Friday, 7 June 2019

ಸಂತ ಯೊವಾನ್ನರ ಶುಭಸಂದೇಶ – 10

ಸಹೋ. ವಿನಯ್ ಕುಮಾರ್,  ಚಿಕ್ಕಮಗಳೂರು
ಯಾವುದೇ ಒಂದು ಕೃತಿ ಹೊರಬರುವಾಗ ಅದರ ಹಿಂದೆ ಇದ್ದ ಹಿನ್ನೆಲೆ ಮತ್ತು ಬರೆಯುವಾಗ ಇದ್ದಂತಹ ಸನ್ನಿವೇಶ ಹಾಗೂ ಸಂದರ್ಭ ಆ ಕೃತಿಯನ್ನು ಹಾಸುಹೊಕ್ಕು ಅದರ ವಿಶೇಷತೆಯನ್ನು ನಾವು ಕಾಣಬಹುದಾಗಿದೆ. ಹೀಗೆ ಅದರ ಕುರುಹುಗಳನ್ನು ಹುಡುಕಿ ಹೋದವರಿಗೆ ಅದು ತಿಳಿಯುತ್ತದೆ. ಈ ಕಥಾವಸ್ತುವಿನ ಸನ್ನಿವೇಶ ಹಾಗೂ ಸಂದರ್ಭ ಬಹಳ ಮುಖ್ಯವಾದದ್ದು ಕಾರಣ ಇಡೀ ಕೃತಿ ಇದರಿಂದ ಆವರಿತಗೊಂಡಿರುತ್ತದೆ. ಸಂತ ಯೋವಾನ್ನರ ಶುಭಸಂದೇಶದಲ್ಲಿಯೂ ನಾವು ಬಹು ಮುಖ್ಯವಾದ ಎರಡು ಬಗೆಯ ಸನ್ನಿವೇಶ ಅಥವಾ ಸಂದರ್ಭವನ್ನು ಕಾಣುತ್ತೇವೆ. 

1.ಐತಿಹಾಸಿಕ ಸನ್ನಿವೇಶ ಸಮುದಾಯದ ಹೊರಗಡೆಯಿಂದ. 

2. ಐತಿಹಾಸಿಕ ಸನ್ನಿವೇಶ ಸಮುದಾಯದ ಒಳಗಡೆಯಿಂದ. 

ನಮಗೀಗಾಗಲೇ ತಿಳಿದಿರುವಂತೆ ಸಂತ ಯೋವಾನ್ನರ ಒಂದು ಸಮುದಾಯವಿತ್ತು. ಈ ಸಮುದಾಯವು ಅನೇಕ ಕಷ್ಟ ತೊಂದರೆಗಳನ್ನು ಎದುರಿಸುತ್ತಿತ್ತು. ಅದು ಒಳಗಡೆಯಿಂದ ಮತ್ತು ಹೊರಗಡೆಯಿಂದ ಇತ್ತು. ಹೀಗೆ ಇಂತಹ ಸಂದರ್ಭದಲ್ಲಿ ಸಂತ ಯೋವಾನ್ನ ತನ್ನ ಸಮುದಾಯದವರಿಗೆ ಈ ಶುಭ ಸಂದೇಶವನ್ನು ಬರೆಯುತ್ತಾನೆ. ಮೊದಲು ಐತಿಹಾಸಿಕ ಸಂದರ್ಭ - ಸಮುದಾಯದ ಹೊರಗಡೆಯಿಂದ ಹೇಗಿತ್ತು ಎಂಬುದನ್ನು ನೋಡೋಣ. 

ಯೋವಾನ್ನರ ಸಮುದಾಯವು ಈ ಶುಭಸಂದೇಶ ರಚಿತವಾಗುವ ಸಮಯದಲ್ಲಿ ಹಗೆತನವನ್ನು ಸಮುದಾಯದ ಹೊರಗಡೆಯವರಿಂದ ಎದುರಿಸುತ್ತಿತ್ತು. ರೋಮನ್ನರು ಮತ್ತು ಯೆಹೂದ್ಯರು ಇಬ್ಬರೂ ಈ ಸಮುದಾಯದ ಮೇಲೆ ಹಗೆತನ ಸಾಗಿಸುತ್ತಿದ್ದರು. ರೋಮನ್ನರ ಹಗೆತನಕ್ಕೆ ಎರಡು ಕಾರಣಗಳು; 

ಅ) ರೋಮನ್ನರ ಆಧಿಕಾರಿಗಳ ದಂಡ ಯೇಸುವನ್ನು ಖಂಡಿಸಿ ಶಿಲುಬೆಗೇರಿಸಿತ್ತು. ಯೇಸುವನ್ನು ಒಬ್ಬ ದಂಗೆಕೋರ ಎಂದು ಘೋಷಿಸಿತ್ತು. ಆದರೆ ಈ ಸಮುದಾಯದವರು ಆತನನ್ನು ರಕ್ಷಕ ಮತ್ತು ಲೋಕೋದ್ಧಾರಕ ಎಂದು ಆರಾಧಿಸುತ್ತಿದ್ದರು. ಇದು ರೋಮನ್ನರ ವಿರುದ್ಧ ಈ ಸಮುದಾಯದವರು ಹೋದಂತೆ ಕಂಡು ಅವರ ಮೇಲೆ ಹಗೆತನ ಕಾರಲು ಕಾರಣವಾಯಿತು. 

