¨ ನವೀನ್ ಮಿತ್ರ, ಬೆಂಗಳೂರು
ನಾನಾ ಸನ್ನಿವೇಶಗಳಲ್ಲಿ ನಾವು ಇನ್ನೊಬ್ಬರಿಗೆ ತಿದ್ದಲು ಸರಿಪಡಿಸಲು ಮುಂದಾಗುತ್ತಲಿರುತ್ತೇವೆ. ಎಷ್ಟರ ಮಟ್ಟಗೆ ನಾವು ನಮ್ಮನ್ನು ಸರಿಪಡಿಸಿಕೊಳ್ಳಲು ಸಿದ್ದರಿದ್ದೇವೆ? ನಮ್ಮೊಳಗಿನ ದ್ವನಿ ನಮ್ಮನ್ನು ಸದಾ, ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ಮುಂತಿಳಿಸುತ್ತಲೇ ಇರುತ್ತದೆ. ಜಗತ್ತಿನಲ್ಲಿ ಎಲ್ಲರೂ ನಮ್ಮೊಳಗಿರುವ ಈ ಧ್ವನಿಯನ್ನು ಕಿವಿಗೊಟ್ಟು ಕೇಳ್ಳಿದ್ದರೆ, ಇಂದು ನಾವು ಜೀವನದಲ್ಲಿ ಯಾವ ಯಡವಟ್ಟಿಗೂ ಸಿಲುಕುತ್ತಿರಲಿಲ್ಲ. ಅನೇಕ ಬಾರಿ ನಾವೆಲ್ಲರೂ ನಮ್ಮದಾರಿ ಗಮನಿಸುವುದರ ಬದಲು ಪರರ ದಾರಿ ಸರಿಯಿಲ್ಲವೆಂದು ಅವರಿಗೆ ಬುದ್ದಿಮಾತು ಹೇಳಲು ಮುಂದಾಗುತ್ತೇವೆ. "ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ ನಿನ್ನ ಸೋದರನಿಗೆ ಅವನ ಕಣ್ಣಿನಲ್ಲಿರುವ ಅಣುವ ತೆಗೆಯಲು ಹೇಗೆ ಹೇಳಬಲ್ಲೆ?" (ಮತ್ತಾಯ ೭:೩-೫) ಪ್ರಭು ಯೇಸುಕ್ರಿಸ್ತರು ಸಹ ನಮ್ಮೊಳಗಿನ ಧ್ವನಿ ಇದ್ದ ಹಾಗೆ. ಅವರೂ ಸಹ ಈ ಮಾತುಗಳಲ್ಲೇ ನಮ್ಮನ್ನು ಎಚ್ಚರಿಸುತ್ತಿದ್ದಾರೆ. ಲೋಕದ ಬಗೆಗೆ ಕಾಳಜಿ ನಮಗೆ ಇರಬೇಕು, ಆದರೆ ಆ ಕಾಳಜಿ ಎಷ್ಟರ ಮಟ್ಟಿಗೆ ಎಂಬುದೇ ಚಿಂತನಾರ್ಹ.
ಬಸವಣ್ಣನ ಮಾತುಗಳು... "ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ, ನಮ್ಮೀ ಕೂಡಲಸಂಗಮದೇವ". ಈ ಮಾತುಗಳು ಬೈಬಲಿನಲ್ಲಿರುವ ವಾಕ್ಯಗಳಿಗೆ ಅನುಗುಣವಾಗಿವೆ. ಧರ್ಮಸಭೆ ಒಂದು ಒಮ್ಮತ ಸಮುದಾಯವಿದ್ದ ಹಾಗೆ ನಾವು ಇಲ್ಲಿ ಪರರ ಮೇಲೆ ತೀರ್ಪು ಒಡ್ಡುತ್ತಲಿದ್ದರೇ ಪ್ರೀತಿಗೆ ಸ್ಥಳವೆಲ್ಲಿದೆ? ಸಮುದಾಯಜೀವನ ದೇವರು ನೀಡಿರುವಂತಹ ಭಾಗ್ಯ. ಅದನ್ನುಒಡೆಯಲು ಪ್ರಯತ್ನಿಸುವವರು ಸಮುದಾಯ ಜೀವಿಗಳಲ್ಲ. ಯಹೂದಿ ಧರ್ಮಶಾಸ್ತ್ರಜ್ಞರು ಸಮುದಾಯದ ಜವಾಬ್ದಾರಿ ಹೊಂದಿದ್ದರು, ಆದರೆ ಅವರ‍್ಯಾರೂ ಸಮುದಾಯಿಜೀವಿಗಳಾಗಿ ಬದುಕುತ್ತಿರಲಿಲ್ಲ. ಯಹೂದಿ ಧರ್ಮಶಾಸ್ತ್ರಜ್ಞರು, ಫರಿಸಾಯರು ಯಾವಾಗಲೂ ಪರರ ಮೇಲೆ ದಬ್ಬಾಳಿಕೆ ನಡೆಸುತ್ತಾ ಅಲ್ಪರನ್ನು ಕಂಡು, "ನೀವು ಧರ್ಮಶಾಸ್ತ್ರ ಪಾಲಿಸುತ್ತಿಲ್ಲವೆಂದು" ದೂಷಣೆ ಮಾಡುತ್ತಿದ್ದರು. ಯೇಸುಸ್ವಾಮಿ ಅಂತವರಿಗೆ ಈ ಮಾತುಗಳನ್ನು ಹೇಳುತ್ತಾರೆ.
