Thursday, 8 November 2018

ವೈದ್ಯನು ಬರೆದ ಸುಸಂದೇಶ


¨ ಕೆ ಜೆ ಜಾರ್ಜ್
ಪ್ರಾಯಶಃ ಆ ಕಾಲದಲ್ಲಿ ಯೇಸುವಿನ ಶುಭಸಂದೇಶವನ್ನು ಸಾರಲು ಕಂಕಣಬದ್ಧರಾಗಿ ಹೊರಟವರಲ್ಲಿ ವೃತ್ತಛೇದನ ಮಾಡಿಸಿಕೊಳ್ಳದ, ಯೆಹೂದ್ಯನೂ ಅಲ್ಲದ ಮತ್ತು ಯೇಸುವಿನ ಪ್ರೇಷಿತಗಣಕ್ಕೆ ನೇರವಾಗಿ ಸಂಬಂಧಿಸದ ಲೂಕನೊಬ್ಬನೇ ಆಗಿರಬೇಕು ಎಂದೆನಿಸುತ್ತದೆ.
ಯೇಸುವಿನ ಜನನದಿಂದ ಮರಣ ಪುನರುತ್ಥಾನದವರೆಗಿನ 'ಸುಸಂದೇಶ'ವೆಂಬ ಕೃತಿಯನ್ನೂ ಅನಂತರ ಪ್ರೇಷಿತರು ಸುಸಂದೇಶವನ್ನು ಸಾರುವ ಕೈಂಕೈರ್ಯವನ್ನು ಮಾಡಿ ಅನುಭವಿಸಿದಂತಹ ಅನೇಕ ಕಷ್ಟಕಾರ್ಪಣ್ಯಗಳನ್ನು ಎತ್ತಿ ತೋರಿಸುವ ಕೃತಿಯಾದ 'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಎರಡು ಕೃತಿಗಳ ರಚನಕಾರನಾದ 'ಲೂಕ'ನ ಆ ಹೆಸರು, ಗ್ರೀಕ್ ಪದವಾದ 'ಲೂಕಸಸ್' ಅಥವಾ 'ಲೂಕಾಸ್'ನ ಸಂಕ್ಷಿಪ್ತ ರೂಪ. ಸಿರಿಯಾದ 'ಅಂತಿಯೋಕ'ದವನಾದ ಲೂಕ, ಮೂಲತಃ ಓರ್ವ ಗ್ರೀಕ್‌ ವೈದ್ಯ. ಈತ ಸಂತ ಪೌಲನ ಗೆಳೆಯನಾಗಿದ್ದ. ಫಿಲೆಮೋನನಿಗೆ ಬರೆದ ಪತ್ರದ ಕೊನೆಯ ಸಾಲುಗಳಲ್ಲಿ ಹೀಗೆಂದು ಪೌಲನು ತಿಳಿಸಿದ್ದಾನೆ. ಲೂಕನು ವೈದ್ಯನಾಗಿದ್ದ ಎಂಬುದಕ್ಕೆ ಪುರಾವೆಯನ್ನೂ ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ (4:14) ದಲ್ಲಿ ದಾಖಲಿಸಿದ್ದಾನೆ. ತನ್ನ ಜೊತೆ ಇದ್ದವರು ತನ್ನಿಂದ ದೂರ ಸರಿದರೂ ಲೂಕನು ಮಾತ್ರ ತನ್ನೊಂದಿಗೆ ಇದ್ದಾನೆ ಎಂದು ಪೌಲನು ತಿಮೋಥಿಯನಿಗೆ ಬರೆದ ದ್ವಿತೀಯ ಪತ್ರ (4:11) ದ ಮುಖಾಂತರ ಲೂಕನ ಗೆಳೆತನದ ನಿಷ್ಕಳಂಕತೆಯನ್ನೂ ಸಾರಿದ್ದಾನೆ.
ತಾವು ನಂಬಿ ವಿಶ್ವಾಸಿಸಿದ ಕರ್ತ ಯೇಸುವಿನ ಧಾರ್ಮಿಕ ಸೇವೆಯ ವಿವರಗಳನ್ನು ಇತರರಿಗೂ ತಲುಪುವ ಹಾಗೆ 'ಶುಭಸಂದೇಶ'ವೆಂಬ ಸಾಂಕೇತಿಕ ನಾಮದಲ್ಲಿ ಕೃತಿಗಳನ್ನು ರಚಿಸಿದ ನಾಲ್ವರು ಸುಸಂದೇಶಕರ್ತರಲ್ಲಿ ಲೂಕನೂ ಒಬ್ಬ. ಆ ನಾಲ್ವರಲ್ಲಿ ಯೊವಾನ್ನನು ಯೇಸುವಿನ ಮೂವರು ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದ. ಯೇಸುವಿನ ಆಂತರ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ.
