Thursday, 8 November 2018

ಲೋಕ ಮೀಮಾಂಸೆ


¨ ಸಿ ಮರಿಜೋಸೆಫ್

ಭಾರತೀಯ ಧಾರ್ಮಿಕ ಜಿಜ್ಞಾಸೆಗಳಲ್ಲಿ ಲೋಕದ ಪರಿಕಲ್ಪನೆಯು ಆಳವಾಗಿ ಬೇರೂರಿದೆ. ಲೋಕ ಎಂದರೆ ಪ್ರಪಂಚ ಎಂಬ ಅರ್ಥವಿರುವ ಒಂದು ಸಂಸ್ಕೃತ ಪದ. ನಮ್ಮ ದೇಶದ ವಿಷ್ಣು ಪುರಾಣಗಳಲ್ಲಿ ಭುವರ್ಲೋಕ, ಭೂಲೋಕ ಮತ್ತು ಪಾತಾಳಲೋಕ ಎಂದು ಮೂರು ಲೋಕಗಳನ್ನು ಪ್ರಸ್ತಾಪಿಸಲಾಗುತ್ತದೆ. ವಿಷ್ಣುವಿನ ತಲೆಯಿಂದ ಹೊಟ್ಟೆಯವರೆಗೆ ದೇವತೆಗಳು ವಾಸಿಸುವ ಭುವರ್ಲೋಕ, ತೊಡೆಗಳಿಂದ ಕಾಲುಗಳವರೆಗೆ ಮೀನು ಹಾವು ಕ್ರಿಮಿಕೀಟಗಳ ಪಾತಾಳಲೋಕ, ನಡುವೆ ತೊಡೆಸಂದಿಯಲ್ಲಿರುವುದೇ ಮನುಷ್ಯರಿರುವ ಭೂಲೋಕ.
ಅದೇ ರೀತಿಯಲ್ಲಿ ಇನ್ನೊಂದು ವರ್ಣನೆಯ ಪ್ರಕಾರ ವಿಶ್ವದಲ್ಲಿ ಚತುರ್ದಶಲೋಕ ಅಂದರೆ ಒಟ್ಟು ಹದಿನಾಲ್ಕು ಲೋಕಗಳಿವೆ. ಮೇಲಣ ಅಂದರೆ ಊರ್ಧ್ವಲೋಕಗಳು ಏಳು ಹಾಗೂ ಕೆಳಗಣ ಅಂದರೆ ಪಾತಾಳ ಲೋಕಗಳು ಏಳು.  ಭೂಲೋಕವೂ ಸೇರಿದಂತೆ ಮೇಲಣ ಏಳು ಲೋಕಗಳಲ್ಲಿ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕಗಳಿವೆ. ಅದೇ ರೀತಿ ಭೂಲೋಕದ ಕೆಳಗೆ ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳಗಳಿವೆ. ಭೂಲೋಕದ ಜೀವನದ ನಂತರ ಆತ್ಮವು ಎಸಗಿದ ಪಾಪಪುಣ್ಯಗಳನ್ನು ಲೆಕ್ಕಹಾಕುವ ಸಾವಿನ ಯಜಮಾನ ಯಮನು ಆತ್ಮವನ್ನು ಮೇಲಕ್ಕೆ ಕಳಿಸುವ ಅಥವಾ ಕೆಳಗಣ ಲೋಕಕ್ಕೆ ಕಳಿಸುವ ನಿರ್ಧಾರಕ್ಕೆ ಬರುತ್ತಾನೆ.
