Monday, 8 October 2018

ನಗ್ನತಾಯಿ ಧರ್ಮಸಭೆ




¨ ನವೀನ್ ಮಿತ್ರ, ಬೆಂಗಳೂರು

ತಾಯ ದೂಡುವಿರಾ
ತಾಯ ಮರೆಯುವಿರಾ
ಧರ್ಮವಲ್ಲಾ ಅವಳು
ಧರ್ಮಗಳ ಉದ್ಧಾರಕಿ
ಇವಳು ತಾಯಿ ಧರ್ಮಸಭೆ

ಕಂಡಿಹಳು ಸ್ನೇಹವ
ಬಯಸಿಹಳು ಒಮ್ಮತವ
ಕಲಿಸಿಹಳು ಸ್ವಾತಂತ್ರ್ಯವ
ಲ್ಲಿಗೆ ದೂಡುವಿರಿ ಆಕೆಯ
ಇವಳು ತಾಯಿ ಧರ್ಮಸಭೆ

ಆಶ್ರಯಿಸಿಹಳು ತಾಯಿಯಂತೆ
ವಿದ್ಯೆ ನೀಡಿಹಳು ಗುರುವಿನಂತೆ
ಸೇವೆ ಸಲ್ಲಿಸಿಹಳು ದಾಸಿಯಂತೆ
ಅಲ್ಪವೆನ್ನುವಿರಾ ಈಕೆಯ
ಇವಳು ತಾಯಿ ಧರ್ಮಸಭೆ

ಎದೆಹಾಲಿಲ್ಲದೆ ರಕ್ತ ಉಣಿಸಿಹಳು
ಚಿದ್ರಿಸುವಿರಾ ಆಕೆಯ ದೇಹವ
ಕೊಲ್ಲುವಿರಾ ಆಕೆಯ ಮಕ್ಕಳ
ಕಟ್ಟುವಳು ಪುನಃ ನವಧರ್ಮಸಬೆ
ಇವಳು ತಾಯಿ ಧರ್ಮಸಭೆ

ಬರಿದಾಗಿಸುವಿರಾ ಆಕೆಯ ಮಡಿಲ
ಭಿನ್ನಗೊಳಿಸುವಿರಾ ಆಕೆಯ ಒಡಲ
ಇವಳು ವಿವಸ್ತ್ರವಾದಂತೆಲ್ಲಾ
ಲೋಕವು ಅರಿವುದು ನಿಜ ಸತ್ಯವ
ಇವಳು ತಾಯಿ ಧರ್ಮಸಭೆ





ಸಂತ ಇಗ್ನಾಸಿಯವರ ಆತ್ಮಾವಲೋಕನ ಕ್ರಮದ ಐದು ಹಂತಗಳು

                                                          ¨ ಫಾ. ಪ್ರತಾಪ್ ಚಂದ್ರ ಯೇ.ಸ

¨       ವಂದನೆ: ದಿನವಿಡೀ ಪಡೆದ ದೇವರ ಎಲ್ಲಾ ಕೊಡುಗೆಗಳನ್ನು ಸ್ಮರಿಸಿ, ಕೃತಜ್ಞತೆಗಳನ್ನು ಸಲ್ಲಿಸಿ ವಂದಿಸುವುದು.
¨ ವಿನಂತಿ: ದಿನದ ಎಲ್ಲಾ ಆಗು-ಹೋಗುಗಳನ್ನು ಮತ್ತು ಅನುಭವಗಳನ್ನು ದೇವರ ದೃಷ್ಟಿಯಿಂದ ನೋಡಲು ಪವಿತ್ರಾತ್ಮರ ಪ್ರೇರಣೆಗಾಗಿ ದೇವರ ಕೃಪೆಯನ್ನು ವಿನಂತಿಸುವುದು.
¨ ವಿಮರ್ಶೆ: ದಿನದಲ್ಲಿ ನಡೆದ ಮಹತ್ವದ ಘಟನೆಗಳನ್ನು ಸ್ಮರಿಸಿ, ಆ ಗಳಿಗೆಗಳಲ್ಲಿ ನನ್ನ ಆಲೋಚನೆ, ಭಾವನೆ, ನುಡಿ ಮತ್ತು ಕ್ರಿಯೆಗಳು ದೇವರ ಇಚ್ಛೆಯ ಪ್ರಕಾರ ನಡೆದಿವೆಯೇ ಎಂದು ವಿಮರ್ಶಿಸುವುದು.
¨ ವಿಷಾದ: ಮಾಡಿದಂತಹ ಎಲಾ ತಪ್ಪುಗಳಿಗೆ/ಪಾಪಗಳಿಗೆ ವಿಷಾದಿಸಿ, ದೇವರಿಂದ ಹಾಗೂ ಇತರರಿಂದ ಕ್ಷಮೆ ಯಾಚಿಸುವುದು.
¨ ವಿವೇಚನೆ: ದಿನದ ಅನುಭವಗಳಿ೦ದ ಮತ್ತು ತಪ್ಪುಗಳಿಂದ ಪಾಠ ಕಲಿತು, ದೇವರ ಅನುಗ್ರಹದಿಂದ ಮು೦ದಿನ ದಿನ ಮತ್ತಷ್ಟು ಉತ್ತಮ ರೀತಿಯಲ್ಲಿ ಜೀವಿಸಲು ವಿವೇಚಿಸುವುದು/ ನಿರ್ಧರಿಸುವುದು.

ವೈಯಕ್ತಿಕ ಪ್ರಾರ್ಥನೆಯೊಂದಿಗೆ ಕೊನೆಗೊಳಿಸುವುದು





ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಮತ್ತು ಟೋನಿಯವರ ಕಥೆಗಳು

                                                                                        ¨ ಆನಂದ
ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ನಡೆಯುತ್ತಿರುವ ವಾದ ವಿವಾದಗಳ ಬಗ್ಗೆ ಕೇಳಿದಾಗ ಟೋನಿ ಡಿ’ಮೆಲ್ಲೋ ಬರೆದ ಈ ಎರಡು ಪುಟ್ಟ ಕಥೆಗಳು ನೆನಪಿಗೆ ಬಂದವು….

ವೈದ್ಯರು ಹಾಸಿಗೆ ಮೇಲೆ ನಿರ್ಜೀವದಂತೆ ಮಲಗಿದ್ದ ವ್ಯಕ್ತಿಯೆಡೆಗೆ ಬಾಗಿ ಪರೀಕ್ಷಿಸಿ. ಪಕ್ಕದಲ್ಲಿದ್ದ ರೋಗಿಯ ಹೆಂಡತಿಗೆ ಹೇಳಿದನು: "ಕ್ಷಮಿಸಿ ನಿಮ್ಮ ಪತಿ ಸತ್ತಿದ್ದಾರೆ". ಹಾಸಿಗೆಯಲ್ಲಿ ಮಲಗಿದ್ದ ವ್ಯಕ್ತಿ ಪ್ರತಿಭಟಿಸುತ್ತಾ ಕ್ಷೀಣ ಧ್ವನಿಯಲ್ಲಿ: "ಇಲ್ಲ ಇಲ್ಲಾ, ನಾನು ಇನ್ನೂ ಜೀವಂತವಾಗಿದ್ದೇನೆ." ಎಂದು ಹೇಳುತ್ತಿದ್ದಂತೆ, ಹಾಸಿಗೆಯ ಮೇಲೆ ಮಲಗಿದ್ದ ಗಂಡನನ್ನು ಗದರಿಸಿ ಹೆಂಡತಿ ಹೇಳುತ್ತಾಳೆ, "ಬಾಯಿ ಮುಚ್ಚಿ ನಿಮ್ಗಿಂತ ವೈದ್ಯರಿಗೆ ಚೆನ್ನಾಗಿ ಗೊತ್ತು."

----------
ಒಬ್ಬ ವ್ಯಕ್ತಿ ಕತ್ತೆಯನ್ನು ಬಾಡಿಗೆಗೆ ಕೇಳಲು ಮುಲ್ಲಾನ ಮನೆಗೆ ಬಂದ. ಮುಲ್ಲಾ ಹೇಳಿದ “ಇಲ್ಲ, ಕತ್ತೆಗಳನ್ನು ಆಗಲೇ ಇನ್ನೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೇನೆ... ಕತ್ತೆಯಿಲ್ಲ’ ಎಂದು ಹೇಳುತ್ತಿದಂತೆ ಮನೆಯ ಹಿಂದಿನ ಕೋಣೆಯಿಂದ ಕತ್ತೆ ಕೂಗುವ ಸದ್ದು ಕೇಳಿ... ವ್ಯಕ್ತಿ ಮುಲ್ಲಾನಿಗೆ “ಅಲ್ಲ ಕತ್ತೆಯಿಲ್ಲ ಅಂತ ಹೇಳುತ್ತಿದ್ದೀರಿ... ಆದರೆ ಕತ್ತೆ ಕೂಗುವ ಸದ್ದು ನಿಮ್ಮ ಕೊಟ್ಟಿಗೆಯಿಂದ ಕೇಳುತ್ತಿದೆಯಲ್ಲಾ!!!” ಎಂದಾಗ, ಮುಲ್ಲಾ “ನೀನು ನನ್ನ ಮಾತು ನಂಬ್ತಿಯೋ ಅಥವಾ ಕತ್ತೆ ಮಾತನ್ನು ನಂಬ್ತಿಯೋ?” ಎಂದು ಆ ವ್ಯಕ್ತಿಯನ್ನು ಗದರಿಸಿದನಂತೆ.




