¨ ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
ನಿಮ್ಮ ಲೇಖನದಲ್ಲಿ ಪಾಷಂಡವಾದ ಎನ್ನುವ ಪದ ನೋಡಿದೆ, ಅದರ ಅರ್ಥ ಏನೆಂದು ತಿಳಿಸುತ್ತೀರಾ ಎಂಬ ಸಂದೇಶವನ್ನು ಕೆಲವರು ಕಳುಹಿಸಿದರು. ಅವರಿಗೆ ಇಲ್ಲಿ ಉತ್ತರ ಕೊಡುವುದು ಸೂಕ್ತವೆಂದು ಬರೆಯುತ್ತಿದ್ದೇನೆ. ಪಾಷಂಡವಾದ - ಧರ್ಮಸಭೆಯ ಅಧಿಕೃತ ಬೋಧನೆಯ ವಿರುದ್ಧವಾಗಿ ಅಥವಾ ಧರ್ಮಸಭೆಯ ತಿಳಿವಳಿಕೆ ಮತ್ತು ನಂಬಿಕೆಯ ವಿರುದ್ಧವಾಗಿ ಮಂಡಿಸಿದ ಅಭಿಪ್ರಾಯಗಳನ್ನು ಪಾಷಂಡವಾದ ಎಂದು ಕರೆಯಲಾಗುತ್ತದೆ., ಆದಿ ಧರ್ಮಸಭೆಯ ಇತಿಹಾಸದಲ್ಲಿ ಅನೇಕ ಪಾಷಂಡವಾದಗಳು ತಲೆಯೆತ್ತಿದ್ದವು. ಅವನ್ನು ಧರ್ಮಪಂಡಿತರು, ಧರ್ಮಸಭೆಯ ಪಿತಾಮಹರು ಖಂಡಿಸುತ್ತ ಬಂದರು. ಉದಾಹರಣೆಗೆ - ಯೇಸುಸ್ವಾಮಿ ದೈವೀ ಮತ್ತು ಮನುಷ್ಯ ಗುಣವನ್ನು ಹೊಂದಿದವರು ಎಂಬುದು ಧರ್ಮಸಭೆಯ ಬೋಧನೆ. ಆದರೆ ಅದಕ್ಕೆ ವಿರುದ್ಧವಾಗಿ ಡೋಸೆಟಿಸಮ್ ಎನ್ನುವ ಪಾಷಂಡವಾದವು ಯೇಸುಸ್ವಾಮಿಯ ಮಾನವ ಗುಣವನ್ನು ತಿರಸ್ಕರಿಸಿತು.
ಶುಭಸಂದೇಶ ನಡೆದು ಬಂದ ದಾರಿ - ನಾವು ಯಾವುದಾದರೂ ಕತೆ ಅಥವಾ ಕಾದಂಬರಿ ಓದುವ ಮುನ್ನ ನಮಗೆ ಇದು ಯಾವುದರ ಮೇಲೆ ಬರೆದಿರುವುದು ಯಾವ ವಿಷಯದ ಮೇಲೆ ಚಿಂತನೆ ಹರಿಸಿರುವುದು ಎಂದು ತಿಳಿಯುತ್ತದೆ. ಅದೇ ರೀತಿ ಶುಭಸಂದೇಶವನ್ನು ಸಹ ತಿಳಿಯಬಹುದು. ಆದರೆ ಶುಭಸಂದೇಶ ಕರ್ತೃವಿನ ಮೂಲ ಉದ್ದೇಶ ವಿದ್ದರೂ ಇಲ್ಲಿ ಓದುವವನಿಗೆ ಹೆಚ್ಚು ಸ್ವಾತಂತ್ರ್ಯವಿದೆ. ತನಗೆ ಬೇಕಾದ ರೀತಿಯಲ್ಲಿ ಆತ ಅದನ್ನು ಚಿಂತಿಸಿ, ಅಳವಡಿಸಿ, ಧ್ಯಾನಿಸಿ ಓದಬಹುದು. ನಾವು ಯಾವುದಾದರೂ ಒಂದು ಚಲನಚಿತ್ರವನ್ನು, ಚಲನಚಿತ್ರ ನಿರ್ಮಾಣ / ಮೂವಿ ಮೇಕಿಂಗ್/ ಎಡಿಟಿಂಗ್ ದೃಷ್ಟಿಯಲ್ಲಿ ನೋಡಿದರೆ ಅದು ಬೆಳೆದು ಬಂದ ರೀತಿಯನ್ನು ಪತ್ತೆ ಹಚ್ಚಬಹುದು. ಶುಭಸಂದೇಶ ಬೆಳೆದು ರೀತಿಯನ್ನು ನೋಡುವುದು ಕಷ್ಟಸಾಧ್ಯ, ಏಕೆಂದರೆ ಶುಭಸಂದೇಶವು ದೈವೀಸಂದೇಶವಾಗಿದೆ.
