Thursday, 8 November 2018

ನೆನಪಿನ ಮಾಲೆ 3

ಗಷ್ಟೇ ಸೆಮಿನರಿಯ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೆ. ಅಷ್ಟೊತ್ತಿಗಾಗಲೇ ಸೆಮಿನರಿಯ ವಾತವರಣಕ್ಕೆ ಒಗ್ಗಿಕೊಂಡಿದ್ದ ನನಗೆ ಒಂದೆರಡು ಪದ ಇಂಗ್ಲೀಷ್ ಮಾತಾಡುವಷ್ಟರಲ್ಲಿ ಯೌವನದ ಮದ ನೆತ್ತಿಗೇರಿತ್ತು. ಯೌವನವೇ ಹಾಗೆ! ಒಂಥರಾ ಹುಚ್ಚು ಕುದುರೆಯ ಹಾಗೆ ಲಂಗುಲಗಾಮಿಲ್ಲದೆ ಎತ್ತೆಂದರತ್ತ ಓಡುತ್ತಿರುತ್ತದೆ. ಮಿತಿ ಮೀರುವ ಹೊತ್ತಿಗೆ ಲಗಾಮು ಹಾಕುವವರಿಲ್ಲದಿದ್ದರೆ ಬದುಕು ಮೂರಾಬಟ್ಟೆ ಆಗೋದಂತೂ ಗ್ಯಾರಂಟಿ.
ಅದು ಶೈಕ್ಷಣಿಕ ವರ್ಷದ ಪ್ರಾರಂಭ. ನಮ್ಮ ಸೆಮಿನರಿಯ ಕೆಲವು ಪಾದ್ರಿಗಳಿಗೆ ವರ್ಗವಾಗಿ, ಮತ್ತೂ ಕೆಲವು ಪಾದ್ರಿಗಳು ಅವರ ಸ್ಥಾನಗಳನ್ನು ತುಂಬುತ್ತಿದ್ದರು. ವರ್ಗವಾದ ಪಾದ್ರಿಗಳಲ್ಲಿ ನಮ್ಮ ಸೆಮಿನರಿಯ ಅಡ್ಮಿನಿಸ್ಟ್ರೇಟರ್ ಫಾದರ್ ಕ್ಲಮೆಂಟ್ ಕೂಡ ಇದ್ದರು. ಕ್ಲಮೆಂಟ್ ತೀರಾ ಸರಳ ಸ್ವಭಾವದ, ಥೇಟ್ ಮಂಗಳೂರು ಗ್ರಾಮೀಣ ಸೊಗಡಿನ ವ್ಯಕ್ತಿ. ಇದ್ದವರಲ್ಲೆಲ್ಲಾ ಇವರೇ ನನಗೆ ಅಚ್ಚುಮೆಚ್ಚು. ಇವರ ಸ್ಥಾನಕ್ಕೆ ಅಂದು ಬಂದವರೇ ಮಂಗಳೂರಿನವರೇ ಆದ ಫಾದರ್ ಸೈಮನ್.
ನಮ್ಮ ಕ್ರೈಸ್ತ ಪಾದ್ರಿಗಳಲ್ಲಿ ಅದರಲ್ಲೂ ಆಗಷ್ಟೇ ಗುರುದೀಕ್ಷೆ ಸ್ವೀಕರಿಸಿ, ತಮ್ಮ ಮೊದಲ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಯುವಪಾದ್ರಿಗಳಲ್ಲಿ ಒಂದು ರೀತಿಯ ಹುಮ್ಮಸ್ಸಿರುತ್ತದೆ. ಇವರುಗಳ ಜವಾಬ್ದಾರಿ ಗುರುಮಠದ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದಾದರಂತೂ, ಅವರ ಹುಮ್ಮಸ್ಸಿನ ಜೊತೆ ಜೊತೆಗೆ ಎಲ್ಲವೂ ತಮ್ಮ ಆದೇಶದಂತೆ, ಯಾವುದೇ ಕೊಂಕಿಲ್ಲದೆ ನಡೆಯಬೇಕೆಂಬ ಇರಾದೆ ಇರುತ್ತದೆ. ಅದೊಂದು ರೀತಿಯ ಪರ್ಫೆಕ್ಷನಿಸ್ಟ್ ಮನೋಭಾವ. ಆರಂಭದಲ್ಲಿ ಉತ್ತುಂಗದಲ್ಲಿರುವ ಈ ಮನೋಭಾವ ಕ್ರಮೇಣ ವಯಸ್ಸು ಮಾಗಿದಂತೆ ಹದವಾಗಿ ಬಿಡುತ್ತದೆ.