ಜೈನಧರ್ಮದಲ್ಲೂ ಲೋಕಗಳ ಪ್ರಸ್ತಾವ ಇದ್ದೇ ಇದೆ. ಕ್ರಿಮಿಕೀಟಾದಿ ಬದುಕನ್ನು ಹೇಸಿ ಮನುಷ್ಯಜನ್ಮದಲ್ಲೇ ಸಾಕಷ್ಟು ಪುಣ್ಯಫಲಗಳನ್ನು ಸಂಪಾದಿಸಿ ಮೋಕ್ಷ ಕಾಣಬೇಕೆನ್ನುವುದೇ ಜೈನಮತದ ತುಡಿತ. ಸಲ್ಲೇಖನ ವ್ತತಗಳನ್ನು ಅನುಸರಿಸಿ ಇಚ್ಛಾಮರಣಿಗಳಾಗುವ ಪ್ರಕ್ರಿಯೆಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಆದರೆ ಬೌದ್ಧಧರ್ಮವು ಲೋಕಗಳ ನಂಬಿಕೆಯನ್ನು ಬುಡಮೇಲು ಮಾಡುತ್ತದೆ. ಮೋಕ್ಷವೆಂಬುದೇ ಸುಳ್ಳು, ಇರುವುದೊಂದೇ ಭೂಮಿ, ಇಲ್ಲಿಯೇ ಎಲ್ಲ ಅಪರಿಗ್ರಹ ದುರಾಸೆಗಳನ್ನು ತೊರೆದು ಅಂದಿನ ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸಿಕೊಳ್ಳಿರಿ, ಅದನ್ನೇ ಎಲ್ಲರೊಂದಿಗೆ ಹಂಚಿಕೊಂಡು ಬಾಳಿರಿ ಎನ್ನತ್ತಾನೆ ಬುದ್ಧ.
ಇವೆಲ್ಲ ಪರಿಕಲ್ಪನೆಗಳು ಭಾರತೀಯ ಪುರಾಣ ಪುಣ್ಯಕತೆಗಳಲ್ಲಿ ಹಾಸುಹೊಕ್ಕಾಗಿದ್ದು ಜನಜನಿತವಾಗಿವೆ. ಕನ್ನಡನಾಡಿನ ಶರಣಚಳವಳಿಯಲ್ಲಿ ಶರಣನೇತಾರ ಬಸವಣ್ಣನವರು  ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ! ಸತ್ಯವ ನುಡಿವುದೇ ದೇವಲೋಕ.. ಮಿಥ್ಯವ ನುಡಿವುದೇ ಮರ್ತ್ಯಲೋಕ.. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುತ್ತಾ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಉಲ್ಲಂಘಿಸಿ ಸರಳ ಸೂತ್ರವನ್ನು ಹೇಳಿಕೊಡುತ್ತಾರೆ.
ಕನ್ನಡನಾಡಿಗೆ ಬಂದ ಕ್ರೈಸ್ತ ಧರ್ಮಪ್ರಚಾರಕರು ಭಾರತೀಯ ಪರಂಪರೆಯಲ್ಲಿ ಲೋಕಗಳ ಪರಿಕಲ್ಪನೆಯು ಹೇಗೆ ಮಿಳಿತಗೊಂಡಿದೆ ಎಂಬ ಸತ್ಯವನ್ನು ಗಮನಿಸಿದ್ದರು. ಈ ನಂಬಿಕೆಯ ಬೇರುಗಳನ್ನು ಅಲುಗಾಡಿಸದೇ ಕ್ರೈಸ್ತ ಸಿದ್ಧಾಂತವನ್ನು ಬಲು ನಾಜೂಕಾಗಿ ಜನರಲ್ಲಿ ಬಿತ್ತಬೇಕಾದ ಅನಿವಾರ್ಯತೆ ಅವರಿಗಿತ್ತು. ಅದಕ್ಕಾಗಿ ಅವರು ಹೊಸದಾಗಿ ಕ್ರೈಸ್ತಧರ್ಮ ಪ್ರವೇಶಿಸುವವರಿಗೆ ಸ್ವರ್ಗ ನರಕಗಳ ಉಲ್ಲೇಖವನ್ನು ಮಾಡಲೇಬೇಕಾಗಿತ್ತು. ಪವಿತ್ರ ಬೈಬಲಿನಲ್ಲಿ ಆಗಸ ಭೂಮಿ ಎಂಬ ಎರಡು ಕಾಯಗಳ ಪ್ರಸ್ತಾಪವಾಗುತ್ತದಾದರೂ ಭಾರತೀಯನ ಮನಸ್ಸನ್ನು ತಟ್ಟಬೇಕಾದರೆ ಸ್ವರ್ಗ ಭೂಮಿ ಪಾತಾಳಗಳ ಜನಜನಿತ ಪ್ರಮೇಯ ಇದ್ದರೆ ಒಳ್ಳೆಯದೆಂದು ಅವರಿಗನಿಸಿತ್ತು.