ಆ) ರಾಜಕೀಯ ಸನ್ನಿವೇಶವು ಇದಕ್ಕೆ ಇನ್ನೊಂದು ಕಾರಣ. ಯೆಹೂದ್ಯರಿಂದ ಬೇರ್ಪಟ್ಟು ಹೊಮ್ಮುತ್ತಿರುವ ಈ ಸಮುದಾಯವು ಅನುಮಾನಕ್ಕೆ ಕಾರಣವಾಯಿತು. ಈ ಸಮುದಾಯದ ಉದ್ದೇಶ ಏನಾಗಿರಬಹುದು ಎಂದು ಸದಾ ಅವರನ್ನು ಅನುಮಾನ ಹಾಗೂ ಹಗೆತನದಿಂದ ರೋಮನ್ನರು ನೋಡುತ್ತಿದ್ದರು. 

ಯೆಹೂದ್ಯರ ಹಗೆತನಕ್ಕೆ ಮೂರು ಕಾರಣಗಳು: 

ಅ) ಶಿಲುಬೆ ಮರಣ ಯೆಹೂದ್ಯರಿಗೆ ಅದೊಂದು ರೀತಿ ದೇವರ ಶಾಪ ಎಂಬ ನಂಬಿಕೆ ಇತ್ತು. ಇಂತಹ ಶಾಪ ಮರಣವನ್ನು ಅನುಭವಿಸಿದ್ದ ಅದರೆ ಈತನನ್ನು ಈ ಸಮುದಾಯದವರು ಮೆಸ್ಸಾಯ/ ಲೋಕೋದ್ಧಾರಕ್ಕ ಎಂದು ನಂಬುವುದು ಯಹೂದಿ ಸಮುದಾಯದ ಭಾವನೆಗಳನ್ನು ಕೆರಳಿಸಿದಂತಿತ್ತು. 

ಆ) ಆದಿಕಾಲದಲ್ಲಿ ಕ್ರೈಸ್ತ ಸಮುದಾಯಕ್ಕೆ ಯಹೂದಿ ಮತಾಂತರಿಗಳು ಬಹುತೇಕವಾಗಿ ಸೇರುತ್ತಿದ್ದರು. ಇದರಿಂದ ಯಹೂದಿಗಳಿಗೆ ಇದೊಂದು ಅವರ ಧರ್ಮದ ವಿರುದ್ಧ ಕಟ್ಟಿಕೊಂಡಿರುವ ಪಂಗಡದಂತೆ ಕಾಣುತ್ತಿತ್ತು. 

ಇ) ದೇವಾಲಯದ ವಿನಾಶವಾದ ನಂತರ ಅಂದರೆ 70 ಕ್ರಿ. ಶ.ರಲ್ಲಿ ಯಹೂದಿ ಧರ್ಮದಲ್ಲಿ ಅವರ ಧರ್ಮವನ್ನು ಪುನಶ್ಚೇತನಗೊಳಿಸಲು ಮುಂದಾದರು. ಅವರ ಪವಿತ್ರ ಗ್ರಂಥಕ್ಕೆ ಹೆಚ್ಚು ಮಹತ್ವವನ್ನು ನೀಡಿದರು. ಈ ಗ್ರಂಥ ಮನುಕುಲಕ್ಕೆ ದೇವರ ಸದೃಶ್ಯ ರೂಪ ಎಂದು ಸಾರಿದರು. ಆದರೆ ಈ ಸಮುದಾಯವು ಕ್ರಿಸ್ತರು - ದೇವರ ಸಜೀವ ಹಾಗು ಸದೃಶ್ಯ ರೂಪವೆಂದು ಸಾರಿದರು. ಇದರಿಂದ ದೈವಶಾಸ್ತ್ರದ ಭಿನ್ನಭಿಪ್ರಾಯ ಉಂಟಾಗಿ ಯಹೂದ್ಯರಲ್ಲಿ ಈ ಸಮುದಾಯದ ಮೇಲೆ ಹಗೆತನ ಕಾರಲು ಕಾರಣವಾಯಿತು. 

********* 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...