’ಸೈಲೆನ್ಸ್’


ವಿಶ್ವಾಸ ಹಾಗೂ ಸ್ಥಳೀಯ ವ್ಯವಸ್ಥೆಯ ನಡುವಿನ ಸಂಘರ್ಷ ಹಾಗೂ ಅದರ ಹಿನ್ನೆಲೆಯಲ್ಲಿ ಬರುವ ಭಾವನಾತ್ಮಕ ತೊಳಲಾಟದ ಚಿತ್ರ ಸೈಲೆನ್ಸ್’.
ಹಾಲಿವುಡ್ ನ ಅತ್ಯಂತ ಜನಪ್ರಿಯ ನಿರ್ದೇಶಕರುಗಳಲ್ಲಿ ಒಬ್ಬರಾದ ಮಾರ್ಟಿನ್ ಸ್ಕೋರ್ಸೆಸಿ ಚಿತ್ರಗಳನ್ನು ಜನ ಮೆಚ್ಚುವುದು ಅದರ ಚಿತ್ರಣ ಹಾಗೂ ವಸ್ತುವಿಗಾಗಿ. ಮಾರ್ಟಿನ್‍ರವರ ಯಾವುದೇ ಚಿತ್ರವು ದೊಡ್ಡ ಕ್ಯಾನ್ವಾಸಿನ ಚಿತ್ರ ಮಾತ್ರವಲ್ಲದೆ ಅಂತರಾಳದಲ್ಲಿ ಅನೇಕ ಪದರುಗಳನ್ನು ಮತ್ತು ಒಳ ಅರ್ಥಗಳನ್ನು ಒಳಗೊಂಡಿರುತ್ತವೆ. ಅವರ ಚಿತ್ರಗಳ ಈ ಅಂಶಗಳ ಬಗ್ಗೆಯೇ ದೊಡ್ಡ ಮಟ್ಟದ ಸಂವಾದಗಳನ್ನು ನಾವು ಕಾಣಬಹುದು. ಕಚ್ಚಾ ಎನಿಸುವಂತ ನಿರೂಪಣೆ, ಅತ್ತ್ಯುತ್ತಮ ತಾಂತ್ರಿಕತೆ,  ಕಥಾವಸ್ತುವಲ್ಲಿನ ಗಾಢತೆ, ವಿಷಾದ ಹಾಗೂ ನೈಜತೆಯಿಂದಾಗಿ ಮಾರ್ಟಿನ್ ಹಾಲಿವುಡ್‍ನ ಅಗ್ರಮಾನ್ಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅಂತೆಯೇ ಅವರ ಚಿತ್ರಗಳು ವಿವಾದಾತ್ಮಕ ಚಿತ್ರಗಳ ಸಾಲಿನಲ್ಲೂ ನಿಲ್ಲುತ್ತದೆ. ಅವರ ಯಾವುದೇ ಚಿತ್ರದಲ್ಲಿ ಒಂದಷ್ಟು ಆಧ್ಯಾತ್ಮಿಕತೆ ಇದ್ದೇ ಇರುತ್ತದೆ ಎಂಬುದು ವಿಮರ್ಶಕರ, ಚಿತ್ರರಸಿಕರ ಅಭಿಪ್ರಾಯವಾಗಿದೆ. ಹಾಗೇ ನೋಡಿದರೆ ಸೈಲೆನ್ಸ್ ಪೂರ್ಣ ಧಾರ್ಮಿಕ ವಸ್ತುವನ್ನೇ ಒಳಗೊಂಡ ಮಾರ್ಟಿನ್‍ರವರ ಮೂರನೆಯ ಚಿತ್ರ. ಸಾಕಷ್ಟು ವಿವಾದ ಸೃಷ್ಟಿಸಿದ್ದ- ದಿ ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್ ಹಾಗೂ ಕುಂದನ್ ಅವರ ಇತರ ಧಾರ್ಮಿಕ ಹಿನ್ನೆಲೆಯುಳ್ಳ ಚಿತ್ರಗಳು.
17ನೇ ಶತಮಾನದ ಜಪಾನಿನ ನಾಗಸಾಕಿ ಸುತ್ತಮುತ್ತ ನಡೆಯುವ ಘಟನೆಗಳು ಈ ಚಿತ್ರದ ಕಥಾವಸ್ತು. ಇದು ಶುಸಾಕು ಏಂಡೋ ಎಂಬ ಕಾದಂಬರಿಕಾರನ ಸೈಲೆನ್ಸ್ ಹೆಸರಿನ ಕಾದಂಬರಿ ಆಧಾರಿತ ಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆಯಲು ಪ್ರೇರಣೆಯಾದ ಸಂದರ್ಭವೇ ಆಸಕ್ತಿಕರವಾದದು. ಜಪಾನಿನ ಮ್ಯೂಸಿಯಂ ಒಂದರಲ್ಲಿ ಹದಿನಾರು, ಹದಿನೇಳನೇ ಶತಮಾನಕ್ಕೆ ಸೇರಿದ ಕ್ರಿಸ್ತನ ಚಿತ್ರವುಳ್ಳ ಫಲಕಗಳು ಕಾದಂಬರಿಕಾರನನ್ನು ಸೆಳೆಯುತ್ತದೆ. ೧೬, ೧೭ನೇ ಶತಮಾನದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮವನ್ನು ಅಡಗಿಸುವ ನಿಟ್ಟಿನಲ್ಲಿ ಕ್ರೈಸ್ತ ಅನುಯಾಯಿಗಳಿಗೆ ಒಂದು ಪರೀಕ್ಷೆಯನ್ನು ಒಡ್ಡಲಾಗುತ್ತಿತ್ತು. ಅವರನ್ನು ನಿಲ್ಲಿಸಿ, ಕ್ರಿಸ್ತ ಅಥವಾ ಕ್ರೈಸ್ತ ಧರ್ಮಕ್ಕೆ ಸೇರಿದ ಕೆತ್ತನೆಯಿದ್ದ ಫಲಕವನ್ನು ನೆಲದ ಮೇಲಿಟ್ಟು ಕಾಲಿನಲ್ಲಿ ತುಳಿಯಬೇಕೆಂದು ಕ್ರೈಸ್ತರಿಗೆ ಆಜ್ಞೆಯನ್ನು ನೀಡಲಾಗುತಿತ್ತು.
ಆ ಫಲಕವನ್ನು ತುಳಿದವರನ್ನು ಬಿಡುಗಡೆ ಮಾಡಲಾಗುತ್ತಿತ್ತು, ಅದನ್ನು ಅವರು ತುಳಿಯದಿದ್ದರೆ ಅವರು ಕ್ರೈಸ್ತರು ಎಂಬುದು ಸಾಬೀತಾಗಿ ಅವರನ್ನು ಹಿಂಸೆಗೆ ಅಥವಾ ಸಾವಿಗೆ ಗುರಿ ಮಾಡಲಾಗುತ್ತಿತ್ತು. ಮ್ಯೂಸಿಯಂನಲ್ಲಿದ್ದ ಈ ಫಲಕಗಳು ಒಂದು ಪ್ರೇರಣೆಯಾದರೆ, ಜಪಾನಿಗೆ ಸೇವೆ ಮಾಡಲು ಬಂದ ಪೋರ್ಚುಗಲ್ಲಿನ ಯೇಸು ಸಭೆಯ ಗುರುಗಳ ಬಗ್ಗೆ ಸಂಶೋಧನೆಯನ್ನುಮಾಡುವಾಗ ಕ್ರೈಸ್ತ ಪಾದ್ರಿ ಕ್ರಿಸ್ಟೋವ ಫೆರೆರಾ ಎಂಬ ಗುರುಗಳ ಉಲ್ಲೇಖ ಸಿಗುತ್ತದೆ.
1630ರ ಹೊತ್ತಿಗೆ ಆ ಗುರುಗಳ ಬಗ್ಗೆ ಯಾವುದೇ ರೀತಿಯ ವಿವರಗಳು ಮುಂದುವರಿಯಲಿಲ್ಲ ಇದು ಏಕೆ ಎಂದು ತಿಳಿಯಲು ಪ್ರಯತ್ನಿಸಿದಾಗ, ಆ ಗುರುಗಳು ತಮ್ಮ ವಿಶ್ವಾಸವನ್ನು, ಕ್ರೈಸ್ತ ಧರ್ಮವನ್ನು ತೊರೆದರು ಎಂಬ ಸಣ್ಣ ಮಾಹಿತಿ ಸಿಗುತ್ತದೆ. ಮುಂದಿನ ಮಾಹಿತಿಗಳು ಲಭ್ಯವಾಗದೆ ಇದ್ದಾಗ ಅಂದಿನ ಜಪಾನಿನ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನು ಅವಲೋಕಿಸಿ ಕಾದಂಬರಿಕಾರ ತನ್ನದೇ ಆದ ಒಂದು ಕಲ್ಪನೆಯಲ್ಲಿ ಫೆರೆರಾರವರ ಮುಂದಿನ ಜೀವನವನ್ನು ಕಾದಂಬರಿಯಲ್ಲಿ ಮುಂದುವರಿಸುತ್ತಾರೆ. ಈ ಕಥಾ ಭಾಗದ ಮುಂದುವರಿಕೆಯೇ ಈ ಚಿತ್ರದ ಒಂದು ಕಥಾವಸ್ತು.
ಚಿತ್ರದಲ್ಲಿ ಹೀಗೆ ಕ್ರೈಸ್ತ ಧರ್ಮವನ್ನು ತ್ಯಜಿಸಿ ಫೆರೆರಾ ಸ್ಥಳೀಯ ಧರ್ಮದ ಅನುಯಾಯಿಗಳಾದರು ಎಂಬ ಸುದ್ದಿ ಬರುತ್ತದೆ. ಇದನ್ನು ನಂಬದ ಫೆರೆರಾರವರ ಇಬ್ಬರು ಶಿಷ್ಯ ಗುರುಗಳಾದ ಸೆಬಾಸ್ಟಿಯೋ ರಾಡ್ರಿಗಸ್ ಹಾಗೂ ಫ್ರಾನ್ಸಿಸ್ಕೋ ಗರುಪೆ ಅವರನ್ನು ಹುಡುಕಿಕೊಂಡು ಜಪಾನ್ ದೇಶಕ್ಕೆ ಬರುತ್ತಾರೆ.