ಈ ಎಲ್ಲ ಅಂಶಗಳನ್ನು ಮನಗಂಡು ಅವರು ಕ್ರೈಸ್ತ ಧರ್ಮೋಪದೇಶಗಳಲ್ಲಿ ಪರಲೋಕ, ಇಹಲೋಕ, ನರಕ ಎಂಬುದನ್ನು ತಮ್ಮ ಬೋಧನೆಗಳಲ್ಲಿ ಅಳವಡಿಸಿಕೊಂಡರು. ಹಿಂದೂ ಪುರಾಣದ ಊರ್ಧ್ವಲೋಕಗಳಲ್ಲಿ ಅತ್ಯಂತ ಮೇಲಣ ಲೋಕವಾದ ಸತ್ಯಲೋಕವನ್ನು ತೆಗೆದುಕೊಂಡು ನಮ್ಮ ಪವಿತ್ರಬೈಬಲ್ ಅನ್ನು ’ಸತ್ಯವೇದ’ ಎಂದು ಕರೆದರು. ಆಲ್ ಮೈಟಿ ಅಥವಾ ಸರ್ವಶಕ್ತನನ್ನು ಸರ್ವಕ್ಕೂ ಈಶ್ವರ ಅಂದರೆ ಸರ್ವೇಶ್ವರ ಎಂದು ಕರೆಯಲಾಯಿತು. ಈ ಎಲ್ಲ ಪ್ರಕ್ರಿಯೆಗಳನ್ನು ಪ್ರಚಾರ ತಂತ್ರಕ್ಕೆ ಅಳವಡಿಸಿಕೊಂಡ ಬೌದ್ಧಿಕ ದಾಸ್ಯ ಎನ್ನುವುದಕ್ಕಿಂತ ನೆಲದ ಸೊಗಡನ್ನು ಉಳಿಸಿಕೊಳ್ಳುವ ಸಂಸ್ಕೃತೀಕರಣದ ಹೆಜ್ಜೆಗಳು ಎನ್ನಲಾಯಿತು.
ಕಥೋಲಿಕ ಬೈಬಲ್ ಪ್ರಕಟವಾಗುವುದಕ್ಕೆ ಮೊದಲೇ ಕನ್ನಡದಲ್ಲಿ ಪ್ರಚಲಿತವಾಗಿದ್ದ ಪ್ರೊಟೆಸ್ಟೆಂಟ್ ಬೈಬಲುಗಳಲ್ಲಿ ’ಪರಲೋಕ ಇಹಲೋಕ’ ಗಳ ಉಲ್ಲೇಖ ಬಹುವಾಗಿದೆ.  ’ಪರಲೋಕದಲ್ಲಿರುವ ತಂದೆಯು ತನ್ನ ಮಕ್ಕಳಿಗೆ ಏನನ್ನು ತಾನೇ ಕೊಡಲಾರನು?’ ಎಂಬ ಯೇಸುಕ್ರಿಸ್ತನ ವಾರ್ತೆಯನ್ನು ಇಲ್ಲಿ ಉಲ್ಲೇಖಿಸಬಹುದು.  ೧೮೯೭ರಲ್ಲಿ ಬೆಂಗಳೂರು ಕಥೋಲಿಕ್ ಮಿಷನ್ ಪ್ರಕಟಿಸಿದ ದೊಡ್ಡ ಜಪದ ಪುಸ್ತಕದಲ್ಲಿ ಅಪೋಸ್ತಲರು ಕಲ್ಪಿಸಿದ ವಿಶ್ವಾಸದ ಮಂತ್ರವು ಎಂಬ ಜಪದಲ್ಲಿ ’..