ಕಪ್ಪೆಯ "ವಟರ್ ವಟರ್
ಝೆನ್ ಕಥೆಯೊಂದಿದೆ. ಸರೋವರ ಸೋಂಕಿನಲ್ಲಿಯೇ ಮನೆ ಮಾಡಿದ ಬಿಕ್ಕುವಿಗೆ ರಾತ್ರಿ ನಿದ್ದೆ ಬಾರದಿರಲು ಕಾರಣ ಕಪ್ಪೆ ವಟರ್ ವಟರ್ ಧ್ವನಿ. ಇರುಳಿನ ನೀರವವನ್ನು ಸೀಳಿ ಬರುವ ಯಾರಿಗಾದರೂ ಅದನ್ನು ಸಹಿಸುವುದು ಕಷ್ಟವೇ. ಬಿಕ್ಕು ಮನೆಯ ಹೊರಗೆ ಬಂದು ಕಪ್ಪೆಗೆ ಬೈಯತೊಡಗಿದ. ಆದರೆ, ಕಪ್ಪೆ ತನ್ನ ಕೆಲಸ ಮಾಡುತ್ತಲೇ ಇತ್ತು. "ವಟರ್ ವಟರ್'. ಕೊನೆಗೆ ಬಿಕ್ಕುವಿಗೆ ಆ ದನಿಯೊಂದಿಗೆ ನಿದ್ರಿಸಲು ಅಭ್ಯಾಸವಾಯಿತು. ಕೆಲವು ದಿನ ಕಳೆಯಿತು. ಮಳೆ ಕಡಿಮೆಯಾಯಿತು. ಕಪ್ಪೆಯ "ವಟರ್ ವಟರ್' ಕೂಡ ನಿಂತಿತು. ಬಿಕ್ಕುವಿಗೆ ನಿದ್ದೆ ಬರಲಿಲ್ಲ. ಮನೆಯ ಹೊರಗೆ ಬಂದು ಕಪ್ಪೆಯ ಕೂಗಿಗಾಗಿ ಪರಿತಪಿಸತೊಡಗಿದ.
ವಾಚ್ ಯುವರ್ ಹಾರ್ಟ್
ಜಿ ಪಿ ರಾಜರತ್ನಂ ಅವರು ತಮ್ಮ ಬಾನುಲಿ ಚಿಂತನದಲ್ಲಿ ಒಮ್ಮೆ ಇಂಗ್ಲಿಷಿನ ವಾಚ್ ಬಗ್ಗೆ ವ್ಯಾಖ್ಯಾನ ನೀಡಿದ್ದರು. Watch ಎಂಬುದು ಕೇವಲ ಕೈಗಡಿಯಾರವಾಗಿರದೇ, ನಮ್ಮ ಅಂತರಾತ್ಮಕ್ಕೆ ಕೊಡಬಹುದಾದ ಎಚ್ಚರಿಕೆಯ ಗಂಟೆ ಎಂದು ಅವರು ಹೇಳಿದ್ದರು. ವಾಚ್ ಪದದ ಮೊದಲಕ್ಷರಗಳನ್ನು ತೆಗೆದುಕೊಂಡರೆ ಅವು ವರ್ಡ್, ಆಕ್ಷನ್, ಥಾಟ್, ಕ್ಯಾರೆಕ್ಟರ್ ಮತ್ತು ಹಾರ್ಟ್ ಎಂಬುದನ್ನು ಪ್ರತಿನಿಧಿಸುತ್ತವೆ. ವಾಚ್ ಯುವರ್ ವರ್ಡ್, ವಾಚ್ ಯುವರ್ ಆಕ್ಷನ್, ವಾಚ್ ಯುವರ್ ಥಾಟ್, ವಾಚ್ ಯುವರ್ ಕ್ಯಾರೆಕ್ಟರ್ ಮತ್ತು ವಾಚ್ ಯುವರ್ ಹಾರ್ಟ್ ಎಂಬ ಅವರ ವಿವರಣೆಯಲ್ಲಿ ನಿನ್ನ ಮಾತಿನ ಬಗ್ಗೆ ಎಚ್ಚರವಹಿಸು, ನಿನ್ನ ಕ್ರಿಯೆಗಳ ಕುರಿತು ಎಚ್ಚರ ವಹಿಸು, ನಿನ್ನ ಆಲೋಚನೆಗಳ ಬಗ್ಗೆ ಎಚ್ಚರ ವಹಿಸು, ನಿನ್ನ ಶೀಲದ ಬಗ್ಗೆ ಎಚ್ಚರ ವಹಿಸು, ಹಾಗೆಯೇ ನಿನ್ನ ಅಂತರಾಳದ ಬಗ್ಗೆಯೂ ಎಚ್ಚರ ವಹಿಸು ಎಂಬ ಮಾತುಗಳಿದ್ದವು.