ಅನೇಕ ಬಾರಿ ನಾವು ಶಿಕ್ಷಕರು, ತಂದೆತಾಯಿಯರು, ಗುರು ಕನ್ಯಾಸ್ತ್ರೀಯರು... ಸಮುದಾಯದ ಜವಾಬ್ದಾರಿ ಹಾಗು ಅದರ ಹೊಣೆಗಾರಿಕೆ ಹೊಂದಿದ್ದೇವೆ. ಇಂತಹ ತಪ್ಪುಗಳು ನಮ್ಮಲ್ಲಿ ಬಹಳಷ್ಟು ಸಾಧ್ಯ. ನಮ್ಮ ಮಾತುಗಳು ಇನ್ನೊಬ್ಬರಿಗೆ ಬುದ್ದಿ ಹೇಳುವಂತದ್ದು, ಆದರೆ ನಮಗೆ ನಾವು ಬುದ್ಧಿ ಹೇಳಿಕೊಳ್ಳುವ ಮಾತು ಕೇಳಲು ಕಷ್ಟಸಾಧ್ಯ. ಇಂದಿನ ಕ್ರೈಸ್ತ ಸಮಾಜ ಈ ರೀತಿಯ ಮನವರಿಕೆಯನ್ನು ತ್ಯಜಿಸಿ ಹೊಸ ಜೀವನದೆಡೆಗೆ ಕಾಲಿಡಬೇಕಾಗಿದೆ. ಹಿಂದೂ ಕ್ರೈಸ್ತ ಮುಸಲ್ಮಾನವೆಂಬ ಭೇದವನ್ನು ಮಾಡದೆ ನಾವು ಪರಧರ್ಮಿಯರಿಗೂ ತೆರೆದ ಮನೋಭಾವನೆಯನ್ನು ತೋರ್ಪಡಿಸಬೇಕಾಗಿದೆ. ಮಾತ್ರವಲ್ಲದೆ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ದೊಡ್ಡವರೆಂದು ಅಧಿಕಾರ ಹೂಡದೆ ಮಕ್ಕಳ ಮಾತಿಗೂ ಗೌರವ ನೀಡಬೇಕಾಗಿದೆ. ಕೆಲವೊಮ್ಮೆ ದೊಡ್ಡವರಾಗಿ ನಾವು ಮಾಡುವ ನಿರ್ಧಾರಗಳಿಗಿಂತ ನಮ್ಮ ಮನೆಯ ಮಕ್ಕಳ ನಿರ್ಧಾರಗಳು ಉತ್ತಮವಾಗಿರುತ್ತದೆ. ಇನ್ನೊಬ್ಬರನ್ನು ಅರಿತು ಅವರ ನೋವಿನಲ್ಲಿ ನಮ್ಮ ಸಂತಾಪವನ್ನು ಸೂಚಿಸುವ ಜವಾಬ್ದಾರಿಯುತ ಕ್ರೈಸ್ತರಾಗಿ ನಾವು ಬಾಳಬೇಕಾಗಿದೆ.