ಶಿಲುಬೆಯಲ್ಲಿ ಜಡಿಯಲ್ಪಟ್ಟು, ಸತ್ತು, ಹೂಣಲ್ಪಟ್ಟು, ಪಾತಾಳಗಳಿಗೆ ಇಳಿದು, ಮೂರನೇ ದಿವಸ ಮೃತರಾದವರೊಳಗಿಂದ ಎದ್ದರು; ಪರಲೋಕಗಳಿಗೆ ಏರಿ, ಸರ್ವಶಕ್ತಿಯುಳ್ಳವರಾದ ತಂದೆಯಾಗಿರುವ..’ ಎಂಬ ಒಂದು ವಾಕ್ಯವಿದೆ. ಅದರಲ್ಲಿ ಪಾತಾಳಗಳಿಗೆ, ಪರಲೋಕಗಳಿಗೆ ಎಂಬ ಬಹುವಚನವನ್ನು ಗಮನಿಸಿದಾಗ ಹಿಂದೂ ಪುರಾಣಗಳ ಲೋಕಗಳ ನೆನಪಾಗುವುದಿಲ್ಲವೇ?
ಲೋಕ ಮೀಮಾಂಸೆಯ ಈ ತರುಣದಲ್ಲಿ ನಮ್ಮ ದೇಶದಲ್ಲಿ ಅನೂಚಾನವಾಗಿ ನಂಬಿಕೊಂಡು ಬಂದ ಜನ್ಮಜನ್ಮಾಂತರಗಳ ತರ್ಕವನ್ನೂ ತುಲನೆ ಮಾಡಬೇಕಾಗುತ್ತದೆ. ಲೋಕದ ವಿಚಾರವಾಗಿ ಉದಾರವಾಗಿ ನಡೆದುಕೊಂಡ ನಮ್ಮ ಮಿಶನರಿಗಳು ಜನ್ಮಾಂತರದ ವಿಷಯವಾಗಿ ಜಿಗುಟಾಗಿಯೇ ನಡೆದುಕೊಂಡಿದ್ದನ್ನು ಗಮನಿಸಬಹುದಾಗಿದೆ. ಅವರು ಜನ್ಮಾಂತರದ ಸಂಗತಿಯನ್ನು ನಮ್ಮ ಧರ್ಮದ ವಿಚಾರಗಳೊಳಗೆ ಎಂದಿಗೂ ಬಿಟ್ಟುಕೊಂಡದ್ದಿಲ್ಲ. ಆದರೆ ಒಂದು ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಬಹುವಾಗಿ ವ್ಯಾಪಿಸಿದ್ದ ನಾಥಸಂಪ್ರದಾಯದ ಅವಶೇಷವೊಂದು ನಮ್ಮಲ್ಲೂ ಹೊಕ್ಕು ಯೇಸುಕ್ರಿಸ್ತರನ್ನು ’ಜೇಸುನಾಥರು’ ಎಂದು ದಶಕಗಳ ಕಾಲ ಸಂಬೋಧಿಸಿದ ಪರಿಯನ್ನು ಮಾತ್ರ ಮರೆಯಲಾಗದು.