ಸುಂಕದವನಾದ ಮತ್ತಾಯ ಯೇಸುವಿನ ಕರುಣೆಗೆ ಒಳಗಾಗಿ ಅವರ ಅಹ್ವಾನದ ಮೇರೆಗೆ ಶಿಷ್ಯನಾಗಿದ್ದ; ಈತನಿಗೆ ಯೇಸುವಿನ ಮೇಲೆ ಅಪಾರವಾದ ವಿಶ್ವಾಸ ಹಾಗೂ ಕೃತಾರ್ಥತೆ ಇತ್ತು ಎಂಬುದನ್ನು ಅವನ ಕೃತಿಯು ಎತ್ತಿ ತೋರಿಸುತ್ತದೆ.
ಇನ್ನು ಮಾರ್ಕನ ಬಗ್ಗೆ ಹೇಳುವುದಾದರೆ ಆತ ಯೇಸುವಿನ ಶಿಷ್ಯನಲ್ಲದಿದ್ದರೂ ಅವನ ಸಾಕು ತಂದೆಯಾದ ಪೇತ್ರನು ಯೇಸುವಿನ ಆಪ್ತಶಿಷ್ಯರುಗಳಲ್ಲಿ ಒಬ್ಬನಾಗಿದ್ದ; ಸಹಜವಾಗಿಯೇ ಯೇಸುವಿನೊಂದಿಗಿನ ಒಡನಾಟ ಮಾರ್ಕನಿಗಿತ್ತು ಎನ್ನಬಹುದು.
ಆದರೆ ಲೂಕನು ಯೇಸುವಿನ ಶಿಷ್ಯನಲ್ಲ; ಪ್ರಾಯಶಃ ಯೇಸುವನ್ನು ಕಂಡವನೂ ಅಲ್ಲ. ಇನ್ನು ಅವರೊಂದಿಗಿನ ಒಡನಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯೇಸುವೂ ಸೇರಿದಂತೆ ಅವರ ಹನ್ನೆರಡು ಮಂದಿ ಶಿಷ್ಯಂದಿರು ಯೆಹೂದ್ಯರಾಗಿದ್ದರು ಎಂಬುದಿಲ್ಲಿ ಗಮನಾರ್ಹವಾದ ಸಂಗತಿ. ಅಷ್ಟೇ ಅಲ್ಲ ಫರಿಸಾಯನಾಗಿದ್ದೂ ಯೇಸುವಿನ ಶಿಷ್ಯರನ್ನೂ ಅನುಯಾಯಿಗಳನ್ನೂ ಹಿಂಸಿಸುತ್ತಿದ್ದ ಪೌಲನೂ ಸಹ ಯೆಹೂದ್ಯನಾಗಿದ್ದ. ಆದರೆ ಲೂಕ ಯೆಹೂದ್ಯನಲ್ಲ. ಅವನೋರ್ವ ಗ್ರೀಕನಾಗಿದ್ದ ಎಂಬುದನ್ನು ಬೈಬಲ್ ಪಂಡಿತರು ಹೇಳುತ್ತಾರೆ. ಬಹುಶಃ ಯೇಸು ಶಿಲುಬೆಯ ಮರಣವಪ್ಪುವವರೆಗೂ ಯೇಸುವಿನ ಬಗ್ಗೆ ಲೂಕನಿಗೆ ಅರಿವಿರುವ ಸಾಧ್ಯತೆಯೇ ಇರಲಿಲ್ಲವೆನಿಸುತ್ತೆ! ಅನಂತರದ ದಿನಗಳಲ್ಲಷ್ಟೆ ಈತ ಅನ್ಯಮತವನ್ನು ತೊರೆದು ಕ್ರೈಸ್ತಮತವನ್ನಪ್ಪಿರಬೇಕು. ಏಕೆಂದರೆ ಲೂಕನು ಯೇಸುವನ್ನು ಅರಿತದ್ದೂ ಮತ್ತು ಅವರೇ ತನ್ನ ರಕ್ಷಕನೆಂದು ತಿಳಿಯಲು ಕಾರಣವಾದದ್ದೂ, ಅದಕ್ಕೆ ಪ್ರೇರೇಪಣೆ ದೊರೆತಿದ್ದೂ ಸ್ವಯಂ ಪೌಲನಿಂದಲೇ. ಯೇಸು ಶಿಲುಬೆಯಲ್ಲಿ ಮರಣಿಸಿ, ಪುನರುತ್ಥಾನರಾಗಿ ಸ್ವರ್ಗಾರೋಹಣ ಹೊಂದಿದ ಬಳಿಕವಷ್ಟೆ ಪೌಲನು ಯೇಸುವಿನ ಅನುಯಾಯಿಯಾದದ್ದು. ಬಹುಶಃ ಆ ಬಳಿಕವಷ್ಟೇ ಪೌಲನಿಂದ ಲೂಕನು ಯೇಸುವಿನ ಬಗ್ಗೆ ತಿಳಿದಿರಬೇಕು ಎಂದೆನಿಸುತ್ತದೆ.