ತಮ್ಮ ಜೀವಕ್ಕೆ ಮುಳುವಾಗಬಹುದು ವಿಷಯ ತಿಳಿದಿದ್ದರೂ ಕ್ರಿಸ್ತನ ಮೇಲಿನ ಪ್ರೇಮಕ್ಕಾಗಿ ಮತ್ತು ತಮ್ಮ ಗುರುಗಳ ಮೇಲಿನ ಅಭಿಮಾನಕ್ಕಾಗಿ ಜಪಾನಿಗೆ ಆ ಇಬ್ಬರು ಗುರುಗಳು ಬರುತ್ತಾರೆ. ಆ ಸಮಯದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮ ಅವನತಿಯೆಡೆಗೆ ಸಾಗುತ್ತಿರುತ್ತದೆ. ಸುಮಾರು 3 ಲಕ್ಷದಷ್ಟಿದ್ದ ಕ್ರೈಸ್ತರ ಸಂಖ್ಯೆ ಕೆಲವೇ ಸಾವಿರದಷ್ಟಾಗಲು ಕಾರಣಗಳು ಅವರಿಗೆ ಸಿಗುತ್ತದೆ. ಇಬ್ಬರು ಗುರುಗಳು ಅಲ್ಲಿ ಕ್ರೈಸ್ತ ಧರ್ಮವನ್ನು ಕಟ್ಟುವ ಕೈಂಕರ್ಯಕ್ಕೆ ಮುಂದಾಗುತ್ತಾರೆ
ಆ ಸಮಯದಲ್ಲಿ ಅವರಿಬ್ಬರೂ ಅನುಭವಿಸುವ ಯಾತನೆ ಮತ್ತು ಅಲ್ಲಿನ ಧಾರ್ಮಿಕ ನಾಯಕರು ಅವರಿಗೆ ನೀಡುವ ಚಿತ್ರ ಹಿಂಸೆಯನ್ನು ಈ ಚಿತ್ರದಲ್ಲಿ ನಾವು ಕಾಣಬಹುದಾಗಿದೆ. ಚಿತ್ರದಲ್ಲಿ ಅನೇಕ ಹೃದಯಂಗಮ ದೃಶ್ಯಗಳನ್ನು ಮಾರ್ಟಿನ್ ತಮ್ಮ ಎಂದಿನ ಶೈಲಿಯಲ್ಲಿ ಮೂಡಿಸಿದ್ದಾರೆ ಕೆಲವೊಮ್ಮೆ ಆ ದೃಶ್ಯಗಳು ಮನಕಲುಕುವುದು ಮಾತ್ರವಲ್ಲದೆ, ನಮ್ಮ ಹೃದಯವನ್ನೇ ತಿವಿಯುತ್ತದೆ. ಜಪಾನಿನಲ್ಲಿ ಅಂದಿನ ಧಾರ್ಮಿಕ ಸ್ಥಿತಿಗತಿಗಳನ್ನು, ಹಾಗೂ ಕ್ರೈಸ್ತರು ಅನುಭವಿಸುವ ಅನೇಕ ರೀತಿಯ ಕಷ್ಟ ಹಿಂಸೆಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ತಮ್ಮ ಗುರುಗಳನ್ನು ಹುಡುಕಿಕೊಂಡು ಬಂದ ಈ ಇಬ್ಬರು ಪಾದ್ರಿಗಳು ಕ್ರೈಸ್ತ ವಿಶ್ವಾಸಕ್ಕೆ ಕಟ್ಟುಬಿದ್ದ ಪರಿಣಾಮವಾಗಿ ಗರುಪೆ ತಮ್ಮ ಜೀವವನ್ನೇ ತೆರಬೇಕಾಗುತ್ತದೆ. ರಾಡ್ರಿಗಸ್ ಅದಕ್ಕಿಂತ ಘೋರವಾದ ಪ್ರಸಂಗವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಹುಡುಕಿಕೊಂಡು ಬಂದ ತಮ್ಮ ಗುರುಗಳಾದ ಫೆರೆರಾ ವಿಶ್ವಾಸವನ್ನು ತ್ಯಜಿಸಿ ಅಲ್ಲಿನ ಧಾರ್ಮಿಕ ವ್ಯವಸ್ಥೆಯ ಒಂದು ಭಾಗವಾಗಿ, ಯಾವುದೇ ರೀತಿಯ ಸಂಕಟವಿಲ್ಲದೆ, ನೋವಿಲ್ಲದೆ ಬದುಕುತ್ತಿರುವುದನ್ನು ಕಂಡ ರಾಡ್ರಿಗಸ್ ಅನುಭವಿಸುವ ನೋವು ಹಾಗೂ ಮಾನಸಿಕ ತಳಮಳದ ದೃಶ್ಯ ಚಿತ್ರದ ಹೈಲೈಟ್ ಗಳಲ್ಲಿ ಒಂದು.
ಮುಂದೆ ಪರಿಸ್ಥಿತಿಯ ಶಿಶುವಾಗಿ ಹಾಗೂ ತಮ್ಮ ಜನರನ್ನು ರಕ್ಷಿಸುವ ಸಲುವಾಗಿ ರಾಡ್ರಿಗಸ್ ಕೂಡ ಕ್ರೈಸ್ತ ಧರ್ಮವನ್ನು ಬಿಟ್ಟು ಅಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿ ಒಂದಾಗುವಂತಹ ಪ್ರಸಂಗ ಬರುತ್ತದೆ. ಆ ಪರಿಸ್ಥಿತಿಯ ಭಾಗವಾಗಿ ಅವರು ಕ್ರಿಸ್ತನ ಫಲಕವನ್ನು ತುಳಿಯಬೇಕಾದ ಪ್ರಸಂಗ ಬರುತ್ತದೆ. ಮಾನಸಿಕ ಹಾಗೂ ಧಾರ್ಮಿಕ ತೊಳಲಾಟದಲ್ಲಿ ಬಿದ್ದ ಅವರಿಗೆ ಕ್ರಿಸ್ತನ ಮಾತುಗಳು ಕೇಳಿಸುತ್ತದೆ. ತನ್ನ ಚಿತ್ರವು ಇರುವ ಫಲಕವನ್ನು ತುಳಿ ಎಂದು ಕ್ರಿಸ್ತನೇ ಹೇಳಿದಂತೆ ಭಾಸವಾಗುತ್ತದೆ. ಇಲ್ಲಿ ಕ್ರಿಸ್ತ ಒಬ್ಬ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಲ್ಲ ದೇವರು ಎಂಬುದನ್ನು ಹಾಗೂ ನೋವು, ಕಷ್ಟ ಪಡುವವರ ಪರವಾಗಿ ನಿಲ್ಲಬಲ ದೇವರು ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.
ಕೊನೆಗೆ ರಾಡ್ರಿಗಸ್ ಸ್ವಾಭಾವಿಕ ಸಾವಿಗೀಡಾಗಿ ಅಲ್ಲಿನ ಸಂಪ್ರದಾಯದಂತೆಯೇ ಅಗ್ನಿ ಸ್ಪರ್ಶಕ್ಕೆ ಗುರಿಯಾಗುತ್ತಾರೆ. ಅಲ್ಲಿ ಕ್ರೈಸ್ತ ಧರ್ಮದ ಲವಲೇಶವೂ ಕಾಣುತ್ತಿಲ್ಲ ಎಂಬ ಸಂದರ್ಭದಲ್ಲಿ ಚಿತ್ರ ಮುಗಿಯುತ್ತಿದ್ದಂತೆ, ಅಗ್ನಿಸ್ಪರ್ಷಕ್ಕೆ ಗುರಿಯಾಗುವ ರಾಡ್ರಿಗಸ್‍ರವರ ಕೈ ಒಂದು ಮರದ ಸಣ್ಣ ಶಿಲುಬೆನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿರುವುದನ್ನು ಕಾಣುತ್ತದೆ.
ನೋಡುಗರ ಎದೆಯನ್ನು ನಾಟುವಂತ ಪರಿಣಾಮವನ್ನು ಚಿತ್ರ ಮೂಡಿಸುವುದರಲ್ಲಿ ಎಂದಿನಂತೆ ಮಾರ್ಟಿನ್ ಸ್ಕೋರ್ಸೆಸಿ ಯಶಸ್ವಿಯಾಗಿದ್ದಾರೆ. ಯುವ ಪಾದ್ರಿ ರಾಡ್ರಿಗಸ್ ಪಾತ್ರದಲ್ಲಿ ನಟ ಆಂಡ್ರೂ ಗಾರ್ಫೀಲ್ಡ್‍ರವರದು ಮನೋಜ್ಞ ಅಭಿನಯ. ಚಿತ್ರದಲ್ಲಿ ಬರುವ ಜಪಾನ್ ಪಾತ್ರಧಾರಿಗಳ ಅಭಿನಯ ಅದೆಷ್ಟು ತನ್ಮಯವಾಗಿದೆ ಎಂದರೆ ಚಿತ್ರ ಕೆಲವೇ ನಿಮಿಷಗಳಲ್ಲಿ ನಿಮ್ಮನ್ನು ಜಪಾನ್ ಹಾಗೂ ೧೭ನೇ ಶತಮಾನಕ್ಕೆ ಕರೆದ್ಯೊಯ್ಯುತ್ತದೆ. ಚಿತ್ರದ ಸಂಗೀತ, ಛಾಯಗ್ರಹಣವೆಲ್ಲವೂ ಉತ್ಕೃಷ್ಟ ಮಟ್ಟದಾಗಿದೆ.
ಸುಮಾರು 3 ಗಂಟೆಯಷ್ಟು ದೀರ್ಘವಾದ ಈ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಬೇಕಾಗುತ್ತದೆ.