ಈ ಎಲ್ಲ ಪ್ರಕ್ರಿಯೆಗಳನ್ನೂ ವಿಶ್ವಧರ್ಮಸಭೆ ಸಂಸ್ಕೃತೀಕರಣದ ಹೆಸರಿನಲ್ಲಿ ಮಾನ್ಯ ಮಾಡಿತು. ಸ್ಥಳೀಯ ಸಂಸ್ಕೃತಿಗಳನ್ನು ಗೌರವಿಸುಸುವುದು, ಅದನ್ನು ನಮ್ಮ ಧರ್ಮಕ್ಕೂ ಅಳವಡಿಸಿಕೊಂಡು ವ್ಯಾಪಕವಾಗಿ ಬೆಳೆಯುವುದು, ತನ್ಮೂಲಕ ಕ್ರೈಸ್ತಧರ್ಮದ ತಿರುಳನ್ನು ತಿರುಚದೇ ನೆಲದ ಸೊಗಡನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವುದೇ ಧರ್ಮದ ಸಂಸ್ಕೃತೀಕರಣ. ನೆಲದ ಸಂಸ್ಕೃತಿಯನ್ನು ಹೀಯಾಳಿಸಿ ಇನ್ಕ್ವಿಸಿಶನ್ ಎಂಬ ಕ್ರೂರ ಶಿಕ್ಷೆಯ ಮೂಲಕ ಪೋರ್ಚುಗೀಸರು ನಮ್ಮ ದೇಶದ ಹಳೆಯ ಕ್ರೈಸ್ತರನ್ನು ಹಿಂಸಿಸಿದ್ದು ಇತಿಹಾಸ. ಆದರೆ ಕಾಲಕ್ರಮೇಣ ವಿಶ್ವಧರ್ಮಸಭೆಯು ನೆಲದ ಆಚಾರ ವಿಚಾರಗಳನ್ನು ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಂಡಿತು.
೧೯೬೦ರ ದಶಕದಲ್ಲಿ ರೋಮ್ ನಗರದಲ್ಲಿ ನಡೆದ ದ್ವಿತೀಯ ವ್ಯಾಟಿಕನ್ ಸಮಾವೇಶದಲ್ಲಿ ಜಗತ್ತಿನೆಲ್ಲೆಡೆಯ ಬಿಷಪರುಗಳು ಸಂಸ್ಕೃತೀಕರಣದ ವಿಶೇಷ ಠರಾವನ್ನು ಅಂಗೀಕರಿಸಿದರು. ಅದರ ಪ್ರಮುಖಾಂಶವಾಗಿ ನಗರ ಪ್ರದೇಶಗಳ ಭವ್ಯ ದೇವಾಲಯಗಳಲ್ಲೂ ದಟ್ಟಾರಣ್ಯದ ನಡುವಿನ ದೇಗುಲಗಳಲ್ಲೂ ಏಕಪ್ರಕಾರವಾಗಿ ಅನುರಣಿಸುತ್ತಿದ್ದ ಗ್ರೆಗರಿಯನ್ ಸಂಗೀತದ ಲತೀನ್ ರಾಗಗಳು ಮರೆಯಾಗಿ ಆಯಾ ದೇಶಭಾಷೆಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯಲುಪಕ್ರಮಿಸಿದವು.
ತತ್ಪರಿಣಾಮವಾಗಿ ಅರ್ಥವಾಗದಿದ್ದರೂ ’ಗ್ಲೋರಿಯಾ ಇನ್ ಎಕ್ಸಚೆಲ್ಸಿಸ್ ದೇಯೋ’ ಎಂದು ಉಲ್ಲಾಸಭರಿತರಾಗಿ ಹಾಡುತ್ತಿದ್ದ ಅನಕ್ಷರಸ್ತರೂ ಸಹ ’ಮಹೋನ್ನತದಲ್ಲಿ ದೇವರಿಗೆ ಮಹಿಮೆ’ ಎಂದು ಎದೆ ತುಂಬಿ ಹಾಡತೊಡಗಿದರು.  ಲತೀನ್ ಜಪ ಪ್ರಾರ್ಥನೆ ಕೀರ್ತನೆಗಳ ಬದಲಿಗೆ ಅದರ ಜಾಗದಲ್ಲಿ ದೇಶೀ ನುಡಿಗಳ ಪ್ರಾರ್ಥನೆ ಕೀರ್ತನೆಗಳು ಜನಬಳಕೆಯಲ್ಲಿ ಮೂಡಿಬಂದವು.