ಪತ್ನಿಯೊಂದಿಗೆ ಜಗಳ
`ಯಾಕೆ ಮುಲ್ಲಾ? ಬೇಸರದಿಂದ್ದೀಯಾ? ಏನು ಸಮಾಚಾರ?’ ಕೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ.
`ನಾನೂ ನನ್ನ ಹೆಂಡತಿ ಜಗಳವಾಡಿದೆವು. ಅವಳು ನನ್ನ ಜೊತೆ ಮುವ್ವತ್ತು ದಿನ ಮಾತನಾಡುವುದಿಲ್ಲವೆಂದು ಶಪಥ ಮಾಡಿದಳು,’ ಹೇಳಿದ ಮುಲ್ಲಾ.
`ಹೌದೆ. ಹಾಗಾದರೆ ಸಂತೋಷ ಪಡುವುದು ಬಿಟ್ಟು ಬೇಸರವೇಕೆ?’ ಕೇಳಿದ ಮುಲ್ಲಾನ ಗೆಳೆಯ.
`ಇವೊತ್ತೇ ಮುವ್ವತ್ತನೇ ದಿನ, ಅದಕ್ಕೆ’ ಹೇಳಿದ ಮುಲ್ಲಾ ನಸ್ರುದ್ದೀನ್.
ಯಾರಿಗೂ ಹೇಳಬೇಡಿ
ಒಂದು ದಿನ ಮುಲ್ಲಾ ನದಿಯ ದಂಡೆಯಲ್ಲಿ ಓಡಾಡುತ್ತಿದ್ದಾಗ ಯಾರೋ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ. ಕೂಡಲೇ ನೀರಿಗೆ ಹಾರಿ ಆ ವ್ಯಕ್ತಿಯನ್ನು ಕಾಪಾಡಿದ. ಆ ವ್ಯಕ್ತಿ ಆ ಊರಿನ ಅತ್ಯಂತ ಸಿರಿವಂತ ಆದರೆ ಅತ್ಯಂತ ಜಿಪುಣನೂ ಆಗಿದ್ದ. ಆದರೂ ಆ ವ್ಯಕ್ತಿ ತನ್ನ ಪ್ರಾಣ ಉಳಿಸಿದ ಮುಲ್ಲಾನಿದೆ ಧನ್ಯವಾದಗಳನ್ನು ತಿಳಿಸಿ, `ಮುಲ್ಲಾ ನನ್ನ ಪ್ರಾಣ ಉಳಿಸಿದ್ದೀಯ. ನಿನಗೇನು ಕಾಣಿಕೆ ಕೊಡಲಿ?’ ಎಂದು ಹೇಳಿದ.
`ಸ್ವಾಮಿ ನನಗೆ ನಿಮ್ಮ ಕಾಣಿಕೆ ದಯವಿಟ್ಟು ಬೇಡ. ನೀವು ನನಗೆ ಮಾಡುವ ಉಪಕಾರವೆಂದರೆ, ನಾನು ನಿಮ್ಮ ಪ್ರಾಣ ಉಳಿಸಿದೆ ಎಂದು ಯಾರಲ್ಲೂ ಹೇಳಬೇಡಿ. ಇಲ್ಲದಿದ್ದರೆ ಈ ಊರಿನ ಜನ ನನ್ನ ಪ್ರಾಣ ತೆಗೆದುಬಿಡುತ್ತಾರೆ’ ಕೈ ಮುಗಿಯುತ್ತಾ ಹೇಳಿದ ಮುಲ್ಲಾ.
No comments:
Post a Comment