ಗವುದೆತೆ ಎತ್ ಎಕ್ಸುಲ್ತಾತೆ


      ಪೋಪ್ ಪ್ರಾನ್ಸಿಸ್‌ ವರ ಪ್ರೇಷಿ ಪತ್ರದ ಬಗ್ಗೆ ಕಿರು ಚಿಂತನೆ
ಭಾಗ - 3
¨  ನವೀನ್ ಮಿತ್ರ, ಬೆಂಗಳೂರು



ಗುರುವಿನ ಹೆಜ್ಜೆಗಳಲ್ಲಿ ನಡೆಯುವವನು ಬೆಳಕಿನ ಹಾದಿಯೆಡೆಗೆ ಸಾಗಿ ಪಾವಿತ್ರ್ಯವನ್ನು ಕಂಡುಕೊಳ್ಳುವನು. (Note: ಪವಿತ್ರದ ಉತ್ತರೂಪ ಪಾವಿತ್ರ‍್ಯ ಎಂದಾಗುತ್ತದೆ, ಅದೇ ರೀತಿ ಸಫಲ>ಸಾಫಲ್ಯ, ವಿಕಲ>ವೈಕಲ್ಯ, ಸಹಿತ>ಸಾಹಿತ್ಯ, ಆಗುತ್ತದೆ. ಆದರೆ ಕೆಲವರು ತಪ್ಪಾಗಿ ಪವಿತ್ರತೆ, ಪಾವಿತ್ರತೆ, ಸಫಲತೆ, ವಿಕಲತೆ ಇತ್ಯಾದಿಯಾಗಿ ಬಳಸುತ್ತಾರೆ) ವಿವಿಧ ವಿವರಣೆಗಳು, ಸಿದ್ಧಾಂತಗಳು ಹಾಗೂ ಭಿನ್ನತೆಗಳನ್ನು ಮುಂದಿಡುತ್ತಾ ಪಾವಿತ್ರ್ಯದ ಬದುಕಿಗೆ ಹೊಸ ರೂಪವನ್ನು ನೀಡುತ್ತಿದ್ದಾರೆ ಪೋಪ್ ಫ್ರಾನ್ಸಿಸ್ ನವರು. ಇಂತಹ ಚಿಂತನೆಗಳು ಕ್ರೈಸ್ತಜೀವನಕ್ಕೆ ತ್ಯವಶ್ಯಕ. ಈ ಮೂರನೆಯ ಭಾಗದಲ್ಲಿ ನಾವು ಕ್ರಿಸ್ತನ ಪ್ರತಿನಿಧಿಗಳಾಗಲು ಕರೆಯನ್ನು ನೀಡುತ್ತಿದ್ದಾರೆ. ಹೇಗೆ ಪ್ರಭುವಿನ ಬೆಳಕಿನ ಹಾದಿಯಲ್ಲಿ ಸಾಗಬಹುದು ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ಮನಗಾಣಿಸುತ್ತಿದ್ದಾರೆ. ಯೇಸುವಿನ ಮಾತುಗಳನ್ನು ಅನ್ವಯಿಸುವ, ಅವರ ಸತ್ಯವನ್ನು ಬೋಧಿಸುವ, ಅವರ ಮಾರ್ಗದಲ್ಲಿ ನಡೆಯುವ ರೀತಿ ನಮ್ಮ ಬದುಕಾಗಬೇಕು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲಿ ತಮ್ಮ ಪ್ರಥಮ ಬೋಧನೆಯನ್ನು ನೀಡುತ್ತಾರೆ. ಅದರಲ್ಲಿ ಮೂಲವಾಗಿ ಅಷ್ಟಭಾಗ್ಯವನ್ನು ಆರಿಸಿದ್ದಾರೆ. ಈ ಅಷ್ಟಭಾಗ್ಯಗಳು ಕ್ರೈಸ್ತರಿಗೆ ಐಡೆಂಟಿಟಿ ಕಾರ್ಡ್ ಇದ್ದಹಾಗೆ. ನಾವು ಉತ್ತಮ ಕ್ರೈಸ್ತರಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಹಲವು ಬಾರಿ ನಾವು ಕೇಳಿರಬಹುದು. ನಾವು ಉತ್ತಮ ಕ್ರೈಸ್ತರಾಗಲು ಈ ಅಷ್ಟಭಾಗ್ಯಗಳನ್ನು ಪಾಲಿಸಬೇಕು. ಈ ರೀತಿ ನಾವು ಅಷ್ಟಭಾಗ್ಯಗಳನ್ನು ಪಾಲಿಸಲು ಮುಂದಾದಾಗ ಯೇಸುವಿನ ದಿವ್ಯ ಸಂದರ್ಶನವನ್ನು ನಾವು ಕಾಣಬಹುದು.
ಪೋಪ್ ಫ್ರಾನ್ಸಿಸ್ ಹೇಳುತ್ತಾರೆ ಸಂತೋಷ ಹಾಗೂ ಸುಖ ಈ ಎರಡೂ ಪದಗಳು ಪಾವಿತ್ರ್ಯದ ಸಮಾನಾರ್ಥಕಗಳು. ದೇವರಿಗೆ ಹಾಗೂ ಆತನ ಮಾತುಗಳಿಗೆ ಗೌರವ ನೀಡಿ ಆತನ ಇಚ್ಛೆಯಲ್ಲಿ ಮುನ್ನಡೆಯುವವರು ನಿಜವಾದ ಸಂತೋಷ ಸುಖವನ್ನು ಪಡೆದುಕೊಳ್ಳುತ್ತಾರೆ. ಯೇಸುವಿನ ಮಾತುಗಳನ್ನು ನಾವು ಶುಭಸಂದೇಶದಲ್ಲಿ ಕೇಳಿದಾಗ ಅವು ನಮಗೆ ಕಾವ್ಯಾತ್ಮಕವಾಗಿ ವ್ಯಕ್ತವಾಗುತ್ತವೆ. ಎಷ್ಟೋ ವಿಷಯಗಳು ಇಂದಿನ ಸಮಾಜಕ್ಕೆ ಅನ್ವಯವಾಗುತ್ತವೆ. ಈ ಅಷ್ಟಭಾಗ್ಯಗಳನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಹೋಗುವಾಗ ನಮ್ಮ ಜೀವನದಲ್ಲಿ ಪವಿತ್ರಾತ್ಮರು ಸೈರಣೆಯಿಂದ ಒಡನಾಡಿಯಾಗಿ ಜೀವಿಸುತ್ತಿರುತ್ತಾರೆ. ಪವಿತ್ರಾತ್ಮರು ನಮ್ಮಲ್ಲಿ ತುಂಬಿರುವ ಸೌಹಾರ್ದ, ದೌರ್ಬಲ್ಯ, ಅಹಂಕಾರವನ್ನು ಹೋಗಲಾಡಿಸಿ ಸತ್ಯದ ಹಾದಿಗೆ ಕರೆದೊಯ್ಯುತ್ತಾರೆ. ಗ ಮಾತ್ರ ನಾವು ಅಷ್ಟಭಾಗ್ಯಗಳನ್ನು ನಮ್ಮ ಜೀವನದಲ್ಲಿ ನಮ್ಮ ಸ್ವಂತದ್ದಾಗಿಸಿಕೊಳ್ಳಲು ಸಾಧ್ಯ. ಯೇಸುವಿನ ಮೇಲೆ ಮತ್ತೊಮ್ಮೆ ಅದೇ ಭರವಸೆ ಇಟ್ಟು ಅವರ ಅದೇ ಪ್ರಬೋಧನೆಗಳನ್ನು ಕೇಳೋಣ ಬನ್ನಿ, ಅವರ ಮಾತುಗಳು ನಮ್ಮ ಹೃನ್ಮನಗಳನ್ನು ಹಸನಾಗಿಸಲಿ, ನಮ್ಮ ಬದುಕಿಗೆ ಸ್ಪೂರ್ತಿಯಾಗಲಿ ಎಂದು ಆಶಿಸೋಣ. ನಮ್ಮ ಭದ್ರ ಬುನಾದಿ ಯಾವುದೆಂದು ತೋರಿಸಲು ಹಾಗೂ ಜೀವನದ ಅಂತ್ಯವೇನೆಂದು ಅರಿಯಲು ಮತ್ತಾಯನ ಸುವಾರ್ತೆ ಅಷ್ಟಭಾಗ್ಯಗಳನ್ನು ಮುಂದಿಡುತ್ತಿದೆ. ನಾವು ಈ ಅಷ್ಟಬಾಗ್ಯಗಳನ್ನು