ಧರ್ಮದ ಅರಿಯುವಿಕೆಯಲ್ಲಿ ದೇಶಭಾಷೆಗಳು ಪ್ರಮುಖ ಪಾತ್ರ ವಹಿಸಿದವೇನೋ ನಿಜ, ಆದರೆ ಧರ್ಮದ ಸ್ಥಾನಮಾನಗಳು ಸಮಾಜದ ಎಲ್ಲ ಸ್ತರಗಳಿಗೆ ದಕ್ಕಲಿಲ್ಲ ಎಂಬುದೂ ಅಷ್ಟೇ ನಿಜ. ಭಾರತೀಯ ಸಂಸ್ಕೃತಿಯಲ್ಲಿ ಚಾಪೆಯ ಕೆಳಗಿನ ನೀರಿನಂತೆ ಅಂತಃಗಾಮಿನಿಯಾಗಿ ಹರಿವ ವರ್ಣಸಂಘರ್ಷಗಳು ತಾರತಮ್ಯಗಳು ಅಧಿಕಾರ ಶೋಷಣೆಗಳು ಸಹಾ ಕ್ರೈಸ್ತಧರ್ಮ ಎಂಬ ವಿಶಾಲ ಮನೋಭಾವದ ಆವರಣವನ್ನೂ ಆವರಿಸಿಕೊಂಡವು.
ತಮಿಳುನಾಡಿನ ಎಲ್ಲ ಚರ್ಚುಗಳಲ್ಲೂ ತಮಿಳು ಭಾಷೆಯ ಪೂಜೆ ಪುನಸ್ಕಾರಗಳು ನಡೆವುದಾದರೂ ನಿಮ್ನವರ್ಗದವರಿಗೇ ಪ್ರತ್ಯೇಕವಾದ ಸಮಾಧಿ ಭೂಮಿಗಳಿವೆ ಎಂಬುದನ್ನು ಗಮನಿಸಿದಾಗ, ಅದೇ ರೀತಿ ಕನ್ನಡನಾಡಿನಲ್ಲಿ ತುಳು ಮತ್ತು ಕೊಡವ ನುಡಿಗಳ ಜನರನ್ನು ಕ್ರೈಸ್ತಧರ್ಮವು ಇನ್ನೂ ತಲಪಲಾಗಿಲ್ಲ ಎಂಬುದನ್ನು ಗಮನಿಸಿದಾಗ ಸಂಸ್ಕೃತೀಕರಣಗಳ ಲಾಭ ಪಡೆದವರಾರು ಎಂಬುದನ್ನು ವಿಶದೀಕರಿಸಬಹುದು.
ನಮ್ಮ ಧಾರ್ಮಿಕ ಜೀವನದಲ್ಲಿ ದೇಶೀಭಾಷೆಗಳ ಹೆಸರಲ್ಲಿ ಎದ್ದ ರಾಡಿಯನ್ನೂ ಅವುಗಳ ಲಾಭನಷ್ಟವನ್ನೂ ಕಳೆದ ಐದು ದಶಕಗಳಲ್ಲಿ ಗಮನಿಸಿದ್ದೇವೆ. ಸಂಸ್ಕೃತೀಕರಣದ ಸಿಹಿಫಲಗಳ ಜೊತೆಗೆ ಕಹಿಫಲಗಳನ್ನೂ ಉಂಡಿದ್ದೇವೆ. ವಿಶ್ವಧರ್ಮಸಭೆಯೂ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತಾ ಲತೀನ್ ಭಾಷೆಯ ಪುನರುತ್ಥಾನದ ಹೆಸರಲ್ಲಿ ವಿಶ್ವಧರ್ಮಸಭೆಯನ್ನು ಲತೀನ್ ಎಂಬ ಏಕಛತ್ರದ ಅಡಿಯಲ್ಲಿ ಒಗ್ಗೂಡಿಸಲು ಮುಂದಡಿಯಿಟ್ಟಿದೆ.
