¨ ಆನಂದ್
೩೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೧೮೨ ಮೀಟರ್ ಎತ್ತರದ ಪಟೇಲ್ ಪ್ರತಿಮೆಯೊಂದನ್ನು ನಿರ್ಮಿಸಿ ಅದಕ್ಕೆ ಏಕತಾ ಪ್ರತಿಮೆ ಎಂಬ ಹೆಸರನ್ನು ಕೊಟ್ಟು ಉದ್ಘಾಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ವಿದ್ಯಾರ್ಥಿ ಶಿವಮೂರ್ತಿ ಮೊನ್ನೆ ನನಗೆ ಒಂದು ವಾಟ್ಸಾಪ್ ಮೆಸೇಜ್ ಕಳುಹಿಸಿದ, “ನೋಡಿ ಫಾದರ್ RSS ನವರ ಟೊಳ್ಳು ಬುದ್ಧಿವಂತಿಕೆಯ ಚರ್ಚೆ ನನ್ನ ಜೊತೆ. ಇವರು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರು ರಾಯಚೂರು..” ಎಂದು ಫೇಸ್ಬುಕ್ಕಿನಲ್ಲಿ ನಡೆದ ಚರ್ಚೆಯನ್ನು ಅಂದರೆ ಅವರ ವಾದವಿವಾದವನ್ನು ಸ್ಕ್ರೀನ್ ಶಾಟ್ ಕ್ಲಿಕ್ಕಿಸಿ ಕಳುಹಿಸಿದ್ದಾನೆ. ಅವರ ಚರ್ಚೆಯನ್ನು ಇಲ್ಲಿ ನಿಮ್ಮ ಓದಿಗೆ ಕೊಡುತ್ತಿದ್ದೇನೆ…
ಶಿವಮೂರ್ತಿ ಕೆ. ಗುಡದಿನ್ನಿ: ಸರ್ದಾರ್ ವಲ್ಲಬಾಯಿ ಪಟೇಲರಿಗೆ ಗೌರವ ಸಲ್ಲಿಸೋದು ನಮ್ಮೆಲ್ಲರ ಕರ್ತವ್ಯ… ಆದರೆ ಭಾರತದಲ್ಲಿ ಕರಗಿಸಲಾಗದಷ್ಟು ಬಡತನವಿದೆ. ಅಂತದ್ರಲ್ಲಿ ಉಣಲಿಕ್ಕೆ ಬಾರದಂತಹ ವ್ಯರ್ಥ ಖರ್ಚು ಮಾಡಿದ್ದಕ್ಕೆ ಬೇಸರವಾಗುತ್ತಿದೆ…
ಮಧ್ವರಾಜ್ ಆಚಾರ್ಯ: ಮುಂದೆ ಅ ಜಾಗ ನೋಡಲು ಬರುವ ಪ್ರವಾಸಿಗರಿಂದ ಕೋಟ್ಯಾಂತರ ಹಣ ಸರಕಾರಕ್ಕೆ ಆದಾಯ ಬರುತ್ತದೆ ಆದ್ದರಿಂದ ಏನಾದರೂ ಮಾಡಿಕೊಳ್ಳಬಹುದು..
ಶಿವಮೂರ್ತಿ ಕೆ. ಗುಡದಿನ್ನಿ: ಮತ್ತೊಮ್ಮೆ ೩೦೦೦ ಕೋಟಿ ರೂಗಳನ್ನು ಗಳಿಸಲು ಎಷ್ಟು ಶತಮಾನಗಳು ಬೇಕಾಗುತ್ತವೆಯೋ…
ಮಧ್ವರಾಜ್ ಆಚಾರ್ಯ: ಹೀಗೆ ಅಂದುಕೊಂಡರೆ ಲಿಬರ್ಟಿ ಆಫ್ ಸ್ಟಾಚ್ಯು ನಿರ್ಮಾಣವಾಗುತ್ತಿರಲಿಲ್ಲ!!
ಶಿವಮೂರ್ತಿ ಕೆ. ಗುಡದಿನ್ನಿ: liberty of Statue ನಿರ್ಮಾಣ ಮಾಡಿದ ದೇಶದವರು ಮೊದಲು ತಮ್ಮ ದೇಶದ ಬಡತನವನ್ನು ನಿವಾರಿಸಿ ನಂತರ ವಿವಿಧ ಅಭಿವೃದ್ಧಿ ಕೆಲಸ ಮಾಡಲು ಮುಂದಾದರು…. ಮೊದಲು ಬಡತನ ನಿವಾರಣೆಯಾಗಬೇಕು ನಂತರ ಉಳಿದದೆಲ್ಲ…
ಮಧ್ವರಾಜ್ ಆಚಾರ್ಯ: ಮೊದಲು ಹಸಿವು ನಂತರ ಮಾನ ಎಂದರೆ ಆಗದು …ಎರಡೂ ಜೊತೆ ಜೊತೆಯಾಗಿ ಬಂದರೆ ಎರಡು ಸಮಸ್ಯೆ ನಿವಾರಣೆಯಾಗುವುದು
ಶಿವಮೂರ್ತಿ ಕೆ. ಗುಡದಿನ್ನಿ: ಇಲ್ಲಿ ಮಾನದ ಪ್ರಶ್ನೆ ಯಾಕೆ ಸಾಬ್ರೇ…. ಪ್ರತಿಮೆ ಕಟ್ಟದಿದ್ದರೆ ಮಾನ ಹೋಗುತ್ತಿತ್ತಾ… ಹೆಂಗೆ!
