- ಫ್ರಾನ್ಸಿಸ್.ಎಂ.ಎನ್
ಬಿಜೆಪಿ ಎಂದರೇನು? ಕನ್ನಡ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಹೋಗೋಣ. ಕನ್ನಡ ಮನೆ ಮಾತಿನ ಕನ್ನಡನಾಡಾದ ಕರ್ನಾಟಕದಲ್ಲಿ, ಸರ್ಕಾರದ ಆಶಯದಂತೆ ಇನ್ನು ಮುಂದೆ ಅಂದರೆ ಪ್ರಸಕ್ತ ಸಾಲಿನಿಂದ ಕನ್ನಡ ಮಾಧ್ಯಮದ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಬೋಧನೆ ಪ್ರಾರಂಭವಾಗಬೇಕಿದೆ ಅಲ್ಲವೇ? ವಾಟ್ ಡಸ್ ಬಿಜೆಪಿ ಮೀನ್? ಬಿ ಜೆ ಪಿ ಎಂಬ ಮೂರಕ್ಷರಗಳ ಅರ್ಥವೇನು? ಯೇಸುಸ್ವಾಮಿಯನ್ನು ಜನರತ್ತ ಕೊಂಡೊಯ್ಯುವುದು ಅಂದರೆ ಬ್ರಿಂಗ್ ಜೀಸಸ್ ಟು ಪಿಪಲ್- ಬಿಜೆಪಿ.
ಪ್ರಸಕ್ತ ಲೋಕಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕ್ರೈಸ್ತ ಸಮುದಾಯದವರ ವಾಟ್ಸ್ ಆಪ್ ಗುಂಪುಗಳಲ್ಲಿ ಈ ಅರ್ಥ ನೀಡುವ ಸಂದೇಶದ ಚಿತ್ರಗಳು ಹರಿದಾಡತೊಡಗಿವೆ.
ಈ ಸಂದೇಶದ ಚಿತ್ರದಲ್ಲಿ, ಸದ್ಯದ ನಿತ್ಯ ಸತ್ಯದ ನಮ್ಮ ದೇಶದ ಸ್ಥಿತಿಯಲ್ಲಿ ನಾವು ಪ್ರಾರ್ಥನೆ ಸಲ್ಲಿಸೋಣ.
`ಪ್ರಭು, ನಿಮ್ಮ ಇಷ್ಟದಂತೆಯೇ ಬಿಜೆಪಿಯ ನೇತೃತ್ವದಲ್ಲಿ ದೇಶವು ಮುನ್ನಡೆಯಲಿ, ... ನಿಮ್ಮ ಮಾರ್ಗದರ್ಶನದಲ್ಲಿಯೇ ಬಿಜೆಪಿಯ ನಾಯಕರು ಸರಿಯಾದ ಪಥದಲ್ಲಿ ಮುಂದೆ ಸಾಗುವಂತೆ ಮಾಡು' ಎಂಬ ಪ್ರಾರ್ಥನೆಯನ್ನೂ ಸಲ್ಲಿಸಲು ಕೋರಲಾಗುತ್ತಿದೆ.
ಇದು ಗೆದ್ದೆತ್ತಿನ ಬಾಲ ಹಿಡಿಯುವ ಹುನ್ನಾರವೆ? ಹೌದೋ? ಅಲ್ಲವೋ? ಅದನ್ನು ಸ್ಪಷ್ಟವಾಗಿ, ನೇರವಾಗಿ ಹೇಳಲಾಗದು. ಆದರೆ, ಒಂದಂತೂ ನಿಜ. ಇದು ದೇವರ ಚಿತ್ತ, ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದು ಕ್ರೈಸ್ತರ ವಿಶ್ವಾಸದ ನಡಿಗೆ ಎನ್ನವುದಂತೂ ಸತ್ಯ.