ಮತ್ತಾಯನ ಮಾತುಗಳಲ್ಲಿ ಕಂಡರೇ ಅವು ಬಡವರ ಬಗ್ಗೆ, ದುಃಖಿತರ ಬಗ್ಗೆ, ವಿನಯಶೀಲರ ಬಗ್ಗೆ, ನಾಯನೀತಿಗಾಗಿ ಹಸಿದು ಹಾತೊರೆಯುವವರ ಬಗ್ಗೆ, ದಯಾವಂತರು, ನಿರ್ಮಲ ಹೃದಯಿಗಳು, ಶಾಂತಿ ಸ್ಥಾಪಕರು, ರಕ್ತಸಾಕ್ಷಿಗಳ ಬಗ್ಗೆ ಹಾಗೂ ಅವರವರ ವ್ಯಕ್ತಿತ್ವದ ದ್ಗುಣಗಳ ಬಗ್ಗೆ ಮಾತನಾಡಿರುವುದನ್ನು ಕಾಣಬಹುದು. ಯೇಸುಸ್ವಾಮಿ ಕರುಣಾಮೂರ್ತಿ, ಆತ ಲೋಕಕ್ಕೆ ತನ್ನ ನವಸೃಷ್ಟಿ ಏನೆಂದು ತೋರ್ಪಡಿಸಲು ಅಷ್ಟಭಾಗ್ಯಗಳಿಂದ ಮುಂದಾಗುತ್ತಾರೆ. ನಾವು ಪರರಿಗೆ ಏನು ಮಾಡುತ್ತೇವೋ ಅದು ನಮ್ಮದೊಂದು ಹೊಸ ರೂಪವನ್ನು ಸೃಷ್ಟಿಸುತ್ತದೆ. ನಾವು ಯಾರೆಂದು ಪರರು ಪರಿಗಣಿಸುವುದು ಹೇಗೆಂದರೆ ನಾವು ಮಾಡುವ ಸೇವೆ ಹಾಗೂ ಬದುಕುವ ರೀತಿಯಿಂದ ಮಾತ್ರ. ನಾನು ಸಿವೆಯಿಂದ ನರಳುವಾಗ ನೀನು ಆಹಾರ ಕೊಟ್ಟೆ, ನಾನು ದಾಹದಿಂದಿದ್ದಾಗ ನೀನು ಕುಡಿಯಲು ನೀರು ಕೊಟ್ಟೆ. . . (ಮತ್ತಾಯ ೨೫: ೩೫-೩೭) ಈ ಮಾತುಗಳಿಂದ ಯೇಸುಸ್ವಾಮಿ ತಮ್ಮನ್ನು ಪರಲ್ಲಿ ಕಾಣುವ ಲೋಕ ಸಂದೇಶವನ್ನು ಸಾರಿದ್ದಾರೆ.
"ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯ ಅವರದು" (ಮತ್ತಾಯ ೫: ೩) ಈ ಶುಭಸಂದೇಶದ ವಾಕ್ಯವು ನಮ್ಮ ಹೃದಯವನ್ನು ತಿವಿಯುವಂತದ್ದು. ಸಾಮಾನ್ಯವಾಗಿ ನಾವೆಲ್ಲರೂ ಶ್ರೀಮಂತರಾಗಲು ಬಯಸುತ್ತೇವೆ, ಆದರೆ ಇಲ್ಲಿ ಯೇಸುವಿನ ಮಾತುಗಳಲ್ಲಿ ನಾವು ಬಡವರಾಗಬೇಕಾಗಿದೆ, ಆಗಲೇ ನಮಗೆ ಸ್ವರ್ಗ ಸಾಮ್ರಾಜ್ಯವು ಪ್ರಾಪ್ತವಾಗಲು ಸಾಧ್ಯ. ಯೇಸುಸ್ವಾಮಿ ಇದರ ಮೇರೆಗೆ ಮತಿಹೀನ ಸಾಹುಕಾರನ ಸಾಮತಿಯನ್ನು ಹೇಳಿದ್ದಾರೆ, ಆ ಮೂರ್ಖ ಸಾಹುಕಾರ ತನಗೆ ಬೇಕಾದುದೆಲ್ಲವನ್ನು ಪಡೆದು ಶ್ರೀಮಂತನಾಗಲು ಬಯಸುತ್ತಾನೆ ಆದರೆ ಅಂದೇ ರಾತ್ರಿ ದಿವ್ಯವಾಣಿ ಅವನಿಗೆ ಹೇಳುತ್ತದೆ ನಿನಗೆ ಈ ರಾತ್ರಿಯೇ ಕಡೆಯ ರಾತ್ರಿ ಎಂದು. (ಲೂಕ ೧೨: ೧೬-೨೧) ಸಿರಿತನದಿಂದ ನಾವು ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳುತ್ತೇವೆ, ಅದು ಹೆಚ್ಚಾದಂತೆ ನಾವು ದೇವರಿಂದ ದೂರಾಗುತ್ತಲೇ ಇರುತ್ತೇವೆ. ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದದ್ದು ಯೇಸುವಿನ ಸಾನ್ನಿಧ್ಯ. ಇದಕ್ಕಿಂತ ಸಿರಿವಂತಿಕೆ ಬೇರೊಂದಿಲ್ಲ. ನಮ್ಮ ಹೃದಯದೊಳಗೆ ಸಣ್ಣವರಾಗಿರದೆ, ಪಾಪ, ಜ್ಞಾನ, ಐಶ್ವರ್ಯ, ನತೆ ಗೌರವಗಳಿಂದ ನಾವು ಸಣ್ಣವರಾದರೆ ಅದುವೇ ಪಾವಿತ್ರ್ಯ. ದೇವರು ನಮ್ಮನ್ನು ಪಡೆಯಲು, ಅತೀ ಶ್ರೀಮಂತನಾದರೂ ತನ್ನದಲ್ಲಿರುವುದನ್ನೆಲ್ಲಾ ಕಳೆದುಕೊಂಡು ಬಡವನಾದನು. (೨ ಕೊರಿಂಥ ೮: ೯)
"ವಿನಯಶೀಲರು ಭಾಗ್ಯವಂತರು, ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. " (ಮತ್ತಾಯ ೫: ೫). ಪ್ರಪಂಚದಲ್ಲಿ ಹಲವಾರು ಮಾತುಗಳು ಕುಂದುಕೊರತೆಗೆ ಹಾಗೂ ಅನಿವಾರ್ಯಲ್ಲದ ಜಗಳಗಳಿಗೆ ಕಾರಣಗಳಾಗಿರುವುದನ್ನು ಪ್ರಾರಂಭದಿಂದಲೂ ನಾವು ಕಾಣುತ್ತಿದ್ದೇವೆ. ಒಬ್ಬರು ಮತ್ತೊಬ್ಬರನ್ನು ಆಳಬೇಕೆಂಬ ಮನೋಭಾವ ಅವರದಾಗಿದೆ. ಗರ್ವ ಅಹಂ ದುರಾಲೋಚನೆಗಳಿಂದ ನಾನು ನನ್ನದು ಎಂಬ ಸ್ವಾರ್ಥ ನಮ್ಮದಾಗುತ್ತದೆ. ಆದರೆ ಯೇಸುಸ್ವಾಮಿ ಇವುಗಳನ್ನು ಮೀರಿ ವಿನಯ ಎಂಬ ಮಾತನ್ನು ಮುಂದಿಡುತ್ತಿದ್ದಾರೆ. ವಿನಯ ಯಾವುದನ್ನಾದರು ಬದಲಾಯಿಸುವ ಶಕ್ತಿ ಹೊಂದಿದೆ. ವಿನಯಯುಳ್ಳವರು ದೇವವಾಗ್ದತ್ತ ನಾಡಿಗೆ ಸೇರುತ್ತಾರೆ ಎಂಬುದು ಸತ್ಯಮಾತು. ಸಂತ ಪೌಲರು ಹೇಳುತ್ತಾರೆ ವಿನಯ ಪವಿತ್ರಾತ್ಮರ ವರಗಳಲ್ಲಿ ಒಂದು ಎಂದು. (ಗಲಾತ್ಯ ೫: ೨೩). ನಮ್ಮ ವೈರಿಗಳು ಎದುರಾದಾಗಲೂ ಸಹ ನಾವು ವಿನಯ ಸಹನೆ ತಾಳ್ಮೆಯೆಂಬ ಸದ್ಗುಣಗಳಿಂದ ಎದುರಾಗಬೇಕು. (೨ ತಿಮೋಥಿ ೨: ೨೫).