ಫಾದರ್ ಕ್ಲಮೆಂಟರ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿದ್ದ ಫಾದರ್ ಸೈಮನ್ ಕೂಡ ಯುವ ಪಾದ್ರಿಯೇ. ಅವರ ಕಟ್ಟುನಿಟ್ಟಿನ ಸ್ವಭಾವದ ಹಿಂದೆ ನಮ್ಮನ್ನು ಶಿಸ್ತಿನ ಹುಡುಗರನ್ನಾಗಿ ಮಾಡುವ ಒಳ್ಳೆಯ ಉದ್ದೇಶವಿದ್ದರೂ, ಅವರು ಶಿಸ್ತುಕ್ರಮಗಳನ್ನು ಜಾರಿಗೊಳಿಸುತ್ತಿದ್ದ ಪರಿ ನನಗೆ ಒಂದಿಷ್ಟೂ ಹಿಡಿಸಲಿಲ್ಲ. ನನಗೆ ಮಾತ್ರವಲ್ಲ ನನ್ನ ಒರಗೆಯ ಅನೇಕ ಹುಡುಗರಿಗೂ ಅವರ ಈ ಒಂದು ನಿಯಮ ಸುತಾರಾಂ ಇಷ್ಟವಿರಲಿಲ್ಲ. ಈ ನಡುವೆ ನಡೆದ ಆ ಒಂದು ಘಟನೆ ನನ್ನ ಸೆಮಿನರಿ ಜೀವನದುದ್ದಕ್ಕೂ, ನಾನೊಬ್ಬ ರೆಬೆಲ್ ಎನ್ನುವ ಹಣೆಪಟ್ಟಿ ಅಂಟಿಸಿ ಬಿಟ್ಟಿತ್ತು.
ಫುಟ್ಬಾಲ್ ಆಡಿ, ಸ್ನಾನ ಮುಗಿಸಿ, ಆರು ಘಂಟೆಗೆ ಸರಿಯಾಗಿ ಸ್ಟಡಿ ಹಾಲಿನಲ್ಲಿ ಎಲ್ಲರೂ ತಮ್ಮ ಟೇಬಲ್ಲುಗಳಲ್ಲಿ ಓದುತ್ತಾ ಕುಳಿತಿರಬೇಕು. ಇದು ಸೆಮಿನರಿಯ ಅತಿ ಮುಖ್ಯ ನಿಯಮಗಳಲ್ಲೊಂದು. ನಮ್ಮ ಸೆಮಿನರಿಯಲ್ಲಿ ಪ್ರಾರ್ಥನೆ ಹಾಗೂ ಓದುವ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇರಲಿಲ್ಲ. ಹೀಗಿರಬೇಕಾದರೆ ಒಂದು ದಿನ ನಾನು ಸ್ನಾನ ಮುಗಿಸಿ ಕೆಳಗಿನ ಸ್ಟಡಿ ಹಾಲಿಗೆ ಬರುವಷ್ಟರಲ್ಲಿ ಒಂದು ನಿಮಿಷ ತಡವಾಗಿತ್ತು. ಗಮನಿಸಿ! ಕೇವಲ ಒಂದು ನಿಮಿಷ ತಡವಾಗಿತ್ತು. ಮೆಟ್ಟಿಲುಗಳ ಬಳಿಯೇ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಫಾದರ್ ಸೈಮನ್, ನಾನು ಕೆಳಗಿಳಿದು ಬರುವಾಗ ತಡೆದು
"ಅಜಯ್, ಈಗ ಟೈಮೆಷ್ಟು?" ಎಂದು ಕೇಳಿದರು. ನಾನು ವಿಚಲಿತನಾಗದೆ
"ಆರು ಘಂಟೆ ಒಂದು ನಿಮಿಷ ಫಾದರ್" ಎಂದೆ.
"ಯು ನೋ ವಾಟ್ ಇಸ್ ದ ಪನಿಷ್ಮೆಂಟ್ ಫಾರ್ ಬಿಇಂಗ್ ಲೇಟ್ (You know what is the punishment for being late)"
"I don't know Father! ಕೇವಲ ಒಂದು ನಿಮಿಷ ಲೇಟ್ ಆಗಿದೆ" ಎಂದೆ. ನನ್ನ ಧ್ವನಿಯಲ್ಲಿ ನನ್ನದೇನೂ ತಪ್ಪಿಲ್ಲ ಎಂಬ ಅಹಂ ಇತ್ತು.