ಆತಂಕದ ಪ್ರತಿಕ್ರಿಯೆಯೇ?:
ನರೇಂದ್ರ ಮೋದಿ ಅವರ ನೇತೃತ್ವದ, ಆರ್ ಎಸ್ ಎಸ್- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಮುಖದಂತಿರುವ, ಹಿಂದೂ ಮತ ಪಕ್ಷಪಾತಿ ಆಪಾದನೆ ಹೊತ್ತಿರುವ ರಾಜಕೀಯ ಪಕ್ಷ ಬಿಜೆಪಿ - ಭಾರತೀಯ ಜನತಾ ಪಕ್ಷವು, ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಹೀನಾಯವಾಗಿ ಮಣಿಸಿ ಅಧಿಕ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಕಟ್ಟಿಕೊಂಡಾಗ, ಈ ಬಗೆಯ ಸಂದೇಶಗಳು ಹರಿದಾಡಲು ಆರಂಭಿಸಿವೆ.
ಇದು ಆತಂಕದ ಪ್ರತಿಕ್ರಿಯೆ ಅನ್ನಿಸದೇ ಇರದು. ಸಾಂಪ್ರದಾಯಿಕವಾಗಿ ಸಂವಿಧಾನ ಬದ್ಧನಾಗಿರುತ್ತೇನೆ, ಗೌಪ್ಯತೆಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸುವ ಬಿಜೆಪಿಯ ಕರ್ನಾಟಕದ ಸಂಸದರೊಬ್ಬರು, `ನಾವು ಸಂವಿಧಾನ ಬದಲಾವಣೆಗೆ ಬಂದವರು' ಎಂದವರು. ಅವರು ಮತ್ತೆ ಅಧಿಕ ಮತಗಳ ಮುನ್ನಡೆಯಿಂದ ಆಯ್ಕೆಯಾಗಿದ್ದಾರೆ. ಉತ್ತರ ಭಾರತದಲ್ಲಿ ಮಹಾತ್ಮಾ ಗಾಂಧಿ ಪಟಕ್ಕೆ ಗುಂಡು ಹಾರಿಸಿದ ಹಾಗೂ ಗಾಂಧಿ ಅವರನ್ನು ಕೊಂದ ಘೋಡಸೆ ಒಬ್ಬ ದೇಶಭಕ್ತ ಎಂದು ಸಾರುತ್ತಿದ್ದ ಧಾರ್ಮಿಕ ವ್ಯಕ್ತಿಯೂ ಈ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಧರ್ಮ ಅಫೀಮು ಎಂಬ ಮಾತಿದೆ. ನಿತ್ಯ ಜೀವನದ ಜಂಜಾಟಗಳನ್ನು ಮರೆಸುವ ಶಕ್ತಿ ಇಂಥವುಗಳಿಗೆ ಮಾತ್ರ ಸಾಧ್ಯ.
ಬಿಜೆಪಿಯ ಜಯಭೇರಿ :
ಈ ಸಾಲಿನ ಮೇ ತಿಂಗಳ 23 ರಂದು ಘೋಷಣೆಯಾದ ಲೋಕಸಭೆಯ ಚುನಾವಣೆಯ ಫಲಿತಾಂಶದಲ್ಲಿ ತನ್ನ ಮಿತ್ರಪಕ್ಷಗಳೊಂದಿಗೆ ಜಯಭೇರಿ ಬಾರಿಸಿದ ಬಿಜೆಪಿಯು 351 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತು. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕೇವಲ 92 ಕ್ಷೇತ್ರಗಳ ಗೆಲುವಿಗೆ ತೃಪ್ತಿಪಡಬೇಕಾಯಿತು. ಪಕ್ಷೇತರರು. ಸ್ವಂತಂತ್ರವಾಗಿ ಪ್ರತಿನಿಧಿಸಿದ್ದ ಪಕ್ಷಗಳು 99 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ. ನಮ್ಮ ಸಂಸತ್ ನಲ್ಲಿ ಒಟ್ಟು ಸದಸ್ಯರ ಸಂಖ್ಯೆ 545 ಇದ್ದು, ಉಳಿದ 2 ಸ್ಥಾನಗಳು ಆಂಗ್ಲೊ ಇಂಡಿಯನ್ ಸಮುದಾಯ ಪ್ರತಿನಿಧಿಸುತ್ತಿದ್ದರೆ, ಅವರನ್ನು ಆಯಾ ಸರ್ಕಾರಗಳು ನಾಮಕರಣ ಮಾಡುತ್ತವೆ.
