- ಆಜು (ಮರಿಯಾಪುರ)
ಅಂದು ಸುಮ್ಮನೆ ಮನೆಯಲ್ಲಿ ಕೂತು ನನ್ನ ಮೊಬೈಲಿನಲ್ಲಿ ಏನೋ ತಡುಕುತ್ತಾಇದ್ದ ನನಗೆ ನನ್ನ ಅಪ್ಪನ ಬಿರುಸು ಮಾತುಗಳು ಕೂತಲ್ಲಿ ಕೂರಬಿಡದೆ ಎದ್ದು ಹೊರ ನಡೆಯುವಂತೆ ಮಾಡಿತು.
ದಾರಿಯುದ್ದಕ್ಕೂ ನನ್ನ ಅಪ್ಪನ ಬಗ್ಗೆ ತಿರಸ್ಕಾರದ ಮಾತುಗಳನ್ನು ಒಬ್ಬನೇ ಗೊಣಗುತ್ತ ನಮ್ಮೂರಿನ ಮೈದಾನದ ಕಡೆಗೆ ಹೊರಟೆ. ನನ್ನ ಎಲ್ಲಾ ತರಲೆ ತರ್ಕಗಳ ಕೇಳಲು ನನಗಾಗಿ ಆ ಮೈದಾನದ ಮಧ್ಯದ ಅಗಾಧವಾದ ಆಲದಮರ ಕಾಯುತ್ತ ಇತ್ತು. ಆ ಮರದ ಆಡಿಯಲ್ಲಿ ಬಿದ್ದ ಪೀಚು ಕಾಯಿಗಳ ಜೊತೆ ಕೂತು ನನ್ನ ಪೀಚು ಬುದ್ದಿಯ ಯೋಚನೆಗಳು ಒಂದೊಂದೇ ಹೊರಬಂದವು. "ಈ ಹೆತ್ತವರು ಹೀಗೇಕೆ", "ನಮ್ಮ ವಯಸ್ಸಲ್ಲಿ ಇವರೇನು ಕಡಿದು ಕಟ್ಟೆ ಹಾಕಿದರು?", "ಇವರಿಗೇನು ತಿಳಿಯುತ್ತೆ ನಮ್ಮ ಕಷ್ಟ", "ಛೇ ಇವರ ಜೊತೆ ಇರೋದೇ ಬೇಡ ಎಲ್ಲಾದ್ರೂ ದೂರ ಹೋಗಿ ಬಿಡಬೇಕು" ಎಂಬೆಲ್ಲ ಆಲೋಚನೆಗಳು ಮೂಡಿ ಇನ್ನೇನು ನನ್ನ ಕಣ್ಣಿಂದ ಒಂದು ಹನಿ ಹೊರಬರಲು ಪ್ರಯತ್ನಿಸುತ್ತಿರುವಾಗಲೇ ಹಿಂದೆ ಯಾರೋ ಅಳುವ ಸದ್ದು ಕೇಳಿಸಿತು.
"ಏನಾಶ್ಚರ್ಯ! ನನ್ನ ಗೋಳು ಕೇಳಿ ಇಷ್ಟು ವರ್ಷ ಅಲುಗಾಡದ ಈ ಆಲದಮರ ಅಳುತ್ತಿದೆಯೇ ಎಂದು ಹಿಂತಿರುಗಿ ನೋಡಿದೆ. ಅದು ನಿಂತ ಜಾಗದಲ್ಲೇ ಗಾಂಭೀರ್ಯದಿಂದ ನಿಂತಿತ್ತು. ಮತ್ತೆ ಎಲ್ಲಿಂದ ಈ ಸದ್ದು ಎಂದು ಎದ್ದು ಮರದ ಹಿಂಬದಿಗೆ ಹೋಗಿ ನೋಡಿದೆ. ಅಲ್ಲಿ ಒಬ್ಬ ಹನ್ನೆರಡು ಆಸುಪಾಸಿನ ಹುಡುಗ ಮುಖ ಮುಚ್ಚಿಕೊಂಡು ಆಕಾಶ ಕಳಚಿ ಬಿದ್ದಂತೆ ಆಳುತ್ತಿದ್ದ.