"Kneel Down Here (ಇಲ್ಲೇ ಮಂಡಿಯೂರು)" ಎಂದರು ಫಾದರ್ ಸೈಮನ್. ಅಷ್ಟೊತ್ತಿಗಾಗಲೇ ನನ್ನ ಈ ದುರ್ವರ್ತನೆಯಿಂದ ಕುಪಿತರಾಗಿದ್ದರು.
ಸಮಯಕ್ಕೆ ಮುಂಚಿತವಾಗಿ ಬಂದು ತಮ್ಮ ಟೇಬಲ್ಲುಗಳಲ್ಲಿ ಕುಳಿತಿದ್ದ ನನ್ನ ಸಹಪಾಠಿಗಳು, ಮೆಟ್ಟಿಲುಗಳ ಬಳಿ ನಡೆಯುತ್ತಿದ್ದ ನಾಟಕವನ್ನು ಕಿಟಕಿಗಳ ಮೂಲಕ ಕಣ್ತುಂಬಿಕೊಳ್ಳುತ್ತಿದ್ದರು. ಅವರಿಗೆ ಇದೊಂದು ಬಿಟ್ಟಿ ಮನರಂಜನೆ ಆದರೆ ನನಗೆ ಇದು ನನ್ನ ಮರ್ಯಾದೆಯ ಹಾಗೂ ಅದಕ್ಕಿಂತ ಮಿಗಿಲಾಗಿ ಸ್ವಾಭಿಮಾನದ ಪ್ರಶ್ನೆ. ಆ ಕ್ಷಣದಲ್ಲಿ ಮೆಟ್ಟಿಲುಗಳ ಬಳಿ, ಅದರಲ್ಲೂ ಓಡಾಡುವ ಜಾಗದಲ್ಲಿ ಹೀಗೆ ಎಲ್ಲರ ಮುಂದೆ ಮೊಣಕಾಲೂರುವ ಶಿಕ್ಷೆಯೆಂದರೆ ಯಾರಿಗೆ ತಾನೇ ಸಹಿಸಲಾದೀತು?
ಒಂದು ಕ್ಷಣವೂ ಯೋಚಿಸದೆ, "ಸಾಧ್ಯವಿಲ್ಲ ಫಾದರ್! ನಾನು ಮೊಣಕಾಲೂರುವುದಿಲ್ಲ" ಎಂದು ಫಾದರ್ ಸೈಮನ್'ರ ಮುಖದ ನೇರಕ್ಕೆ ಹೇಳಿಬಿಟ್ಟೆ.
"ನಾನೊಬ್ಬ ಪಾದ್ರಿ ಎನ್ನುವ ಕನಿಷ್ಠ ಗೌರವವೂ ನಿನಗಿಲ್ಲ" ಎಂದು ಗದರಿದರು ಫಾದರ್ ಸೈಮನ್.
"I cannot Father! ಯಾವುದೇ ಕಾರಣಕ್ಕೂ ನಿಮ್ಮ ಶಿಕ್ಷೆಯನ್ನು ಸ್ವೀಕರಿಸುವುದಿಲ್ಲ" ಎಂದು ಖಡಕ್ ಆಗಿ ಹೇಳಿಬಿಟ್ಟೆ.
ನನ್ನ ಬಳಿ ವಾದಿಸುವುದು ವ್ಯರ್ಥವೆಂದು ತಿಳಿದ ಫಾದರ್ ಸೈಮನ್ ನೀನು ಮೊಣಕಾಲು ಹಾಕಲೇಬೇಕೆಂದು ಹೇಳಿ ಹೊರಟು ಹೋದರು. ಆಗ ನನಗೆ "ಮುಂದೇನು" ಮಾಡಬೇಕೆಂಬ ಪ್ರಶ್ನೆ ಎದುರಾಯಿತು. ಫಾದರ್ ಸೈಮನ್ ಇದ್ದಿದ್ದರೆ ಅವರೊಡನೆ ವಾದಿಸಿಯಾದರೂ ಇದರ ಬಗ್ಗೆ ಒಂದು ತಾರ್ಕಿಕ ಅಂತ್ಯಕ್ಕೆ ಬರಬಹುದಿತ್ತು. ಆದರೆ ಅವರ ನಿರ್ಗಮನ ನನಗ್ಯಾವುದೇ ಆಯ್ಕೆಯನ್ನು ಉಳಿಸಿರಲಿಲ್ಲ.
(ಮುಂದುವರಿಯುವುದು....)
- ಅಜಯ್ ರಾಜ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...