ಕಳೆದ 2014ರಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟು 336 ಸ್ಥಾನಗಳನ್ನು ಗಳಿಸಿದ್ದವು. ಈಗ 2019ರ ಚುನಾವಣೆಯಲ್ಲಿ ಅದು ಹೆಚ್ಚುವರಿಯಾಗಿ 15 ಸ್ಥಾನಗಳನ್ನು ಪಡೆದಿದೆ. ಹಿಂದಿ ಭಾಷಿಕ ಪ್ರಭಾವದ ಉತರ ಭಾರತದಲ್ಲಿನ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದರೂ, ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ಅಲ್ಲಲ್ಲಿನ ಪ್ರಾದೇಶಿಕ ಪಕ್ಷಗಳನ್ನು ನೆಚ್ಚಿಕೊಂಡ ಜನ ಬಿಜೆಪಿಯನ್ನು ಹತ್ತಿರ ಸೇರಿಸಿಕೊಂಡಿಲ್ಲ.
ಬಿಜೆಪಿಯನ್ನು ದೂರವಿಟ್ಟ ಅಯ್ಯಪ್ಪಸ್ವಾಮಿ :
ಹಿಂದೂ ರಾಷ್ಟ್ರವಾದ, ಯುದ್ಧೋನ್ಮಾದ, ಎಲ್ಲವೂ ತನ್ನಿಂದಲೇ ಎಂಬ ನರೇಂದ್ರ ಮೋದಿ ಅವರ ಅಹಮಿಕೆಯ ಮಾತುಗಳಲ್ಲಿ ಉತ್ತರ ಭಾರತದ ಜನ ಕೊಚ್ಚಿಹೋದರು. ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಹೆಚ್ಚತ್ತಿರುವ ಹಣದುಬ್ಬರ, ಕೃಷಿ ಕ್ಷೇತ್ರದಲ್ಲಿನ ಆತಂಕದ ಸ್ಥಿತಿ, ನೋಟು ರದ್ದು ತಂದ ಆರ್ಥಿಕ ಸಮಸ್ಯೆಗಳು... ... ಮುಂತಾದವು ಚುನಾವಣಾ ವಿಷಯಗಳಾಗಿ ಮುಂಚೂಣಿಗೆ ಬರಲೇ ಇಲ್ಲ. ಧರ್ಮದ ದಾಳಗಳನ್ನು ಉರುಳಿಸುತ್ತಾ ಬಂದ ಬಿಜೆಪಿಗೆ, ಕೇರಳದಲ್ಲಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿವಾದ ಅಲ್ಲಿ ನೆಲಯೂರಲು ಅವಕಾಶ ನೀಡಲೇ ಇಲ್ಲ.
ಉತ್ತರ ಭಾರತ ಹಿಂದೂ ಅಲೆಯಲ್ಲಿ, ಹುಸಿ ದೇಶಪ್ರೇಮದ ಅಮಲಿನಲ್ಲಿ ತೇಲಿಹೋದರೂ, ರೆಡ್ಡಿ ಮತ್ತು ಕಮ್ಮ ಸಮುದಾಯಗಳ ಜುಗಲ್ ಬಂದಿಯ ಆಂಧ್ರ ಪ್ರದೇಶದಲ್ಲಿ ಕೇವಲ ಎರಡರಷ್ಟು ಜನಸಂಖ್ಯೆಯನ್ನು ಹೊದಿದ ಕ್ರೈಸ್ತ ಸಮುದಾಯಕ್ಕೆ ಸೇರಿದ ದಿವಂಗತ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಮಗ ಜಗನ್‌ಮೋಹನ ರೆಡ್ಡಿ ಅವರ ಪಕ್ಷ, ಬಿಜೆಪಿಯೂ ಸೇರಿದಂತೆ ದಾಯಾದಿ ಪಕ್ಷವನ್ನು ಗುಡಿಸಿಹಾಕಿದ್ದು ಒಂದು ವಿಶೇಷ.