ಲೂಕನು ತನ್ನ ಕೃತಿಯನ್ನು ರಚಿಸುವ ಮೊದಲು ಪೌಲನ ಮುಖೇನ ಪರಿಚಿತನಾದ ಮಾರ್ಕನ ಮತ್ತು ಯೊವಾನ್ನನ ಸಹೋದರ ಯಕೋಬನ ಟಿಪ್ಪಣಿಗಳನ್ನು ಓದಿರುವ ಸಾಧ್ಯತೆಯಿದೆ. ಅವು ಲೂಕನ ಕೃತಿರಚನೆಗೆ ಪ್ರೇರಣೆಯಾಗಿರಬೇಕು. ಕಾರಣ ಅವುಗಳಲ್ಲಿರುವ ಕೆಲವು ಸಂಗತಿಗಳು ಲೂಕನ ಕೃತಿಯಲ್ಲೂ ಇವೆ. ಜೊತೆಗೆ ಗೆಳೆಯ ಪೌಲನ ಪ್ರೇರಣೆಯೂ ಇದ್ದಿರುವ ಸಾಧ್ಯತೆಯಿದೆ; ಉದಾಹರಣೆಗೆ ಲೂಕನ ಸುಸಂದೇಶದ ಕೆಲವು ವಾಕ್ಯಗಳಿಗೂ ಪೌಲನ ಪತ್ರದಲ್ಲಿನ ಕೆಲವು ವಾಕ್ಯಗಳಿಗೂ ಸಾಮ್ಯತೆ ಇದೆ (ಲೂಕ 22:19 ಮತ್ತು 1ಕೊರಿಂಥ. 11:23-25) ಅಲ್ಲದೆ ಮೊತ್ತಮೊದಲ ಸುಸಂದೇಶವಾದ ಮತ್ತಾಯನ ಕೃತಿಯು ಲೂಕನ ಕೃತಿಗೂ ಮೊದಲೇ ಹೊರಬಂದಿದ್ದು ಅದರ ಹಸ್ತಪ್ರತಿ ಲೂಕನ ಕೈಸೇರಿರಬೇಕು. ಏಕೆಂದರೆ ಮಾರ್ಕ ಮತ್ತು ಯೊವಾನ್ನನ ಕೃತಿಗಳಲ್ಲಿ ಕಾಣದ ಹಲವು ಸಂಗತಿಗಳು ಮತ್ತಾಯನ ಕೃತಿಯಲ್ಲಿದ್ದು ಅವು ಲೂಕನ ಕೃತಿಯಲ್ಲೂ ಕಂಡುಬಂದಿವೆ. ಲೂಕನು ಅವುಗಳನ್ನು ಅಭ್ಯಸಿಸಿ, ಅವುಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅನಂತರ ತನ್ನ ಕೃತಿರಚನೆಯನ್ನು ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮಾತ್ರವಲ್ಲ ತನ್ನ ಕೃತಿಯ ಆರಂಭದ ಸಾಲುಗಳಲ್ಲಿ ಅದನ್ನವನು ಪ್ರಕಟಪಡಿಸಿದ್ದಾನೆ. ತನ್ನ ಕೃತಿಯನ್ನು ಲೂಕನು ಕ್ರಮಬದ್ಧವಾಗಿ ರಚಿಸಿರುವುದೂ ಸಹ ಮೇಲಿನ ವಾಕ್ಯಗಳಿಗೆ ಪುಷ್ಟಿಯನ್ನು ನೀಡುತ್ತದೆ.