ನಾವು ಸಾಧಾರಣವಾಗಿ ಎಲ್ಲರನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ, ಯೇಸುವನ್ನು ಪ್ರೀತಿಸಿದವರು ಇದ್ದರು, ಅವರನ್ನು ತ್ಯಜಿಸಿ ಅವರನ್ನು ದ್ವೇಷಿಸುವವರೂ ಇದ್ದರು. ನಮ್ಮ ಬದುಕಿನಲ್ಲೂ ನಾವು ಹೇಳಿದ್ದೆಲ್ಲವನ್ನೂ ಎಲ್ಲರೂ ಒಪ್ಪುತ್ತಾರೆ ಎಂಬ ಮಾತನ್ನು ನಾವು ಮರೆಯಬೇಕು. ನಾವು ದಿನವಿಡೀ ಹತ್ತಾರು ಮಂದಿಯನ್ನು ಸಂದರ್ಶಿಸುತ್ತೇವೆ ಅವರೆಲ್ಲರನ್ನೂ ಅರ್ಥ ಮಾಡಿಕೊಳ್ಳುವ ಸಹನೆಯಿಂದ ಅವರ ಬಳಿ ಮಾತನಾಡುವ ಮನಸ್ಸು ನಮಗಿರಬೇಕು.
ಬಸವಣ್ಣನವರ ಮಾತು ಇಂದು ಲೋಕಸಂದೇಶವಾಗಿದೆ, ನಾವು ಪರರಲ್ಲಿ ಲೋಪವನ್ನು ಕಂಡು ಹಿಡಿಯುವುದನ್ನು ಬಿಟ್ಟು ನಮ್ಮ ನಮ್ಮ ಬದುಕಿನ ಲೋಪವನ್ನು ಕಂಡುಕೊಳ್ಳಬೇಕಾಗಿದೆ. ನಾವು ಕುಟುಂಬದೊಡನೆ ದೈನಂದಿನ ಪ್ರಾರ್ಥನೆಗಳಲ್ಲಿ ಒಟ್ಟಾಗಿ ಸೇರುವುದು ನಿಜ, ಆದರೆ ಆ ಪ್ರಾರ್ಥನೆಗಳು ಕಾರ್‍ಯರೂಪಕ್ಕೆ ಬರಬೇಕಾದರೆ ನಾವು ಪರರನ್ನು ಅರ್ಥ ಮಾಡಿಕೊಳ್ಳುವ ಮನೊಭಾವ ನಮ್ಮಲ್ಲಿ ಉದ್ಬವವಾಗಬೇಕು, ಪರರನ್ನು ನಿಂದನೆಗೆ ಗುರಿಮಾಡದೆ, ಅವರನ್ನು ತೀರ್ಪಿಗೆ ಗುರಿಮಾಡದೆ, ಅವರಲ್ಲಿ ಲೋಪ ಕಂಡುಹಿಡಿಯದೆ, ಅವರನ್ನು ಪ್ರೀತಿಸಲು ಪ್ರಯತ್ನಿಸೋಣ. ನಮ್ಮ ಕೆಲಸ ಕಾರ್ಯ ನಮ್ಮ ನಡೆ ನುಡಿ ಎಲ್ಲವೂ ಸಕಾರಾತ್ಮಕವಾಗಿದ್ದಲ್ಲಿ, ಯಾರನ್ನೂ ನಾವು ಕೆಟ್ಟದಾಗಿ ಕಾಣುವುದಿಲ್ಲ. ಯೇಸುಸ್ವಾಮಿ ಹೇಳಿದಂತೆ ಅವರನ್ನು ನ್ಯಾಯಕ್ಕೆ ಗುರಿ ಮಾಡುವುದೆಂದರೇ ನಾವು ಪರರನ್ನು ನಿಂದನೆಗೆ ಅವಮಾನಕ್ಕೆ ಒಳಪಡಿಸುವುದೆಂಬ ಒಳಾರ್ಥವಿದೆ (ಲೂಕ ೬:೪೧).
ಪ್ರಿಯ ಓದುಗರೆ, ನಾವು ಈ ಕ್ರೈಸ್ತ ಪಂಚಾಂಗದ ಕೊನೆಯ ತಿಂಗಳನಲ್ಲಿದ್ದೇವೆ. ನಾವು ಮುಂಬರುವ ದಿನಗಳಲ್ಲಿ ಕ್ರಿಸ್ತನಂತೆ ಸದೃಢ ಬದುಕನ್ನು ಬದಕಲು ಇನ್ನೊಬ್ಬರಿಗೆ ಪ್ರೀತಿ ಸಹನೆಯನ್ನು ನೀಡುವಲ್ಲಿ ಮುಂದಾಗುವ, ಅನ್ಯಾಯ ಅವಮಾನವನ್ನು ಮಾಡುವುದನ್ನು ಬಿಟ್ಟು ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಗೌರವ ನೀಡುವ ಬಾಳ್ವೆ ಬದುಕೋಣ.
No comments:
Post a Comment