ಹಿಂದೂವಾದ ಜಗನ್ ಮೋಹನ ರೆಡ್ಡಿ? :
ಬಿಜೆಪಿ ಪರ ಅಲೆಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, `ವೈ ಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಹುಟ್ಟಾ ಕ್ರೈಸ್ತ ಜಗನ್‌ಮೋಹನ ರೆಡ್ಡಿ ಇಷ್ಟರಲ್ಲೇ ಹಿಂದೂ ಧರ್ಮವನ್ನು ಸ್ವೀಕರಿಸಲಿದ್ದಾರೆ' ಎಂಬ ಒಕ್ಕಣೆಯ ವಿಡಿಯೋ ಸುದ್ದಿ ಚಿತ್ರವನ್ನು ಜಾಲತಾಣವೊಂದರಲ್ಲಿ ಹರಿಬಿಡಲಾಯಿತು. ಅದನ್ನು ನಾನೂರಕ್ಕೂ ಅಧಿಕ ಮಂದಿ ಹಂಚಿಕೊಂಡರು.
ಆದದ್ದಿಷ್ಟು, 2016ರ ಆಗಸ್ಟ ಹತ್ತರಂದು ಹೃಷಿಕೇಶದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಹಾಗೂ ಆಂಧ್ರದ ಜನರ ಶ್ರೇಯೋಭಿವೃದ್ಧಿ ಕೋರಿ ಸ್ವರೂಪಾನಂದ ಸ್ವಾಮಿ ಅವರ ಉಪಸ್ಥಿತಿಯಲ್ಲಿ ಹೋಮ ಹವನ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಮಾಹಿತಿ ಪಕ್ಷದ ವೆಬ್ ಸೈಟ್ ನಲ್ಲೂ ಲಭ್ಯ. ಅದೇ ವಿಡಿಯೋವನ್ನು ಕದ್ದು, `ಇಷ್ಟರಲ್ಲೇ ಜಗನ್ ಹಿಂದೂ ಧರ್ಮವನ್ನು ಸೇರಲಿದ್ದರೆ. ಹೃಷಿಕೇಶದ ಸ್ವರೂಪಾನಂದ ಸ್ವಾಮಿಜಿ ಅವರು ಅವರ ಪ್ರಮಾಣವಚನ ಸ್ವೀಕಾರ ದಿನವನ್ನು ನಿಗದಿಪಡಿಸಿದ್ದಾರೆ' ಎಂದು ವಿಡಿಯೋ ವನ್ನು ಜಾಲತಾಣವೊಂದರಲ್ಲಿ ಹಂಚಿಕೊಳ್ಳಲಾಗಿತ್ತು!
ಧರ್ಮದ ಅಫೀಮು, ಈಡೇರದ ಭರವಸೆಗಳು :
ಕಳೆದ 2014ರ ಚುನಾವಣೆಯಲ್ಲಿ, ಪ್ರತಿವರ್ಷ 20 ಮಿಲಿಯನ್ ಉದ್ಯೋಗ ಸೃಷ್ಟಿ, ಹಸಿರಿನಿಂದ ಕಂಗೊಳಿಸುವ ಸ್ಮಾರ್ಟ ಸಿಟಿಗಳ ಅಭಿವೃದ್ಧಿ ಮುಂತಾದ ಭರವಸೆಗಳು ಬಹುತೇಕವಾಗಿ ಈಡೇರಲೇ ಇಲ್ಲ.
ಕಳೆದು ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಹಿಂದೂಸ್ತಾನ ಹಿಂದುಗಳ ದೇಶ ಎಂಬ ಭಾವನೆಯನ್ನು ಪುಷ್ಟೀಕರಿಸುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಆಹಾರ ಸಂಸೃತಿಯ ಮೇಲಿನ ಹಲ್ಲೆಗಳು ಅಲ್ಪಸಂಖ್ಯಾತರಲ್ಲಿ ಬಿಜೆಪಿಯ ಆಡಳಿತದ ಕುರಿತು ಅಪನಂಬಿಕೆಯನ್ನು ರೂಢಿಸಿದ್ದವು.
ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 80ರಷ್ಟು ಇದ್ದರೆ, ಮುಸ್ಲಿಂರು ಮತ್ತು ಕ್ರೈಸ್ತರ ಶೇಕಡಾವಾರು ಪ್ರಮಾಣ 14 ಇದೆ. ಉಳಿದ ಅಲ್ಪಸಂಖ್ಯಾತರಲ್ಲಿ ಬಹಾಯಿ, ಬೌದ್ಧರು, ಶಿಖ್‌ರು, ಜೈನರು ಮತ್ತು ಪಾರ್ಸಿಗಳು ಸೇರುತ್ತಾರೆ.