ಮಧ್ವರಾಜ್ ಆಚಾರ್ಯ: ನಿಮ್ಮ ಊರಲ್ಲಿ ನಿಮ್ಮ ಮನೆ ದೊಡ್ಡದು ಅಂದರೆ ಅದು ನಿಮಗೆ ಹೆಮ್ಮೆ ತರುವ ವಿಚಾರ ತಾನೆ ಹಾಗೆ…
ಶಿವಮೂರ್ತಿ ಕೆ. ಗುಡದಿನ್ನಿ: ಅಂದರೆ ಊಟಕ್ಕಿಂತ ಮನೆನೆ ಮುಖ್ಯನಾ ತಮಗೆ. ಊಟಕ್ಕಿಂತ ಮಾನ ಮುಖ್ಯ ಅಂದ್ರೀ ಸರಿ, ಆದರೆ ಊಟಕ್ಕಿಂತ ಮನೆನೆ ಮುಖ್ಯ ಅಂದ್ರೆ ಯಾರು ಒಪ್ಪೋದಿಲ್ಲ..
ಮಧ್ವರಾಜ್ ಆಚಾರ್ಯ: ಮನೆಯಿಲ್ಲದವ ಊಟ ಮಾಡಿಕೊಂಡು ತಿರುಗುವವನಿಗೆ ಏನನ್ನುತ್ತೀರಿ…?
ಶಿವಮೂರ್ತಿ ಕೆ. ಗುಡದಿನ್ನಿ: ಅಂದರೆ ಊಟ ಬಿಟ್ಟು ಮೊದಲು ಮನೆ ಕಟ್ಟಿಸಬೇಕಾ ಆಗಾದ್ರೇ ಹೇಳಿ…
..
ನಮ್ಮ ಸರ್ಕಾರಗಳು ತಾವು ಕೈಗೊಳ್ಳುವ ಯೋಜನೆಗಳನ್ನು ಯಾವ ಆಧಾರದ ಮೇಲೆ ನಿರ್ಧರಿಸುತ್ತವೆ? ಅಥವಾ ಯಾವ ಮಾನದಂಡದ ಆಧಾರ ಮೇಲೆ ಯೋಜನೆಗಳನ್ನು ರೂಪಿಸುತ್ತಾರೆ? ಈ ಹಿನ್ನಲೆಯಲ್ಲಿ ಮಹಾತ್ಮ ಗಾಂಧೀಜಿ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕಾಗುತ್ತದೆ:
"ನೀನು ನೋಡಿರುವ ಕಡು ಮತ್ತು ಅಶಕ್ತ ವ್ಯಕ್ತಿಯ ಮುಖವನ್ನು ನೆನಪಿಸಿಕೊಂಡು ನಿನ್ನನ್ನೇ ನೀನು ಕೇಳಿಕೋ, ನೀನು ಕೈಗೆತ್ತಿಕೊಳ್ಳುತ್ತಿರುವ ಯೋಜನೆಯಿಂದ ಆ ಬಡ ವ್ಯಕ್ತಿಗೆ ಸಹಾಯವಾಗುವುದೇ? ಈ ಯೋಜನೆಯಿಂದ ಆ ವ್ಯಕ್ತಿಯೂ ಏನಾದರೂ ಪಡೆಯುತ್ತಾನೆಯೇ?".
ಹೌದು ಇದು ಅಭಿವೃದ್ಧಿಯ ಕಾರ್ಯವೈಖರಿಗೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಗಾಂಧೀಜೀಯವರು ನಮಗೆ ಕೊಡುವ ಮಾನದಂಡ, ತತ್ವಾಧಾರ. ನಮ್ಮ ಸರ್ಕಾರಗಳು ಗಾಂಧೀಜೀಯವರ ಈ ಮಾನದಂಡವನ್ನು ಗಣನೆಗೆ ತೆಗೆದುಕೊಳ್ಳುತ್ತವೆಯೇ?
No comments:
Post a Comment