ದೈವೀಸಂದೇಶವಾಗಿದ್ದರೂ ಮಾನವಕೃತವಾಗಿರುವಂತಹ ಶುಭಸಂದೇಶ ನಡೆದು ಬಂದ ದಾರಿಯನ್ನು ನಾವು ಮೂರು ಹಂತಗಳಲ್ಲಿ ಕಾಣಬಹುದಾಗಿದೆ.
ಮೊದಲನೆ ಹಂತ - ಕ್ರಿಸ್ತ ಪಾಲೆಸ್ತೀನ ನಾಡಿನಲ್ಲೆಲ್ಲ ಸಂಚರಿಸಿ ದೈವೀ ಸಾಮ್ರಾಜ್ಯದ ಕುರಿತು ಬೋಧಿಸಿದ. ನಂತರ ಕೆಲವು ಶಿಷ್ಯರನ್ನು ಆರಿಸಿ ಅವರಿಗೆ ವೈಯಕ್ತಿಕವಾಗಿ ಬೋಧಿಸಿದ. ಈ ಬೋಧನೆಗಳನ್ನು ಬರೆದಿಡಲು ಕ್ರಿಸ್ತ ಯಾರಿಗೂ ಹೇಳಲಿಲ್ಲ. ಶಿಷ್ಯರು ಅದನ್ನು ಕೇಳಿಸಿಕೊಂಡು ಬರೆದರು ಎಂಬ ಯಾವ ಪುರಾವೆಯೂ ಇಲ್ಲ. ಕ್ರಿಸ್ತ ತನ್ನ ಶಿಷ್ಯರಿಗೆ ಬಾಯಿಮಾತಿನ ಮೂಲಕವೂ ಕಾರ್ಯ ಕಲಾಪಗಳ ಮೂಲಕವೂ ಬೋಧಿಸಿದ. ಅಂತಿಮವಾಗಿ ಈ ಶುಭಸಂದೇಶದ ಬೋಧನಾ ಕಾರ್ಯವನ್ನು ಶಿಷ್ಯರ ನಿಯೋಗಕ್ಕೆ ಹಸ್ತಾಂತರಿಸಿದ.
ಎರಡನೆಯ ಹಂತ - ಪಂಚದಶಮಿ ದಿನದಂದು ಪವಿತ್ರಾತ್ಮರ ಸಹಾಯದಿಂದ ಕ್ರಿಸ್ತ ಒಪ್ಪಿಸಿದ ನಿಯೋಗವನ್ನು ಶಿರಸಾವಹಿಸಿ ತಮ್ಮ ಬೋಧನೆಯಿಂದಲು ಸಾಧನೆಯಿಂದಲೂ ಸಾಕ್ಷಾತ್ಕರಿಸಿ ನಮಗೆ ಪರಂಪರೆಯನ್ನು ಹಸ್ತಾಂತರಿಸಿದರು. ಅವರು ನೇರವಾಗಿ ಕ್ರಿಸ್ತನನ್ನು ಪ್ರತ್ಯಕ್ಷ ಅನುಭವದಿಂದ ನೋಡಿ ಅವರನ್ನು ಕಿವಿಯಾರೆ ಕೇಳಿ ಕ್ರಿಸ್ತನ ಶುಭಸಂದೇಶವನ್ನು ಸಾರಿದರು.
ಮೂರನೆಯ ಹಂತ - ಪ್ರೇಷಿತರು ಮಾಡಿದ ಕ್ರಿಸ್ತನ ಬೋಧನೆಯನ್ನು ಶ್ರದ್ಧಾವಂತ ಶಿಷ್ಯರು ಬರೆದಿಟ್ಟರು. ಹೀಗೆ ಕ್ರಿಸ್ತನ ಬೋಧನೆ ಮತ್ತು ಸಾಧನೆಯನ್ನು ಬರವಣಿಗೆಯ ರೂಪದಲ್ಲಿ ಶೇಖರಿಸಿಡಲಾಯಿತು. ಮೊದಲು ಈ ವಿಷಯದ ಬಗ್ಗೆ ನುಡಿದ ನುಡಿಗಳನ್ನು, ಸಮಾನಂತರ ಉಲ್ಲೇಖಗಳನ್ನು ಒಂದೆಡೆ ಕ್ರೋಢೀಕರಿಸಲಾಯಿತು. ಜನಜೀವನ ಚರಿತ್ರೆಯನ್ನು ಒಳಗೊಂಡ ಒಂದು ಪವಿತ್ರ ಗ್ರಂಥದ ಅವಶ್ಯಕತೆ ಕಂಡುಬಂದಿತ್ತು. ಹೀಗೆ ಶುಭಸಂದೇಶಗಳು ರಚನೆಯಾದವು.
No comments:
Post a Comment