ಅಚ್ಚರಿ, ಆಘಾತಗಳ ಫಲಿತಾಂಶ:
ಲೋಕಸಭೆಗೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ, ಈ ಬಾರಿ ಆಡಳಿತಾರೂಢ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಎನ್ನಿದ್ದರೂ ಬೇರೆ ಬೇರೆ ಪಕ್ಷಗಳ ಹೊಂದಾಣಿಕೆಯ ಸರ್ಕಾರ ಅಸ್ತಿತ್ವಕ್ಕೆ ಬರಬಹುದು, ಇಲ್ಲವಾದರೆ ಕಾಂಗ್ರೆಸ್ ನೇತೃತ್ವ ಪಕ್ಷಗಳ ಗುಂಪು ಕೇಂದ್ರದಲ್ಲಿ ಅಧಿಕಾರ ಹಿಡಿಯಬಹುದು ಎಂದು ಬಹತೇಕ ವಿಶ್ಲೇಷಣೆಗಳು ಹೇಳುತ್ತಿದ್ದವು. ಆದರೆ, ಬಂದಿದ್ದು ಮಾತ್ರ ಅನಿರೀಕ್ಷಿತ ಪಳಿತಾಂಶ. ಬಿಜೆಪಿಗೆ ತಾನು ಅಷ್ಟೊಂದು ಸ್ಥಾನಗಳನ್ನು ಗೆಲ್ಲುವೆ ಎಂಬ ವಿಶ್ವಾಸವಿರಲಿಲ್ಲಿ. ಈ ಪ್ರಮಾಣದ ಸ್ಥಾನಗಳು ತನ್ನ ಕೈ ಬಿಟ್ಟು ಹೋಗುತ್ತವೆ? ಎಂಬ ಕಲ್ಪನೆಯೂ ಕಾಂಗ್ರೆಸ್‌ಗೆ ಇರಲಿಲ್ಲ,
ಚುನಾವಣೆಯ ಪೂರ್ವದಲ್ಲಿ ಬ್ರಿಟನ್ ಮೂಲದ ಇಂಗಿಷ್ ಪತ್ರಿಕೆ (ಗಾರ್ಡಿಯನ್)ಯೊಂದು, `ಸುಳ್ಳು ಸುದ್ದಿ ಬಿತ್ತುತ್ತಾ, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಾ, ವಾಣಿಜ್ಯೋದ್ಯಮಿಗಳ ಪರನಿಲುವಿನ, ಪ್ರಚಾರದ ಭರಾಟೆಯ ಜನಪ್ರಿಯ ನಾಯಕ ಜಗತ್ತಿಗೆ ಬೇಕಿಲ್ಲ. ಭಾರತದ ಆತ್ಮಕ್ಕೆ ಇದು ಒಳ್ಳೆಯದಾಗಲಿಕ್ಕಿಲ್ಲ' ಎಂದು ಕಳವಳ ವ್ಯಕ್ತಪಡಿಸಿತ್ತು.
ಮತ್ತೊಂದು ಅಮೆರಿಕದ ಪತ್ರಿಕೆ (ಟೈಮ್ಸ್)ಯು, ಒಂದು ಕಡೆ ಭಾರತದ ಉತ್ತಮ ಆರ್ಥಿಕ ಬೆಳವಣಿಗೆಯ ಭರವಸೆಯ ಹರಿಕಾರ ಎಂದು ಶ್ಲಾಘಿಸಿದರೆ, ಮತ್ತೊಂದೆಡೆ ಪ್ರಧಾನವಾಗಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಭಾರತದ ವಿಭಜಕದ ಮುಖ್ಯಸ್ಥ (ಇಂಡಿಯಾಸ್ ಡಿವೈಡರ್ ಇನ್ ಚೀಫ್) ಎಂದು ಹೀಗಳೆದಿತ್ತು,
ಸಮೃದ್ಧ ನವ ಭಾರತ ನಿರ್ಮಾಣ :
ಚುನಾವಣೆಯಲ್ಲಿ ಸ್ಪಷ್ಟ ಗೆಲವು ಸಾಧಿಸಿದ ನಂತರ, ಮಾತನಾಡಿದ ಮೋದಿ ಅವರು, `ಸರ್ಕಾರ ಎಲ್ಲರ ಜೊತೆಗಿದೆ. ಅಭಿವೃದ್ಧಿ ಎಲ್ಲರಿಗಾಗಿ, ಎಲ್ಲರ ಜೊತೆಗೆ ಪ್ರಗತಿ ಪರ ಮತ್ತು ಸಮೃದ್ಧ ನವ ಭಾರತ ನಿರ್ಮಾಣ' ನಮ್ಮ ಗುರಿ ಎಂದು ಸಾರಿದರು. `ಸರ್ವರ ಜತೆಗೂಡಿ ಸರ್ವರ ವಿಕಾಸ' ಎಂಬುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆ.