ದುಃಖಿಗಳು ಭಾಗ್ಯವಂತರು, ದೇವರು ಅವರನ್ನು ಸಂತೈಸುವರು. (ಮತ್ತಾಯ ೫: ೪) ಯಾವ ರೀತಿ ಕೆಡುಕುಗಳನ್ನು ಮಾಡಬಹುದೆಂದು ಜಗತ್ತಿನಿಂದ ಮಗೆ ತಿಳಿಯುವುದು. ಕೆಡುಕುಗಳಿಂದ ಮಾನವ ತನ್ನನ್ನೇ ತಾನು ನಾಶ ಪಡಿಸಿಕೊಳ್ಳುತ್ತಿರುತ್ತಾನೆ. ಮನರಂಜನೆ ಸಂತೋಷ ಆನಂದ ಸುಖ ಇವುಗಳನ್ನು ಯಾರೂ ನಿರಾಕರಿಸುವುದಿಲ್ಲ. ಬದಲಿಗೆ ದುಃಖ ಬಂದಾಗ, ನೋವು ನಿರಾಶೆ ಬಂದಾಗ ತಬ್ಬಿಬ್ಬಾಗುತ್ತಾರೆ. ಈ ಮಾತುಗಳು ನಮಗೆ ಹೇಳುತ್ತವೆ, ನಾವು ಸಂಕಷ್ಟಗಳನ್ನು ಎದುರಿಸಲು ಅವುಗಳನ್ನು ಸಹಿಸುವ ಮನೋಭಾವವನ್ನು, ಸೈರಣೆಯಿಂದಿರುವುದನ್ನು ಕಲಿಯಬೇಕಾಗಿದೆ. ಸಂತ ಪೌಲ ಹೇಳಿದಂತೆ, "ಅಳುವವರೊಡನೆ ಸೇರಿ ನೀವು ಅಳುತ್ತಿರಿ" (ರೋಮ ೧೨: ೧೫)
ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರೇ ಭಾಗ್ಯವಂತರು, ದೇವರು ಅವರಿಗೆ ತೃಪ್ತಿಯನ್ನೀಯುವರು. (ಮತ್ತಾಯ ೫: ೬), ಸಾಮಾನ್ಯವಾಗಿ ಮಾಡಿದ ಕೆಲಸದಲ್ಲಿ ತೃಪ್ತಿ ಸಿಕ್ಕರೆ ಅದುವೇ ಸ್ವರ್ಗ ಸುಖ ಎನ್ನುತ್ತಾರೆ. ಆದರಲ್ಲೂ ಸತ್ಯಕ್ಕಾಗಿ ದುಡಿದು ನ್ಯಾಯಕ್ಕಾಗಿ ಹೋರಾಡುವವರು ಜೀವನದಲ್ಲಿ ತೃಪ್ತಿಯನ್ನು ಪಡೆಯುವರು. ಅವರ ಜೀವನದಲ್ಲಿ ಜಿಗುಪ್ಸೆಗಳು ಬಹಳ ಕಡಿಮೆಯಿರುತ್ತದೆ. ಹಸಿವೆ ಹಾಗೂ ದಾಹ ತೀವ್ರ ಅನುಭವಗಳು. ಜೀವನದ ಮೂಲಭೂತ ಅಗತ್ಯಗಳು ಕಡಿಮೆಯಾದರೆ ಹಸಿವು ದಾಹ ಚಿತ. ಈ ರೀತಿ ತೀವ್ರತೆಯ ಅನುಭವಗಳನ್ನು ನಾವು ನ್ಯಾಯಕ್ಕಾಗಿ ಹೋರಾಡುವಲ್ಲಿ ಕಾಣಬೇಕಾಗಿದೆ. ಅತಿ ಶೀಘ್ರವಾಗಿ ಯೇಸುಸ್ವಾಮಿ ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ. ಅದರಲ್ಲಿ ಪಾಪಗಳ ಪುಣ್ಯಗಳ ಲೆಕ್ಕವಲ್ಲ, ಪಾವಿತ್ರ್ಯ ನಮ್ಮಲ್ಲಿ ಎಷ್ಟಿದೆ ಎಂಬ ಮನವರಿಕೆ ಮಾತ್ರ.
ದಯಾವಂತರು ಭಾಗ್ಯವಂತರು, ದೇವರ ದಯೆ ಅವರಿಗೆ ದೊರಕುವುದು. (ಮತ್ತಾಯ ೫: ೭), ಕರುಣೆಯೆಂಬುದಕ್ಕೆ ಎರಡು ಮುಖಗಳಿವೆ, ಅದರಲ್ಲಿ ಸೇವೆ ಸಲ್ಲಿಸುವುದು, ಕೊಡುವುದು, ದಾನ ಮಾಡುವುದು ಮಾತ್ರವಲ್ಲದೆ, ಪರರನ್ನು ಕ್ಷಮಿಸಿ ಅರ್ಥ ಮಾಡಿಕೊಳ್ಳುವುದು ಸಹ ಕರುಣೆಯಾಗಿದೆ. ಮತ್ತಾಯನ ಶುಭಸಂದೇದಲ್ಲಿ ಸುವರ್ಣ ಸೂತ್ರವನ್ನು ಕಾಣುತ್ತೇವೆ, "ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿರಿ. . . " (ಮತ್ತಾಯ ೭: ೧೩) ಯೇಸು ಪರರಿಗೆ ಸ್ನೇದ ಹಸ್ತವಾಗಿ ಬದುಕಲು ಕಾರುಣ್ಯ ರಿತ ಜೀವನ, ಕ್ರೈಸ್ತೀಯ ಜೀವನವೆಂದು ಈ ಅಷ್ಟಭಾಗ್ಯದಿಂದ ನಮಗೆ ತಿಳಿಸುತ್ತಿದ್ದಾರೆ. ಯೇಸುಸ್ವಾಮಿ ಸ್ವಾರ್ಥಿಗಳೇ ನೀವು ಭಾಗ್ಯವಂತರು, ಸಂತಾಪ ಸೂಚಿಸದವರೇ, ಪರರಿಗೆ ಸಾಂತ್ವನ ತೋರದವರೇ ನೀವು ಭಾಗ್ಯವಂತರು ಎಂದು ಹೇಳಲಿಲ್ಲ. ಅವರು ಹೇಳಿದ್ದು ಕಾರುಣ್ಯದ ಜೀವಿಗಳಾಗಿ ಬದುಕಲು. ನಮ್ಮ ಜೀವನವು ಕಾರುಣ್ಯ ಭರಿತವಾದಾಗ ಅದುವೇ ನಿಜ ಕ್ರೈಸ್ತ ಬದುಕು. ನಾನು ನಿನಗೆ ಸಹನೆ ತೋರಿದಂತೆ ನೀನು ನಿನ್ನ ಸೇವಕನ ಮೇಲೆ ಸಹನೆ ತೋರಬಾರದಿತ್ತೇ. (ಮತ್ತಾಯ ೧೮: ೩೩)