"ಅರೆರೇ!! ಅಳಬೇಕೆಂದು ನಿರ್ಧರಿಸಿದವನು ನಾನು, ಇವನ್ಯಾರೋ ನನಗೆ ಪೈಪೋಟಿ ನೀಡಿ ಅಳುತ್ತಿದ್ದಾನಲ್ಲ" ಎಂದು ಅವನ ಬಳಿ ಹೋಗಿ ಸಮಸ್ಯೆ ಏನೆಂದು ವಿಚಾರಿಸಿದೆ. ಅದಕ್ಕೆ ಅವನು ಬಿಕ್ಕಳಿಸುತ್ತಲೇ "ನನ್ನ ಅಪ್ಪ" ಎಂದು ಆರಂಭಿಸಿದ. ನನ್ನ ಮನಸ್ಸಿನಲ್ಲಿ ಇವನು ಯಾರೋ ನನ್ನ ಕೇಸು, ಅಪ್ಪನ ಮೇಲಿನ ಬೇಜಾರಿಗೆ ಬಂದು ಕುಳಿತಿದ್ದಾನೆಂದು ಯೋಚಿಸಿದೆ. ಅವನು ಮುಂದುವರಿಸುತ್ತ "ನಾನು ನನ್ನ ಅಪ್ಪನ ಜೇಬಿನಿಂದ ನೂರು ರೂಪಾಯಿ ಕದ್ದು ಖರ್ಚು ಮಾಡಿಬಿಟ್ಟೆ. ಈಗ ಅದು ನಮ್ಮಪ್ಪನಿಗೆ ಗೊತ್ತಾದ್ರೆ ಹೊಡಿತಾರೆ ಎಂದು ಭಯದಲ್ಲಿ ಬಂದು ಇಲ್ಲಿ ಕುಳಿತಿದ್ದೀನಿ" ಎಂದು ಹೇಳಿದ.
ನನ್ನ ಯೋಚನೆ ಅಷ್ಟು ನಿಖರವಾಗಿರದಿದ್ದರೂ ತಕ್ಕಮಟ್ಟಿಗೆ ಸರಿಯಿತ್ತು. ನಾನು ಅವನಿಗೆ ಸಮಾಧಾನ ಮಾಡುವಷ್ಟರಲ್ಲಿ ದೂರದಿಂದ ಯಾರೋ "ಜಾನಿ ಜಾನಿ" ಎಂದ ಕೂಗು ಕೇಳಿಸಿತು. ನನಗೆ ಆ ಧ್ವನಿ ಯಾರದೆಂದು ತಿಳಿಯಲಿಲ್ಲ. ಆದರೆ ಆ ಹುಡುಗ ಖಂಡಿತವಾಗಿ ಇದು ತನ್ನ ಅಪ್ಪನ ಧ್ವನಿಯೆಂದು "ಇಂದು ನಾನು ಸತ್ತೆ" ಎನ್ನುತ್ತ ಇನ್ನಷ್ಟು ಜೋರಾಗಿ ಅಳಲಾರಂಭಿಸಿ, ಓಡಲೆತ್ನಿಸಿದ.
ನಾನು ಅವನ ಕೈ ಹಿಡಿದು ಎಲ್ಲಿಗೆ ಹೋಗುತ್ತೀಯ ಇಲ್ಲೇ ಇರು ನಾನು ಮಾತನಾಡುತ್ತೀನಿ ಎಂದು ಹೇಳಿ ನಿಲ್ಲಿಸಿದೆ. ದೂರದಲ್ಲಿ ಇದ್ದ ಆ ಹುಡುಗನ ಅಪ್ಪ ಹತ್ತಿರವಾಗುತ್ತಿದ್ದಂತೆ ಆ ಹುಡುಗನ ಅಳು ದ್ವಿಗುಣವಾಯಿತು. ಆದರೆ ಅವನ ಅಪ್ಪನ ಮುಖದಲ್ಲಿ ಕೋಪದ ಯಾವ ಕುರುಹೂ ಕಾಣಲ್ಲಿಲ್ಲ. ಮಗನನ್ನು ಕಾಣದ ಭೀತಿ ಕಾಣಿಸುತ್ತಿತು, ಆತಂಕವಿತ್ತು. ಆ ಆತಂಕ ತನ್ನ ಕಾಣದ ಕಾಸಿನ ಬಗ್ಗೆಯಲ್ಲ, ಕಾಣದ ತನ್ನ ಮಗನ ಬಗ್ಗೆ ಎಂದು ನನಗೆ ಅರಿವಾಗಿತ್ತು, ಅವನ ಅಪ್ಪ ಬಂದೊಡನೆ ಮಗನನ್ನು ತಬ್ಬಿಕೊಂಡು ಅವನೂ ಅಳಲಾರಂಭಿಸಿದ. ನಾನು ಮೂಗನಂತೆ ಇದನ್ನೆಲ್ಲ ನೋಡುತ್ತಾ ನಿಂತೆ.