ಲೂಕನ ಸುಸಂದೇಶ ರಚನೆಯಾದದ್ದು ಕ್ರಿಸ್ತಶಕ ಸುಮಾರು 56-58ರ ನಡುವಿನಲ್ಲಿ; ರಚಿಸಿದ ಸ್ಥಳ ಸೆjಜಾರಿಯಾ. ಪೌಲನು ಲೂಕನ ಸಂಗಡ ಫಿಲಿಪಿಯಾದಿಂದ ಹಿಂದಿರುಗಿದ ಬಳಿಕ ಸೆಜಾರಿಯಾದಲ್ಲಿ ಬಂಧನಕ್ಕೀಡಾಗುತ್ತಾನೆ. ಆಗ ಚಕ್ರವರ್ತಿ ಸೀಜರನಿಗೆ ಅಪೀಲುಹೋದ ಪೌಲನು ಎರಡು ವರ್ಷ ರೋಂನಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆ ಅವಧಿಯಲ್ಲಿ ಲೂಕನು ತನ್ನ ಕೃತಿಯ ರಚನೆಯಲ್ಲಿ ತೊಡಗಿದ್ದಾನೆ.

ಸುಸಂದೇಶಗಳಲ್ಲೇ ಕ್ರಿಸ್ತ ಯೇಸುವಿನ ಬಗೆಗಿನ ಹೆಚ್ಚಿನ ವಿವರಗಳು ಸಿಗುವ ದೊಡ್ಡ ಕೃತಿ ಲೂಕನ ಕೃತಿಯಾಗಿದೆ. ಮತ್ತಾಯನ ಕೃತಿ (28 ಅಧ್ಯಾಯಗಳು)ಗೆ ಹೋಲಿಸಿದಲ್ಲಿ ಲೂಕನ ಕೃತಿಯಲ್ಲಿರುವ ಅಧ್ಯಾಯಗಳು ಕಡಿಮೆ. ಆದರೆ ವಾಕ್ಯಗಳ ಸಂಖ್ಯೆ ಹೆಚ್ಚು. ಲೂಕನ ಕೃತಿಯಲ್ಲಿ ಒಟ್ಟು 24 ಅಧ್ಯಾಯಗಳು ಇದ್ದು, 1147 ಸಂಖ್ಯಾಧಾರಿತ ವಾಕ್ಯಗಳು ಇವೆ. ಅತ್ಯಂತ ದೊಡ್ಡ ಅಧ್ಯಾಯ ಮೊದಲ ಅಧ್ಯಾಯ. ಅತ್ಯಂತ ಸಣ್ಣದು 16ನೇ ಅಧ್ಯಾಯ. ಮಾರ್ಕನ ಕೃತಿ ಹೊರಬಂದದ್ದು ಲೂಕನ ಕೃತಿಯ ಅನಂತರವೇ ಎನ್ನುವುದು ಗಮನಾರ್ಹ; ಅಂದರೆ ಕ್ರಿಸ್ತಶಕ ಸುಮಾರು 60-65ರ ನಡುವೆ. ಮತ್ತಾಯ ಮತ್ತು ಮಾರ್ಕನ ಕೃತಿಗಳ ನೆರಳು ಲೂಕನ ಕೃತಿಯ ಮೇಲಿದ್ದರೂ ಯೊವಾನ್ನನ ಕೃತಿಯೂ ಸೇರಿದಂತೆ ಈ ಮೂವರ ಕೃತಿಗಳಲ್ಲಿ ಕಾಣಿಸದ ನಿಖರತೆ ಮತ್ತು ಚಾರಿತ್ರಿಕ ಅಂಶಗಳು ಲೂಕನ ಕೃತಿಯಲ್ಲಿ ಮಾತ್ರವೇ ಕಾಣಲು ಸಿಗುತ್ತವೆ ಎಂಬುದು ಗಮನಾರ್ಹ. ಇದೇ ಲೂಕನ ಹೆಗ್ಗಳಿಕೆ! ಸ್ವಯಂ ವೈದ್ಯನೂ, ಚಿತ್ರಕಲಾವಿದನೂ (ಬಾಲ ಯೇಸುವನ್ನು ಕೈಯಲ್ಲಿ ಹಿಡಿದಿರುವ ಮೇರಿ ಮಾತೆಯ ತೈಲವರ್ಣಚಿತ್ರವನ್ನು ರಚಿಸಿದ್ದಾನೆಂಬುದು ಅನೇಕರಿಗೆ ತಿಳಿದಿಲ್ಲ) ಆಗಿರುವ ಲೂಕ 'ಸುಸಂದೇಶ' ಮತ್ತು 'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಎರಡು ಕೃತಿಗಳ ಮೂಲಕ ತಾನೊಬ್ಬ ‘ಪ್ರಬುದ್ಧ ಲೇಖಕ' ಮಾತ್ರವಲ್ಲ ಬಹುಮುಖ ಪ್ರತಿಭಾಶಾಲಿ ಎಂಬುದನ್ನೂ ಸಾಬೀತು ಪಡಿಸಿದ್ದಾನೆ.
(ಮುಂದುವರಿಯುವುದು....)


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...