ನಿರ್ಮಲ ಹೃದಯಿಗಳು ಭಾಗ್ಯವಂತರು, ಅವರು ದೇವರನ್ನು ಕಾಣುವರು (ಮತ್ತಾಯ ೫: ೮), ಈ ಮಾತು ಬಹಳ ಸತ್ಯವಾದದ್ದು. ಬಹಳಷ್ಟು ಬಾರಿ ನಾವು ಜೀವನದಲ್ಲಿ ಜಿಗುಪ್ಸೆ ಹೊಂದಿದಾಗ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳವುದುಂಟು. . . ದೇವರು ನನಗೆ ಯಾಕೆ ಕಾಣುವುದಿಲ್ಲ? ಹೌದು ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ದೇವರು ಇದ್ದಾನೆ ಆದರೆ ಆತ ಕಾಣಿಸಿ ಕೊಳ್ಳವುದಾದರೂ ಯಾರ ಕಣ್ಣಿಗೆ? ದೇವರು ಕಾಣಿಸಿಕೊಳ್ಳುವುದು ನಿರ್ಮಲ ಹೃದಯಿಗಳಿಗೆ. ಉದಾಹರಣೆ ಮಾತೆ ಮರಿಯಮ್ಮನವರು. ಲೋಕದ ಕಣ್ಣಿಗೆ ಕಾಣುವುದು ಬರಿ ಹೊರಗಿನ ದೇಹ ಮಾತ್ರ, ದೇವರ ಕಣ್ಣಿಗೆ ಕಾಣಿಸುವುದು ನಮ್ಮ ಹೃದಯ. . . (೧ ಸಮುವೇಲ ೧೬: ೭). ದೇವರು ಮಾತಾಡಬಯಸುವುದು ನಮ್ಮ ಹೃದಯಗಳಿಗೆ. . . (ಹೊಶೇ೨: ೧೬). ಆತನ ಆಜ್ಞೆಗಳನ್ನು ಪಾಲಿಸಿದಾಗ ನಾವು ಆತನ ಹೃದಯ ಸ್ಪರ್ಶಿಗಳಾಗ ಬಹುದು. . . (ಜೆರೆಮೀಯ ೩೧: ೩೩). ಇದರ ಪ್ರತಿಯಾಗಿ ದೇವರು ನಮಗೆ ನವ ಹೃದಯವನ್ನು ನೀಡುವರು. . . (ಎಜೆಕಿಯೇಲ ೩೬: ೨೬). ನಿಮ್ಮ ಹೃದಯವನ್ನು ಕಾದು ಸಂರಕ್ಷಿಸಿರಿ. . . (ಸುಜ್ಞಾ೪: ೨೩). ದೇವರು ಬಯಸುವಂತಹ ಹೃದಯವು ಪಾವಿತ್ರ್ಯವನ್ನು ಕಂಡುಕೊಂಡಿರುವಂತಹ ಹೃದಯವಾಗಿದೆ.
ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು ಅವರು ದೇವರ ಮಕ್ಕಳೆನಿಸಿಕೊಳ್ಳುವರು. (ಮತ್ತಾಯ ೫: ೯). ನಾವು ಶಾಂತಿ ಯನ್ನು ಕಂಡುಕೊಳ್ಳುವುದೆಂದರೆ ಯಾವುದೋ ದೇಶಗಳು ಅಥವಾ ರಾಜ್ಯಗಳು ಯುದ್ಧವಾಡುತ್ತಿರುವಾಗ ಅವರಿಬ್ಬರ ನಡುವೆ ಶಾಂತಿ ಸ್ಥಾಪಿಸುವುದು ಮಾತ್ರವಲ್ಲ. ಶಾಂತಿ ಸ್ಥಾಪಿಸುವುದೆಂದರೆ ಪರರಿಗೆ ನಿಂದನೆ ಗೈಯದಿರುವುದು. ಪರರ ಶಾಂತಿಯನ್ನು ಹಾಳುಮಾಡದೆ ಬದುಕುವುದು. ಉದಾಹರಣೆಗೆ ನಾವು ಇನ್ನೊಬ್ಬರ ಬಗ್ಗೆ ಚಾಡಿ ಮಾತು ಹೇಳುವುದು ನಿಜ, ಈ ಚಾಡಿ ಮಾತುಗಳನ್ನು ಮೆಲಕು ಹಾಕುತ್ತಾ ನಾವು ನಮ್ಮ ಹೃದಯವನ್ನು ಹಾಳು ಮಾಡಿಕೊಳ್ಳತ್ತೇವೆ, ಹಾಗೂ ಪುನಃ ಪುನಃ ಪರರಿಗೆ ಅದನ್ನು ಹೇಳುತ್ತಾ ಎಲ್ಲೆಡೆ ಅದೇ ವಿಷಯವನ್ನು ಚರ್ಚೆ ಮಾಡುತ್ತಾ ಒಬ್ಬರ ಹೆಸರನ್ನು ಹಾಳು ಮಾಡಲು ಮುಂದಾಗುತ್ತೇವೆ. ಇದುವೇ ಶಾಂತಿಯ ಮೂಲ ಎಂದು ಹೇಳುತ್ತಾರೆ ಪೋಪ್ ಫ್ರಾನ್ಸಿಸ್ ನವರು. ಶಾಂತಿಗಾಗಿ ಶ್ರಮಿಸುವವರು ಮತ್ತೊಬ್ಬರು ಅವರನ್ನು ನಿಂದನೆಗೆ ಒಳಪಡಿಸಿದ್ದರೂ, ಅವಮಾನಕ್ಕೆ ಗುರಿಮಾಡಿದ್ದರೂ ಪ್ರೀತಿಯನ್ನು ಹಂಚಲು ಬಯಸುತ್ತಾರೆ. ಅದುವೇ ಶಾಂತಿಗಾಗಿ ಶ್ರಮಿಸುವುದು. ನಾವು ಹೋಗುವ ಮನೆಯಲ್ಲಿ ಶಾಂತಿ ನೆಲಸಲಿ ಎಂದು ಹೇಳಬೇಕು ಅಲ್ಲಿರುವವರೆಲ್ಲರಿಗೆ ಪ್ರಭುವಿನ ಶಾಂತಿಯನ್ನು ಹಂಚಬೇಕು. . . (ತಿಮೋ೨: ೨೨).
ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯವು ಅವರದ್ದೇ (ಮತ್ತಾಯ ೫: ೧೦). ನಾವು ಯೇಸುಸ್ವಾಮಿ ಹೇಳಿದಂತೆಲ್ಲಾ ನಡೆದು ಹೋಗುತ್ತಿದ್ದರೆ ನಮ್ಮ ಜೀವನವನ್ನು ಯಾರೂ ಮೆಚ್ಚುವುದಿಲ್ಲ, ಎಲ್ಲರೂ ತೆಗಳಲು ಪ್ರಾರಂಭಿಸುತ್ತಾರೆ. ಅಂತೆಯೇ ಯೇಸುಸ್ವಾಮಿ ಹೇಳಿದ್ದಾರೆ, ನಿಮ್ಮನ್ನು ಲೋಕವು ತ್ಯಜಿಸುವುದಕ್ಕೆ ಮುನ್ನ ಅದು ನನ್ನನ್ನು ತ್ಯಜಿಸಿದೆ. ಮುಗ್ದತೆ ದೈನ್ಯತೆ ತಾಳ್ಮೆ ಇವೆಲ್ಲ ದೈವೀ ಸದ್ಗುಣಗಳು, ಅವುಗಳನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಂಡು ನಡೆದರೆ ನಾವು ಪಾವಿತ್ರ್ಯದ ಬದುಕ ಬದುಕಬಹುದು. ಯಾರು ತನ್ನ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೋ ಆತ ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ (ಮತ್ತಾಯ ೧೬: ೨೫). ಶುಭಸಂದೇಶವನ್ನು ಬದುಕುವುದೆಂದರೆ ಬಹಳ ಕಷ್ಟಕರ, ಅಧಿಕಾರದ ದಾಹ ಹಣದ ಮೋಹ ಇವುಗಳು ನಮ್ಮನ್ನು ದೈವತ್ವದ ಸಂಕಲ್ಪದಿಂದ ದೂರಾಗಿಸುತ್ತದೆ. (ಪ್ರೇ. ಕಾ. ೫: ೪೧, ಫಿಲಿಪ್ಪಿ ೧: ೨೯, ಕೋಲೊಸ್ಸೆ ೧: ೨೪, ತಿಮೋಥಿ ೧: ೧೨, ೧ಪೇತ್ರ ೨: ೨೦, ೪: ೧೪-೧೬, ಪ್ರಕ ೨: ೧೦).