ಬಾಂಬೆಯ ಆರ್ಚಬಿಷಪ್, ಭಾರತದ ಕಥೋಲಿಕ ಬಿಷಪ್‌ರ ಒಕ್ಕೂಟ (ಕಥೋಲಿಕ ಬಿಷಪ್ಸ್ ಕಾನ್ಫರನ್ಸ್ ಆಫ್ ಇಂಡಿಯಾ)ದ ಅಧ್ಯಕ್ಷರಾಗಿರುವ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು, ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ನಾಡಿನ ಕಥೋಲಿಕ ಕ್ರೈಸ್ತರ ಪರವಾಗಿ, ಸ್ಪಷ್ಟ ಬಹುಮತದಿಂದ ಸುಭದ್ರ ಸರ್ಕಾರ ರಚನೆಗೆ ಪೂರಕವಾಗಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನೂ ಸಹ ಅಭಿನಂದಿಸಿದ್ದಾರೆ.
ನಾವೂ (ಕ್ರೈಸ್ತರೂ) ನಿಮ್ಮೊಂದಿಗಿದ್ದೇವೆ :
ಮೋದಿ ಅವರಿಗೆ ಶುಭ ಕೋರಿರುವ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು, `ನಿಮ್ಮ ಮತ್ತು ನಿಮ್ಮ ಸಂಗಡಿಗರ ತಂಡವು ಎಲ್ಲರನ್ನೂ ಒಳಗೊಂಡ, ಬಲಶಾಲಿ ಭಾರತ ನಿರ್ಮಾಣದಲ್ಲಿ ನಾವೂ ನಿಮ್ಮ ಜೊತೆಗಿದ್ದೇವೆ' ಎಂದು ಅಭಯ ನೀಡಿದ್ದಾರೆ, `ಗುರುತರ ಜವಾಬ್ದಾರಿ ಹೊತ್ತಿರುವ ನಿಮ್ಮ ಒಳಿತಿಗಾಗಿ, ಆಯುರಾರೋಗ್ಯಕ್ಕಾಗಿ ದೇವರು ಬಲ ನೀಡಲೆಂದು ಪ್ರಾರ್ಥನೆ ಸಲ್ಲಿಸುತ್ತೇವೆ' ಎಂದು ತಿಳಿಸಿದ್ದಾರೆ.
`ಯುವಜನತೆಗೆ ಭರವಸೆ ಒದಗಿಸುವ, ಮಹಿಳೆಯರ ಅದೂ ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣ, ನಮ್ಮ ರೈತರಿಗೆ ವಿವಿಧ ಅವಕಾಶಗಳನ್ನು ತೆರೆದಿಡುವ, ಆರ್ಥಿಕತೆಯನ್ನು ಬಲಪಡಿಸುವ, ಯಾರನ್ನೂ ಹಿಂದೆ ಬಿಟ್ಟು ಹೋಗದ, ಶಾಂತಿ ಮತ್ತು ಸೌಹಾರ್ದದ ಸಮೃದ್ಧ ದೇಶ ಕಟ್ಟುವ, ನೀವು ಕನಸು ಕಂಡ ನವ ಭಾರತ ನಿರ್ಮಾಣದ ಕಾಯಕದಲ್ಲಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ' ಎಂದೂ ಭರವಸೆ ನೀಡಿದ್ದಾರೆ.
