್ದರಿಂದ ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ. ಸಂಕುಚಿತ ಬುದ್ಧಿಯನ್ನು ದೂರಮಾಡಿ. ಹೃದಯಜೀವನ ಹಳೆಯ ನೀರಿನ ಕೊಳಕು ಕೊಳವಾಗದಿರಲಿ; ಯಾವಾಗಲೂ ಹೊಸ ನೀರು ಬಂದು ಹರಿಯುತ್ತಿರುವ ಸ್ವಚ್ಛ ಸಲಿಲ ಸ್ರೋತವಾಗಿರಲಿ...
710 ಕುವೆಂಪು ಸಂಚಯ
No comments:
Post a Comment