*********************************************
ಗುರು ಶಿಷ್ಯನೊಂದಿಗಿನ ಸತ್ಸಂಬಂಧವು ನಿರಂತರವಾಗಿರಬೇಕಾದರೆ ಶಿಷ್ಯನು ಗುರುವಿನೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕಾಗುತ್ತದೆ. ದ್ವಿತೀಯ ಸಂತ ಜಾನ್ ಪೌಲರು ಹೇಳುತ್ತಾರೆ, "ನಾವು ಕಂಡದೆಲ್ಲದರಲ್ಲಿ ಯೇಸುವನ್ನು ಕಾಣಬೇಕು, ನಾವು ಮಾತನಾಡಿಸುವವರ, ನಾವು ದಿನನಿತ್ಯ ಸಂಧಿಸುವವರಲ್ಲಿ ಯೇಸುವನ್ನು ಕಾಣಬೇಕು. ಮತ್ತಾಯ ೨೫: ೩೫-೩೬ ರಲ್ಲಿ ಹೇಳಿದಂತೆ ನಾವು ಪರರಿಗೆ ಸತ್ಕಾರ್ಯಗಳನ್ನು ಮಾಡುವಲ್ಲಿ ಪ್ರಭು ಯೇಸುವನ್ನು ಸಂದರ್ಶಿಸಹುದು. ಈ ಲೌಕಿಕ ಭಾದೆ ನಮಗೆ ಸವಾಲನ್ನು ಒಡ್ಡುತ್ತದೆ, ಅದನ್ನು ಎದುರಿಸುವುದೋ? ಅಥವಾ ಅದರಲ್ಲೇ ಮುಳುಗಿ ಹೋಗುವುದೊ? ಇದರ ಸರಿ ಉತ್ತರ ಕಂಡುಕೊಂಡಲ್ಲಿ ನಾವು ಪ್ರಭು ಕ್ರಿಸ್ತನನ್ನು ಕಂಡುಕೊಳುತ್ತೇವೆ. ಪೋಪ್ ಫ್ರಾನ್ಸಿಸ್ ನವರು ತಮ್ಮ ಪ್ರೇಷಿತ ಪತ್ರ "ಇವಾಂಜೊಲಿ ಗವುದಿಯುಮ್" ನಲ್ಲಿ ಧರ್ಮಪ್ರಚಾರದ ಅಧ್ಯಾತ್ಮದ ಬಗ್ಗೆ ಸಂದೇಶ ಸಾರಿದರು. ತಮ್ಮ ಎರಡನೆಯ ಪತ್ರ "ವುದಾತೋ ಸಿ" ಯಲ್ಲಿ ಪರಿಸರದ ಅಧ್ಯಾತ್ಮದ ಬಗ್ಗೆ ಮಾತನಾಡಿದರು. ತಮ್ಮ ಮೂರನೆಯ ಪತ್ರ "ಆಮೋರಿಸ್ ಲೆತಿತ್ಸಿಯೋ" ದಲ್ಲಿ ಕೌಟುಂಬಿಕ ಅಧ್ಯಾತ್ಮದ ಬಗ್ಗೆ ಸಂದೇಶ ಸಾರಿದರು. . . ಈ ಬಾರಿಯ ಪತ್ರ ’ಗವುದೆತೆ ಎತ್ ಎಕ್ಸುಲ್ತಾತೆ" ಯಲ್ಲಿ ನಮ್ಮ ವೈಯಕ್ತಿಕ ಅಧ್ಯಾತ್ಮದ ಬಗ್ಗೆ ಗಮನ ಹರಿಸಿದ್ದಾರೆ. ಪರರಿಗಾಗಿ ಸ್ವ-ತ್ಯಾಗ, ಸ್ವ-ಅರ್ಪಣೆ ಮಾಡುವುದರಿಂದ ನಾವು ಮಾನವ ಧರ್ಮ ಕಟ್ಟಲು ಸಾಧ್ಯ, ಪ್ರಭು ಕ್ರಿಸ್ತ ತನ್ನ ಜೀವನ ಪರಿಯಂತರ ಸಾರಿದ್ದು ಮಾನವ ಧರ್ಮವನ್ನು, ಮಾನವಕುಲದ ಐಕ್ಯತೆಯನ್ನು. ಆತನಂತೆ ನಾವು ಸಹ ಸತ್ಯಕ್ಕೆ ಆಸ್ಪದ ನೀಡೋಣ. ನಮ್ಮಲ್ಲಿ ಏಕಾಂತತೆಯಿದ್ದಾಗ, ಪರಸೇವೆಯಿದ್ದಾಗ, ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಗ್ರಹಿಕೆ ಇರುವಾಗ, ಮತಾಂತರ ಚಿಂತನೆ ಉದ್ಬವಿಸುವಾಗ, ಪಾವಿತ್ರ್ಯದ ಸ್ಪೂರ್ತಿ ನವೀಕೃತಗೊಳ್ಳುತ್ತದೆ. ನಾವು ಮಾಡುವ ಸೇವೆ ಇನ್ನೊಬ್ಬರಿಗೆ ಸಾಂತ್ವನ ಮೂಡಿಸಬೇಕು ಅದನ್ನು ಲೋಕ ನೋಡಲಿ ಎಂಬ ಭಾವನೆ ಇಟ್ಟುಕೊಳ್ಳದೆ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ನಾವು ಎಷ್ಟು ಹೆಚ್ಚಾಗಿ ಬದುಕಲು ಇಚ್ಛಿಸುತ್ತೇವೋ ಅಷ್ಟೇ ಮನುಷ್ಯರಾಗಲು ಪ್ರಯತ್ನಿಸುತ್ತಿದ್ದೇವೆ. ನಾವು ಸಮಾಜದಲ್ಲಿ ಪ್ರತಿಯೊಬ್ಬರನ್ನು ಮೇಲು ಕೀಳರಿಮೆಯಿಲ್ಲದೆ ಗೌರವಿಸಬೇಕು, ಅವರವರ ಭಾವನೆಗಳನ್ನು ವ್ಯಕ್ತಿತ್ವವನ್ನು, ಅವರವರ ನಡವಳಿಕೆಗಳನ್ನು ಹೆಚ್ಚು ಕಾಳಜಿಯಿಂದ ಗೌರವಿಸಬೇಕು. ನಾವು ನಮ್ಮನ್ನು ಹೇಗೆ ಪ್ರೀತಿಸುತ್ತೇವೋ ಅಂತೆಯೇ ಪರರನ್ನೂ ಸಹ ಪ್ರೀತಿಸಲು ಮುಂದಾಗಬೇಕು. ನಮ್ಮ ಮನೆ ನಮ್ಮ ಜನರನ್ನು ಮೀರಿ ಮನೆಯ ಹೊರಗಿನವರ, ಸಮುದಾಯದವರ, ಕೆಲಸಮಾಡುವ ಸ್ಥಳದಲ್ಲಿನವರ, ರ್ಚಿನಲ್ಲಿರುವವರ ಹಾಗೂ ದಿನನಿತ್ಯ ಬೇಟಿಯಾಗುಅನೇಕರಿಗೆ ನಾವು ಕ್ರಿಸ್ತನಾಗಿ ಪ್ರತ್ಯಕ್ಷರಾಗಬೇಕು. ಅವನ ಮನೋಭಾವನೆಗಳೊಂದಿಗೆ ಅವರನ್ನು ಸೈರಣೆಯಿಂದ ಮಾತನಾಡಿಸಿ ಅವರಿಗೆ ಪ್ರಭುವಿನ ಸಾಂತ್ವನ ನೀಡಬೇಕು.



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...