ಸ್ವಲ್ಪ ಸಮಯದ ನಂತರ ಆ ಅಪ್ಪ ತನ್ನ ಕಣ್ಣೀರನ್ನು ಒರೆಸಿಕೊಂಡು, "ಯಾಕೋ ಹೀಗೆ ಮಾಡಿದೆ? ನಿನ್ನ ಹುಡುಕಿ ಹುಡುಕಿ ಸಾಕಾಯಿತು ಯಾರಿಗೂ ಹೇಳದೆ ಹೀಗೆ ಬಂದು ಬಿಟ್ರೆ" ಎಂದು ಪ್ರೀತಿಯಿಂದಲೇ ಬೈಯತೊಡಗಿದ "ನೀನು ತಗೊಂಡ ಆ ಕಾಸು ನಿನಗೆಂದು ತೆಗೆದು ಇಟ್ಟಿದ್ದು, ಅದರ ಬಗ್ಗೆ ನೀನೇನು ಯೋಚನೆ ಮಾಡಬೇಡ ನನ್ನದೆಲ್ಲ ನಿನಗೆ ಅಲ್ಲವೇನೋ ಮತ್ತೆ ಯಾವತ್ತೂ ಈ ರೀತಿ ಮಾಡಬೇಡ, ನಡಿ ನಿಮ್ಮಮ್ಮ ಕಾಯುತ್ತಿರುತ್ತಾಳೆ" ಎಂದು ಅವನನ್ನು ಸಮಾಧಾನ ಮಾಡಿ ಕರೆದುಕೊಂಡು ಹೋಗಲಾರಂಭಿಸಿದ.
ಇವೆಲ್ಲವನ್ನು ಕಂಡ ನನಗೆ ಅವನ ಅಪ್ಪ ಹೇಳಿದ್ದು ಸರಿ ಎನಿಸಿತು. ಹೆತ್ತವರು ಏನೇ ಮಾಡಿದರೂ ಅಥವಾ ಏನೇ ಹೇಳಿದರೂ ತಮ್ಮ ಮಕ್ಕಳ ಒಳಿತಿಗಾಗೇ ಹೇಳುತ್ತಾರೆ. ಅವರು ಮಾಡುವ ಆಸ್ತಿ, ಮನೆ, ಗಳಿಸುವ ಹಣ, ಸೌಕರ್ಯಗಳು ಯಾವುದು ಅವರಿಗಾಗಿ ಅಲ್ಲ ತಮ್ಮ ಮಕ್ಕಳಿಗಾಗಿ ಎಂಬುದು ಎಷ್ಟು ನಿಜವೋ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಬೈಯದೆ ಅವರ ಎಳೇ ಮನಸ್ಸಿಗೆ ಗಾಸಿಮಾಡದೆ ಪ್ರೀತಿಯ ಮಾತಿನಿಂದ ತಿದ್ದಿ ಸರಿ ದಾರಿಗೆ ತರುವುದು ಅಷ್ಟೇ ಸಮಂಜಸವೆಂಬ ನಿರ್ಧಾರಕ್ಕೆ ಬರುತ್ತಿದ್ದಂತೆ ದೂರದಲ್ಲಿ ಆ ಅಪ್ಪ ಮತ್ತು ಮಗ ಇಬ್ಬರೂ ಒಟ್ಟಿಗೆ ಹೋಗುತ್ತಿದದ್ದು ಕಾಣಿಸಿತು. ಅರೆಕ್ಷಣ ಅವರಿಬ್ಬರೂ ನನಗೆ ಬೈಬಲ್‍ನ ಒಳ್ಳೆಯ ಕುರಿಗಾಹಿ-ದುಂದುಗಾರ ಮಗನಂತೆ ಕಂಡರು.
ಹಲವು ಬಾರಿ ಕೇಳಿದ ಈ ಸಾಮತಿ ಆಗ ಇನ್ನಷ್ಟು ಅರ್ಥವಾದಂತೆನಿಸಿತು. ಆ ಅಪ್ಪ ಮಗ ದೂರಾಗುತ್ತ ಹಾಗೇ ಮರೆಯಾದರು. ಅವರೊಂದಿಗೆ ಸೂರ್ಯನೂ ಸಹ ಮರೆಯಾಗ ತೊಡಗಿದ, ಇನ್ನೇಕೆ ನಾನೊಬ್ಬನೇ ಇಲ್ಲಿ ಎಂದು ನಾನೂ ನನ್ನ ಕುರಿಗಾಹಿಯ ಕಡೆಗೆ ಹೋಗಬೇಕೆಂದು ಮನೆಯ ಕಡೆ ಹೊರಟೆ.
*********
No comments:
Post a Comment