ದೈವ ಚೈತನ್ಯವು ದಾರಿ ದೀಪವಾಗಲಿ :
ಈ ಹಿನ್ನೆಲೆಯಲ್ಲಿ `ನಾವು ಕಥೋಲಿಕರು ನಮ್ಮ ದೇಶಕ್ಕಾಗಿ ಪ್ರಾರ್ಥಿಸೋಣ. ನಮ್ಮ ಪ್ರಧಾನಿ ನರೇಂದ್ರ ಮೋದಿ, ನೂತನ ಸಂಸದರು, ಸಚಿವರಾಗುವವರಿಗಾಗಿ ಪ್ರಾರ್ಥಿಸೋಣ. ನಮ್ಮ ದೇಶದ ಜನರು ಶಾಂತಿ ಸಮೃದ್ಧಿಯನ್ನು ಮತ್ತು ಸೌಹಾರ್ಧವನ್ನು ಹೊಂದುವಲ್ಲಿ ದೇವರ ಚೈತನ್ಯವು ಅವರಿಗೆ ದಾರಿದೀಪವಾಗಲಿ ಎಂದು ಪ್ರಾರ್ಥಿಸೋಣ' ಎಂಬ ಒಕ್ಕಣೆಯ ಸಂದೇಶಗಳು ವಿವಿಧ ಜಾಲತಾಣ, ಸಮೂಹ ಸಂಪರ್ಕ ಮಾಧ್ಯಮ ಗುಂಪುಗಳಲ್ಲಿ ಹರಿದಾಡತೊಡಗಿವೆ.
`ನಾವು ಕ್ರೈಸ್ತರು, ತನ್ನಂತೆಯೆ ಪರರನ್ನು ಪ್ರೀತಿಸು, ಪರಪ್ರೀತಿಯೇ ಪರದೈವ' ಎಂಬ ನಂಬಿಕೆಯಲ್ಲಿ ವಿಶ್ವಾಸವಿಟ್ಟವರು. ದೇವರ ಅಪರಿಮಿತ ಪ್ರೀತಿಯನ್ನು ಬೈಬಲ್ಲಿನಲ್ಲಿ ನಾವು ಕಾಣುತ್ತೇವೆ. ಅದೇ ದೇವರ ಚಿತ್ತವನ್ನು ಅನುಸರಿಸುತ್ತೇವೆ. ಸಂದರ್ಶನವೊಂದರಲ್ಲಿನ ಆಂಧ್ರಪ್ರದೇಶದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್‌ಮೋಹನ ರೆಡ್ಡಿ ಅವರ ಮಾತುಗಳೊಂದಿಗೆ ಈ ಚರ್ಚೆಗೆ ಮಂಗಳ ಹಾಡಬಹುದು ಎನ್ನಿಸುತ್ತದೆ.
ಪರಲೋಕ ಮಂತ್ರ ಪಠಿಸಿದ ಜಗನ್ :
`ನಿಮ್ಮನ್ನು ತುಷ್ಟೀಕರಿಸಿದ ಕಾಂಗ್ರಸ್ ಪಕ್ಷವನ್ನು ಕ್ಷಮಿಸುತ್ತೀರಾ?' ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ, `ಕ್ಷಮಿಸುವುದಕ್ಕೆ ನಾನಾರು? ನಾನು ಪ್ರತಿದಿನ ಬೈಬಲ್ ಅನ್ನು ಪಠಿಸುವೆ. ದಿನಕ್ಕೆರಡು ಬಾರಿ ಪ್ರಾರ್ಥನೆ ಸಲ್ಲಿಸುವೆ. ಬೈಬಲ್ ಓದಿದ ನಂತರ ಪ್ರತಿಬಾರಿಯೂ ಪರಲೋಕ ಮಂತ್ರ ಹೇಳಿ ಪ್ರಾರ್ಥನೆ ಸಲ್ಲಿಸುವೆ' ಎಂದು ಉತ್ತರಿಸಿ ಪರಲೋಕ ಮತ್ರವನ್ನು ಪಠಿಸುತ್ತಾರೆ.
*********
No comments:
Post a Comment