ತತ್ಪರಿಣಾಮವಾಗಿ ಅಳವಡಿಸಿಕೊಂಡಿರುವ ಹೊಸ ಪೂಜಾವಿಧಿಗಳಲ್ಲಿ ಲತೀನಿಗೆ ಕ್ರಮೇಣ ಪ್ರಾತಿನಿಧ್ಯ ನೀಡುವ ಸುಳಿವನ್ನು ಸೂಚ್ಯವಾಗಿ ಹೇಳಲಾಗಿದೆ. ನಮ್ಮ ಕನ್ನಡದ ರೋಮನ್ ಪೂಜಾವಿಧಿಯಲ್ಲಿ ಭಾರತೀಯ ಪುರಾಣಗಳ ಪ್ರತೀಕವಾಗಿರುವ ’ಲೋಕಗಳ’ ವಿಚಾರವನ್ನು ಸಾರಾಸಗಟಾಗಿ ತೆಗೆದುಬಿಡಲಾಗಿದೆ. ’ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಸಿದ..’ ಎಂದು ಆರಂಭವಾಗುತ್ತಿದ್ದ ಜಪವು ’ಸ್ವರ್ಗವನ್ನೂ ಭುವಿಯನ್ನೂ..’ ಎಂದು ಬದಲಾಗಿ ಸಾರ್ವತ್ರಿಕವಾಗಿ ಅನುಷ್ಠಾನಗೊಳ್ಳುತ್ತಿದೆ. ಒಡೆಯನೇ ಕರುಣೆ ತೋರು ಎಂದು ಕನ್ನಡದಲ್ಲಿ ಆಪ್ತವಾಗಿ ಹೇಳಬೇಕಾಗಿದ್ದ ನಮಗೆ ಇಂದು ಕೀರಿಯೇ ಎಲೇಯಿಸೋನ್ ಎಂದು ಹಾಡಲು ಉತ್ತೀಜಿಸಲಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಯವರಂತೂ ಲತೀನಿನಲ್ಲೇ ಎಲ್ಲ ಧಾರ್ಮಿಕ ಪೂಜೆ ಪುನಸ್ಕಾರ ಸಂಸ್ಕಾರ ಆಶೀರ್ವಚನಗಳನ್ನು ಪಡೆದರೂ ಪಡೆಯಬಹುದೇನೋ?
ಆದರೆ ಒಂದಂತೂ ನಿಜ, ಬೆಂಗಳೂರಿನಂತ ಮಹಾನಗರಗಳ ಚರ್ಚುಗಳಲ್ಲಿ ಭಾನುವಾರಗಳಲ್ಲಿ ಪೂಜೆಯ ನಂತರ ಪೂಜೆಗಳು ವಿವಿಧ ಭಾಷೆಗಳಲ್ಲಿ ಸ್ಯಾಂಡವಿಚ್ಚಿನಂತೆ ನಡೆಯುತ್ತಾ ಒಂದು ಭಾಷಿಕ ಜನರು ಇನ್ನೊಂದು ಭಾಷೆಯವರನ್ನು ಅರಿಯದೇ, ಮುಗುಳ್ನಗದೇ, ಪರಸ್ಪರ ಕೈಕುಲುಕದೇ ಪ್ರತ್ಯೇಕವಾಗಿ ತರಾತುರಿಯಲ್ಲಿ ಬಂದು ಅಷ್ಟೇ ಧಾವಂತದಿಂದ ಹೊರಗೋಡುತ್ತಿದ್ದುದು ತಪ್ಪಿ ಲತೀನ್ ಎಂಬ ಏಕಛತ್ರದಡಿಯಲ್ಲಿ ಒಂದೇ ಪೀಠದ ಮುಂದೆ ಒಂದೇ ಮಂದೆಯಾಗಿ ಸೇರಿ ಒಂದೇ ರೊಟ್ಟಿಯನ್ನು ಒಟ್ಟಿಗೆ ಮುರಿಯುವ ಒಟ್ಟಿಗೆ ಸವಿಯುವ ಆ ಪ್ರೇಮಮಯ ದಿನಗಳು ಮತ್ತೆ ಬರುವವೇ ಎಂದು ಕಾದು ನೋಡೋಣ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...